ಕಾವ್ಯ ಭಾಗವತ 29: ವೇನನ ಪೃಥು-2

29.ಚತುರ್ಥ ಸ್ಕಂದ
ಅಧ್ಯಾಯ – 3
ವೇನನ – ಪೃಥು – 2
ದುಷ್ಟ ರಾಜನ ನಿಗ್ರಹದಿಂ
ಅನಾಯಕ ರಾಜ್ಯದಲಿ
ಹೆಚ್ಚುತಿಹ ಉತ್ಪಾತವ
ನಿಯಂತ್ರಿಸಲು
ಮತ್ತೆ ಪ್ರಾರಂಭ ಹುಡುಕಾಟ
ವೇದಜ್ಞ ಬ್ರಾಹ್ಮಣರು, ಮಹರ್ಷಿಗಳು
ತಂತ್ರಶಕ್ತಿಯಿಂ ರಕ್ಷಿಸಲ್ಪಟ್ಟ
ವೇನನನ ಶವದ
ಎಡತೊಡೆಯಂ ಮಥಿಸಿ
ಮಂತ್ರೋಕ್ತ ವಿಧಾನದಿಂ
ಉದ್ಭವಿಸಿದ
ಭಯಂಕರ ರೂಪಿಯ
ವೇನನ ವ್ಯಕ್ತಿತ್ವದಲ್ಲಿದ್ದ
ಪಾಪ ರೂಪಿಯ ಕಂಡು
ಅವನನ್ನು ನಿಗ್ರಹಿಸಿ
ಸುಮ್ಮನಾಗಿಸಿ,
ಮತ್ತೆ ವೇನನನ ಶವದಿಂ
ಎಡ ಬಲ ತೋಳುಗಳ
ಮಥಿಸಿ
ಉದ್ಭವಿಸಿದ
ಪುರುಷ, ಸ್ತ್ರೀ ರೂಪಿ
ದೇಹ ಧರಿಸಿದ
ಮಹಾವಿಷ್ಣು, ಲಕ್ಷ್ಮಿಯರ
ಅಂಗಜರೆಂದು ತಿಳಿದ
ಮಹರ್ಷಿಗಳು, ಬ್ರಾಹ್ಮಣರು
ಲೋಕ ಕಲ್ಯಾಣಕ್ಕಾಗಿ
ಉದ್ಭವಿಸಿದ
ಪೃಥು, ಅವನ ಪತ್ನಿ ಅರ್ಜಿಗೆ
ಬ್ರಹ್ಮ ಸನ್ನಿಧಿಯಲ್ಲಿ
ರಾಜ್ಯಾಭಿಷೇಕವಾಗಿ,
ಪೃಥು,
ಪೃಥು ಚಕ್ರವರ್ತಿಯಾದ
ಪರಿ
ಆ ಜಗದುದ್ಧಾರಕನು
ಧರ್ಮನಷ್ಟವಾಗುತಿರ್ಪ
ಈ ಜಗವ, ಉದ್ಧರಿಸಲು
ಸ್ವತಃ, ತನ್ನದೇ ಒಂದಂಶದಿಂ
ಪೃಥುವನು ಸೃಷ್ಟಿಸಿ,
ವರ್ಗಾಶ್ರಮವನ್ನಾಚರಿಸಿ
ದುಷ್ಟಶಿಕ್ಷಣ,
ಶಿಷ್ಟರಕ್ಷಣೆಗೈದ ಪರಿ
ಅನನ್ಯ.
ಭುವಿಯಲ್ಲಿ ಬಿತ್ತ ಬೀಜ
ಮೊಳಕೆಯೊಡೆಯದೆ
ಭೂಮಿಯಲ್ಲೇ ಉಳಿದರೆ
ಜಗದ ಹಸಿವು ನೀಗುವುದೆಂತು?
ಈ ಜಗದ ದುಷ್ಟ ಪಾಲಕರ
ನೀಚತನಕೆ ಬೇಸತ್ತು
ಉತ್ತ ಬೀಜವ ನುಂಗಿ,
ಗಿಡಗಂಟೆ ಮರಗಳಿಲ್ಲದ
ಬೆಂಗಾಡಾಗಿ ಮಾಡ ಹೊರಟ
ಈ ಧರೆಯ, ಭೂಮಿತಾಯಿಯ,
ಮೇಲೆ ಮುನಿಸಿಕೊಂಡರೂ,
ಗೋರೂಪಿನಿಂದ ಬಂದ
ಅವಳ ಸಂತೈಸಿ, ದುಷ್ಟರ ಶಿಕ್ಷಿಸಿ,
ಭೂಭಾರವನ್ನಿಳಿಸಿ,
ಮತ್ತೆ , ಭೂಮಿಯ ನಂದನವನವನ್ನಾಗಿಸಿದ
ಪೃಥುವಿನ ಕೊಡುಗೆ,
ಅನನ್ಯ! ಈ ಜಗಕೆ ನವಚೇತನ!
ತನ್ನೆಲ್ಲ ಲೋಕ ಕಲ್ಯಾಣ ಕಾರ್ಯ ಮುಗಿಸಿ
ವೃದ್ಧನಾದ ಪೃಥು
ವಾನಪ್ರಸ್ಥಾಶ್ರಮದ ಧರ್ಮವ ನಿಷ್ಟೆಯಿಂದ ಪಾಲಿಸುತ
ಯೋಗಮಾರ್ಗವನನ್ನನುಸರಿಸಿ
ತನ್ನ ಪ್ರಾಣವಾಯುವನ್ನು
ಮಹಾವಾಯುವಿನೊಡನೆ ಬೆರೆಸಿ
ತನ್ನೆಲ್ಲ ಅಂಶಗಳ,
ಪಂಚಭೂತಗಳಲ್ಲಿ ಬೆರೆಸಿ
ಆತ್ಮತೇಜವು
ದೇಹ ಪಂಜರದಿಂ ನಿರ್ಗಮಿಸಿ,
ಮುಕ್ತನಾದ ಪೃಥುವವನ್ನನುಸರಿಸಿ
ಪತ್ನಿ, ಅರ್ಜಿ
ಪತಿಯ ಚಿತೆಯನ್ನೇರಿ
ಸಹಗಮಿಸಿದಳ್
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41809
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯಭಾಗವತ.. ಬಹಳ ಚೆನ್ನಾಗಿ ಮೂಡಿಬರುತ್ತಿದೆ..
ಚೆನ್ನಾಗಿದೆ
ವೇನನ ಪೃಥು ಕಾವ್ಯ ಭಾಗವತವು ಚೆನ್ನಾಗಿದೆ ಸರ್.
ಪೃಥು ಮತ್ತು ಅರ್ಜಿಯ ಜೀವನದ ಸಾರವನ್ನು ತಿಳಿಸಿಕೊಡುವ ಕಾವ್ಯ ಭಾಗವತದ ಈ ಭಾಗವೂ ರಸವತ್ತಾಗಿ ಮೂಡಿ ಬಂದಿದೆ.