ಕಾದಂಬರಿ : ತಾಯಿ – ಪುಟ 12
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಂಗಳವಾರ ಚಂದ್ರಮೋಹನದಾಸ್ ದಂಪತಿಗಳು 10 ಗಂಟೆಗೆಲ್ಲಾ ಆಶ್ರಮದಲ್ಲಿದ್ದರು. ಆಶ್ರಮದ ಮುಂದೆ ಕಸ ತುಂಬಿತ್ತು. ಒಳಗಡೆಯೂ ಕೂಡ ಮೂಲೆ ಮೂಲೆಯಲ್ಲಿ ಕಸವಿತ್ತು. ಅಲ್ಲಿದ್ದ ಹೆಂಗಸರು ಬಹಳ ಮಂದಿ ಹರಿದ ಸೀರೆ ಉಟ್ಟಿದ್ದರು. ಚಂದ್ರಮೋಹನದಾಸ್‌ನ ನೋಡಿ ಕೆಲವರು ಕೈ ಮುಗಿದರು.
“ತಿಂಡಿ ಆಯ್ತಾ?”
“ಒಂದೊಂದು ಬನ್ ಕೊಟ್ಟು ಅರ್ಧ ಕಪ್ ಟೀ ಕೊಟ್ಟರು. ನಮ್ಮ ಹೊಟ್ಟೆ ತುಂಬುತ್ತಾ ನೀವೇ ಹೇಳಿ.”
“ನಾನು ನಿಮ್ಮೆಲ್ಲರ ಹತ್ತಿರ ಮಾತಾಡಬೇಕು. ಆಫೀಸ್ ರೂಂಗೆ ಬನ್ನಿ.”
“ಎಲ್ಲರೂ ಬರಬೇಕಾ?”
“ಧೈರ್ಯವಾಗಿ ಮಾತನಾಡುವ 5 ಜನ ಬಂದರೆ ಸಾಕು.”
“ಸರಿ ಬರ‍್ತೀವಿ.”
“ಹಾಗೆ ಅಡಿಗೆಯವರನ್ನು ಕರೆಯಿರಿ.”
“ಅಡಿಗೆಯವರು ಬಿಟ್ಟುಹೋಗಿ ತುಂಬಾ ದಿನಗಳಾದವು. ಹೊರಗಡೆಯಿಂದ ಊಟ ತಿಂಡಿ ಬರತ್ತೆ.”
“ಊಟ, ತಿಂಡಿ ಚೆನ್ನಾಗಿರತ್ತಾ?”
“ಸರ್, ನೀವು ಆಫೀಸ್‌ರೂಂನಲ್ಲಿ ಕೂತ್ಕೊಳ್ಳಿ. ನಾವು ಐದು ಜನ ಬಂದು ಎಲ್ಲಾ ಹೇಳ್ತೀವಿ” ನಾಗಮ್ಮ ಹೇಳಿದರು.
“ನಾನು ಒಂದು ರೌಂಡ್ ಹೋಗಿ ಬರ‍್ತೀನಿ” ಎಂದು ಮಾಧುರಿ ಆಶ್ರಮದ ಒಳಗೆ ಹೋದರು.
ಚಂದ್ರಮೋಹನ್‌ದಾಸ್ ಆಫೀಸ್‌ರೂಂ ಪ್ರವೇಶಿಸಿ ಕುಳಿತರು. ಹತ್ತು ನಿಮಿಷಗಳಲ್ಲಿ ಮಾಧುರಿ ವಾಪಸ್ಸು ಬಂದರು. “ಚಂದ್ರ, ತುಂಬಾ ಕೊಳಕಾಗಿದೆ. ವಾಷ್‌ರೂಂ, ಟಾಯ್ಲೆಟ್ ಹತ್ತಿರ ಸುಳಿಯುವ ಹಾಗೇ ಇಲ್ಲ. ಜಾರಿಕೇಂದ್ರೆ ಜಾರಿಕೆ ಜೊತೆಗೆ ವಾಸನೆ….”
ಅಷ್ಟರಲ್ಲಿ ನಾಗಮ್ಮ ನಾಲ್ಕು ಜನರ ಜೊತೆ ಅವರ ಎದುರು ನೆಲದ ಮೇಲೆ ಕುಳಿತರು.
“ಸ್ವಾಮಿ, ನನಗೀಗ 70 ವರ್ಷ. ನಾನು ನಿಮ್ಮ ತಂದೆಯವರ ಕಾಲದಿಂದ ಇಲ್ಲಿದ್ದೀನಿ. ಸೀನಪ್ಪ ಇದ್ದಾಗ ಹೊಟ್ಟೆ ತುಂಬಾ ಊಟ, ತಿಂಡಿ, ಮೈ ತುಂಬಾ ಬಟ್ಟೆ, ಹೊತ್ತು ಹೊತ್ತಿಗೆ ಕಾಫಿ, ಸೋಪು, ಕೊಬ್ಬರಿ ಎಣ್ಣೆ, ಬಾಚಣಿಗೆ ಎಲ್ಲಾ ಕೊಡ್ತಿದ್ರು. ಈಗ ಏನೂ ಇಲ್ಲ….” ಸದ್ದಕ್ಕ ಹೇಳಿದರು.
“ಸ್ವಾಮಿ ತಿಂಡಿ, ಊಟ ಹೊರಗಿಂದ ಬರತ್ತೆ. ಇಡ್ಲಿ, ದೋಸೆ ಎರಡೆರಡು ಕೊಡ್ತಾರೆ. ಉಪ್ಪಿಟ್ಟು, ಶಾವಿಗೆ, ಬ್ರೆಡ್ ಅಥವಾ ಬನ್ ಕೊಡ್ತಾರೆ. ರುಚಿ-ಶುಚಿ ಏನೂ ಇರಲ್ಲ. ಹೊಟ್ಟೆ ತುಂಬೋದೂ ಇಲ್ಲ” ಜಯಮ್ಮ ಹೇಳಿದರು.
“ಬೆಳಿಗ್ಗೆ ತಿಂಡಿ ಜೊತೆ ಕಾಫಿ ಕೊಡ್ತಾರೆ. ಪುನಃ ಕಾಫಿ ಮುಖ ನೋಡೋದು ಮಾರನೆಯ ದಿನ ಬೆಳಿಗ್ಗೇನೆ. ತಲೆನೋವು ಜ್ವರಾಂದ್ರೂ ಮಾತ್ರೆ ಕೊಡಲ್ಲ.”
“ವಾರಕ್ಕೊಂದು ಸಲ ಡಾಕ್ಟರ್ ಬರಲ್ವಾ?” ಮಾಧುರಿ ಕೇಳಿದರು.
“ಡಾಕ್ಟರ್ ಮುಖ ನೋಡಿ 3 ವರ್ಷವಾಯ್ತು. ನಮ್ಮ ಜೊತೆ ಇದ್ದಾಳಲ್ಲಾ ಬೈರಮ್ಮ ಆಸ್ಥಮಾದಿಂದ ನರಳ್ತಿದ್ದಳು. ಆಗಲೂ ಡಾಕ್ಟರನ್ನು ಕರೆಸಲಿಲ್ಲ. ಅವಳು ನರಳಿ ನರಳಿ ಇಲ್ಲೇ ಸತ್ತು ಹೋದಳು.”
“ನೀಲಕಂಠ ಏನೂ ಮಾಡಲಿಲ್ಲವಾ?”
“ಏನೂ ಮಾಡಲಿಲ್ಲ.”
“ಏನು ಮಾಡ್ತಾರೆ. ಭೈರಮ್ಮ ಸತ್ತಾಗ ನಾವು ಅತ್ತಿದ್ದಕ್ಕೆ “ಯಾಕೆ ಹೀಗೆ ಬಡ್ಕೋತಿದ್ದೀರಾ? ಪೀಡೆ ತೊಲಿಗಿತೂಂತ ಸುಮ್ಮನಿರಕ್ಕೆ ಆಗಲ್ವಾ?” ಅಂತ ಬೈದರು.”
“ಸೀರೆ, ಬ್ಲೌಸ್ ಹರಿದುಹೋಗ್ತಿವೆ. ಯಾರೋ ಪುಣ್ಯಾತ್ಮರು ಸೀರೆ ಹಂಚಕ್ಕೆ ಬಂದಿದ್ರು. ನೀಲಕಂಠಪ್ಪನೇ ನಿಂತು ಹಂಚಿದರು. ಆಮೇಲೆ ಆ ಬ್ಯಾಗ್ ಇಲ್ಲವೇ ಇಲ್ಲ. ಯಾರು ತೊಗೊಂಡು ಹೋದರೋ ಗೊತ್ತಾಗಲಿಲ್ಲ.”
“ನಾವು ಏನು ಕೇಳಿದರೂ ಬೈತಾರೆ. ನೀವಾದರೂ ನಮಗೆ ಅನುಕೂಲ ಮಾಡಿಕೊಡಿ” ಸ್ವಾಮಿ ವಿಷ ತೊಗೋಳಕ್ಕೂ ನಮ್ಮ ಹತ್ರ ಕಾಸಿಲ್ಲ. ದಿನ ಬೆಳಗಾದರೆ ನೀಲಕಂಠಪ್ಪ ಸಿಕ್ಕಾಪಟ್ಟೆ ಬೈತಾರೆ.”
“ಕೆಲಸದವರಿಲ್ಲ. ನಾವೇ ಕಸಗುಡಿಸಬೇಕು. ಪಾತ್ರೆ ತೊಳೆಯಬೇಕು. ಜಾಡಮಾಲೀನೂ ಬರಲ್ಲ. ಬಿಸಿನೀರು ಸ್ನಾನಕ್ಕೆ ಕೊಡಲ್ಲ. ನೀವೇ ದಾರಿ ತೋರಿಸಿ.”
“ಆಗಲಿ ನಾನು ವಿಚಾರಿಸ್ತೇನೆ. ಒಂದು ವೇಳೆ ನಾನು ನಿಮ್ಮನ್ನು ಚೆನ್ನಾಗಿರುವ ವೃದ್ಧಾಶ್ರಮಕ್ಕೆ ಕಳಿಸಿದರೆ ನೀವು ಹೋಗ್ತೀರ.”
“ನೀವು ಒಪ್ಪಿ ಕಳುಹಿಸಿದ್ರೆ ಖಂಡಿತಾ ಹೋಗ್ತೀವಿ” ಎಂದರು ಪ್ರೇಮಮ್ಮ.
“ಸ್ವಾಮಿ ಸೀನಪ್ಪ ಇದ್ದಾಗ ನಮಗೆ ಪ್ರತಿ ಶನಿವಾರ, ಭಾನುವಾರ ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳ್ತಿದ್ರು. ಒಬ್ರು ಮೇಷ್ಟ್ರು ಬಂದು ಆಸಕ್ತಿ ಇರುವವರಿಗೆ ಅಕ್ಷರ ಕಲಿಸ್ತಿದ್ರು. ನಾವೆಲ್ಲಾ ಓದು ಬರಹ ಕಲಿತಿದ್ದು ಅವರ ಕಾಲದಲ್ಲೇ. ಈಗ ಕಲಿತಿದ್ದನ್ನು ಮರೆಯುತ್ತಿದ್ದೇವೆ” ಗಿರಿಜಮ್ಮ ಹೇಳಿದರು.
“ಯಾಕೆ ಮರೆಯಬೇಕು? ಎರಡು ಕನ್ನಡ ಪೇಪರ್ ತರಿಸ್ತಿದ್ದೀವಲ್ಲಾ…. ಅದನ್ನು ಓದಿ.”
“ಪೇಪರ್ ತರಿಸ್ತಿಲ್ಲ ಸರ್. ನಾವು ತುಂಬಾ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಹೋಗಕ್ಕೆ ಬೇರೆ ಜಾಗವಿಲ್ಲ. ಇಲ್ಲಿ ಇರುವುದಕ್ಕೆ ಆಗ್ತಿಲ್ಲ. ನೀಲಕಂಠ ಏನು ಬೈದರೂ ಬೈಸಿಕೊಂಡು, ಅರೆಹೊಟ್ಟೆ ತಿನ್ನುವ ಪರಿಸ್ಥಿತಿ. ಈ ವಯಸ್ಸಿನಲ್ಲಿ ನಮಗೆ ಯಾರೂ ಏನು ಕೆಲಸಾನೂ ಕೊಡಲ್ಲ. ನಾವು ಏನು ಮಾಡಬೇಕು ನೀವೇ ಹೇಳೀಪ್ಪ” ಅಳುತ್ತಾ ಹೇಳಿದರು ಪ್ರೇಮಮ್ಮ.
“ನೋಡಿ ನಿಮ್ಮ ತೊಂದರೆಗಳೆಲ್ಲಾ ಖಂಡಿತಾ ಪರಿಹಾರವಾಗತ್ತೆ. ನಾನು ಭರವಸೆ ಕೊಡ್ತೀನಿ. ನೀವು ಹೊರಡಿ. ನೀಲಕಂಠನ್ನ ವಿಚಾರಿಸಬೇಕಾಗಿದೆ.”
ಸುಮಾರು 11.30ರ ಹೊತ್ತಿಗೆ ನೀಲಕಂಠ ಬಂದವನು ಚಂದ್ರಮೋಹನ್ ದಂಪತಿಗಳನ್ನು ನೋಡಿ ಗಾಬರಿಯಿಂದ ಕೇಳಿದ.
“ಸರ್, ನೀವು ಯಾವಾಗ ಬಂದ್ರಿ?”
“ಹತ್ತು ಗಂಟೆಗೇ ಬಂದೆವು. ಬೇಗ ಬಂದಿದ್ದರಿಂದ ಇಲ್ಲಿಯ ವಿಚಾರ ತಿಳಿಯಿತು.”
“ಸರ್………..”
“ಇದೇನು ವೃದ್ಧಾಶ್ರಮಾನೋ ಕೊಚ್ಚೆಗುಂಡೀನೋ? ಒಳಗೆ ಕಾಲಿಡಕ್ಕಾಗ್ತಿಲ್ಲ. ಅಷ್ಟು ಗಲೀಜು, ವಾಸನೆ, ವಾಷ್‌ರೂಮ್, ಟಾಯ್ಲೆಟ್‌ನಲ್ಲಿ ಕಾಲಿಟ್ಟರೆ ಜಾರತ್ತೆ. ವಯಸ್ಸಾದವರು ಬಿದ್ದು ಕೈ, ಕಾಲು ಮುರಿದುಕೊಂಡರೆ ಯಾರು ಹೊಣೆ?” ಮಯೂರಿ ಕೂಗಾಡಿದರು.
“ಮೇಡಂ, ಕೆಲಸದವರು ಬಂದಿಲ್ಲ. ಅದಕ್ಕೆ………….”
“ಕೆಲಸದವರು ಇದ್ದರಲ್ವಾ ಬರುವುದಕ್ಕೆ? ನಾವು ನಿಮ್ಮನ್ನು ನಂಬಿದ್ದಕ್ಕೆ ಒಳ್ಳೆ ಪಾಠ ಕಲಿಸಿದ್ರಿ. ಅಡಿಗೆಯವರು ಎಲ್ಲಿ?”
“ಅದೂ…………”
“ಅಡಿಗೆಯವರಿಲ್ಲ. ಹೊರಗಿನಿಂದ ಮಾಡಿಸಿ ತರಿಸ್ತಿದ್ದೀರ. ಊಟ, ತಿಂಡಿ ಸರಿಯಾಗಿ ಕೊಡ್ತಿಲ್ಲ. ಕಾಫಿ ದಿನಕ್ಕೊಂದು ಸಲ ಇವತ್ತಿನ ತಿಂಡಿ ಒಂದೊಂದು ಬನ್, ಹೊಟ್ಟೆ ತುಂಬತ್ತೇನ್ರಿ?”
“ಹಾಗಲ್ಲ ಸರ್.”
“ನಿಮ್ಮ ಬಗ್ಗೆ ವೃದ್ಧಾಶ್ರಮದವರು ಎಲ್ಲಾ ಹೇಳಿದ್ದಾರೆ. ಮನುಷ್ಯನಿಗೆ ಇಷ್ಟೊಂದು ದುರಾಸೆ ಇರಬಾರದು. ನಾವು ಕೊಟ್ಟ ಹಣವನ್ನೆಲ್ಲಾ ಏನ್ರಿ ಮಾಡಿದ್ರಿ?”
ನೀಲಕಂಠ ಉತ್ತರಿಸಲಿಲ್ಲ.
“ನೋಡಿ ಇವತ್ತು ಮಧ್ಯಾಹ್ನ ಆಡಿಟರ‍್ಸ್ ಬರ‍್ತಾರೆ. ನಿಮ್ಮ ಅಕೌಂಟ್ಸ್ ಕೊಡಿ. ಚೆಕ್ ಮಾಡ್ತಾರೆ. ಅವರು ಬರುವುದರೊಳಗೆ ಮನೆ ಕ್ಲೀನ್ ಆಗಬೇಕು. ಮಧ್ಯಾಹ್ನ ಊಟ ಚೆನ್ನಾಗಿರಬೇಕು. ನಾವು ಸಾಯಂಕಾಲ 5 ಗಂಟೆಗೆ ಬರ‍್ತೀವಿ. ಎಲ್ಲರಿಗೂ ಏನಾದ್ರೂ ತಿಂಡಿ ಮಾಡಿಸಿ.”
“ಆಗಲಿ ಸರ್.”
“ನಮ್ಮ ಹಣಕ್ಕೆ ಲೆಕ್ಕ ಇಟ್ಟಿದ್ದೀರಾ ತಾನೆ?”
“ಹೌದು ಸರ್.”
“ಆ ಅಕೌಂಟ್ ಬುಕ್ಸ್ ತಂದುಕೊಡಿ. ನಮ್ಮ ಆಡೀರ‍್ಸ್ ಎರಡು ಗಂಟೆ ಹೊತ್ತಿಗೆ ರ‍್ತಾರೆ.”
“ಆಗಲಿ ಸರ್” ಎಂದ ನೀಲಕಂಠ ಸೋತಧ್ವನಿಯಲ್ಲಿ.
ಆಶ್ರಮದಿಂದ ಹೊರಬರುತ್ತಿದ್ದಂತೆ ಮಯೂರಿ ಕೇಳಿದಳು. “ಈಗ ಎಲ್ಲಿಗೆ ಹೋಗೋಣ?”
“ಹೋಟೆಲ್ ಪ್ಯಾರಡೈಸ್‌ಗೆ ಹೋಗಿ ಊಟ ಮಾಡಿ, ರೆಸ್ಟ್ ತೆಗೆದುಕೊಂಡು ಐದು ಗಂಟೆಗೆ ವಾಪಸ್ಸು ಬರೋಣ.”
“ಪ್ಯಾರಡೈಸ್‌ನಲ್ಲೇ ರೂಮ್ ಬುಕ್ ಮಾಡಿದ್ದೀರಾ?”
“ಹೌದು. ಈ ಆಶ್ರಮದ ಸ್ಥಿತಿ-ಗತಿ ನೋಡಿಕೊಂಡು ಗೌರಮ್ಮನ ಕಡೆಯವರನ್ನು ಭೇಟಿ ಮಾಡೋಣ.”
“ನೀಲಕಂಠ ಇನ್ನು ಮುಂದೆ ಸರಿಯಾಗರ‍್ತೀನಿ ಸರ್” ಅಂದ್ರೆ ಒಪ್ಪಿಕೊಂಡು ಬಿಡ್ತೀರಾ?”
“ನೆವರ್. ನನಗೆ ಈ ವೃದ್ಧಾಶ್ರಮದ ತಂಟೇನೇ ಬೇಡ ಅನ್ನಿಸ್ತಿದೆ. ಈ ಆಶ್ರಮದಲ್ಲಿರುವವರನ್ನು ಬೇರೆ ಕಡೆಗೆ ಕಳಿಸಿ, ಮನೆ ಮಾರಿಬಿಟ್ಟರೆ ನನ್ನ ಮನಸ್ಸಿಗೆ ನೆಮ್ಮದಿ.”
“ಮಾವ ಇದಕ್ಕೆ ಒಪ್ತಾರಾ?”
“ಒಪ್ಪಿಸಬೇಕು. ನೋಡೋಣ ಏನಾಗುತ್ತದೋ?”
ನೀಲಕಂಠ ಅಡಿಗೆಯವರಿಗೆ ಅನ್ನ, ಸಾಂಬಾರು, ತಿಳಿಸಾರು ಮಜ್ಜಿಗೆ ಕಳಿಸಲು ಫೋನ್ ಮಾಡಿ, ಪರಿಚಯದವರಿಗೆ ಹೇಳಿ ಕಾಂಪೌಂಡ್ ಮನೆ, ಕ್ಲೀನ್ ಮಾಡಿಸಿದ. ಬಸಮ್ಮ ಬಂದು ಟಾಯ್ಲೆಟ್, ಬಚ್ಚಲು ಮನೆಗಳನ್ನು ತೊಳೆದು “ಅಯ್ಯೋ ದೇವ್ರೇ ನಿಮ್ಮ ಬಚ್ಚಲಮನೆ, ಟಾಯ್ಲೆಟ್‌ಗಳನ್ನು ತೊಳೆದು ನನ್ನ ಕೈ ಬಿದ್ದೋಯ್ತು. 2,000 ರೂಪಾಯಿ ಮಡಗಿ ಇಲ್ಲದಿದ್ರೆ ನಾನೇ ಬಂದು ಸಾಹೇಬ್ರನ್ನ ದುಡ್ಡು ಕೇಳ್ತೀನಿ.”
ನೀಲಕಂಠ 2,000 ರೂ. ಕೊಟ್ಟು ಕಳಿಸಿ, ಎಲೆಕ್ಟ್ರಿಷಿಯನ್ ಕರೆದು ಬಚ್ಚಲು ಮನೆಗಳ ಗೀಸರ್‌ಗಳು ಕೆಲಸ ಮಾಡುವ ಹಾಗೆ ಮಾಡಿದ. ಅಂಗಡಿಯಿಂದ ಸೋಪು, ಹಲ್ಲುಪುಡಿ, ಪೇಸ್ಟ್ ತರಿಸಿದ.
“ಎಲ್ಲರೂ ಸ್ನಾನ ಮಾಡಿ ಕ್ಲೀನಾಗಿರುವ ಬಟ್ಟೆ ಹಾಕ್ಕೊಳ್ಳಿ. ಸಾಹೇಬರು ಬಂದಾಗ ನನ್ನ ಮಾನ ಕಳೆಯಬೇಡಿ.”
“ನಿಮ್ಮ ಮಾನ ಎಲ್ಲಿ ಉಳಿದಿದೆ ನೀಲಕಂಠಪ್ಪ. ನಮ್ಮ ಅವತಾರ ನೋಡೇ ಇಲ್ಲಿಯ ಪರಿಸ್ಥಿತಿ ಅರ್ಥವಾಗಿದೆ. ನೀವು ಏನೇ ಮಾಡಿದ್ರೂ ಅವರು ನಿಮ್ಮನ್ನು ನಂಬಲ್ಲ” ಎಂದರು ಪ್ರೇಮಮ್ಮ.
“ತಲೆ ಹರಟೆ ಮಾತಾಡಿದ್ರೆ ಹೊರಗೋಡಿಸ್ತೀವಿ ಹುಷಾರ್.”
“ಮೊದಲು ನಿಮ್ಮ ಕುರ್ಚಿ ಭದ್ರಮಾಡಿಕೊಳ್ಳಿ. ನಮಗೆಲ್ಲಾ ಸರಿಯಾದ ವ್ಯವಸ್ಥೆ ಮಾಡ್ತೀನೀಂತ ಸಾಹೇಬ್ರು ಹೇಳಿದ್ದಾರೆ” ಎಂದರು ಗಿರಿಜಮ್ಮ.
“ಯಾಕೋ ಎಲ್ಲರ ನಾಲಿಗೆ ಉದ್ದವಾದಂತಿದೆ. ಏನು ಬೊಗಳಿದ್ರಿ ಸಾಹೇಬರ ಹತ್ತಿರ?”
“ಏನು ಹೇಳಬೇಕೋ ಅದನ್ನೇ ಹೇಳಿದ್ದೀವಿ. ನೀವು ಸರಿಯಾಗಿದ್ದಿದ್ರೆ ಇಂತಹ ಪರಿಸ್ಥಿತಿ ಬರುತ್ತಿತ್ತಾ?” ಎಂದರು ಮಂಗಳಾಂಬ.
ನೀಲಕಂಠ ತಲೆಯ ಮೇಲೆ ಕೈ ಹೊತ್ತು ಕುಳಿತ. “ವೃದ್ಧಾಶ್ರಮ ಒಂದು ಆಕಾರಕ್ಕೆ ತಂದಾಯಿತು. ಆದರೆ ಅಕೌಂಟ್ಸ್ ಏನು ಮಾಡುವುದು? ರಾಮನಲೆಕ್ಕ ಕೃಷ್ಣನ ಲೆಕ್ಕ ಬರೆಯುವುದಕ್ಕೂ ಟೈಂ ಇಲ್ಲ. ಎರಡುಗಂಟೆಗೆ ಆಡಿಟರ‍್ಸ್ ಬರ‍್ತಾರೆ. ಅವರನ್ನೇ ಸರಿಮಾಡಿಕೊಂಡರೆ ಹೆದರುವ ಸಮಸ್ಯೆ ಎದುರಾಗಲ್ಲ ಅಲ್ಲವಾ? ಎಂದುಕೊಂಡ ಚಂದ್ರಮೋಹನ್‌ಗೆ ಆಸಕ್ತಿ ಇಲ್ಲ ಎಂದು ತಿಳಿದ ಮೇಲೆ ಅವನು ಲೆಕ್ಕ ಬರೆಯುವದನ್ನೇ ಬಿಟ್ಟಿದ್ದ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಬಂದ ಹಣವನ್ನು ಮನಸ್ಸು ಬಂದಂತೆ ಖರ್ಚುಮಾಡಿದ್ದ. ಕುಡಿತ, ಸಿಗರೇಟು, ಇಸ್ಪೀಟ್ ಅಭ್ಯಾಸವಾಗಿತ್ತು. ಹುಡುಗಿಯರಿಗಾಗಿ ಬೆಂಗಳೂರಿಗೂ ಹೋಗಿ ಬರುತ್ತಿದ್ದ ಕಾರು ತೆಗೆದುಕೊಂಡಿದ್ದ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41851
-ಸಿ.ಎನ್. ಮುಕ್ತಾ
ಧಾರಾವಾಹಿ ಎಂದಿನಂತೆ ಓದಿಸಿಕೊಂಡುಹೋಯಿತು ಕೂತೂಹಲವಂತೂ ಉಳಿಸಿಕೊಂಡು ಹೋಗುತ್ತಿದೆ…ಮೇಡಂ
Beautiful
ಧನ್ಯವಾದಗಳು. ಉಚಿತ ವೃದ್ಧಾಶ್ರಮ ಗಳ ಸ್ಥಿತಿ ಹೀಗೆ ಇರುವುದು.
ಉಚಿತ ವೃದ್ಧಾಶ್ರಮದ ಸ್ಥಿತಿಗತಿಯನ್ನು ಯಥಾವತ್ತಾಗಿ ಚಿತ್ರಿಸಿದ ಇಂದಿನ ಪುಟವು ಕುತೂಹಲವನ್ನು ಉಳಿಸಿಕೊಂಡು ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.
ಒಬ್ಬ ಒಳ್ಳೆಯ ನಾಯಕನಿದ್ದರೆ ಎಷ್ಟುಂದು ಒಳ್ಳೆಯ ಕೆಲಸಗಳು ನಡೆಯುತ್ತವೆಯೋ ಹಾಗೆಯೇ ಒಬ್ಬ ದುರಾಸೆಯ ಸ್ವಾರ್ಥ ಮನುಷ್ಯನಿಂದ ಅನಾಹುತಗಳ ಸರಮಾಲೆಯೂ ನಡೆಯಬಹುದೆಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಾ ಸಾಗುತ್ತಿದೆ ಕಾದಂಬರಿ.