ದೇವಯಾನಿ, ಶರ್ಮಿಷ್ಠೆ : ಭಾಗ 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಶುಕ್ರರು ಮಗಳಿಗೆ ಬಹಳವಾಗಿ ನೀತಿ ಹೇಳಿದರೂ ದೇವಯಾನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಶುಕ್ರರು ಸ್ವಲ್ಪ ಹೊತ್ತು ಯೋಚಿಸಿದವರೇ ನೇರವಾಗಿ ವೃಷಪರ್ವನಲ್ಲಿಗೆ ಹೋದರು.
“ರಾಜಾ, ನಿನ್ನ ಮಗಳು ನನ್ನ ಮಗಳನ್ನು ಕಟುವಾಗಿ ನಿಂದಿಸಿದ್ದಲ್ಲದೆ ಬಾವಿಗೆ ತಳ್ಳಿಬಿಟ್ಟು ಬಂದಿದ್ದಾಳೆ.ಇಂತಹ ಅವಮಾನದ ಕಡೆ ನಾನಿನ್ನು ನಿಲ್ಲಲಾರೆ,ಈಗಲೇ ಹೊರಟೆ” ಎಂದರು.
ವೃಷಪರ್ವನಹೃದಯ ಕಂಪಿಸಿತು. ಎಲ್ಲಿ ಶುಕ್ರರು ಹೊರಟು ಬಿಡುವರೋ ಎಂಬ ಭಯವಾಗಿ ಅವರಿಗೆ ಕೈ ಜೋಡಿಸಿ “ಗುರುಗಳೇ ತಾವು ಹೊರಟು ಹೋದರೆ ನಾವು ರಕ್ಷಕರಿಲ್ಲದಂತಾಗುವೆವು. ಹಾಗೆ ಸರ್ವಥಾ ಮಾಡಬೇಡಿ” ಎನ್ನಲು ಶುಕ್ರರು “ದ್ಯೆತ್ಯೇಂದ್ರಾ ನೀನು ಬಂದು ನನ್ನ ಮಗಳನ್ನು ಸಂತೈಸಿದಲ್ಲಿ ನಾನು ನಿನ್ನ ಹಿತಚಿಂತಕನಾಗೇ ಇರುವೆನು” ಎಂದನಲ್ಲದೆ ಶುಕ್ರರ ಜೊತೆಯಲ್ಲಿ ದೇವಯಾನಿ ಇರುವೆಡೆಗೆ ಬಂದು “ತಾಯೇ ನೀನು ನಮ್ಮ ಗುರುಪುತ್ರಿಯಾದುದರಿಂದ ಆದರಣೀಯಳಾಗಿರುವೆ.ನನ್ನ ಮಗಳು ತಪ್ಪುಮಾಡಿರುವಳು ನಿಜ. ಅದಕ್ಕಾಗಿ ನೀನು ಏನು ಹೇಳುವಿಯೋ ಆ ಶಿಕ್ಷೆಯನ್ನು ನಾವು ಶಿರಸಾವಹಿಸಿ ಸ್ವೀಕರಿಸುತ್ತೇವೆ” ಎಂದನು.
ದೇವಯಾನಿಯು “ಹಾಗಾದರೆ ಕೇಳು ಮಹಾರಾಜ, ನಿನ್ನ ಮಗಳು ಸಾವಿರ ಸೇವಕಿಯರೊಂದಿಗೆ ನನ್ನ ಕಿಂಕರಳಾಗಿರಬೇಕು; ಅಷ್ಟೇ ಅಲ್ಲ ನನ್ನ ವಿವಾಹವಾಗಿ ನಾನು ಹೋದರೆ ಅಲ್ಲಿಗೂ ನನ್ನೊಂದಿಗೆ ದಾಸಿಯಾಗಿ ಬರಬೇಕು”. ಎನ್ನಲು ವೃಷಪರ್ವನು ಹಿಂದು-ಮುಂದು ಯೋಚಿಸದೆ ಶರ್ಮಿಷ್ಠೆಗೆ ಹೇಳಿ ಕಳುಹಿಸಿದನು.
ಮಗಳು ಬಂದಳು, ಅವಳೊಡನೆ “ಕುಮಾರೀ ದೇವಯಾನಿಯ ಮಾತುಗಳಿಂದ ಆಚಾರ್ಯರು ಅರಮನೆ ಬಿಟ್ಟು ಹೊರಡಲು ಸಿದ್ಧರಾಗಿರುವರು. ಅವರು ಇಲ್ಲದೇ ಹೋದರೆ ನಮ್ಮ ಹಿತರಕ್ಷಕರಿಲ್ಲ. ಅವರಿಲ್ಲಿ ಇರಬೇಕಾದರೆ ನೀನು ದೇವಯಾನಿಯ ದಾಸಿಯಾಗಿರಲೇ ಬೇಕು. ಬಂಧುಗಳ ಮತ್ತು ದೇಶದ ಹಿತದೃಷ್ಟಿಯಿಂದ ನೀನು ಇಂತಹ ಕಠಿಣ ಅವಸ್ಥೆಯನ್ನು ಅನುಭವಿಸಲೇ ಬೇಕು ಮಗಳೇ” ಎಂದ.
ತಂದೆಯ ಆಜ್ಞೆಯನ್ನು ಮಗಳಾದ ಶರ್ಮಿಷ್ಠೆ ಶಿರಸಾವಹಿಸಿದಳು. ಅರಣ್ಯಕ್ಕೆ ಬಂದು ಸಖಿಯಾದ ದೇವಯಾನಿಯಲ್ಲಿ ಗುರುಗಳ ಮತ್ತು ಪಿತೃವಾಕ್ಯ ಪೂರೈಸುವೆನೆಂದಳು.
ಈಗ ದೇವಯಾನಿಯುಶರ್ಮಿಷ್ಠೆಯನ್ನು “ಹೊಗಳುಭಟ್ಟನ ದಾಸಿಯಾಗುವೆಯಾ? ದೀನನ ಮಗಳ ಕಿಂಕರಳಾಗಲು ದಾನಿಯ ಮಗಳಾದ ಶರ್ಮಿಷ್ಠೆಯಿಂದ ಸಾಧ್ಯವೇ?” ಎಂದು ಚುಚ್ಚಿ ಮಾತಾಡಿದರೂ ಅವಳು ತಾಳ್ಮೆ ತಪ್ಪಲಿಲ್ಲ. ಗಂಭೀರಳಾಗಿಯೇ ಉತ್ತರ ಕೊಟ್ಟಳು.”ದೇಶದ ಜನ ಮತ್ತು ಬಂದು ಬಾಂಧವರ ಹಿತರಕ್ಷಣೆಗಾಗಿ ಸ್ವಾರ್ಥ ತ್ಯಾಗ ಮಾಡಲೇಬೇಕು ದೇವಯಾನಿ, ನಿನ್ನ ಸೇವೆಯನ್ನು ಮಾಡಲೇಬೇಕೆಂದು ನಿಶ್ಚೈಸಿದ್ದೇನೆ” ಎಂದಾಗ ದೇವಯಾನಿಗೆ ಪರಮಾನಂದವಾಯಿತು.
ವಿಧಿ ವಿಲಾಸದಂತೆ ಶರ್ಮಿಷ್ಠೆಯು ರಾಜಕುಮಾರಿಯಾದರೂ ಸಖಿಯ ದಾಸ್ಯ ವೃತ್ತಿಯನ್ನು ವ್ರತದಂತೆ ಸ್ವೀಕರಿಸಿದಳು. ರಾಜಯೋಗವನ್ನು ಅನುಭವಿಸಬೇಕಾದವಳು ಜೀವನ ಪರ್ಯಂತ ದೇಶದ ಹಿತಕ್ಕಾಗಿ ಕಿಂಕರವೃತ್ತಿ! ಅದೇನು ಸಾಮಾನ್ಯವೇ? ಕಾಮ,ಕ್ರೋಧ,ಲೋಭ,ಮೋಹ, ಮದ,ಮತ್ಸರಾದಿಗಳನ್ನೆಲ್ಲಾ ದೂರ ಮಾಡಿ ದೇವಯಾನಿಯ ಇಂಗಿತವನ್ನರಿತು ಸೇವೆಮಾಡಲು ಕಂಕಣತೊಟ್ಟಳು. ಹೀಗಿರಲು ಒಂದು ದಿನ ಅವರಿಬ್ಬರೂ ವನಸಂಚಾರಕ್ಕೆ ತೆರಳಿದರು.
ಹಲವು ದಿನಗಳ ಮೇಲೆ ಸಖಿಯನ್ನನುಸರಿಸಿ ವನಪ್ರವೇಶ ಮಾಡಿದಳು. ಸರೋವರದ ಬಳಿ ವಿಶ್ರಾಂತಿ ಪಡೆಯಲು ಹಂಸತೂಲಿಕಾತಲ್ಪ ಏರ್ಪಟ್ಟು ಅದರಲ್ಲಿ ಮಲಗಿದ್ದ ದೇವಯಾನಿಯ ಕಾಲುಗಳನ್ನು ಶರ್ಮಿಷ್ಠೆ ಒತ್ತುತ್ತಿದ್ದಳು.ಆ ಸಮಯಕ್ಕೆ ಸರಿಯಾಗಿ ನಹುಷನ ಮಗನಾದ ಯಯಾತಿಯು ನೀರು ಕುಡಿಯಲು ಅಲ್ಲಿಗೆ ಪ್ರವೇಶಿಸಿದನು.
ಯಯಾತಿಗೆ ದೇವಯಾನಿಯು ಪುನಃ ಪರಿಚಯವನ್ನು ಹೇಳಿದಳು. ಆತ ಹಿಂದೊಮ್ಮೆ ನೋಡಿದ್ದ. ಆಗಿನ ದೇವಯಾನಿಗೂ ಈಗಿನ ಅವಳ ಶರೀರ ಕಾಂತಿಗೂ ಬಹಳ ಅಂತರವಿತ್ತು. ಈಗ ಅವಳು ಸಾಕ್ಷಾತ್ ಚಕ್ರವರ್ತಿನಿಯಂತೆ ಶೋಭಿಸುತ್ತಿದ್ದಳು. ಶರ್ಮಿಷ್ಠೆಯನ್ನು ತೋರಿಸುತ್ತಾ ಈಕೆ ವೃಷಪರ್ವನ ಮಗಳಲ್ಲದೆ ನನ್ನ ದಾಸಿಯಾಗಿ ನಾನು ಹೋದೆಡೆಗೆಲ್ಲಾ ಬರುವಳೆಂದು ದೇವಯಾನಿ ಹೇಳಿದಾಗ ರಾಜನಿಗೆ ಪರಮಾಶ್ಚರ್ಯವಾಯಿತು! ಹಿಂದೆ ಬಾವಿಯಿಂದ ಮೇಲಕ್ಕೆತ್ತಿದಾಗಲೇ ಯಯಾತಿಯಲ್ಲಿ ದೇವಯಾನಿಗೆ ಪ್ರೇಮಾಂಕುರವಾಗಿತ್ತು. ಈಗದು ಬಲವಾಯಿತು. ತನ್ನನ್ನು ವಿವಾಹವಾಗಬೇಕೆಂದು ಕೇಳಿಕೊಂಡಳು.
“ಬ್ರಾಹ್ಮಣ ಪುತ್ರಿಯನ್ನು ಕ್ಷತ್ರಿಯನಾದ ನಾನು ಪರಿಗ್ರಹಿಸುವುದೆಂದರೇನು! ಇದು ಸಾಧ್ಯವಿಲ್ಲವೆಂದು ಆತ ಹೇಳಿದರೂ ನಾನು ನಿನ್ನನ್ನೇ ವರಿಸುವೆನೆಂದು ಪಟ್ಟು ಹಿಡಿದಳು. ಸೇವಕಿಯೊಬ್ಬಳನ್ನು ಕರೆದು ತಂದೆಗೆ ವಿಷಯ ತಿಳಿಸಿ ಬರಲು ಹೇಳಿದಳು. ಶುಕ್ರರು ಬಂದು ಯಯಾತಿಯೊಡನೆ “ನನ್ನ ಮಗಳನ್ನು ಧರ್ಮಪತ್ನಿಯನ್ನಾಗಿ ಸ್ವೀಕರಿಸು ಎಂದರು. ಮತ್ತೆ ಶುಕ್ರರು “ದೇವಯಾನಿಯ ಸಖಿಯಾದ ಶರ್ಮಿಷ್ಠೆಯು ರಾಜಕುಮಾರಿಯಾದರೂ ನನ್ನ ಮಗಳ ದಾಸಿಯು. ನೀನು ಅವಳನ್ನು ಗೌರವಿಸಬೇಕಲ್ಲದೆ ಆಕೆಯೊಂದಿಗೆ ಸಮಾಗಮವನ್ನು ಮಾತ್ರ ಮಾಡಬಾರದು” ಎಂದರು.
ಮುಂದೆ ವೃಷಪರ್ವನ ಪಟ್ಟಣದಲ್ಲಿ ದೇವಯಾನಿ ಮತ್ತು ಯಯಾತಿಯರ ವಿವಾಹ ನೆರವೇರಿತು. ದೇವಯಾ, ಶರ್ಮಿಷ್ಠೆಗೆ ಯಯಾತಿಯು ತನ್ನರಮನೆಗೆ ಸೇರಿದ ಅಶೋಕವನದಲ್ಲಿ ವಿಶೇಷ ಸೌಧವೊಂದನ್ನು ನಿರ್ಮಿಸಿದನು. ಅವಳು ಸಾವಿರ ದಾಸಿಯರೊಂದಿಗೆ ಅಲ್ಲಿ ಸುಖದಿಂದ ಇದ್ದಳು. ದೇವಯಾನಿಗೆ ಇಬ್ಬರು ಗಂಡು ಮಕ್ಕಳಾದರು.
ಈ ಕಥೆಯ ಮೊದಲಿನ ಭಾಗ ಇಲ್ಲಿದೆ :
(ಮುಗಿಯಿತು)
-ವಿಜಯಾಸುಬ್ರಹ್ಮಣ್ಯ ಕುಂಬಳೆ.
ದೇವಯಾನಿ ಶರ್ಮಿಷ್ಠೆ ಕಥೆಯ ಮುಂದಿನ ಭಾಗ ಚೆನ್ನಾಗಿ ಮೂಡಿಬಂದಿದೆ ವಿಜಯಾ ಮೇಡಂ..
Nice
ದೇವಯಾನಿ ಮತ್ತು ಶರ್ಮಿಷ್ಠೆ ಕಥೆಯು ಚೆನ್ನಾಗಿ ಮೂಡಿಬಂದಿದೆ. ಆದರೆ ಬಹಳ ಸೂಕ್ಷ್ಮ ರೂಪದಲ್ಲಿ, ಥಟ್ಟನೆ ನಿಂತು ಬಿಟ್ಟಂತೆ ಅನ್ನಿಸುತ್ತದೆ.
ಕುತೂಹಲಭರಿತವಾಗಿ ದೇವಯಾನಿ, ಶರ್ಮಿಷ್ಟೆಯರ ಕಥೆ ಮೂಡಿ ಬಂತು.
ಸುರಹೊನ್ನೆಯ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ವಂದನೆಗಳು.