ಪ್ರೀತಿಯನ್ನು ಸದಾ ಹಚ್ಚಹಸಿರಾಗಿಸುವ ಪ್ರೇಮಿಗಳ ದಿನಾಚರಣೆ

Share Button

ಪ್ರೇಮಿಗಳ ದಿನವನ್ನು ವಿರೋಧಿಸಿಯೇ ಅದನ್ನು ಇಷ್ಟೊಂದು ಜನಪ್ರಿಯಗೊಳಿಸಿರುವುದು ಒಂದು ರೀತಿ ಹಾಸ್ಯಾಸ್ಪದವೆನಿಸಿದರೂ ಇದು ನಂಬಲೇ ಬೇಕಾದ ಕಟು ಸತ್ಯ. ಯಾವುದೇ ವಿಷಯವನ್ನಾದರೂ ಅತೀ ಹೆಚ್ಚಾಗಿ ಪ್ರಚಾರ ನೀಡುತ್ತಾ ಬಂದರೆ ಅದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಪ್ರೇಮಿಗಳ ದಿನಾಚರಣೆ ವರ್ಷದಿಂದ ವರ್ಷಕ್ಕೆ ತನ್ನದೇ ಆದ ರೀತಿಯಲ್ಲಿ ಮಹತ್ವ ಪಡೆದುಕೊಳ್ಳುತ್ತಿರುವುದೇ ಸಾಕ್ಷಿ. ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಫೆ. 14 ಸೂಕ್ತ ಎಂದೇ ಭಾವಿಸಿದ್ದಾರೆ. ಪ್ರೇಮ ಸಾಫಲ್ಯ ಅಥವಾ ವೈಫಲ್ಯ ಪಡೆಯುವ ಈ ದಿನ ಒಂದು ರೀತಿ ಮಹತ್ವವವನ್ನು ಪಡೆದುಕೊಂಡಿದೆ. ಹೆಣ್ಣು ಗಂಡು ಈ ದಿನಕ್ಕಾಗಿ ಒಂದು ವರ್ಷ ಕಾಯುತ್ತಾರೇನೋ ಎಂದೆನಿಸುತ್ತದೆ. ಈ ಫೆ. 14 ರ ಹಿಂದೆ ಒಂದು ಸಣ್ಣ ಘಟನೆ ಮಹತ್ವ ಪಡೆದುಕೊಂಡಿದೆ.

ಹಿಂದೆ ರೋಮ್ ನಲ್ಲಿ ಕ್ಲಾಡಿಯಸ್ ಎಂಬ ರಾಜನು ತನ್ನ ಪ್ರಜೆಗಳನ್ನು ಯುದ್ದಕ್ಕೆ ಸೇರುವಂತೆ ಪೀಡಿಸುತ್ತಿದ್ದನಂತೆ ಆದರೆ ಇವನ ಈ ಹುಚ್ಚಿನಿಂದ ಬೇಸತ್ತ ಜನ ತಲೆಮರೆಸಿಕೊಳ್ಳುತ್ತಿದ್ದರಂತೆ. ಇದರಿಂದ ಕೋಪಗೊಂಡ ರಾಜ ಅವರುಗಳು ಮದುವೆಯಾಗದಂತೆ ತಡೆಯೊಡ್ಡಿದ್ದನು. ಅದೇ ಸಂದರ್ಭದಲ್ಲಿ ವಾಲೆಂಟೈನ್ ಎಂಬುವನೊಬ್ಬನು ಈ ಪ್ರೇಮಿಗಳನ್ನು ಒಂದುಗೂಡಿಸಲು ಗುಪ್ತ ಮದುವೆಗಳನ್ನು ಮಾಡಿಸುತ್ತಿದ್ದ. ಇದನ್ನು ತಿಳಿದ ರಾಜನು ಆ ವಾಲೆಂಟೈನ್‌ನನ್ನು ಆಜೀವ ಪರ್ಯಂತ ಸೆರೆಯಲ್ಲಿಟ್ಟನು. ಆಗ ಅವನ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋದವಳು ಅಲ್ಲಿಯ ಕಾವಲುಗಾರನ ಮಗಳು, ಅವಳು ದಿನಾ ಬಂದು ಇವನನ್ನ ಭೇಟಿಯಾಗುತ್ತಿದ್ದಳು.

ಫೆಬ್ರವರಿ 14 ರಂದು ಅವನು ಕೊನೆಯುಸಿರೆಳೆದನು, ಸಾಯುವ ಮುನ್ನ ಅವಳಿಗೆ ಒಂದು ಪ್ರೇಮ ಪತ್ರವನ್ನು ಬರೆದು ಅದರ ಕೊನೆಯಲ್ಲಿ Love from your Valentine ಅಂತ ಬರೆದಿದ್ದನಂತೆ. ಅದರಂತೆ ಜನ ಆ ದಿನವನ್ನ ವಾಲೆಂಟೈನ್ ಡೇ ಅಥವಾ ಪ್ರೇಮಿಗಳ ದಿನಾಚರಣೆ ಎಂದು ಆಚರಣೆಗೆ ತಂದರು ಅನ್ನೋದು ಕಥೆ. ರೋಮ ದೇಶದ ವ್ಯಾಲೆಂಟೈನ್ ಎಂಬ ಸಂತನಿಂದ ಆರಂಭವಾದದ್ದು ಈ ವ್ಯಾಲೈಂಟೈನ್ ಡೇ . ಈತ ರೋಮ್ ದೇಶದಲ್ಲಿ ಪಾದ್ರಿಯಾಗಿದ್ದ. ಒಂದು ಕಥೆಯ ಪ್ರಕಾರ ಅಲ್ಲಿಯ ಯುದ್ದ ಕೈದಿಗಳಿಗೆ ಪ್ರೇಮ ವಿವಾಹ ಮಾಡಿಸಿದ ಕೃತ್ಯಕ್ಕಾಗಿ ರೋಮನ್ ಸಾಮ್ರಾಜ್ಯ ಆತನಿಗೆ ಮರಣದಂಡನೆ ವಿಧಿಸುತ್ತದೆ. ಈತ ಸೆರೆಮನೆಯಲ್ಲಿದ್ದಾಗ ಅಲ್ಲಿಯ ಜೈಲರ್ ನ ಮಗಳನ್ನೇ ಪ್ರೀತಿಸುತ್ತಾನೆ . ತಾನು ಸಾಯುವ ಹಿಂದಿನ ದಿನ ಆತ ತನ್ನ ಪ್ರೇಮಿಗೆ ಒಂದು ಪತ್ರ ಬರೆಯುತ್ತಾನೆ. ” ನಿನ್ನ ಪ್ರೀತಿಯ ವ್ಯಾಲೆಂಟೈನ್‌ನಿಂದ ” ಎಂದು ಶುರುವಾಗುವ ಈ ಪ್ರೇಮ ಪತ್ರ ತನ್ನ ಪ್ರೇಮ ನಿವೇದನೆಯಿಂದ ಪ್ರಖ್ಯಾತವಾಗುತ್ತದೆ. ಆತ ಕೂಡ ಅಮರ ಪ್ರೇಮಿಯಾಗುತ್ತಾನೆ. ಪ್ರೇಮಿಗಳ ದಿನಕ್ಕೆ ಮುನ್ನುಡಿ ಬರೆಯುತ್ತಾನೆ. ಅಂದು ಆತನ ಮರಣ ಸಾಧಾರಣವೆನಿಸಿದರೂ ಇಂದು ಅದೊಂದು ರೀತಿಯ ಹೆಮ್ಮರವಾಗಿ ಬೆಳೆದು ಪ್ರೇಮಿಗಳ ಪಾಲಿನ ಮಹತ್ವದ ದಿನವಾಗಿ ಪರಿಣಮಿಸಿದೆ. ಆತ ಮರಣ ದಂಡನೆಗೆ ಗುರಿಯಾದ ದಿನವನ್ನು (ಫೆಬ್ರುವರಿ 14 ) ವ್ಯಾಲೆಂಟೈನ್ ಡೇ ಅಥವಾ ಪ್ರೇಮಿಗಳ ದಿನ ಎಂದು ಜಗತ್ತಿನಾದ್ಯಂತ ಆಚರಿಸುವ ಪರಿಪಾಠ ಆರಂಭವಾಗಿದ್ದು 15 ನೇ ಶತಮಾನದಿಂದ. ಅಲ್ಲಿಂದ ಆ ದಿನದಂದು ಜಗತ್ತಿನಾದ್ಯಂತ ಯುವಕ ಯುವತಿಯರು ತಮ್ಮ ಪ್ರೇಮಿಗಳಿಗೆ ಪ್ರೇಮ ನಿವೇದನೆ ಮಾಡುವುದು, ಪರಸ್ಪರರಿಗೆ ಹೂಗುಚ್ಚ ಮತ್ತು ಇತರ ಕಾಣಿಕೆಗಳನ್ನು ನೀಡುವ ಮತ್ತು ಶುಭಾಶಯ ಪತ್ರಗಳನ್ನು (ಗ್ರೀಟಿಂಗ್ ಕಾರ್ಡ್ಸ ) ಕಳಿಸುವ ಪರಿಪಾಠ ಪ್ರಾರಂಭವಾಯಿತು. ಭಾರತಕ್ಕೆ ಈ ವ್ಯಾಲೆಂಟೈನ್ ಡೇ ಕಾಲಿರಿಸಿದ್ದು ತೀರ ಇತ್ತೀಚೆಗೆ 21ನೇ ಶತಮಾನದಲ್ಲಿ. ಮೊದಲು ಕ್ರೈಸ್ತ ಧರ್ಮೀಯರು ಪ್ರಾರಂಭಿಸಿದ ಈ ಆಚರಣೆಯಿಂದ ಆಕರ್ಷಿತರಾದ ಎಲ್ಲ ಧರ್ಮದ ಯುವಕ ಯುವತಿಯರು ಮುಂದೆ ಇದನ್ನು ಪ್ರೇಮಿಗಳ ದಿನವನ್ನಾಗಿ ಮಾಡಿ ಆಚರಿಸಲು ಶುರುಮಾಡಿದರು. ಜಾತಿ, ಧರ್ಮಗಳನ್ನೂ ಮೀರಿ ನಿಂತಿರುವ ಈ ದಿನ ಪ್ರೇಮಿಗಳ ಪಾಲಿಗಂತೂ ಮಹತ್ವವನ್ನು ಪಡೆದುಕೊಂಡಿದೆ.

