ಕಾದಂಬರಿ : ತಾಯಿ – ಪುಟ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)
ಒಂದು ತಿಂಗಳು ಕಳೆಯಿತು. ಅವರು ಅನಿರೀಕ್ಷಿತವಾಗಿ ನಂಜನಗೂಡಿಗೆ ಹೋಗಬೇಕಾದ ಪ್ರಸಂಗ ಒದಗಿತು. ಅವರ ಮನೆಯಲ್ಲಿ ಬಾಡಿಗೆಗಿದ್ದ ರಾಮಾವಧಾನಿಗಳು ಪೂಜೆ ಮಾಡಿ ಹೆಂಡತಿಗೆ ತೀರ್ಥ ಕೊಡುವ ಸಂದರ್ಭದಲ್ಲಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದರು. ಅವರ ಹೆಂಡತಿ ಮಗನಿಗೆ ಫೋನ್ ಮಾಡಿದ್ದರು. ಮೋಹನ್‌ಗೆ ವಿಷಯ ತಿಳಿದೊಡನೆ ರಾಜಲಕ್ಷ್ಮಿಗೆ ಫೋನ್ ಮಾಡಿ ತಿಳಿಸಿದ್ದ. ಭವಾನಿಯನ್ನು ಜೊತೆಮಾಡಿಕೊಂಡು ಗೋಪಾಲರಾಯರಿಗೆ ಹೇಳಿ ಕಾರು ಮಾಡಿಕೊಂಡು ನಂಜನಗೂಡಿಗೆ ಧಾವಿಸಿದ್ದರು. ರಾಮಾವಧಾನಿ ಹೆಂಡತಿ ಸರಸಮ್ಮ ತುಂಬಾ ಹತಾಶರಾಗಿದ್ದರು. ಅವರ ಮಗ-ಸೊಸೆ ಸಿಡಿಸಿಡಿ ಎನ್ನುತ್ತಲೇ ಇದ್ದರು. ಅವರನ್ನು ಎರಡು ಯೋಚನೆಗಳು ಕಾಡುತ್ತಿರಬಹುದು. ತಿಥಿ-ಕರ್ಮದ ಖರ್ಚು ವಹಿಸಿಕೊಳ್ಳಬೇಕಲ್ಲಾ – ಎನ್ನುವ ಯೋಚನೆ ಒಂದು ಕಡೆ, ಈ ಮುದುಕಿಯನ್ನು ಪುನಃ ಮನೆಗೆ ಕರೆದೊಯ್ಯಬೇಕಲ್ಲಾ – ಎನ್ನುವ ಯೋಚನೆ ಒಂದು ಕಡೆ.

