ಕಾಡುವ ಒಂಟಿತನಕ್ಕೆ ‘ಅವಳ ಮನೆ’ ಮುದ ನೀಡುವ ದಿವ್ಯೌಷಧ
ಕನ್ನಡ ಸಾಹಿತ್ಯ ಲೋಕದಲ್ಲಿ “ತ್ರಿವೇಣಿ” ಎಂಬ ಹೆಸರಿಗೆ ಮಹತ್ವದ ಸ್ಥಾನ ಇಂದಿಗೂ ಇದೆ. ಅವರು ಬರೆದಿರುವ ಕೃತಿಗಳು ಅಲ್ಪವೇ ಆದರೂ ಮಾಡಿರುವ ಹೆಸರು ಮುಗಿಲೆತ್ತರ. ಮಹಿಳಾ ಲೇಖಕಿಯರಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿರುವ ತ್ರಿವೇಣಿಯವರ ಕೃತಿ “ಅವಳ ಮನೆ ” ಅವರ ಎಲ್ಲಾ ಕಾದಂಬರಿಗಿಂತಲೂ ಭಿನ್ನವಾಗಿದೆ. ಕತೆಯ ಓಟ ಸ್ವಲ್ಪ ನಿಧಾನವೇ ಎಂದೆನಿಸುತ್ತದೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನದಲ್ಲಿರುವ ಸುಬ್ಬಣ್ಣ ಹಾಗೂ ಭಾಗ್ಯಮ್ಮ ದಂಪತಿಗಳು ಹಾಗೂ ಐದಾರು ಮಕ್ಕಳನ್ನೊಳಗೊಂಡ ದೊಡ್ಡ ಕುಟುಂಬದಲ್ಲಿ ಹೊತ್ತೊತ್ತಿನ ಕೂಳಿಗೂ ಪರದಾಡುವ ಪರಿಸ್ಥಿತಿ. ಏನಾದರೂ ಒಂದು ಆಶಾಕಿರಣ ತಮ್ಮ ಜೀವನದಲ್ಲೂ ಇಣುಕಿ ನೋಡಬಾರದೇ ಎಂಬ ಆಶಾಭಾವನೆಯ ಮಧ್ಯೆ ನಾಗಮ್ಮ ಹಾಗೂ ರಾಮಸ್ವಾಮಿ ದಂಪತಿಗಳ ಮಕ್ಕಳಿಲ್ಲದ ಕೊರಗಿಗೆ ಮುಕ್ತಿ ಕೊಡಲೇನೋ ಎಂಬಂತೆ ಒಂದು ಮಗುವನ್ನು ನೀಡುವ ಉದಾರ ಮನಸ್ಸನ್ನು ಪ್ರದರ್ಶಿಸುವ ಸುಬ್ಬಣ್ಣ ದಂಪತಿಗಳು. ಇಲ್ಲಿ ಮಗು ಸರೋಜಿಯ ಇಷ್ಟ ಕಷ್ಟಗಳಿಗಿಂತ ತಮ್ಮ ಮುಂದಿನ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಳ್ಳಲು ಬಯಸಿ ಅವಳನ್ನು ನಾಗಮ್ಮ ದಂಪತಿಗಳಿಗೆ ಉದಾರವಾಗಿ ದಾನ ಮಾಡಿಬಿಡುವ ಸಂದರ್ಭ ಬಂದಾಗ ಮಗಳ ಆಶೋತ್ತರಗಳಿಗಿಂತ ಅವಳ ಭವಿಷ್ಯವನ್ನು ಭವ್ಯವಾಗಿಸುವ ನೆಪದಲ್ಲಿ ತಮ್ಮ ಉಳಿದ ಮಕ್ಕಳ ಮುಂದಿನ ಬದುಕಿನ ಬಗ್ಗೆ ಚಿಂತಿಸುವ ಸುಬ್ಬಣ್ಣ ದಂಪತಿಗಳ ಪರಿಸ್ಥಿತಿ ಬಡತನದಲ್ಲಿನ ಕುಟುಂಬದ ಮೇಲೆ ಕ್ಷಕಿರಣವನ್ನು ಬೀರುವಂತಿದೆ.
ಶ್ರೀಮಂತರ ಮನೆಯನ್ನು ಹೊಕ್ಕು ಶ್ರೀಮಂತಿಕೆಯ ಎಲ್ಲಾ ಅನುಭವಗಳನ್ನು ಪಡೆಯುವ ಸರೋಜಿ ತನ್ನ ಮುಂದಿನ ದಿನಗಳಲ್ಲಿ ಸರೋಜಿನಿಯಾದಳೇ ಹೊರತು ಅವಳ ಪುಟ್ಟ ಮನಸ್ಸಿನ ಮೇಲಾಗುವ ಸಣ್ಣ ಪುಟ್ಟ ಗಾಯಗಳು ಅವಳನ್ನು ಒಬ್ಬಂಟಿಯಾಗಿಯೇ ಮಾಡಿಬಿಡುವುದನ್ನು ಕಂಡಾಗ ಶ್ರೀಮಂತರ ಮನೆಯ ನೋಟ ಚಂದ, ಬಡವರ ಮನೆಯ ಊಟ ಚಂದ ಎಂಬಂತಹ ಮನೋಸ್ಥಿತಿಗೆ ತಲುಪಿದಳೇನೋ ಎಂದೆನಿಸುತ್ತದೆ. ಎಲ್ಲವೂ ಇದ್ದರೂ ಏನೂ ಇಲ್ಲದಿರುವಂತಹ ಒಂದು ರೀತಿಯ ಬಿಗುವಿನ ಪರಿಸ್ಥಿತಿಯಲ್ಲಿ ದಿನದೂಡಬೇಕಾದ ಅನಿವಾರ್ಯತೆ ಎದುರಾದಾಗ ಮಾನಸಿಕವಾಗಿ ಕುಗ್ಗಿದ ಸರೋಜಿನಿ ಆಯಾ ವಯಸ್ಸಿನ ಹುಡುಗಿಯರಿಗಿಂತ ಭಿನ್ನವಾಗಿ ಕಾಣತೊಡಗುತ್ತಾಳೆ.
ಕೇವಲ ಹಣವೇ ಜೀವನ ಎಂದು ಭಾವಿಸಿದ್ದ ರಾಮಸ್ವಾಮಯ್ಯನವರು ಸರೋಜಿನಿಗೆ ಪ್ರೀತಿ ನೀಡಿದರೆ ಎಲ್ಲಿ ಆಸ್ತಿಯಲ್ಲೂ ಪಾಲು ಕೊಡಬೇಕಾಗಬಹುದೇನೋ ಎಂದೆಣಿಸಿ ಅವಳಿಂದ ದೂರ ಸರಿದು ನಿಂತು ಶ್ರೀಮಂತಿಕೆಯ ಕರಿ ನೆರಳಿನಲ್ಲೇ ತನ್ನ ಜೀವನವನ್ನು ಸರಿಗಟ್ಟುವ ಪ್ರಯತ್ನ ಮಾಡುವುದನ್ನು ಕಂಡಾಗ ಅವರಿಗೆ ಮಕ್ಕಳ ಅವಶ್ಯಕತೆ ಇರಲಿಲ್ಲವೇನೋ ಎಂದೆನಿಸದೆ ಬಿಡದು.
ಸರೋಜಿನಿಯ ಮೇಲಿನ ವ್ಯಾಮೋಹದಿಂದ ಎಲ್ಲವನ್ನೂ ದೊರಕಿಸಿ ಕೊಡುವ ಭರದಲ್ಲಿ ತಾವು ನೀಡಬೇಕಾದ ತಾಯಿಯ ಪ್ರೀತಿಯನ್ನು ಸಂಪೂರ್ಣವಾಗಿ ನೀಡಲು ವಿಫಲರಾದ ನಾಗಮ್ಮನವರು ಹಣವೊಂದಿದ್ದರೆ ಎಲ್ಲವನ್ನೂ ಪಡೆಯಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಬದುಕಿನ ಮಹತ್ವದ ಕ್ಷಣಗಳನ್ನು ಕಳೆಯಲು ಹಿಂದೇಟು ಹೊಡೆದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಸರೋಜಿನಿಯ ಹೆತ್ತವರು ಶಾಂತಿಯ ಮದುವೆಯ ಸಂದರ್ಭದಲ್ಲಿ ಧನ ಸಹಾಯ ಕೇಳಲು ಬಂದು ಮುಖಭಂಗಗೊಂಡ ನಂತರ ಸರೋಜಿನಿಗೆ ತನ್ನನ್ನು ಶ್ರೀಮಂತರ ಮನೆಗೆ ಕಳುಹಿಸಿದ ಹಿಂದಿದ್ದ ಉದ್ದೇಶದ ಅರಿವಾಗಿ ಮನಸ್ಸು ಖಿನ್ನಗೊಳ್ಳುವ ಸಂದರ್ಭ ನಿಜಕ್ಕೂ ಮನಸ್ಸನ್ನು ಹಿಂಡುತ್ತದೆ. ಹೆಣ್ಣುಮಕ್ಕಳು ಬಾಯಿದ್ದೂ ಮಾತು ಬಾರದ ಮೂಗಿಯಂತೆ ತನ್ನ ಮನಸ್ಸಿನ ಭಾವನೆಗಳನ್ನು ಅದುಮಿಡಬೇಕಾದ ಅನಿವಾರ್ಯತೆಯ ಅರಿವಾಗುತ್ತದೆ. ಹೇಳಲೂ ಆಗದ ಕೇಳಲು ಆಗದ ಬಿಸಿತುಪ್ಪವಾಗಿ ಪರಿಣಮಿಸಿದ ಮನೆಯ ಅಕ್ಕಂದಿರ ಮದುವೆಯ ಸಂಭ್ರಮಕ್ಕೆ ಕೇವಲ ಮೂಕ ಪ್ರೇಕ್ಷಕಳಾಗಿ ನಿಲ್ಲುವ ಸರೋಜಿನಿಯ ಬಗ್ಗೆ ಮರುಕವೆನಿಸುತ್ತದೆ.
ತನಗೇ ಮನೆಯಲ್ಲಿ ಸ್ವಾತಂತ್ರ್ಯವಿಲ್ಲದಿರುವಾಗ ತವರು ಮನೆಯವರಿಗೆ ಸಹಾಯ ಮಾಡುವುದಾದರೂ ಹೇಗೆ ಎಂಬ ಸತ್ಯವನ್ನು ಮನೆಯವರಿಗೆ ಅರ್ಥ ಮಾಡಿಸಲಾಗದ ಸರೋಜಿನಿಯ ತುಮುಲಾಟ ಹಂಗಿನ ಅರಮನೆಯ ದರ್ಶನವನ್ನೇ ಮಾಡಿಸಿದಂತಾಗುತ್ತದೆ. ಇತ್ತ ಹೆತ್ತವರಿಗಾಗಲೀ ಸಾಕುತ್ತಿರುವವರಿಗಾಗಲೇ ಹೇಳಲಾಗದೆ ತೊಳಲಾಡುವ ಸರೋಜಿನಿಯನ್ನು ಕಂಡಾಗ ಮನಸ್ಸು ಮುದುಡುತ್ತದೆ.
ಇಷ್ಟೆಲ್ಲದರ ಮಧ್ಯೆ ಪಾಠದ ಮೇಷ್ಟ್ರಾಗಿ ಬರುವ ಮಾಧವನಿಗೂ ಸರೋಜಿನಿಗೂ ವಯಸ್ಸಿನ ಅಂತರವಿದ್ದರೂ ಯಾರೂ ಇಲ್ಲದಿದ್ದ ಮನಸ್ಸು ಅವನನ್ನು ಸ್ವೀಕರಿಸಿ ತನಗೊಬ್ಬ ಆಂತರಿಕ ಗುರು, ಗೆಳೆಯ, ಮಾರ್ಗದರ್ಶಕ ಸಿಕ್ಕ ಎಂದು ಸಂತೋಷಿಸುವ ಸರೋಜಿನಿ ತನ್ನ ದುಃಖ ದುಮ್ಮಾನಗಳನ್ನು ದೂರ ಮಾಡಿಕೊಳ್ಳುವ ಪ್ರಯತ್ನ ಮಾಡುವುದರೊಂದಿಗೆ ಅದರಲ್ಲಿ ಯಶಸ್ವಿಯೂ ಆಗುತ್ತಾ ಸಾಗುತ್ತಾಳೆ. ಹೆತ್ತವರು ತನ್ನನ್ನು ದೂರ ಮಾಡಿದ ನೋವನ್ನು ಮರೆಯಲು ಹಾಡಿನ ಮೊರೆ ಹೋಗುವ ಸರೋಜಿನಿ ಮನಸ್ಸು ಯಾವುದಾದರೊಂದು ಕ್ರಿಯೆಯಲ್ಲಿ ತೊಡಗಿದಾಗ ಪ್ರಾಪಂಚಿಕ ಸಂಕಟಗಳಿಂದ ದೂರವಾಗಬಹುದೆನ್ನುವ ಸತ್ಯವನ್ನು ಬಿಚ್ಚಿಡುವಂತೆ ಗೋಚರವಾಗುತ್ತಾಳೆ.
ತನ್ಮಧ್ಯೆ ಸರೋಜಿನಿಯಿಂದ ವ್ಯಾಸಂಗದ ನೆಪವೊಡ್ಡಿ ದೂರವಾಗುವ ಮಾಧವ ಪುನಃ ಸರೋಜಿನಿ ಕಾಲೇಜಿನ ಮೆಟ್ಟಿಲನ್ನೇರಿದಾಗ ಪರಿಚಿತನಾಗುವುದಷ್ಟೇ ಅಲ್ಲದೆ ಆಕೆಯ ಹೃದಯಕ್ಕೂ ಹತ್ತಿರವಾಗುವುದಷ್ಟೇ ಅಲ್ಲದೆ ಅವಳ ಒಂಟಿತನವನ್ನು, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಸ್ನೇಹಿತನಂತೆ ವರ್ತಿಸುವುದರ ಮೂಲಕ ಮತ್ತಷ್ಟು ಸನಿಹಕ್ಕೆ ಬರ ತೊಡಗುತ್ತಾನೆ. ಕೆಲವೊಮ್ಮೆ ಪರಿಸ್ಥಿತಿಯೂ ಕೂಡ ಅವರಿಬ್ಬರನ್ನು ಹತ್ತಿರವಾಗಿಸುವುದರಿಂದ ಇಬ್ಬರ ನಡುವೆ ಇದ್ದ ಅಂತರ ಕಡಿಮೆಯಾಗಿ ಸ್ನೇಹ ಪ್ರೇಮವಾಗಿ ಪರಿವರ್ತನೆಗೊಂಡು ಇಬ್ಬರೂ ಬಾಳ ದೋಣಿಯನ್ನೇರಲು ಮುಂದಾಗುವಾಗ ಸುಬ್ಬಣ್ಣನವರಿಗೆ ಇದು ನುಂಗಲಾಗದ ತುತ್ತಾಗಿ ಪರಿಣಮಿಸುತ್ತದೆ.
ಮಾಧವ ಅಥವಾ ನಾವು ಎಂಬ ಅವರ ನಿಲುವು ಸ್ವಲ್ಪವೂ ಸಡಿಲಗೊಳ್ಳದೆ ನಾಗಮ್ಮನವರು ಸರೋಜಿನಿಯ ಪರವಾಗಿ ಮಾಡಿಕೊಂಡ ಬೇಡಿಕೆಗಳಿಗೂ ಅವರ ಮನಸ್ಸು ಸುತಾರಾಂ ಎಡೆಮಾಡಿಕೊಡದಿದ್ದಾಗ ಸರೋಜಿನಿಯ ಮನಸ್ಸು ಮತ್ತಷ್ಟು ರಾಡಿಯಾಗುವ ಸನ್ನಿವೇಶ ಮನಸ್ಸಿಗೆ ನಾಟುವಂತಿದೆ.
ಹೆತ್ತ ಮಕ್ಕಳು ತಮಗೆ ಭಾರವೆಂದು ಮಾರುವ ತಂದೆ-ತಾಯಿ, ಸಾಕಲು ಕರೆದು ಕೊಂಡು ಬಂದ ಮಕ್ಕಳ ಮೇಲೆ ಹೆತ್ತವರಂತೆ ನಿಜ ಪ್ರೀತಿ ತೋರಿಸಲು ಹಿಂದೆ ಮುಂದೆ ನೋಡುವ ಸಾಕು ತಂದೆ ತಾಯಿಯ ಮಾತಿನ ವರಸೆಯ ವರ್ತನೆಯಿಂದ ಸರೋಜಿನ ಪಡುವ ವೇದನೆ ಕಣ್ಣಿಗೆ ಕಟ್ಟಿದಂತಿದೆ. ಚಿಕ್ಕಂದಿನಿಂದಲೂ ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾಗಿದ್ದ ಸರೋಜಿನಿಯು ಅವರಿಂದಲೂ ಈ ವಿಚಾರದ ಬಗ್ಗೆ ಬಂದ ನೀರಸ ಪ್ರತಿಕ್ರಿಯೆಗೆ ತಟಸ್ಥವಾಗುವಾಗುವ ಸಂದರ್ಭ ಇಂದಿಗೂ ಪ್ರಸ್ತುತವಿದೆಯೇನೋ ಎಂದೆನಿಸುತ್ತದೆ.
ತನ್ನ ಬಲವಾದ ನಂಬಿಕೆಗೆ ಜೋತು ಬಿದ್ದು ಮಾಧವನನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗುವುದು ಸರೋಜಿನಿಯ ಧೃಡ ಸಂಕಲ್ಪವನ್ನು ಎತ್ತಿ ತೋರಿಸುವುದರೊಂದಿಗೆ ಈಗಲೂ ತಾನು ತನ್ನ ಮನಸ್ಸಿನ ಮಾತುಗಳನ್ನು ಕೇಳದೆ ಹೋದರೆ ಮುಂದಿನ ತನ್ನ ಭವಿಷ್ಯವನ್ನು ತಾನೇ ಹಾಳು ಬಾವಿಗೆ ತಳ್ಳಿದಂತಾಗುತ್ತದೆ. ತನ್ನ ಬದುಕಿನ ಉದ್ದಕ್ಕೂ ಬೇರೆಯವರ ಹಂಗಿನಲ್ಲಿ ಬಾಳುವುದಕ್ಕಿಂತ ತನ್ನದೇ ಆದ ಮನೆಯೊಂದಕ್ಕೆ ಒಡತಿಯಾಗಿ ಮಾಧವನೊಡನೆ ಬಾಳ ಪಯಣವನ್ನು ಹಂಚಿಕೊಳ್ಳಬೇಕೆಂಬ ಅಂತಿಮ ತೀರ್ಮಾನದಿಂದ ಅವಳ ಮನಸ್ಸು ಪ್ರಫುಲ್ಲಗೊಳ್ಳುವುದು ಕಥಾ ಹಂದರವಾಗಿ ಎಳೆಎಳೆಯಾಗಿ ನಮ್ಮ ಕಣ್ಮುಂದೆ ನಮ್ಮೊಳಗಿನ ಘಟನೆಯನ್ನೇ ತಂದು ನಿಲ್ಲಿಸಿದಂತಾಗುತ್ತದೆ.
-ಮ.ನ.ಲತಾಮೋಹನ್, ಮೈಸೂರು
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ.
ಚೆನ್ನಾಗಿದೆ ತ್ರಿವೇಣಿಯವರ ಕಾದಂಬರಿಯ ಪರಿಚಯ
ಹಿಂದೊಮ್ಮೆ ಈ ಕಾದಂಬರಿಯನ್ನು ಓದಿದ್ದೆ.. ನಿಮ್ಮ ಬರಹ ಓದಿದಾಗ ನೆನಪು ಮರುಕಳಿಸಿತು. ಧನ್ಯವಾದಗಳು .
ತ್ರಿವೇಣಿಯವರ ಮನೋವೈಜ್ಞಾನಿಕ ಕಥೆಗಳು ಮನಮುಟ್ಟುವಂತಿರುತ್ತವೆ. ಎಲ್ಲರ ನೆಚ್ಚಿನ ಲೇಖಕಿಯ ಪ್ರಸಿದ್ಧ ಕಾದಂಬರಿಯ ವಿಮರ್ಶಾತ್ಮಕ ಲೇಖನ ಚೆನ್ನಾಗಿ ಮೂಡಿಬಂದಿದೆ.
ಚಂದದ ಪುಸ್ತಕಾವಲೋಕನ ಎಂದೋ ಓದಿದ್ದ ಕಾದಂಬರಿಯ ಪಾತ್ರಗಳನ್ನು ಮತ್ತೊಮ್ಮೆ ಕಣ್ಣ ಮುಂದೆ ತಂದು ನಿಲ್ಲಿಸಿದಂತಾಯಿತು.