ಕಾವ್ಯ ಭಾಗವತ 25: ಪ್ರಹ್ಲಾದ ಚರಿತೆ – 1

ಸಪ್ತಮ ಸ್ಕಂದ – ಅಧ್ಯಾಯ –1
ಪ್ರಹ್ಲಾದ ಚರಿತೆ – 1
ಸನಕಾದಿಗಳ ಶಾಪಬಲ
ಕಶ್ಯಪರ ವೀರ್ಯಬಲದಿಂ
ದಿತಿಯ ಗರ್ಭದಿ
ನೂರು ವರ್ಷ ಬೆಳೆದು
ಒಂದು ದುಮುಹೂರ್ತದಲಿ
ಜನಿಸಿದ ಯಮಳ ಶಿಶುಗಳು
ಹಿರಣ್ಯಾಕ್ಷ, ಹಿರಣ್ಯಕಶ್ಯಪು
ಬೆಳೆದಂತೆಲ್ಲ ತಮ್ಮ ಅಪಾರ
ಭುಜಬಲ ತಪೋಬಲದಿಂ
ತ್ರಿಲೋಕ ಪೀಡಿತರಾಗಿರಲು
ನಾರದ ಸಲಹೆಗೆ ಮಣಿದು
ವರಾಹರೂಪದ ವಿಷ್ಣುವಿನೊಡನೆ
ಕಾದಾಡಿ ವಾರಾಹನ ಕೋರೆದಾಡಿಗಳ
ಇರಿತದಿಂ ಮರಣಿಸಿದ ಹಿರಣ್ಯಾಕ್ಷನ ವಧೆ
ಹಿರಿಯ ಸೋದರ ಹಿರಣ್ಯಕಶ್ಯಪುವಿನಲಿ
ಅಡಗಿ ಕುಳಿತಿದ್ದ ಹರಿದ್ವೆಷವೆಂಬಾಗ್ನಿಗೆ
ತುಪ್ಪ ಸುರಿದಂತಾಗಿ
ಸಕಲ ದೇವ, ಬ್ರಾಹ್ಮಣ, ಕ್ಷತ್ರಿಕ
ಕುಲನಾಶನಕೆ
ವ್ರತನಿಷ್ಠ ಬ್ರಾಹ್ಮಣರ
ಯಜ್ಞ, ಯಾಗಾದಿ, ತಪಸ್ಸುಗಳು
ನಡೆಯದ ಪರಿ
ಎಲ್ಲವನೂ ಧ್ವಂಸ ಮಾಡಿ
ತುಳಸೀ ವೃಂದಾವನ ಸಹಿತ
ಎಲ್ಲ ತೀರ್ಥ ಕ್ಷೇತ್ರಗಳ ಅಪವಿತ್ರಗೊಳಿಸಿ
ದೇವತೆಗಳಿಗೆ ಆಹಾರ, ಹವಿಸ್ಸು
ಸಿಗದಂತೆ ಮಾಡಿ
ಅವರ ನಿರ್ವೀರ್ಯರನ್ನಾಗಿ ಮಾಡಿ
ಅವರೆಲ್ಲರ ಪ್ರಭು ಹರಿಯ
ವಧಿಸುವ ಹೊಣೆ ತನಗಿರಲಿ
ಎಂದು ಸಂಕಲ್ಪಿಸಿ
ಬ್ರಹ್ಮನ ಕುರಿತು
ತಪವಂಗೈಯಲು
ಮಂದರಪರ್ವತದ ತಪ್ಪಲಲಿ
ಕಾಲಹೆಬ್ಬೆರಳ ಮಾತ್ರ ನೆಲದ ಮೇಲೂರಿ
ಎರಡೂ ತೋಳುಗಳ ಮೇಲಕ್ಕೆತ್ತಿ
ಆಕಾಶದಲಿ ದೃಷ್ಟಿಯಿಟ್ಟು
ಘನಘೋರ ತಪವನ್ನಾಚರಿಸಿದ
ಹಿರಣ್ಯಕಶ್ಯಪನ
ಘನಘೋರ ತಪಸ್ಸಿಗೆ
ನಾಲ್ಕು ದಿಕ್ಕುಗಳಲೂ
ಜ್ವಾಲೆವ್ಯಾಪಿಸಿ
ಇಂದ್ರಾದಿ ದೇವತೆಗಳೂ
ಮೂರು ಲೋಕದ ಪ್ರಜಾಕೋಟಿಯೂ
ಭಯಭೀತರಾಗೆ,
ಬ್ರಹ್ಮ ಪ್ರತ್ಯಕ್ಷನಾಗಿ, ಅವ ಬೇಡಿದ
ರಾತ್ರಿಯಲ್ಲಾಗಲೀ, ಹಗಲಿನಲ್ಲಾಗಲೀ
ಭೂಮಿ ಅಥವಾ ಅಂತರಿಕ್ಷದಲ್ಲಾಗಲೀ
ಆವರಣದ ಒಳಗಾಗಲೀ, ಹೊರಗಾಗಲೀ
ನೀ ಸೃಷ್ಟಿಸಿದ ಚರಾಚರಗಳಾದ
ಯಾವ ಭೂತಗಳಿಂದಾಗಲೀ
ನನಗೆ ಮರಣವಾಗದಂತೆ
ಅನುಗ್ರಹಿಸು
ಎಂಬ ಹಿರಣ್ಯಕಶ್ಯಪುವಿನ ಬೇಡಿಕೆಗೆ
ಬ್ರಹ್ಮ ತಥಾಸ್ತು ಎಂಬುದೊಂದು
ಅನಿವಾರ್ಯ ಕ್ರಿಯೆ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತದಲ್ಲಿ ಪ್ರಹ್ಲಾದ ಕಥನ ಚೆನ್ನಾಗಿ ಮೂಡಿಬಂದಿದೆ ಸಾರ್..ನಿಮ್ಮ ಪ್ರಯತ್ನ ಶ್ಲಾಘನೀಯ ವಾದದ್ದು..ಈ ಮೂಲಕ ನನಗೆ ಭಾಗವತವನ್ನು ಅರ್ಥಮಾಡಿಕೊಳ್ಳಲು ಸದ್ಯ ವಾಗುತ್ತಿದೆ..ಧನ್ಯವಾದಗಳು.. ಸಾರ್
ಚೆನ್ನಾಗಿದೆ
ಇದೇ ಘೋರ ತಪಸ್ಸನ್ನು ಸತ್ಕಾರ್ಯಕ್ಕಾಗಿ ಮಾಡಿದ್ದರೆ ಎಷ್ಟು ಚೆನ್ನಿತ್ತಲ್ಲಾ ಎಂದೆನಿಸಿತು, ಕಾವ್ಯ ಭಾಗವತದ ಈ ಭಾಗವನ್ನೋದಿದಾಗ.
ಪೌರಾಣಿಕ ಕಥೆಯನ್ನು ಸರಳ, ಸುಂದರ ಕಾವ್ಯ ಭಾಗವತ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ ರೀತಿ ಅನನ್ಯ! ಧನ್ಯವಾದಗಳು ಸರ್.