ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 15
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 5: ‘ಡ ನಾಂಗ್’ ನ ನೆಲದಲ್ಲಿ…. 19/09/2024
19/09/2024 ರ ಬೆಳಗಾಯಿತು. ‘ಹಲೋ ಏಶಿಯಾ ಟ್ರಾವೆಲ್ಸ್’ ನಿಂದ ನಮಗೆ ಬಂದಿದ್ದ ವಾಟ್ಸಾಪ್ ಸಂದೇಶದ ಪ್ರಕಾರ ನಾವು ಬೆಳಗಿನ ಉಪಾಹಾರ ಮುಗಿಸಿ 10 ಗಂಟೆಗೆ ಸಿದ್ದರಿರಬೇಕಿತ್ತು .ಈ ಸಂಸ್ಥೆಯ ಸೂಕ್ತ ಮಾಹಿತಿಯನ್ನು ಅಚ್ಚುಕಟ್ಟಾಗಿ ಕೊಡುತ್ತದೆ ಹಾಗೂ ಇವರ ಸೇವೆ ವಿಶ್ವಾಸಾರ್ಹ ಎಂದು ನಮ್ಮ ಪ್ರವಾಸದುದ್ದಕ್ಕೂ ಅನುಭವ ವೇದ್ಯವಾಯಿತು.
ನಾವು ಉಳಕೊಂಡಿದ್ದ ‘ಸಾಂತಾ ಲಕ್ಷುರಿ ‘ ಹೋಟೆಲ್ ನಲ್ಲಿಯೂ ಕಾಂಟಿನೆಂಟಲ್ ಶೈಲಿಯ ಉಪಾಹಾರವಿತ್ತು. ಎಂದಿನಂತೆ ಬ್ರೆಡ್ ಟೋಸ್ಟ್, ಹಣ್ಣುಗಳು, ಜ್ಯೂಸ್ ಮೊದಲಾದುವುಗಳನ್ನು ಸೇವಿಸಿ ಮಾರ್ಗದರ್ಶಿಗಾಗಿ ಕಾಯುತ್ತಾ ಕುಳಿತೆವು. ಆಗ ನಾವಿದ್ದ ಜಾಗ ‘ಡಾ ನಾಂಗ್’ . ಈ ಸ್ಥಳದ ಬಗ್ಗೆ ಗೂಗಲ್ ನಲ್ಲಿ ಸಿಕ್ಕಿದ ಹಾಗೂ ಮಾರ್ಗದರ್ಶಿಯಿಂದ ತಿಳಿದ ಕೆಲವು ವಿಚಾರಗಳು ಹೀಗಿವೆ..
ಚರಿತ್ರೆಯ ಪುಟಗಳ ಪ್ರಕಾರ, ಈಗ ಡಾ ನಾಂಗ್ ಎಂದು ಕರೆಯಲ್ಪಡುವ ಮಧ್ಯ ವಿಯೆಟ್ನಾಂನ ಭಾಗವು ಕ್ರಿ.ಶ. 2 ನೇ ಶತಮಾನದಿಂದ ಕ್ರಿ.ಶ. 1832 ರ ವರೆಗೂ ‘ಚಂಪಾ ಕಿಂಗ್ ಡಮ್ ‘ ಎಂದು ಗುರುತಿಲ್ಪಟ್ಟಿತ್ತು. ‘ಚಾಮ್ ವಂಶದ ‘ ಜನರೆಂದು ಕರೆಯಲ್ಪಡುತ್ತಿದ್ದ ಇವರು ಚೀನಾದ ಸಿಲ್ಕ್ ಮತ್ತು ಭಾರತದ ಮಸಾಲೆ ವಸ್ತುಗಳನ್ನು ಸಮುದ್ರ ಮಾರ್ಗದ ಮೂಲಕ ಮಲೇಶ್ಯಾ ಹಾಗೂ ಪರ್ಶಿಯಾದ ವರೆಗೆ ಸಾಗಿಸುತ್ತಿದ್ದ ವ್ಯಾಪಾರಿಗಳು. ಇವರು ಭಾರತೀಯ/ಮಲೇಶ್ಯಾ ಮೂಲದವಾಗಿದ್ದು ವಿಯೆಟ್ನಾಂನಲ್ಲಿ ಹಿಂದೂ ಸಂಸ್ಕೃತಿಯನ್ನು ಬೆಳೆಸಲು ಕಾರಣರಾದರು. ‘ಚಂಪಾ’ ಜನರು ಇಟ್ಟಿಗೆಗಳಿಂದ ಕಟ್ಟಿದ ದೇಗುಲಗಳು, ಸುಣ್ಣದ ಕಲ್ಲಿನ ಶಿಲ್ಪಗಳು ಹಾಗೂ ಕಂಚಿನ ಶಿಲ್ಪಗಳು ಈಗಲೂ ಪ್ರವಾಸಿ ಆಕರ್ಷಣೆಯಾಗಿ , ಪರಂಪರೆಯ ಪಳೆಯುಳಿಕೆಯಾಗಿ ಉಳಿದಿವೆ. ಮೈ ಸನ್ ಹೋಲಿ ಲ್ಯಾಂಡ್ ( My Son Holy Land) ಎಂದು ಕರೆಯಲ್ಪಡುವ ಈ ಚಾರಿತ್ರಿಕ ಸ್ಥಳವು ಯುನಿಸ್ಕೋ ವಿಶ್ವ ಪರಂಪರೆಯ ತಾಣವೆಂಬ ಮಾನ್ಯತೆ ಗಳಿಸಿದೆ.
ಭಾರತದ ಮಹಾಬಲಿಪುರಂನಲ್ಲಿರುವ ದೇವಾಲಯಗಳ ರಚನೆ ಮತ್ತು ಚಂಪಾ ರಾಜ್ಯದ ದೇವಾಲಯಗಳ ವಾಸ್ತುಶಿಲ್ಪದಲ್ಲಿ ಸಾಮ್ಯತೆ ಇದೆಯಂತೆ. 1832 ರಲ್ಲಿ ಚಂಪಾ ರಾಜ್ಯದ ಅವನತಿಯಾಗಿ ಉತ್ತರ ವಿಯೆಟ್ನಾಂನಲ್ಲಿ ಆಡಳಿತ ನಡೆಸುತ್ತಿದ್ದ ಸ್ಥಳೀಯ ‘ಲೇ ವಂಶ’ ಅಧಿಕಾರ ವಹಿಸಿಕೊಂಡಿತು. 1858 ರಲ್ಲಿ ಫ್ರಾನ್ಸ್ ಡಾ ನಾಂಗ್ ಅನ್ನು ವಶಪಡಿಸಿಕೊಂಡಿತು. ಫ್ರಾನ್ಸ್ ಸರಕಾರವು, ಡಾ ನಾಂಗ್ ಅನ್ನು ತನ್ನ ಪೌರಾತ್ಯ ರಾಜಧಾನಿಯಾಗಿಸಿಕೊಂಡು ಫ್ರೆಂಚ್- ಇಂಡೋ-ಚೀನಾ ವಸಾಹತನ್ನು ನಿರ್ಮಿಸಿಕೊಂಡಿತು. ಅವರು ನಿರ್ಮಿಸಿದ ಫ್ರೆಂಚ್ ವಾಸ್ತುಶಿಲ್ಪದ ಹಲವಾರು ಕಟ್ಟಡಗಳು ಈಗಲೂ ಡಾ ನಾಂಗ್ ನಲ್ಲಿ ಸುಸ್ಥಿತಿಯಲ್ಲಿವೆ. ವಿಯೆಟ್ನಾಂನಲ್ಲಿ ಸುದೀರ್ಘ ಕಾಲ ನಡೆದ ಎರಡನೇ ಜಾಗತಿಕ ಮಹಾಯುದ್ಧ ( 1939-1945) ಮತ್ತು ಆಂತರಿಕ (1955- 1975) ಯುದ್ದಗಳ ಅವಧಿಯಲ್ಲಿ ಡಾ ನಾಂಗ್ ಮುಖ್ಯ ಸೇನಾ ನೆಲೆಯಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಸರಕಾರವು ತನ್ನ ದೇಶದ ಪುನಾರ್ರಚನೆಗೆ ಒತ್ತುಕೊಟ್ಟು ಬಹಳಷ್ಟು ಅನುಕೂಲತೆಗಳನ್ನು ಸೃಷ್ಟಿಸಿದೆ. ಅಪ್ರತಿಮ ಸೌಂದರ್ಯವುಳ್ಳ ಪ್ರಾಕೃತಿಕ ಸಂಪನ್ಮೂಲಗಳು, , ಚಾರಿತ್ರಿಕ ಸ್ಥಳಗಳು. ಬೌದ್ಧ ಧರ್ಮೀಯರ ಪಗೋಡಗಳು , ಯುನೆಸ್ಕೋ ಸಂಸ್ಥೆಯಿಂದ ಗುತುತಿಸಲ್ಪಟ್ಟ ಸ್ಮಾರಕಗಳು …..ಇತ್ಯಾದಿ ವಿಚಾರಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಬಳಸುವ ಜಾಣ್ಮೆಯಿಂದಾಗಿ ಈಗ ವಿಯೆಟ್ನಾಂ ಜಗತ್ತಿನ ಪ್ರಮುಖ ಪ್ರವಾಸಿತಾಣವಾಗಿದೆ.
ವಿಯೆಟ್ನಾಂನ ಮಧ್ಯಭಾಗದಲ್ಲಿರುವ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ನಗರ ಡಾ ನಾಂಗ್ . ಹನೋಯ್ ನಗರಕ್ಕೆ ಹೋಲಿಸಿದರೆ ಇಲ್ಲಿ ಜನದಟ್ಟಣೆ, ಜೀವನ ವೆಚ್ಚ ಹಾಗೂ ನಗರೀಕರಣದ ಸೌಲಭ್ಯಗಳು ಕಡಿಮೆ. ಹನೋಯ್ ನಗರವು ರಾಜಧಾನಿಯಾಗಿದ್ದು ಸದಾ ಗಿಜಿಗುಟ್ಟುವಂತಿದೆ. ಡಾ ನಾಂಗ್ ಶಾಂತವಾಗಿದ್ದು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಚೆಂದದ ಮಂಜಿನ ನಗರಿ. 1858 ರಿಂದ 1954 ರ ವರೆಗೆ ಇಲ್ಲಿ ಫ್ರೆಂಚರು ಡಾ ನಾಂಗ್ , ಲಾವೋಸ್ ಮೊದಲಾದ ಪ್ರದೇಶಗಳನ್ನೊಳಗೊಂಡು ತಮ್ಮ ವಸಾಹತನ್ನು ಸ್ಥಾಪಿಸಿದ್ದರು. 19 ಡಿಸೆಂಬರ್ 1946 ರಿಂದ 21 ಜುಲೈ 1954 ರ ವರೆಗೆ ನಡೆದ ಪ್ರಥಮ ಇಂಡೋಚೈನಾ ಯುದ್ದದ ಸಮಯ ಫ್ರೆಂಚ್ ಸೇನೆ ಸೋತಿತು. ಈ ಸಂದರ್ಭದಲ್ಲಿ ವಿಯೆಟ್ನಾಂನ ನಾಯಕ ಹೊ ಚು ಮಿನ್ಹ್ ಅವರು ಡಾ ನಾಂಗ್ ಅನ್ನು ವಿಯೆಟ್ನಾಂ ಒಕ್ಕೂಟಕ್ಕೆ ಸೇರಿಸಿದರು. ಈ ನೆಲದಲ್ಲಿ ನಡೆದ ದೀರ್ಘಾವಧಿಯ ಯುದ್ಧಗಳು ಹಲವಾರು. ಆ ಯುದ್ಧಗಳಲ್ಲಿ ವಿಯೆಟ್ನಾಮಿಗರಿಗೆ ಭಾಗವಹಿಸಲು ಆಸಕ್ತಿ ಇತ್ತೋ ಇಲ್ಲವೋ ಕೇಳಿದವರಾರು? ವಿವಿಧ ಕಾಲಘಟ್ಟದಲ್ಲಿ ಬಲಾಢ್ಯ ದೇಶಗಳಾದ ಅಮೇರಿಕ, ರಷ್ಯಾ, ಜಪಾನ್, ಫ್ರಾನ್ಸ್ ಗಳನ್ನೊಳಗೊಂಡ ಸೇನೆಯ ಪರ ಅಥವಾ ವಿರೋಧಿ ಪಾಳಯದೊಂದಿಗೆ ಅನಿವಾರ್ಯವಾಗಿ ಸೇರಿಕೊಂಡು ಯುದ್ದ ಮಾಡಿ ಮಡಿದವರು ಲಕ್ಷಾಂತರ ಮಂದಿ.
ಇಲ್ಲಿ ನಾವು ಭೇಟಿಯಾದ ಮಾರ್ಗದರ್ಶಿ ಎಳೆಯುವಕರ ಮುತ್ತಾತಂದಿರು ಸೇನೆಯಲ್ಲಿ ಕೆಲಸ ಮಾಡಿದ್ದರಂತೆ. ಸ್ತ್ರೀ-ಪುರುಷರೆನ್ನದೆ ಯುದ್ಧದಲ್ಲಿ ಭಾಗವಹಿಸಿದ್ದರಂತೆ. ಅಮೇರಿಕದ ಸೇನೆ ಬಾನಿನಿಂದ ಮಳೆ ಸುರಿಸಿದಂತೆ 5 ಮಿಲಿಯನ್ ಗೂ ಹೆಚ್ಚು ಬಾಂಬ್ ಗಳನ್ನು ಹಾಕಿತ್ತು. ಅವುಗಳಲ್ಲಿ ಹಲವಾರು ಬಾಂಬ್ ಗಳು ಸ್ಪೋಟಗೊಂಡುವು. ಯುದ್ದದಲ್ಲಿ ಲಕ್ಷಾಂತರ ಮಂದಿ ಪ್ರಾಣ ತೆತ್ತರು ಅಥವಾ ಕಣ್ಮರೆಯಾದರು. ಆಗ ಬಿದ್ದಿದ್ದ ಹಲವಾರು ಬಾಂಬ್ ಗಳು ಈಗಲೂ ಭೂಮಿಯಲ್ಲಿ ಅಲ್ಲಲ್ಲಿ ಸೇರಿಕೊಂಡಿವೆ. ಈಗಲೂ ಕೃಷಿ ಕೆಲಸಗಳಿಗಾಗಿ ನೆಲ ಅಗೆಯುವಾಗ ಸ್ಪೋಟಗೊಳ್ಳದೆ ಉಳಿದಿದ್ದ ಬಾಂಬ್ ಗಳು ಕಾಣಿಸುತ್ತವೆ ಹಾಗೂ ಆಕಸ್ಮಿಕವಾಗಿ ಸಿಡಿದು ಕೃಷಿಕಾರ್ಮಿಕರಿಗೆ ಅಪಾಯವಾಗುತ್ತದೆಯಂತೆ. ಮಾರ್ಗದರ್ಶಿಯೊಬ್ಬರು ನಮ್ಮ ಬಳಿ “ವಿಯೆಟ್ನಾಂನವರು ಕಬ್ಬಿಣವನ್ನು ಹೇಗೆ ಪಡೆಯುತ್ತೇವೆ ಗೊತ್ತಾ? ‘ ಎಂದು ಕೇಳಿದ್ದರು. ‘ ಅದಿರಿನ ಗಣಿಗಾರಿಕೆಯಿಂದ ಅಲ್ಲವೆ?’ ಎಂದಿದ್ದೆ . ‘ಅಲ್ಲ, ನಮ್ಮ ಭೂಮಿಗೆ ಅಮೇರಿಕಾದವರು ಹಾಕಿದ್ದ ಬಾಂಬ್ ಗಳಿಂದ’ ಎಂದರು.
ಪರಸ್ಪರ ವೈಯುಕ್ತಿಕ ದ್ವೇಷವಿಲ್ಲದಿದ್ದರೂ , ಅವರವರ ದೇಶಕ್ಕೋಸ್ಕರ ಅಥವಾ ಯಾವುದೋ ಸಿದ್ಧಾಂತಕ್ಕೋಸ್ಕರ ಹೋರಾಡುವ ಹುಮ್ಮಸ್ಸಿನಲ್ಲಿ, ಒಂದು ವರ್ಗದ ಮನುಷ್ಯರು ಇನ್ನೊಂದು ವರ್ಗದ ಮನುಷ್ಯರನ್ನು, ಕೊಲ್ಲುವುದಕ್ಕಾಗಿಯೇ ನಿರ್ಮಿಸಿದ ವಿಧ್ವಂಸಕಕಾರಿ ಆಯುಧಗಳನ್ನು ಬಳಸಿ ಸಾಯಿಸಿದ ಇತಿಹಾಸದ ಕ್ರೂರ ವ್ಯಂಗ್ಯಕ್ಕೆ ಏನನ್ನಬೇಕು? ಏನೂ ಹೇಳಲು ತೋಚದೆ, ವಿಷಾದದ ಛಾಯೆ ಕವಿದು ಮೂಕಳಾದೆ. ಕೆಲವು ದಶಕಗಳ ಹಿಂದೆ ಯುದ್ಧಭೂಮಿಯಾಗಿದ್ದ ಈ ಸ್ಥಳವನ್ನು ಅದೆಷ್ಟು ಸೊಗಸಾಗಿ ಪುನರ್ನಿಮಿಸಿದ್ದಾರೆ ಎಂದು ಮುಂದಿನ ಪ್ರಯಾಣದಲ್ಲಿ ಗೊತ್ತಾಯಿತು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41879
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಬಹಳ ಸುಂದರವಾಗಿದೆ
ಹೌದು…ನಮಗೆ ತಿಳುವಳಿಕೆ ಬಂದಂದಿನಿಂದ; ವಿಯೆಟ್ನಾಂ ಎಂದರೆ ಯಾವಾಗಲೂ ಯುದ್ಧ ನಡೆಯುವ ಸ್ಥಳ ಎಂಬ ಭಾವನೆ ನಮ್ಮಲ್ಲಿ ಮನೆ ಮಾಡಿತ್ತು. ನನ್ನ ಮಗಳು ವಿಯೆಟ್ನಾಂ ಪ್ರವಾಸಕ್ಕೆ ಹೋಗುವ ಬಗ್ಗೆ ಹೇಳಿದಾಗ ಇದನ್ನೇ ಹೇಳಿದ್ದೆ. ಆದರೆ, ಅಲ್ಲಿಂದ ಬಂದ ಫೊಟೋಗಳನ್ನು ಕಂಡು ನಿಬ್ಬೆರಗಾದೆ! ಬಿದ್ದ ಬಾಂಬ್ ಗಳಿಂದ ಕಬ್ಬಿಣ ಪಡೆಯುವ ಅಲ್ಲಿಯ ಜನರು ಅನುಭವಿಸಿದ ಕಷ್ಟಗಳನ್ನು ನೆನೆದರೆ ಮನ ನೋಯುತ್ತದೆ. ಬಹಳಷ್ಟು ಮಾಹಿತಿಗಳಿಂದ ತುಂಬಿದ ಪ್ರವಾಸ ಲೇಖನ ಸೊಗಸಾಗಿ ಮೂಡಿಬಂದಿದೆ.
ಎಷ್ಟೊಂದು ಸ್ಥಳಿಯ ಮಾಹಿತಿಗಳನ್ನು ನೀಡುತ್ತಾ ಚಂದದಿಂದ ಸಾಗುತ್ತಿದೆ ಪ್ರವಾಸ ಕಥನ.