‘ಯುಐ’ ಕದಕ್ಕೊಂದು ಕೀಲಿಕೈ !

Share Button

‘ಪುಟ್ಟ ಹಣತೆಯ ದೀಪವನ್ನು ಜೋರು ಗಾಳಿ ಕೆಡಿಸುತ್ತದಾದರೂ ಆ ಬೆಂಕಿ ಬೆಳೆದು ಜ್ವಾಲೆಯಾಗಿ ಹರಡಿಕೊಳ್ಳುವಾಗ ಅದೇ ಗಾಳಿ ಪೋಷಿಸಿ ಕೈ ಹಿಡಿದು ನಡೆಸುತ್ತದೆ !’ – ರಾಜ್‌ಮಂಜು

ನಟ ನಿರ್ದೇಶಕ, ಸಾಹಿತಿ ಉಪೇಂದ್ರ ಅವರು ಕನ್ನಡ ಚಲನಚಿತ್ರ ರಂಗದಲ್ಲೇ ಹೊಸದರ ಸರದಾರ. ವಿಶಿಷ್ಟ ಅಲ್ಲ, ವಿಚಿತ್ರ ಅಂತ ಬಹಳ ಜನ ಭಾವಿಸಿರುವುದುಂಟು. ಕೆಲವರು ಉಪೇಂದ್ರರ ಐಡಿಯಾಲಜಿಯನ್ನು ಒಪ್ಪಿದರೂ ಅದನ್ನವರು ಅಭಿವ್ಯಕ್ತಿಸುವ ರೀತಿನೀತಿಗಳನ್ನು ಒಪ್ಪರು. ಸಿನಿಮಾದ ಎಲ್ಲ ಸಿದ್ಧಸೂತ್ರಗಳನ್ನು ಗಾಳಿಗೆ ತೂರಿ, ತನ್ನದೇ ಆದ ಸ್ವತಂತ್ರ ಆಲೋಚನಾಲಹರಿಯನ್ನು ಚಲನಚಿತ್ರವಾಗಿಸಲು ಹೆಣಗಾಡುವ ಉಪೇಂದ್ರರು ತಾವು ಹೇಳುವುದನ್ನು ಹಾಗೆಯೇ ಹಸಿಹಸಿಯಾಗಿ ಉಣಬಡಿಸುತ್ತಾ ಸವಾಲಿಗೆ ಜವಾಬು ಕೇಳುವವರು., ನಮ್ಮನ್ನು ನಾವೇ ಮುಟ್ಟಿ ನೋಡಿಕೊಳ್ಳುವಂತೆ, ಒಂದೊಮ್ಮೆ ಕಪಾಳಕ್ಕೆ ಬಾರಿಸಿದಂತೆ ರಾಚುತ್ತಾರೆ; ಎಲ್ಲೆಡೆಯೂ ಚಾಚುತ್ತಾರೆ, ನಮ್ಮಾಳವನ್ನು ಹುಡುಕಿ ತಟಕ್ಕನೆ ಚುಚ್ಚುತ್ತಾರೆ. ಅವರ ಒಟ್ಟೂ ಉದ್ದೇಶ ಇಷ್ಟೇ: ‘ನಾವೇನೋ ಕಲಾವಿದರು, ಕ್ಯಾಮರಾ ಮುಂದೆ ನಟಿಸುತ್ತೇವೆ, ಕೇವಲ ಬದುಕಲು; ಆದರೆ ನೀವೇಕೆ ನಟಿಸುತ್ತೀರಿ? ನಿಜಜೀವನದಲ್ಲಿ! ಸುಮ್ಮನೆ ಹಾಗೆಯೇ ಸಹಜವಾಗಿ ಬದುಕಲು ನಿಮಗೇನು ರೋಗ?’ ಇದು ಅವರ ತಿವಿತ, ಒಂಥರಾ ಕಡಲ ಮೊರೆತ. ತನ್ನನೂ ತನ್ನೊಂದಿಗಿರುವವರನೂ ಅಂತರಂಗದ ಕನ್ನಡಿಯಲಿ ನೋಡಿಕೊಳ್ಳುವ ಹಾ-ತೊರೆತ!!

ಉಪೇಂದ್ರರ ಯಾವ ಚಿತ್ರಗಳಿಗೂ ಬಂದಿರದಷ್ಟು ರಿವ್ಯೂ ಇತ್ತೀಚಿಗೆ ಪ್ರದರ್ಶನ ಕಾಣುತ್ತಿರುವ ಯುಐಗೆ ಬಂದಿದೆ. ಜನಸಾಮಾನ್ಯರೆನಿಸಿಕೊಂಡ ಅಪ್ರತಿಮ ಅಭಿಮಾನೀಪಡೆ ಸಹ ಹಲವು ಆಯಾಮಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ನುಡಿದಿದೆ. ಉಪೇಂದ್ರರೇ ಹೇಳಿದಂತೆ ಶಕ್ತ್ಯನುಸಾರ ಡಿಕೋಡ್‌ ಮಾಡುವ ಪ್ರಯತ್ನ ಸಾಗಿದೆ. ಯುಐ ಎಂದರೆ ಯುನಿವರ್ಸಲ್‌ ಇಂಟಲಿಜೆನ್ಸೋ ಉಪೇಂದ್ರರ ಇಂಟೆಲಿಜೆನ್ಸೋ ಎಂಬುದನ್ನೇ ಯೋಚಿಸುವಂತಾಗಿದೆ. ಮೂವಿ ನೋಡುವ ಮುಂಚೆಯೇ ನಾನು ಇದರ ಬಗ್ಗೆ ‘ತಲೆಗೆ ಹುಳವೋ? ಗಾಳವೋ?’ ಎಂದು ಬರೆದು, ನಮ್ಮ ಸ್ನೇಹವಲಯದ ಓದುಗವರ್ಗಕ್ಕೊಂದು ಅಚ್ಚರಿಯಾಗಿದ್ದೆ. ಕಳೆದ ವಾರ, ನಮ್ಮ ಸ್ನೇಹಿತರೊಬ್ಬರಿಂದಾಗಿ ಆಕಸ್ಮಿಕವಾಗಿ ಸಿನಿಮಾ ನೋಡಿಯೂ ಬಿಟ್ಟೆ. ಇದೀಗ ನನ್ನ ಅನಿಸಿಕೆಗಳು ಹೀಗೆ, ಯುಐ ಥರವೇ ಚೆಲ್ಲಾಪಿಲ್ಲಿಯಾಗಿವೆ!

ಕತೆಯೊಳಗೊಂದು ಕತೆಯ ತಂತ್ರವನ್ನು ಹೆಣೆದಿರುವ ಉಪೇಂದ್ರರು ಇದೇ ಮೊದಲ ಬಾರಿಗೆ ‘ಸಿನಿಮಾದೊಳಗೊಂದು ಸಿನಿಮಾ’ ತಂದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಸುಮ್ಮನೆ ಮನೋರಂಜನೆಗಾಗಿಯೋ ಕಾಲಹರಣಕ್ಕಾಗಿಯೋ ಸಿನಿಮಾ ನೋಡುವವರು ಇದನ್ನು ಇಷ್ಟಪಡುವುದಿಲ್ಲ. ಅವರಿಗೆ ಬೇಕಾದದ್ದು ಈಗಾಗಲೇ ಬೇಕಾದಷ್ಟಿವೆ!  ಒಂದು ಮಟ್ಟದ ಕ್ರಿಯೆಟೀವ್‌ ಮನೋಧರ್ಮದ ಚಿಂತನಶೀಲರು ಉಪೇಂದ್ರರ ಟಾರ್ಗೆಟ್ಟು; ಇವರೇ ಈ ಸಿನಿಮಾದ ಮಾರ್ಕೆಟ್ಟು ಕೂಡ! ಉಪೇಂದ್ರರದು ತ್ರಿಪಾತ್ರಾಭಿನಯ. ಲೌಕಿಕ ಬದುಕಿನಲ್ಲಿ ತೀರಾ ಒಳ್ಳೆಯವನಾಗಿ ನೋವು ತಿನ್ನುವ ಸತ್ಯ, ಅಲೌಕಿಕ ಜಗತ್ತಿನ ಅನಭಿಷಿಕ್ತ ಪವಾಡ ಪುರುಷ ಕಲ್ಕಿ ಭಗವಾನ್‌ ಮತ್ತು ಸಿನಿಮಾದೊಳಗೊಂದು ಸಿನಿಮಾ ತೆಗೆದು ಅಸ್ವಸ್ಥನಾದ ಡೈರೆಕ್ಟರ್‌ ಉಪೇಂದ್ರ. ಈ ಡೈರೆಕ್ಟರ್‌ ತಾನೊಂದು ಸಿನಿಮಾ ತೆಗೆದು ರಿಲೀಜು ಮಾಡಿ, ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಯುಐ ನೋಡಿದ ಸಮಾಜದ ಮಂದಿ ಹೇಗೆಲ್ಲಾ ಪ್ರತಿಕ್ರಿಯಿಸಬಹುದೆಂಬ ಹೈಪೋಥಿಸೀಸ್‌ ಅಂದರೆ ಮೂಲ ಊಹೆಯಂದಾಜೇ ಇದಾಗಿದೆ ಎಂಬುದು ಇದರ ಚಾಲಾಕುತನ. ಈ ಚಲನಚಿತ್ರ ನೋಡಿದ ಜನರು ಏನೊಂದನೂ ಅರ್ಥ ಮಾಡಿಕೊಳ್ಳಲು ಆಗದೇ ಮತ್ತೆ ಮತ್ತೆ ನೋಡಲು ಶುರುವಿಡುತ್ತಾರೆ. ಎಲ್ಲೆಡೆಯೂ ಗಲಾಟೆ, ಗೌಜು, ಗದ್ದಲಗಳು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು. ಪತ್ರಿಕೆಯೊಂದರಲ್ಲಿ ರಿವ್ಯೂ ಬರೆಯುವ ಹೆಸರಾಂತ ಸಿನಿಮಾ ಪತ್ರಕರ್ತನೊಬ್ಬ ಇದೀಗ ಇದರ ರಿವ್ಯೂ ಬರೆಯಬೇಕಾಗಿದೆ. ಆದರೆ ಬರೆಯಲಾಗುತ್ತಿಲ್ಲ! ಏಕೆಂದರೆ ಫೋಕಸ್‌ ಸಿಗುತ್ತಿಲ್ಲ. ಅದಕ್ಕಾಗಿ ಆತನನ್ನು ಭೇಟಿಯಾಗಲು ಪತ್ರಕರ್ತನು ಹೋದಾಗ ಅವನಿಗೊಂದು ಆಘಾತ ಕಾದಿದೆ. ತನ್ನಾಚೆಗೂ ಚಾಚಿಕೊಳ್ಳಲು ಹವಣಿಸುವ ಪಾತ್ರಗಳಿಂದಾಗಿ ದಿಗ್ಭ್ರಮಿತಗೊಂಡ ಡೈರೆಕ್ಟರ್‌ ಉಪೇಂದ್ರ ಪಾತ್ರಧಾರಿಯು ಸತ್ಯ ಮತ್ತು ಕಲ್ಕಿ ಭಗವಾನ್‌ ಕತೆಯನ್ನು ಇಷ್ಟಪಡದೇ ಬೆಂಕಿಗೆ ಹಾಕಿ ಹೊರಟು ಹೋದ ಸುದ್ದಿ ತಿಳಿಯುತ್ತದೆ. ಅಂದರೆ ನಾವು ನೋಡುವುದೇ ಈ ರಿಲೀಸ್‌ ಆದ ಸಿನಿಮಾ! ಅಥವಾ ಅಲ್ಲವಾ? ಈ ತಾಕಲಾಟದಲ್ಲಿ ಪ್ರೇಕ್ಷಕ ಬಸವಳಿಯುವುದು ಖಚಿತ. ಪ್ರತಿ ಫ್ರೇಮ್‌ ಅನ್ನು ಕಷ್ಟಪಟ್ಟು, ಇಷ್ಟಪಟ್ಟು, ಸಂಕಲಿಸಿರುವ ಉಪೇಂದ್ರರು ನೋಡುಗರಿಗೆ ಸುಲಭವಾಗಿ ಅರ್ಥವಾಗದಂತೆ ಹೆಣೆದು ಕಕ್ಕಾಬಿಕ್ಕಿಯಾಗಿಸುತ್ತಾರೆ. ನನ್ನ ಸಿನಿಮಾ ಉಳಿದವರ ಸಿನಿಮಾಗಳಂತಲ್ಲ, ಡಿಫರೆಂಟು ಎಂಬುದನ್ನು ಸಾಬೀತು ಮಾಡಲು ಹೋಗಿ, ಬಹಳಷ್ಟು ಗೊಂದಲಗಳು ಉಳಿಯುವಂತೆ ಮಾಡುತ್ತಾರೆ. ಅರ್ಥವಾಗಲಿಲ್ಲ ಎಂದರೆ ದಡ್ಡ ಎಂದೂ ಅರ್ಥವಾಗಿದೆ ಎಂದರೆ ಬುದ್ಧಿವಂತ ಎಂದೂ ಹೀಯಾಳಿಸುವಂಥ ಸೀಕ್ವೆನ್ಸನ್ನು ತಂದಿಟ್ಟು ಇಂಗು ತಿಂದ ಮಂಗನಂತಾಗಿಸಿದ್ದಾರೆ. ದಡ್ಡರಾದರೆ ಕುಳಿತು ನೋಡಿ, ಬುದ್ಧಿವಂತರಾದರೆ ಈಗಲೇ ಎದ್ದು ಹೋಗಿ ಎಂದದ್ದು ನಮಗಲ್ಲ; ಸಿನಿಮಾದೊಳಗಿನ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಎಂಬಂಥ ಅರ್ಥ ಬರುವಂತೆ ಬಳಸಿ, ನೀವೂ ಬೇಕಾದರೆ ಇದನ್ನು ಅಪ್ಲೆ ಮಾಡಿಕೊಳ್ಳಿ ಎಂದಂತಿದೆ! ಯುಐ ಒಳಗೆ ರಿಲೀಸ್‌ ಆಗುವ ಸಿನಿಮಾ ನೋಡಲು ಬಂದು ಥಿಯೇಟರ್‌ನಲ್ಲಿ ಕುಳಿತವರಿಗೆ ಅನ್ವಯಿಸುವಂತಿದ್ದರೂ ಪರೋಕ್ಷವಾಗಿ ನಮಗೂ ಅಪ್ಲೇ ಆಗುವುದೇ ಇಂಥಲ್ಲಿ ಜಾಣತನ. ಇದು ಉಪೇಂದ್ರರಿಗಷ್ಟೇ ಒಲಿದಿರುವ ಸ್ಮಾರ್ಟ್‌ನೆಸ್ಸು. ಸಾಹಿತ್ಯದಲ್ಲಿ ಬಳಕೆಯಾಗುವ ಮ್ಯಾಜಿಕ್‌ ರಿಯಲಿಸಂ ತಂತ್ರವನ್ನು ಅವರು ಚೆನ್ನಾಗಿ ನೇಯ್ದಿದ್ದಾರೆ. ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಮೂರು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಮೊದಲನೆಯದು ಪ್ರೇಕ್ಷಕರ ಈವರೆಗಿನ ನೋಡುವ ದೃಷ್ಟಿಕೋನವನ್ನು. ಎರಡನೆಯದು ಪ್ರಸಕ್ತ ಕಾಲಮಾನದಲ್ಲಿ ಮತಧರ್ಮ-ಜಾತಿ-ಪ್ರಭುತ್ವಗಳ ಹಿಡಿತದಲ್ಲಿ ನಲುಗಿ ಹೋಗಿರುವ ಶ್ರೀಸಾಮಾನ್ಯರ ದುಃಸ್ಥಿತಿಯನ್ನು. ಮೂರನೆಯದು ಪ್ರಕೃತಿಗೆ ವಿರುದ್ಧವಾಗಿ ಬದುಕತೊಡಗಿದ ಮಾನವನು ತನ್ನೆಲ್ಲ ಆವಿಷ್ಕಾರಗಳಿಂದಲೇ ಸರ್ವನಾಶ ಹೊಂದುತ್ತಿದ್ದಾನೆಂಬ ಭವಿಷ್ಯಾವಧಾನವನ್ನು. ಉಪೇಂದ್ರರು ಕತೆ ಹೇಳುವ ಸ್ಟೈಲು ಬದಲಾಗಿಲ್ಲ; ಆದರೆ ಹೇಳುವುದನ್ನು ದೃಶ್ಯೀಕರಿಸಿ, ಸಂಯೋಜಿಸಿ ಕೊಡುವುದರಲ್ಲಿ ನಾವೀನ್ಯ ತೋರಿದ್ದಾರಷ್ಟೇ. ಸ್ವತಃ ಉಪೇಂದ್ರರೇ ‘ನೀವು ಫೋಕಸ್‌ ಮಾಡಬೇಕು; ಡೀಕೋಡ್‌ ಮಾಡಬೇಕು’ ಎಂದು ಹೇಳುವುದರ ಮೂಲಕ ಸಿನಿಮಾದ ಗರ್ಭದಲ್ಲಿ ಹೂತು ಹೋಗಿರುವ ತ್ರಿಕಾಲ ಸತ್ಯವನ್ನು ಅರಿಯಲು ಪ್ರೋತ್ಸಾಹಿಸುತ್ತಿದ್ದಾರೆ. ತಿರುಪತಿ ನಾಮವು ಸಿನಿಮಾದೊಳಗೆ ರಿಲೀಸ್‌ ಆಗಿರುವ ಚಿತ್ರದ ಶೀರ್ಷಿಕೆ! ಇದನ್ನು ಅರಿಯುವುದರೊಳಗೇ ಯುಐ ಪ್ರಪಂಚ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೋಸ ಮತ್ತು ವಂಚನೆಯ ಜಗತ್ತು. ಜಾತಿ ಮತ್ತು ಧರ್ಮ ರಾಜಕಾರಣದ ಹಿಕಮತ್ತು. ಉಳ್ಳವರು ತುಳಿದು ಬದುಕುವ ತಾಕತ್ತು. ಸತ್ಯಯುಗ- ಕಲ್ಕಿಯುಗಗಳ ಪಾಸಿಟೀವ್‌ ನೆಗಟೀವ್‌ಗಳ ವಿದ್ಯುತ್ತು. ಅನಾದಿ ಕಾಲದ ಆಡಂ ಈವ್‌ ರಿಂದ ಹಿಡಿದು ಈ ಕಾಲದ ಎಲ್ಲ ಬಗೆಯ ಹಸಿವುಗಳ ವಿಚಿತ್ರಾಭಿವ್ಯಕ್ತಿಯ ಮೆಹನತ್ತು. ದೇವರು, ಧರ್ಮ, ಜಾತಿ, ರಾಜಕಾರಣದ ಹಿಡಿತ ಇವು ಯಾವುವೂ ಇಲ್ಲದ ಸರ್ವ ಸಮತಾಭಾವದ ಸುಂದರ ಜಗತ್ತಿನ ನಿರ್ಮಾಣದ ಕನಸು ಹೊತ್ತ ಪ್ರೀತಿಯೊಂದೇ ಸರ್ವಸ್ವವೂ ಆಗುವ ಸಂಪತ್ತು. ಅದಕ್ಕಾಗಿಯೇ ಗೌತಮ ಬುದ್ಧರು ಬಂದು ಹೋಗಿದ್ದಾರೆ!

ಯುಐ ಸಿನಿಮಾದೊಳಗಿನ ಸಿನಿಮಾ ನೋಡಿದ ಪ್ರೇಕ್ಷಕರಲ್ಲಿ ಹಲವು ಬದಲಾವಣೆಗಳುಂಟಾಗುತ್ತವೆ. ರೌಡಿಯಾದವನೊಬ್ಬ ಮೈಮೇಲಿನ ಎಲ್ಲ ಚಿನ್ನವನ್ನು ತೆಗೆದು, ತನ್ನ ಸಹಚರರಿಗೆ ಗಿಫ್ಟಾಗಿಟ್ಟು, ತನ್ನ ಹೆಂಡತಿಯನ್ನೇ ಇಷ್ಟಪಡುತಿದ್ದ ಮತ್ತೊಬ್ಬನಿಗೆ ಜೊತೆಯಾಗಿಸಿ ದೇಶಾಂತರ ಹೋಗುತ್ತಾನೆ. ಸಿನಿಮಾ ನೋಡಲು ಬಂದಂಥ ಓರ್ವ ದಂಪತಿಯು ದಾಂಪತ್ಯವನ್ನು ಕೊನೆಗಾಣಿಸಿ ಪರಸ್ಪರ ಗುಡ್‌ಬೈ ಹೇಳುತ್ತಾರೆ. ಅದೇ ರೀತಿಯಲ್ಲಿ ಸಿನಿಮಾ ನೋಡಿ ಹೊರ ಬಂದ ಎರಡು ಜೋಡಿಗಳಲ್ಲಿದ್ದ ಹೆಣ್ಣುಗಳು ತಮ್ಮ ಹುಡುಗರನ್ನು ತ್ಯಜಿಸಿ, ತಮ್ಮಲ್ಲಿದ್ದ ಸಲಿಂಗತ್ವಕ್ಕೆ ಪ್ರಾಶಸ್ತ್ಯ ನೀಡಿ ಒಂದಾಗಿ ಬಾಳಲು ತೀರ್ಮಾನಿಸುತ್ತಾರೆ. ಹೀಗೆ ಸಿನಿಮಾದೊಳಗಿನ ಸಿನಿಮಾ ಬೇರೆಯಲ್ಲ; ನಾವು ನೋಡಲು ಬಂದ ಸಿನಿಮಾ ಬೇರೆ ಅಲ್ಲ ಎಂಬಂಥ ಅದ್ವೈತಭಾವವನ್ನು ನಮ್ಮೊಳಗೆ ಮೂಡಿಸಿಕೊಂಡಾಗ ಒಂದಷ್ಟು ವಿಚಾರಗಳು ಬಂದು ಹೋಗುತ್ತವೆ. ಪ್ರಕೃತಿಮಾತೆಯನ್ನು ನಿರಂತರವಾಗಿ ದೋಚಿದ ನಾವು ಸುಶಿಕ್ಷಿತ ನಾಗರಿಕರೇ? ನಮ್ಮನ್ನು ನಾವೇ ಆಳಿಕೊಳ್ಳುವಂಥ ಸಂದರ್ಭ ಬಂದ ಮೇಲೂ ನಾವು ಪರತಂತ್ರರೇ? ಮತಧರ್ಮಕ್ಕೂ ಪ್ರಭುತ್ವಕ್ಕೂ ವಶವರ್ತಿಗಳಾಗಿ, ಜಯಕಾರ ಕೂಗುತ್ತಾ ಯಾರೋ ಕೆಲವರನ್ನು ಸಬಲರನ್ನಾಗಿಸುತ್ತಿರುವ ಈ ಹೊತ್ತಿನದು ಪ್ರಜಾಸತ್ತೆಯೇ? ನಾವು ಎಚ್ಚೆತ್ತುಕೊಳ್ಳದೇ, ಇದು ಹೀಗೇ ಮುಂದುವರಿದರೆ ಕೊನೆಗೆ ಪುಟುಗೋಸಿಯಷ್ಟೇ ಉಳಿಯುವುದೇ? ಜಾತಿಯೇ ನೀತಿಯಾಗಿ ಹೋದ ನಮ್ಮ ದೇಶದಲ್ಲಿ ಜಾತ್ಯತೀತತೆ ಬರೀ ಬಡಬಡಿಕೆಯೇ? ಅವರ ಪ್ರಜಾಕೀಯದ ಆಲೋಚನೆಗಳನ್ನು ಜನತೆಯು ತಿರಸ್ಕರಿಸಿದ ಪರಿಣಾಮವಾಗಿ ಆದ ಹತಾಶೆ ಮತ್ತು ನಿರಾಶೆಗಳು ಹೀಗೆ ಕಲಾಭಿವ್ಯಕ್ತಿಯಾಗಿ ಹೊರ ಹೊಮ್ಮಿತೇ? ಇವೆಲ್ಲ ಪ್ರಶ್ನೆಗಳೂ ಹೌದು; ಸಿನಿಮಾದ ಸಾಧ್ಯತೆಗಳೂ ಹೌದು! ಒಟ್ಟಿನಲ್ಲಿ ಉಪೇಂದ್ರರ ಕಡುವ್ಯಂಗ್ಯ ಮತ್ತು ತೀಕ್ಷ್ಣ ವಿಡಂಬನೆಯೇ ಮೂವಿಯ ಕಥಾವಸ್ತುವಾಗಿಬಿಟ್ಟಿದೆ. ಆದರೆ ಸಿನಿಮಾದಲ್ಲಿ ಬಳಸಲಾಗಿರುವ ಎಲ್ಲ ರೂಪಕ, ಪ್ರತಿಮೆ ಮತ್ತು ಪ್ರತೀಕಗಳು ಡಾಕ್ಯಮೆಂಟರಿಯ ಹಂತದಲ್ಲೇ ನಿಂತು ಬಿಡುತ್ತವೆ; ಪಾರಸ್ಪರಿಕ ಸಂಬಂಧವನ್ನು ಸಾಧಿಸಲು ಹೆಣಗಾಡುತ್ತಾ, ಕಲಾತ್ಮಕ ಅಭಿವ್ಯಕ್ತಿಯಾಗಿ ಹೊರ ಹೊಮ್ಮಲು ಏದುಸಿರು ಬಿಡುವಂತಿವೆ.

ಇದು ಸಿನಿಮಾನೇ ಅಲ್ಲ; ನಿಜಜೀವನ ಎಂದು ಹೇಳಿಬಿಡುವ ಉಪೇಂದ್ರರು ಮತ್ತೆ ನಮ್ಮಲ್ಲಿ ಗಾಬರಿ ಹುಟ್ಟಿಸುತ್ತಾರೆ. ಸುಳ್ಳಿಗಿರುವಷ್ಟು ಬೆಲೆ ಸತ್ಯಕ್ಕಿಲ್ಲ; ಸತ್ಯ ಯಾರಿಗೂ ಬೇಕಾಗಿಲ್ಲ ಎಂದು ನೊಂದುಕೊಳ್ಳುತ್ತಾರೆ. ನನ್ನ ಸಿನಿಮಾ ಕನ್ನಡಿಯಂತೆ. ನೀವು ಏನನ್ನು ತೋರುವಿರೋ ಅದರದೇ ಪ್ರತಿಬಿಂಬ ಎನ್ನುತ್ತಾರೆ. ಬುದ್ಧಿವಂತರಿಗೆ ಇಷ್ಟ ಆಗಲ್ಲ; ದಡ್ಡರಿಗೆ ಅರ್ಥ ಆಗಲ್ಲ ಎಂಬ ತರ್ಕ ಇಲ್ಲಿಯದು. ಹೇಗೆ ಬದುಕು ನಿಲ್ಲಲಾರದೋ, ಬದುಕಿಗೆ ಆದಿ ಅಂತ್ಯಗಳು ಇಲ್ಲವೋ ಹಾಗೆಯೇ ಈ ಸಿನಿಮಾಕ್ಕೂ ಓಪನಿಲ್ಲ; ಎಂಡಿಂಗಿಲ್ಲ! ಕಾಲಪ್ರವಾಹವನ್ನು ಹಾಗೆಯೇ ಹಿಡಿದಿಡುವ ಸಾಹಸವಿದು. ಮುಂದಿನ ದಿನಗಳು ಕೇವಲ ತಲೆ ಬಳಸಿ ಬದುಕುವವರದು ಎಂಬುದನ್ನೂ ರಾಜಕಾರಣವೆಂದರೆ ಮಧ್ಯವರ್ತಿಗಳ ಹಾವಳಿಯೇ  ಎಂಬುದನ್ನೂ ಜೋಕರ್‌ ಪಾತ್ರದ ಮೂಲಕ ಮೆಟಾಫರಾಗಿಸಿರುವುದು ಸಹ ಒಂದು ಡೀಕೋಡೇ. ಎರಡು ಗಂಟೆಗಳ ಅವಧಿಯಲ್ಲಿ ತಮ್ಮೆಲ್ಲ ಹಸಿ ಬಿಸಿ ಸಂಗತಿಗಳನ್ನು ಪಾತ್ರಗಳ ಮೂಲಕ ಪರಕಾಯ ಪ್ರವೇಶ ಮಾಡಿಸಿ, ಎಲ್ಲ ಫ್ರೇಮುಗಳಲ್ಲೂ ಒಂದೊಂದು ಅರ್ಥವನ್ನು ಹುದುಗಿಸಿಟ್ಟು ನೋಡುಗರ ತಲೆಗೆ ಕೆಲಸ ಕೊಡುವ ಈ ಚಿತ್ರ ಒಂಥರಾ ಕಣ್ಣಿಗೆ ಬಟ್ಟೆ ಕಟ್ಟಿಸಿ ಚದುರಂಗ ಆಡಿಸುವಂತೆ! ನಮಗೆಲ್ಲವೂ ಗೊತ್ತಿರುವುದೇ; ಆದರೆ ಅದನ್ನು ಎದೆಗೆ ನಾಟುವಂತೆ ಗೊತ್ತಾಗಿಸಿದ ರೀತಿ ಪ್ರಶಂಸನೀಯ. ಸಾಕಷ್ಟು ಹೋಂವರ್ಕ್‌ ಮಾಡಿರುವ ಶ್ರಮ ಮತ್ತು ಕ್ರಮಗಳು ಈ ಸಿನಿಮಾದಲ್ಲಿ ಎದ್ದು ಕಾಣುವ ಪ್ರಾಮಾಣಿಕ ದುಡಿಮೆ. ನನಗಾಗಿ ಬದುಕುವ ಸ್ವಾರ್ಥವನ್ನೂ ಪರೋಪಕಾರವೇ ಬದುಕಿನ ಅರ್ಥ ಎಂಬುದನ್ನೂ ಮುಖಾಮುಖಿಯಾಗಿಸಿ, ಅದರ ಪರಿಣಾಮಗಳನ್ನು ಒಂದೊಂದಾಗಿ ಹೆಕ್ಕುತ್ತಾ ಅದಕ್ಕೊಂದು ತಾತ್ತ್ವಿಕ ರೂಪ ಕೊಡುವಲ್ಲಿ ಗರಿಷ್ಠ ಪ್ರಯತ್ನ ಹಾಕಿದ್ದಾರೆ. ಈ ದಿಸೆಯಲ್ಲಿ ಅವರ ತಾಳ್ಮೆ ಮತ್ತು ಜಾಣ್ಮೆ ಒಟ್ಟೂ ಕನ್ನಡ ಚಂದನವನದ ಸಾಧನೆ.

ಅಬ್ಸರ್ಡ್‌ ಥಿಯೇಟರ್‌ನ ಒಂದು ನವ್ಯನಾಟಕ ನೋಡಿದಂತೆ, ರಾಗ-ತಾಳಗಳ ಅರಿವಿಲ್ಲದಿದ್ದರೂ ಹಿಂದೂಸ್ತಾನೀ ಸಂಗೀತ ಕೇಳಿ ಪರವಶವಾದಂತೆ, ನಯಾಗರ ಜಲಪಾತದ ಮುಂದೆ ನಿಂತು ಅದರ ಭೋರ್ಗರೆವ ಸದ್ದಿನಲ್ಲಿ ಕಳೆದು ಹೋದಂತೆ ಈ ಸಿನಿಮಾ ಏಕಕಾಲಕ್ಕೆ ನಮ್ಮ ಬುದ್ಧಿಯನ್ನು ಕೆಣಕುತ್ತದೆ; ಭಾವವನ್ನು ಆರ್ದ್ರಗೊಳಿಸುತ್ತದೆ. ದೃಶ್ಯಗಳ ಸಂಕಲನವೇ ಈ ಚಿತ್ರದ ನಿಜವಾದ ದಿಗ್ದರ್ಶನ, ಪಾತ್ರಗಳ ಸಂಭಾಷಣೆಯೇ ಸುಡುವಾಸ್ತವ ದರ್ಶನ, ಎರಡು ಹಾಡುಗಳೇ ಸಕಾಲಿಕ ಸಂದರ್ಭಕ್ಕೆ ಹಿಡಿದ ಪ್ರತಿಫಲನ, ಕತೆಯ ಓಟವೇ ಕತ್ತಲು ಬೆಳಕುಗಳ ಸಂಯೋಜನ, ವಸ್ತ್ರವಿನ್ಯಾಸ-ರಂಗಸಜ್ಜಿಕೆ-ನಟನೆಯಲ್ಲಿ ಪಾಲ್ಗೊಂಡ ನೂರು ಸಾವಿರ ಮಂದಿಯ ಹಪಾಹಪಿಯೇ ಕಥಾ ಸಂವಿಧಾನ. ಪತ್ತೇದಾರಿ ಕಾದಂಬರಿಯಾಧಾರಿತ ಸಿನಿಮಾದಲ್ಲಷ್ಟೇ ಇಂಥ ಏಕಾಗ್ರತೆ ಮತ್ತು ಕುತೂಹಲಗಳು ಸಾಧ್ಯವಾಗಿದ್ದನ್ನು ಉಪೇಂದ್ರರು ಈ ಯೂನಿರ್ವಸಲ್‌ ಇಂಟಲಿಜೆನ್ಸ್‌ ನಲ್ಲಿ ಸಾಧಿಸಿ ತೋರಿಸಿದ್ದಾರೆ. ಅವರ ಅತೀವ ಒಳಗೊಳ್ಳುವಿಕೆಯು ಪ್ರತಿ ದೃಶ್ಯದಲ್ಲೂ ನಮಗೆ ಮನವರಿತ; ಇದೇ ಸಿನಿಮಾದ ಹದವರಿತ. ಒಂದೊಂದೂ ಇನ್ನೊಂದರ ಸಂಕೇತ. ಚಿತ್ರವೀಕ್ಷಣೆಯ ಕೊನೆಗೆ ಉಳಿಯುವುದು ನೀನು ಮತ್ತು ನಾನು ಇಬ್ಬರೇ. ನಾನು ಎಂಬುದು ಅಹಂಕಾರ; ನೀನು ಎಂಬುದು ಮಮಕಾರ. ಎರಡೂ ಒಟ್ಟಾದರೆ ಅದು ಬುವಿಯೇ ಸ್ವರ್ಗ ಸಾಕಾರ! (ಒಟ್ಟಾಗಬೇಕೆಂಬುದು ಉಪೇಂದ್ರರ ಕನಸು; ಇದೇ ಯುನಿವರ್ಸಲ್‌ ಇಂಟೆಲಿಜೆನ್ಸು ಅಂದರೆ ವಿಶ್ವಾತ್ಮಕ ಬುದ್ಧಿಮತ್ತೆ) ಯಾವ ದಾರಿ ನಿನ್ನದು? ಕೇಳಿಕೋ ನಿನ್ನ ಹೃದಯವನ್ನು! ಎಂಬುದೇ ಈ ಚಿತ್ರದ ಒಂದು ಆಯಾಮದ ಸಂದೇಶ. ಅರಿಷಡ್ವರ್ಗಗಳನ್ನು ಚೋದಿಸಿ, ಪ್ರಚೋದಿಸಿ, ವಿಜೃಂಭಿಸಿ, ಅಡ್ಡದಾರಿಯನ್ನೇ ಹೆದ್ದಾರಿಯೆಂದು ಬಿಂಬಿಸುವ ಸಾಲು ಸಾಲು ಆಕ್ಷನ್‌ ಚಿತ್ರಗಳ ಪೈಕಿ ಇದು ಡಿಫರೆಂಟು; ಇದರ ವಿಚಾರಧಾರೆ ಹತ್ತಾರು ವರುಷಗಳ ಚಿಂತನೆಯ ಸರಕು ಪರ್ಮನೆಂಟು!

ಚಿತ್ರರಂಗದ ಸಿದ್ಧಮಾದರಿಗಳನ್ನು ಮೀರಿ ಮುನ್ನಡೆಯಲು ಹವಣಿಸುವ ಉಪೇಂದ್ರರು ಈ ಚಿತ್ರದ ಮೂಲಕ ‘ಸೆಲ್ಫ್‌ ರಿಯಲೈಸೇಷನ್‌’ ಅನ್ನು ಮರ್ಮಕ್ಕೆ ಮುಟ್ಟುವಂತೆ ಹೆಣೆದು ಕೊಟ್ಟಿದ್ದಾರೆ. ಹಾಗಂತ ಅವರು ಯಾವುದನ್ನೂ ಇದಮಿತ್ಥಂ ಎಂದು ಹೇಳುವುದಿಲ್ಲ, ಅದನ್ನು ನೋಡುಗರಿಗೆ ಬಿಟ್ಟು ಬಿಡುತ್ತಾರೆ. ಆತ್ಮವಂಚಕರಿಗೆ ಹಿಡಿದ ಕನ್ನಡಿ ಇದು ಎಂದರೂ ತಪ್ಪಿಲ್ಲ. ಕತ್ತಲೆ ಜಗತ್ತು ಮತ್ತು ಬಣ್ಣದ ಜಗತ್ತು – ಈ ಎರಡರಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಇಂದಿನ ಜನಮಾನಸವು ಈಗಲೂ ಹೊರ ಬರಬಹುದು; ಅಂಥ ಹೊರ ಬರುವ ದಾರಿಗಳು ಹಲವಿವೆ, ನೀವೇ ಡೀಕೋಡ್‌ ಮಾಡಬಹುದು ಎಂಬ ಸುಳುಹು ಸಹ ಈ ಚಿತ್ರದಲ್ಲಿದೆ. ಇಂಥದೊಂದು ಸಿನಿಮಾ ಮಾಡಬಹುದೆಂದು ಇಡೀ ಜಗತ್ತಿಗೆ ತೋರಿಸಿ ಕೊಟ್ಟ ಕೀರ್ತಿ ಮಾತ್ರ ಉಪೇಂದ್ರರದೇ. ಅವರ ಆ ಧೈರ್ಯ ಮತ್ತು ಸ್ಥೈರ್ಯಗಳು ಶ್ಲಾಘನೀಯ. ಏಕೆಂದರೆ ಇದು ಅಗ್ನಿಯೊಂದಿಗೆ ಆಡುವ ಸರಸ; ನೂರಾರು ಕೋಟಿ ರೂಪಾಯಿ ಬಂಡವಾಳ ತೊಡಗಿಸುವ ವ್ಯವಹಾರದ ವಿರಸ! ಕೆಚ್ಚೆದೆಯ ವೀರನಿಗಷ್ಟೇ ಇದು ಸಾಧ್ಯ. ಸಮಾಧಾನ ಮತ್ತು ಸಂತೋಷದ ಸಂಗತಿಯೆಂದರೆ, ಈ ಸಿನಿಮಾವನ್ನು ಜನರು ಸ್ವೀಕರಿಸಿದ್ದಾರೆ; ಅಷ್ಟರಮಟ್ಟಿಗೆ ಅವರು ಬಯ್ಯಿಸಿಕೊಂಡೂ ಬುದ್ಧಿವಾದಕ್ಕೆ ಕಿವಿಯಾನಿಸಿದ್ದಾರೆ. ವೇದನೆಯಾಚೆಗಿನ ಸಂವೇದನೆಗೆ ಬೆಲೆ ಕೊಟ್ಟಿದ್ದಾರೆ. ಇದೇ ನಿಜದ ಖುಷಿ; ಅರ್ಥವಾದವ ನಿಜವಾದ ಋಷಿ.

ಕೊನೆಗೊಂದು ಕೊಸರು: ಯಾರಿಗೆ ಏನು ಬೇಕೋ ಅದು ಈ ಚಿತ್ರದಲ್ಲಿದೆ. ಅವರವರ ಭಾವನೆ, ಚಿಂತನೆ ಮತ್ತು ಮಂಥನೆಗನುಸಾರ, ಶಕ್ತ್ಯನುಸಾರ. ಸಾಹಿತ್ಯದ ವಿದ್ಯಾರ್ಥಿಯಾಗಿ ನನಗೆ ಇಷ್ಟವಾದದ್ದು: ವಾಸ್ತವವನ್ನು ಮಿತ್‌ ಆಗಿ ನಿರೂಪಿಸಿದ ಕ್ರಮ ಮತ್ತು ಬರೆಹಗಾರನ ಹಿಡಿತ ತಪ್ಪಿ ವಿಜೃಂಭಿಸುವ ಅವನೇ ಸೃಷ್ಟಿಸಿದ ಪಾತ್ರವಿಸ್ಮಯ! ಇದು ಕೇವಲ ಸಾಹಿತ್ಯ ರಚನಾಕಾರರ ಹುಯಿಲು ಮಾತ್ರವಲ್ಲ, ಈ ಕಾಲಕ್ಕೆ ನಮ್ಮನ್ನಾಳುತ್ತಿರುವ ಬೌದ್ಧಿಕ ಜಗತ್ತಿನ ಏಐ ಮತ್ತು ಯಂತ್ರಮಾನವತ್ವದ ದಿಗಿಲು ಕೂಡ! ‘ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ,’ ತಾನೇ ಸೃಷ್ಟಿಸಿದ ಪಾತ್ರಗಳು ತನಗಿಷ್ಟವಾಗದಂಥ ಮುಕ್ತಾಯಕ್ಕೆ ಹೊರಟ ಬೆರಗಿದು. ತನ್ನನ್ನೂ ತನ್ನ ಚಿಂತನೆಯನ್ನೂ ಮುಖಾಮುಖಿಯಾಗಿಸಿ ವಿಚಕ್ಷಿಸುವ ವಿವೇಚನೆಯನ್ನು ದೃಶ್ಯಮಾಧ್ಯಮಕ್ಕಳವಡಿಸುವುದು ಅಷ್ಟು ಸುಲಭದ ಕೆಲಸವಲ್ಲ! ಇದು ವಿಶಿಷ್ಟವೂ ವಿಚಿತ್ರವೂ ಆದ ಪ್ರತಿಭಾವಂತರಿಂದ ಮಾತ್ರ ಆಗುವಂಥ ಕಾಯಕ; ಕಣ್ಕಟ್ಟು ಮಾಯಕ! ದಯಮಾಡಿ ಸಾಹಿತ್ಯಪ್ರಿಯರು ಒಮ್ಮೆ ನೋಡಿ; ತೂಕಡಿಸುವ ತಲೆಗೊಂದು ಕೆಲಸ ಕೊಡಿ!

ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು                            

10 Responses

  1. MANJURAJ says:

    ತುಂಬ ಸಂತೋಷ….

    ಸುರಹೊನ್ನೆಯಲಿ ಬರೆಹವನು ಓದುವುದೇ ಸೊಗಸು !

    ಪ್ರಕಟಿಸಿದ ಸಂಪಾದಕರಿಗೆ ನನ್ನ ಧನ್ಯವಾದಗಳು.

  2. ನಾನು ಸಾಮಾನ್ಯ ಪ್ರೇಕ್ಷಕಳಾಗಿ ನೋಡುವ ಸಾಲಿಗೆ ಸೇರಿದವಳು..ಈ..ರೀತಿಯ ಪ್ರಯೋಗ.. ವಿಶ್ಲೇಷಣೆ.. ತಲೆಗೆ ಹುಳಬಿಡಿಸಿಕೊಳ್ಳಲು ಹೋಗಲು ಇಷ್ಟಪಡುವುದಿಲ್ಲ..ಮಂಜು ಸಾರ್..ನನ್ನ ಪ್ರಕಾರ ಅವರುಗಳ..ತಲೆಯಲ್ಲಿ…ಏನಿದೆ ದೇವರೇ ಬಲ್ಲ

  3. ನಯನ ಬಜಕೂಡ್ಲು says:

    ಸೊಗಸಾಗಿ ವಿಮರ್ಶಿಸಿದ್ದೀರಿ.

  4. ಪ್ರಮೋದ್ ಕೆ ಬಿ says:

    ಎಷ್ಟೋ ಬಾರಿ ನನಗನಿಸುವುದು

    ಉಪೇಂದ್ರರು ಸಿನಿಮಾಕ್ಕೆ!!
    ಮಂಜೂರಾಜ್ ಸಾಹಿತ್ಯಕ್ಕೆ!!

    ತಾವೆಲ್ಲೇ ಇದ್ದರೂ ಬದುಕು ಬದಲಿಸುವ ಕಾಯಕವನ್ನೇ ತಾವಾಗಿಸಿಕೊಂಡವರು!
    ನಿಜ ನಾವೇ ಧನ್ಯರು!!

    ಪ್ರಮೋದ್ ಕೆ ಬಿ

    • MANJURAJ says:

      ಅಯ್ಯಯ್ಯೋ ಬ್ರದರು,

      ಇದೆಂಥ ಹೋಲಿಕೆ ಚದುರು !

      ನಾ ಸಾಮಾನ್ಯ ಸಾಹಿತ್ಯ ವಿದ್ಯಾರ್ಥಿ !!

      ನಿಮ್ಮ ಪ್ರೀತಿ ನನ್ನ ಇಂದಿನ ಖುಷಿ
      ಧನ್ಯವಾದ ಮಿತ್ರ

  5. ಶಂಕರಿ ಶರ್ಮ says:

    ಉಪೇಂದ್ರರ, ಹೊಸದಾದ ಸಿನಿಮಾವೊಂದರ ವಿಮರ್ಶಾತ್ಮಕ ಲೇಖನವು ಸೊಗಸಾಗಿ ಮೂಡಿಬಂದಿದೆ.

  6. ಪದ್ಮಾ ಆನಂದ್ says:

    ಯುಐ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಓದಿ ನಂತರ ಸಿನಿಮಾ ನೋಡಿದರೆ ಉಪೇಂದ್ರರ ಸಿನಿಮಾ ಹೆಚ್ಚು ಅರ್ಥವಾಗಬಹುದು. ಚಂದದ ವಿಶ್ಲೇಷಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: