ಸೀರೇ ನೀನಾರಿಗೊಲ್ಲಾದವಳು…..

Share Button

ಬಿದಿರು ನಿನಾರಿಗಲ್ಲದವಳು?” ಬಾನಂದೂರು ಕೆಂಪಯ್ಯನವರ ಕಂಠದಲ್ಲಿ ಕೇಳಿದ್ದ ಜನಪದಗೀತೆ ಕಣ್ಮುಂದೆ ಬರುತ್ತಿದೆ. ಏಕೆಂದರೆ ಹುಟ್ಟಿನಿಂದ ಅಂತ್ಯದ ದಿನದವರೆಗೂ ಮನುಷ್ಯನ ಜೀವನದಲ್ಲಿ ಉಪಯೋಗವಾಗುವ ಬಿದಿರಿನ ಹಲವಾರು ರೂಪಗಳು ಹೇಗೋ ಹಾಗೆಯೇ ಅಮ್ಮನ ಸೀರೆಯ ಉಪಯೋಗದ ಹಲವು ಮುಖಗಳನ್ನು ಕಂಡವಳು ನಾನು. ಡಿಸೆಂಬರ್ ತಿಂಗಳ ಇಪ್ಪತ್ತೊಂದನೆಯ ತಾರೀಖನ್ನು ಸೀರೆಯ ದಿನವೆಂದು ಆಚರಿಸುವರಂತೆ. ಈ ಪರಿಪಾಠ ಹಾಕಿದವರಿಗೊಂದು ಸಲಾಮು. ಕಾರಣ, ನಾಗಾಲೋಟದಿಂದ ಓಡುತ್ತಿರುವ ಇಂದಿನ ಜೀವನ ಚಕ್ರದಲ್ಲಿ ಯಾವುದರ ಕಡೆಗೂ ಗಮನ ಹರಿಸುವಷ್ಟು ವ್ಯವಧಾನ ಎಲ್ಲಿದೆ? ಅದಕ್ಕಾಗಿಯೇ ಇರಬಹುದು ಹೀಗೆ ದಿನಕ್ಕೊಂದು ಪ್ರಾಮುಖ್ಯತೆ ಕೊಟ್ಟು ನೆನಪಿಸುತ್ತಾರೇನೋ ಎನ್ನಿಸುತ್ತದೆ.

ಇದರಿಂದ ನಾನು ನನ್ನ ಬಾಲ್ಯದ ನೆನಪಿನ ದಿನಗಳಿಗೆ ಹೋಗುವಂತಾಯ್ತು. ಚಿಕ್ಕಂದಿನಲ್ಲಿ ನನಗೆ ಪ್ರತಿಯೊಂದರಲ್ಲೂ ಕುತೂಹಲ. ಉತ್ತರ ತಿಳಿಯಬೇಕೆಂಬ ಹಂಬಲದಿಂದ ಪ್ರಶ್ನೆಗಳ ಸರಮಾಲೆಯನ್ನೇ ಎಸೆಯುತ್ತಿದ್ದೆ. ಆಗೆಲ್ಲ ನನ್ನ ಹೆತ್ತಮ್ಮ “ಹಿಂದಿನ ಜನ್ಮದಲ್ಲಿ ನೀನೆಲ್ಲೊ ಎನ್ಕೆöÊರಿ ಡಿಪಾರ್ಟ್ಮೆಂಟಿನಲ್ಲಿದ್ದೆ ಅನ್ನಿಸುತ್ತೇ, ಅದಕ್ಕೇ ಪ್ರತಿಯೊಂದಕ್ಕೂ ಏಕೆ? ಏನು? ಹೇಗೆ? ಕೇಳಿ ತಲೆ ತಿನ್ನುತ್ತೀಯೆ” ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಹಾಗೇ ಗದರಿಸಿ ಸುಮ್ಮನಾಗಿಸುತ್ತಿದ್ದರು. ಉತ್ತರ ದೊರಕುತ್ತಿರಲಿಲ್ಲ. ಅಂಥಹ ಒಂದು ವಿಷಯ “ಸೀರೆ”. ಬಾಲ್ಯದಲ್ಲಿ ಇಷ್ಟೊಂದು ಉದ್ದದ ಸೀರೆಯನ್ನು ಹೇಗೆ ಉಟ್ಟುಕೊಳ್ಳುತ್ತಾರೆ? ನನ್ನ ಮನದ ಮುಂದೆ ಪ್ರಶ್ನೆ ಲೋಲಕದಂತೆ ತೂಗಾಡುತ್ತಿತ್ತು. ಅದರಲ್ಲೂ ನನ್ನಜ್ಜಿ (ತಂದೆಯ ತಾಯಿ) ಅಗಲೇ ಎಪ್ಪತ್ತರ ಅಸುಪಾಸಿನವರು. ಲಕ್ಷ್ಷಣವಾದ ಮುಖ, ಎತ್ತರದ ನಿಲುವು ಅದು ಸರಿಯಾಗಿ ತಿಳಿಯುತ್ತಿರಲಿಲ್ಲ. ಏಕೆಂದರೆ ಅವರ ಸೊಂಟದ ಮೇಲಿನ ಭಾಗ ಪೂರ್ಣವಾಗಿ ನೆಲಕ್ಕೆ ಸಮಾನಾಂತರವಾಗಿ ಬಾಗಿತ್ತು. ಆದರೆ ಅವರೂ ಅಷ್ಟು ಉದ್ದವಾದ ಸೀರೆಯನ್ನು ಅಚ್ಚುಕಟ್ಟಾಗಿ ಉಡುತ್ತಿದ್ದರು. ಎಲ್ಲಿಯೂ ಒಂದುಚೂರು ಏರುಪೇರಿರುತ್ತಿರಲಿಲ್ಲ. ನೆರಿಗೆಗಳು ಒಪ್ಪವಾಗಿ ಜೋಡಿಸಿದಂತೆ ಇದ್ದು ಮೇಲ್ಬಾಗವನ್ನು ಪದರಗಳನ್ನೆಲ್ಲ ಒಟ್ಟಿಗೆ ಸೇರಿಸಿ ಹೊಟ್ಟೆಯ ಬಳಿ ಬಾಳೆಕಾಯಿ ಹಾಕಿ ಸಿಕ್ಕಿಸಿಕೊಳ್ಳುತ್ತಿದ್ದರು. ಆಗೆಲ್ಲ ಹೀಗಿನವರಂತೆ ಒಳಭಾಗದಲ್ಲಿ ಪೆಟಿಕೋಟ್ ಧರಿಸಿ ಅದರಲ್ಲಿ ಒಳಕ್ಕೆ ಸಿಕ್ಕಿಸಿಕೊಳ್ಳುತ್ತಿರಲಿಲ್ಲ. ಮೇಲೆ ಮೈತುಂಬ ಸೆರಗು ಹೊದೆಯುತ್ತಿದ್ದರು. ಬಾಗಿದ ದೇಹವಾದರೂ ಅವರು ನಡೆಯುವಾಗ ನೆರಿಗೆಗಳು ಚಿಮ್ಮುತ್ತಾ ಲಕ್ಷಣವಾಗಿ ಕಾಣುತ್ತಿದ್ದವು. ಆಗ ನನ್ನ ತಲೆಯಲ್ಲಿ ಬರುತ್ತಿದ್ದ ಸಂದೇಹವೊಂದೇ. ನನ್ನಮ್ಮ ಎತ್ತರದ ನಿಲುವಿನವರು. ಅವರಿಗೆ ಸೀರೆ ಉಡಲು ಏನೂ ತೊಂದರೆಯಾಗದು. ಆದರೆ ನನ್ನಜ್ಜಿಗೆ ಅಷ್ಟು ಚೆನ್ನಾಗಿ ಸೀರೆ ಉಡವುದು ಹೇಗೆ ಸಾಧ್ಯ?

ಇದಕ್ಕೆ ನಾನು ಅಜ್ಜಿಯನ್ನೇ ಪ್ರಶ್ನೆ ಮಾಡಲು ನಿರ್ಧರಿಸಿದೆ. ಆಗಿನ ಕಾಲಕ್ಕೆ ನಮ್ಮಜ್ಜಿ ‘ಎ’ ಕ್ಲಾಸ್ ಓದಿದ್ದರಂತೆ. ಆದರೆ ಬಹಳ ಚೆನ್ನಾಗಿ ಕನ್ನಡ ಓದುವುದನ್ನು ಮೈಗೂಡಿಸಿಕೊಂಡಿದ್ದರು. ಅವರು ಹೇಳಿದ್ದು ಹೀಗೆ. ನನ್ನನ್ನು ಒಳಕೋಣೆಗೆ ಕರೆದುಕೊಂಡು ಹೋದರು. ಅಲ್ಲಿದ್ದ ಜಾಯಿಕಾಯಿ ಪೆಟ್ಟಿಗೆಯಲ್ಲಿ ಮಡಿಬಟ್ಟೆಗಳನ್ನು ಜೋಡಿಸಿ ಇಡುತ್ತಿದ್ದರು. “ಮುಚ್ಚಳ ತೆಗೆ” ಎಂದರು. ಆಗೆಲ್ಲ ಮಧ್ಯಮ ವರ್ಗದ ಮನೆಗಳಲ್ಲಿ ಈಗಿನಂತೆ ವಾರ್ಡ್ರೋಬ್, ಆಲ್ಮೆರಾಗಳಿರುತ್ತಿರಲಿಲ್ಲ. ದಿನೋಪಯೋಗಿ ಮಡಿಬಟ್ಟೆಗಳನ್ನು ಜಾಯಿಕಾಯಿ ಪೆಟ್ಟಿಗೆಗಳು ಮತ್ತು ಬೆಲೆಬಾಳುವ ಉಡುಪುಗಳನ್ನು ಕಬ್ಬಣದ ಟ್ರಂಕುಗಳಲ್ಲಿ ಇಡುತ್ತಿದ್ದರು. ಪೆಟ್ಟಿಗೆಯಲ್ಲಿ ತಾವು ಉಡುತ್ತಿದ್ದ ಸೀರೆಯೊಂದನ್ನು ಅರಿಸಿ ತೆಗೆದರು. ಈಗ ನೋಡು ಎಂದು ತೋರಿದರು. ಅದರಲ್ಲಿ ಸೀರೆಯ ಮೇಲ್ಭಾಗವನ್ನು ಸಾಕಷ್ಟು ಮಡಿಸಿ ಒಳಗೆ ದಪ್ಪ ಹೊಲಿಗೆ ಹಾಕಿದ್ದರು. ಉದ್ದವು ನಮ್ಮಜ್ಜಿಯ ಅಳತೆಗೆ ಸರಿಹೊಂದುವಂತೆ ಮಾಡಲಾಗಿತ್ತು. ಅದನ್ನು ನನ್ನ ಸೊಂಟಕ್ಕೂ ಇರಿಸಿ ಉಡಿಸಿ ತೋರಿದಾಗ ನನ್ನ ಸಮಸ್ಯೆಗೆ ಉತ್ತರ ಸಿಕ್ಕಿತ್ತು. ನೀನು ಉಡಬಹುದಾದಂತ ಸೀರೆಯೊಂದನ್ನು ನಾನೇ ಬಿಡುವಾಗಿದ್ದಾಗ ಹೊಲಿದಿದ್ದೇನೆ.” ಎಂದರು. ಅವರು ಗಂಟಿನಿಂದ ಹುಡುಕಿ ಪುಟ್ಟ ಸೀರೆಯಂತೆ ಕಾಣುವ ದಿರಿಸನ್ನು ನನಗೆ ಉಡಿಸಿದರು. ಅದರಲ್ಲೂ ನೆರಿಗೆಗಳು, ಹೊಂದಿಕೊಂಡಂತ ಸೆರಗೂ ಇತ್ತು. ಕನ್ನಡಿ ಮುಂದೆ ನಿಲ್ಲಿಸಿ ನೋಡಿಕೊಳ್ಳಲು ಹೇಳಿದರು. ಅಜ್ಜಿಯು ಇದನ್ನು ‘ಕಿರಿಗೆ’ ಎನ್ನುತ್ತಾರೆ ಎಂದು ಹೇಳಿದರು. “ಬೇಕಾದರೆ ತೆಗೆದಿಟ್ಟುಕೋ, ಹಬ್ಬ ಹರಿದಿನಗಳಲ್ಲಿ ಉಡು” ಎಂದರು. ಅಲ್ಲಿಂದ ಪ್ರಾರಂಭವಾಯಿತು ನನ್ನ ಸೀರೆಯ ನಂಟು. ವಿಶೇಷ ದಿನಗಳಲ್ಲಿ ಅದನ್ನುಟ್ಟು ದೊಡ್ಡ ಹೆಂಗಸಿನಂತೆ ಓಡಾಡಿ ನಂತರ ಜೋಪಾನವಾಗಿ ಇರಿಸುತ್ತಿದ್ದೆ.

PC :Internet

ವರ್ಷಗಳುರುಳಿದಂತೆ ಸೀರೆಯ ಬಗ್ಗೆ ಹೆಚ್ಚಿ ಗಮನ ಹರಿಸತೊಡಗಿದೆ. ನನ್ನಮ್ಮ ಸ್ನೇಹಮಯಿ ಅಕ್ಕಪಕ್ಕದವರೊಡನೆ ಆತ್ಮೀಯ ಸಂಬಂಧ ಹೊಂದಿದ್ದರು. ಯಾರಿಗಾದರೂ ನೆರವು ಬೇಕಾದಾಗ ತಾವು ಯಾವರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಿತ್ತೋ ಹಾಗೆ ಸಹಾಯ ಹಸ್ತ ಚಾಚುತ್ತಿದ್ದರು. ಆಗ ಹಬ್ಬಹರಿದಿನಗಳ ವಿಶೇಷ ದಿನಗಳಲ್ಲದೆ ಉಳಿದಂತೆ ಹತ್ತಿಸೀರೆಗಳ ಬಳಕೆ ಸಾಮಾನ್ಯ. ಹೆಚ್ಚುಕಾಲ ಉಟ್ಟು ಹಳೆಯವಾದ ಮೇಲೆ ಅವುಗಳನ್ನು ಅಮ್ಮ ಶುದ್ಧವಾಗಿ ತೊಳೆದು ಒಣಗಿಸಿ ಒಂದೆಡೆ ಇಡುತ್ತಿದ್ದರು. ತಮ್ಮ ಪರಿಚಯದ ಮನೆಗಳಲ್ಲಿ ಯಾವುದೇ ಬಾಣಂತನ ಬರುತ್ತದೆಯೆಂಬ ಸೂಚನೆ ದೊರೆತಾಗ ಈ ಸೀರೆಯ ಗಂಟು ಹೊರತೆಗೆಯುತ್ತಿದ್ದರು. ಪುಟ್ಟ ಮಕ್ಕಳ ತೊಟ್ಟಿಲಿಗೆ ಹಾಸಲು, ಸುತ್ತಲೂ ಪರದೆಯಂತೆ ಕಟ್ಟಲು, ಆಗೆಲ್ಲ ಡೈಪರ್‌ಗಳ ಬಳಕೆ ಇರಲಿಲ್ಲವಾದ್ದರಿಂದ ಮಕ್ಕಳಿಗೆ ಕೆಳಭಾಗದಲ್ಲಿ ಕಟ್ಟಲು ತ್ರಿಕೋನಾಕಾರದಲ್ಲಿ ಕತ್ತರಿಸಿ ಹೊಲಿದು ಅದಕ್ಕೊಂದು ಗಂಟುಹಾಕಲು ಅನುಕೂಲವಾಗುವಂತೆ ಸಾಕಷ್ಟು ಸಂಖ್ಯೆಯಲ್ಲಿ ನ್ಯಾಪ್‌ಕಿನ್ನುಗಳನ್ನು ತಯಾರಿಸಿ ನೀಡುತ್ತಿದ್ದರು. ಮಕ್ಕಳಿಗೆ ಬೆಚ್ಚರಗಿರುವಂತೆ ಹಸ್ತಗಳಿಗೆ, ಪಾದಗಳಿಗೆ, ತಲೆಗೆ ಕಿವಿಮುಚ್ಚುವ ಟೋಪಿಯಂತೆ ಕೈಹೊಲಿಗೆಯಲ್ಲೇ ಸಿದ್ದಪಡಿಸಿ ಕೊಡುತ್ತಿದ್ದರು. ನಮ್ಮ ಮನೆಯಲ್ಲಂತೂ ಇವುಗಳ ಉಪಯೋಗ ಮಾಡುತ್ತಿದ್ದರು. ತೊಟ್ಟಿಲು ಕಟ್ಟುವುದರಲ್ಲಂತೂ ಅಮ್ಮನದ್ದು ಎತ್ತಿದಕೈ. ಅದಕ್ಕೆಲ್ಲ ಉಪಯೋಗವಾಗುತ್ತಿದ್ದದ್ದು ಹತ್ತಿಯ ಸೀರೆಗಳೇ. ಜೊತೆಗೆ ತೊಟ್ಟಿಲಿನ ಬದಲಾಗಿ ಜೋಲಿಗಳನ್ನು ಕಟ್ಟುವುದರಲ್ಲೂ ಅವರದ್ದು ಪಳಗಿದ ಕೈ. ಹಳೆಯ ಸೀರೆಗಳನ್ನೆಲ್ಲ ಚೌಕಕಾರದಲ್ಲಿ ಕತ್ತರಿಸಿ ಪಕ್ಕ ಪಕ್ಕ ಹಲವು ಮಡಿಕೆಗಳಲ್ಲಿ ಹೊಲಿದು ಕೌದಿಗಳನ್ನು ತಯಾರಿಸುತ್ತಿದ್ದರು. ಇವು ಹೊದೆಯಲು ಮೆತ್ತಗೂ, ಬೆಚ್ಚಗೂ ಇರುತ್ತಿದ್ದವು. ನಾವೂ ಮಕ್ಕಳು ಇಂಥಹವನ್ನು ಹೊದೆದಿದ್ದೇವೆ. ಅವನ್ನು ಹೊದೆದಾಗ ಅಮ್ಮ ನಮಗೆ ಹತ್ತಿರವಾಗಿರುವಂತಹ ಅನುಭವ ಕೊಡುತ್ತಿದ್ದವು ಈ ಕೌದಿಗಳು. ಏಕೆಂದರೆ ಇವುಗಳನ್ನು ಅಮ್ಮನ ಸೀರೆಗಳಿಂದ ತಯಾರಿಸಲಾಗುತ್ತಿತ್ತು.. ಇದರ ಆಧುನಿಕ ರೂಪವೇ ಇಂದಿನ ರಜಾಯಿಗಳಾಗಿವೆ. ವ್ಯತ್ಯಾಸವಿಷ್ಟೇ, ಇದರಲ್ಲಿ ಪದರಗಳ ನಡುವೆ ಹತ್ತಿ ಅಥವಾ ಉಣ್ಣೆಯನ್ನು ತುಂಬಲಾಗುತ್ತದೆ. ಹೊರಮೈಗೆ ಆಕರ್ಷಕವಾದ ರೇಷಿಮೆಯಂತಹ ಬಟ್ಟೆಯನ್ನು ಉಪಯೋಗಿಸಲಾಗುತ್ತದೆ.

ಶಾಲೆಗಳಿಗೆ ರಜಾ ಬಂದಾಗ ತಾತನವರ ಊರಿಗೆ ಹೋಗುತ್ತಿದ್ದೆವು. ಅದು ಹಳ್ಳಿ, ಕುಡಿಯುವ ನೀರನ್ನು ಊರ ಮುಂದಿರುವ ಬಾವಿಯಿಂದಲೇ ಎಲ್ಲರೂ ತರುತ್ತಿದ್ದರು. ಏಕೆಂದರೆ ಅಲ್ಲಿ ಮಾತ್ರವೇ ಸಿಹಿನೀರು ದೊರಕುತ್ತಿತ್ತು. ತಲೆಯ ಮೇಲೊಂದು ಸಿಂಬೆ ಸುತ್ತಿ ಅದರ ಮೇಲೆ ಒಂದುಕೊಡ, ಸೊಂಟದ ಮೇಲೊಂದು ಕೊಡ ಹೊತ್ತು ಹೆನ್ಣುಮಕ್ಕಳು ಸಾಗುವುದನ್ನು ನೋಡುವುದೇ ಒಂದು ಸೊಬಗು. ನೆತ್ತಿಯ ಮೇಲಿದ್ದ ಸಿಂಬೆಯೂ ಹಳೆಯ ಸೀರೆಯ ಬಟ್ಟೆಯಿಂದಲೇ ಮಾಡಿರುತ್ತಿತ್ತು. ಅದರ ಮೇಲಿರುವ ಕೊಡ ಅಲುಗಾಡದೆ ಕುಳಿತಿರುತ್ತಿತ್ತು. ನಾನೂ ಅವರಂತೆ ಹೊರಲು ಪ್ರಯತ್ನಿಸಿ ಕೊಡ ಕೆಳಗೆ ಬಿದ್ದುಹೋಗಿ ಬಯ್ಸಿಕೊಂಡೆ.

ಆಗೆಲ್ಲ ಮನೆಗೆ ನೆಂಟರಿಷ್ಟರು ಬಂದುಹೋಗುತ್ತಿದ್ದುದು ಸಮಾನ್ಯ. ಪೋನ್ ಸೌಕರ್ಯವೂ ಇರಲಿಲ್ಲ. ಹಾಗಾಗಿ ಮುನ್ಸೂಚನೆ ಇಲ್ಲದೆ ಇವೆಲ್ಲ ನಡೆಯುತ್ತಿದ್ದವು. ರಾತ್ರಿ ಬಂದವರಿಗೆ ಹಾಸಿಗೆ, ಹೊದಿಕೆಗಳನ್ನು ಹೊಂದಿಸಿದ ನಂತರ ನಮ್ಮ ವ್ಯವಸ್ಥೆ. ಆಗ ಎಷ್ಟೋ ಬಾರಿ ಅಮ್ಮನ ಹಳೆಯ ಸೀರೆಗಳೇ ನಮಗೆ ಆಸರೆಯಾಗುತ್ತಿದ್ದವು. ಅವರು ತಯಾರಿಸಿದ ಕೌದಿಗಳು ಛಳಿಗಾಲದಲ್ಲೂ ನಮಗೆ ಬೆಚ್ಚನೆಯ ಹೊದಿಕೆಯಾಗುತ್ತಿದ್ದವು. ಇವೆಲ್ಲವೂ ನನ್ನಮ್ಮನ ಕೈಚಳಕದಿಂದ.

ನಾವು ಶಾಲಾಕಾಲೇಜುಗಳಿಗೆ ಹೋಗುವಾಗ ವಾಹನ ಸೌಕರ್ಯವಿರಲಿಲ್ಲ. ನಡೆದುಕೊಂಡೇ ಹೋಗುತ್ತಿದ್ದೆವು. ನಾವು ದಾರಿಯಲ್ಲಿ ಸಾಗುವಾಗ ರಸ್ತೆಬದಿಯಲ್ಲಿ ಕಾಣುತ್ತಿದ್ದ ದೃಶ್ಯಗಳಲ್ಲಿ ಕೂಲಿಕಾರ ಹೆಂಗಸರು ಮರಗಳ ಬಲವಾದ ಕೊಂಬೆಗಳಿಗೆ ಎರಡೂ ಕಡೆಗಳಲ್ಲಿ ಸೀರೆಯೊಂದನ್ನು ಕಟ್ಟಿ ಜೋಲಿಯಂತೆ ಮಾಡಿ ತಮ್ಮ ಮಗುವನ್ನು ಮಲಗಿಸಿ ತಾವು ಕೆಲಸದಲ್ಲಿ ತೊಡಗುತ್ತಿದ್ದರು. ಕೃಷಿ ಜಮೀನುಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಂತೂ ಒನಕೆ ಓಬವ್ವರಂತೆ ವೀರಗಚ್ಚೆಯಂತೆ ಸೀರೆಯನ್ನು ಮೇಲೆತ್ತಿಕಟ್ಟಿ ಕೆಲಸ ಮಾಡುತ್ತಿದ್ದರು. ನಾವು ರಾಯಚೂರಿನಲ್ಲಿದ್ದಾಗ ಹೊಲಗಳಲ್ಲಿ ಇದೇ ರೀತಿಯಲ್ಲಿ ಕೋಣಗಳನ್ನು ಕಟ್ಟಿದ ನೇಗಿಲಿನಿಂದ ಉಳುವ ಹೆಂಗಸರನ್ನೂ ಕಂಡಿದ್ದೇನೆ.

ನಮ್ಮ ಸೋದರತ್ತೆಯವರದ್ದು ಕೃಷಿ ಕುಟುಂಬ. ಅವರ ಮನೆಗೆ ಹೋದಾಗ ಮರಗಳಿಗೆ ಕಟ್ಟಿದ್ದ ಸೀರೆಯ ಜೋಕಾಲಿಯಲ್ಲಿ ಜೀಕಿಕೊಂಡು ಖುಷಿ ಪಟ್ಟಿದ್ದೂ ಉಂಟು. ಹಾಗೇ ಒಮ್ಮೆ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡದ್ದೂ ಉಂಟು. ನಮ್ಮ ಪಕ್ಕದ ಮನೆಯಲ್ಲಿ ಗಂಗಮ್ಮನೆಂಬ ಒಬ್ಬರಿದ್ದರು. ಅವರು ಹೊಲದಬಳಿ ದನಗಳನ್ನು ಮೇಯಿಸಿಕೊಂಡು ಬರುವಾಗ ಕರುವಿಗೆ ಹಸಿಹುಲ್ಲು, ಸೊಪ್ಪು ತರಕಾರಿಗಳನ್ನು ಕಿತ್ತು ಹೊತ್ತುಕೊಂಡು ಸಂಜೆಗೆ ಬರುತ್ತಿದ್ದರು. ಅವರು ತಲೆಯಮೇಲೆ ಹುಲ್ಲಿನ ಹೊರೆಹೊತ್ತು, ಸೀರೆಯ ಸೆರಿಗಿನಿಂದ ಸೊಂಟಕ್ಕೆ ಚೀಲದಂತೆ ಕಟ್ಟಿಕೊಂಡು ಸೊಪ್ಪು ತರಕಾರಿಗಳೊಡನೆ ಮಗುವನ್ನೂ ಕರೆತರುತ್ತಿದ್ದ ದೃಶ್ಯ ಮರೆಯುವಂತಿಲ್ಲ.

PC :Internet

ಕಾಲೇಜಿಗೆ ಸೇರುತ್ತಿದ್ದಂತೆ ನಮ್ಮಮ್ಮ ನನಗೆ ಸೀರೆಯನ್ನೇ ಉಟ್ಟುಹೋಗಲು ತಾಕೀತು ಮಾಡಿದ್ದರು. ಗೆಳತಿಯರನೇಕರು ಆಧುನಿಕ ರೀತಿಯ ಉಡುಪುಗಳನ್ನು ಧರಿಸಿ ಬರುವಾಗ ನನಗೂ ಆಸೆಯಾಗುತ್ತಿತ್ತು. ಸೀರೆ ಧರಿಸಲು ನಿರಾಕರಿಸಿದರೆ ಕಾಲೇಜಿಗೇ ಕಳುಹಿಸುವುದಿಲ್ಲವೆಂಬ ಹೆದರಿಕೆಯಿತ್ತು. ಆಗ ಒತ್ತಾಯಕ್ಕೆ ಸೀರೆಯುಡುತ್ತಿದ್ದ ನಾನು ಈಗ ಇಷ್ಟಪಟ್ಟು ಸೀರೆಗಳನ್ನು ಒಪ್ಪವಾಗಿ ಧರಿಸಿ ಒಡಾಡುತ್ತೇನೆ. ನನಗೆ ಬೇಕಾದ ಉಡುಪುಗಳನ್ನು ಧರಿಸುವ ಅನುಕೂಲತೆಗಳು, ಸ್ವಾತಂತ್ರö್ಯ ಈಗ ಇದ್ದರೂ ನನಗೆ ನೆಚ್ಚಿನದ್ದು ಬಹೂಪಯೋಗಿಯಾದ ಸೀರೆಯೇ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನನ್ನ ಬರಹದಿಂದ ನಿಮಗೂ ಹಳೆಯ ನೆನಪುಗಳು ಮರುಕಳಿಸಬಹುದೆಂಬ ಆಶಯ ನನ್ನದು.

-ಬಿ.ಆರ್.ನಾಗರತ್ನ. ಮೈಸೂರು.

10 Responses

  1. ಚಂದದ ಚಿತ್ರ ಗಳೊಂದಿಗೆ ನನ್ನ ಸೀರೆಯ ಲೇಖನ ಪ್ರಕಟಿಸಿದ ಗೆಳತಿ ಹೇಮಾಳಿಗೆ ಧನ್ಯವಾದಗಳು

  2. ನಯನ ಬಜಕೂಡ್ಲು says:

    ಸೊಗಸಾಗಿದೆ ಲೇಖನ

  3. ಮ.ನ.ಲತಾಮೋಹನ್ says:

    ನೀರೆಯ ಸೀರೆಯಲ್ಲಿ ಮೂಡಿ ಬಂದಿರುವ ಗೆಳತಿ ನಾಗರತ್ನ ಅವರು ಲೇಖನ ನೆನಪುಗಳು ಬುತ್ತಿಯನ್ನು ಬಿಚ್ಚಿಟ್ಟಿತು

  4. ಧನ್ಯವಾದಗಳು ನಯನಮೇಡಂ

  5. Hema Mala says:

    ಮನಸಿನ ಪುಟಗಳಲ್ಲಿದ್ದ ಸೀರೆಯ ನೆನೆಪುಗಳು… ಸೊಗಸಾಗಿ ಮೂಡಿ ಬಂದಿವೆ.

  6. ಶಂಕರಿ ಶರ್ಮ says:

    ಬಾಲ್ಯದ ನೆನಪುಗಳನ್ನು ಹೊತ್ತು ತಂದ, ಹತ್ತಿ ಸೀರೆಗಳ ಬಹು ಉಪಯೋಗಗಳನ್ನು ಬಿಂಬಿಸಿದ ಲೇಖನವು ಆಕರ್ಷಕವಾಗಿ ಮೂಡಿಬಂದಿದೆ ನಾಗರತ್ನ ಮೇಡಂ…ಧನ್ಯವಾದಗಳು.

  7. ಧನ್ಯವಾದಗಳು ಶಂಕರಿ ಮೇಡಂ

  8. ಪದ್ಮಾ ಆನಂದ್ says:

    ಸೀರೆಗಳ ಹಲವು ವಿಭಿನ್ನ ಉಪಯೋಗಗಳ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾ ನಲಿವಿನ ಸೀರೆಯ ವಿವರಗಳು ಮತ್ತು ನೆನಪುಗಳು ಮುದ ನೀಡಿದವು.

  9. ಧನ್ಯವಾದಗಳು ಪದ್ಮಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: