ದೇವಯಾನಿ- ಶರ್ಮಿಷ್ಠೆ : ಭಾಗ 1
“ಮಾತು ಬೆಳ್ಳಿ, ಮೌನ ಬಂಗಾರ”
“ಮಾತನಾಡಿದರೆ ಮುತ್ತು ಉದುರುವಂತಿರಬೇಕು”
“ಮಾತು ಬಲ್ಲವನಿಗೆ ಜಗಳವಿಲ್ಲ”
“ಮಾತಿನಲ್ಲಿ ತೂಕವಿರಬೇಕು”.
ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ ಸಲಹೆಗಳು. ಹೌದು. ಮಾತು ಮಿತ್ರನನ್ನೂ ಸೃಷ್ಟಿಸುತ್ತದೆ, ಶತ್ರುವನ್ನೂ ಹುಟ್ಟಿಸುತ್ತದೆ. ಹದತಪ್ಪಿ ಮಾತನಾಡಿದ ಬಳಿಕ ಪಶ್ಚಾತ್ತಾಪ ಪಡುವವರು ಅನೇಕರಾದರೆ; ಅನಗತ್ಯವಾಗಿ ಕಠೋರ ಮಾತನ್ನಾಡಿದರೂ ತಾವು ಹೇಳಿದ್ದೇ ಸರಿಯೆಂದು ವಾದಿಸುವ ಮೂರ್ಖರೂ ಇದ್ದಾರೆ. ಬೇರೆಯವರು ನಮ್ಮನ್ನು ಟೀಕಿಸಿದರೆ, ಕೆರಳುವಂತೆ ಮಾತನಾಡಿದರೆ ಅದಕ್ಕಾಗಿ ಕೋಪಗೊಳ್ಳದೆ,ಎದುರಾಡದೆ ಜಾಣ್ಮೆಯ ಮಾತನಾಡಿ ವಿಕೋಪಕ್ಕೆ ತಿರುಗದಂತೆ ಜಾಗರೂಕರಾಗಿರುವುದು ಬುದ್ಧಿವಂತರ ಲಕ್ಷಣ. ಆದರೆ ಇದು ಒಂದು ಕಲೆಗಾರಿಕೆ. ಅದು ಎಲ್ಲರಿಗೂ ಸಿದ್ಧಿಸುವ ಮಾತಲ್ಲ. ಕೋಪವನ್ನು ಜಯಿಸಿದಾತ ಮಹಾಪುರುಷನೇ ಸರಿ. ಎಷ್ಟೋ ಕಾಲದಿಂದ ಅತೀ ಆತ್ಮೀಯ ಸ್ನೇಹಿತರಾಗಿದ್ದು ಒಂದು ಸಣ್ಣ ಮಾತಿನಿಂದ ಒಡಕು ಮೂಡಿ ಅವರ ಮಿತ್ರತ್ವ; ಶತ್ರುತ್ವಕ್ಕೆ ತಿರುಗುವ ಉದಾಹರಣೆಯು ಲೋಕದಲ್ಲಿ ನಡೆಯುತ್ತಲೇ ಇರುವುದು ನಮ್ಮ ಗಮನಕ್ಕೆ ಬರುತ್ತದೆ. ಅನ್ಯೋನ್ಯವಾಗಿರುವ ಗೆಳತಿಯರಿಬ್ಬರೊಳಗೆ; ಒಂದು ಮಾತಿನಿಂದ ಹೇಗೆ ಕಲಹವೇರ್ಪಟ್ಟಿತು? ಮತ್ತದು ಎಲ್ಲಿಯ ತನಕ ಹೋಯಿತು? ಆ ಕಲಹದಿಂದ ಮತ್ತೆ ಪಶ್ಚಾತ್ತಾಪವಾಗಿ ಹೇಗೆ ಪ್ರಾಯಶ್ಚಿತ್ತ ಮಾಡಿಕೊಂಡರು ಎಂಬುದನ್ನು ಮಹಾಭಾರತದಲ್ಲಿ ಬರುವ ದೇವಯಾನಿ, ಶರ್ಮಿಷ್ಠೆಯರ ಕಥಾನಕದಿಂದ ನಾವು ಅರಿತುಕೊಳ್ಳಬಹುದು.
ಅಸುರ ರಾಜನಾದ ವೃಷಪರ್ವನ ಮಗಳು ಶರ್ಮಿಷ್ಠೆ. ದೈತ್ಯಗುರು ಶುಕ್ರಾಚಾರ್ಯನ ಮಗಳು ದೇವಯಾನಿ. ಇವಳ ತಾಯಿ ಪ್ರಿಯವ್ರತ ರಾಜನ ಮಗಳಾದ ಊರ್ಜಸೃತಿ. ಗುರುವಿನ ಮಗಳೂ ರಾಜನ ಮಗಳೂ ಅನ್ಯೋನ್ಯತೆಯ ಒಡನಾಟದಿಂದ ಸಖಿಯರಾಗಿದ್ದರು. ಒಂದು ದಿನ ಅವರಿಬ್ಬರೂ ಜೊತೆಯಾಗಿ ಜಲಕ್ರೀಡೆಗೆ ಹೋದರು. ಸರೋವರದ ದಂಡೆಯ ಮೇಲೆ ತಮ್ಮ ತಮ್ಮ ಸೀರೆಗಳನ್ನು ಬಿಚ್ಚಿಟ್ಟು ನೀರಿಗಿಳಿದು ಜಲಕ್ರೀಡೆಯಲ್ಲಿ ತಲ್ಲೀನರಾಗಿದ್ದಾಗ ಒಂದು ಗಾಳಿ ಬಂದು ಅವರ ಸೀರೆಗಳೆಲ್ಲಾ ಗಾಳಿಗೆ ಸ್ಥಾನ ಪಲ್ಲಟಗೊಂಡು ಸ್ವಲ್ಪ ದೂರಹೋಗಿ ಬಿದ್ದುವು. ಸ್ನಾನ ತೀರಿಸಿ ಎದ್ದ ಗೆಳತಿಯರು ದೂರದಲ್ಲಿ ಬಿದ್ದಿದ್ದ ತಮ್ಮ ಸೀರೆಗಳನ್ನು ನಾಚಿಕೆಯಿಂದ ಗಡಿಬಿಡಿಯಲ್ಲಿ ಉಟ್ಟುಕೊಂಡರು. ನೋಡಿದರೆ ಅವರ ವಸ್ತ್ರಗಳು ಅದಲು ಬದಲಾಗಿದ್ದುವು. ಇದರಿಂದ ಕೋಪಾವಿಷ್ಟಳಾದ ಶರ್ಮಿಷ್ಠೆ, ದೇವಯಾನಿಯನ್ನು ನಿಷ್ಠುರವಾಗಿ ಬೈದಳು. “ಅಸುರ ಪುತ್ರಿಯೇ, ನೀನೇಕೆ ನನ್ನ ಸೀರೆಯನ್ನು ಉಟ್ಟುಕೊಂಡೆ?. ನೀನು ನನ್ನ ತಂದೆಯ ಕಿಂಕರನ ಮಗಳು. ನಿನ್ನ ತಂದೆ ಹೊಗಳುಭಟ್ಟನು, ದೀನನಾದವನ ಮಗಳುಬಿಕ್ಷುಕಿ ನೀನು”.
ಹೀಗೆ ಹಳಿದು ಮಾತನಾಡಿದ ಶರ್ಮಿಷ್ಠೆಯಲ್ಲಿ ದೇವಯಾನಿಗೂ ಸಿಟ್ಟು ಬಂತು. ಇಬ್ಬರಿಗೂ ಪರಸ್ಪರ ವಾಗ್ವಾದ ನಡೆಯಿತು. ಒಬ್ಬರನ್ನೊಬ್ಬರು ಎಳೆದಾಡಿ ಜಗ್ಗಾಟ ಮಾಡುತ್ತಾ ನಾನು ಹೆಚ್ಚು, ತಾನು ಹೆಚ್ಚು ಎಂಬ ದುರಭಿಮಾನದಿಂದ ಹೊಡೆದಾಡಿಕೊಂರು. ಕೊನೆಗೆ ಶರ್ಮಿಷ್ಠೆ, ದೇವಯಾನಿಯನ್ನು ದರ ದರನೆ ಎಳೆದು ತಂದು ಹತ್ತಿರದಲ್ಲಿದ್ದ ಹಾಳು ಬಾವಿಗೆ ತಳ್ಳಿದಳು. ಅವಳು ಸತ್ತೇ ಹೋದಳೆಂದು ಭಾವಿಸಿದ ಶರ್ಮಿಷ್ಠೆ ಹಿಂದಿರುಗಿಯೂ ನೋಡದೆ ದಾಸಿಯರೊಂದಿಗೆ ಅರಮನೆಗೆ ಹೊರಟು ಹೋದಳು.
ಸ್ವಲ್ಪ ಹೊತ್ತಲ್ಲಿ ಅದೇ ಮಾರ್ಗವಾಗಿ ನಹುಷನ ಮಗನಾದ ಯಯಾತಿ ರಾಜಕುಮಾರನು ಬೇಟೆಯಾಡುತ್ತಾ ಬಂದವನು ನೀರು ಕುಡಿಯುವ ಸಲುವಾಗಿ ಆ ಬಾವಿಯೊಳಗೆ ಬಗ್ಗಿದನು. ನೋಡಿದರೆ ಬಾವಿಯೊಳಗೆ ಬಹಳ ಚೆಲುವೆಯಾದ ರಾಜಕುಮಾರಿಯನ್ನು ಕಂಡನು. ಅವಳನ್ನು ಮೃದು ಮಧುರ ಮಾತುಗಳಿಂದ “ನೀನಾರು? ನಿನ್ನ ಕುಲಗೋತ್ರಗಳೇನು?” ಎಂದು ವಿಚಾರಿಸಿದನು. “ದೇವತೆಗಳಿಂದ ಹತರಾದ ರಾಕ್ಷಸರನ್ನು ತನ್ನಲ್ಲಿರುವ ಮೃತಸಂಜೀವಿನಿಯಿಂದ ಬದುಕಿಸುವ ಶುಕ್ರಾಚಾರ್ಯನ ಮಗಳು ದೇವಯಾನಿಯೇ ನಾನು”. ಎಂದಳು ತರುಣಿ. ಹಾಗೆಂದವಳೇ “ನೀನು ಸತ್ಕುಲ ಪ್ರಸೂತನಂತೆ ಕಾಣುತ್ತಿಯಾ ಈ ಕೂಪದಲ್ಲಿ ಬಿದ್ದಿರುವ ನನ್ನನ್ನು ಮೇಲೆತ್ತಿ ಉದ್ಧರಿಸು” ಎಂದಳು.
ದೇವಯಾನಿ ಶುಕ್ರರ ಮಗಳೆಂದು ತಿಳಿದು ಯಯಾತಿಗೆ ಆಕೆ ಬ್ರಾಹ್ಮಣ ಕನ್ಯೆ ಎಂದು ತಿಳಿಯಲು ತಡವಾಗಲಿಲ್ಲ. ಆಕೆಯ ಬಲಗೈಯನ್ನು ಹಿಡಿದೆತ್ತಿ ಮೇಲೆ ತಂದು ಬಾವಿ ದಂಡೆಯಲ್ಲಿ ಕುಳ್ಳಿರಿಸಿ ಒಂದೆರಡು ಸಾಂತ್ವನದ ಮಾತನ್ನಾಡಿ ತನ್ನ ರಾಜಧಾನಿಗೆ ಹೊರಟು ಹೋದನು.
ಇತ್ತ ದೇವಯಾನಿಯನ್ನರಸುತ್ತಾ ದಾಸಿಯು ಬರಲಾಗಿ ಅಳುತ್ತಾ ಕುಳಿತಿರುವ ಯಜಮಾನಿಯನ್ನು ಕಂಡಳು. ಏನೆಂದು ಪ್ರಶ್ನೆಮಾಡಲು ಎಲ್ಲವನ್ನೂ ವಿಶದಪಡಿಸಿದ ಆಕೆಯು ಶರ್ಮಿಷ್ಠೆ ಇರುವ ಪಟ್ಟಣಕ್ಕೆ ತಾನು ಬರುವುದಿಲ್ಲವೆಂದು ಹಠ ಹಿಡಿದಳು. ದಾಸಿಯು ಓಡುತ್ತಾ ಹೋಗಿ ಶುಕ್ರರಿಗೆ ತಿಳಿಸಿದಳು. ಶುಕ್ರರು ಮಗಳ ಬಳಿಗೆ ಬಂದು ಕೂಲಂಕುಷ ವಿಚಾರಿಸಿದರು. “ಶರ್ಮಿಷ್ಠೆ ನನ್ನನ್ನು ಕಟು ನುಡಿಗಳಿಂದ ಹಂಗಿಸಿ ಮಾತನಾಡಿದ್ದಲ್ಲದೆ “ಹೊಗಳು ಭಟ್ಟನ ಮಗಳು, ದೀನನ ಮಗಳು ಭಿಕ್ಷುಕಿ ಎಂದು ಜರೆದಳು. ನಾನಿದನ್ನು ಖಂಡಿತ ಸಹಿಸುವುದಿಲ್ಲ. ನಾನು ರಾಜ್ಯಕ್ಕೆ ಬರಬೇಕಿದ್ದರೆ ಶರ್ಮಿಷ್ಠೆಗೆ ಶಿಕ್ಷೆಯಾಗಲೇ ಬೇಕು” ಎಂದು ಖಡಾಖಂಡಿತವಾಗಿ ನುಡಿದಳು.
(ಮುಂದುವರಿಯುವುದು)..
–ವಿಜಯಾಸುಬ್ರಹ್ಮಣ್ಯ ಕುಂಬಳೆ.
Nice
ಪೌರಾಣಿಕ ಕಥೆಗಳ ನಿರೂಪಣೆ ಸೊಗಸಾಗಿ ಮಾಡುತ್ತೀರಾ ವಿಜಯಾ ಮೇಡಂ.. ಕೆಲವು ಸಾರಿ ಮರೆತವು ನೆನಪಿಗೆ ಬರುತ್ತವೆ ಕೆಲವು ಸಾರಿ..ಅಪರೂಪದ ಕಥೆಗಳ ಅನಾವರಣ..ಒಟ್ಟಾರೆ ಚೆನ್ನಾಗಿ ಬರೆಯುತ್ತೀರಾ…ವಂದನೆಗಳು..
ಬಹಳಷ್ಟು ಉತ್ತಮ ಸಂದೇಶಗಳನ್ನು ಹೊತ್ತು ತರುವ ಪೌರಾಣಿಕ ಕಥೆಗಳು ಯಾವತ್ತೂ ಚಂದ. ಸರಳ ನಿರೂಪಣೆ ಆಕರ್ಷಕವಾಗಿದೆ.
ಚಂದದ ಸಂದರ್ಭೋಚಿತ ಚಿತ್ರಗಳೊಂದಿಗೆ ಕುತೂಹಲಭರಿಸ ಕಥೆ ಸೂಕ್ತ ಮುನ್ನುಡಿಯೊಂದಿಗೆ ಪ್ರಾರಂಭವಾದದ್ದು ಮುದ ನೀಡಿತು.