ಅಳುತ್ತಾ ಮೂಲೆಯಲ್ಲಿ ಮುದುರಿ ಕುಳಿತಿದ್ದ ಸರಸಮ್ಮನನ್ನು ನೋಡಿ ರಾಜಲಕ್ಷ್ಮಿಗೆ ಕರುಣೆ ಉಕ್ಕಿ ಬಂತು. ಪಾಪ ಅವರಿಗೂ ಮಗನ ಮನೆಯಲ್ಲಿ ಹೇಗಿರುವುದು ಎಂಬ ಚಿಂತೆ ಕಾಡುತ್ತಿರಬಹುದು. ಅವರು ಮೋಹನನಿಗೆ ಫೋನ್ ಮಾಡಿದರು. ಅವನು ತಕ್ಷಣ ಬಂದ.
“ಮೋಹನ ನನ್ನ ಅಕೌಂಟ್‌ನಲ್ಲಿ ಎಷ್ಟು ದುಡ್ಡಿದೆ?”
“ಅಮ್ಮಾ ನೆನ್ನೆ ತಾನೆ ನಿಮ್ಮ ಪಾಸ್‌ಬುಕ್ ಅಪ್‌ಡೇಟ್ ಮಾಡಿನೋಡಿದೆ. 1,86,000 ರೂ. ಇದೆ ಯಾಕಮ್ಮ?”
“ನನಗೆ 1 ಲಕ್ಷ ಡ್ರಾ ಮಾಡಿ ತಂದುಕೊಡು” ಅವರು ಚೆಕ್ ಬರೆದುಕೊಟ್ಟು ಹೇಳಿದರು.
ಅವನು ಅರ್ಧಗಂಟೆಯಲ್ಲಿ ತಂದುಕೊಟ್ಟ. ರಾಜಲಕ್ಷ್ಮಿ ರಾಮಾವಧಾನಿಗಳ ಮಗ ಮುಕುಂದ ಅವಧಾನಿಯನ್ನು ಕರೆದು ಹೇಳಿದರು. “ಮುಕುಂದ ಈ 50,000 ರೂ. ತೊಗೋ. ನಿಮ್ಮ ತಂದೆ ತಿಥಿ-ಕರ್ಮಗಳನ್ನು ಈ ಮನೆಯಲ್ಲೇ ಮಾಡು.”
“ಅಮ್ಮಾ, ನೀವು………”
“ನಾನು ಅವರಿಗೆ ಮನೆ ಕೊಟ್ಟು ಹೋದ ಮೇಲೆ ನಮ್ಮನೆ ದೀಪ ಹಚ್ಚಿಕೊಂಡು ನೆಮ್ಮದಿಯಿಂದ ಇದ್ದ ಪುಣ್ಯಾತ್ಮ ಅವರು. ನಾನು ವೈಕುಂಠ ಸಮಾರಾಧನೆ ದಿನ ಇರ್ತೀನಿ. ಅದುವರೆಗೂ ನಿಮ್ಮ ಅಮ್ಮ ಇಲ್ಲೇ ಇರ‍್ತಾರೆ. ಚೆನ್ನಾಗಿ ನೋಡಿಕೋ. ಅವರು ನಿನಗೆ ಹೊರೆಯಾಗದಂತೆ ನಾನು ಏರ್ಪಾಡು ಮಾಡ್ತೀನಿ.”

“ಅಮ್ಮನ್ನ ನಮ್ಮ ಜೊತೆ ಇಟ್ಟುಕೊಳ್ಳಕ್ಕೆ ನನಗೇನು ತೊಂದರೆ ಇಲ್ಲಮ್ಮ….”
“ಮುಕುಂದ ನನಗೆ ಎಲ್ಲಾ ವಿಚಾರ ಗೊತ್ತು. ಮದುವೆಯಾದ ಮೇಲೆ ನಿಮ್ಮಂತಹ ಗಂಡು ಮಕ್ಕಳಿಗೆ ಸ್ವಬುದ್ಧಿ ಮಾಯವಾಗಿಬಿಡತ್ತೆ. ನಾನು ನಿಮ್ಮಮ್ಮನ ಪರಿಸ್ಥಿತಿ ಎದುರಿಸಿ ಈಗ ಆರಾಮವಾಗಿ ವೃದ್ಧಾಶ್ರಮದಲ್ಲಿದ್ದೇನೆ. ನನಗೆ ಎಲ್ಲರ ಹಾಗೆ ಬಡತನವಿಲ್ಲ. ಪೆನ್ಷನ್ ಬರ್ತಿರೋದ್ರಿಂದ ಜೀವನ ಸಾಗ್ತಿದೆ. ನಿಮ್ಮಮ್ಮ ಏನ್ಮಾಡಬೇಕು ಹೇಳು.”
ಅವನು ಉತ್ತರಿಸಲಿಲ್ಲ.

“ನಿನ್ನ ಮಕ್ಕಳು ದೊಡ್ಡವರಾದ ಮೇಲೆ ನಿನಗೆ ಆ ನೋವು ಅರ್ಥವಾಗತ್ತೆ. ಆ ವಿಚಾರ ಬಿಡು. ಹತ್ತು-ಹನ್ನೆರಡು ದಿನ ನಿಮ್ಮಮ್ಮನ ಜೊತೇನೇ ಇರು.”
ರಾಮಾವಧಾನಿಗಳ ತಂಗಿಯರು, ದೂರದ ತಮ್ಮನೊಬ್ಬ 12 ಗಂಟೆಗೆ ಬಂದರು. ಶವ ಸಂಸ್ಕಾರ ಮುಗಿದಾಗ 4 ಗಂಟೆ. ರಾಜಲಕ್ಷ್ಮಿ ಅಲ್ಲೇ ಸ್ನಾನ ಮಾಡಿದರು. ಮೋಹನ ಊಟದ ಏರ್ಪಾಡು ಮಾಡಿದ್ದ. ಅವರು ಮೈಸೂರಿಗೆ ಹೊರಡುವ ಮುಂಚೆ ಮೋಹನನಿಗೆ ಹೇಳಿದರು.
“ನಾನು ನಂಜನಗೂಡಿನ ಮನೆಯನ್ನು ಮಾರೋಣಾಂತಿದ್ದೇನೆ. ಯಾರಾದ್ರೂ ಒಳ್ಳೆಯವರು ಸಿಕ್ಕಿದರೆ ನೋಡಪ್ಪ.”
“ಆಗಲಿ ಅಮ್ಮಾ. ನೀವು ವೈಕುಂಠ ಸಮಾರಾಧನೆಗೆ ಬಂದಾಗ ನಮ್ಮನೆಗೆ ಬನ್ನಿ. ನಿಮ್ಮ ಹತ್ತಿರ ಕೊಂಚ ಮಾತಾಡಬೇಕು.”
“ಆಗಲಿ ಬರ‍್ತೀನಿ” ಎಂದರು ರಾಜಲಕ್ಷ್ಮಿ.

ಭವಾನಿ ದಾರಿಯಲ್ಲಿ ಕೇಳಿದರು. “ಸರಸಮ್ಮನ ಜವಾಬ್ದಾರಿ ನೀವು ತೊಗೊಳ್ತಿದ್ದೀರ ಅಲ್ವಾ?”
“ಹೌದು ಭವಾನಿ.”
“ಅವರನ್ನು ನಮ್ಮ ಆಶ್ರಮದಲ್ಲೇ ಇಟ್ಟುಕೊಳ್ತೀರಾ?”
“ಹಾಗಂದುಕೊಂಡಿದ್ದೇನೆ.”
“ಬೇಡ ರಾಜಲಕ್ಷ್ಮಿ. ಗೌರಮ್ಮ ನಮ್ಮ ಆಶ್ರಮಕ್ಕೆ ಬರುವ ಮೊದಲು ಒಂದು ಆಶ್ರಮದಲ್ಲಿ ಅಡಿಗೆ ಮಾಡ್ತಿದ್ರು. ಇಲ್ಲಿ ಒಳ್ಳೆಯ ಸಂಬಳ ಸಿಗುತ್ತದೇಂತ ಆ ಜಾಗ ಬಿಟ್ಟು ಬಂದು ಅಲ್ಲಿ ತಿಂಗಳಿಗೆ ಇಷ್ಟು ಕೊಡೀಂತ ಕೇಳಲ್ಲಂತೆ. ಉಚಿತ ಊಟ ವಸತಿ. ದಾನಿಗಳಿಂದ ಹಣ ಸಂಗ್ರಹಿಸಿ ಆಶ್ರಮ ನಡೆಸ್ತಿದ್ದಾರಂತೆ.”
“ಆಗಲಿ ಗೌರಮ್ಮನ್ನ ಕೇಳ್ತೀನಿ. ಅಲ್ಲಿ ಅನುಕೂಲವಿದ್ದರೆ ಅಲ್ಲೇ ಬಿಡುತ್ತೇನೆ.”

ಎರಡು ದಿನ ಕಳೆಯಿತು. ಗೌರಮ್ಮ ಒಂದು ಸಾಯಂಕಾಲ ದೇವಸ್ಥಾನಕ್ಕೆ ಹೊರಟಾಗ ರಾಜಲಕ್ಷ್ಮಿ ತಾವೂ ಹೊರಟರು.
“ಗೌರಮ್ಮ ಯಾವ ದೇವಸ್ಥಾನಕ್ಕೆ ಹೊರಟಿದ್ದೀರಾ?”
“ಸಾಯಿಬಾಬಾ¨ನ ದೇವಸ್ಥಾನಕ್ಕೆ.”
“ನೀವು ಇಲ್ಲಿಗೆ ಬರುವ ಮೊದಲು ಬೇರೆ ವೃದ್ಧಾಶ್ರಮದಲ್ಲಿ ಕೆಲಸ ಮಾಡ್ತಿದ್ರಾ?”
“ಹೌದಮ್ಮ. ಆ ಆಶ್ರಮ ದೇವಸ್ಥಾನದ ಹತ್ತಿರವೇ ಇದೆ. ಬನ್ನಿ ತೋರಿಸ್ತೀನಿ.”

ದೇವಸ್ಥಾನಕ್ಕೆ ಹೋಗಿ ಅಲ್ಲಿ ಆರತಿ ಆಗುವವರೆಗೂ ಇದ್ದು ಅನಂತರ ಆ ವೃದ್ಧಾಶ್ರಮಕ್ಕೆ ಹೋದರು. ಅದೊಂದು 30×40ರ ಸೈಟಿನಲ್ಲಿ ಕಟ್ಟಿದ್ದ ಮನೆ. ಆ ಮನೆಯ ಮುಂದೆ ‘ಶಾರದಾ ವೃದ್ಧಾಶ್ರಮ’ ಎನ್ನುವ ಹೆಸರಿತ್ತು.
“ಅಮ್ಮಾ ಈಗ ಒಳಗೆ ಹೋಗೋಣ. ಸುಮ್ಮನೆ ನೋಡಿ ಏನೂ ಪ್ರಶ್ನಿಸಬೇಡಿ. ಇದನ್ನು ನೋಡಿಕೊಳ್ಳುವವನು ಒಬ್ಬ ಗೋಪಾಲಕೃಷ್ಣ ಇದ್ದಾನೆ. ಅವನು ಇದ್ರೆ ಅಲ್ಲಿರುವವರು ಏನೂ ಮಾತಾಡಲ್ಲ. ಅವರಿಲ್ಲದಿದ್ದರೆ ಮಾತಾಡ್ತಾರೆ.”
ಇಬ್ಬರೂ ಒಳಗೆ ಕಾಲಿಟ್ಟರು. ಅಲ್ಲಿ ಹರಟೆ ಹೊಡೆಯಲುತ್ತಾ ಕುಳಿತಿದ್ದ ಹೆಂಗಸರು ಗೌರಮ್ಮನನ್ನು ಮುತ್ತಿಕೊಂಡರು.

“ಗೌರಕ್ಕ ಇವತ್ತು ರಾಕ್ಷಸ ಇಲ್ಲದಿರುವ ವಿಷಯ ನಿಮಗೆ ತಿಳಿಯಿತಾ? ಅದಕ್ಕೆ ಬಂದ್ರಾ? ನಮಗೇನು ತಂದಿದ್ದೀರಾ?”
“ಚಿನ್ನುಗೆ ಫೋನ್ ಮಾಡಿದ್ದೀನಿ. ಹುಳಿಯವಲಕ್ಕಿ ಬೆರೆಸಿ ರ‍್ತಾಳೆ. ಹಾಗೆ ಟೂತ್‌ಪೇಸ್ಟ್, ಹಲ್ಲುಪುಡಿ, ಸೋಪು, ಬಟ್ಟೆಸೋಪು, ತಲೆನೋವಿನ ಮಾತ್ರೆ ತಂದುಕೊಡ್ತಾಳೆ.”
“ಗೌರಕ್ಕ ನನ್ನ ಸೀರೆ ಹರಿದುಹೋಗ್ತಿದೆ. ಬೇರೆ ಸೀರೆ ಬೇಕು.”
“ಹೋದ ತಿಂಗಳು ಶಾಂತಿಲಾಲ್ ಸಾಹೇಬ್ರು ಬಂದು ಸೀರೆ ಕೊಟ್ಟರಂತಲ್ಲಾ?”
“ಅವರು ಎರಡೆರಡು ಸೀರೆ ಕೊಟ್ರು. ರಾಕ್ಷಸ ಒಂದೊಂದು ಸೀರೆ ಕೊಟ್ಟು ಉಳಿದಿದ್ದೆಲ್ಲಾ ತಾನೇ ಇಟ್ಕೊಂಡ.”
“ರೋಸಮ್ಮ ಎಲ್ಲಿ ಕಾಣಿಸ್ತಿಲ್ಲ.”
“ಇತ್ತೀಚೆಗೆ ಸ್ನಾನಕ್ಕೆ ಬಿಸಿ ನೀರು ಕೊಡಲ್ಲ. ರೋಸಮ್ಮ ತಣ್ಣೀರು ಸ್ನಾನ ಮಾಡಿ ಜ್ವರ ಬಂದು ಮಲಗಿದ್ದಾಳೆ.”
ಅಷ್ಟರಲ್ಲಿ ಚಿನ್ಮಯಿ ಹುಳಿಯವಲಕ್ಕಿ ತಂದಳು. ತಾಯಿ-ಮಗಳು ಬಡಿಸುವಾಗ ರಾಜಲಕ್ಷ್ಮಿ ಒಂದು ರೌಂಡ್ ಆಶ್ರಮ ನೋಡಿ ಬಂದರು. ಒಟ್ಟು 20-22 ಜನರಿದ್ದ ಆಶ್ರಮ. ರೂಮ್‌ಗಳಲ್ಲಿ ನಾಲ್ಕು ನಾಲ್ಕು ಜನರಿದ್ದರು. ಹಾಲ್‌ನಲ್ಲಿ ಉಳಿದವರಿದ್ದರು. ಬೆಡ್‌ಶೀಟ್, ಹಾಸಿಗೆಗಳು ಕೊಳಕಾಗಿದ್ದವು. ಯಾರ ಮುಖದಲ್ಲೂ ಖಳೆಯೇ ಇರಲಿಲ್ಲ. ಇಂತಹ ಆಶ್ರಮದಲ್ಲಿ ಸರಸಮ್ಮ ಇರುವುದು ಸಾಧ್ಯವೇ ಇಲ್ಲ ಅನ್ನಿಸಿತು.

ವಾಪಸ್ಸು ಬರುವಾಗ ರಾಜಲಕ್ಷ್ಮಿ ಕೇಳಿದರು.
“ಆ ಆಶ್ರಮ ಯಾಕೆ ಹೀಗಿದೆ?”
“ಈ ಆಶ್ರಮದ ಓನರ್ ನಾಗಮೋಹನ್ ಅಂತ. ಅವರ ಹೆಂಡತಿ ಶಾರದ. ಶಾರದಮ್ಮ ಹೋದಮೇಲೆ ಆಕೆಯ ಹೆಸರಿನಲ್ಲಿ ಆಶ್ರಮ ಶುರು ಮಾಡಿದ್ರು. ಅವರೆಲ್ಲಾ ಇರೋದು ಬೆಂಗಳೂರಿನಲ್ಲಿ. ಶಾರದಮ್ಮನ ತವರು ಮೈಸೂರು. ಆಶ್ರಮದ ಉಸ್ತುವಾರಿಗೆ ಶ್ರೀನಿವಾಸಯ್ಯ ಅನ್ನುವವರನ್ನು ನೇಮಿಸಿದ್ದರು. ಆತ ಒಳ್ಳೆಯವರು ನಿಸ್ಪೃಹತೆಯಿಂದ ಕೆಲಸ ಮಾಡ್ತಿದ್ದರು. ಅವರ ಜೊತೆ ಅವರ ಹೆಂಡತಿಯ ತಮ್ಮ ನೀಲಕಂಠ ಓಡಾಡಿಕೊಂಡಿದ್ದ. ಇಲ್ಲಿನ ವ್ಯವಹಾರಗಳನ್ನು ಗಮನಿಸಿದ್ದ. ಶ್ರೀನಿವಾಸಯ್ಯ ಹೋದಮೇಲೆ ಇವನಿಗೇ ವಹಿಸಿದರು. ಇವನು ಆರಂಭದಲ್ಲಿ ಸರಿಯಾಗಿದ್ದ. ಆಮೇಲೆ ಸರ್ವಾಧಿಕಾರಿಯಾದ. ಇಲ್ಲಿರುವವರ ಸ್ಥಿತಿ ನೋಡಿದ್ರೆ ಕಣ್ಣಿನಲ್ಲಿ ನೀರು ಬರತ್ತೆ. ಆದರೆ ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ.”

“ಈಗ ಸೋಪು, ಟೂತ್ ಪೇಸ್ಟ್ ತಂದುಕೊಟ್ರಲ್ಲಾ…..?”
“ಇಲ್ಲಿ ನನಗೆ ಸಹಾಯಕ್ಕೇಂತ ದೇವಕಿ ಅನ್ನುವ ಹುಡುಗಿ ಇದ್ದಳು. ಅವಳಿಗೆ ಮಲತಾಯಿ ಕಾಟ. ಹಾಗೂ ಹೀಗೂ ಪಿ.ಯು.ಸಿ ಮುಗಿಸಿದ್ದಳು. ತುಂಬಾ ಚೆಲುವೆ. ಅವಳನ್ನು ಒಬ್ಬ ದಿನಸಿ ಅಂಗಡಿ ಓನರ್ ಇಷ್ಟಪಟ್ಟ. ಅವನು ಹೆಚ್ಚು ಓದಿದ್ದ. ಮದುವೆಯಾಗಿತ್ತು. ಹೆಂಡತಿ ಏನೋ ಖಾಯಿಲೆಯಿಂದ ಸತ್ತು ಹೋಗಿದ್ದಳು. ಮಕ್ಕಳಿರಲಿಲ್ಲ. ಬೇರೆ ಮದುವೆ ಆಗಲು ಒಪ್ಪಿರಲಿಲ್ಲ.”
“ಅವನು ದೇವಕೀನ್ನ ಮದುವೆ ಆದ್ನಾ?”
“ಹುಂ. ಅವನು ಇವಳಿಗಿಂತ 18 ವರ್ಷ ದೊಡ್ಡವನು. ಇವಳು ಖುಷಿಯಿಂದ ಒಪ್ಪಿದಳು. ಅವಳಿ ಗಂಡು ಮಕ್ಕಳಿವೆ. ಅವಳು ಇಲ್ಲಿಯವರ ಪರಿಸ್ಥಿತಿ ನೋಡಿದ್ದಾಳಲ್ವಾ? ಅದಕ್ಕೆ ಪ್ರತಿ ತಿಂಗಳೂ ಅವರ ಅಂಗಡಿಯಲ್ಲಿರುವ ಸಾಮಾನುಗಳನ್ನು ಕಳಿಸ್ತಾಳೆ. ಡಾಕ್ಟರ್‌ನ ಕೇಳಿ ಜ್ವರದ ಮಾತ್ರೆ, ಕೆಮ್ಮಿನ ಮಾತ್ರೆ ಕಳಿಸ್ತಾಳೆ. ಅವಳ ಗಂಡ ಯಾವುದಕ್ಕೂ ಅಡ್ಡಿ ಬರಲ್ಲ.”
“ಹುಡುಗಿ ಪುಣ್ಯ ಮಾಡಿದ್ದಳು.”

PC: Internet

“ನೀಲಕಂಠ ಅವಳ ಮೇಲೆ ಕಣ್ಣು ಹಾಕಿದ್ದ. ಅವಳು ಒಬ್ಬಳೇ ಇದ್ದ ಸಮಯ ನೋಡಿಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದ. ಅವಳ ಮೊಬೈಲ್‌ಗೆ ಕೆಟ್ಟ ಮೆಸೇಜ್ ಕಳಿಸ್ತಿದ್ದ.”
“ಆ ಹುಡುಗಿ ಮೊಬೈಲ್ ಇಟ್ಟುಕೊಂಡಿದ್ದಳಾ?”
“ನಾಗಮೋಹನ್ ಸರ್ ನಮ್ಮಿಬ್ಬರಿಗೂ ಮೊಬೈಲ್ ಕೊಡಿಸಿದ್ರು. ನಾವು ರಾತ್ರಿ ಮನೆಗೆ ವಾಪಸ್ಸಾಗುವಾಗ ಅವರಿಗೆ ವರದಿ ಒಪ್ಪಿಸುತ್ತಿದ್ದೆವು.”
“ಓ….” ರಾಜಲಕ್ಷ್ಮಿ ಉದ್ಘಾರವೆಳೆದರು.
“ನೀಲಕಂಠ ಹೆಣ್ಣುಬಾಕ. ತುಂಬಾ ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಆದರೆ ಯಾರಿಗೂ ಕಂಪ್ಲೇಂಟ್ ಕೊಡುವ ಧೈರ್ಯವಿಲ್ಲ. ಈ ಆಶ್ರಮಕ್ಕೆ ಸೈಕಲ್‌ನಲ್ಲಿ ಬರ‍್ತಿದ್ದ. ಈಗ ಕಾರು ತೊಗೊಂಡಿದ್ದಾನೆ. ತನ್ನ ಹೆಸರಲ್ಲಿ ಟ್ರಾವಲ್ಸ್ ಶುರುಮಾಡಿದ್ದಾನೆ.”
“ಹೌದಾ?”
“ನನಗೆ ಈ ಹೆಂಗಸರು ತುತ್ತು ಅನ್ನಕ್ಕಾಗಿ, ಬಟ್ಟೆಗಾಗಿ ಅವನ ಮುಂದೆ ಕೈ ಚಾಚೋದು ನೋಡಿ ಇವರೆಲ್ಲರಿಗೂ ವಿಷ ಹಾಕಿ ಸಾಯಿಸಬಿಡಲಾ ಅನ್ನಸ್ತಿತ್ತು. ದೇವರ ದಯ ನನಗೆ ಅಷ್ಟರಲ್ಲಿ ಬೇರೆ ಕೆಲಸ ಸಿಕ್ಕಿತು.”
ರಾಜಲಕ್ಷ್ಮಿ ಮಾತಾಡಲಿಲ್ಲ. ಅವರ ಮನಸ್ಸು ಮಾತ್ರ ಕದಡಿದ ಕೊಳದಂತಾಗಿತ್ತು.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ :  https://www.surahonne.com/?p=41558

-ಸಿ.ಎನ್. ಮುಕ್ತಾ

7 Responses

  1. ಆಶ್ರಮದಲ್ಲಿ ನ ಹಳವಂಡೆಗಳ ಬಗ್ಗೆ ಮಾಹಿತಿ ಓದಿದ ನನಗೆ. ಹೌದು ಗೆದ್ದಲು ಕಷ್ಟ ಪಟ್ಟು ಹುತ್ತ ಕಟ್ಟುತ್ತೆ ಹಾವು ಅದರಲ್ಲಿ ವಾಸಮಾಡುತ್ತೆ ಎನ್ನುವ ಮಾತು ನೆನಪಿಗೆ ಬಂತು….ಕಾದಂಬರಿಯ ಓಟ..ಕುತೂಹಲಕರ ವಾಗಿದೆ ಮೇಡಂ

  2. ನಯನ ಬಜಕೂಡ್ಲು says:

    ಕುತೂಹಲಕಾರಿಯಾಗಿ ಸಾಗುತ್ತಿದೆ ಕಥೆ.

  3. ಪದ್ಮಾ ಆನಂದ್ says:

    ಎಲೆಲ್ಲೂ ಇರುವಂತೆ ವೃದ್ಧಾಶ್ರಮದ ಎರಡು ಮುಖಗಳ ಪರಿಚಯ ಕಥೆಯೊಳಗೆ ಹಾಸುಹೊಕ್ಕಾಗಿ ಮೂಡಿ ಬಂದಿದೆ.

  4. ಮುಕ್ತ c. N says:

    ಧನ್ಯವಾದಗಳು ನಯನ ಮತ್ತು ನಾಗರತ್ನ.
    ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಧನ್ಯವಾದಗಳು.

  5. ಮುಕ್ತ c. N says:

    ಧನ್ಯವಾದಗಳು ಪದ್ಮಾ ಮೇಡಂ

  6. ಶಂಕರಿ ಶರ್ಮ says:

    ಕುತೂಹಲಕಾರಿಯಾಗಿ ಸಾಗುತ್ತಿರುವ ಸಾಮಾಜಿಕ ಕಥಾನಕವು ಚೆನ್ನಾಗಿದೆ ಮೇಡಂ.

  7. ವೃದ್ಧಾಶ್ರಮಗಳ ಇನ್ನಿಂದು ಮುಖ ವಿವರಿಸುತ್ತಿದ್ದೀರಿ ಮೇಡಂ. ಮುಂದೆಎನಾಗುವುದೋ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: