ಸಾವಿತ್ರಿ…
ಮನೆಯಲ್ಲಿ ಹೆಂಡತಿ ಮಕ್ಕಳು ಊರಿಗೆ ಹೋಗಿದ್ದರಿಂದ ಸ್ವಲ್ಪ ತಡವಾಗಿಯೇ ಮನೆಗೆ ಬಂದರು ವಕೀಲ ಸದಾನಂದರು. ಬಟ್ಟೆಬದಲಾಯಿಸಿ ಕೈಕಾಲು ಮುಖ ತೊಳೆದುಕೊಂಡು ಅಡಿಗೆಯವನು ಕೊಟ್ಟ ಟೀ ಕುಡಿದು ಟೀಪಾಯಿಯ ಮೇಲಿದ್ದ ಮ್ಯಾಗಜಿನ್ ಕೈಗೆತ್ತಿಕೊಂಡು ಕಣ್ಣಾಡಿಸಿದರು. ಅಡಿಗೆಯ ರಾಮಪ್ಪ ಅಲ್ಲೇ ನಿಂತಿದ್ದುದನ್ನು ಕಂಡು ರಾತ್ರಿ ಅಡಿಗೆಯ ಬಗ್ಗೆ ಕೇಳಲು ನಿಂತಿರಬೇಕೆಂದು “ತಿಳಿಸಾರು ಅನ್ನ ಮಾಡಿಬಡು. ಒಂದೆರಡು ಹಪ್ಪಳ ಕರಿದೋ, ಸುಟ್ಟೋ ಇಟ್ಟುಬಿಡು ಸಾಕು” ಎಂದರು.
“ಅಲ್ಲಾ ಬುದ್ಧಿ ನಿಮ್ಮ ಗೆಳೆಯರಾದ ಶೇಷಣ್ಣನವರು ಬಂದಿದ್ದಾರೆ. ಇಷ್ಟೇ ಮಾಡಿದರೆ ಸಾಕೇ?” ಎಂದ.
“ಏನಂದೆ ಶೇಷಗಿರಿ ಬಂದಿದ್ದಾನಾ? ಎಲ್ಲಿ? ಅಲ್ಲೋ ರಾಮು ಅವನು ಬಂದಿದ್ದಾನೇಂತ ಫೋನ್ ಮಾಡಲಿಕ್ಕೇನಾಗಿತ್ತೋ?” ಎಂದರು.
“ಕ್ಷಮಿಸಿ ಬುದ್ಧಿ, ಅವರೇ ಫೋನ್ ಮಾಡುವುದೇನು ಬೇಡ. ಕೆಲಸದ ಒತ್ತಡದಲ್ಲಿರುತ್ತಾರೆ ತೊಂದರೆಯಾಗುತ್ತೆ. ನಿಧಾನವಾಗಿ ಬರಲಿ. ನನಗೇನೂ ಅವಸರವಿಲ್ಲ” ಎಂದು ಹೇಳಿದರು.
“ಹೌದೇ ! ಸರಿ ಎಲ್ಲಿದ್ದಾರೆ” ಎಂದದ್ದಕ್ಕೆ ಎಲ್ಲೋ ಹೊರಗೆ ಹೋಗಿ ಬರುತ್ತೇನೆಂದರು ಎಂದುತ್ತರಿಸಿದ ರಾಮಪ್ಪ.
“ಹಾಗಾದರೆ ಅವನಿಗೆ ಚಪಾತಿ ಬಹಳ ಇಷ್ಟ. ತರಕಾರಿ ಏನಾದರೂ ಇದೆಯಾ?”
“ಹೂ ಬುದ್ಧಿ, ಕೋಸು, ಹುರುಳಿಕಾಯಿ, ಕ್ಯಾರೆಟ್ಟು, ಆಲೂ, ಟೊಮ್ಯಾಟೋ..”
“ನಿಲ್ಲಿಸೊ ಮಾರಾಯ. ಮಾರ್ಕೆಟ್ಟೇ ಇಲ್ಲೇ ಇದೆಯೇನೋ ಅನ್ನುವ ಹಾಗೆ ಹೇಳುತ್ತಿದ್ದೀಯೆ”
“ಅಮ್ಮಾವರು ಊರಿಗೆ ಹೋಗುವ ಮುಂಚೆ ಎಲ್ಲಾ ತರಿಸಿ ಸ್ವಚ್ಛಮಾಡಿ ಫ್ರಿಜ್ಜಿನಲ್ಲಿಟ್ಟು ಹೋಗಿದ್ದಾರೆ’ ಎಂದ.
“ಒಹೋ ! ಸರಿ ಹಾಗಾದರೆ ಪಲ್ಯ ಚಪಾತಿ, ಏನಾದರೂ ಒಂದು ಸಿಹಿ , ತಿಳಿಸಾರು ಅನ್ನ, ಹಪ್ಪಳ, ಮೊಸರು ಸಾಕಾಗುತ್ತೆ”
“ಗೊತ್ತಾಯಿತು ಬಿಡಿಬುದ್ಧಿ” ಎಂದು ನಸುನಗುತ್ತಾ ಒಳನಡೆದನು ರಾಮಪ್ಪ.
ಸದಾನಂದ, ಶೇಷಗಿರಿ ಒಂದೇ ಊರಿನವರು. ಜೊತೆಗೇ ಕುಟುಂಬ ಸ್ನೇಹಿತರು. ಸದಾನಂದ ವಕೀಲ ವೃತ್ತಿ ಹಿಡಿದರೆ ಶೇಷಗಿರಿ ಪೋಲೀಸ್ ಖಾಥೆಗೆ ಭರ್ತಿಯಾದ. ಆದರೆ ಸ್ನೇಹಕ್ಕೇನೂ ಕೊರತೆಯಾಗಿಲ್ಲ. ತಮ್ಮ ವೃತ್ತಿಯಿಂದ ಬೇರೆಬೇರೆ ಊರುಗಳಲ್ಲಿದ್ದರೂ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಅವರ ಮನೆಯವರೂ ಊರಿಗೆ ಹೋಗಿರುವುದರಿಂದ ಬಂದಿರಬಹುದು ಎಂದುಕೊAಡ. ಆದರೂ ಫೋನ್, ಮೆಸೇಜ್ ಇಲ್ಲದೆ ಧಿಡೀರ್ ಅಂತ ಬಂದಿರಬೇಕಾದರೆ ಏನಾದರೂ ವಿಶೇಷವಿರಬೇಕು ಎಂದುಕೊಂಡ ಸದಾನಂದ. ಪರಸ್ಪರರ ವೃತ್ತಿಗಳಿಗೆ ಸಂಬಂಧಿಸಿದಂತೆ ಎಷ್ಟೋ ವಿಷಯಗಳ ಬಗ್ಗೆ ಆಗಿಂದಾಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೀಗೇ ಆಲೋಚಿಸುತ್ತಿರುವಾಗಲೇ “ರಾಮು, ವಕೀಲ ಸಾಹೇಬರು ಬಂದರೇನಪ್ಪಾ?” ಎನ್ನುತ್ತಲೇ ಒಳಕ್ಕೆ ಬಂದರು ಶೇಷಗಿರಿ.
“ಬಾರಯ್ಯಾ ಬಾ.. ಏನು ಎಡಬಲ ಏನೂ ತಿಳಿಸದೇ ಧಿಡೀರಂತ ಆಗಮನ?”ಎಂದ ಸದಾನಂದ.
“ ಒಂದು ಕೇಸಿನ ವಿಷಯವನ್ನು ನಿನ್ನೊಡನೆ ಮಾತನಾಡುವುದಿತ್ತು. ಅದಕ್ಕೇ ಬಂದೆ. ಹೇಗಿದ್ದರೂ ಇಬ್ಬರ ಮನೆಯಲ್ಲೂ ಮಡದಿ ಮಕ್ಕಳಿಲ್ಲವಲ್ಲ . ಅವರಿದ್ದರೆ ಇಂತಹ ವಿಷಯಗಳನ್ನು ನಿಧಾನವಾಗಿ ಚರ್ಚಿಸಲು ಸಾಧ್ಯವಾಗದು. ನಿಮ್ಮಗಳದ್ದು ಯಾವಾಗಲೂ ಒಂದೇ ವಿಷಯವೆಂದು ಬೇಸರಿಸುತ್ತಾರೆ”.
“ಇರಲಿ ಬಿಡು, ಅದೇನಪ್ಪಾ ಅಂತಹ ಕೇಸು?”
“ನಿನ್ನಿಂದ ಬಂದದ್ದೇ”
“ನನ್ನಿಂದ ಬಂದದ್ದೇ ! ಎಷ್ಟೋ ಕೇಸುಗಳು ಬರುತ್ತಿರುತ್ತವೆ. ಅದರಲ್ಲಿ ಇದ್ಯಾವುದು?”
“ಅದೇ ಕಣಪ್ಪಾ ಗಂಡ ನಾಪತ್ತೆಯಾಗಿದ್ದಾನೆಂದು ಕೊಟ್ಟ ಕಂಪ್ಲೇಂಟ್ ಬಗ್ಗೆ ಪೋಲೀಸಿನವರು ಕೈಚೆಲ್ಲಿದ್ದರು. ಆಕೆ ನಿನ್ನ ಹತ್ತಿರ ಬಂದು ಅರ್ಜಿ ಹಾಕಿಸಿ ಮತ್ತೆ ರೀಓಪನ್ ಮಾಡಿಸಿದ್ದು”
“ಓಹೋ ‘ಹೇಬಿಯಸ್ ಕಾರ್ಪಸ್’ ಕೇಸು.” ಸದಾನಂದರಿಗೆ ಆ ದಿನದ ಘಟನೆಗಳು ನೆನಪಾಗತೊಡಗಿತು.
ಆಫೀಸಿನ ಛೇಂಬರ್‌ನಲ್ಲಿ ಯಾವುದೋ ಫೈಲಿನಲ್ಲಿ ಮುಖ್ಯವಾದ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದಾಗ “ಸಾರ್, ನಾನು ಒಳಗೆ ಬರಬಹುದೇ?’ ಎಂಬ ಶಬ್ದಕೇಳಿಸಿ ತಲೆ ಎತ್ತಿದರು ಸದಾನಂದ. ಬಾಗಿಲಬಳಿ ಸುಮಾರು ನಲವತ್ತು- ನಲವತ್ತೈದು ವರ್ಷದ ಸುಂದರವಾಗಿದ್ದ ಮಹಿಳೆಯೊಬ್ಬರು ನಿಂತಿದ್ದರು.
“ ಬನ್ನಿ, ಯಾರಮ್ಮಾ ನೀವು? ನನ್ನಿಂದೇನಾಗಬೇಕಿತ್ತು” ಪ್ರಶ್ನಿಸಿದರು.
“ಸಾರ್, ನನ್ನ ಹೆಸರು ಸಾವಿತ್ರಿ. ತಮ್ಮ ಕಡೆಯಿಂದ ಕೋರ್ಟಿನಲ್ಲಿ ಒಂದು ಅರ್ಜಿ ದಾಖಲಿಸಬೇಕಿತ್ತು”
“ಹೌದೇ, ಯಾವ ವಿಚಾರವಾಗಿ? ಯಾರ ಮೇಲೆ ಅರ್ಜಿ?”
