ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 11
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹನೋಯ್ ನಲ್ಲಿ ಎರಡನೆಯ ದಿನ..16/09/2024
ರಾಜರುಗಳ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಸುತ್ತಾಡುತ್ತಿದ್ದಾಗ, ವಯಸ್ಸಾದ ಮಹಿಳೆಯೊಬ್ಬರು ಬಿದಿರಿನಿಂದ ತಯಾರಿಸಿದ , ಕೊಡೆಯಂತೆ ಮಡಚಬಹುದಾದ ಬೀಸಣಿಗೆಯನ್ನು ಮಾರಲು ನಮ್ಮ ಬಳಿ ಬಂದರು. ಹೈಮವತಿಯವರಿಗೆ ಬೀಸಣಿಗೆ ಕೊಳ್ಳೋಣ, ವಯಸ್ಸಾದ ಮಹಿಳೆಗೆ ವ್ಯಾಪಾರವಾಗಲಿ ಎಂಬ ಸದುದ್ದೇಶವಿತ್ತು. ಆದರೆ ಆಕೆಗೆ ಇಂಗ್ಲಿಷ್ ಬಾರದು. ನಮಗೆ ವಿಯೆಟ್ನಾಮೀಸ್ ಭಾಷೆ ಬಾರದು. ಸಂಜ್ಞೆಯ ಮೂಲಕ ಮಾತನಾಡೋಣ ಎಂದರೆ ಭಾಷೆಯ ತೊಡಕಿನ ಜೊತೆಗೆ ಡಾಲರ್-ರೂಪಾಯಿ-ಡಾಂಗ್ ಗಳ ಗೊಂದಲವೂ ಸೇರಿತು. ತನ್ನ ವೃತ್ತಿಜೀವನದಲ್ಲಿ ಕಂತೆ ಕಂತೆ ನೋಟುಗಳನ್ನು ಎಣಿಸಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹೈಮವತಿ, ಕೈಯಲ್ಲಿ ಒಂದಿಷ್ಟು ‘ವಿಯೆಟ್ನಾಂ ಡಾಂಗ್’ ಹಿಡಿದುಕೊಂಡು ಇಂಗ್ಲಿಷ್, ಸಂಜ್ಞೆ ಮೂಲಕ ಸ್ವಲ್ಪ ಸಮಯ ವ್ಯಾಪಾರ ಮಾಡಲು ಪ್ರಯತ್ನಿಸಿದರಾದರೂ, ಪರಸ್ಪರರಿಗೆ ಅರ್ಥವಾಗದೆ , ಕೊನೆಗೆ ವ್ಯಾಪಾರಿ ಮಹಿಳೆ ಕೋಪಗೊಂಡು ಸ್ವಲ್ಪ ದೂರ ನಿಂತಿದ್ದ ನನ್ನ ಬಳಿ ಬಂದು ಅದೇನೋ ಹೇಳತೊಡಗಿದರು. ನನಗೂ ಆಕೆಗೆ ಕೋಪ ಬಂದಿದೆ ಎಂದಷ್ಟೇ ಆರ್ಥವಾಗಿದ್ದು. ಯಾಕೆ ಎಂದು ಗೊತ್ತಾಗಲಿಲ್ಲ. ನನಗೂ ಅರ್ಥವಾಗಲಿಲ್ಲ ಎಂಬಂತೆ ಪೆದ್ದು ನಗೆ ನಕ್ಕೆ. ಆಕೆಗೆ ಇನ್ನಷ್ಟು ಕೋಪ ಬಂದಿದ್ದಿರಬಹುದು, ಅದೇ ತರಹದ ಬಿದಿರಿನ ವಸ್ತುಗಳನ್ನು ಮಾರುತ್ತಿದ್ದ ಮತ್ತೊಬ್ಬ ಮಹಿಳೆಯ ಬಳಿ ನಮ್ಮಿಬ್ಬರನ್ನು ತೋರಿಸುತ್ತಾ ಬಗ್ಗೆ ಏನೋ ಬೈದುಕೊಂಡರು. ಅಷ್ಟರಲ್ಲಿ ನಮ್ಮ ಮಾರ್ಗದರ್ಶಿ ‘ಟೋನಿ’ ಬಂದು ಇನ್ನು ಹೊರಡೋಣ ಎಂದು ಹೇಳಿದ ಕಾರಣ ಹೈಮವತಿಯವರ ಬೀಸಣಿಗೆ ವ್ಯಾಪಾರಕ್ಕೆ ತೆರೆ ಬಿತ್ತು.
ನಮ್ಮ ಮಾರ್ಗದರ್ಶಿಯು ಊಟಕ್ಕೆ ಹೊರಡೋಣ ಎಂದು ಹತ್ತಿರದಲ್ಲಿ ಇದ್ದ ಹೋಟೆಲ್ ‘ನಾ ಹಾಂಗ್’ ಎಂಬಲ್ಲಿಗೆ ಕರೆದೊಯ್ದರು. ಅವರು ಬಸ್ಸಿನಲ್ಲಿಯೇ ಒಂದು ಮೆನು ಕೊಟ್ಟು, ಒಬ್ಬರು ಎರಡು ವಿಧದ ಆಹಾರವನ್ನು ಆಯ್ಕೆ ಮಾಡಲು ತಿಳಿಸಿದ್ದರು. ನಾವಿಬ್ಬರೂ ಸಸ್ಯಾಹಾರಿ ಎಂದು ಬರೆದಿದ್ದ ಆಹಾರವನ್ನು ಆಯ್ಕೆ ಮಾಡಿದ್ದೆವು. ಬಣ್ಣ ಬಣ್ಣದ ಆಕಾಶದೀಪಗಳನ್ನು ತೂಗಾಡಿಸಿದ್ದ ಹೋಟೆಲ್ ನ ಆವರಣ ಸೊಗಸಾಗಿತ್ತು. ನಮ್ಮ ಆಯ್ಕೆಯಂತೆ, ನಮಗಿಬ್ಬರಿಗಾಗಿ ಒಂದು ತರಕಾರಿ-ಹಣ್ಣುಗಳಿದ್ದ ಪ್ಲೇಟ್, ಅರಸಿನ ಬಣ್ಣವಿದ್ದ ಸಪ್ಪೆ ರುಚಿಯ ಅನ್ನ, ಕಾಳುಗಳಿದ್ದ ಒಂದು ವ್ಯಂಜನ ಹಾಗೂ ಒಂದು ನೂಡಲ್ಸ್ ಪ್ಲೇಟ್ ಬಂದುವು. ಊಟ ಆರೋಗ್ಯಕರವಾಗಿತ್ತು. ಆದರೆ ಭಾರತೀಯ ಆಹಾರ ಉಂಡು ಅಭ್ಯಾಸವಾದವರಿಗೆ ರುಚಿ ಬಲು ಸಪ್ಪೆ ಎನಿಸುತ್ತದೆ. ಹಾಗಾಗಿ, ನಮ್ಮ ಬ್ಯಾಗ್ ನಿಂದ ಉಪ್ಪಿನಕಾಯಿಯ ಬಾಟಲ್ ಅನ್ನು ತೆಗೆದು ಊಟಕ್ಕೆ ಮಾವಿನಕಾಯಿ ಉಪ್ಪಿನಕಾಯಿಯನ್ನು ನೆಂಚಿಕೊಂಡೆವು.
ನಮ್ಮ ಎದುರುಗಡೆ, ನಮ್ಮ ತಂಡದಲ್ಲಿದ್ದ ಬೆಲ್ಜಿಯಂ ದೇಶದ ಪ್ರವಾಸಿಯೊಬ್ಬರಿದ್ದರು. ಅವರನ್ನು ಪರಿಚಯ ಮಾಡಿಕೊಂಡು, ಪರಸ್ಪರ ಹವ್ಯಾಸಗಳನ್ನು ವಿಚಾರಿಸಿಕೊಂಡೆವು. ಅವರು ವರ್ಷದಲ್ಲಿ ಕೆಲವೇ ತಿಂಗಳು ಹಣಕ್ಕಾಗಿ ಉದ್ಯೋಗ ಮಾಡುತ್ತಾರಂತೆ. ಆಮೇಲೆ, ತನ್ನಿಷ್ಟ ಬಂದ ಕಡೆಗೆ ಹೋಗಿ, ಬೇಕಿದ್ದಷ್ಟು ದಿನ ಇರುತ್ತಾರೆ. ನಿರ್ಧಿಷ್ಟ ರೂಪುರೇಷೆಗಳನ್ನು ಮುಂಚಿತವಾಗಿ ಮಾಡದೆ ವಿಶ್ವ ಪರ್ಯಟನ ಮಾಡುವ ಇವರ ವೈಖರಿ ನಮಗೆ ವಿಶೇಷ ಅನಿಸಿತು. ಅವರು ಭಾರತಕ್ಕೆ 14 ಬಾರಿ ಬಂದಿದ್ದರಂತೆ. ನಮಗಿಂತ ಹೆಚ್ಚು ಬಾರಿ ಹಿಮಾಲಯ ನೋಡಿದ್ದಾರೆ. ಭಾರತದ ವೈವಿಧ್ಯಮಯ ಪ್ರಕೃತಿ ಸೌಂದರ್ಯ ಹಾಗೂ ಆಹಾರ ಪದ್ಧತಿ ಇಷ್ಟವಾಗಿತ್ತಂತೆ. ಹಾಗಾದರೆ, ನಮ್ಮ ಉಪ್ಪಿನಕಾಯಿಯ ರುಚಿ ನೋಡಲು ನಿಮಗೆ ಆಸಕ್ತಿ ಇದೆಯೇ? ಇದು ನಿಮಗೆ ಖಾರವಾಗಬಹುದು ಎಂದು ಎಚ್ಚರಿಸಿ, ಸ್ವಲ್ಪ ಉಪ್ಪಿನಕಾಯಿಯನ್ನು ಅವರ ತಟ್ಟೆಗೆ ಬಡಿಸಿದೆವು. ಅವರು ಉಪ್ಪಿನಕಾಯಿಯ ರುಚಿ ನೋಡುತ್ತಾ ‘ವೆರಿ ನೈಸ್, ದಿಸ್ ಈಸ್ ಹಾಟ್ , ಸ್ಪೈಸಿ ಟೂ …ಐ ಲೈಕ್ ದಿಸ್’ ಎಂದು ಇನ್ನೊಂದು ಚಮಚ ಉಪ್ಪಿನಕಾಯಿ ಹಾಕಿಸಿಕೊಂಡರು. ಹೀಗೆ, ಪೌರಾತ್ಯ ದೇಶದಲ್ಲಿ ನಮ್ಮ ಉಪ್ಪಿನಕಾಯಿಗೆ ಪಾಶ್ಚಿಮಾತ್ಯ ಗೌರವ ಸಿಕ್ಕಂತಾಯಿತು!
ಊಟದ ನಂತರ ಕೆಲವರು ಸೈಕಲ್ ಸವಾರಿ ಮಾಡುತ್ತಾ ‘ನಿನ್ಹ್ ಬಿನ್ಹ್’ ಸುತ್ತಾಡಲು ಹೊರಟರು. ನಾವು ಕೆಲವರು ಹೋಟೆಲ್ ನ ಎದುರುಗಡೆ ಹಾಕಲಾಗಿದ್ದ ಖುರ್ಚಿಗಳಲ್ಲಿ ಕುಳಿತೆವು. ಸಣ್ಣ ವಾಕ್ ಮಾಡಿದೆವು. ತೂಕಡಿಸಿದೆವು. ಫೊಟೊ ತೆಗೆದೆವು. ಪಕ್ಕದ ಕಾಫಿ ಶಾಪ್ ನಿಂದ ಕಾಫಿ ಖರೀದಿಸಿ ಕುಡಿದೆವು. ಇಲ್ಲಿಯೂ ನಮಗೆ ಕೆಲವು ಭಾರತೀಯ ಪ್ರವಾಸಿಗರು ಕಾಣಸಿಕ್ಕಿದರು. ನಾವು ಗಮನಿಸಿದಂತೆ, ವಿಯೆಟ್ನಾಂನ ಎಲ್ಲಾ ಪ್ರವಾಸಿತಾಣಗಳಲ್ಲಿ, ಚಿಕ್ಕ ಹಳ್ಳಿಗಳಲ್ಲಿ ಕೂಡ ಸ್ವಚ್ಚವಾದ ಶೌಚಾಲಯಗಳಿರುತ್ತಿದ್ದುವು. ಹೀಗೆ, ಸುಮಾರು ಅರ್ಧ ಗಂಟೆ ಕಳೆದ ಮೇಲೆ ಸೈಕಲ್ ಸವಾರರು ಬಂದರು ಹಾಗೂ ನಮ್ಮ ಮಾರ್ಗದರ್ಶಿ ಹೊರಡಲು ತಿಳಿಸಿದರು.
ಪುನ: ಬಸ್ಸನ್ನೇರಿ ಸಮೀಪದಲ್ಲಿದ್ದ ‘ಟ್ರಾಂಗ್ ಆನ್’ ಎಂಬಲ್ಲಿಗೆ ಕರೆದೊಯ್ದರು. ಅದು ವಿಯೆಟ್ನಾಂನ ‘ಕೆಂಪು ನದಿ’ ಯ’ ಉಪನದಿಯಾದ ‘ಟ್ರಾಂಗ್ ಆನ್’ ನದಿಯಂತೆ.ಇಲ್ಲಿ ದೋಣಿವಿಹಾರಕ್ಕೆ ಅವಕಾಶವಿದೆ. ನೂರಾರು ದೋಣಿಗಳು ಸಾಲಾಗಿ ನೀರಿನಲ್ಲಿ ತೇಲುತ್ತಾ, ಪ್ರವಾಸಿಗರನ್ನು ಒಯ್ಯಲು ಸಿದ್ಧವಾಗಿದ್ದುವು. ದೋಣಿಯನ್ನು ನಡೆಸುತ್ತಿದ್ದ ಹೆಚ್ಚಿನವರು ಸ್ತ್ರೀಯರಾಗಿದ್ದುದು ವಿಶೇಷವೆನಿಸಿತು. ಅವರೆಲ್ಲರೂ, ಪ್ಯಾಂಟ್, ಹಸಿರು ಬಣ್ಣದ ಕೋಟ್ ಮತ್ತು ಟೋಪಿಯ ಸಮವಸ್ತ್ರ ಧರಿಸಿದ್ದರು. ನಾಲ್ಕು ಮಂದಿಗೆ ಒಂದು ದೋಣಿಯಲ್ಲಿ ಅವಕಾಶವಿತ್ತು. ನಮ್ಮ ದೋಣಿಯನ್ನು ನಡೆಸುತ್ತಿದ್ದ ಮಹಿಳೆ ಹಿರಿಯ ನಾಗರಿಕಳಂತೆ ಕಾಣಿಸುತ್ತಿದ್ದರು. ಅಸಂಖ್ಯಾತ ಸುಣ್ಣದ ಕಲ್ಲಿನ ಬೆಟ್ಟಗಳು, ಶಾಂತವಾಗಿ ಹರಿಯುವ ನದಿ, ಗುಹೆಗಳು, ಪಗೋಡ ಶೈಲಿಯ ದೇವಾಲಯಗಳು ಇತ್ಯಾದಿಗಳನ್ನು ನೋಡುತ್ತಾ ದೋಣಿವಿಹಾರ ಮಾಡಿದೆವು. ಈ ವಯಸ್ಸಿನಲ್ಲಿಯೂ, ಸುಮಾರು ಎರಡು ಗಂಟೆಗಳ ಕಾಲ ನಗುನಗುತ್ತಾ ನದಿಯಲ್ಲಿ ದೋಣಿ ನಡೆಸಿದ ಅವರ ಶ್ರಮಿಕ ಪ್ರವೃತ್ತಿಗೆ ತಲೆಬಾಗಬೇಕು. ಆಕೆ ಈ ರೀತಿಯ ಅದೆಷ್ಟು ಟ್ರಿಪ್ ಗಳನ್ನು ಪ್ರತಿ ದಿನ ನಿರ್ವಹಿಸುತ್ತಾರೋ ಎಂದು ಕೇಳೇಬೇಕೆನಿಸಿತು. ದೋಣಿ ನಡೆಸುತ್ತಿದ್ದವರನ್ನು ಅದೂ ಇದೂ ಮಾತನಾಡಿಸಿ ಮಾಹಿತಿ ಪಡೆಯಲು ಪ್ರಯತ್ನಿಸಿದೆವದರೂ, ಭಾಷೆಯ ತೊಡಕಿನಿಂದಾಗಿ , ಕೇವಲ ಹಹ್ಹ.ಹಿಹ್ಹಿ ನಗುವಿನಲ್ಲಿ ನಮ್ಮ ಸಂಭಾಷಣೆ ಅಂತ್ಯವಾಗುತ್ತಿತ್ತು.
ದೋಣಿವಿಹಾರದ ಅಂತ್ಯದಲ್ಲಿ ಅಲ್ಲಿದ್ದ ಪಗೋಡಾಕ್ಕೆ ಭೇಟಿ ಕೊಟ್ಟೆವು. ನಾವು ದೋಣಿ ನಡೆಸಿದ ಮಹಿಳೆಗೆ ಸ್ವಲ್ಪ ಹಣವನ್ನು ಟಿಪ್ಸ್ ಆಗಿ ಕೊಟ್ಟೆವು. ಅದನ್ನು ತೆಗೆದುಕೊಳ್ಳಲೇ ಬೇಡವೇ ಎಂಬಂತೆ ಆಕೆ ಅನುಮಾನಿಸುತ್ತಾ ಪುನ : ಹಿಹ್ಹಿ ಎಂದು ನಕ್ಕರು . ಪಕ್ಕದಲ್ಲಿದ್ದ ಇನ್ನೊಬ್ಬ ಅಂಬಿಗರು ‘ತೆಗೆದುಕೊ…. ‘ ಎಂಬಂತೆ ಅವರ ಭಾಷೆಯಲ್ಲಿ ತಿಳಿಸಿದ ಮೇಲೆ ಆಕೆ ಹಣವನ್ನು ಸ್ವೀಕರಿಸಿ, ಮುಂದಕ್ಕೆ ಬಾಗಿ ವಂದಿಸಿದರು. ನಮ್ಮ ದೋಣಿಯಲ್ಲಿದ್ದ ಉತ್ತರ ಭಾರತ ಮೂಲದ ದಂಪತಿ ಆಕೆಗೆ ಒಂದು ‘ಎನರ್ಜಿ ಡ್ರಿಂಕ್’ ಅನ್ನು ಖರೀದಿಸಿ ಕೊಟ್ಟರು. ಅದನ್ನೂ ನಗುನಗುತ್ತಾ ಮುಂದಕ್ಕೆ ಬಾಗಿ ವಂದಿಸಿ ಸ್ವೀಕರಿಸಿದರು. ನಮ್ಮ ಸಣ್ಣ ಕೊಡುಗೆಗೆ ಸ್ಥಳೀಯರು ತೋರಿಸಿದ ಕೃತಜ್ಞತಾ ಭಾವ ಅಚ್ಚರಿ ಮೂಡಿಸಿತು.
ಒಟ್ಟಿನಲ್ಲಿ , ಟ್ರಾಂಗ್ ಆನ್’ ಬಹಳ ಪ್ರಶಾಂತವಾದ ಸುಂದರವಾದ, ಸ್ವಚ್ಚವಾದ ವಿಶಾಲ ಪ್ರದೇಶ. ಕೆಲವು ಪಗೋಡಗಳಿದ್ದುವು. ಪ್ರಕೃತಿ ಪ್ರಿಯರಿಗೆ ಹಾಗೂ ಚಾರಣಾಸಕ್ತರಿಗೆ ಇಷ್ಟವಾಗಬಹುದಾದ ಬೆಟ್ಟಗಳು, ಗವಿಗಳು , ದೋಣಿವಿಹಾರ, ಪಕ್ಷಿವೀಕ್ಷಣೆ ಇತ್ಯಾದಿಗಳಿಗೆ ಇಲ್ಲಿ ಅವಕಾಶವಿದೆಯೆಂದೂ ಆಮೇಲೆ ಗೊತ್ತಾಯಿತು. ಇಲ್ಲಿಯ ಪ್ರಾಕೃತಿಕ ಸೊಬಗನ್ನು ಸವಿಯಲು ಕನಿಷ್ಟ ಎರಡು ದಿನವಾದರೂ ಇರಬೇಕಿತ್ತು ಅನಿಸಿತು. ಚಹಾ ವಿರಾಮದ ನಂತರ ನಮ್ಮ ಬಸ್ ಹನೋಯಿ ಕಡೆಗೆ ಹೊರಟಿತು. ಬೆಳಗ್ಗೆ ಬಂದ ದಾರಿಯಲ್ಲಿ ಹಿಂತಿರುಗಿ ಸಂಜೆಯ ವೇಳೆಗೆ ಹನೋಯ್ ತಲಪಿದೆವು. ನಮ್ಮ ಮಾರ್ಗದರ್ಶಿ ಬೇರೆ ಬೇರೆ ಹೋಟೆಲ್ ನಲ್ಲಿ ಉಳಕೊಂಡಿದ್ದ ಸಹಪ್ರವಾಸಿಗರನ್ನು ಆಯಾ ಹೋಟೆಲ್ ಗೆ ಬಿಟ್ಟುಕೊಟ್ಟರು. ತಮ್ಮ ಸರ್ವಿಸ್ ನಿಮಗೆ ಇಷ್ಟವಾದರೆ ಟಿಪ್ಸ್ ಕೊಡಬಹುದು ಎಂದು ಮೊದಲಾಗಿ ಹೇಳಿದ್ದರು. ಈ ಬಾರಿ, ವಿಯೆಟ್ನಾಂ ಡಾಂಗ್ ನಲ್ಲಿ ಕೊಡೋಣ ಎಂದು ‘500000’ ವಿಯೆಟ್ನಾಂ ಡಾಂಗ್ ನೋಟು ಕೈಯಲ್ಲಿ ಹಿಡಿದುಕೊಂಡು ಚಿಲ್ಲರೆ ಇಲ್ಲವಲ್ಲಾ ಅಂತ ಮಾತನಾಡಿಕೊಂಡೆವು. ಅದನ್ನು ಗಮನಿಸಿದ ‘ಟೋನಿ’ ಬಹಳ ವಿನಯದಿಂದ ನಮ್ಮ ಬಳಿ ಬಂದು ‘ ದಿಸ್ ಈಸ್ ಬಿಗ್ ಮನಿ’… ಹೌ ಮಚ್ ಯು ವಾಂಟ್ ತೊ ಗಿವ್ ಟು ಅಸ್’ ಎಂದರು. ಆಮೇಲೆ ನಾವು ಹೇಳಿದ ಮೊತ್ತಕ್ಕೆ ಸರಿಯಾಗಿ ಹಣ ಪಡೆದುಕೊಂಡು ಬಾಕಿ ಡಾಂಗ್ ಅನ್ನು ನಮಗೆ ಹಿಂತಿರುಗಿಸಿದರು. ಅವರಿಗೆ ಧನ್ಯವಾದ ಹೇಳಿ ನಾವು ಉಳಕೊಂಡಿದ್ದ ಹೋಟೆಲ್ ಬೆಬಿಲೋನ್ ಸೇರಿದೆವು.
ರಾತ್ರಿ ಊಟಕ್ಕೆ ‘ಹೋಟೆಲ್ ಮಾಜ಼ಾ’ದಲ್ಲಿ ಏರ್ಪಾಡು ಮಾಡಿದ್ದರು. ನಮ್ಮನ್ನು ಕರೆದುಕೊಂಡು ಹೋಗಲು ಡ್ರೈವರ್ ಬಂದರು. ರೋಟಿ, ದಾಲ್, ಸಬ್ಜಿ, ಜೀರಾ ರೈಸ್ , ಪಕೋಡಾ,ಸಲಾಡ್ ಇದ್ದ ಉತ್ತರ ಭಾರತ ಶೈಲಿಯ ಊಟ ಚೆನ್ನಾಗಿತ್ತು. ಅಲ್ಲಿಗೆ ಪುನ: ಹೋಟೆಲ್ ಬೆಬಿಲೋನ್ ಗೆ ಬಂದು ವಿಶ್ರಮಿಸಿದೆವು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41617
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಬೀಸಣಿಗೆ ವ್ಯಾಪಾರದ ಘಟನೆ ಮಜವಾಗಿದೆ. ನಗು ಮೂಡಿಸಿತು. ನಮ್ಮನ್ನೆಲ್ಲ ನಿಮ್ಮ ಬರಹದ ಮೂಲಕ ಚಂದ ಚಂದದ ಜಾಗಗಳಿಗೆ ಕರೆದುಕೊಂಡು ಹೋಗುತ್ತಿದ್ದೀರಿ. Very nice
ಧನ್ಯವಾದಗಳು ಗೆಳತಿ.
ಉಪ್ಪಿನಕಾಯಿಯ ರುಚಿಯಂತೆ ಸೊಗಸಾಗಿದೆ
ಧನ್ಯವಾದಗಳು ಸರ್
ಪ್ರವಾಸ ಕಥನ ಪಡಿಮೂಡಿಸಿರುವ ರೀತಿ ಅಪ್ಯಾಯಮಾನವಾಗಿರುತ್ತದೆ ಗೆಳತಿ ಹೇಮಾ.. ಅದಕ್ಕೆ ಹಾಕುವ ಚಿತ್ರ ಗಳು ಪೂರಕವಾಗಿರುತ್ತವೆ..
ಧನ್ಯವಾದಗಳು ಮೇಡಂ.
ವಿಯೆಟ್ನಾಂ ಗೆ ಭೇಟಿ ನೀಡಿದ ಮಧುರ ಕ್ಷಣಗಳು ನೆನಪಾಗುವಂತಿದೆ
ಧನ್ಯವಾದಗಳು ಮೇಡಂ.
ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಜಾಗ ‘ನಿನ್ಹ್ ಬಿನ್ಹ್` ಎಂದು ತಿಳಿದು ಖುಷಿಯಾಯಿತು. ಭಾಷೆಯ ತೊಡಕಿನಿಂದಾಗಿ ಬೀಸಣಿಗೆ ವ್ಯಾಪಾರದ ಮೋಜಿನ ಮಾತುಕತೆಗೆ ನಾವೂ ಹ್ಹೆ…ಹ್ಹೆ..ಹೇಳಬೇಕಷ್ಟೆ! ಬೀಸಣಿಗೆ ತಂದಿದ್ದರೆ ನಾವೂ ನೋಡಬಹುದಿತ್ತು. ಸರಳ ಸುಂದರ ವಿವರಣೆ ಇಷ್ಟವಾಯ್ತು…ಧನ್ಯವಾದಗಳು ಮಾಲಾ ಅವರಿಗೆ.
ಧನ್ಯವಾದಗಳು…..ಹಿಹ್ಹಿ..ಹಿಹ್ಹಿ.
ಈ ಮೂಲಕ ‘ಪೌರಾತ್ಯ ದೇಶದಲ್ಲಿ ನಮ್ಮ ಕರ್ನಾಟಕದ ಉಪ್ಪಿನಕಾಯಿಗೆ ಪಾಶ್ಚಿಮಾತ್ಯ ಗೌರವ’ ದೊರಕಿಸಿಕೊಟ್ಡ ನಿಮಗೊಂದು ಗೌರವ ಸಮರ್ಪಣೆ