ಕಾದಂಬರಿ : ತಾಯಿ – ಪುಟ 8
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)
ಎರಡು ತಿಂಗಳುಗಳು ಸದ್ದಿಲ್ಲದೆ ಉರುಳಿದವು; ಈ ಮಧ್ಯೆ ಭರತ್ ಮದುವೆಯಾಯಿತು. ಮದುವೆಯ ವೀಡಿಯೋ ಭರತ್ ರಾಜಲಕ್ಷ್ಮಿಗೆ ಕಳಿಸಿದ್ದ. ಸರಳವಾಗಿ ಆತ್ಮೀಯರ ಮುಂದೆ ಮದುವೆಯಾಗಿದ್ದರವರು. ಭರತ್ ತಂದೆ-ತಾಯಿ, ಇಂದಿರಾ ತಾಯಿ-ತಂದೆ ಇದ್ದರು. ಮಕ್ಕಳು ಇದ್ದಂತೆ ಕಾಣಲಿಲ್ಲ.
ಎರಡು ತಿಂಗಳ ನಂತರ ಭರತ್ ಅತ್ತೆಗೆ ಫೋನ್ ಮಾಡಿದ. “ನಾವು ಈ ತಿಂಗಳು ಇಂಡಿಯಾಕ್ಕೆ ಬರ್ತಿದ್ದೇವೆ. ರಜನಿ ನಿಮಗೆ ಹತ್ತಿರ ಹತ್ತಿರ ಒಂದು ಕೋಟಿ ಬಿಟ್ಟುಹೋಗಿದ್ದಾಳೆ. ನಾನು ಚೆಕ್ ತರಲಾ ಅಥವಾ….”
“ಅಷ್ಟೊಂದು ಹಣಾನಾ? ನನಗೆ ಖಂಡಿತಾ ಬೇಡ.”
“ನಮಗೂ ಬೇಡ ಅಮ್ಮ. ನಾವು ಇಟ್ಟುಕೊಳ್ಳುವಂತಿಲ್ಲ. ರಜನಿ ನಿಮಗೆ ಗಿಫ್ಟ್ ಆಗಿ ಕೊಟ್ಟಿದ್ದಾಳೆ. ರಾಹುಲ್‌ಗೆ ಹಣ ಕೊಡಬೇಡಿ. ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿ. ಹಣ ಹೇಗೆ ತಲುಪಿಸಲಿ ಹೇಳಿ.”
“ನೀವು ನಮ್ಮ ಮೋಹನ್ ಹತ್ತಿರ ಮಾತನಾಡಿ ನನಗೇನು ಗೊತ್ತಾಗ್ತಿಲ್ಲ.”
“ಮೋಹನ್ ನಂಬರ್ ಕಳುಹಿಸಿ” ಎಂದ ಭರತ್.
ಒಂದು ವಾರದ ನಂತರ ಮೋಹನ್ ಅವರನ್ನು ನೋಡಲು ಬಂದ.
“ನಾನು ನಿಮ್ಮ ಹತ್ತಿರ ಪ್ರೈವೇಟ್ ಆಗಿ ಮಾತಾಡಬೇಕು. ನನ್ನ ಜೊತೆ ಕಾರ್‌ನಲ್ಲಿ ಬರ್ತೀರಾ?”
“ಹತ್ತು ನಿಮಿಷ ಟೈಂ ಕೊಡಪ್ಪ ರ‍್ತೀನಿ. ನಾನೂ ನಿನ್ನ ಹತ್ತಿರ ಮಾತಾಡಬೇಕು” ಎಂದರು ರಾಜಲಕ್ಷ್ಮಿ.
ಅವರು ರೆಡಿಯಾಗಿ ಮೋಹನನ ಕಾರು ಹತ್ತಿದರು. ಅವನು ಹತ್ತಿರದ ಪಾರ್ಕ್ ಗೆ ಕರೆದೊಯ್ದ. ಇಬ್ಬರೂ ಕಲ್ಲು ಬೆಂಚಿನ ಮೇಲೆ ಕುಳಿತರು.
“ಅಮ್ಮಾ ನಿಮ್ಮ ಮನೆಗೆ ಬೆಲೆ ಕಟ್ಟಿಸಿದೆ. 70 ಲಕ್ಷ ಹೇಳ್ತಿದ್ದಾರೆ. ನನಗೆ ಅಷ್ಟು ಕೊಡಕ್ಕಾಗಲ್ಲ. ನನ್ನ ಫ್ರೆಂಡ್ ಚಿಕ್ಕಣ್ಣ ಅನ್ನುವವರಿಗೆ ಹೇಳಿದ್ದೆ. ಅವನು 65 ಲಕ್ಷ ಕೊಡಲು ಒಪ್ಪಿದ್ದಾನೆ.”
“ನೀನು ಎಷ್ಟು ಕೊಡಕ್ಕೆ ಸಾಧ್ಯ?”
“ಅಮ್ಮಾ ಈಗ 50 ಲಕ್ಷ ಕೊಡ್ತೀನಿ. ಆಮೇಲೆ ವರ್ಷಕ್ಕೆ 2 ಲಕ್ಷ ತರಹ ಕೊಡ್ತೇನೆ. ನನಗೆ ಒಟ್ಟು 60 ಲಕ್ಷ ಕೊಡಲು ಸಾಧ್ಯ.”
“ಹಾಗೇ ಮಾಡು.”
“ಅಮ್ಮಾ ಭರತ್ ಫೋನ್ ಮಾಡಿದ್ರು. ನಿಮಗೆ ಮಗಳ ಕಡೆಯಿಂದ ದುಡ್ಡು ಬರುತ್ತಿರುವ ಬಗ್ಗೆ ಹೇಳಿದರು…”
“ಅವರು ನನ್ನ ಹತ್ತಿರ ಮಾತಾಡಿದ್ದಾರೆ. ಅಷ್ಟು ಹಣ ಅನಾಯಾಸವಾಗಿ ಬರುತ್ತಿರುವಾಗ ಅದನ್ನು ಒಳ್ಳೆಯ ಕಾರ್ಯಕ್ಕೆ ಯಾಕೆ ಉಪಯೋಗಿಸಬಾರದು? ಅನ್ನಿಸ್ತಿದೆ.”
“ಏನು ಮಾಡಬೇಕೂಂತಿದ್ದೀರಾ?”
“ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದ ಹತ್ತಿರ ಒಂದು ಉಚಿತ ವೃದ್ಧಾಶ್ರಮ ಇದೆ. 20-25 ಜನ ಇರಬಹುದು. ಅವರು ತುಂಬಾ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಅದನ್ನು ನಡೆಸುವವರು ಒಳ್ಳೆಯವರಾದರೂ, ಮ್ಯಾನೇಜರ್ ಒಳ್ಳೆಯವನಲ್ಲ. ಆದ್ದರಿಂದ ಅವರಿಗೋಸ್ಕರ ಒಂದು ಒಳ್ಳೆಯ ವೃದ್ಧಾಶ್ರಮ ಶುರುಮಾಡೋಣಾಂತಿದ್ದೇನೆ.”
“ಗುಡ್ ಐಡಿಯಾ. ನಿಮಗೋಸ್ಕರ ಭರತ್ ಸರ್ ನಿಮ್ಮ ಹಳೆಯ ಮನೆ ಕೊಂಡುಕೊಡಬೇಕೂಂತ ಇದ್ದಾರೆ. ನೀವು ಆ ಮನೆಯಲ್ಲಿ ವೃದ್ಧಾಶ್ರಮ ಆರಂಭಿಸಬಹುದು.”
“ಮೋಹನ್ ಭರತ್ ಬರಲು ಇನ್ನೂ ಒಂದು ತಿಂಗಳು ಬೇಕು. ಅಷ್ಟರೊಳಗೆ ಒಂದು ತೀರ್ಮಾನಕ್ಕೆ ಬರ‍್ತೀನಿ.”
ಹದಿನೈದು ದಿನ ಉರುಳಿದವು. ಒಂದು ಭಾನುವಾರ ಬೆಳಿಗ್ಗೆಯೇ ಮ್ಯಾನೇಜರ್ ತಿಂಡಿಯ ಸಮಯಕ್ಕೆ ಅಲ್ಲಿಗೆ ಬಂದರು. ಗೌರಮ್ಮ, ಸರಸಮ್ಮ, ಭವಾನಿ, ಚಿನ್ಮಯಿ ಪೂರಿ, ಸಾಗು ತಯಾರಿಸುವ ಸಂಭ್ರಮದಲ್ಲಿದ್ದರು.
“ಬನ್ನಿ ಸರ್. ಬಿಸಿಬಿಸಿ ಪೂರಿ ತಿನ್ನಿ” ಚಿನ್ಮಯಿ ಕರೆದಳು. ಅವರು ಅವರೆಲ್ಲರ ಜೊತೆ ಕುಳಿತು ತಿಂಡಿ ತಿಂದು ಕಾಫಿ ಕುಡಿದರು.
“ನಿಮ್ಮೆಲ್ಲರಿಗೂ ಒಂದು ವಿಷಯ ಹೇಳಬೇಕಾಗಿದೆ. ಅದಕ್ಕೆ ನಾನು ಬಂದಿರೋದು.”
“ಏನು ವಿಷಯ ಗೋಪಾಲರಾಯರೆ?”
“ನಾನು-ನನ್ನ ಹೆಂಡತಿ ಹೈದರಾಬಾದ್‌ನಲ್ಲಿರುವ ಮಗಳ ಮನೆಗೆ ಹೊರಟುಹೋಗ್ತಿದ್ದೇವೆ. ನಾನು ನಾನೂಮಲ್ ಸಾಹೇಬರಿಗೆ ವಿಷಯ ತಿಳಿಸಿದೆ. ಅವರಿಗೆ ಈ ವೃದ್ಧಾಶ್ರಮ ನಡೆಸಲು ಆಸಕ್ತಿಯಿಲ್ಲ. ಅವರ ಮಗ ಮುಂದಿನವಾರ ಇಲ್ಲಿಗೆ ಬರ‍್ತಾರಂತೆ. ಅವರಿಗೆ ಮೊದಲಿನಿಂದಲೂ ವೃದ್ಧಾಶ್ರಮದ ಬಗ್ಗೆ ಆಸಕ್ತಿ ಇರಲಿಲ್ಲ.”
“ಹಾಗಾದ್ರೆ ಈ ಆಶ್ರಮ ಮುಚ್ಚಿಬಿಡ್ತಾರಾ?”
“ಇಲ್ಲ. ಜೆ.ಪಿ.ನಗರದವರೇ ಒಬ್ಬರು ಈ ವೃದ್ಧಾಶ್ರಮ ನೋಡಿಕೊಳ್ಳಲು ಮುಂದೆ ಬಂದಿದ್ದಾರಂತೆ. ಅವರನ್ನೂ ಕರೆದುಕೊಂಡು ನಾನೂಮಲ್ ಅವರ ಮಗ ನೂತನ್‌ಮಲ್ ಈ ಭಾನುವಾರ ರ‍್ತಾರಂತೆ.”
“ಒಳ್ಳೆಯದಾಯಿತು” ಎಂದರು ಭವಾನಿ.
ಎಲ್ಲರಿಗೂ ಆ ವೃದ್ಧಾಶ್ರಮದ ಜೀವನ ಒಗ್ಗಿಹೋಗಿತ್ತು. “ಇತ್ತೀಚೆಗೆ ಇದೇ ನಮ್ಮ ಮನೆ, ನಾವೆಲ್ಲರೂ ಒಂದು” ಎನ್ನುವ ಭಾವನೆ ಮೂಡಿತ್ತು. ನಾನೂಮಲ್ ವೃದ್ಧಾಶ್ರಮ ಮುಚ್ಚಿಹೋದರೆ ಎಲ್ಲಿಗೆ ಹೋಗುವುದೆಂಬ ಯೋಚನೆಯೂ ಅವರೆಲ್ಲರನ್ನೂ ಕಾಡುತ್ತಿತ್ತು.
