‘ರೇಡಿಯೊ’ ಎಂಬ ಶ್ರವ್ಯ ಸಂಪತ್ತು
ನನ್ನ ದೊಡ್ಡಮ್ಮ (ತಾಯಿಯ ಅಕ್ಕ)ನವರಿಗೆ ಸ್ತನಕ್ಯಾನ್ಸರಾಗಿ ಶಸ್ತ್ರಚಿಕಿತ್ಸೆ ನಡೆದ ಮೇಲೆ ಕರೆಂಟು ಕೊಡಿಸಿಕೊಳ್ಳಲು ಕೆ ಆರ್ ಆಸ್ಪತ್ರೆಯ ರೇಡಿಯಾಲಜಿ ವಿಭಾಗಕ್ಕೆ ಹೋಗುವಾಗಲೆಲ್ಲಾ ಅವರ ಜೊತೆಯಲ್ಲಿ ನಾನೂ. ನಂಜನಗೂಡಿನಿಂದ ಬಂದವರೇ ಜಯನಗರದ ನಮ್ಮ ಮನೆಗೆ ಬಂದು ನನ್ನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಆ ದಿನವೆಲ್ಲಾ ಅವರು ನಮ್ಮ ಮನೆಯಲ್ಲೇ ಉಳಿದುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಹೀಗೆ ಅವರೊಂದಿಗೆ ಆಸ್ಪತ್ರೆಗೆ ಹೋಗುವಾಗಲೆಲ್ಲಾ ಪುಟ್ಟವನಾದ ನನಗೆ ಎದುರಾಗುತಿದ್ದ ಗೊಂದಲವೆಂದರೆ ‘ರೇಡಿಯೋ’ ಎಂದು ಬರೆಯದೇ ‘ರೇಡಿಯಾಲಜಿ’ ಎಂದು ಬರೆದಿದ್ದಾರಲ್ಲ ಎಂಬುದೇ! ಆಸ್ಪತ್ರೆಯಲ್ಲೇಕೆ ಆಕಾಶವಾಣಿಯ ನಿಲಯ? ಇದು ಬಗೆಹರಿದದ್ದು ನಾನು ಪ್ರೌಢಶಾಲೆಗೆ ಬಂದ ಮೇಲೆಯೇ. ರೇಡಿಯಾಲಜಿ ಎಂದರೆ ವಿಕಿರಣಶಾಸ್ತ್ರವೆಂದೂ ಎಕ್ಸ್‌ರೇ, ಎಂಆರ್‌ಐ, ಆಲ್ಟ್ರಾ ಸೌಂಡ್, ಸಿಟಿ ಸ್ಕ್ಯಾನ್, ಮ್ಯಾಮೋಗ್ರಫಿ ಮುಂತಾದ ಡಯೋಗ್ನಸ್ಟಿಕ್ ಇಮೇಜಿಂಗ್ ತಂತ್ರಜ್ಞಾನ ಸಂಬಂಧಿತ ಎಂಬುದು ತಿಳಿದು ಈ ಅಜ್ಞಾನ ಗೊತ್ತಾಗಿದ್ದು ತೀರಾ ತಡವಾಗಿ. ಆನಂತರ ರೇಡಿಯೋ ಎಂದರೆ ಆಸ್ಪತ್ರೆಯೇ ನೆನಪಾಗುತ್ತಿತ್ತು, ಜೊತೆಗೆ ಬಡತನದಲ್ಲೂ ಧೀಮಂತವಾಗಿ ಬದುಕಿದ ನನ್ನ ದೊಡ್ಡಮ್ಮನೂ!
ಆ ಮಟ್ಟಿಗೆ ರೇಡಿಯೋ ಮತ್ತು ರೇಡಿಯಾಲಜಿ ನಮ್ಮ ಜೀವನದಲ್ಲಿ ಬೆರೆತು ಹೋಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ರೇಡಿಯಾಲಜಿ ವಿಭಾಗಕ್ಕೆ ಭೇಟಿ ನೀಡಿದವರೇ. ಪುಟ್ಟದಾದ ಡ್ರೈಸೆಲ್‌ಗಳನ್ನು ಬಳಸಿ ರೇಡಿಯೋ ಕೇಳುವ ಟ್ರಾನ್ಸಿಸ್ಟರ್ ಆವಿಷ್ಕಾರವಾಗಿ, ಸಾಮಾನ್ಯ ಜನರ ಕೈಗೆ ನಿಲುಕುವಂತಾದಾಗ ನಿಜವಾಗಿಯೂ ಆಕಾಶವಾಣಿ ರಂಗದಲ್ಲಿ ಕ್ರಾಂತಿಯೇ ಸಂಭವಿಸಿತು. ಯಾರೋ ಒಳಗೆ ಕುಳಿತು ಮಾತಾಡುವ ಮತ್ತು ಹಾಡು ಹೇಳುವ ಪವಾಡ ನಡೆಯುತ್ತಿದೆ ಎಂದೇ ತೀರಾ ಮುಗ್ಧರು ತಿಳಿಯುವಷ್ಟು ಇದು ಆ ಕಾಲದವರಿಗೆ ವಿಸ್ಮಯವಾಗಿತ್ತು. ಇದೀಗ ಜಗತ್ತಿನಲ್ಲಿ ಯಾವ ವಿಸ್ಮಯವೂ ಉಳಿದಿಲ್ಲ; ಯುವ ಜನಾಂಗವು ಯಾವ ಬೆರಗನ್ನೂ ಉಳಿಸಿಕೊಂಡಿರುವುದಿಲ್ಲ! ಕಾಲವೇ ಕಾಲವಾಗಿ ಹೋಗಿರುವ ದಿನಮಾನವಿದು. ನನ್ನ ತಂದೆಯ ಅಣ್ಣನ ಹೆಂಡತಿ (ನನಗೆ ಅವರೂ ದೊಡ್ಡಮ್ಮನೇ) ಇಂದಿರಾ ಅವರ ಮನೆಯಲ್ಲೇ ನಮ್ಮಜ್ಜಿ ಇದ್ದರು. ಶಿವರಾಮಪೇಟೆಯ ಎ ರಾಮಣ್ಣ ಬೀದಿಯಲಿದ್ದ ಆ ಮನೆಯಲ್ಲಿ ನನಗಿದ್ದ ಆಕರ್ಷಣೆಯೆಂದರೆ ಬೃಹತ್ ಗಾತ್ರದ ಕರೆಂಟ್ ರೇಡಿಯೋ. ಪಿನ್ನು ಪ್ಲಗ್ಗು ಹಜಾರದಲ್ಲಿ; ರೇಡಿಯೋ ಮಾತ್ರ ನಮ್ಮ ದೊಡ್ಡಮ್ಮ ಇದ್ದ ರೂಮಿನಲ್ಲಿ. ಇಲ್ಲಿಂದಲ್ಲಿಗೆ ದಪ್ಪನೆಯ ಕಪ್ಪು ವೈರೊಂದು ಹೋಗಿತ್ತು. ಅದರುದ್ದಕೂ ಜೇಡರ ಬಲೆ ಕಟ್ಟಿ ಬೆಳಗಿನಿಬ್ಬನಿ ಹನಿಗಳು ಗಿಡದ ರೆಂಬೆಯ ಮೇಲೆ ಹೆಪ್ಪುಗಟ್ಟಿದ ತೆರದಲ್ಲಿ ಕಾಣಿಸುತ್ತಿತ್ತು. ನನ್ನ ದೊಡ್ಡಮ್ಮನು ರೇಡಿಯೋ ಆನ್ ಮಾಡಿದಾಗಲೆಲ್ಲಾ ‘ಜುಷ್’ ಅನ್ನೋ ಶಬ್ದ ಬರುತ್ತಿತ್ತು. ಆಮೇಲೆ ಸ್ಟೇಷನ್ ಸೆಟ್ ಮಾಡಲು ಹೆಣಗಾಡುವಾಗಲೆಲ್ಲಾ ‘ಇವರು ಈ ಜೇಡರಬಲೆಯನ್ನು ಕ್ಲೀನ್ ಮಾಡದೇ ಇರುವುದರಿಂದ ಹೀಗೆ ಗೊರ ಗೊರ ಶಬ್ದ ಬರುತ್ತಿದೆ’ಯೆಂದು ಭಾವಿಸಿಕೊಂಡಿದ್ದೆ. ಗಂಟಲು ಕಟ್ಟಿದಂಥ ಆ ಗೊಗ್ಗರು ದನಿಯಲ್ಲೇ ವಾರ್ತೆಗಳನ್ನು ಕೇಳುತ್ತಿದ್ದರು. ಸ್ಟೇಷನ್ ಸರಿ ಹೊಂದಿಸಿಕೊಂಡು, ಸ್ಪಷ್ಟ ದನಿ ಹೊರಡಿಸಲು ಹರಸಾಹಸ ಪಡುತ್ತಿದ್ದರು.
ಈಗಿನ ನಮ್ಮ ಎಫ್‌ಎಂ ರೇಡಿಯೊ ಸ್ಟೇಷನ್‌ಗಳ ಸುಸ್ಪಷ್ಟ ದನಿ ಕೇಳಿದಾಗಲೆಲ್ಲಾ ನನಗೆ ಆ ಕಾಲದ ಕರೆಂಟ್ ರೇಡಿಯೊ ನೆನಪಾಗುತ್ತದೆ. ರೇಡಿಯೊ ಕೇಳಿದ ಪ್ರಮಾಣದಲೇ ಥರಾವರಿ ರೇಡಿಯೊಗಳನ್ನು ನೋಡಿದ ಭಾಗ್ಯ ನನ್ನದು. ಪುಟ್ಟ ಪುಟ್ಟ ಎಫ್‌ಎಂ ರೇಡಿಯೊಗಳನ್ನು ನೋಡುವುದೇ ಒಂದು ಚೆಂದ. ಕೆ ಆರ್ ನಗರದಿಂದ ಮೈಸೂರಿನ ಕೆ ಟಿ ಸ್ಟ್ರೀಟ್‌ಗೆ ಬಂದಾಗಲೆಲ್ಲಾ ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ಹೊಸ ನಮೂನೆಯ ಎಫ್‌ಎಂ ರೇಡಿಯೊಗಳಿಗಾಗಿ ಹುಡುಕಾಟ ನಡೆಸಿ, ಕೊಂಡು ಹೋಗುವುದೇ ಒಂದು ಖುಷಿಯ ಖರೀದಿಯಾಗಿತ್ತು. ‘ಎಷ್ಟೊಂದು ಬಗೆಯ ರೇಡಿಯೊಗಳು!’ ಎಂದು ಮೊದಲಿಗೆ ನನ್ನಾಕೆ ಬೆರಗಿನಿಂದ ಹೇಳಿದರೂ ಅದು ನನ್ನ ವ್ಯಸನವೆಂದು ಗೊತ್ತಾದ ಮೇಲೆ ಕೊರಗುತ್ತಾ ‘ಇನ್ನು ಸಾಕು, ರೇಡಿಯೊ ತರಬೇಡಿ’ ಎನ್ನುತ್ತಿದ್ದಳು. ‘ಸುಮ್ಮನೆ ತಂದು ಗುಡ್ಡೆ ಹಾಕುವುದು, ಎಲೆಕ್ಟ್ರಾನಿಕ್ ಕಸ’ ಎಂಬುದವಳ ಮನದ ಮಾತು. ಹೆಡ್‌ಫೋನಿನಲ್ಲೂ ಎಫ್‌ಎಂ ಇದೆ ಎಂದು ಒಬ್ಬಾತ ಕೈಗಿತ್ತಾಗ ಮನೆಯಲ್ಲಿ ಬಯ್ಯುತ್ತಾರೆಂಬುದನು ನೆನಪಿಸಿಕೊಂಡೆ. ನನ್ನಾಕೆ ಸಹ ರೇಡಿಯೊ ಅಭಿಮಾನಿಯೇ. ಬೆಳಗಿನ ಅಡುಗೆ ಮನೆಯ ಕೆಲಸಗಳು ಸಾಗುವುದು ರೇಡಿಯೋ ಕಾರ್ಯಕ್ರಮಗಳನ್ನು ಆಲಿಸುತ್ತಲೇ! ಅವರ ಹಳ್ಳಿಮನೆಯಲ್ಲಿ ಕೆಲಸ ಮಾಡುವಾಗ ಯಾವಾಗಲೂ ರೇಡಿಯೊ ಧ್ವನಿಸುತ್ತಿರಬೇಕಾಗಿತ್ತಂತೆ. ಹಸುಗಳಿಂದ ಹಾಲು ಕರೆಯುವಾಗಲೂ ರೇಡಿಯೊ ಶಬ್ದ ಮಾಡುತ್ತಿದ್ದರೇನೇ ಸಮಾಧಾನ. ರೇಡಿಯೊ ಸಂಗೀತ ಕೇಳುತ್ತಾ ಹಸುಗಳೂ ಹೆಚ್ಚು ಹಾಲನ್ನು ಕೊಡುತ್ತಿದ್ದವೆನಿಸುತ್ತದೆ! ರೇಡಿಯೊದ ಇನ್ನೊಂದು ಮಧುರ ನೆನಪೆಂದರೆ, ಕೆ ಆರ್ ನಗರದಲ್ಲಿ ಮನೆಯನ್ನು ಕಟ್ಟಿಸುವಾಗ ಮನೆಯ ಗಾರೆ ಕೆಲಸಗಾರಿಗೆಂದೇ ಒಂದು ಚಾರ್ಚಬಲ್ ಎಫ್‌ಎಂ ರೇಡಿಯೊ ತಂದು ಕೊಟ್ಟಿದ್ದೆ. ಪ್ರತಿ ರಾತ್ರಿ ಅದನ್ನು ಮನೆಗೊಯ್ದು ಚಾರ್ಜು ಮಾಡಿ ತಂದಿಡುತ್ತಿದ್ದೆ. ಮನೆ ಕಟ್ಟುವ ಮಂದಿಯ ಮನಸು ಖುಷಿಯಾಗಿರಲೆಂಬುದು ನನ್ನ ಇಂಗಿತವಾಗಿತ್ತು. ಅದೂ ಇದೂ ಮಾತಾಡಿ, ಪರಸ್ಪರ ತಾರಕಕ್ಕೇರಿ ಮಾತುಕತೆಯು ಜಗಳವಾಗಬಾರದೆಂಬುದು ಸಹ ನನ್ನ ಒಳ ಉದ್ದೇಶವಾಗಿತ್ತು. ವಯಸಾದ ಕೈಯಾಳು ಸೀನಪ್ಪ, ಒಂದು ದಿನ ನನ್ನ ಬಳಿ ಬಂದು ‘ಸಾರು, ಗುರುಪರ್ವೇಸ ಮಾಡೋನಾಗ ಈ ರೇಡಾವು ಮಾತ್ರ ನಂಗೆ ಕೊಟ್ಬುಡಿ; ಇನ್ನೇನೂ ಇನಾಮು ಬೇಡಿ ಬುದ್ಧಿ…..’ ಎಂದು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿದ್ದು ಎಲ್ಲರ ನಗುವಿಗೆ ಕಾರಣವಾಗಿತ್ತು. ಅದು ಮಾತ್ರ ಮರಳು, ಸಿಮೆಂಟು, ಗಾರೆ, ಬಣ್ಣ ಮೆತ್ತಿಸಿಕೊಂಡು ತನ್ನ ಮೂಲ ಚಹರೆಯನ್ನೇ ಕಳೆದುಕೊಂಡು, ಮನೆ ಕಟ್ಟುವಾಗಿನ ಎಲ್ಲ ಬಗೆಯ ಹಂತಗಳನ್ನೂ ಮೈದುಂಬಿಕೊಂಡ ಸಾಕ್ಷೀಪ್ರಜ್ಞೆಯಾಗಿ, ಇನ್ನೂ ಹಾಡುತ್ತಲೇ ಇತ್ತು; ಎಷ್ಟೆಲ್ಲ ಅವಜ್ಞೆಗಳಿಗೆ ಒಳಗಾದರೂ ಅದು ತನ್ನ ಜೀವವನ್ನುಳಿಸಿಕೊಂಡಿತ್ತು. ಬೀದಿ ಮಕ್ಕಳು ಬೆಳದೋ ಎನ್ನುವಂತೆ, ಎಫ್‌ಎಂ ಚಿರಸ್ಥಾಯಿ ಎನ್ನುವುದನ್ನು ಸಾರುವಂತಿತ್ತು! ನಮಗಿಷ್ಟವಾದ ಹಾಡುಗಳನ್ನು ಸಂಗ್ರಹಿಸಿ, ಪೆನ್‌ಡ್ರೈವ್‌ನಲ್ಲೋ ಮೊಬೈಲ್ ಫೋನಿನಲ್ಲೋ ಅಡಕಗೊಳಿಸಿ, ಕೇಳುವುದು ಒಂದು ರೀತಿ. ಆದರೆ ರೇಡಿಯೊದವರು ಪ್ರಸಾರ ಮಾಡಿದ್ದನ್ನು ಕೇಳುವುದು ಇನ್ನೊಂದು ರೀತಿ. ಕಳೆದ ತಿಂಗಳಷ್ಟೇ ನನಗೆ ಗೊತ್ತಾಗಿದ್ದು: ನಾವು ಹಾಕಿಕೊಳ್ಳುವ ಕನ್ನಡಕದಲ್ಲೂ ಇದೀಗ ಬ್ಲೂಟುತ್ ಸ್ಪೀಕರ್ ಕಾಣಿಸಿಕೊಂಡಿದೆ. ಈ ಬ್ಲೂಟುತ್ ಇರುವ ಕನ್ನಡಕದ ಮೂಲಕವೂ ಎಫ್‌ಎಂ ವಾಹಿನಿಯ ಕಾರ್ಯಕ್ರಮಗಳನ್ನು ಇನ್ನೊಬ್ಬರಿಗೆ ಕಿರಿಕಿರಿಯಾಗದಂತೆ ನಾವಷ್ಟೇ ಆಲಿಸಬಹುದಾಗಿದೆ. ಹೆಚ್ಚೂ ಕಡಮೆ ಎಲ್ಲ ಬಗೆಯ ಉಪಕರಣಗಳಲ್ಲೂ ಎಫ್‌ಎಂ ರೇಡಿಯೊ ಕಾಣಿಸಿಕೊಂಡಾಗಿದೆ. ಒಂದು ಕಾಲದ ಹವ್ಯಾಸೀ ರೇಡಿಯೋ (ಅಮೆಚೂರ್) ಇದೀಗ ವೃತ್ತಿಪರತೆಯಿಂದಾಗಿ ಪಡೆದುಕೊಂಡ ವ್ಯಾಪಕ ಪರಿವರ್ತನೆಗಳು ಅನೂಹ್ಯವಾದವು. ಬ್ಲೆಂಡೆಡ್ ಟೆಕ್ನಾಲಜಿಯ ಕಾಲವಿದು; ಉಪಗ್ರಹ ತಂತ್ರಜ್ಞಾನದ ಪರಿಣಾಮವಿದು. ಇಂಟರ್‌ನೆಟ್ ಮೂಲಕ ನಾವೀಗ ಹಲವು ದೇಶಗಳ ರೇಡಿಯೊ ಪ್ರಸಾರಗಳನ್ನೂ ಕೇಳುವಂತಾಗಿದೆ. ನಮ್ಮ ದೇಶದಲ್ಲಿ ಆಲ್ ಇಂಡಿಯಾ ರೇಡಿಯೊದ ವಿವಿಧ ಭಾರತಿ ನಡೆಸಿದ ಕ್ರಾಂತಿ ಮಾತ್ರ ಅನನ್ಯ ಮತ್ತು ಅದ್ಭುತ. ಈಗಂತೂ ಖಾಸಗೀ ಎಫ್‌ಎಂ ವಾಹಿನಿಗಳದೇ ಅಬ್ಬರ ಮತ್ತು ಭರಾಟೆ. ರೇಡಿಯೊ ಮಿರ್ಚಿ, ಬಿಗ್ ಎಫ್‌ಎಂ, ರೆಡ್ ಎಫ್‌ಎಂ, ರೇಡಿಯೊ ಸಿಟಿ, ರೈನ್‌ಬೋ, ನಮ್ ರೇಡಿಯೊ, ರೇಡಿಯೊ ಗಿರ್ಮಿಟ್, ಮಧುರ ತರಂಗ, ಸಖತ್ ರೇಡಿಯೊ ಮೊದಲಾದವು ಹೋದಲ್ಲಿ ಬಂದಲ್ಲಿ ಸದ್ದು ಮಾಡುತ್ತಿರುತ್ತವೆ.
ಮೈಸೂರು ಆಕಾಶವಾಣಿಯು ಎಂ ವಿ ಗೋಪಾಲಸ್ವಾಮಿ ಎಂಬ ಮನೋವಿಜ್ಞಾನ ಪ್ರಾಧ್ಯಾಪಕರ ಮನೆಯಲ್ಲಿ ಮೊದಲು ಖಾಸಗಿಯಾಗಿ ಶುರುವಾದದ್ದು, ಆನಂತರ ಈಗ ಇರುವ ಯಾದವಗಿರಿಯಲ್ಲಿ ಅಲ್ಲಿಯೇ ಡಿಡಿ ಚಂದನ ಎಂಬ ದೂರದರ್ಶನ ವಾಹಿನಿ ಜೊತೆಯಾದದ್ದು ನಮ್ಮ ಕಣ್ಣ ಮುಂದಿನ ಇತಿಹಾಸ. ನನಗೆ ಮೊದಲು ಆಕಾಶವಾಣಿ ಪರಿಚಯವಾದದ್ದು ಆಗಿನ ನಿಲಯ ನಿರ್ದೇಶಕರಾಗಿದ್ದ ಡಾ. ಕೆ ಎಸ್ ನಿರ್ಮಲಾದೇವಿಯವರಿಂದ. ಗಂಗೋತ್ರಿಯಲ್ಲಿ ಸಂಶೋಧನ ವಿದ್ಯಾರ್ಥಿಯಾಗಿದ್ದಾಗ ಮೈಸೂರು ಆಕಾಶವಾಣಿಯು ನನ್ನನ್ನು ಬಳಸಿಕೊಂಡಿತೋ? ನಾನೇ ಆಕಾಶವಾಣಿಯನ್ನು ಬಳಸಿಕೊಂಡೆನೋ? ಬಹುಶಃ ಎರಡೂ ಹೌದು. ಆಕಾಶವಾಣಿಯು ನನ್ನನ್ನು ಬೆಳೆಸಿತು, ಓದುವ ಮತ್ತು ಬರೆಯುವ ಜೊತೆಗೆ ಮಾತನಾಡುವ ವಿಧಾನವನ್ನು ಕಲಿಸಿಕೊಟ್ಟಿತು.
ಚಿಂತನ, ಯುವವಾಣಿ, ಕನ್ನಡ ಭಾರತಿ, ಸ್ವರಚಿತ ಕವಿತಾವಾಚನ, ಮಹನೀಯರ ಸಂದರ್ಶನ ಹೀಗೆ ಹಲವು ತೆರನಾದ ಪ್ರಾಜೆಕ್ಟುಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಯಿತು. ಆಗ ಇದ್ದ ರಾಜಲಕ್ಷ್ಮೀ ಶ್ರೀಧರ್, ರಾಘವೇಂದ್ರ, ಜಿ ಆರ್ ಗುಂಡಣ್ಣ, ಪುಷ್ಪಲತಾ ಇನ್ನೂ ಅನೇಕ ಉದ್ಘೋಷಕರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿ, ರೆಕಾರ್ಡು ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಡಾ. ಹಾಮಾನಾ, ಹೆಚ್ ನರಸಿಂಹಯ್ಯ, ಸಿ ಅಶ್ವಥ್, ರವಿ ಬೆಳಗೆರೆ, ಸಿಪಿಕೆ, ವಿಜಯಾದಬ್ಬೆ ಮೊದಲಾದವರ ಸಂದರ್ಶನಗಳನ್ನು ಆಕಾಶವಾಣಿಯ ವತಿಯಿಂದ ನಾನು ನಡೆಸಿಕೊಟ್ಟಿದ್ದು ಮರೆಯಲಾಗದ ಅನುಭವ. ಕನ್ನಡ ಅಧ್ಯಾಪಕನಾದ ಮೇಲೂ ಆಕಾಶವಾಣಿಯ ನಂಟು ಮುಂದುವರೆಯಿತು. ಮೈಸೂರು ಆಕಾಶವಾಣಿಯ ಪ್ರತಿಷ್ಠಿತ ಪ್ರಸಾರಗಳಲ್ಲಿ ಒಂದಾದ ‘ಸರ್ವಜ್ಞ ವಚನ ವ್ಯಾಖ್ಯಾನ’ ಕಾರ್ಯಕ್ರಮ ಸರಣಿಯಲ್ಲಿ ಸುಮಾರು ನೂರು ವಚನಗಳಿಗೆ ವ್ಯಾಖ್ಯಾನ ಬರೆದು ಓದಿದ್ದು ಇನ್ನೊಂದು ಗೌರವ. ಅದು ಈಗಲೂ ಮರು ಪ್ರಸಾರವಾಗುತ್ತಲೇ ಇರುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಗೌರವಧನದ ಚೆಕ್ ಕೊಟ್ಟು ಕಳಿಸುವುದು ಆಕಾಶವಾಣಿಯ ಪದ್ಧತಿ. ಅಂದರೆ ಸಾಹಿತ್ಯ ಮತ್ತು ಸಂಗೀತವೇ ಮೊದಲಾದ ಲಲಿತಕಲೆಗಳ ವ್ಯಾಪಕ ಪ್ರಸಾರ ಮತ್ತು ಪ್ರಚಾರಗಳಲ್ಲಿ ರೇಡಿಯೋದ ಪಾತ್ರ ಅಂದಿನಿಂದಲೂ ಅಬಾಧಿತ. ದೃಶ್ಯಮಾಧ್ಯಮ ಬಂದ ಮೇಲೆ ಸಹಜವಾಗಿಯೇ ಶ್ರವ್ಯಮಾಧ್ಯಮ ಸೊರಗಿತು. ಆದರೆ ‘ಕಣ್ಣಿಗಿಂತ ಕಿವಿ ಶ್ರೇಷ್ಠ’ ಎಂಬ ಪಕ್ವ ಮನಸ್ಸಿನವರು ಈ ಹೊತ್ತಿಗೂ ರೇಡಿಯೋವನ್ನು ಪ್ರೀತಿಸುತ್ತಾರೆ; ಪುಟ್ಟದಾದ ರೇಡಿಯೋವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.
ಜಗತ್ತಿನಾದ್ಯಂತ ಪ್ರತಿ ವರುಷ ಫೆಬ್ರವರಿ 13 ರಂದು ವಿಶ್ವ ರೇಡಿಯೊ ದಿನವನ್ನು ಆಚರಿಸಲಾಗುವುದು. 2012 ರಿಂದ ತಪ್ಪದೇ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರೇಡಿಯೋ ಎಂಬ ಶ್ರವ್ಯ ಮಾಧ್ಯಮದ ಮಹತ್ವವನ್ನು ಪ್ರತಿ ಪೀಳಿಗೆಗೂ ಮನಗಾಣಿಸುವುದು ಇದರ ಉದ್ದೇಶ. ತಾಂತ್ರಿಕ ಪ್ರಗತಿ ಮತ್ತು ವಿದ್ಯುನ್ಮಾನ ಸಾಧನಗಳ ವ್ಯಾಪಕ ಬಳಕೆಯಿಂದ ರೇಡಿಯೊ ಇನ್ನಷ್ಟು ಜನ-ಪ್ರಿಯಗೊಳ್ಳಲು ಸಹಕಾರಿಯಾಗಿದೆ. ಅದರಲ್ಲೂ ಇಂಟರ್‌ನೆಟ್, ಪ್ಯಾಡ್‌ಕಾಸ್ಟ್ ಮತ್ತು ಡಿಜಿಟಲ್ ಪ್ರಸಾರಗಳು ರೇಡಿಯೊವನ್ನು ಜನಸಾಮಾನ್ಯರ ಹೃದಯದಾಡುಂಬೊಲವಾಗಿಸಿತು. ರೇಡಿಯೊ ಇಂಥ ಜನಪ್ರೀತಿಯನ್ನು ಪಡೆಯಲು ಎಫ್‌ಎಂ ಕ್ರಾಂತಿಯೇ ಕಾರಣ. ಯಾವುದೇ ಎಲೆಕ್ಟ್ರಾನಿಕ್ ಡಿವೈಸ್‌ನಲ್ಲೂ ಎಫ್‌ಎಂ ವಾಹಿನಿ ಇದ್ದೇ ಇರುತ್ತದೆ. ‘ನೋಡಿ, ಇದರಲ್ಲಿ ಎಫ್‌ಎಂ ಇನ್‌ಬಿಲ್ಟ್’ ಎಂದು ಹೇಳುತ್ತಲೇ ರಿಮೋಟಿನಲ್ಲಿ ಸ್ಟೇಷನ್ ಸೆಟ್ ಮಾಡಿ, ಖಾಸಗಿ ಎಫ್‌ಎಂ ವಾಹಿನಿಯೊಂದರಲ್ಲಿ ಬರುತ್ತಿರುವ ಮಾತು-ಕತೆ, ಹಾಡುಹಸೆಗಳನ್ನು ಕೇಳಿಸಿದರೇನೇ ಮಾರಾಟ ಪ್ರತಿನಿಧಿಗೆ ಸಮಾಧಾನ. ಬಣ್ಣಬಣ್ಣದ ಟೆಲಿವಿಷನ್‌ಗಳೇ ರೇಡಿಯೋಗೆ ದೊಡ್ಡ ವೈರಿ. ಆದರೆ ಎಫ್‌ಎಂ ಬಂದ ಮೇಲೆ ಪುಟ್ಟ ಉಪಕರಣವಾಗಿ, ಇಯರ್‌ಫೋನ್ ಬಂದು ಕಿವಿಗೆ ಹತ್ತಿರವಾದ ಮೇಲೆ ರೇಡಿಯೋಗೆ ಕಳೆ ಬಂತು. ಗತಿಸಿ ಹೋದ ತನ್ನ ಸಾಮ್ರಾಜ್ಯವನ್ನು ಮರು ಸ್ಥಾಪಿಸಿಕೊಂಡಿತು. ಈಗಂತೂ ಎಲ್ಲಿ ನೋಡಿದರಲ್ಲಿ ರೇಡಿಯೋ, ಅದೂ ಖಾಸಗಿ ಎಫ್‌ಎಂ ವಾಹಿನಿಗಳ ಸದ್ದುಗದ್ದಲ. ರಿಕ್ಷಾದಲ್ಲಿ, ಟ್ಯಾಕ್ಸಿಯಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ನಂನಮ್ಮ ಮೊಬೈಲ್ ಫೋನುಗಳಲ್ಲಿ ರೇಡಿಯೋ ಈ ಮೂಲಕ ಮತ್ತೆ ನಮ್ಮನ್ನಾವರಿಸುತ್ತದೆಂದು ಯಾರೂ ಊಹಿಸಿರಲಿಲ್ಲ. ಟೀವಿ ಇಲ್ಲದ ಕಾಲದಲ್ಲಿ ರೇಡಿಯೊನೇ ಅನಭಿಷಿಕ್ತ ದೊರೆಯಾಗಿತ್ತೆಂಬುದು ಸರ್ವವೇದ್ಯ.
ಏನೇ ಕೆಲಸ ಮಾಡುತಿದ್ದರೂ ರೇಡಿಯೋ ಕೇಳಬಹುದೆಂಬುದೇ ಅದರ ಬಹು ದೊಡ್ಡ ಅನುಕೂಲ. ಉಳಿದವು ಹಾಗಲ್ಲ. ಅವುಗಳಲ್ಲಿ ಕಣ್ಣು ಪ್ರಧಾನ. ಕರೆಂಟ್ ರೇಡಿಯೊ ಅಭಿವೃದ್ಧಿ ಹೊಂದಿ, ಪುಟ್ಟ ಟ್ರಾನ್ಸಿಸ್ಟರ್ ಆದಾಗಲೇ ಕ್ರಾಂತಿಯ ಕಿಡಿ ಹೊತ್ತಿ ಕೊಂಡಿತು. ಅದರಲ್ಲೂ ಟೆಸ್ಟ್ ಕ್ರಿಕೆಟ್ ಮ್ಯಾಚಿನ ಸ್ಕೋರನ್ನು ಕಿವಿಗಾನಿಸಿಕೊಂಡು ಕೇಳುತ್ತಾ ರಸ್ತೆಯಲ್ಲಿ ನಡೆದು ಹೋಗುವುದು ಒಂದು ಕಾಲಮಾನದ ಗಂಡಸರ ಫ್ಯಾಷನ್ನಾಗಿತ್ತು. ಮೈಸೂರಿನ ಜಯನಗರ ರೈಲ್ವೇಗೇಟಿನ ಆಚೆ ಬದಿಯಿದ್ದ ಗುಬ್ಬಚ್ಚಿ ಸ್ಕೂಲಿನಿಂದ ಮನೆಗೆ ಹಿಂದಿರುಗುವಾಗ ಅಂಥ ಕ್ರಿಕೆಟ್ ಪ್ರೇಮಿಗಳು ರಸ್ತೆಯಲ್ಲಿ ಕಂಡರೆ ಆ ಆಟದ ಗಂಧಗಾಳಿಯೇನು ಗೊತ್ತಿಲ್ಲದಿದ್ದರೂ ‘ಸ್ಕೋರೆಷ್ಟು?’ ಎಂದು ಕೇಳುವುದೇ ನಮಗೊಂದು ಗೀಳಾಗಿತ್ತು. ಸುನಿಲ್ ಗವಾಸ್ಕರ್ ಆಟದ ವೈಖರಿಯನ್ನು ಬಣ್ಣಿಸುತ್ತಿರುವ ಕ್ರಿಕೆಟ್ ಕಾಮೆಂಟರಿಯನ್ನು ಶ್ರವ್ಯಮಾತ್ರದಿಂದಲೇ ಕಲ್ಪಿಸಿಕೊಂಡು ಎಂಜಾಯ್ ಮಾಡುತ್ತಾ, ‘ಒನ್‌ಟ್ವೆಂಟಿ ಫಾರ್ ನಾಟ್‌ಔಟ್’ ಎಂದು ಹೇಳುವುದೇ ಅವರಿಗೊಂಥರ ಖುಷಿಯ ಸಂಗತಿ. ಕ್ರಿಕೆಟ್ ಕಾಮೆಂಟರಿಯಿಂದಲೂ ರೇಡಿಯೊ ಒಂದು ಕಾಲಘಟ್ಟದ ಜನರ ಆಪ್ಯಾಯವಾಯಿತೆಂದರೆ ತಪ್ಪಾಗುವುದಿಲ್ಲ. ಮೀಡಿಯಂ ವೇವ್ ತರಂಗಾಂತರ ತರುತ್ತಿದ್ದ ಅಸ್ಪಷ್ಟ ಕಾಮೆಂಟರಿಯ ನಡು ನಡುವೆ ಗೊರ ಗೊರ ಎಂದು ಶಬ್ದ ಬಂದರೇನೇ ರೇಡಿಯೋ ಎಂಬುದು ಖಾತ್ರಿಯಾಗುತ್ತಿತ್ತು. ಈ ಹೊತ್ತಿನ ಹಾಗೆ ಎಫ್‌ಎಂ ತರಂಗಾಂತರದ ಸುಸ್ಪಷ್ಟ ಸ್ಟಿರಿಯೋ ಎಫೆಕ್ಟು ಆ ಕಾಲದ್ದಲ್ಲ. ಗೊರ ಗೊರಗಳ ನಡುವೆ ಕೇಳಿಸಿಕೊಳ್ಳುವುದೇ ಆಗಿನ ಒಂದು ಕಲೆ. ಸ್ಟೇಷನ್ ಸೆಟ್ ಮಾಡುವುದೇ ದೊಡ್ಡ ಕೌಶಲ! ಇದರಿಂದ ಬಹಳ ಮಂದಿ ತಾಳ್ಮೆಯನ್ನು ಕಲಿತರೆಂದರೆ ಉತ್ಪ್ರೇಕ್ಷೆಯಾಗದು. ಅದರಲ್ಲೂ ರೇಡಿಯೋ ಶ್ರೀಲಂಕಾದ ಕನ್ನಡದ ಕಾರ್ಯಕ್ರಮಗಳನ್ನು ಕೇಳಲೆಂದು ಗಂಟೆಗಟ್ಟಲೇ ಸ್ಟೇಷನ್ ಹೊಂದಿಸುವುದರಲ್ಲೇ ಸಮಯ ಕಳೆದು ಹೋಗುತ್ತಿತ್ತು. ಸ್ಟೇಷನ್ ಸೆಟ್ ಆಯಿತೆಂದು ಸಂತೋಷ ಪಡಬೇಕೋ? ಟೈಮು ವೇಸ್ಟಾಯಿತೆಂದು ದುಃಖಿಸಬೇಕೋ? ತಿಳಿಯದೇ ಕಕಮಕಗೊಳ್ಳುತ್ತಿದ್ದೆವು.
ರೇಡಿಯೊ ಕಂಡ ಏಳುಬೀಳು ಮತ್ತದರ ಪ್ರಗತಿ ಹಾಗೂ ವ್ಯಾಪಕತೆಯನ್ನು ಒಂದು ದೇಶದ ಅಭಿವೃದ್ಧಿಯ ಮಾನದಂಡವೆಂದೇ ಬಿಡುಬೀಸಾಗಿ ಹೇಳಬಹುದು. ಅಷ್ಟರಮಟ್ಟಿಗೆ ರೇಡಿಯೋ ರಂಗದಲ್ಲಿ ಅದ್ಭುತ ಬದಲಾವಣೆಗಳಾಗಿವೆ. ಪ್ರಸಾರದ ಗುಣಮಟ್ಟ ಮತ್ತು ಕಾರ್ಯಕ್ರಮಗಳ ವೈವಿಧ್ಯಗಳ ವಿಚಾರದಲ್ಲಂತೂ ಇದು ನೂರಕ್ಕೆ ನೂರು ನಿಜ. ಇಂದಿನ ದಿನಮಾನದಲ್ಲಿ ಹಾಡುಗಳ ಮೂಲಕ ನಗರದ ಜನರನ್ನೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರನ್ನೂ ರೇಡಿಯೊ ಸೆಳೆದಿದೆ. ಮೊಬೈಲ್ ಫೋನುಗಳಲ್ಲೇ ಎಫ್‌ಎಂ ವಾಹಿನಿಗಳು ದೊರಕುವಂತಾದುದು ಕ್ಷಿಪ್ರಕ್ರಾಂತಿಯೇ ಸರಿ. ಖಾಸಗೀ ರೇಡಿಯೋ ಬಿತ್ತರ ಮತ್ತು ಆನ್‌ಲೈನ್ ರೇಡಿಯೊ ಸದವಕಾಶವಂತೂ ಎಲ್ಲ ವರ್ಗದ ಕೇಳುಗರ ಕಣ್ಮಣಿಯೇ ಆಗಿಬಿಟ್ಟಿವೆ. ರೇಡಿಯೊ ಜಾಕಿಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡು ಎಂಥೆಂಥದೋ ಕಾರ್ಯಕ್ರಮಗಳ ಮೂಲಕ ನೇರವಾಗಿ ಕೇಳುಗರಿಗೆ ಪ್ರಶ್ನೆ ಕೇಳುವುದು, ಅವರ ಉತ್ತರವನ್ನು ಬೇರೊಂದು ಆಯಾಮದಿಂದ ಅಟ್ಯಾಕ್ ಮಾಡಿ ನಗು ತರಿಸುವುದು ಇವೆಲ್ಲಾ ದಿನನಿತ್ಯದ ಮಾಮೂಲಿಗಳಾಗಿ ಬಿಟ್ಟಿದೆ. ರೇಡಿಯೋ ಜಾಕಿಗಳಿಗೆ ಸ್ಟಾರ್ ವರ್ಚಸ್ಸು ದೊರಕಿ ಬಿಟ್ಟಿದೆ. ಸರ್ಕಾರಿ ಪ್ರಾಯೋಜಿತ ರೇಡಿಯೊ ನಿಲಯಗಳಲ್ಲಿ ನಿಯಮಿತವಾದ ಮತ್ತು ಶಿಸ್ತುಬದ್ಧವಾದ ಅರಿವು ಮತ್ತು ಆನಂದದಾಯಕ ಕಾರ್ಯಕ್ರಮಗಳು ಬಿತ್ತರವಾದರೆ ಖಾಸಗೀ ರೇಡಿಯೊ ವಾಹಿನಿಗಳದು ವ್ಯಕ್ತಿಯ ಭಾವವಿಭಾವ ಪ್ರಚೋದಿತವೇ ಸರಿ. ಕಂಗ್ಲಿಷಿನ ಮೂಲಕ ನಿರ್ಭಿಡೆಯಿಂದ ಮನ ಬಂದಂತೆ ಮಾತಾಡುವ, ಕೆಣಕುವ ಜಾಯಮಾನ. ಮಡಿವಂತ ಮಂದಿಯಂತೂ ‘ಥೂ, ಸ್ಟೇಷನ್ ಚೇಂಜ್ ಮಾಡು’ ಎಂದೇ ಹೇಳುವಂತೆ, ಅವರದು ಎಲ್ಲೆಕಟ್ಟು ಮೀರಿದ ನುಡಿ ನಡಾವಳಿ. ಯುವಜನತೆಗೆ ಅಂಥದೇ ಬೇಕು ಎಂಬುದವರಿಗೆ ಗೊತ್ತಿದ್ದರೂ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದೇ ನುಡಿದು, ಅವರ ಮಾತುಕತೆಗಳಿಂದ ಬೇಸರಾಗುತ್ತಾರೆ.
ಇದು ಏನೇ ಇರಲಿ, ಹಳ್ಳಿಗಾಡುಗಳಿಗೂ ತಲಪುವ ರೇಡಿಯೊ ಧ್ವನಿಯು ಹಲವು ಸಾಧ್ಯತೆಗಳ ಸಾಕಾರಮೂರ್ತಿ. ಆಯಾಯ ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮಗಳು ಜನಮಾನಸಕ್ಕೆ ಅಚ್ಚುಮೆಚ್ಚು. ಡಿಜಿಟಲ್ ಕ್ರಾಂತಿಗೂ ಮುಂಚೆ ಜನರು ತಾವು ಕೇಳಬೇಕೆಂದು ಬಯಸುವ ಅದೆಷ್ಟೋ ಹಾಡುಗಳನ್ನು ಆಕಾಶವಾಣಿಗೆ ಪತ್ರ ಬರೆದು ಅದರಲ್ಲಿ ಪ್ರಸಾರವಾಗುವಾಗ ಆಲಿಸಿ ಸಂತೋಷಪಡುತ್ತಿದ್ದರು. ಹಾಡನಾಲಿಸುವುದಕಿಂತ ಹೆಚ್ಚಾಗಿ ತಮ್ಮ ಮನೆಮಂದಿಯ ಹೆಸರೆಲ್ಲಾ ರೇಡಿಯೊದಲ್ಲಿ ಕೇಳಬಹುದೆಂಬುದೇ ಅವರ ಸಂಭ್ರಮ. ಇನ್ನು ರೈತರಿಗೆ ಸಲಹೆ ಎಂಬ ಕಾರ್ಯಕ್ರಮವಂತೂ ತುಂಬಾ ಉಪಯುಕ್ತ. ರೇಡಿಯೊದಲ್ಲಿ ಬರುವ ವಾರ್ತೆಗಳಾಗಲೀ ಪ್ರದೇಶ ಸಮಾಚಾರವಾಗಲೀ ಅಧಿಕೃತ. ಸಾಧಕರ ಸಂದರ್ಶನ, ಮಹಿಳಾರಂಗ, ಸಾಹಿತ್ಯಾದಿ ಲಲಿತಕಲೆಗಳನ್ನು ಕುರಿತ ರೂಪಕ, ನಾಟಕ, ಕಥಾ ಸಮಯ, ಶಾಸ್ತ್ರೀಯ ಸಂಗೀತ, ಜನಪದರ ಹಾಡುಹಸೆ, ಯಶಸ್ವೀ ಮಹಿಳಾ ಉದ್ಯಮಿಗಳ ಸಾಹಸಗಾಥೆ, ಚಿಣ್ಣರ ಅಂಗಳ, ಮಕ್ಕಳ ಮಂಟಪ, ಭಾನುವಾರದ ಬೆಡಗು, ಕೃಷಿರಂಗ, ಹವಾಮಾನ ಮಾಹಿತಿ, ಬೆಳಗಿನ ಗೀತಾರಾಧನ ಮತ್ತು ಚಿಂತನ ಪ್ರಸ್ತುತಿ, ಗಾಯನ ಮತ್ತು ವ್ಯಾಖ್ಯಾನ ಸರಣಿ, ಹರಿಕಥಾಗುಚ್ಛ, ಹಿಂದೂಸ್ತಾನೀ ಸಂಗೀತ, ಕಥಾಕಾಲಕ್ಷೇಪ, ರಾಷ್ಟ್ರೀಯ ನಾಟಕ ಸರಣಿ, ಧ್ವನಿವಾಹಿನಿಯೆಂಬ ಚಲನಚಿತ್ರಗಳ ಧ್ವನಿರೂಪಪ್ರಸಾರ ಒಂದೇ ಎರಡೇ ಹೀಗೆ ಹಲವು ಕಾರ್ಯಕ್ರಮಗಳು ರೇಡಿಯೊದ ಅನನ್ಯ ಕೊಡುಗೆ. ರೇಡಿಯೊ ಕೇಳಿ ಬೆಳೆದವರು ಸಂಸ್ಕಾರವಂತರಾಗುವುದು ಖಚಿತ. ವಿವೇಕ ಮತ್ತು ವಿವೇಚನೆಗಳ ಬದುಕು ಉಚಿತ! ಕೇಳುಗರ ಪತ್ರಗಳ ಮೂಲಕ ಆಕಾಶವಾಣಿಯು ಆಗಾಗ ಫೀಡ್‌ಬ್ಯಾಕ್ ಪಡೆದುಕೊಂಡು, ಜನಮಾನಸದ ನಾಡಿಮಿಡಿತವನ್ನು ಗ್ರಹಿಸಿ, ಅದರಂತೆ ಕಾರ್ಯಯೋಜನೆಗಳನ್ನು ರೂಪಿಸುತ್ತವೆ ಜೊತೆಗೆ ತನ್ನ ಕೇಳುಗರನ್ನು ಸುಶಿಕ್ಷಿತರನ್ನಾಗಿಸುವಲ್ಲಿ ನಿರಂತರ ಪರಿಶ್ರಮ ಪಡುತ್ತಿರುತ್ತವೆ.
ಶಿಸ್ತು ಮತ್ತು ಸಮಯಪ್ರಜ್ಞೆಗೆ ಮತ್ತೊಂದು ಹೆಸರೇ ರೇಡಿಯೊ. ‘ನನ್ನ ಗಡಿಯಾರ ರೇಡಿಯೊ ಕಾಲಕನುಸಾರ, ಅದ ನಾನು ಚೆನ್ನಾಗಿ ಬಲ್ಲೆ: ಇದು ನನ್ನ ವಸ್ತು, ಎಂದಿಗೂ ನನ್ನದಾಗಿರಲಿ, ಅವರಿವರ ಕೈ ನೋಡಿ ತಿದ್ದಲೊಲ್ಲೆ!’ ಎಂಬುದು ನನ್ನ ಗುರುಗಳಾದ ಡಾ. ಸಿಪಿಕೆಯವರ ಹನಿಗವನ. ರೇಡಿಯೋ ಎಂದರೆ ಗಡಿಯಾರ! ಇದು ನಿಖರತೆಯ ಸಂಕೇತ. ಸದಾ ನಮ್ಮನ್ನು ಎಚ್ಚರಿಸುವ ಗಂಟೆ. ಮೈ ಮರೆಯದಂತೆ ನಮ್ಮನ್ನು ಜಾಗೃತಗೊಳಿಸುವ ಅಂತರ್ದನಿಯ ಮಾರ್ದನಿ. ಹಾಗೆಯೇ ರೇಡಿಯೊ ಎಂಬುದು ನಮ್ಮ ಒಳದನಿ ಕೂಡ! ಸರಿಯಾದ ಸ್ಟೇಷನ್ ಸೆಟ್ ಮಾಡಿಟ್ಟುಕೊಳ್ಳುವುದೆಂದರೆ ಈ ಅಖಂಡ ವಿಶ್ವದಲ್ಲಿ ನಮ್ಮ ಇಷ್ಟದ ಫ್ರೀಕ್ವೆನ್ಸಿಯನ್ನು ಕಂಡುಕೊಂಡಂತೆ. ಹಾಗಾಗಿ ನನ್ನತನದ ಪ್ರತೀಕ ಕೂಡ. ಅರ್ಥವಂತಿಕೆ ಮತ್ತು ಅಚ್ಚುಕಟ್ಟಾದ ಬಾಳುವೆಯ ಸಂಕೇತವಾಗಿ ನಾನು ರೇಡಿಯೊವನ್ನು ಪರಿಗಣಿಸಲು ಇಷ್ಟಪಡುವೆ. ಪಕ್ವತೆ ಮತ್ತು ಗೌರವದ ಪ್ರತಿನಿಧಿ ಕೂಡ. ಅದರಲ್ಲೂ ಸರ್ಕಾರಿ ರೇಡಿಯೊ ಕಾರ್ಯಕ್ರಮಗಳು ಎಲ್ಲ ವರ್ಗದ ಎಲ್ಲ ಮನಸುಗಳ ಎಲ್ಲರ ಕನಸುಗಳ ಬಿತ್ತರವಾಗಿ ಸಮರ್ಥ ಸನ್ಮಂಗಳಕ್ಕೆ ಅಹರ್ನಿಶಿ ದುಡಿಯುತ್ತವೆ. ಅರಿವು ಮತ್ತು ಆನಂದಕ್ಕಾಗಿ ರೇಡಿಯೊವನ್ನು ಆಶ್ರಯಿಸಿದರೆ ಖಂಡಿತ ನಮಗೆ ಮೋಸವಾಗುವುದಿಲ್ಲ. ‘ಶ್ರಾವಣ ಬಂತು ನಾಡಿಗೆ’ ಎಂದ ಶಬ್ದಗಾರುಡಿಗ ಬೇಂದ್ರೆಯವರ ಭಾವಗೀತವನ್ನು ಗಾನ ಗಾರುಡಿಗ ಸಿ ಅಶ್ವಥ್ ಅವರು ಹಾಡುತಿದ್ದರೆ ನನಗೆ ರೇಡಿಯೋನೆ ಕಣ್ಣಮುಂದೆ ಸುಳಿಯುತ್ತದೆ. ಅಷ್ಟರಮಟ್ಟಿಗೆ ಇದು ನಮ್ಮೆಲ್ಲರ ಪಾಲಿನ ಶ್ರವ್ಯಸಂಪತ್ತು.
-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ರೇಡಿಯೋ ಎಂಬ ಶ್ರವ್ಯ ಸಂಪತ್ತಿನ ಲೇಖನ ಮನಸ್ಸಿಗೆ ಮುದ ತಂದಿತು ಮಂಜು ಸಾರ್.. ರೇಡಿಯೋ ಈಗಲೂನನ್ನ ಅವಿಭಾಜ್ಯ ಅಂಗವಾಗಿದೆ..ನಿಮ್ಮ ಲೇಖನ ನನ್ನ ಹಳೆಯ ನೆನಪನ್ನು ಹೆಕ್ಕಿ ತೆಗೆಯಿತು..ಅಡುಗೆ ಮನೆಯಲ್ಲಿ..ಕುಳಿತಿದೆ..ಕೆಟ್ಟು ಹೋದಾಗಲೆಲ್ಲಾ ರಿಪೇರಿ ಮಾಡಿಸಿ ಕೊಂಡು… ಹಾಡುತ್ತಿದೆ..
ಪ್ರಕಟಿಸಿದ ಸುರಹೊನ್ನೆಗೆ ನಾನೇನು ಹೇಳಲಿ?
ಆಕಾಶವಾಣಿಯೇ ಎಲ್ಲವನೂ ಪಸರಿಸಿ, ಪ್ರಸಾರಿಸುತಿರುವಾಗ !
ಧನ್ಯವಾದ ಪತ್ರಿಕೆಗೆ ಮತ್ತದರ ಪ್ರೋತ್ಸಾಹಕೆ………
ಧನ್ಯವಾದಗಳು
ಆಪ್ತವಾಗಿದೆ, ನಾನು ಮೈಸೂರು ಆಕಾಶವಾಣಿಯ ನಿಲಯ ಕಲಾವಿದನಾಗಿ ಹಲವಾರು ರೇಡಿಯೋ ನಾಟಕಗಳಲ್ಲಿ ಅಭಿನಯಿಸಿದ್ದೇನೆ
ಸೊಗಸಾದ ಬರಹ.
ವಿಶ್ವ ರೇಡಿಯೋ. ದಿನದ ಶುಭಾಶಯಗಳು ಸರ್.
ಲೇಖನ ತುಂಬಾ ಚನ್ನಾಗಿದೆ
ಬಾಲ್ಯದ ನೆನೆಪಾಯಿತು….
ವಿವಿಧಭಾರತಿ….
ಶ್ರೀಲಂಕ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್…..
ಹೀಗೆ….
ಸತ್ವಪೂರ್ಣ ಬರೆಹ
ಮಾಹಿತಿ ಪೂರ್ಣ ಬರಹ
ರೇಡಿಯೋ ನಮ್ಮ ಊರಿಗೆ ವಿದ್ಯುತ್ ಸಂಪರ್ಕವಿಲ್ಲದಿದ್ದ ದಿವಸಗಳಲ್ಲಿ ಬ್ಯಾಟರಿ ಚಾಲಿತ ಟೇಬಲ್ ಮಾಡೆಲ್, ಸೆಕೆಂಡ್ ಹ್ಯಾಂಡಲ್, ರೇಡಿಯೋವನ್ನು ನನ್ನ ಅಣ್ಣ ತಂದಿದ್ದರು. ಚಿತ್ರಗೀತೆಗಳು, ಪ್ರದೇಶ ಸಮಾಚಾರ, ಹಾಗೂ ವಾರ/ಪಾಕ್ಷಿಕವಾಗಿ ಬರುತ್ತಿದ್ದ ಚಲನ ಚಿತ್ರ ಸೌಂಡ್ ಟ್ರಾಕ್ ಕೇಳುತ್ತಿದ್ದದ್ದು ನೆನಪಿದೆ.
ಎಷ್ಟೋ ಸಾರಿ ಅದನ್ನು ದಿನಗಳಿಗೆ ಗದ್ದೆಯಲ್ಲಿ ಚಪ್ಪರ ಹಾಕಿ ಮೇಯಿಸುತ್ತಿದ್ದ ದಿನಗಳಲ್ಲಿ ಟೇಬಲ್ ರೇಡಿಯೋನ್ನೇ ಹೊತ್ತೊಯ್ದು ಸೌಂಡ್ ಟ್ರ್ಯಾಕ್ ಕೇಳುತ್ತಿದ್ದೆ.
ಮನೆಯಲ್ಲಿ ಹಲವು ದಶಕಗಳಿಂದ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಮಾತಾಡುತ್ತಿರುವ, ಮಾತಾಡಿಸುತ್ತಿರುವ ಪುಟ್ಟ ರೇಡಿಯೋಗೆ ವಿಶ್ವರೇಡಿಯೋ ದಿನದ ಶುಭಾಶಯಗಳು…!! ಸೊಗಸಾದ ಸಾಂದರ್ಭಿಕ ಸುದೀರ್ಘ ಲೇಖನವು ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ…ಧನ್ಯವಾದಗಳು.
ರೇಡಿಯೋ ಕುರಿತಾದ ಚಂದದ ಲೇಖನ. ಎಷ್ಟೊಂದು ಅನುಭವಗಳು ನಮಗೂ ಆದದ್ದು ಸ್ಮೃತಿ ಪಟಲದಲ್ಲಿ ತೇಲಿ ಬಂತು.