“ಬನಶಂಕರಿ ಪೋಲೀಸ್ ಸ್ಟೇಷನ್ನಿನ ಇನ್ಸಪೆಕ್ಟರವರ ಮೇಲೆ. ವಕೀಲರಿಂದ ದೂರು ದಾಖಲಿಸಿದರೆ ನನ್ನ ಕೇಸಿಗೆ ಅನುಕೂಲವಾಗುತ್ತದೆ ಎಂದು ಪರಿಚಯದವರೊಬ್ಬರು ಹೇಳಿದರು. ಅದಕ್ಕೋಸ್ಕರ ತಮ್ಮಲ್ಲಿಗೆ ಬಂದೆ” ಎಂದು ಮಹಿಳೆ ಹೇಳಿದಳು.
“ನಿಮ್ಮ ಕೇಸಿನ ಬಗ್ಗೆ ವಿವರವಾಗಿ ಹೇಳಿ” ಕುರ್ಚಿಯ ಮೇಲೆ ಕೂಡುವಂತೆ ಕೈ ತೋರಿಸಿದರು ಸದಾನಂದ.
“ ನಾನು ನನ್ನ ಗಂಡ ಪುಟ್ಟಸ್ವಾಮಿ ಇಬ್ಬರೂ ಬನಶಂಕರಿ ಬಡಾವಣೆಯ ಹದಿನಾರನೇ ಕ್ರಾಸ್ ಮನೆಯೊಂದರಲ್ಲಿ ವಾಸವಾಗಿದ್ದೆವು. ಮನೆಯ ಸಮೀಪದಲ್ಲೇ ಚಿಕ್ಕದೊಂದು ಅಂಗಡಿ ನಡೆಸುತ್ತಿದ್ದೆವು. ನಮ್ಮ ಮನೆಯವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದವರು. ಬೇರೆ ಯಾವ ಉಸಾಬರಿಗೂ ಹೋದವರಲ್ಲ. ಬೆಳಗ್ಗೆ ಏಳು ಗಂಟೆಗೆ ಅಂಗಡಿ ಬಾಗಿಲು ತೆರೆದು ಕುಳಿತರೆ ಸಂಜೆಯವರೆಗೆ ಅಲ್ಲೇ ಇರುತ್ತಿದ್ದರು. ನಾನು ಹತ್ತು ಗಂಟೆಯವೇಳೆಗೆ ತಿಂಡಿ, ಕಾಫಿ ತೆಗೆದುಕೊಂಡು ಹೋಗಿ ಅವರಿಗೆ ಕೊಡುತ್ತಿದ್ದೆ. ಮಧ್ಯಾನ್ಹ ಎರಡು ಗಂಟೆಗೆ ಊಟವನ್ನೂ ಅಲ್ಲಿಗೇ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವರು ಊಟ ತಿಂಡಿ ಮಾಡುತ್ತಿರುವಾಗ ನಾನೇ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದೆ. ರಾತ್ರಿ ಒಂಬತ್ತು ಗಂಟೆಗೆ ಅಂಗಡಿ ಮುಚ್ಚಿ ಮನೆಗೆ ಬಂದರೆ ಮತ್ತೆಲ್ಲ್ಲೂ ಹೊರಗೆ ಹೊಗುತ್ತಿರಲಿಲ್ಲ. ನೆರೆಹೊರೆಯವರ ಜೊತೆಯಲ್ಲಿ ಎಷ್ಟುಬೇಕೋ ಅಷ್ಟು ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ವಾರದಲ್ಲೊಂದು ಸಾರಿ ಅಂಗಡಿಗೆ ದಿನಸಿ, ಇತರ ಸಾಮಾನುಗಳನ್ನು ತರಲು ಪೇಟೆಗೆ ಹೋದಾಗ ಕೆಲವು ಗಂಟೆಗಳು ಅಂಗಡಿಯನ್ನು ನಾನೇ ನಡೆಸುತ್ತಿದ್ದೆ. ನಮ್ಮ ಅಂಗಡಿಯಿರುವ ಪ್ರದೇಶದಲ್ಲಿ ಸುತ್ತಮುತ್ತಲಿರುವವರು ಸಾಮಾನ್ಯ ಕೂಲಿಕಾರ ವರ್ಗದವರು. ಇವರೇ ನಮ್ಮ ಅಂಗಡಿಯ ಗಿರಾಕಿಗಳು. ಚಿಕ್ಕಪುಟ್ಟ ಮೊತ್ತದ ವ್ಯಾಪಾರ ಮಾಡಿದರೂ ದಿನವಹಿ ಖಾಯಂ ಬರುವಂತಹವರು. ವ್ಯಾಪಾರದಿಂದ ನಮಗೆ ಸಿಗುತ್ತಿದ್ದ ವರಮಾನ ನಮ್ಮ ಜೀವನಕ್ಕೆ ಸಾಕಾಗಿ ಚಿಕ್ಕಪುಟ್ಟ ಉಳಿತಾಯ ಮಾಡುವಷ್ಟಿತ್ತು. ಕೂಡಿ ಹಾಕಿದ ಹಣದಿಂದ ಸ್ವಲ್ಪ ನಗ ನಾಣ್ಯ ಮಾಡಿಸಿಕೊಟ್ಟಿದ್ದರು ನನ್ನ ಗಂಡ. ಹೀಗಾಗಿ ಸಂಸಾರದಲ್ಲಿ ಸುಖವಾಗಿದ್ದೆವು. ಯಾರ ಕೆಟ್ಟ ದೃಷ್ಟಿ ತಾಗಿತೊ ಒಂದು ದಿನ ನನ್ನ ಗಂಡ ಬೆಳಗ್ಗೆ ಮನೆಯಿಂದ ಅಂಗಡಿಗೆ ಅಂತ ಹೋದವರು ರಾತ್ರಿ ವರೆಗೂ ಮನೆಗೆ ಬರಲೇಇಲ್ಲ. ಆ ದಿನ ನನಗೆ ಸ್ವಲ್ಪ ಹುಷಾರಿಲ್ಲದ್ದರಿಂದ ಅವರು ಮನೆಯಲ್ಲೇ ತಿಂಡಿತಿಂದು ತಡವಾಗಿಯೇ ಅಂಗಡಿಗೆ ಹೋದರು. ಮಧ್ಯಾನ್ಹ ಊಟಕ್ಕೂ ಬರಲಿಲ್ಲ. ಅಂಗಡಿಯ ಬಳಿ ಹೋಗಿ ವಿಚಾರಿಸಿದಾಗ ಬೆಳಗಿನಿಂದ ಅಂಗಡಿ ತೆರೆದೇ ಇಲ್ಲವೆಂದು ತಿಳಿಯಿತು. ನಾನು ನನ್ನ ನೆಂಟರಿಷ್ಟರು, ಪರಿಚಯದವರನ್ನೆಲ್ಲ ವಿಚಾರಿಸಿದರೆ ಅಲ್ಲಿಗೆ ಇವರು ಹೋಗಿಲ್ಲವೆಂದು ತಿಳಿದುಬಂತು. ವಿಧಿಯಿಲ್ಲದೆ ಬನಶಂಕರಿ ಪೋಲೀಸ್ ಠಾಣೆಯಲ್ಲಿ ದೂರು ಕೊಟ್ಟೆ. ಏನೂ ಸುದ್ಧಿ ತಿಳಿಯದೇ ಇದ್ದದ್ದರಿಂದ ಆಂಗಿಂದಾಗ್ಗೆ ಪೋಲೀಸ್ ಸ್ಟೇಷನ್ನಿಗೆ ಹೋಗಿ ವಿಚಾರಿಸುತ್ತಲೇ ಇದ್ದೆ. ಅವರು ಇನ್ನೂ ಹುಡುಕುತ್ತಲೇ ಇದ್ದೇವೆ. ಗೊತ್ತಾದ ಕೂಡಲೇ ತಿಳಿಸುತ್ತೇವೆ ಎಂದು ಉಡಾಫೆ ಉತ್ತರ ಹೇಳಿ ಸಾಗಹಾಕುತ್ತಿದ್ದರು. ಅವರು ನಿಜವಾಗಿ ಹುಡುಕುವ ಯಾವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ ಎಂಬುದು ಖಾತ್ರಿಯಾಯಿತು. ನನ್ನ ಪರಿಚಯದವರು ಪೋಲೀಸ್ ಇನ್ಸಪೆಕ್ಟರ್ ವಿರುದ್ಧವೇ ವಕೀಲರಿಂದ ಒಂದು ಅರ್ಜಿ ಕೋರ್ಟಿನಲ್ಲಿ ಹಾಕಿಸಿದರೆ ಬೇಗನೆ ಕೆಲಸವಾಗುತ್ತದೆಯೆಂದು ಒಬ್ಬರು ತಿಳಿದವರು ಹೇಳಿದರು. ಅದಕ್ಕೆ ತಾವು ಅಂತಹದ್ದೊಂದು ಅರ್ಜಿ ದಾಖಲಿಸಬೇಕು” ಎಂದು ಮಾತು ಮುಗಿಸಿದಳು.
ವಕೀಲ ಸದಾನಂದರು ಅವಳಿಂದ ಅಗತ್ಯವಾದ ದಾಖಲೆಗಳನ್ನು ಪಡೆದುಕೊಂಡು ಉಚ್ಛ ನ್ಯಾಯಾಲಯದಲ್ಲಿ “ಹೇಬಿಯಸ್ ಕಾರ್ಪಸ್” ಅರ್ಜಿಯೊಂದನ್ನು ಸಾವಿತ್ರಿಯ ಪರವಾಗಿ ದಾಖಲಿಸಿದರು. ನ್ಯಾಯಾಲಯ ವಿಚಾರಣೆ ನಡೆಸಿ ಬನಶಂಕರಿ ಪೋಲೀಸ್ ಇನ್ಸ್ ಪೆಕ್ಟರ್ ರವರಿಗೆ ನೋಟೀಸ್ ಜಾರಿಮಾಡಿತು. ತೀವ್ರವಾಗಿ ಶೋಧ ನಡೆಸಿ ಮುಂದಿನ ವಿಚಾರಣೆಯ ದಿವಸದೊಳಗೆ ಕಾಣೆಯಾಗಿರುವ ಪುಟ್ಟಸ್ವಾಮಿಯನ್ನು ಕೋರ್ಟಿನಲ್ಲಿ ಹಾಜರು ಪಡಿಸುವಂತೆ ಅಥವಾ ಅವರ ಬಗ್ಗೆ ಖಚಿತವಾದ ಮಾಹಿತಿಯನ್ನು ಸಲ್ಲಿಸುವಂತೆ ಒಂದು ತಿಂಗಳ ಗಡುವು ನೀಡಲಾಯಿತು.
ಆಗ ತಾನೇ ಶೇಷಗಿರಿ ಬನಶಂಕರಿ ಸ್ಟೇಷನ್ನಿಗೆ ವರ್ಗವಾಗಿ ಬಂದಿದ್ದರು. ಅಂದಿನಿಂದ ಪೋಲೀಸ್ ಶೋಧ ತೀವ್ರವಾಯಿತು. ಪುಟ್ಟಸ್ವಾಮಿಯ ಪತ್ನಿ ಸಾವಿತ್ರಿ ಮತ್ತು ಅವಳ ಬಂಧುಗಳು, ನೆರೆಹೊರೆಯವರು, ಪರಿಚಿತರು, ಅವರ ಅಂಗಡಿಯ ಪ್ರಮುಖ ಗ್ರಾಹಕರು ಎಲ್ಲರನ್ನೂ ತನಿಖೆಗೆ ಒಳಪಡಿಸಿದರು. ಹದಿನೈದು ದಿನಗಳೊಳಗೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಪುಟ್ಟಸ್ವಾಮಿಯವರ ಶವವು ಚೂರುಚೂರಾಗಿ ಕತ್ತರಿಸಲ್ಪಟ್ಟು ಒಂದು ಚೀಲದಲ್ಲಿ ತುಂಬಿದ್ದು ಬಡಾವಣೆಯ ಅಂಚಿನಲ್ಲಿದ್ದ ದೊಡ್ಡ ಮೋರಿಯ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.. ಅವನ ಮೈಮೇಲಿದ್ದ ಬಟ್ಟೆಗಳ ಅವಶೇಷಗಳು, ಮೂಳೆಗಳು ಸಿಕ್ಕಿದ್ದವು. ಫೊರೆನ್ಸಿಕ್ ಪರೀಕ್ಷೆಯ ನಂತರ ತಜ್ಞರು ಆತನು ಪುಟ್ಟಸ್ವಾಮಿಯೇ ಎಂದು ಧೃಢೀಕರಿಸಿದ್ದರು. ಇದರಿಂದ ವಕೀಲ ಸದಾನಂದರ ಹೇಬಿಯಸ್ ಕಾರ್ಪಸ್ ಅರ್ಜಿಯ ಕೆಲಸ ಪೂರ್ಣವಾಗಿದ್ದು ಅವರು ನಿರಾಳವಾದರು.
ಈಗ ನೋಡಿದರೆ ಶೇಷಗಿರಿ ಮತ್ತೆ ಅದೇ ಕೇಸಿನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾನಲ್ಲಾ ಎಂದು ಕುತೂಹಲವಾಯಿತು. “ಅದೆಲ್ಲಾ ಮುಗಿದುಹೋದ ಆಧ್ಯಾಯ. ಮತ್ತೆ ಅದೇ ಕೇಸು ! ನನಗೇನೂ ಅರ್ಥವಾಗುತ್ತಿಲ್ಲ” ಎಂದ ಸದಾನಂದ.
ಶೇಷಗಿರಿ “ಹೌದಪ್ಪಾ ನಿನ್ನ ಪಾರ್ಟ ಮುಗಿಯಿತು. ಆದರೆ ಪುಟ್ಟಸ್ವಾಮಿಯ ಹುಡುಕಾಟದಲ್ಲಿ ನಮ್ಮವರು ಕಲೆಹಾಕಿರುವ ಮಾಹಿತಿಗಳು ಗಂಭೀರವಾಗಿವೆ. ಅವನ ಸಾವು ಸಹಜವಾದುದಲ್ಲ. ಇದೊಂದು ಸಂಚಿನಿಂದ ಮಾಡಿರುವ ಕೊಲೆಯೆಂದು ಬೆಟ್ಟು ತೋರಿಸುತ್ತಿವೆ. ಹಾಗಾಗಿ ನಾವು ಕೊಲೆಯ ಬಗ್ಗೆ ಪರಿಶೀಲನೆ ಮುಂದುವರಿಸಿದೆವು. ಸಾವಿತ್ರಿ ಪುಟ್ಟಸ್ವಾಮಿ ಮೇಲ್ನೋಟಕ್ಕೆ ಸುಖೀ ದಂಪತಿಗಳು. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅದಕ್ಕೆ ಕಾರಣ ಅವರ ನಿಕಟವಾದ ಪರಿಚಯದವನೇ ಇನ್ನೊಬ್ಬ ಪುರುಷ ಚಿನ್ನಸ್ವಾಮಿ ಎಂಬ ಲೇವಾದೇವಿ ಸಾಹುಕಾರ. ಅವನು ಚೀಟಿ ವ್ಯವಹಾರವನ್ನೂ ಮಾಡುತ್ತಿದ್ದ. ಕೋಲಾರ ಜಿಲ್ಲೆಯಿಂದ ಇಲ್ಲಿಗೆ ಬಂದು ನೆಲೆಸಿದ್ದ. ಈತ ಬಡ್ಡಿ ಮತ್ತು ಚೀಟಿ ವ್ಯವಹಾರದಲ್ಲಿ ಬಹಳಷ್ಟು ಗಳಿಸಿದ್ದ. ತನ್ನ ಮೈಮೇಲೂ ಸಾಕಷ್ಟು ಬಂಗಾರದ ಒಡವೆಗಳನ್ನು ಧರಿಸಿದ್ದ. ಹೀಗೆ ಸಂಪಾದನೆ ಮಾಡಿ ಆ ಪ್ರದೇಶದಲ್ಲಿ ನಾಲ್ಕಾರು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದ. ಸಾಕಷ್ಟು ಬಾಡಿಗೆಯ ಹಣ ಬರುತ್ತಿದೆ. ಅಂತಹ ಒಂದು ಮನೆಯಲ್ಲೇ ಸಾವಿತ್ರಿ ಪುಟ್ಟಸ್ವಾಮಿ ವಾಸವಿದ್ದರು. ಹಣಬಲದ ಮನುಷ್ಯನಾದುದರಿಂದ ಸಮಯಕ್ಕೆ ನೆರವಾಗುವನೆಂದು ಚಿನ್ನಸ್ವಾಮಿಯೆಂದರೆ ಸುತ್ತಮುತ್ತಲ ಜನರಿಗೆ ಅವನನ್ನು ಕಂಡರೆ ಭಯಭಕ್ತಿಯಿತ್ತು. ಅವರೆಲ್ಲ ಅವನಿಗೆ ವಿಶೇಷವಾದ ಮರ್ಯಾದೆ ಕೊಡುತ್ತಿದ್ದರು. ಪುಟ್ಟಸ್ವಾಮಿ ದಂಪತಿಗಳೂ ಅದಕ್ಕೆ ಹೊರತಾಗಿರಲಿಲ್ಲ. ಅವನೊಡನೆ ಹಣಕಾಸಿನ ವ್ಯವಹಾರ ಅನಿವಾರ್ಯವಾಗಿದ್ದು ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ಸಲುಗೆಯಿಂದ ಚಿನ್ನಸ್ವಾಮಿಯು ಪುಟ್ಟಸ್ವಾಮಿಯ ಮನೆಗೆ ಆಗಾಗ ಭೇಟಿನೀಡುತ್ತಿದ್ದ. ಇದು ಮುಂದುವರೆದು ಪುಟ್ಟಸ್ವಾಮಿಯು ಅಂಗಡಿಗೆ ಹೋದ ಸಮಯದಲ್ಲೂ ಅವರ ಮನೆಗೆ ಚಿನ್ನಸ್ವಾಮಿಯು ಬಂದು ಹೋಗುತ್ತಿದ್ದುದು ಎಲ್ಲರಿಗೂ ಗೊತ್ತಿದ್ದ ವಿಷಯವೇ.
ಇದಕ್ಕೆ ಇನ್ನೊಂದು ಕಾರಣವೆಂದರೆ ಚಿನ್ನಸ್ವಾಮಿಯ ಹೆಣ್ಣುಗಳ ಖಯಾಲಿ. ಅವನ ದೃಷ್ಟಿ ಅಂದವಾಗಿದ್ದ ಸಾವಿತ್ರಿಯ ಮೇಲು ಬಿದ್ದಿತ್ತು. ಪುಟ್ಟಸ್ವಾಮಿ ಬೆಳಗ್ಗೆ ಅಂಗಡಿಗೆ ಹೋದರೆ ಸಂಜೆಯವರೆಗೆ ಬರುವುದಿಲ್ಲ ಎಂಬ ವಿಷಯ ಅವನಿಗೆ ಅತ್ಯಂತ ಅನುಕೂಲಕರವಾದ ಸಂದರ್ಭವಾಗಿತ್ತು. ಆ ಹೊತ್ತಿನಲ್ಲಿ ಏನಾದರೂ ನೆಪ ಹುಡುಕಿ ಅವನು ಸಾವಿತ್ರಿಯನ್ನು ನೋಡಲು ಬರುತ್ತಿದ್ದುದುಂಟು. ಅಲ್ಲಿಯೇ ಸಾಕಷ್ಟು ಹೊತ್ತು ಕಾಲಕಳೆಯುತ್ತಿದ್ದುದೂ ಉಂಟು. ಸದಾ ಅವನ ಕೈಯಲ್ಲಾಡುತ್ತಿದ್ದ ಹಣಕಾಸು, ಅವನ ನವೀನ ಉಡುಗೆ ತೊಡುಗೆಗಳು, ಅವನ ಹೊಗಳಿಕೆಯ ಮಾತುಗಳು ಸಾವಿತ್ರಿಯನ್ನು ಆಕರ್ಷಿಸಿದ್ದವು. ಕ್ರಮೇಣ ಅವಳನ್ನು ಅವನ ಮೋಹದ ಜಾಲದಲ್ಲಿ ಬಂಧಿಸಿದವು. ಅವರಿಬ್ಬರ ನಡುವೆ ಅಕ್ರಮ ಸಂಬಂಧವೂ ಉಂಟಾಯಿತು. ಅವರಿಗೆ ಅಡ್ಡಿಯಾಗಿದ್ದ ಪುಟ್ಟಸ್ವಾಮಿಯನ್ನು ನಿವಾರಿಸಿಕೊಂಡರೆ ಆಕೆಯನ್ನು ಪೂರ್ಣವಾಗಿ ತನ್ನವಳನ್ನಾಗಿ ಮಾಡಿಕೊಂಡು ಆಕೆಗೆ ಅಂಗೈಯಲ್ಲಿ ಆಕಾಶ ತೋರಿಸುವಂತಹ ಆಸೆ ಹುಟ್ಟಿಸಿದನು ಚಿನ್ನಸ್ವಾಮಿ. ಇದರಿಂದ ಉತ್ಸಾಹಿತಳಾಗಿ ಸಾವಿತ್ರಿಯೂ ಅವನೊಡನೆ ಈ ಕೆಲಸದಲ್ಲಿ ಸಹಕಾರ ನೀಡಲೊಪ್ಪಿದಳು. ಇಬ್ಬರೂ ಸಂಚುಹೂಡಿ ಊಟದಲ್ಲಿ ಪುಟ್ಟಸ್ವಾಮಿಗೆ ಮತ್ತು ಬರುವಂತಹ ಮದ್ದನ್ನು ಬೆರೆಸಿ ಆತನು ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಅವನನ್ನು ಉಸಿರು ಗಟ್ಟಿಸಿ ಕೊಂದರು. ಅವನ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಅವನ್ನು ಗೊಬ್ಬರದ ಚೀಲವೊಂದರಲ್ಲಿ ತುಂಬಿದರು. ರಾತ್ರಿಕಾಲದಲ್ಲಿ ಚಿನ್ನಸ್ವಾಮಿ ತಂದಿದ್ದ ಕಾರಿನಲ್ಲಿ ಸಾಗಿಸಿ ಬಡಾವಣೆಯ ಅಂಚಿನಲ್ಲಿದ್ದ ದೊಡ್ಡ ಮೋರಿಯೊಳಕ್ಕೆ ಸಾಕಷ್ಟು ದೂರದಲ್ಲಿ ಹಾಕಿ ಕೈ ತೊಳೆದುಕೊಂಡರು. ಸಾವಿತ್ರಿ ಹೇಳಿದಂತೆ ಅವನು ಬೆಳಗ್ಗೆ ಅಂಗಡಿಗೆ ಹೋದದ್ದು ಸುಳ್ಳು. ಆದರೆ ಮೋರಿಯಲ್ಲಿ ಸಾಕಷ್ಟು ನೀರಿನ ಹರಿವು ಇಲ್ಲದ್ದರಿಂದ ಮೂಟೆಯು ನಿಧಾನವಾಗಿ ಸಾಗುತ್ತ ಸಾಗುತ್ತ ಕೊನೆಯ ತಿರುವಿನಲ್ಲಿ ಕಲ್ವರ್ಟಿನ ಬಳಿಯಿದ್ದ ಮುಳ್ಳುಕಂಟಿಯೊಂದಕ್ಕೆ ಸಿಕ್ಕಿಕೊಂಡು ಮುಂದಕ್ಕೆ ಹೋಗಲಾರದೆ ಅಲ್ಲಿಯೇ ಇತ್ತು. ನಮ್ಮ ತನಿಖೆಯಿಂದ ಇದು ಪುಟ್ಟಸ್ವಾಮಿಯದೇ ದೇಹವೆಂದು ಖಚಿತವಾದಾಗ ಇದೊಂದು ಕೊಲೆಯೆಂದು ಖಾತರಿಯಾಯಿತು. ಅದರೆ ತಮ್ಮ ಮೇಲೆ ಯಾವುದೇ ಅನುಮಾನ ಬಾರದಂತಿರಲು ಸಾವಿತ್ರಿಯೇ ತನ್ನ ಗಂಡ ಕಳೆದುಹೋಗಿದ್ದಾನೆಂದು ದೂರನ್ನು ದಾಖಲಿಸಿದಳು. ಮೇಲಿಂದ ಮೇಲೆ ಸ್ಟೇಷನ್ನಿಗೆ ಎಡತಾಕುತ್ತಾ ಆತಂಕಗೊಂಡ ಹೆಂಡತಿಯಂತೆ ನಟಿಸುತ್ತಾ ಪೋಸು ಕೊಡುತ್ತಿದ್ದಳು. ಅದಕ್ಕೆ ತಕ್ಕಂತೆ ನಮ್ಮ ಇಲಾಖೆಯವರೂ ಸರಿಯಾದ ರೀತಿಯಲ್ಲಿ ತನಿಖೆ ಮಾಡದೆ ಇದ್ದರು. ನಾನು ಅಲ್ಲಿಗೆ ಬಂದಮೇಲೆ ನೀನು ದಾಖಲಿಸಿದ ಅರ್ಜಿಯ ಪರಿಣಾಮ ಕೋರ್ಟಿನಿಂದ ಆದೇಶ ಬಂದ ನಂತರ ನಾವು ಇಷ್ಟೆಲ್ಲ ವಿವರಗಳನ್ನು ಕಲೆಹಾಕಿ ಕೊಲೆಗಾರರವರೆಗೆ ಮುಟ್ಟಿದೆವು. ಈಗ ಸತೀಸಾವಿತ್ರಿ ಮತ್ತು ಚಿನ್ನಸ್ವಾಮಿಯಬ್ಬರನ್ನೂ ಬಂಧಿಸಿ ನಮ್ಮ ಪೋಲೀಸ್ ರೀತಿಯಲ್ಲಿ ಬಾಯಿ ಬಿಡಿಸಿದಾಗ ಸತ್ಯವೆಲ್ಲವು ಬಯಲಾಯಿತು. ಇಬ್ಬರೂ ತಾವೇ ಕೊಲೆ ಮಾಡಿದೆವೆಂದು ಒಪ್ಪಿಕೊಂಡರು.”
“ಹಾಗಾದರೆ ಅವರಿಬ್ಬರಿಗೂ ಶಿಕ್ಷೆಯಾಯಿತೇ?”
“ಗೆಳೆಯ, ನಿನಗೆ ಗೊತ್ತಿಲ್ಲದ್ದೇನಿದೆ. ನಾವು ಕೊಲೆಯ ಕೇಸನ್ನು ದಾಖಲಿಸಿ ಅಪರಾಧಿಗಳನ್ನು ಕೋರ್ಟಿಗೆ ಒಪ್ಪಿಸಿದೆವು. ಚಿನ್ನಸ್ವಾಮಿ ಸಾಕಷ್ಟು ಹಣವಂತ. ದೊಡ್ಡ ಕ್ರಿಮಿನಲ್ ವಕೀಲರನ್ನಿಟ್ಟು ತನ್ನ ಪರವಾಗಿ ಕೇಸು ನಡೆಸಿದ. ಅಪರಾಧಿಗಳಿಬ್ಬರೂ ಕೆಲವೇ ದಿನಗಳೊಳಗೆ ಬೇಲ್ ಪಡೆದು ಹೊರಕ್ಕೆ ಬಂದರು. ಕೇಸು ಎರಡು ವರ್ಷ ಮುಂದುವರೆಯಿತು. ಅವನ ವಕೀಲರು ದೊರಕಿದ್ದ ಮೂಳೆಗಳು, ಅವಶೇಷಗಳು ಪುಟ್ಟಸ್ವಾಮಿಯದ್ದೇ ಎಂಬುದಕ್ಕೆ ಬಲವಾದ ಸಾಕ್ಷ್ಯಾಧಾರಗಳೇ ಇಲ್ಲವೆಂದು ವಾದಿಸಿದರು. ಅಂತಿಮವಾಗಿ ಕೇಸನ್ನು ಗೆದ್ದೂಬಿಟ್ಟರು. ಅಪರಾಧಿಗಳಿಬ್ಬರೂ ಸ್ವಚ್ಛಂದ ಹಕ್ಕಿಗಳಾಗಿ ತಮ್ಮ ಸಂಬಂಧವನ್ನು ಮುಂದುವರೆಸಿದ್ದಾರೆ. ಹೈರಾಣಾದವರು ಪೋಲೀಸರು ನಾವು ಮಾತ್ರ”
“ನನಗೂ ಆಕೆಯನ್ನು ಮೊಟ್ಟಮೊದಲ ಬಾರಿ ನೋಡಿದಾಗಲೇ ಗಂಡನನ್ನು ಕಳೆದುಕೊಂಡ ಮಹಿಳೆಯ ದುಃಖ ದುಮ್ಮಾನಗಳ್ಯಾವೂ ಇಲ್ಲದೆ ಟಿಪ್‌ಟಾಪಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಳು. ಅನುಮಾನ ಬಂತು. ಈಗ ಸಂದೇಹ ಪರಿಹಾರವಾಯಿತು. ಪುರಾಣ ಕಾಲದಲ್ಲಿ ಸತೀ ಸಾವಿತ್ರಿಯು ತನ್ನ ಗಂಡನ ಪ್ರಾಣವನ್ನು ಹಿಂದಕ್ಕೆ ಪಡೆಯಲು ಯಮಧರ್ಮರಾಜನೊಡನೆ ವಾದಮಾಡಿ ಜಯಶಾಲಿಯಾಗಿದ್ದಳು. ಇಂದಿನ ಕಾಲದಲ್ಲಿ ಈ ಸಾವಿತ್ರಿಯೂ ತನ್ನ ಗಂಡನನ್ನು ಹುಡುಕಿಸುವ ನಾಟಕವನ್ನು ಸಮರ್ಥವಾಗಿ ಅಭಿನಯಿಸಿ ನಮ್ಮ ದಾರಿ ತಪ್ಪಿಸಿದಳು.” ಎಂದರು ಸದಾನಂದ ವಕೀಲರು. “ಮಾತಿನ ಭರದಲ್ಲಿ ಸಮಯವನ್ನು ಗಮನಿಸಲೇ ಇಲ್ಲ. ಹೊತ್ತಾಯಿತು ನಡಿ ಊಟ ಮಾಡೋಣ” ಎಂದು ಗೆಳೆಯನನ್ನು ಎಬ್ಬಿಸಿಕೊಂಡು ಒಳಕ್ಕೆ ಹೊರಟರು.
-ಬಿ.ಆರ್.ನಾಗರತ್ನ, ಮೈಸೂರು
ಒಳ್ಳೆ ಪತ್ತೆದಾರಿ…..
ಧನ್ಯವಾದಗಳು ಸುಧಾ ಮೇಡಂ
ಕಾಮಾತುರಾಣಾಂ ನಃ ಭಯ, ನಃ ಲಜ್ಜಾ ಎನ್ನುವುದಕ್ಕೆ ಸರಿಯಾದ ಉದಾಹರಣೆಯಾದ ಕಥೆ, ಓದಿ ಮುಗಿಸಿದಾಗ ವಿಷಾದವೆನಿಸಿತು.
ಧನ್ಯವಾದಗಳು ಪದ್ಮಾ ಮೇಡಂ
ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ
ಧನ್ಯವಾದಗಳು.
ಪತ್ತೇದಾರಿ ಕತೆ ಸುಲಲಿತವಾಗಿ ಓದಿಸಿಕೊಂಡು ಹೋಯಿತು ಮೇಡಂ, ಚೆನ್ನಾಗಿದೆ.
ಬಹುಶಃ ನೀವು ಕೇಳಿದ್ದನ್ನು ಅಥವಾ ಪತ್ರಿಕೆಯ ವರದಿಯೊಂದನ್ನು ಹೀಗೆ
ಕಲಾತ್ಮಕವಾಗಿ ನೇಯ್ದು ಕೊಟ್ಟಿದ್ದೀರಿ ಎಂದು ಊಹಿಸಿದೆ. ಇರಲಿ. ಮೂಲ ಕೆದಕಬಾರದು.
ದುಷ್ಟತನಕ್ಕೆ ಲಿಂಗಭೇದವಿಲ್ಲ ಎಂಬುದನು
ಈ ಕತೆ ಮತ್ತೊಮ್ಮೆ ಸಾಬೀತಿಸಿದೆ. ಜಗತ್ತಿನ ಬಹು ದೊಡ್ಡ ಕೊರತೆಯೆಂದರೆ
ಹಣವಲ್ಲ; ಸೌಂದರ್ಯವೂ ಅಲ್ಲ. ಕಾರುಣ್ಯವೆಂಬ ಗುಣ. ಸಂಬಂಧವನ್ನು ಗೌರವಿಸುವ
ಸದ್ಗುಣ. ಎಲ್ಲವೂ ವಾಣಿಜ್ಯಕವಾಗಿರುವ ಇಂಥ ಹೊತ್ತಲಿ ಇದು ಇನ್ನೂ ಅಪರೂಪವಾಗುತಿದೆ.
ಧನ್ಯವಾದಗಳು ಮಂಜು ಸಾರ್
ಕುತೂಹಲಕಾರಿ ಕತೆ..ಚೆನ್ನಾಗಿದೆ.
ಧನ್ಯವಾದಗಳು ಗೆಳತಿ ಹೇಮಾ
ಬಹಳ ಚೆನ್ನಾಗಿದೆ ಕಥೆ
ಪ್ರಕೃತ ಸಮಾಜದಲ್ಲಿ ಕಾಣುತ್ತಿರುವ, ಕೇಳುತ್ತಿರುವ ಈ ಅಪರಾಧೀ ಕೃತ್ಯಗಳು ಹಣದ ಬಲದಿಂದ ಹೇಗೆ ಮುಚ್ಚಿಹೋಗುತ್ತವೆ ಎಂಬುದನ್ನು ಅತ್ಯಂತ ನಾಜೂಕಿನಿಂದ ಹೆಣೆದ ಕಥೆಯಲ್ಲಿ ಮನಮುಟ್ಟುವಂತೆ ತಿಳಿಸಿರುವಿರಿ…ಧನ್ಯವಾದಗಳು ನಾಗರತ್ನ ಮೇಡಂ.