ಗೋಪಾಲರಾಯರು ಹೋದಮೇಲೆ ಗೋದಾಮಣಿ ಹೇಳಿದರು. “ಭಾನುವಾರ ನಾನೂಮಲ್ ಮಗ ಬರೋದು ಬೇಡ ಅನ್ನುವುದು ಸೂಕ್ತವಲ್ಲ. ಆದರೆ ನನಗೊಂದು ಯೋಚನೆ ಬರ‍್ತಿದೆ.”
“ಏನದು?”
“ಹೊಸಬರು ಹೇಗರಿರ್ತಾರೋ ಏನೋ ನಮಗೆ ಗೊತ್ತಿಲ್ಲ. ತಕ್ಷಣ ನಮ್ಮ ಒಪ್ಪಿಗೆ ಹೇಳುವುದು ಬೇಡ. ‘ಕೊಂಚ ಟೈಂ ಕೊಡಿ’ ಅಂತ ಕೇಳೋಣ.”
“ಆಗಲಿ ಹಾಗೇ ಮಾಡೋಣ” ಎಂದರು ಎಲ್ಲರೂ ಒಂದೇ ಧ್ವನಿಯಲ್ಲಿ.
“ನಾವು ಇಲ್ಲಿರಲು ಒಪ್ಪದಿದ್ದರೆ ಪರ್ಯಾಯ ಮಾರ್ಗ ಯೋಚಿಸಬೇಕು ನೆನಪಿರಲಿ” ಭುವನೇಶ್ವರಿ ಹೇಳಿದರು.
“ಅದರ ಬಗ್ಗೆ ನಾನು ಯೋಚಿಸಿದ್ದೇನೆ. ಈ ಭಾನುವಾರದ ನಂತರ ಹೇಳ್ತೀನಿ” ಎಂದರು ಗೋದಾಮಣಿ.
ನೂತನ್‌ಮಲ್ ಭಾನುವಾರ 11 ಗಂಟೆಗೆ ಬರುವುದಾಗಿ ತಿಳಿಸಿದ್ದರು. ಮ್ಯಾನೇಜರ್ ಗೋಪಾಲರಾಯರೂ ಬರಲು ಒಪ್ಪಿದ್ದರು.
ಅಡಿಗೆ ಮನೆಯಲ್ಲಿದ್ದ ವೆಂಕಮ್ಮ ದಡದಡ ಹಾಲ್‌ಗೆ ಬಂದು ಹೇಳಿದರು. “ಎಲ್ಲರೂ ಬನ್ನಿ ಒಂದು ಮುಖ್ಯವಾದ ವಿಷಯ ಹೇಳಬೇಕು.”
ಹತ್ತು ನಿಮಿಷಗಳಲ್ಲಿ ಎಲ್ಲರೂ ಸೇರಿದರು.
“ಚಿನ್ಮಯಿ ಫೋನ್ ಮಾಡಿದ್ದಳು. ಈ ಆಶ್ರಮದ ಜವಾಬ್ಧಾರಿ ವಹಿಸಿಕೊಳ್ಳಲು ಮುಂದೆ ಬಂದಿರೋರು ನೀಲಕಂಠ ಅಂತೆ. ಅವನು ಬಂದ್ರೆ ನಾನು ಕೆಲಸ ಬಿಟ್ಟು ಹೋಗ್ತೀನಿ.”
“ನೀಲಕಂಠ ಯಾರು?”
“ಸಾಯಿಬಾಬಾನ ದೇವಸ್ಥಾನವಿರುವ ವೃದ್ಧಾಶ್ರಮವನ್ನು ಅವನೇ ನೋಡಿಕೊಳ್ತಿರೋದು. ಅವನು ಆಶ್ರಮ ಹೇಗಿಟ್ಟಿದ್ದಾನೇಂತ ನಾವು ರಾಜಲಕ್ಷ್ಮಿಗೆ ತೋರಿಸಿದ್ದೇವೆ.”
“ರಾಜಲಕ್ಷ್ಮಿ ನೀವು ಆಶ್ರಮ ನೋಡಿದ್ದೀರಾ?”
“ಹೌದು. ಅಲ್ಲಿರುವವರು ತುಂಬಾ ಕಷ್ಟ ಅನುಭವಿಸ್ತಿದ್ದಾರೆ.”
“ಹಾಗಾದ್ರೆ ನಾವು ಒಂದು ವಾರ ಟೈಂ ಕೇಳೋಣ” ಚಂದ್ರಮ್ಮ ಹೇಳಿದರು.
“ಹೌದು. ಒಂದು ವಾರ ಟೈಂ ಇದ್ರೆ ನಾವು ಚರ್ಚೆ ಮಾಡಿ ಯಾವುದಾದರೂ ನಿರ್ಧಾರಕ್ಕೆ ಬರಬಹುದು” ಎಂದರು ಡಾ|| ಮಧುಮತಿ.”
ನೂತನ್‌ಮಲ್ ಹೇಳಿದ್ದಂತೆ ಸರಿಯಾಗಿ 11 ಗಂಟೆಗೆ ನೀಲಕಂಠನ ಜೊತೆ ಬಂದರು. ಆ ವೇಳೆಗೆ ಗೋಪಾಲರಾಯರೂ ಬಂದರು.
ನೂತನ್‌ಮಲ್ ನೇರವಾಗಿ ವಿಷಯಕ್ಕೆ ಬಂದರು.
“ನಮ್ಮ ತಂದೆಯವರು ಸ್ಥಾಪಿಸಿರುವ ವೃದ್ಧಾಶ್ರಮವಿದು. ಅದನ್ನು ಮುಚ್ಚುವುದಕ್ಕೆ ನಮ್ಮ ತಂದೆಗೆ ಇಷ್ಟವಿಲ್ಲ. ಆದರೆ ಗೋಪಾಲರಾಯರು ಹೈದರಾಬಾದ್‌ಗೆ ಹೋಗುತ್ತಿರುವುದರಿಂದ ಬೇರೆಯವರಿಗೆ ಜವಾಬ್ಧಾರಿ ಕೊಡುವುದು ಅನಿವಾರ್ಯವಾಗಿದೆ. ಈ ಜವಾಬ್ದಾರಿ ಹೊರಲು ನೀಲಕಂಠ ಮುಂದೆ ಬಂದಿದ್ದಾರೆ. ಅವರು ಇನ್ನು ಮುಂದೆ ನಿಮ್ಮ ಯೋಗಕ್ಷೇಮೆ ನೋಡಿಕೊಳ್ತಾರೆ.”
“ನೂತನ್‌ಮೆಲ್ ಅವರೇ ಗೋಪಾಲರಾಯರ ಕಾಲದಲ್ಲಿ ನಾವು ತುಂಬಾ ಆರಾಮವಾಗಿದ್ದೆವು. ನಮಗೆ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ನಾವ್ಯಾರು ಈಗ ಕೆಲಸಮಾಡಿ ಸಂಪಾದಿಸುವ ಸ್ಥಿತಿಯಲ್ಲಿಲ್ಲ. ನಾವು ಕೂಡಿಟ್ಟಿರುವ ಹಣದಿಂದಲೋ, ಫ್ಯಾಮಿಲಿ ಪೆನ್ಷನ್‌ನಿಂದಲೋ ದಿನಗಳನ್ನು ದೂಡಬೇಕು….”
“ನೀವೆನ್ನುತ್ತಿರುವುದು ನಿಜ….”
“ನಾವು ಇಲ್ಲಿರಬೇಕೋ ಅಥವಾ ಬೇರೆ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೋ ಎಂದು ಯೋಚಿಸಲು ಒಂದು ವಾರ ಟೈಂ ಬೇಕು. ದಯವಿಟ್ಟು……….”
“ಆಗಲಿ ಮ್ಯಾಡಂ. ನೀವೆಲ್ಲಾ ಯೋಚನೆ ಮಾಡಿ ತಿಳಿಸಿ. ನೀಲಕಂಠ ಹತ್ತಿರದಲ್ಲೇ ಒಂದು ಆಶ್ರಮದ ಉಸ್ತುವಾರಿ ನೋಡಿಕೊಳ್ತಿದ್ದಾರೆ. ಆದ್ದರಿಂದ ಒಬ್ಬ ಅನುಭವ ಇರುವ ವ್ಯಕ್ತಿಗೆ ಈ ವೃದ್ಧಾಶ್ರಮ ವಹಿಸುವುದು ಒಳ್ಳೆಯದು ಅನ್ನಿಸಿತು…..”
“ನಿಮ್ಮ ಆಲೋಚನೆ ತಪ್ಪಿಲ್ಲ. ಹೇಗೂ ಒಂದು ವಾರ ಟೈಂ ಇದೆಯಲ್ಲಾ….. ನಾವು ಯೋಚಿಸಿ ತೀರ್ಮಾನಕ್ಕೆ ಬರ‍್ತೀವಿ” ಎಂದರು ನಾಗಮಣಿ.
ನೀಲಕಂಠ ಏನೂ ಮಾತನಾಡಲಿಲ್ಲ. ಅವನಿಗೆ ಕೊಂಚ ನಿರಾಸೆಯಾಗಿತ್ತು.
ಅಂದು ಊಟಮಾಡುವಾಗ ಗೌರಮ್ಮ ಬಡಿಸುತ್ತಲೇ ಎಲ್ಲರಿಗೂ ನೀಲಕಂಠನ ದುರ್ವರ್ತನೆಯ ಬಗ್ಗೆ, ಅಲ್ಲಿರುವವರ ಅಸಹಾಯಕತೆಯ ಬಗ್ಗೆ ಹೇಳಿದರು.
“ಗೌರಮ್ಮ ನೀವು ಹೇಳಿದ ಮಾತುಗಳನ್ನು ನಾವು ನಂಬುತ್ತೀವಿ. ನಾವು ಆದಷ್ಟು ಬೇಗ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರ‍್ತೀವಿ” ಎಂದರು ಭುವನೇಶ್ವರಿ.
ಮರುದಿನ ಸಾಯಂಕಾಲ ಕಾಫಿಯ ಟೈಂನಲ್ಲಿ ಎಲ್ಲರೂ ಒಟ್ಟಿಗೆ ಸೇರಿದರು. ಗೋದಾಮಣಿ ತಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದರು.
“ನಾವು ಎಲ್ಲಿಗೂ ಹೋಗಕ್ಕಾಗಲ್ಲ. ಇಲ್ಲೇ ಇರೋಣ. ನಮ್ಮ ಮನೆಯ ಜವಾಬ್ಧಾರಿಗಳನ್ನು ನಾವೇ ಹಂಚಿಕೊಳ್ಳೋಣ.”
“ನೀವು ಹೇಳುವುದು ನಮಗೆ ಅರ್ಥವಾಗ್ತಿಲ್ಲ.”
“ನಾವಿರುವುದು 13 ಜನ. ಗೌರಮ್ಮ ಅಡಿಗೆ ಮಾಡ್ತಾರೆ. ಮಾಮೂಲು ಕೆಲಸದವರು ಕೆಲಸ ಮಾಡ್ತಾರೆ. ನಮ್ಮಲ್ಲಿ ಒಬ್ಬರು ಕ್ಯಾಶಿಯರ್ ಆಗಲಿ. ಒಬ್ಬರು ಲೆಕ್ಕ ಬರೆಯಲಿ. ಅಂಗಡಿ ಸಾಮಾನುಗಳನ್ನು ತರಿಸುವ ಕೆಲಸ ಒಬ್ಬರು ನೋಡಿಕೊಳ್ಳಲಿ. ತರಕಾರಿ, ಹಣ್ಣು ತರುವ ಕೆಲಸ ಒಬ್ಬರು ವಹಿಸಿಕೊಳ್ಳಲಿ. ಒಂದು ಕುಟುಂಬದಲ್ಲಿ 12-15 ಜನರಿದ್ದಾಗ ಮನೆಯ ಯಜಮಾನನಾಗಿದ್ದ ವ್ಯಕ್ತಿಗಳು ಹಿಂದಿನ ಕಾಲದಲ್ಲಿ ಮನೆ ನಡೆಸುತ್ತಿರಲಿಲ್ಲವಾ?” ಗೋದಾಮಣಿ ಪ್ರಶ್ನಿಸಿದರು.
“ನಿಜ ಗೋದಾಮಣಿ. ನಾವೇ ನಮ್ಮನ್ನು ನೋಡಿಕೊಳ್ಳೋಣ. ಗೋಪಾಲರಾಯರನ್ನು ಕೇಳಿ ನೂತನಮೆಲ್‌ಗೆ ಪ್ರತಿತಿಂಗಳು ನಮ್ಮಿಂದ ಎಷ್ಟು ಹಣ ಕಳಿಸಬೇಕು ತಿಳಿದುಕೊಳ್ಳೋಣ” ಎಂದರು ಭವಾನಿ.
“ನಮ್ಮ ನಿರ್ಧಾರ ಗೋಪಾಲರಾವ್ ಮೂಲಕ ನೂತನಮೆಲ್‌ಗೆ ತಿಳಿಸೋಣ. ಅವರೇನಂತಾರೋ ನೋಡೋಣ.”
“ಬೇಡ ಗೋದಾಮಣಿ. ಈ ವಿಚಾರದಲ್ಲಿ ನಾವು ಗೋಪಾಲರಾಯರನ್ನು ಮಧ್ಯ ತರುವುದು ಬೇಡ. ನೀವೇ ಡೈರೆಕ್ಟಾಗಿ ನಾನೂಮಲ್‌ಗೆ ಫೋನ್ ಮಾಡಿ. ಅವರು ಒಪ್ಪಿದರೆ ನಾವು ಕೆಲಸ ಹಂಚಿಕೊಳ್ಳೋಣ ” ಡಾ|| ಮಧುಮತಿ ಹೇಳಿದರು.
ರಾಜಲಕ್ಷ್ಮಿ ಏನೂ ಹೇಳದೆ ಸುಮ್ಮನಿದ್ದರು. ಅವರಿಗೆ ಈ ವ್ಯವಸ್ಥೆಗೆ ಒಪ್ಪಬೇಕೋ ಅಥವಾ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಬೇಕೋ ತಿಳಿಯದೆ ಗೊಂದಲದಲ್ಲಿದ್ದರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41648
-ಸಿ.ಎನ್. ಮುಕ್ತಾ
ಓದಿದೆ. ಓದಿಸಿಕೊಂಡು ಹೋಗುತ್ತೆ.
ಇಂತಹ ಉದಾರತೆಯ ಮನಸ್ಸುಳ್ಳವರು ಇದ್ದಾರೆಯೇ ಎನ್ನುವ..ದ್ವಂದ್ವ ನನ್ನಲ್ಲಿ ಉಂಟಾಗುತ್ತಿದೆ..ಹಾಗೇ ಮುಂದೇನು ಎಂಬ ಕುತೂಹಲ …ಗರಿಗೆದರಿ ನಿಂತಿದೆ ಮೇಡಂ
ಬ್ಯೂಟಿಫುಲ್
ಸುಲಲಿತವಾಗಿ ಓದಿಸಿಕೊಂಡಿತು. ನಾನೂ, ರಾಜಲಕ್ಷ್ಮಿ. ಏನು ಹೇಳಬಹುದು ಎಂಬ ಗೊಂದಲದಲ್ಲೇ ಇದ್ದೇನೆ.
ಸರಳ, ಸುಂದರ ಸಾಮಾಜಿಕ ಕಾದಂಬರಿ ಪ್ರತಿ ಪುಟದಲ್ಲೂ ಕುತೂಹಲವನ್ನು ಕಾಯ್ದುಕೊಂಡು ಸಾಗುತ್ತಿದೆ. ಧನ್ಯವಾದಗಳು ಮೇಡಂ.
ರಾಜಲಕ್ಷ್ಮಿ ಅವರ ಉತ್ತರ ಮುಂದಿನ ನಡೆ ಏನಿರಬಹುದು? ಅಯ್ಯೋ! ತಿಳಿಯಲು ಮುಂದಿನ ವಾರದವರೆಗೆ ಕಾಯಬೇಕಾ?