ಇಂದಿನ ದಿನಗಳಲ್ಲಿ ಇದೊಂದು ಗೀಳಾಗಿ ಬಿಟ್ಟಿದೆ. ಕಂಡ ಕಂಡ ಹುಡುಗರು ತಾವು ಪ್ರೀತಿಸ ಬಯಸುವ ಹುಡುಗಿಯರನ್ನು ಹಿಂಬಾಲಿಸಿ ಅವರಿಗೆ ಗುಲಾಬಿ ಹೂ ಕೊಟ್ಟು ತಮ್ಮ ಪ್ರೇಮ ನಿವೇದನೆ ಮಾಡಲು ಶುರುಮಾಡಿದರು. ಆದರೆ ಇದು ನಿಜವಾದ ಪ್ರೀತೀನ ಅಥವಾ ತಾನೂ ಇಷ್ಟು ಹೂ ಕೊಟ್ಟೆ ಎಂದು ಗೆಳೆಯರ ಮುಂದೆ ಜಂಭ ಕೊಚ್ಚಿಕೊಳ್ಳುವುದಕ್ಕಾ ಎಂಬುದೇ ನಿಗೂಢವಾಗಿದೆ. ಹುಡುಗಿಯರೂ ಅಷ್ಟೇ ಇಂತಿಷ್ಟು ಹೂ ತನಗೆ ಸಿಕ್ಕಿದರೆ ಏನೋ ವಿಶೇಷವಾದದ್ದನ್ನು ಸಾಧಿಸಿದಂತೆ ಬೀಗುವುದೂ ಮುಂದುವರೆದಿದೆ. ಇದರಿಂದಾಗಿ. ಈ ಜಂಜಡಕ್ಕೆ ಸಿಗಲಿಚ್ಚಿಸದ ಹುಡುಗಿಯರು ಅಂದಿನ ದಿನ ಕಾಲೇಜುಗಳಿಗೆ ಚಕ್ಕರ್ ಹಾಕಿದರೆ , ಪಾಲಕರು ಆ ದಿನ ತಮ್ಮ ಹೆಣ್ಣು ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸಲು ಹಿಂಜರಿಯುವಂತಾಗಿರುವುದು ವಿಪರ್ಯಾಸ. ಎರಡೂ ಕೈ ಸೇರಿದರೆ ಚಪ್ಪಾಳೆ ಎಂಬಂತೆ ಇಬ್ಬರೂ ತಮ್ಮ ಪ್ರೇಮವನ್ನು ಒಬ್ಬರಿಗೊಬ್ಬರೂ ಹೇಳಿಕೊಳ್ಳುವುದು ಬೇರೆ. ಆದರೆ ಇಲ್ಲಿ ಇದೊಂದು ರೀತಿಯ ಆಟವಾಗಿ, ಹಠವಾಗಿ ಮಾರ್ಪಟ್ಟು ಪ್ರೇಮದ ಅರ್ಥವನ್ನೇ ಬುಡಮೇಲು ಮಾಡಿದ್ದೂ ಇದೆ. ಬದುಕಿಗೊಂದು ತಿರುವನ್ನು ಕೊಡುವ ಈ ಪ್ರೇಮಿಗಳ ದಿನ ಒಮ್ಮೆಮ್ಮೆ ಕರಾಳ ದಿನವಾಗಿಯೂ ಮಾರ್ಪಟ್ಟಿರುವುದೂ ಕೆಲವೊಂದು ಪ್ರಸಂಗಗಳಲ್ಲಿ ಕಂಡುಬರುತ್ತದೆ.

