ಭಾವದಂತೆಭವ !

Share Button

ಈಗೀಗ ವ್ಯಕ್ತಿತ್ವ ವಿಕಸನ ತರಬೇತುದಾರರು ನೆಗಟೀವ್ ಅಲ್ಲದ ಮತ್ತು ಪಾಸಿಟೀವ್ ಅಲ್ಲದ ಯಥಾಸ್ಥಿತಿಯ ಅವಲೋಕನ ಅಂದರೆ ಅಸರ್ಟಿವ್ ಚಿಂತನೆಯತ್ತ ಆಸಕ್ತಿ ತೋರುತ್ತಿದ್ದಾರೆ; ಅಸರ್ಟಿವ್ ಥಿಂಕಿಂಗ್ ಅನ್ನು ಪ್ರತಿಪಾದಿಸುತ್ತಿದ್ದಾರೆ. ಅಂದರೆ ಒಂದು ವಸ್ತು ಹೇಗಿದೆಯೋ ಹಾಗೆ, ಒಬ್ಬ ವ್ಯಕ್ತಿ ಹೇಗಿದ್ದಾರೋ ಹಾಗೆ ನೋಡುವ ದೃಷ್ಟಿ. ನಮ್ಮ ಭಾವನೆ ಮತ್ತು ಅನಿಸಿಕೆಗಳನ್ನು ಹೇರದೇ ಜಗತ್ತನ್ನು ಕಾಣುವ ಪ್ರಬುದ್ಧತೆ. ಇದು ಕಷ್ಟವಾದರೂ ಸಾಧ್ಯ. ಈ ವಸ್ತು ಮತ್ತು ವ್ಯಕ್ತಿ ಸಂಬಂಧಿತ ಯಥಾಸ್ಥಿತಿ ಪ್ರಜ್ಞೆಯು ನಮ್ಮಲ್ಲಿದ್ದಷ್ಟು ನಮ್ಮ ಆರನೆಯ ಇಂದ್ರಿಯವು ಹೆಚ್ಚು ಜಾಗೃತಗೊಳ್ಳುತ್ತದೆ.

‘ಯದ್ಭಾವಂ ತದ್ಭವತಿ’ ನಮ್ಮ ಭಾವ ವಿಭಾವಗಳು ಹೇಗೋ ಹಾಗೆಯೇ ಕಾಣುವುದೀ ಲೋಕ ಎಂಬ ಮಾತಿದೆ. ನಮ್ಮ ದೃಷ್ಟಿಯಂತೆ ಸೃಷ್ಟಿ! ಭಾವನೆಗಳು ಬದಲಾದರೆ ಬದುಕು ಬದಲಾದಂತೆ ಎಂಬ ಆಲೋಚನೆಯೂ ಇದರ ಅಂತರಾಳದಲ್ಲಿದೆ. ಯಥಾದೃಷ್ಟಿ; ತಥಾಸೃಷ್ಟಿ. ಆಲೋಚನೆಗನುಗುಣವಾಗಿ ಭಾವನೆ; ಭಾವನೆಗಳಿಗನುಗುಣವಾಗಿ ಆಲೋಚನೆ. ಯಾವುದು ಮೊದಲು ಯಾವುದು ನಂತರ ಎಂಬುದು ಅವರವರಿಗನುಸಾರ! ಇದು ನಂನಮ್ಮ ಮನೋಮಾನ, ವಯೋಮಾನ ಮತ್ತು ಕಾಲಮಾನಗಳಿಗನುಗುಣ; ಎದುರಾದ ಪ್ರಸಂಗ ಪರಿಸ್ಥಿತಿ ವಾತಾವರಣ!! ‘ಕಳ್ಳನ ಜಾಡನು ಕಳ್ಳನೇ ಬಲ್ಲ’ ಎಂಬ ಜಾಣ್ನುಡಿಯಿದೆ. ಮಾಟಮಂತ್ರಗಳೆಂಬ ವಾಮಾಚಾರವನ್ನು ನಂಬುವ ಮನಸಿಗೆ ತಮಗೆ ಯಾರೋ ಮಾಟ ಮಾಡಿಸಿದ್ದಾರೆಂಬ ಗುಮಾನಿ. ಶೀಲದ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡವರಿಗೆ ಇತರರು ನಡತೆಗೆಟ್ಟಿದ್ದಾರೆಂದೇ ಅನಿಸಲು ಶುರು. ನಮ್ಮ ತಪ್ಪುಗಳು ಹೆಚ್ಚಾದಾಗ ಇನ್ನೊಬ್ಬರ ತಪ್ಪುಗಳನ್ನು ಹುಡುಕಲು ‘ಹೊರಡಾಟ!’ (ಹೊರಡು + ಆಟ) ತಪ್ಪೆಂದು ಗೊತ್ತಾದ ಮೇಲೂ ವಾದಿಸುವ ಚಟ. ಸದಾ ಇನ್ನೊಬ್ಬರತ್ತ ಬೆರಳು ತೋರುವ ಕೈ; ದಿನದಲ್ಲಿ ಸ್ವಲ್ಪ ಹೊತ್ತು ಆತ್ಮವಿಮರ್ಶೆಗೆ ತೊಡಗಲು ಹಿಂದೇಟು. ಲೋಕ ಸರಿಯಿಲ್ಲವೆಂದು ದೂರುವವರು ನಿಜವಾದ ದುಃಖಿಗಳು ಎಂದರೆ ಸಿಡಿದು ಬೀಳುತ್ತಾರೆ. ವ್ಯವಸ್ಥೆ ಸರಿಯಿಲ್ಲ; ನಿಮ್ಮ ಚಿಂತನೆ ಸರಿಯಿಲ್ಲ, ನೀವು ಶೋಷಕರ ಬೆಂಬಲಿಗರು ಎಂದು. ಸಮಾಜವಿಜ್ಞಾನಗಳು ಹೀಗೆ ವ್ಯಕ್ತಿಯಿಂದ ನಿರ್ಮಾಣವಾದ ವ್ಯವಸ್ಥೆಯನ್ನು ದೂಷಿಸುತ್ತಾ ವ್ಯಕ್ತಿಯನ್ನೇ ಮರೆತು ಬಿಡುತ್ತವೆ. ಆಗ ಸಹಾಯಕ್ಕೆ ಬರುವುದೇ ಶುದ್ಧ ಮಾನವಿಕಗಳಾದ ಭಾಷಾ ಸಾಹಿತ್ಯ. ಏಕೆಂದರೆ ಇದರ ಅಂತಿಮ ಗುರಿಯೇ ಮನುಷ್ಯ. ಅದರಲ್ಲೂ ಮನುಷ್ಯನಂತರಾಳ. ಸಮಾಜ ವಿಜ್ಞಾನಗಳು ಸಮಾಜೋನ್ನತಿ ಎಂದು ಬಡಬಡಿಸಿದರೆ, ಭಾಷಾ ಸಾಹಿತ್ಯಾಧ್ಯಯನವು ಆತ್ಮೋನ್ನತಿಯತ್ತ ಚಿಂತಿಸಲು ಶುರುವಿಡುತ್ತವೆ. ಹಾಗಾಗಿ ಈಗ ಆಲೋಚನೆ ಬದಲಾಗಿದೆ. ಪಾಸಿಟಿವ್ ಮತ್ತು ನೆಗಟೀವ್ ಎಂದು ಲೇಬಲ್ ಹಚ್ಚಿ ವಿಶ್ಲೇಷಣೆ ಮಾಡುವ ಮನೋಧರ್ಮಕ್ಕೆ ಗೊತ್ತಾಗಿದೆ: ಯಾವುದೂ ಶುದ್ಧ ಪಾಸಿಟಿವ್ ಅಲ್ಲ; ಯಾವುದೂ ಶುದ್ಧ ನೆಗಟೀವ್ ಅಲ್ಲ ಎಂದು! ಅಸರ್ಟಿವ್ ಥಿಂಕಿಂಗ್ ಎಂಬುದೇ ಇದು. ಯಥಾವಾದ. ಹೇಗಿದೆಯೋ ಏನಿದೆಯೋ ಅದನ್ನು ಒಪ್ಪಿ ಮುಂದುವರಿಯುವ ಗುಣ. ಇಂಥಲ್ಲಿ ಕನಸುಗಳಿಗೆ ಎಡೆಯಿಲ್ಲ. ನಿರೀಕ್ಷೆಗಳ ಪರೀಕ್ಷೆಯಿಲ್ಲ. ಹಾಗಾಗಿ ನಿರಾಶೆಗೂ ತಾವಿಲ್ಲ. ಒಪ್ಪಿ ಮುಂದುವರಿಯುವ ಸುಡು ವಾಸ್ತವ. ‘ಬಂತೇ? ಅನುಭವಿಸು. ಬರಲಿಲ್ಲವೆ? ಬಿಟ್ಹಾಕು!’ ಇದೊಂಥರ ವೈರಾಗ್ಯ ಮತ್ತು ಸಾಕ್ಷಿತ್ವ. ‘ಪಾಸಿಟಿವ್ ಥಿಂಕಿಂಗ್ ಡಸ್ನಾಟ್ ಗ್ಯಾರಂಟಿ ಸಕ್ಸಸ್; ಬಟ್ ನೆಗಟೀವ್ ಥಿಂಕಿಂಗ್ ಗ್ಯಾರಂಟಿಸ್ ಫೆಲ್ಯೂರ್!’ ಈ ಹೇಳಿಕೆಯಲ್ಲಿ ಪಾಸಿಟಿವ್ ಮತ್ತು ನೆಗಟೀವ್ ಎಂಬ ಪರಿಕಲ್ಪನೆಗಳು ಬಳಕೆಯಾದರೂ ಅಂತಿಮವಾದ ಆಶಯವು ಅಸರ್ಟಿವ್ ಎಂಬುದೇ ಆಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರು ‘ಏನನ್ನಾದರೂ ನೀವು ಇಷ್ಟಪಟ್ಟಾಗ ಅಥವಾ ದ್ವೇಷಿಸಿದಾಗ ನೀವದನ್ನು ಅದು ಇರುವಂತೆಯೇ ನೋಡಲಾರಿರಿ’ ಎಂದಿದ್ದಾರೆ.

ಹೌದಲ್ಲವೇ!? ಈ ಇಷ್ಟ ಮತ್ತು ದ್ವೇಷ ಎಂಬವು ನಮ್ಮ ಭಾವಗಳ ಬೆರೆಸಾಟ. ವಾಸ್ತವವಾಗಿ ನಾವು ಎಲ್ಲವನೂ ನಮ್ಮ ಇಷ್ಟಾನಿಷ್ಟಗಳ ಮೂಲಕವೇ ನೋಡುವ ತರಬೇತಿಯನ್ನು ಹುಟ್ಟಿನಿಂದಲೇ ಪಡೆದು ಬಂದಿರುತ್ತೇವೆ. ಇಷ್ಟವಿಲ್ಲದ್ದನ್ನು ಸಾವಧಾನದಿಂದ ಅವಧರಿಸುವ ಸಹನೆಯನ್ನು ಪ್ರಾಕ್ಟೀಸ್ ಮಾಡಿಯೇ ಇರುವುದಿಲ್ಲ. ‘ಓಂ ಸಹನಾವವತು’ ಎಂದರೆ ಇದೇ. ನನ್ನ ಮೂಲಕ ನೋಡುವ ಒಂದು ಬದುಕು ಮತ್ತು ಅದು ಇರುವಂತೆಯೇ ನೋಡುವ ಇನ್ನೊಂದು ಬದುಕು ಹೀಗೆ ಎರಡು ಬದುಕುಗಳನ್ನು ನಾನು ಪ್ರತಿ ಕ್ಷಣ ಬದುಕುತ್ತಿರುತ್ತೇನೆ. ಒಂದು ಬಗೆಯ ಮಾನಸಿಕ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ಕಡಮೆ ದೂರ ಮತ್ತು ಬಹುದೂರಗಳ ಅಪಾಯಕ್ಕೆ ಒಳಗಾಗಿ ಬಿಡುತ್ತೇವೆ. ಎಲ್ಲವನೂ ನನ್ನ ಮೂಲಕ ನೋಡುವ ಅಪಾಯವೇ ಕಡಮೆ ದೂರ. ತಕ್ಷಣ ಸ್ಪಂದಿಸುವ ಅಚಾತುರ್ಯ. ವಿಪರೀತ ಅಟಾಚ್‌ಮೆಂಟು; ಬಹು ದೂರವೆಂದರೆ ಡಿಟಾಚ್‌ಮೆಂಟು. ಏನೂ ಪರಿಣಾಮಿಸದೇ ಇರುವ ಅಪಾಯ. ಭಾವಗಳ ಗೈರು; ಬರೀ ಬುದ್ಧಿಯ ಕಸರತ್ತು. ಬುದ್ಧಿ ಭಾವಗಳೆರಡೂ ಬೆಸೆದ ಸಮರಸ ಇಂಥಲ್ಲಿ ವಿರಸ! ಈ ಮಾನಸಿಕ ಅಂತರವು ಒಬ್ಬರಿಂದ ಒಬ್ಬರಿಗೆ ವಿಭಿನ್ನ. ನನ್ನ ಮಾನಸಿಕ ಅಂತರವು ಇನ್ನೊಬ್ಬರಿಗೆ ಲಗತ್ತಾಗದು. ಕಾರಣ, ಎವ್ವೆರಿಬಡಿ ಈಸ್ ಡಿಫರೆಂಟ್ ಮಾತ್ರವಲ್ಲ; ಎವ್ವೆರಿಬಾಡಿ ಈಸ್ ಆಲ್ಸೋ ಡಿಫರೆಂಟು. ನಮ್ಮೊಳಗಿನ ಚೋದಕಗಳು ಮತ್ತು ಪ್ರಚೋದಕಗಳ ಮಟ್ಟ ಒಂದೇ ಅಲ್ಲ. ಹೂವು ಎಂದರೆ ಒಂದೇ ಅಲ್ಲ. ಅದು ಯಾವ ಹೂವು ಎಂಬುದು ಮ್ಯಾಟರಾಗುತ್ತದೆ. ಊದುಬತ್ತಿ ಎಂದರೆ ಒಂದೇ ಅಲ್ಲ; ಅದು ಯಾವ ಪರಿಮಳ ಹೊಮ್ಮಿಸುವ ಊದುಬತ್ತಿ ಎಂಬುದು ಮುಖ್ಯ. ಅಂದರೆ ನಮ್ಮ ಆಯ್ಕೆಗಳು ಕೂಡ ಇಷ್ಟಾನಿಷ್ಟಗಳನ್ನು ಪ್ರತಿನಿಧಿಸುತ್ತಿರುತ್ತವೆ. ಚಳಿಯಿಂದ ನಡುಗುತ್ತಿರುವ ನಾವು ಬೆಂಕಿ ಕಾಯಿಸಿಕೊಳ್ಳುವಾಗ ನಮಗೆ ಹಿತವೆನ್ನಿಸುವಷ್ಟು ಅಂತರವನ್ನು ಕಾಪಾಡಿಕೊಳ್ಳುತ್ತೇವಲ್ಲ ಹಾಗೆ. ಈ ಅಂತರವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ.

 ಈ ಜಗತ್ತು ಹೇಗಿದೆಯೋ ಹಾಗೆ, ವ್ಯಕ್ತಿಗಳು ಹೇಗಿದ್ದಾರೋ ಹಾಗೆ, ವಸ್ತುಪದಾರ್ಥಗಳು ಹೇಗಿವೆಯೋ ಹಾಗೆ ಒಪ್ಪಿಕೊಂಡು, ನಮ್ಮ ದೃಷ್ಟಿಸೃಷ್ಟಿಗಳನ್ನು ಬೆರೆಸದೇ ನೋಡುವ ಗುಣವೇ ಅಸರ್ಟಿವ್. ಮೇಲ್ನೋಟಕೆ ಇದು ಸುಲಭವೆನಿಸಿದರೂ ಅನುಷ್ಠಾನ ಕಷ್ಟ. ಇದಕಾಗಿ ನಮ್ಮ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳನ್ನು ತ್ಯಜಿಸಬೇಕು. ಮೊದಲಿಗೆ ‘ತ್ಯಜಿಸುವುದೇನು?’ ಎಂಬುದನ್ನು ಕಂಡುಕೊಳ್ಳಬೇಕು. ಇದು ಸಹ ನಿಯಮಾವಳಿಗೆ ಸಿಲುಕದೇ ಇರುವಂಥದು. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವಂಥದು. ಅಸರ್ಟಿವ್ ಗುಣಲಕ್ಷಣವೆಂದರೆ ವಸ್ತುನಿಷ್ಠತೆ, ನಿರಪೇಕ್ಷತೆ ಎಂಬವು ನೋಡುವವರಲ್ಲಿ ಇರಬೇಕೇ ವಿನಾ ನೋಡುವುದರಲ್ಲಿ ಇಲ್ಲ ಎಂಬುದು! ಇದನ್ನು ಅರಗಿಸಿಕೊಳ್ಳುವುದೂ ಕಷ್ಟವೇ. ನಮ್ಮದು ಯಥಾದೃಷ್ಟಿಯಾಗಬೇಕಷ್ಟೇ. ಸೃಷ್ಟಿಯು ನಮ್ಮ ಕೈಯಳವಲ್ಲ. ಇದು ಮುಂದುವರೆದು ಸಕಾರಾತ್ಮಕ ಮತ್ತು ನಕಾರಾತ್ಮಕ ಎಂಬವುಗಳನ್ನು ಮೀರಲು ಯತ್ನಿಸುವುದೇ ಒಂದರ್ಥದಲ್ಲಿ ತಪ್ಪು ಮತ್ತು ಅಸಾಧ್ಯ! ಮೀರಲಾಗದು. ಮೀರಲು ಹೋದರೆ ಅದೇ ಕಾಡುವುದು. ನನ್ನದು ನೆಗಟೀವ್ ದೃಷ್ಟಿಯೇ? ಅಥವಾ ಪಾಸಿಟೀವ್ ದೃಷ್ಟಿಯೇ? ಎಂದು ಪ್ರತಿ ಸಲ ಕೇಳಿಕೊಳ್ಳಲಾಗದು. ಎಲ್ಲದರಲ್ಲೂ ಪಾಸಿಟೀವ್ ಆಯಾಮವನ್ನು ಹುಡುಕಬಹುದು; ಆದರೆ ಅದೇ ಚಟವಾಗಿ ಬಿಡುತ್ತದೆ. ಸಾಲ ಪಡೆದವರು ವಾಪಸ್ ಕೊಡುತ್ತಾರೆ ಎಂಬುದು ಪಾಸಿಟೀವ್; ಆದರೆ ಹಳೆಯ ಸಾಲವನ್ನೇ ಹಿಂದಿರುಗಿಸದೇ ಮತ್ತೆ ಹೊಸ ಸಾಲವನ್ನು ಕೇಳಿದಾಗಲೂ ಇದೇ ಮನೋಭಾವ ಹೊಂದಲಾದೀತೆ? ಆಗ ನಮ್ಮಲ್ಲಿ ಮೊಳೆಯುವುದೇ ವಿಚಕ್ಷಣ ಬುದ್ಧಿ. ತಿಳಿವು ಕೈ ಕೊಟ್ಟಾಗ ಅನುಭವದ ಬೆಳಕಿನಲ್ಲಿ ಬದುಕು ಸಾಗಿಸುವುದೇ ವಿವೇಚನೆ. ವಿಪರೀತ ಸಕಾರಾತ್ಮಕ ಮನೋಭಾವದಿಂದ ನೋವು ಮತ್ತು ದುಃಖ ಹೆಚ್ಚುತ್ತದೇ ವಿನಾ ಕಡಮೆಯಾಗುವುದಿಲ್ಲ. ನಮ್ಮನ್ನು ಇನ್ನೊಬ್ಬರು ಬಳಸಿಕೊಳ್ಳುತ್ತಿದ್ದಾರೆಂದು ಗೊತ್ತಾದ ಮೇಲೆ ಹುಷಾರಾಗಿರಬೇಕು. ಇದೇ ಬದುಕು. ಬಳಸಿಕೊಳ್ಳಲು ಅನುಮತಿ ಕೊಟ್ಟು ಆನಂತರ ಗೋಳಾಡುವುದು ಸ್ವಯಂಕೃತ. ಆಗ ಪ್ರಶ್ನೆ ಮೂಡುವುದು ಸಹಜ: ಬಳಸಿಕೊಳ್ಳಲು ಅನುಮತಿಯೇಕೆ ಕೊಟ್ಟರೆಂದರೆ ಅವರಿಂದ ಏನೋ ಲೌಕಿಕ ಲಾಭವನ್ನೋ, ಭಾವನಾತ್ಮಕ ಶಮನವನ್ನೋ ನಿರೀಕ್ಷಿಸಿದ್ದರೆಂದೇ ಅರ್ಥ. ಹೀಗೆ ಹಲವು ಹಳವಂಡಗಳನ್ನು ದಾಟಲು ಈ ಅಸರ್ಟಿವ್ ಗುಣ ಸಹಾಯ ಮಾಡುವುದು. ‘ನಾವು ಬಳಸಿಕೊಳ್ಳಲು ಅನುಮತಿಸಿದ್ದರಿಂದ ಅವರು ಬಳಸಿಕೊಂಡರು’ ಎಂಬುದು ವಾಸ್ತವ. ಇದೇ ಯಥಾ ಥಿಯರಿ. ಅನುಮತಿಸುವಾಗ ಮತಿ ಎಲ್ಲಿ ಹೋಗಿತ್ತು? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು; ಇನ್ನೊಬ್ಬರಿಗೆ ಕೇಳುವುದಲ್ಲ. ‘ಇದ್ದಂತೆ ಜಗವಿದೆ; ನೀನು ಬದಲಾಗು’ ಎಂಬುದು ಅಸರ್ಟೀವು. ಲೋಕ ಬದಲಿಸಲು ಹೊರಡುವುದು ಮೂರ್ಖತನ. ಲೋಕ ಸರಿಯಿಲ್ಲವೆನ್ನುವುದೇ ಅಸರ್ಟಿವ್ ಅಲ್ಲ; ಅದು ನೆಗಟೀವ್. ‘ನಾನು ಸರಿಯಿಲ್ಲ’ ಎಂಬುದೇ ಪಾಸಿಟಿವ್. ನಾನು ಸರಿಯಾಗಿ ಗ್ರಹಿಸಬೇಕು ಎಂಬುದೇ ಯಥಾವಾದದ ತಿರುಳು. ‘ನಿಜಕ್ಕೂ ಲೋಕ ಸರಿಯಿಲ್ಲವೇ? ಅಥವಾ ನಾನು ಸರಿಯಿಲ್ಲವೇ?’ ಇದಕ್ಕಿರುವ ಉತ್ತರವನ್ನು ಸಂತರು, ಗುರುಗಳು, ದಾರ್ಶನಿಕರು, ರಹಸ್ಯದರ್ಶಿಗಳು, ಅಷ್ಟೇಕೆ? ತತ್ತ್ವಾನ್ವೇಷಕ ಸಾಹಿತಿಗಳು ಕೂಡ ಧ್ಯಾನಮಾರ್ಗದಿಂದ ಕಂಡುಕೊಂಡರು; ‘ವಾಮಮಾರ್ಗ’ ದಿಂದ ಅಲ್ಲ! ಇವೆಲ್ಲ ಗೊಂದಲಗಳಿಗೆ ಮುಕ್ತಿಯೆಂದರೆ ನಾನು ಲೋಕವನ್ನು ಒಪ್ಪಿಕೊಂಡು, ಇರುವ ಒಂದು ಬಾಳುವೆಯನ್ನು ಅಪ್ಪಿಕೊಂಡು, ‘ಬಂದದ್ದು ಬರಲಿ; ಗೋವಿಂದನ ದಯೆಯೊಂದಿರಲಿ’ ಎಂದು ಸುಮ್ಮನಾಗುವುದು. ಹೋರಾಟ, ಹಾರಾಟಗಳಿಗೆ ಅರ್ಥ ಬರುವುದು ನಮ್ಮೊಳಗಿನ ಯುದ್ಧಕ್ಕೆ; ಹೊರಗಿನ ಬಾಹ್ಯ ಗದ್ದಲಗಳಿಗಲ್ಲ!

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು.

12 Responses

  1. MANJURAJ says:

    ಪ್ರಕಟಿಸಿದ ಸುರಹೊನ್ನೆಗೆ ಅನಂತ ಧನ್ಯವಾದ

  2. ನಯನ ಬಜಕೂಡ್ಲು says:

    ಸೊಗಸಾಗಿದೆ ಲೇಖನ

  3. ಚಿಂತನಪೂರ್ಣ ಲೇಖನ.. ಸೊಗಸಾಗಿ ಬಂದಿದೆ ಸಾರ್..

  4. ಶಂಕರಿ ಶರ್ಮ says:

    ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆ ಅಥವಾ ಯೋಚನೆಯ ಕುರಿತು ಮೂಡಿಬಂದ ಸತ್ವಯುತವಾದ ಗಂಭೀರ ಲೇಖನ ಚೆನ್ನಾಗಿದೆ.

  5. Dr. HARSHAVARDHANA C N says:

    Impressive article sir,ನಾವು ನಮ್ಮಂತೆ ಇರದಿದ್ದರೆ ಸಾರ್ಥಕ ಬದುಕು ಕಷ್ಟ ಎನ್ನುವುದನ್ನು ಮನಮುಟ್ಟುವಂತೆ ಲೇಖನದಲ್ಲಿ ಮೂಡಿಸಿದ್ದೀರಿ.
    ಧನ್ಯವಾದಗಳು

  6. Anonymous says:

    Superb guruvarya

  7. Anonymous says:

    ಎಲ್ಲಾ ಬೆರಳುಗಳು ನಮ್ಮ ಕಡೆಯೆ ತೋರುವ ಹಾಗೆ ಇದೆ ತುಂಬಾ ಚೆನ್ನಾಗಿದೆ ಸರ್

  8. ಪದ್ಮಾ ಆನಂದ್ says:

    ಇಂತಹ ಲೇಖನಗಳನ್ನು ಆಗಾಗ್ಗೆ ಓದುತ್ತಿದ್ದರೆ ಗೊಂದಲದಲ್ಲಿ ಸಿಕ್ಕಿ ನರಳಾಡುವ ಮನಸ್ಸನ್ನು ತಹಬದಿಗೆ ತಂದುಕೊಳ್ಳುವುದು ಸುಲಭವಾಗುತ್ತಾ ಹೋಗುತ್ತದೆ. ಅಸೆರ್ಟಿವ ವಾದ ಅಥವಾ ತತ್ವ ನಿಜಕ್ಕೂ ಮನವನ್ನು ಶಾಂತರೀತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವುದು ಖಂಡಿತಾ ಹೌದು. ಚಂದದ ಲೇಖನ ಸರ್.

  9. ಮಂಜುಳಮಿರ್ಲೆ says:

    ಚಿಂತನಶೀಲ ಲೇಖನ. ಇದ್ದುದನ್ನು ಇದ್ದಂತೆ ನೋಡುವ ಬಗೆಯನ್ನು ಕಲಿಯಬೇಕು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: