ಚಟ್ನಿಪುರಾಣ
ಬಾಲ್ಯಕಾಲದಲ್ಲಿ ಮೈಸೂರಿನ ಹಳ್ಳದಕೇರಿ (ಈಗಿನ ಮಹಾವೀರನಗರ) ವಠಾರದ ಮನೆಯಲ್ಲಿದ್ದಾಗ ಮಾತು ಮಾತಿಗೆ ‘ಚಟ್ನಿಮನೆ’ ಎಂದು ಎಲ್ಲರೂ ಕರೆಯುವ ನಿಗೂಢಕ್ಕೆ ನಾನು ಭಯವಿಹ್ವಲನಾಗಿದ್ದೆ. ವಾಸ್ತವವಾಗಿ ನಮ್ಮ ವಠಾರದ ಹುಡುಗರೇ ಹೆಚ್ಚೂಕಡಮೆ ಮೂವತ್ತು ಮಂದಿ ಇದ್ದೆವು. ಗಿಲಾವು ಮಾಡದ ಗೋಡೆಗಳು ಕುಸಿದು, ತೆಂಗಿನಗರಿ ಮತ್ತು ಕಲ್ನಾರು ಶೀಟುಗಳಿಂದ ಮುಚ್ಚಿದ್ದ ಆ ಚಟ್ನಿಮನೆಯ ನಮ್ಮ ಓರಗೆಯ ಹುಡುಗನೊಬ್ಬ ನಮ್ಮೊಂದಿಗೇ ಆಟಕ್ಕೆ ಬರುತ್ತಿದ್ದ. ಅವನನ್ನು ಎಲ್ಲರೂ ಚಟ್ನಿ ಎಂದೇ ಕರೆಯುತ್ತಿದ್ದರು. ಅವನ ಅಣ್ಣನಿಗೆ ಹುಚ್ಚುನಾಯಿ ಕಡಿದು, ರೇಬೀಸ್ ಬಂದು ಮನೆಯೊಳಗೆ ಕಟ್ಟಿ ಹಾಕಿದ್ದರು. ಅಂಬೆಗಾಲಿಟ್ಟುಕೊಂಡೇ ಓಡಾಡುತ್ತಾ, ನಾಯಿಯಂತೆಯೇ ಕೂಗುತ್ತಿದ್ದ ಆತನ ರೋದನವು ನಮ್ಮ ಬಾಲ್ಯಕಾಲದ ಸಕ್ಕರೆಯ ನಿದ್ದೆಗೆ ಚುಚ್ಚುಬಾಣದಂತಾಗಿತ್ತು. ಅತ್ತ ನಾಯಿಯೂ ಅಲ್ಲದ, ಇತ್ತ ಮನುಷನ ದನಿಯೂ ಅಲ್ಲದ ನಡುವಿನ ಆ ಆರ್ತನಾದ ಅಸಹನೀಯವಾಗಿತ್ತು. ನಮ್ಮೊಂದಿಗೆ ಆಟವಾಡಲು ಆಗಾಗ ಬರುತ್ತಿದ್ದ ಮತ್ತು ಅವರಮ್ಮ ಕೂಗಿದಾಕ್ಷಣ ಬಿದ್ದಂ ಬೀಳ ಓಡುತ್ತಿದ್ದ ಚಟ್ನಿ (ಅವನ ನಿಜ ನಾಮಧೇಯವು ನಮಗೆ ಕೊನೆವರೆಗೂ ಗೊತ್ತಾಗಲಿಲ್ಲ) ಯ ಮುಖದಲ್ಲಿ ಯಾವಾಗಲೂ ಅವ್ಯಕ್ತ ಶಂಕೆ ಮತ್ತು ಹೆದರಿಕೆ ಮನೆ ಮಾಡಿರುತ್ತಿತ್ತು. ಅವರ ಅಣ್ಣನ ದೀನಸ್ಥಿತಿಯ ಭೀಕರ ಪರಿಣಾಮವನ್ನು ಅವನ ಮನೆಮಂದಿಯೆಲ್ಲಾ ಮೌನವಾಗಿ ಅನುಭವಿಸುತ್ತಿದ್ದರು. ಅದು ಚಟ್ನಿಯ ಹಾವಭಾವಗಳಲ್ಲಿ ಕಂಡೂ ಕಾಣದಂತೆ ಮಡುಗಟ್ಟಿತ್ತು. ಈ ಮಾತು ಇಲ್ಲಿ ಏಕೆಂದರೆ, ನನಗೆ ಬಹಳಷ್ಟು ವರುಷಗಳ ಕಾಲ ಚಟ್ನಿ ಎಂಬ ಒಂದು ಪದ ಎಲ್ಲೇ ಕಿವಿಗೆ ಬಿದ್ದರೂ ನಾಯಿ, ಅದರಲ್ಲೂ ಹುಚ್ಚುನಾಯಿ, ಅದರ ಕಡಿತ, ಅದರ ಪರಿಣಾಮ, ದುರಂತಕ್ರೌರ್ಯ, ಆ ಹುಡುಗನ ಮಾತು ಮತ್ತು ವರ್ತನೆಯಲ್ಲಿ ವ್ಯಕ್ತವಾಗುತ್ತಿದ್ದ ಚಡಪಡಿಕೆಗಳೇ ಕಣ್ಮುಂದೆ ಬಂದು ನಾನೂ ಒಳಗೊಳಗೆ ಅಸ್ವಸ್ಥನಾಗುತ್ತಿದ್ದೆ. ನಾವು ಹಳ್ಳದಕೇರಿ ಮನೆಯನ್ನು ಖಾಲಿ ಮಾಡಿ, ಹುಣಸೂರಿನಲ್ಲಿ ಠಿಕಾಣಿ ಹೂಡುವವರೆಗೂ ನನಗಿದು ದುಃಸ್ವಪ್ನವಾಗಿತ್ತು. ಬಡವರಾದ ಅವರ ಮನೆಯವರು ಎಲ್ಲ ಕೆಲಸಗಳನ್ನೂ ಈ ಚಟ್ನಿಯಿಂದಲೇ ಮಾಡಿಸುತ್ತಿದ್ದರು. ಒಂದು ಕಾಲದಲ್ಲಿ ಉಡುಪಿಯಲ್ಲಿ ಹೊಟೆಲಿಟ್ಟು ಅಲ್ಲಿ ಸಂಬಂಧಿಕರಿಂದ ನಷ್ಟಗೊಂಡು, ನೇರ ಮೈಸೂರಿಗೆ ಬಂದ ಅವರ ತಾಯ್ತಂದೆಯರು ಹೊಟೆಲೊಂದರಲ್ಲಿ ಕೆಲಸಕ್ಕಿದ್ದವರು. ಆ ಮುರುಕಲು ಮನೆಗೆ ಬಾಡಿಗೆ ಕೊಡುತ್ತಿದ್ದರು. ಶಾಲೆಗೆ ಸೇರಿಸದ ಮತ್ತು ಕಳಿಸದ ಚಟ್ನಿಯು ಮನೆಯ ಎಲ್ಲ ಕೆಲಸಗಳನ್ನು ಮಾಡುವುದಲ್ಲದೇ ತನ್ನ ಅಣ್ಣನ ಆರೈಕೆಯನ್ನೂ ಮಾಡಬೇಕಾಗಿತ್ತು. ಹರುಕಲು ಬಟ್ಟೆಯ ಸದಾ ಕೆದರಿದ ತಲೆಯ ಚಟ್ನಿಯು ಅಪರೂಪಕ್ಕೆ ನಮ್ಮೊಂದಿಗೆ ಕಡ್ಡಿಯಾಟ, ಕ್ರಿಕೆಟ್ಟಾಟ, ಲಗೋರಿ, ಜೂಟಾಟಗಳಲ್ಲಿ ಭಾಗಿಯಾಗುತ್ತಿದ್ದ. ಕಣ್ಣಾಮುಚ್ಚಾಲೆಯಂಥದೇ ಇದ್ದ ಐಸ್‌ಪೈಸ್ ಆಟ (ಮರೆಯಲ್ಲಿದ್ದವರನ್ನು ಹುಡುಕಿ, ಐ ಸೀ ಯು ಎಂದು ಗುರುತು ಹಚ್ಚುವುದು) ಆಡುವಾಗ ಅವನು ತನ್ನ ಮನೆಯ ಹಿಂದೆ ಅವಿತುಕೊಂಡು ಬಿಡುತ್ತಿದ್ದ. ನಮಗೋ ಅವನ ಮನೆಯ ಬಳಿ ಹೋಗಲು ಹೆದರಿಕೆ. ಹೀಗಾಗಿ ಅವನು ಸಹ ನಮಗೆ ಸ್ಟ್ರೇಂಜರ್ ಆಗಿಬಿಟ್ಟಿದ್ದ. ಹೊಟೆಲಿನ ಮನೆಯವನು ಅಂತಲೂ ಅವನ ಮನೆಯವರು ಅವನನ್ನು ಜೀತದಾಳನ್ನಾಗಿ ದುಡಿಸುತ್ತಿದ್ದುದರಿಂದಲೂ ಅವನಿಗೆ ಚಟ್ನಿ ಎಂದೇ ಇಡೀ ಏರಿಯಾದವರು ಕರೆಯುತ್ತಿದ್ದರು. ಅವನು ಸಹ ಒಂದು ದಿನವೂ ಬೇಸರ ಮಾಡಿಕೊಳ್ಳದೇ ತನ್ನ ಹೆಸರೇ ಚಟ್ನಿ ಎಂದುಕೊಂಡು ಬಿಟ್ಟಿದ್ದ.
ದೋಸೆ ಇಡ್ಲಿಗೆ ತಪ್ಪದೇ ಕೊಡುವ ಚಟ್ನಿಯ ಮಧುರಾನುಭೂತಿಯನ್ನು ನಾನು ಅನುಭವಿಸಲು ಬಾಲ್ಯದಲ್ಲಿ ಸಾಧ್ಯವಾಗಲೇ ಇಲ್ಲ. ದೊಡ್ಡವನಾದ ಮೇಲೆ (ಹಾಗೆಂದುಕೊಳ್ಳುವುದು ಭ್ರಮೆಯಷ್ಟೇ!) ನಿಧಾನವಾಗಿ ಬಾಲ್ಯಕಾಲದ ಆ ಚಟ್ನಿಯನ್ನು ಮರೆತು, ಹೊಟೆಲಿನ ಚಟ್ನಿಯನ್ನು ಆಸ್ವಾದಿಸಲು ಬಹಳ ಶ್ರಮ ಪಟ್ಟೆ. ಕಳೆದ ತಿಂಗಳು ನನ್ನ ಮಡದಿಯ ಅಣ್ಣನಿಗೆ ಹುಚ್ಚುನಾಯಿ ಕಡಿದ ವಿಚಾರ ಗೊತ್ತಾದಾಗ ಆ ಚಟ್ನಿಯು ಮತ್ತೆ ಧುತ್ತನೇ ಕಣ್ಣ ಮುಂದೆ ಬಂದ. ಹೊಟೆಲಿನಲ್ಲಿ ಇಡ್ಲಿ ಮತ್ತು ದೋಸೆಗೆ ಮಾತ್ರವಲ್ಲದೇ ಚಿತ್ರಾನ್ನ, ಪೂರಿ, ಚಪಾತಿ, ಬೋಂಡ, ಬಜ್ಜಿಗಳಿಗೂ ತಂದಿಡುವ ಚಟ್ನಿಯು ಸರ್ವಗುಣ ಸಂಪನ್ನ ಮತ್ತು ಸರ್ವಾಂತರ್ಯಾಮೀ ಸ್ವಭಾವಗಳಿಂದ ಬಹುಜನಪ್ರಿಯವಾಗಿದೆ. ಅದರಲ್ಲೂ ಹುರಿಗಡಲೆ ಚಟ್ನಿಯೇ ಫೇಮಸ್ಸು. ಇದನ್ನೇ ಹಲವು ರೀತಿಯಲ್ಲಿ ಮಾಡುವ ವಿಧಾನಗಳಿವೆ. ಹೊಟೆಲಿನಲ್ಲಿ ಮಾಡುವಂತೆ, ತೆಂಗಿನಕಾಯಿ ಹಾಕದೇ ಬರೀ ಹುರಿಗಡಲೆಯಲ್ಲಿ ಚಟ್ನಿ ಮಾಡುವುದು. ಸ್ವಲ್ಪ ತೆಂಗಿನಕಾಯಿ, ಹೆಚ್ಚು ಹುರಿಗಡಲೆ ಹಾಕಿ ಮಾಡುವುದು. ಹುರಿಗಡಲೆಯ ಜೊತೆಗೆ ಸ್ವಲ್ಪ ಕಡಲೇಬೇಳೆ ಬೆರೆಸಿ ಚಟ್ನಿ ಮಾಡುವುದು. ಹುರಿಗಡಲೆಯನ್ನೇ ಬಳಸದೆ, ಕೇವಲ ತೆಂಗಿನಕಾಯಿ ತುರಿಯಿಂದಲೇ ಮಾಡುವ ಶುದ್ಧ ಕಾಯಿ ಚಟ್ನಿ ಹೀಗೆ. ಅದರಲ್ಲೂ ಹಸಿಮೆಣಸಿನಕಾಯಿ ಹಾಕಿದರೊಂದು ರುಚಿ; ಒಣಮೆಣಸಿನಕಾಯಿ ಹಾಕಿದರೆ ಒಂದು ರುಚಿ.
ಇಡ್ಲಿಯೊಂದಿಗೆ ನನಗೆ ಚಟ್ನಿಯೇ ಪ್ರಿಯ; ಅದರಲ್ಲೂ ಬೆಳ್ಳುಳ್ಳಿ ಹಾಕದ ಮೈಲ್ಡ್ ಚಟ್ನಿಯು ಬಿಸಿ ಬಿಸಿ ಇಡ್ಲಿಗೆ ಒಂದೊಳ್ಳೆಯ ಕಾಂಬಿನೇಷನ್ನು. ಕೆಲವು ಹೊಟೆಲಿನಲ್ಲಿ ಸಾಂಬಾರ್ ಚೆನ್ನಾಗಿ ಮಾಡದೇ ಹೋದಾಗ ನಮಗೆ ಈ ಚಟ್ನಿಯೇ ಗತಿ. ಕೆಲವರು ಚಟ್ನಿಗೆ ಆದ್ಯತೆ ಕೊಡದೇ ಇಡ್ಲಿಗೆ ಸಾಂಬಾರೇ ಸರಿ ಎಂದು ತೀರ್ಮಾನಿಸಿ, ಅದರಂತೆ ನಡೆದುಕೊಳ್ಳುವ ಮತ್ತು ನಡೆಸಿಕೊಳ್ಳುವ ಚಟ್ನಿದ್ವೇಷಿಗಳೂ ಇದ್ದಾರೆ. ನಾನಂತೂ ಇಡ್ಲಿ ಸಾಂಬಾರ್ ಡಿಪ್ ತರಿಸಿಕೊಂಡರೂ ಒಂದು ಬಟ್ಟಲು ಚಟ್ನಿಯನ್ನು ಪಕ್ಕಕ್ಕೆ ಇರಿಸಿಕೊಂಡೇ ತಿನ್ನಲು ಶುರು ಮಾಡುವುದು. ಇಡ್ಲಿಯನ್ನು ಕೈಯಲೇ ಮುರಿದು, ಚಟ್ನಿಗೆ ಅದ್ದಿಕೊಂಡು ಆನಂತರ ಸಾಂಬಾರಿಗೂ ಅದ್ದಿಕೊಳ್ಳುವ ದ್ವೈತಿ ನಾನು. ಚಟ್ನಿ ಮತ್ತು ಸಾಂಬಾರು- ಎರಡನ್ನೂ ರುಚಿಕರವಾಗಿ ಮಾಡುವ ಹೊಟೆಲಿನಲ್ಲಿ ನಾನು ಇದನ್ನು ವ್ರತದಂತೆ ಆಚರಿಸುವವನು. ಸುಮಾರಾಗಿ ಇರುವ ಇಡ್ಲಿ ಮತ್ತು ದೋಸೆಗೆ ಚಟ್ನಿಯೇ ಸಮಾಧಾನಕರ ಬಹುಮಾನ. ನಾವು ಚಿಕ್ಕವರಾಗಿದ್ದಾಗ ಮೈಸೂರಿನ ಗಾಂಧಿ ಚೌಕದ ಬಳಿ ಇದ್ದ ಮಧುನಿವಾಸ್ ಹೊಟೆಲಿನಲ್ಲಿ ಚಟ್ನಿಯೇ ಫೇಮಸ್ಸು. ಒಂದು ಇಡ್ಲಿಗೆ ಎರಡು ಬಟ್ಟಲು ಚಟ್ನಿ ತಿನ್ನುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಅಲ್ಲಂತೂ ದೊಡ್ಡ ಸ್ಟೀಲ್ ಬಕೆಟ್‌ನಲ್ಲಿ ನೀರು ಚಟ್ನಿಯನ್ನು ಬಡಿಸಲು ಒಬ್ಬ ಪ್ರತ್ಯೇಕ ಸಪ್ಲೈಯರೇ ನಿಂತಿರುತ್ತಿದ್ದರು; ಬೇಜಾರಿಲ್ಲದೇ ಬಡಿಸುತ್ತಿದ್ದರು. ಇಂಥ ಕರುಣಾಮಯಿಯನ್ನು ನಾನು ಮತ್ತೆ ನೋಡಿದ್ದು ಬೆಂಗಳೂರಿನ ಚಾಮರಾಜಪೇಟೆ ಬಳಿಯ ಬ್ರಾಹ್ಮಿನ್ಸ್ ಕಾಫಿ ಬಾರ್‌ನಲ್ಲಿ ! ಚಟ್ನಿಯಿಲ್ಲದ ಇಡ್ಲಿಯನ್ನೋ ದೋಸೆಯನ್ನೋ ನಾನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾರೆ. ಇದು ನನ್ನ ಇಷ್ಟದ ಇತಿಮಿತಿ!!
ಧ್ವನಿ–ರಸ–ಔಚಿತ್ಯಗಳೇ ಕಾವ್ಯ ಗಾಯತ್ರಿ ಎಂದು ತೀನಂಶ್ರೀಯವರು ತಮ್ಮ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೇಳಿದಂತೆಯೇ, ಚಟ್ನಿ–ಪಲ್ಯ–ಗೊಜ್ಜುಗಳು ನನ್ನ ಊಟದ ಗಾಯತ್ರಿ! ಅದರಲ್ಲೂ ಊಟಕ್ಕೆ ಪಲ್ಯ ಮತ್ತು ಗೊಜ್ಜು, ತಿಂಡಿಗೆ ಚಟ್ನಿ ಎಂಬಂತೆ ಸ್ಥೂಲವಾದ ವಿಂಗಡಣೆ. ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಏನೇ ಬೆಳಗಿನ ತಿಂಡಿಯಾದರೂ ಕಾಯಿಚಟ್ನಿಯ ದರ್ಶನಭಾಗ್ಯ ಗ್ಯಾರಂಟಿ. ಬೆಳಗಿನ ಹೊತ್ತು ಮಿಕ್ಸಿ ಶಬ್ದ ಮಾಡಿತೆಂದರೆ ಚಟ್ನಿಯು ತಯಾರಾಗುತ್ತಿದೆಯೆಂದೇ ಅರ್ಥ. ಮೈಸೂರು ಮನೆಯಲ್ಲಿ ಒರಳು ಕಲ್ಲನ್ನು ಪ್ರತಿಷ್ಠಾಪನೆ ಮಾಡಿರುವಂತೆ, ತಾತ್ಕಾಲಿಕ ನಿವಾಸವಾಗಿರುವ ಹೊಳೆನರಸೀಪುರದ ಬಾಡಿಗೆ ಮನೆಯಲ್ಲಿ ಸಹ ಒರಳು ಕಲ್ಲು ಒಯ್ದು ಇಟ್ಟುಕೊಂಡಿದ್ದೇವೆ. ಒರಳುಕಲ್ಲಿನಲಿ ರುಬ್ಬಿದ ಚಟ್ನಿಯದು ವಿಶೇಷ ರುಚಿ. ತೀರಾ ಸಮಯಾಭಾವ ಇದ್ದರೆ ಮಾತ್ರ ನನ್ನ ನಲ್ಮೆಯ ಸಂಗಾತಿಯು ಮಿಕ್ಸಿಯ ಮೊರೆ ಹೋಗುತ್ತಾಳೆ. ಉಳಿದಂತೆ ಐದು ನಿಮಿಷದಲ್ಲಿ ರುಬ್ಬಿಟ್ಟು ಬಡಿಸುವ ಒರಳುಕಲ್ಲಿನ ಚಟ್ನಿಯೇ ನನ್ನ ಸೌಭಾಗ್ಯ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಏನೇ ಬೆಳಗಿನ ತಿಂಡಿಯಾದರೂ ಅದನ್ನು ಮಧ್ಯಾಹ್ನದ ಊಟದ ಡಬ್ಬಿಗೂ ಬೇಸರವಿಲ್ಲದೇ ಒಯ್ದು ತಿನ್ನುವ ನನಗೆ ಒರಳುಚಟ್ನಿ ಜೊತೆಗೇ ಬರುತ್ತದೆ. ಕೊಬ್ಬರಿ ಬಳಸುವುದರಿಂದಾಗಿ ಮಿಕ್ಸಿಯಲ್ಲಿ ಮಾಡಿದ ಚಟ್ನಿಯು ಮಧ್ಯಾಹ್ನಕ್ಕೆಲ್ಲಾ ಜೀವ ಬಿಡುತ್ತದೆ. ಒರಳುಕಲ್ಲಿನಲ್ಲಿ ನೀರು ಹಾಕದೇ ರುಬ್ಬುವುದರಿಂದ ಸಂಜೆಯಾದರೂ ಚಟ್ನಿಯು ಸಜೀವವಾಗಿದ್ದು ಸಾಥ್ ಕೊಡುತ್ತದೆ. ಹುರಿಗಡಲೆ ಚಟ್ನಿಯದೇ ಸಿಂಹಪಾಲಾದರೂ ಬೇರೆ ಬೇರೆ ಥರದ ಚಟ್ನಿಗಳನ್ನು ಮಾಡಿ ಬಡಿಸಿ, ಸಂತೋಷ ಪಡುವುದರಲ್ಲಿ ನಮ್ಮ ಮನೆ ಎತ್ತಿದಕೈ. ದಂಟುಸೊಪ್ಪಿನ ಚಟ್ನಿ, ಮೆಂತ್ಯ ಮೆಣಸಿನಕಾಯಿ ಚಟ್ನಿ, ಈರುಳ್ಳಿ ಚಟ್ನಿ, ಹೀರೇಕಾಯಿ ಚಟ್ನಿ, ಗೋರೀಕಾಯಿ ಚಟ್ನಿ, ಕಡಲೇಬೇಳೆ ಚಟ್ನಿ, ಟೊಮ್ಯಾಟೊ ಕಾಯಿ ಚಟ್ನಿಗಳು ವಾರಕ್ಕೊಮ್ಮೆಯಾದರೂ ತಯಾರಾಗುತ್ತವೆ. ಮಾವಿನಕಾಯಿ ಚಟ್ನಿಯಂತೂ ಸೀಸನಬಲ್; ಹುಳಿ ಮಾವಿನಕಾಯಿ ಸಿಗುವಷ್ಟು ಕಾಲ ಇದರದೇ ಮನೆವಾಳ್ತನ!
ನನ್ನ ಹೆಂಡತಿಯು ನಮ್ಮ ತಾಯಿಯವರಿಂದ ಕಲಿತ ಅಡುಗೆಯಲ್ಲಿ ಈ ದಂಟುಸೊಪ್ಪಿನ ಚಟ್ನಿಯೂ ಒಂದು. ತುಂಬ ಮಂದಿಗೆ ಈ ರೆಸಿಪಿ ಗೊತ್ತಿಲ್ಲ. ವಿಚಿತ್ರವೆಂದರೆ ನನ್ನ ಮಡದಿಯೇ ಇದನ್ನು ತಿನ್ನುವುದಿಲ್ಲ; ಆದರೆ ಅದ್ಭುತವಾಗಿ ಮಾಡಿ ಬಡಿಸುತ್ತಾಳೆ. ಇದರ ರುಚಿ ಕಂಡ ನನ್ನ ಸಹಪಾಠಿ ಗೆಳೆಯ ಚಿಕ್ಕಮಗಳೂರಿನ ಸತ್ಯನಾರಾಯಣನು ತನ್ನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಶ್ರೀಮತಿ ಭಾಗ್ಯ ಮೇಡಂ ಅವರನ್ನು ಸೀದಾ ನಮ್ಮ ಮನೆಗೆ ಕರೆದು ಕೊಂಡು ಬಂದವನೇ ತಿಳಿಸಾರು ಮತ್ತು ದಂಟುಸೊಪ್ಪಿನ ಚಟ್ನಿಯ ರುಚಿ ತೋರಿಸಿ, ‘ಚಟ್ನಿಶ್ರೀ’ ಪ್ರಶಸ್ತಿ ಪುರಸ್ಕಾರವನ್ನೇ ಕೊಡ ಮಾಡಿಸಿದ್ದು ಮಾಸದ ನೆನಪು!
ಇವೆಲ್ಲವನ್ನೂ ರೊಟ್ಟಿ, ಚಪಾತಿಗೆ ನಂಚಿಕೊಳ್ಳುವುದಕ್ಕೂ ಅನ್ನ ಕಲೆಸಿಕೊಳ್ಳುವುದರ ಮೂಲಕ ಊಟಕ್ಕೂ ಬಳಸುವ ಚಟ್ನಿಯ ಮನೆ ನಮ್ಮದು. ಮಧ್ಯಾಹ್ನದ ಡಬ್ಬಿಯೂಟಕ್ಕೂ ನಾನು ಚಟ್ನಿ ಒಯ್ಯುತ್ತೇನೆ. ಈಗಂತೂ ಬಿಸಿಯನ್ನು ಹಿಡಿದಿಡುವ ಡಬ್ಬಿಗಳದೇ ಸಾಮ್ರಾಜ್ಯ. ಅಂಥದೊಂದು ಡಬ್ಬಿಯಲ್ಲಿ ಹಬೆಯಾಡುವ ಅನ್ನ, ರುಬ್ಬಿದ ಚಟ್ನಿ ಮತ್ತು ಒಗ್ಗರಣೆ- ಈ ಮೂರನ್ನೂ ಪ್ರತ್ಯೇಕವಾಗಿ ಒಯ್ದು, ತಟ್ಟೆಗೆ ಮೂರನ್ನೂ ಹಾಕಿಕೊಂಡು ಕಲೆಸಿ ತಿನ್ನುತಿದ್ದರೆ ನನ್ನ ಕೊಠಡಿಯ ಹೊರಗೆ ಅಡ್ಡಾಡುವ ಸಹೋದ್ಯೋಗಿಗಳು ಮೂಗರಳಿಸುತ್ತಾರೆ! ಅದರಲ್ಲೂ ಸೊಪ್ಪಿನ ಚಟ್ನಿ, ಗೋರೀಕಾಯಿ ಚಟ್ನಿ ಮತ್ತು ಹೀರೇಕಾಯಿ ಚಟ್ನಿಯನ್ನು ಒರಳುಕಲ್ಲಿನಲ್ಲಿ ಗಟ್ಟಿಯಾಗಿ ರುಬ್ಬಿಕೊಂಡು, ಒಗ್ಗರಣೆ ತೋರಿ, ಅದನ್ನು ಬಿಸಿ ಬಿಸಿ ಉದುರನ್ನಕ್ಕೆ ಘಮ್ಮೆನ್ನುವ ಕಡಲೆಕಾಯಿ ಎಣ್ಣೆಯನ್ನು ಹಾಕಿಕೊಂಡು ಕಲೆಸಿಕೊಳ್ಳುತ್ತಾ ಪಿಡಚಿ ಕಟ್ಟಿಕೊಂಡು ತಿನ್ನುತಿದ್ದರೆ ದೇವಲೋಕದ ಸ್ವರುಗವೇ ನಿರ್ಮಾಣವಾಗಿ ಬಿಡುತ್ತದೆ. ಜೊತೆಗೆ ನಂಚಿಕೊಳ್ಳಲು ತಟ್ಟೆಯ ತುದಿಗೆ ಕರಿದ ತಿಂಡಿ ಇದ್ದರಂತೂ ಬೇರೆಲ್ಲ ಸುಖಗಳನ್ನು ನಿವಾಳಿಸಿ ಎಸೆಯಬೇಕೆನಿಸುತ್ತದೆ. ಇನ್ನೊಂದು ಮುಖ್ಯ ಸಂಗತಿಯೆಂದರೆ, ಒಂದೊಮ್ಮೆ ಒರಳು ಚಟ್ನಿಯು ಮಿಕ್ಕರೆ ಮಾರನೆಯ ದಿನ, ಒಂದು ಚಮಚೆ ಎಣ್ಣೆ ಹಾಕಿ ಬಾಣಲೆಯಲ್ಲಿ ಬಾಡಿಸಿದರೆ ಚಟ್ನಿಯ ಪುಡಿ ಸಿದ್ಧವಾಗುತ್ತದೆ. ಇದು ಸಹ ನನಗೆ ಇಷ್ಟ. ಹಾಗಾಗಿ ನಾಳೆಗೆ ಮಿಗಲಿ ಎಂದೇ ಹಾರೈಸಿಕೊಳ್ಳುತ್ತಿರುತ್ತೇನೆ. ಯಾವತ್ತಾದರೂ ಒಂದಿನ ಚಟ್ನಿ ರುಬ್ಬಿಟ್ಟು ಅದನ್ನು ಬಳಸದೇ, ಮಾರನೆಯ ದಿನ ಹೀಗೆ ಹುರಿದು ಆಗ ಬಳಸಬೇಕು ಎಂಬ ನನ್ನ ಮಹದಾಸೆ ಇನ್ನೂ ಈಡೇರಿಯೇ ಇಲ್ಲ ಎಂಬುದೇ ವ್ಯಥೆ. ಪ್ರಧಾನವಾಗಿ ಚಟ್ನಿಯಲ್ಲಿ ಎರಡು ವಿಧ: ಒಂದು ಗಟ್ಟಿ ಚಟ್ನಿ; ಇನ್ನೊಂದು ನೀರು ಚಟ್ನಿ. ಯಾವುದಕ್ಕೆ ಯಾವುದು ಮತ್ತು ಯಾವಾಗ? ಎಂಬುದನ್ನು ಅನುಭವದಿಂದ ಕಂಡುಕೊಳ್ಳಬೇಕು; ಇದನ್ನು ನಿಯಮ ಮಾಡಲಾಗದು!
ಇಡ್ಲಿ ಮತ್ತು ದೋಸೆಗೆ ಹುರಿಗಡಲೆ ಚಟ್ನಿಯೇ ಸೂಕ್ತ. ಹುರಿಗಡಲೆ ಚಟ್ನಿಯನ್ನು ತಯಾರಿಸುವಾಗ ಒಂದು ಆನಿಯನ್ ಮತ್ತು ಕ್ಯಾಪ್ಸಿಕಂ ಅನ್ನು ಹೆಚ್ಚಿ, ಎಣ್ಣೆಯಲ್ಲಿ ಬಾಡಿಸಿಕೊಂಡು ರುಬ್ಬಿಕೊಂಡರೆ ಟೇಸ್ಟು ವಿಭಿನ್ನವಾಗಿ ಬಿಡುತ್ತದೆ. ಚಟ್ನಿಯು ಸಿದ್ಧವಾಗುವಾಗ ಬಳಸುವ ಇತರೆ ಪದಾರ್ಥಗಳಾದ ಹುರಿಗಡಲೆ, ಮೆಣಸಿನಕಾಯಿ, ಇಂಗು, ಬೆಲ್ಲಗಳೊಂದಿಗೆ, ಎಣ್ಣೆಯಲ್ಲಿ ಬೆಂದ ಈರುಳ್ಳಿಯ ನೀರಿನಾಂಶವು ತೆಂಗಿನ ಹಾಲಿನೊಂದಿಗೆ ಬೆರೆತು ಭವ್ಯವೂ ದಿವ್ಯವೂ ಆಗುವ ಚಟ್ನಿಯು ಪಂಚೇಂದ್ರಿಯವನ್ನು ತಣಿಸಿ, ದಣಿಸುತ್ತದೆ. ಚಟ್ನಿಯು ನೋಡಲು ಸುಂದರವಾಗಿರಬೇಕು. ಒರಳು ಕಲ್ಲಿನಲ್ಲಿ ತರಿತರಿಯಾಗಿ ರುಬ್ಬಿದ ಚಟ್ನಿಯನ್ನು ನೋಡುವುದೇ ಒಂದು ಚೆಂದ. ಇನ್ನದರ ಘಮವು ಮೂರು ಮನೆಯಾಚೆಗೂ ತಲಪುತ್ತಿರುತ್ತದೆ. ತಿನ್ನುವಾಗ ನಾಲಗೆಯ ಸಡಗರವೆಂತು ಹೇಳುವುದು? ಬೆಳಗಿನ ಹೊತ್ತು ಏನೇ ಕೆಲಸ ಮಾಡುತ್ತಿದ್ದರೂ ರುಬ್ಬುಗುಂಡಿನ ಅಡಿಗೆ ಸಿಕ್ಕಿಕೊಂಡು ಚಟ್ನಿಯಾಗುತ್ತಿರುವ ಸಶಬ್ದವಂತೂ ಕಿವಿಗೆ ಲಯಬದ್ಧಸಂಗೀತವಾಗಿ ಕರುಳನ್ನು ತಟ್ಟಿ ಎಬ್ಬಿಸಿ ಬಿಡುತ್ತದೆ. ಒಟ್ಟಿನಲ್ಲಿ ಹದವಾಗಿ ರುಬ್ಬಿಸಿಕೊಂಡ ಚಟ್ನಿಯು ನಮ್ಮ ಬದುಕಿನ ಸಂಕೇತವೇ ಸರಿ. ಬದುಕಿನ ರುಚಿ ಕಾಣಲು ಮೊದಲಿಗೆ ಹೀಗೆ ಬಾಣಲೆಯಲ್ಲಿ ಫ್ರೈ ಆಗಬೇಕು; ಆನಂತರ ಉಳಿದ ಪದಾರ್ಥಗಳೊಂದಿಗೆ ಬರೆಯಬೇಕು; ರುಬ್ಬುಗುಂಡಿನಡಿ ಸಿಕ್ಕು, ನರಳಬೇಕು, ಹೊರಳಬೇಕು, ಸಾಸುವೆ ಒಗ್ಗರಣೆಯ ಸಾರ್ಥಕ್ಯದೊಂದಿಗೆ ತಿನ್ನುವ ನಾಲಗೆಯ ನಾಕವಾಗಬೇಕು. ‘ಮಗಾ, ಚಟ್ನಿಯಾಗೋದ’ ಎಂಬ ತಮಾಷೆಯ ಮಾತನ್ನು ನಾನು ಹೀಗೆ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ಸಂಗಾತಿಯ ಸಖ್ಯವಿಲ್ಲದ ಬದುಕು ಹೇಗೆ ಬಣಗುಟ್ಟುವುದೋ ಹಾಗೆಯೇ ಚಟ್ನಿಯಿಲ್ಲದ ಇಡ್ಲಿ ದೋಸೆಗಳು! ಇಡ್ಲಿ ದೋಸೆಗಳಿಗೆ ಚಟ್ನಿಯೇ ಕಂಠಾಭರಣ! ಉಳಿದ ಒಡವೆಗಳೆಷ್ಟಿದ್ದರೂ ಕೊರಳನ್ನು ಅಲಂಕರಿಸಿದ ಸರವೇ ಹೆಣ್ಣಿನ ಒಲವು ಚೆಲುವನ್ನು ನಿರ್ಧರಿಸುವುದು. ಅದರಲ್ಲೂ ಗೌರವಾದರಗಳನ್ನು ಆಯಾಚಿತವಾಗಿ ಮೂಡಿಸುವ ಮಾಂಗಲ್ಯಸರವೇ ಆಗಿಹುದು! ಚಟ್ನಿಯೇ ಪ್ರಾಥಮಿಕ; ಇನ್ನುಳಿದಂತೆ ಎಂತಹುದೇ ಸಾಂಬಾರೇ ಇರಲಿ, ಪಲ್ಯವೋ ಸಾಗುವೋ ಕೂರ್ಮವೋ ಗೊಜ್ಜೋ ಇರಲಿ ಅವು ಆಲಂಕಾರಿಕ ಅಷ್ಟೇ.
ಒಬ್ಬ ಗೆಳೆಯರ ಮಾತುಕತೆಯಿಂದ ಬೆಟಗೇರಿ ಚಟ್ನಿಯು ಪರಿಚಯವಾಯಿತು. ಮೊದಲಿಗೆ ವಗ್ಗರಣೆ, ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿದ ಈರುಳ್ಳಿಯೊಂದಿಗೆ ಸೇರಿಸಿ, ಸ್ವಲ್ಪ ಕರಿಬೇವಿನೊಂದಿಗೆ ಹುರಿದು, ಅರಿಶಿನಪುಡಿ ಮತ್ತು ಉಪ್ಪು ಬೆರೆಸಿ ಮತ್ತೆ ಸ್ವಲ್ಪ ಕಾಲ ಹುರಿದು, ಸ್ಟವ್ ಆಫ್ ಮಾಡಿ, ಬಿಸಿ ಆರುವುದಕೆ ಬಿಡಬೇಕು. ಈ ಕಡೆ ಮಿಕ್ಸಿ ಜಾರಿನಲ್ಲಿ ಬೆಚ್ಚಗೆ ಮಾಡಿದ ಹುರಿಗಡಲೆಯನ್ನು ಪುಡಿ ಮಾಡಿಕೊಂಡು, ಅದಕ್ಕೆ ಚೂರು ಬೆಲ್ಲ, ಮೊಸರು ಮತ್ತು ಸ್ವಲ್ಪ ನೀರು ಸೇರಿಸಿ ಕಲೆಸಿಕೊಳ್ಳಬೇಕು. ಈಗಾಗಲೇ ಮಾಡಿಟ್ಟ ಒಗ್ಗರಣೆಗೆ ಬೆರೆಸಿದರೆ ಬೆಟಗೇರಿ ಚಟ್ನಿಯು ಸೇವನೆಗೆ ಸಿದ್ಧ. ಇನ್ನು ದಾವಣಗೆರೆ ಬೆಣ್ಣೆದೋಸೆಗೆ ಕೊಡುವ ಚಟ್ನಿಯದಂತೂ ಅನನ್ಯ ರುಚಿ. ಯುಟ್ಯೂಬಿನಲ್ಲಿ ಯಾರೋ ‘ಬದನೆಕಾಯಿ ಚಟ್ನಿ’ ಎಂದು ಹೇಳಲು ಶುರುವಿಟ್ಟಿದ್ದರು. ಅಯ್ಯೋ ದೇವರೇ! ನನಗಂತೂ ಅದನ್ನು ನೋಡುವುದಿರಲಿ, ಕೇಳಿಸಿಕೊಳ್ಳಲೂ ಅ-ಸಹ್ಯವೆನಿಸಿ ಫೋನು ಪಕ್ಕಕ್ಕಿಟ್ಟೆ.
ಹೀಗೆ ಬಾಲ್ಯದಲ್ಲಿ ನನಗೆ ಚಟ್ನಿಯೆಂಬ ಪದವೇ ಭೀಕರವಾಗಿತ್ತು. ಆನಂತರ ಸಹ್ಯವಾಯಿತು. ಬೆಳೆಯುತ್ತಾ ಪಾಯಸದಂಥ ಪೇಯವಾಯಿತು. ಮಧ್ಯವಯಸ್ಸಿನಲ್ಲೀಗ ವೈವಿಧ್ಯಮಯ ಅಭಿರುಚಿಯ ಮಹೋನ್ನತ ಪಾತ್ರ ವಹಿಸಿದೆ. ಒಟ್ಟಿನಲ್ಲಿ ಈಗ ನಮ್ಮ ಮನೆಯಲ್ಲಿ ಥರಥರದ ಚಟ್ನಿಗಳ ತಯಾರಿಕೆಯ ಕೌಶಲ್ಯಯೋಗ; ಇದೇ ಲೌಕಿಕ ಸುಖಭೋಗ! ಈ ಸಂತಸೋಲ್ಲಾಸಕೆ ಕಾರಣ ನನ್ನ ಮೆಚ್ಚಿನ ಮಡದಿ. ಅವಳಿಗೆ ನನ್ನ ಪ್ರೀತಿಯ ಧನ್ಯವಾದ.
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಸುರಹೊನ್ನೆಗೆ ಅನಂತ ಧನ್ಯವಾದಗಳು….
ಪ್ರೀತಿ-ಅಭಿಮಾನ-ಆತ್ಮವಿಶ್ವಾಸ ಹೆಚ್ಚಿಸುವ
ಇಂಥ ಪತ್ರಿಕೆ ನೂರ್ಕಾಲ ಬಾಳಲಿ….
ಪ್ರಣಾಮಗಳು
ವಾವ್.. ನಿಮ್ಮ ಚಟ್ನಿ ಪುರಾಣದ ಲೇಖನ.. ಓದಿದ ನನಗೆ ರಸಕವಳವನ್ನೇ ಮೆದ್ದಂತಾಯಿತು ಸಾರ್..ಒಂದೆರಡು ಬಗೆಯ ಚಟ್ನಿ ಯ ರೆಸಿಪುಯೂ ಸಿಕ್ಕಿತು ಧನ್ಯವಾದಗಳು… ಸಾರ್
ಧನ್ಯವಾದ ಮೇಡಂ. ನಿಮ್ಮಂಥ ಅನುಭವಸ್ಥರ ಮುಂದೆ ನನ್ನದೇನು………
ಇದು ನಿಮ್ಮ ಅಭಿಮಾನ ಮತ್ತು ಗೌರವಗಳ ದ್ಯೋತಕ. ನಿಮಗೆ ಖುಷಿ
ಕೊಟ್ಟರೆ ಬರೆಹ ಸಾರ್ಥಕ. ಪ್ರಣಾಮಗಳು.
ವಿಭಿನ್ನ, ಲೇಖನ
ಧನ್ಯವಾದ ಮೇಡಂ.
ಚಟ್ನಿಯ ಕುರಿತಾಗಿಯೂ ಇಷ್ಟೊಂದು ವಿಚಾರಗಳನ್ನು ಬರೆಯಲು ಸಾಧ್ಯವಾದದ್ಧು ಬಹುಶಃ ಒರಳುಕಲ್ಲಿನಲ್ಲಿ ರುಬ್ಬಿದ ಚಟ್ನಿಯನ್ನು ಸದಾ ಸವಿಯುತ್ತಿರುವುದೇ ಕಾರಣವೇನೋ ಎಂಬುದು ನನ್ನ ಬಲವಾದ ಅನಿಸಿಕೆ.
ನಿಮ್ಮ ಬಲವಾದ ಅನಿಸಿಕೆಯು ನೂರಕ್ಕೆ ನೂರು
ಸರಿ. ಒರಳುಕಲ್ಲು ನಮ್ಮ ಪಾಲಿಗೆ ಬರೀ ಕಲ್ಲಲ್ಲ; ಸ್ವರ್ಗೀಯ ಸಂತಸ.
ಕುವೆಂಪು ನೆನಪಾಗುವರು:
“ಚೇತನಮೂರ್ತಿಯು ಆ ಕಲ್ಲು!
ತೆಗೆ, ಜಡವೆಂಬುದು ಬರಿ ಸುಳ್ಳು !!”
ನಿಮ್ಮ ಹೃದಯ ಸ್ಪಂದನೆಯ ಮಾತುಗಳಿಂದ ನನಗೀಗ
ಹೊಸದೊಂದು ಹೊಳಹು ಸ್ಫುರಿಸಿತು.
ಅಂದ ಹಾಗೆ, ಒರಳಿನ ಬಗ್ಗೆಯೇ ಬರೆದರೆ ಹೇಗೆ!?
-ಧನ್ಯವಾದಗಳು ಮೇಡಂ
ಹೌದಲ್ಲಾ, ಒರಳು ಕಲ್ಲಿನ ಕುರಿತಾಗಿಯೂ ಲೇಖನ ಹೊರಹೊಮ್ಮಿದರೆ ನೂರೆಂಟು ನೆನಪುಗಳು ಮುನ್ನೆಲೆಗೆ ಬರನಹುದು.
ಚಟ್ಣಿಯ ರಸದೌತಣ ನೀಡುತ್ತಾ, ಒರಳು ಕಲ್ಲಿನಲ್ಲಿ ರುಬ್ಬಿದ ಚಟ್ಣಿಯ ಗುಣ ವಿಶೇಷಗಳನ್ನು ಹೊಗಳುತ್ತಾ ಸಾಗಿದ ಚಟ್ಣಿ ಪುರಾಣ ಪೊಗದಸ್ತಾಗಿದೆ!
ಧನ್ಯವಾದಗಳು ಮೇಡಂ, ಚಟ್ನಿಯ ಗುಣವಿಶೇಷಗಳು ತುಂಬಾನೇ ಇವೆ. ಲೇಖನವನ್ನು ಲಂಬಿಸಬಾರದೆಂದು
ಸ್ವಯಂ ನಿಯಂತ್ರಣ ಹಾಕಿಕೊಂಡೆ ! ನಡೆದಷ್ಟೂ ದಾರಿ; ಬರೆದಷ್ಟೂ ನೆನಹು !! ಅಲ್ಲವೇ.
ರುಚಿಕರ ಚಟ್ನಿಯನ್ನು ರುಚಿಕರ ಜೀವನಕ್ಕೆ ಸ್ವಾರಸ್ಯಕರವಾಗಿ ಸಮೀಕರಿಸಿರುವ ನಿಮ್ಮ ಲೇಖನ ಖುಷಿಯ ಪಂಚ್ ನೀಡಿದೆ.. ಧನ್ಯವಾದಗಳು
ಈ ಲೇಖನವು ಎಲ್ಲರ ಬಾಲ್ಯಕ್ಕೆ ಹತ್ತಿರವಾದದ್ದು.
ಲೇಖನವನ್ನು ಕಣ್ಣಾಡಿಸುತ್ತಿರುವಾಗ. ನಮ್ಮ ಬಾಲ್ಯವು ಕಣ್ಣ ಮುಂದೆ ನೆನಪಿಸುವಂತಿತ್ತು. ಧನ್ಯವಾದಗಳು…
ಹೌದೇ ಸರ್. ನಿಮ್ಮ ಬಾಲ್ಯವನ್ನು ನೆನಪಿಸಿದರೆ ಸಾಕು, ಅಲ್ಲಿಗೆ ಬರೆಹದ ಆಶಯಕೊಂದು ಅರ್ಥವಂತಿಕೆ.
ನೆನಪುಗಳ ವಿಚಾರದಲಿ ಎಲ್ಲರೂ ಸಿರಿವಂತರೇ!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಒರಳುಕಲ್ಲಿನ ಚಟ್ನಿಯಂತೆಯೇ ಬಹಳ ‘ರುಚಿಯಾದ’ ಬರಹ… !
ಧನ್ಯವಾದಗಳು ಮೇಡಂ, ಪ್ರಕಟಿಸಿದ್ದಕ್ಕೆ ನಾನು ಆಭಾರಿ, ಪ್ರತಿ ಬಾರಿ
ಮೆಚ್ಚುಮಾತಿಗೆ ನನ್ನ ವಂದನೆ.
ಸುರಹೊನ್ನೆಯಿಂದಾಗಿ ಅದರ ರುಚಿ ಹೆಚ್ಚಾಗಿದೆ, ಇದು ಸತ್ಯ.
ಸಾಹಿತ್ಯ ವನ್ನೂ ಪಾಕಶಾಸ್ರವನ್ನೂ ಬೆಸೆದು ನಿರೂಪಿಸುವ ನಿಮ್ಮ ಬರಹದ ಶೈಲಿ ವಿಶಿಷ್ಟ. ವಿಭಿನ್ನ.
ಕೆಲವೊಂದು ಅನುಭವಗಳು ಹಾಗೇನೇ sir
ಸುಂದರ ಲೇಖನ. ನನಗೂ ಚಟ್ನಿ ಅಂದರೆ ಇಷ್ಡ. ಉಪ್ಪಿಟ್ಟಿಗೆ ತಿಳಿಸಾರಿಗೆ ಪೊಂಗಲ್ಗೆ ಚಿತ್ರಾನ್ನಕ್ಕೆ ಸಹ ಒಳ್ಳೇ ಸಾಥ್ .