ಪ್ರೇಮ ಎಂಬುದು ಹೃದಯಾಂತರಾಳದಿಂದ ಒಡಮೂಡಬೇಕಾದ ಸುಂದರ ಸಂವೇದನೆ. ಇದನ್ನು ಈ ರೀತಿ ಬಹಿರಂಗವಾಗಿ ಪ್ರತಿಷ್ಠೆಯ ಕಣವಾಗಿ ರೂಪಿಸುತ್ತಿರುವುದು ನಿಜಕ್ಕೂ ಅಸಹ್ಯ ತರಿಸುತ್ತದೆ. ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಎರಡೂ ಹೃದಯಗಳೂ ಸ್ಪಂದಿಸಬೇಕು. ಬಲವಂತದಿಂದ ಅಥವಾ ಬೇರೆಯವರ ಮುಂದೆ ತನ್ನ ಪ್ರತಾಪವನ್ನು ತೋರಿಸಲು ಅಸ್ತ್ರವನ್ನಾಗಿ ಬಳಸಿಕೊಂಡರೆ ಪ್ರೇಮಿಗಳ ದಿನ ಎಂಬುದೇ ಅರ್ಥಹೀನವಾಗುತ್ತದೆ. ಈ ದಿನದಂದು ಜಗತ್ತಿನಾದ್ಯಂತ ಪ್ರೇಮಿಗಳು ತಮ್ಮ ಪ್ರೇಮಿಗಳಿಗೆ ಪ್ರೇಮನಿವೇದನೆ ಮಾಡುತ್ತಾರೆ. ಅಂದರೆ ಇದು ತಾವು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೇವೆ ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಪುಳಕಿತವಾಗುವ ಸಮಯ. ಆದರೆ ನಂತರ ಇದು ಅಡ್ದ ದಾರಿ ಹಿಡಿದು ಈ ದಿನದಂದು ಹೊಸ ಹುಡುಗರ ತಮ್ಮ ಮೊದಲ ಪ್ರೇಮ ನಿವೇದನೆಯ ಪರಿಪಾಠ ಶುರುವಾಗಿ ಅಲ್ಲಿಂದ ಇದು ಅಪಕೀರ್ತಿಗೆ , ಮಡಿವಂತರ ಟೀಕೆಗೆ ಮತ್ತು ಹಿರಿಯರ ಸಿಟ್ಟಿಗೆ ಗುರಿಯಾಯಿತು. ಒಮ್ಮೊಮ್ಮೆ ಇದೊಂದು ರೀತಿ ವಿಪರೀತಕ್ಕಿಟ್ಟುಕೊಂಡಿದ್ದೂ ಇದೆ. ಪ್ರೇಮ ನಿವೇದನೆ ಒಬ್ಬರಿಗೆ ಇಷ್ಟವಿದೆಯೋ ಇಲ್ಲವೋ ಮತ್ತೊಬ್ಬರ ಬಲವಂತದಿಂದ ಎಷ್ಟೋ ಪ್ರೇಮಿಗಳು ತಮ್ಮ ಜೀವವನ್ನೇ ಬಲಿ ನೀಡಿದ ಪ್ರಸಂಗಗಳೂ ಇಲ್ಲದಿಲ್ಲ. ಪ್ರೇಮ ಒಂದಿದ್ದರೆ ಸಾಕು ಇಡೀ ಜಗತ್ತನ್ನೇ ಗೆಲ್ಲ ಬಲ್ಲೆನೆಂಬ ಹುಚ್ಚು ಆವೇಶದಲ್ಲಿ ತಮ್ಮ ಜೀವನವನ್ನೇ ಪ್ರಶ್ನಾತೀತವನ್ನಾಗಿ ಮಾಡಿಕೊಂಡಿರುವ ನಿದರ್ಶನಗಳೂ ಇದೆ.

ಕೇವಲ ವಯೋ ಸಹಜವಾದ ಆಕರ್ಷಣೆಯನ್ನೇ ಪ್ರೇಮ ಎಂದು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಅಥವಾ ಇದು ತಮಗೆ ಸಿಕ್ಕಿರುವ ಹಕ್ಕೆಂದು ತಿಳಿದು ಬಹಳ ಮುಂದುವರೆದರೆ ಹಗಲು ಕಂಡ ಭಾವಿಗೆ ಇರುಳು ಬಿದ್ದಂತಾಗುವುದರಲ್ಲಿ ಸಂಶಯವಿಲ್ಲ. ಪ್ರೀತಿ ಪ್ರೇಮದ ಹುಚ್ಚು ಹೊಳೆಯಲ್ಲಿ ಕೇವಲ ಈಜದೆ ಅದರ ದಡ ಸೇರಿ ಸುಖೀ ಜೀವನಕ್ಕೆ ನಾಂದಿ ಹಾಡಿದರೆ ಈ ಪ್ರೇಮಿಗಳ ದಿನಾಚರಣೆಯ ಆಚರಣೆಗೊಂದು ಮಹತ್ವ ದೊರೆತಂತಾಗುತ್ತದೆ. ಆದರೆ ಇದು ಕೇವಲ ಒಂದೆರಡು ದಿನಗಳ ಶೋಕಿಯಾದರೆ ಬದುಕು ಬರುಡಾಗಿ ಜೀವನ ಪರ್ಯಂತ ಗೊತ್ತುಗುರಿಯಿಲ್ಲದ ಜೀವನದ ವಾರಸುದಾರರಾಗಿ, ಸೂತ್ರ ಹರಿದ ಗಾಳಿಪಟದಂತೆ ಬದುಕಿನ ಆಸರೆಯಿಂದ ವಂಚಿತರಾಗಿ ಬದುಕಿನುದ್ದಕ್ಕೂ ನೀರಸ ಮೌನಕ್ಕೆ ಶರಣಾಗಬೇಕಾಗುತ್ತದೆ. ಆದ್ದರಿಂದ ಪ್ರೀತಿಸುವ ಮುನ್ನ ಒಂದಕ್ಕೆ ನೂರು ಸಲ ಯೋಚಿಸಿ ತೀರ್ಮಾನ ಕೈಗೊಂಡರೆ ಬದುಕಿಗೊಂದು ಅರ್ಥ ಸಿಗುತ್ತದೆ.

ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿತು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚೆಚ್ಚು ಮಹತ್ವ ಸಿಗಲು ಪ್ರಾರಂಭವಾಯಿತು. ಇದು ಒಂದು ರೀತಿ ಪುಕ್ಕಟೆ ಪ್ರಚಾರ. ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾವ ರೀತಿಯ ಉಡುಗೊರೆಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಹೆಚ್ಚಾಗಿ ಚರ್ಚೆ ಆಯಿತು. ಇದರಿಂದ ಇಂದು ಹಳ್ಳಿಹಳ್ಳಿಗಳಲ್ಲಿ ಪ್ರೇಮಿಗಳ ದಿನಾಚರಣೆ ಜನಪ್ರಿಯವಾಗುತ್ತಿದೆ. ಅದರಲ್ಲಿಯೂ ಸೋಷಿಯಲ್ ಮಾಧ್ಯಮದಲ್ಲಿಯಂತು ಈ ದಿನಾಚರಣೆಯ ಪ್ರಚಾರ ತುಂಬಾ ಹೆಚ್ಚಾಗಿಯೇ ಆಗುತ್ತಿದೆ. ಪ್ರೇಮಿಗಳ ದಿನಾಚರಣೆಯನ್ನು ಮಾಡಲು ಬಿಡುವುದಿಲ್ಲ ಎಂದು ಕೆಲ ಗುಂಪು ಈಗಾಗಲೇ ಮಾಧ್ಯಮದ ಮೂಲಕ ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಗುಂಪುಗಳು ಆಚರಣೆಯನ್ನು ಅರ್ಥಪೂರ್ಣ ಗೊಳಿಸಲು ತಮ್ಮದೇ ಆದ ತಯಾರಿ ಮಾಡಿ ಕೊಳ್ಳುತ್ತಿದೆ. ಒಟ್ಟಾರೆ ಈ ದಿನಾಚರಣೆ ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ತಮ್ಮ ಪ್ರೇಮಿಗಳನ್ನು ಪಡೆಯುವ ಭರದಲ್ಲಿ ಹಿರಿಯರ ವಿರೋಧವನ್ನೂ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯೂ ಇಲ್ಲದಿಲ್ಲ. ಯಾವ ಪೋಷಕರೂ ತಮ್ಮ ಅಪ್ಪಣೆಯನ್ನು ನೀಡಲು ಸಮ್ಮತಿಸುವುದಿಲ್ಲ. ಇದು ಗೊತ್ತಿದ್ದೂ ಸಹ ತಮ್ಮ ಪ್ರೇಮಕ್ಕಾಗಿ ಹೆತ್ತವರನ್ನೂ ತ್ಯಜಿಸುವ ನಿರ್ಧಾರ ಕೈಗೊಳ್ಳುವ ಪ್ರೇಮಿಗಳು ಮುಂದಿನ ದಿನಗಳ ಬಗ್ಗೆ ಆಲೋಚಿಸಿ ತೀರ್ಮಾನ ಕೈಗೊಂಡರೆ ಒಳಿತು. ಮದುವೆಗೆ ಮುಂಚೆ ಪ್ರೀತಿಸಿದರೆ ಮಾತ್ರ ಜೀವನ ಸುಂದರವಾಗಿರುತ್ತದೆಂಬ ಅರ್ಥಹೀನ ತರ್ಕದಿಂದಾಗಿ ಇಂದು ಭಗ್ನಪ್ರೇಮಿಗಳಾಗಿರುವವರಿಗೇನೂ ಕಡಿಮೆಯಿಲ್ಲ. ಪ್ರೀತಿ ಪ್ರೇಮ ಎಂಬುದು ಹೊಸದಾಗಿ ಪ್ರೀತಿಸುವವರಿಗಷ್ಟೇ ಸೀಮಿತವಲ್ಲ. ಅದು ಪರಸ್ಪರ ಪ್ರೀತಿಯ ಸವಿಯನ್ನುಂಡ ಸತಿಪತಿಗಳಿಗೂ ಕೂಡ ಅನ್ವಯಿಸುತ್ತದೆ.

ಮದುವೆಯಾಗಿ ಎಷ್ಟೇ ವರ್ಷಗಳಾದರೂ ಆ ಪ್ರೀತಿಯನ್ನು ಹಚ್ಚಹಸಿರಾಗಿಸಿಕೊಂಡಿರುವ ಸುಖೀ ದಾಂಪತ್ಯದ ಎಲ್ಲ ದಂಪತಿಗಳಿಗೂ ಪ್ರೇಮಿಗಳ ದಿನ ಮಹತ್ವವಾದದ್ದೇ ಆಗಿದೆ. ಮದುವೆಗೆ ಮುನ್ನ ಪ್ರೀತಿಸುವುದೇ ಬೇರೆ. ಮದುವೆಯ ನಂತರ ಪ್ರೇಮವನ್ನು ತಮ್ಮ ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಅರ್ಪಿಸಿಕೊಂಡು ಬದುಕಿಗೊಂದು ಸಾರ್ಥಕ್ಯವನ್ನು ಕಂಡುಕೊಳ್ಳುವುದೇ ಬೇರೆ. ಪ್ರೇಮಿಸುವುದಕ್ಕೆ ಯಾವುದೇ ವಯಸ್ಸಿನ ಅಡೆತಡೆಗಳಿಲ್ಲ. ಜೀವನವನ್ನು ರಸಮಯವನ್ನಾಗಿಸಲು ಪ್ರೇಮ ಒಂದು ಸೇತುಬಂಧನಶಿಲ್ಪಿಯಾಗಿದ್ದಾಗ ಜೀವನ ಮತ್ತಷ್ಟು ರಸಮಯವಾಗಿ ಪರಿಣಮಿಸುವುದರಲ್ಲಿ ಸಂದೇಹವೇ ಇಲ್ಲ.

ಮ.ನ.ಲತಾಮೋಹನ್ , ಮೈಸೂರು

6 Responses

  1. ಪ್ರೇಮಿಗಳ ದಿನಾಚರಣೆ ನೆಡೆದು ಬಂದ ಹಾದಿ..ನೈಜ ಪ್ರೇಮದ ರೂಪರೇಖೆಗಳನ್ನು ಲೇಖನ ದ ಮೂಲಕ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಗೆಳತಿ ಲತಾ..

  2. Hema Mala says:

    ಮಾಹಿತಿಪೂರ್ಣ ಬರಹ. ಚೆನ್ನಾಗಿದೆ

  3. ವೆಂಕಟಾಚಲ says:

    ಪ್ರೇಮಿಗಳ ದಿನದ ಇತಿಹಾಸ…
    ಸೊಗಸಾಗಿದೆ… ಲೇಖನ

  4. ನಯನ ಬಜಕೂಡ್ಲು says:

    ಚೆನ್ನಾಗಿದೆ ಲೇಖನ. ವಾಸ್ತವವನ್ನು ಹೇಳಿದ್ದೀರಿ. ಯಾವುದೇ ವಿಚಾರ ಇರಲಿ ವಿರೋಧಿಸಿದಷ್ಟು ಪ್ರಚಾರ ಪಡೆಯುವುದು ಹೆಚ್ಚು.

  5. ಶಂಕರಿ ಶರ್ಮ says:

    ಸಕಾಲಿಕ ಬರೆಹ ಸಖತ್ತಾಗಿದೆ. ಪ್ರೇಮಿಗಳ ದಿನ ನಡೆದು ಬಂದ ದಾರಿ, ವಿರೋಧಗಳ ನಡುವೆಯೂ ಹೆಚ್ಚುತ್ತಿರುವ ಅದರ ಪ್ರಸಿದ್ಧಿ ಎಲ್ಲವೂ ತಾರ್ಕಿಕವಾಗಿ ಮೂಡಿಬಂದಿದೆ.

  6. ಪದ್ಮಾ ಆನಂದ್ says:

    ಪ್ರೇಮಿಗಳ ದಿನದ ಕುರಿತಾದ ಬರಹ ಹಲವಾರು ಆಯಾಮಗಳಲ್ಲಿ ಸಾಧಕ ಬಾಧಕಗಳ ಕುರಿತಾಗಿ ವಿವರಣೆ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: