ವರಂಗ ಬಸದಿ
ಭಾನುವಾರ ಬಂತೆಂದರೆ ಎಲ್ಲಿಲ್ಲದ ಒಂದು ಖುಷಿ. ವಾರದ ಆರು ದಿನ ಕಾಲೇಜು, ಅಸೈನ್ಮೆಂಟ್, ಸೆಮಿನಾರ್ ಈ ಎಲ್ಲ ಒತ್ತಡಕ್ಕೆ ಪೂರ್ಣ ವಿರಾಮ ನೀಡುವ ದಿನ ಭಾನುವಾರ.ಈ ಭಾನುವಾರ ಹೊರಗಡೆ ಸುತ್ತಾಡುವ ಮನಸ್ಸು ಆಯಿತು. ಊಟ ಮಾಡುವ ಸಮಯದಲ್ಲಿ ಸುತ್ತಾಡುವ ವಿಷಯದ ಬಗ್ಗೆ ಪ್ರಸ್ತಾಪಿಸಲು ಯೋಚಿಸಿ, ಊಟಕ್ಕೆ ಎಲ್ಲರೂ ಸೇರಿದಾಗ “ಅಪ್ಪ ಫ್ರೀಯಾ, ಬೇರೆ ಏನಾದರೂ ಕಾರ್ಯಕ್ರಮ ಇದೆಯ, ಇಲ್ಲದಿದ್ದಾರೆ ಸಂಜೆ ಹೊರಗಡೆ ಹೋಗೋಣವೆ ಎಂದು” ಕೇಳಿದೆ. ಪ್ರತಿ ಉತ್ತರವಾಗಿ ಅಪ್ಪ ಹೋಗೋಣ ಎಂದರು. ನನ್ನ ಪಕ್ಕದಲ್ಲೇ ಕುಳಿತಿದ್ದ ಅಮ್ಮ ಮತ್ತೆ ನನ್ನ ಮುಖ ನೋಡಿ “ ವರಂಗ ಬಸದಿ , ಕೆರೆಯ ನಡುವೆ ಇರುವ ಜೈನ ಬಸದಿ ನೋಡಲು ತುಂಬಾ ಚೆನ್ನಾಗಿದೆ. ಅಲ್ಲಿಗೆ ಹೋಗುವ” ಎಂದು ಹೇಳಿದೆ. ಅವರು ಸಮ್ಮತಿಸಿದರು.
ಹಾಗೇ ವರಂಗ ಬಸದಿಗೆ ಹೋಗುವ ನನ್ನ ಆಸೆ ನಿನ್ನೆ ಇವತ್ತಿದಲ್ಲ. ನಾನು ಬಿ.ಕಾಮ್ ಅಂತಿಮ ವರ್ಷದಲ್ಲಿ ಕಲಿಯುತ್ತಿರುವಾಗಲೇ ನಮ್ಮ ತರಗತಿಯ ಕೆಲವೊಂದು ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ವೀಡಿಯೋ ತೋರಿಸಿದ್ದು ಯಾವಾಗಾದರೂ ಒಮ್ಮೆ ಈ ಬಸದಿಗೆ ಭೇಟಿ ಕೊಡಬೇಕು ಎಂಬ ಆಸೆ ಮನದಲ್ಲಿ ಚಿಗುರಿತ್ತು. ಈ ಭಾನುವಾರ ಆ ಆಸೆ ಚಿಗುರಿ ಹೂವಾಯಿತು.
ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮನೆಯಿಂದ ಹೊರಟೆವು. ಗೂಗಲ್ ಮ್ಯಾಪ್ ಪ್ರಕಾರ ನಮ್ಮ ಮನೆಯಿಂದ ಸುಮಾರು 75 ಕಿ.ಮೀ ದೂರ ಇದೆ. ಸುಮಾರು ಎರಡು ಗಂಟೆ ದಾರಿ. ಕಾರ್ಕಳ- ಹೆಬ್ರಿ ಮೂಲಕ ಹೋದೆವು. ದಾರಿ ಉದ್ದಕ್ಕೂ ಗಗನದ ಎತ್ತರಕ್ಕೆ ತನ್ನ ಎತ್ತರವನ್ನು ಬೆಳೆಸಲು ಹವಣಿಸುತ್ತಿರು ಫ್ಲಾಟ್ ಗಳು ಒಂದು ಕಡೆಯಾದರೆ. ಇನ್ನೊಂದೆಡೆ ಪಶ್ಛಿಮ ಘಟ್ಟದ ಸಾಲು, ಸುತ್ತ ಹಸಿರು. ರಸ್ತೆ ಮಧ್ಯದಲ್ಲಿನ ದೃಶ್ಯಗಳು ಕಣ್ಮನಗಳಿಗೆ ರಸದೌತಣ ನೀಡಿತು.
ವರಂಗವು ಉಡುಪಿಯಿಂದ 34 ಕಿಮೀ, ಮಂಗಳೂರಿನಿಂದ 72 ಕಿಮೀ ಮತ್ತು ಕಾರ್ಕಳದಿಂದ 22 ಕಿಮೀ ದೂರದಲ್ಲಿದೆ, ವರಂಗದಲ್ಲಿರುವ ಕೆರೆ ಬಸದಿಯು ಸರೋವರದ ಮಧ್ಯದಲ್ಲಿರುವ ಸುಂದರವಾದ ಜೈನ ದೇವಾಲಯವಾಗಿದೆ. ದೇವಾಲಯವು ಸುಂದರವಾದ ಪರಿಸರದಲ್ಲಿ ನೆಲೆಗೊಂಡಿದೆ. ದೇವಾಲಯವು ಸುಮಾರು 850 ವರ್ಷಗಳ ಇತಿಹಾಸವನ್ನು ಹೊಂದಿದೆ. ದೇವಾಲಯವನ್ನು ರಾಣಿ ಜಾಕಲಿದೇವಿ ನಿರ್ಮಿಸಿದಳೆಂದು ಸ್ಥಳ ಐತಿಹ್ಯ ಹೇಳುತ್ತದೆ.
ದೇವಾಲಯವು ಉತ್ತರ, ,ದಕ್ಷಿಣ, ಪೂರ್ವ ಮತ್ತು ಪಶ್ಚಿಮಕ್ಕೆ ಮುಖಾಮುಖಿಯಾಗಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ವಿಗ್ರಹಗಳನ್ನು ಹೊಂದಿದೆ. ಇದು 4 ತೀರ್ಥಂಕರರ ವಿಗ್ರಹಗಳು ಭಗವಾನ್ ಪಾರ್ಶ್ವನಾಥ, ಭಗವಾನ್ ನೇಮಿನಾಥ, ಭಗವಾನ್ ಅನಂತನಾಥ ಮತ್ತು ಭಗವಾನ್ ಶಾಂತಿನಾಥ.
ಕೆರೆ ಪೂರ್ತಿ ತಾವರೆ ಹೂವುಗಳು ಬರುವ ಭಕ್ತರನ್ನು ಆಕರ್ಷಿಸುತ್ತಿದ್ದುವು. ಮೀನುಗಳು ಬಸದಿಗೆ ಬರುವವರನ್ನು ಸ್ವಾಗತಿಸುತ್ತಿದ್ದುವು. ನಕ್ಷತ್ರಾಕಾರದ ಚತುರ್ಮುಖ ಬಸದಿಯಲ್ಲಿರುವ ಪದ್ಮಾವತಿ ಸನ್ನಿಧಿಯನ್ನು ತಲುಪಲು ದೋಣಿಯಲ್ಲದೆ ಬೇರೆ ಆಯ್ಕೆಗಳಿಲ್ಲ. ತುಂಬಿದ ಕೆರೆಯಲ್ಲಿ ದೋಣಿಯು ತಾವರೆ ಹೂವುಗಳನ್ನು ಸೀಳಿಕೊಂಡು ಹೋಗುವ ತಲ್ಲಣ, ಇಲ್ಲಿ ಅರ್ಚಕರೇ ಅಂಬಿಗರು. ಕೆರೆಯ ನಡುವೆ ಇರುವ ಬಸದಿಗೆ ಕರೆದೊಯ್ಯವುದು ಮರಳಿ ತಂದು ಬಿಡುವುದು. ಚತುರ್ಮುಖ ಗರ್ಭಗುಡಿ ಬಸದಿಯ ನಾಲ್ಕು ಸುತ್ತಲೂ ದ್ವಾರಗಳಿದ್ದು ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖಮಂಟಪ ಹೊಂದಿದೆ. ಬಸದಿಯ ಹೊರಬಾಗದಲ್ಲಿ ಜೈನ ತೀರ್ಥಂಕರರಾದ ಅನಂತನಾಥ, ಶಾಂತಿನಾಥ, ಪಾರ್ಶ್ವನಾಥ, ನೇಮಿನಾಥ ವಿಗ್ರಹಗಳ ಕೆತ್ತನೆಗಳು ಕಾಣಸಿಗುತ್ತವೆ. ಹರಕೆ ಬಂದ ಧಾನ್ಯಗಳನ್ನು ಅರ್ಚಕರು ಕೆರೆಯ ಮೀನುಗಳಿಗೆ ಹಾಕುತ್ತಾರೆ. ಆಹಾರವನ್ನು ತಿನ್ನಲು ಮೀನುಗಳ ಪೈಪೋಟಿ ನೋಡಲು ಏನೋ ಖುಷಿ. ಪ್ರಕೃತಿಯ ಸೌಂದರ್ಯವನ್ನು ಮುಡಿಗೇರಿಸಿಕೊಂಡ ಕೆರೆಯ ನಡುವೆ ವಿರಾಜಮಾನಳಾಗಿ ನೆಲೆಸಿದ ಪದ್ಮಾವತಿ ಅಮ್ಮನ ದರ್ಶನ ಪಡೆದು ತಿರುಗಿ ಮನೆಯ ದಾರಿ ಹಿಡಿದೆವು.
– ವರ್ಷ, ಮಂಗಳೂರು
ಹೊಸ ಸುಂದರವಾದ ಸ್ಥಳದ ಪರಿಚಯ ಮಾಡಿಸುತ್ತದೆ ಈ ಬರಹ. ಚೆನ್ನಾಗಿದೆ ಲೇಖನ. ಇನ್ನಷ್ಟು ವಿವರಗಳಿದ್ದಿದ್ದರೆ ಇನ್ನೂ ಸೊಗಸು. ಆದರೂ ಉತ್ತಮ ಲೇಖನ. ಪ್ರಕೃತಿಯ ಬಣ್ಣನೆ ಹಿತವಾಗಿದೆ.
ಧನ್ಯವಾದಗಳು..ಮುಂದಿನ ಲೇಖನದಲ್ಲಿ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ…ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..
ಧನ್ಯವಾದಗಳು ಮೇಡಂ ನಿಮ್ಮ ಪ್ರತಿಕ್ರಿಯೆಗೆ.ಮುಂದಿನ ಲೇಖನದಲ್ಲಿ ಇನ್ನೂ ಉತ್ತಮವಾಗಿ ಲೇಖನವನ್ನು ಬರೆಯಲು ಪ್ರಯತ್ನಿಸುತ್ತೇನೆ.
ಭಾನುವಾರದ ಬಿಡುವಿನಲ್ಲಿ ನೋಡಿದ ಸ್ಥಳದ ಬಗ್ಗೆ …ತನ್ನ ಅನುಭವ ದ ಲೇಖನ ಚೆನ್ನಾಗಿ ಮೂಡಿಬಂದಿದೆ.. ಇನ್ನೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಚೆಂದಿತ್ತು ಪ್ರಯತ್ನ ಕ್ಕೆ ಒಂದು ಚಪ್ಪಾಳೆ ಮಗು..
ಧನ್ಯವಾದಗಳು…ಮುಂದಿನ ಲೇಖನದಲ್ಲಿ ಇನ್ನೂ ಉತ್ತಮವಾಗಿ ಲೇಖನವನ್ನು ಬರೆಯಲು ಪ್ರಯತ್ನಿಸುತ್ತೇನೆ.
ಪ್ರವಾಸದ ವರ್ಣನೆ ಸೊಗಸಾಗಿತ್ತು
ಬಸ್ದಿಯ ಹಿನ್ನೆಲೆ ವಿವರಗಳು ಇದ್ದಿದ್ದರೆ ಚೆನ್ನಾಗಿತ್ತು
ಧನ್ಯವಾದಗಳು ಮೇಡಂ ನಿಮ್ಮ ಪ್ರತಿಕ್ರಿಯೆಗೆ…ಮುಂದಿನ ಲೇಖನದಲ್ಲಿ ಇನ್ನೂ ಉತ್ತಮವಾಗಿ ಲೇಖನವನ್ನು ಬರೆಯಲು ಪ್ರಯತ್ನಿಸುತ್ತೇನೆ.
ಹಲವು ವರ್ಷಗಳ ಹಿಂದೆ ವರಂಗಕ್ಕೆ ನೀಡಿದ ಭೇಟಿಯ ಸಿಹಿನೆನಪು ಮರುಕಳಿಸಿತು. ಪ್ರಕೃತಿಯ ಮಡಿಲಿನಲ್ಲಿ, ಸುಂದರ ಸರೋವರದ ನಡುವೆ ಕಂಗೊಳಿಸುವ ಜೈನ ಮಂದಿರಕ್ಕೆ ದೋಣಿಯಲ್ಲಿ ಹೋಗುವಾಗ ಅದು ಸಿಕ್ಕಾಪಟ್ಟೆ ಓಲಾಡಿ, ನಾವೆಲ್ಲರೂ ಭಯದಿಂದ ಕಿರುಚಿದ್ದು ನೆನಪಾಯಿತು. ಅಲ್ಲಿ ತೆಗೆದ ಚಂದದ ಚಿತ್ರಗಳು ವರಂಗವನ್ನು ಆಗಾಗ ನೆನಪಿಸುತ್ತಿರುತ್ತವೆ.
ಪ್ರಕೃತಿಯ ಮಡಿಲಲ್ಲಿರುವ ಚಂದದ ತಾಣದ ಸುಂದರ ವಿವರಣೆ ಅಲ್ಲಿಗೆ ಹೋಗಲು ಮನ ಹಂಬಲಿಸುವಂತೆ ಮಾಡಿತು.
ನಮಗೆ ಗೊತ್ತೇ ಇಲ್ಲದ ಜಾಗ ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು ಮೇಡಂ.