ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 16
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 5: ‘ಡ ನಾಂಗ್’ ನ ನೆಲದಲ್ಲಿ…. 19/09/2024
19/09/2024 ರಂದು ಡನಾಂಗ್ ನಲ್ಲಿ ಬೆಳಗಾಯಿತು. ನಮಗೆ ಕೊಡಲಾಗಿದ್ದ ರೂಮ್ ಚೆನ್ನಾಗಿತ್ತು. ಬಾಲ್ಕನಿಯಿಂದ ಕಾಣಿಸುವ ಸಮುದ್ರ, ಅಕ್ಕಪಕ್ಕದಲ್ಲಿ ಗಗನಚುಂಬಿ ಕಟ್ಟಡಗಳಿದ್ದುವು. ನಮ್ಮನ್ನು ಆದಿನ ‘ಬಾ ನಾ ಹಿಲ್ಸ್’ ಎಂಬ ಪ್ರವಾಸಿತಾಣಕ್ಕೆ ಕರೆದೊಯ್ಯಲು ಮಾರ್ಗದರ್ಶಿ 0900 ಗಂಟೆಗೆ ಬರುತ್ತೇನೆಂದು ಸಂದೇಶ ಕಳುಹಿಸಿದ್ದರು. ಸ್ನಾನಾದಿ ಪೂರೈಸಿ, ರೆಸ್ಟಾರೆಂಟ್ ನಲ್ಲಿ ಉಪಾಹಾರ ಮುಗಿಸಿ ಮಾರ್ಗದರ್ಶಿಗಾಗಿ ಕಾಯುತ್ತಿದ್ದೆವು. ಸಮಯಕ್ಕೆ ಸರಿಯಾಗಿ ‘ಟೋಮಿ’ ಎಂಬ ಎಳೆಯ ಯುವಕ ಬಂದ.
ಅವನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಾ ಹರಟಲಾರಂಭಿಸಿದೆವು. ಈಗಾಗಲೇ ನಾವು ಗಮನಿಸಿದ್ದಂತೆ, ಇಲ್ಲಿ ಇಂಗ್ಲಿಷ್ ಬಲ್ಲ ಎಳೆಯ ಯುವಕರಿಗೆ ಪ್ರವಾಸೋದ್ಯಮ ವಲಯದಲ್ಲಿ ಉತ್ತಮ ಬೇಡಿಕೆ ಇದೆ. ಸರಕಾರಿ ಉದ್ಯೊಗಕ್ಕೆ ಹಲವಾರು ನಿಬಂಧನೆಗಳಿವೆ ಹಾಗೂ ಸಂಬಳವೂ ಹೇಳಿಕೊಳ್ಳುವಷ್ಟು ಹೆಚ್ಚಿಲ್ಲ. ಬಹುಶ: ಕಮ್ಯೂನಿಸಂ ಉಳ್ಳ ಇಲ್ಲಿಯ ಪ್ರಜಾಪ್ರಭುತ್ವದಲ್ಲಿ ವೃತ್ತಿ ಸ್ವಾತಂತ್ರ್ಯವೂ ಕಡಿಮೆ. ಹೀಗಾಗಿ ಯುವಕರು ಖಾಸಗಿಯಾಗಿ, ಫ್ರೀ ಲಾನ್ಸರ್ ಕೆಲಸಕ್ಕೇ ಆದ್ಯತೆ ಕೊಡುತ್ತಾರೆ. ವಿಯೆಟ್ನಾಂನಲ್ಲಿ 12-15 % ಬೌದ್ಧರು ಇದ್ದಾರಂತೆ. ಅಂದಾಜು 80 % ಜನರು ಯಾವುದೇ ಧರ್ಮದ ಕಟ್ಟುಪಾಡಿಲ್ಲದೆ ಇರುವರಂತೆ. ಅವರನ್ನು ‘ ಫ್ರೀ ತಿಂಕರ್‍ಸ್’ Free Thinkers ಎನ್ನುವರಂತೆ. ತೀರಾ ಕಡಿಮೆ ಸಂಖ್ಯೆಯಲ್ಲಿ ಕ್ರೈಸ್ತರು, ಮುಸಲ್ಮಾನರು ಹಾಗೂ ಹಿಂದುಗಳು ಇದ್ದಾರಂತೆ.
ಡಾನಾಂಗ್ ನಿಂದ ಸುಮಾರು ಮುಕ್ಕಾಲು ಗಂಟೆ ಪ್ರಯಾಣಿಸಿ , ಬಾ ನಾ ಹಿಲ್ಸ್ ಎಂಬ ಬೆಟ್ಟ ಪ್ರದೇಶ ತಲಪಿದೆವು. ಸಣ್ಣದಾಗಿ ಮಳೆ ಹನಿಯುತ್ತಿತ್ತು. ‘ಟೋಮಿ’ ನಮಗಿಬ್ಬರಿಗೆ ಪ್ರತ್ಯೇಕವಾಗಿ 900,000 ಡಾಂಗ್ (ಸುಮಾರು 3000/- ರೂ) ಬೆಲೆಯ ಟಿಕೆಟ್ ಖರೀದಿಸಿದ್ದ. ಅದರಲ್ಲಿ ಬಾ ನಾ ಬೆಟ್ಟದ ಆಕರ್ಷಣೆಗಳ ವೀಕ್ಷಣೆ ಜೊತೆಗೆ ಮಧ್ಯಾಹ್ನದ ಊಟಕ್ಕೆ ಅವಕಾಶವಿದೆ ಎಂದು ತಿಳಿಸಿದ. ಅವನ ಮಾರ್ಗದರ್ಶನದಲ್ಲಿ ಆಕರ್ಷಕ ಕಮಾನಿನ ಒಳಗಡೆ ಪ್ರವೇಶಿಸಿ, ವಿಶಾಲವಾದ ಕಾರಿಡಾರ್ ನಲ್ಲಿ ನಡೆಯುತ್ತಾ ಹೋದೆವು. ಈ ಆವರಣ ಬಹಳ ಕಲಾತ್ಮಕವಾಗಿತ್ತು. ಅಲ್ಲಲ್ಲಿ ಕೆಂಪು ಬಣ್ಣದ ಲಾಟೀನಿನಂತಹ ದೀಪಗಳು ತೂಗಾಡುತ್ತಿದ್ದುವು. ಅಲ್ಲಲ್ಲಿ ಅರಳಿದ್ದ ಬಣ್ಣಬಣ್ಣದ ಹೂಗಳಿಗೆ, ಕಮಾನಿನಿಂದ ತೂಗುಬಿಟ್ಟಿದ ಬಳ್ಳಿಗಳಿಗೆ ಲೆಕ್ಕವಿಲ್ಲ. ಹಲವಾರು ಕಡೆ ಸಿಮೆಂಟಿನ ಕಾಲುವೆಯಂತೆ ಇದ್ದ ಜಾಗದಲ್ಲಿ ನೀರು ಹರಿಯುತ್ತಿತ್ತು ಹಾಗೂ ಬಣ್ಣಬಣ್ಣದ ಮೀನುಗಳು ಅತ್ತಿತ್ತ ಓಡಾಡುತ್ತಿದ್ದುವು. ಸುಮಾರು ಒಂದುವರೆ ಅಡಿ ಇರಬಹುದಾದ ಮೀನುಗಳನ್ನು ತೋರಿಸಿದ ಮಾರ್ಗದರ್ಶಿ ”ಇವು ಜಪಾನ್ ಮೂಲದ ‘ಕೊವಾಯ್ ಮೀನು’ Koi Fish , ಇವು ಜಲಪಾತದಲ್ಲಿ ಮೇಲ್ಮುಖವಾಗಿ ಚಲಿಸುತ್ತವೆ, ರೂಪಾಂತರ ಹೊಂದಿ ಡ್ರ್ಯಾಗನ್ ಆಗುತ್ತವೆ ಎಂಬ ನಂಬಿಕೆ ಇದೆ” ಅಂದ.
ಆ ಪರಿಸರ ಎಷ್ಟು ಸೊಗಸಾಗಿತ್ತೆಂದರೆ, ನನಗೆ ಕ್ಷಣಕ್ಕೊಂದು ಕ್ಲಿಕ್ ಎಂಬಂತೆ ಫೋಟೊ ತೆಗೆಯುವ ಆತುರ. ‘ಬನ್ನಿ ,ಬನ್ನಿ , ನಿಮಗೆ ಇದಕ್ಕಿಂತ ಚೆನ್ನಾಗಿರುವ ಫೊಟೊ ತೆಗೆಯಲು ಬಾ ನಾ ಹಿಲ್ಸ್ ನಲ್ಲಿ ಸಾಕಷ್ಟು ಅವಕಾಶಗಳಿವೆ ‘ಎಂದು ಎಚ್ಚರಿಸಿದ ಟೋಮಿ. ಹೀಗೆ ಸುಮಾರು 10 ನಿಮಿಷ ನಡೆದು ಕೇಬಲ್ ಕಾರು ಆರಂಭವಾಗುವ ‘ಸುವಾಯಿ ಮೊ’ Suio Mo ಎಂಬಲ್ಲಿಗೆ ತಲಪಿದೆವು. ಇಲ್ಲಿಂದ ಬಾ ನಾ ಹಿಲ್ಸ್‌ಗೆ ಇರುವ ಕೇಬಲ್ ಕಾರ್ ಪಥವು 5771 ಮೀ ಉದ್ದವಿದ್ದು, ಇದು ಪ್ರಪಂಚದ ಅತಿ ಉದ್ದದ ಕೇಬಲ್ ಕಾರ್ ಪಥವಾಗಿದೆ. ಈ ಕೇಬಲ್ ಕಾರ್ ಸವಾರಿಯ ಸಮಯದಲ್ಲಿ ನಮಗೆ ಕಾಣಸಿಗುವ ಪ್ರಕೃತಿ ಸೌಂದರ್ಯ ಅಮೋಘ. ದೂರದಲ್ಲಿ ಕಾಣಿಸುವ ಸಮುದ್ರ, ಕಾಡು, ಜಲಪಾತಗಳು ….ಹೀಗೆ ಪ್ರಕೃತಿಯನ್ನು ವೀಕ್ಷಿಸುತ್ತಾ ಕೇಬಲ್ ಕಾರಿನಲ್ಲಿ 15 ನಿಮಿಷದ ಪ್ರಯಾಣಿಸಿದ ಮೇಲೆ ಬಾ ನಾ ಹಿಲ್ಸ್ ತಲಪುತ್ತೇವೆ. ಅಲ್ಲಿಂದ , ಬಾ ನಾ ಬೆಟ್ಟದಲ್ಲಿರುವ ಇತರ ಜಾಗಗಳಿಗೆ ಭೇಟಿ ಕೊಡಲು ಹಾಗೂ ಹಿಂತಿರುಗಲು ಬೇರೆ ಕೇಬಲ್ ಕಾರ್ ಪಥಗಳಿವೆ. ಹೀಗೆ ಏಕಕಾಲದಲ್ಲಿ ಬೆಟ್ಟದಿಂದ ಕೆಳಗೆ ಅಥವಾ ಮೇಲೆ ವಾಯುಮಾರ್ಗದಲ್ಲಿ ಒಟ್ಟು ಐದು ಕೇಬಲ್ ಕಾರ್ ಪಥಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡುವುದು ಕಣ್ಣಿಗೆ ಹಬ್ಬ.
ಚುವಾ ಪರ್ವತದಲ್ಲಿರುವ ಈ ವಿಶಿಷ್ಟ ಯುರೋಪಿಯನ್ ಥೀಮ್ ಪಾರ್ಕ್‌ನಲ್ಲಿ, ವಿಯೆಟ್ನಾಂನಲ್ಲಿ ಬೇರೆಲ್ಲಿಯೂ ಕಾಣದ ವಿಭಿನ್ನ ಜಗತ್ತು ಅನಾವರಣಗೊಳ್ಳುತ್ತದೆ. ಹಿಂದೆ ಇಲ್ಲಿ ಆಡಳಿತ ನಡೆಸಿದ್ದ ಫ್ರೆಂಚರಿಗೆ ಮಂಜು ಮುಸುಕಿದ ಬೆಟ್ಟವಾಗಿದ್ದ ‘ಬಾ ನಾ ಬಿಲ್ಸ್’ ಐಷಾರಾಮಿ ಗಿರಿಧಾಮ ಆಗಿತ್ತು. 1919 ರಲ್ಲಿ ಇಲ್ಲಿ ಫ್ರೆಂಚರು ಗಿರಿಧಾಮವನ್ನು ನಿರ್ಮಿಸಿದ್ದರು. ವಿಯೆಟ್ನಾಂ ಯುದ್ದದ ಸಮಯದಲ್ಲಿ ಈ ಪ್ರದೇಶವು ನಿರ್ಲಕ್ಷ್ಯಕ್ಕೊಳಗಾಗಿತ್ತು. 1954 ರಲ್ಲಿಇಲ್ಲಿಂದ ಫ್ರೆಂಚರ ನಿರ್ಗಮನವಾದ ಮೇಲೆ ಸ್ಥಳೀಯ ವಿಯೆಟ್ನಾಮಿಗರು, ಈ ಗಿರಿಧಾಮವನ್ನು ಅದ್ಭುತವಾಗಿ ನವೀಕರಿಸಲಾರಂಭಿಸಿದರು. 1990 ರ ನಂತರ ಫ್ರಾನ್ಸ್ ನ ಮಧ್ಯಕಾಲೀನ ಪಟ್ಟಣದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಸುಂದರವಾದ ಮಾನವನಿರ್ಮಿತ ಉದ್ಯಾನಗಳು, ಡಿಸ್ನಿಲ್ಯಾಂಡ್‌ನಂತಹ ಕಾಲ್ಪನಿಕ ಕಲಾಕೃತಿಗಳು, ಫ್ರೆಂಚ್ ವಾಸ್ತುಶಿಲ್ಪವನ್ನು ಹೋಲುವ ಕಟ್ಟಡಗಳು, ಪ್ರತಿಮೆಗಳು …..ಹೀಗೆ ಬಾ ನಾ ಬೆಟ್ಟದಲ್ಲಿ ವಿಯೆಟ್ನಾಂನ ಬೇರೆ ಎಲ್ಲಿಯೂ ಕಾಣಸಿಗದ ‘ಫ್ರೆಂಚ್ ವಿಲೇಜ್ ‘ ಅನ್ನು ಸೃಷ್ಟಿಸಿದ್ದಾರೆ. ಈಗ ಬಾ ನಾ ಬೆಟ್ಟಗಳು ಡಾ ನಾಂಗ್ ನ ಪ್ರಮುಖ ಪ್ರವಾಸಿತಾಣಗಳಲ್ಲೊಂದಾಗಿದೆ.
ನಮ್ಮ ಮಾರ್ಗದರ್ಶಿ ಬಳಿ ಬಾ ನಾ ಹಿಲ್ಸ್ ಎಂಬ ಹೆಸರಿನ ಮೂಲವೇನೆಂದು ಕೇಳಿದೆ. ಆತ ಹೇಳಿದ ಪ್ರಕಾರ, ಫ್ರೆಂಚರು ಮೊದಲ ಬಾರಿಗೆ ಈ ಗಿರಿಧಾಮಕ್ಕೆ ಭೇಟಿ ಕೊಟ್ಟಾಗ ಇಲ್ಲಿ ಬಹುವಾಗಿ ಬೆಳೆದಿದ್ದ ಬಾಳೆಹಣ್ಣುಗಳನ್ನು ಕಂಡರು. ತಮ್ಮ ಭಾಷೆಯಲ್ಲಿ ಬಾಳೆಹಣ್ಣಿಗೆ ‘ಬನಾನೆ’ ಎಂದು ಹೆಸರಿರುವ ಕಾರಣ ಅವರು ‘ಬಾ ನಾ ಹಿಲ್ಸ್’ ಎಂದು ಹೆಸರಿಟ್ಟರು. ಇನ್ನೊಂದು ಮೂಲದ ಪ್ರಕಾರ ಸ್ಥಳೀಯ ‘ಚಾಮ್ ‘ ಜನರು ಬಹಳ ಹಿಂದೆ ಇಲ್ಲಿ ತಮ್ಮ ಆರಾಧ್ಯದೇವಿ ‘ಪೊನಾಗರ್’ಗೆ ಇಲ್ಲಿ ಮಂದಿರವನ್ನು ಕಟ್ಟಿದ್ದರು. ಕಾಲಾನಂತರದಲ್ಲಿ ಇದು ‘ಪಾ ನಾ’… ಆಮೇಲೆ ಅಪಭ್ರಂಶವಾಗಿ ‘ ಬಾ ನಾ’ ಎಂಬ ಹೆಸರನ್ನು ಪಡೆಯಿತು.
ಬಾ ನಾ ಹಿಲ್ಸ್ ನಲ್ಲಿ ನಮಗೆ ಎದ್ದು ಕಾಣುವ ರಚನೆ ದೈತ್ಯಾಕಾರದ ಎರಡು ಕೈಗಳಲ್ಲಿ ಹಿಡಿದ ಸೇತುವೆಯ ರಚನೆ. 2018 ರಲ್ಲಿ ಕಟ್ಟಲಾದ 150 ಮೀ ಉದ್ದದ ಈ ಸೇತುವೆಯನ್ನು ಗೋಲ್ಡನ್ ಬ್ರಿಡ್ಜ್ ಅನ್ನುತ್ತಾರೆ. ಬೆಟ್ಟದ ತುದಿಯಲ್ಲಿ ಕಟ್ಟಲಾದ ಈ ದೈತ್ಯ ತೂಗುಸೇತುವೆಯು ವಿಯೆಟ್ನಾಂನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ನಾವು ಹೋಗಿದ್ದ ಸಮಯ ತಂಪಾದ ವಾತಾವರಣ. ಮಂಜು ಮುಸುಕಿತ್ತು. ಸೇತುವೆಯ ಮೇಲೆ ನಿಂತು ಸುತ್ತುಮುತ್ತಲಿನ ಪ್ರಾಕೃತಿಕ ದೃಶ್ಯಗಳನ್ನು ಕಣ್ತುಂಬಿಕೊಂಡೆವು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41948
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಒಳ್ಳೆಯ ವಿವರಣೆ. ನಾವು ಹೋದಾಗ ಹವಾ ಚನ್ನಾಗಿತ್ಹು. ಜನ ತುಂಬಾ ಇದ್ದರು
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಹಲವಾರು ವಿಶಿಷ್ಟ ವಿಷಯಗಳನ್ನೊಳಗೊಂಡು ಈ ವಾರವೂ ಪ್ರವಾಸ ಕಥನವು ಮುದ ನೀಡಿತು.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು.. ಮುಗಿದೇ ಹೋಯಿತೇ ಎನ್ನುವಂತಿತ್ತು..ಚಿತ್ರ ಗಳು ಪೂರಕವಾಗಿ ಬಂದಿವೆ…ನೀವು ಪ್ರವಾಸದ ಅನುಭವವನ್ನು ಅಭಿವ್ಯಕ್ತಿ ಸುವ ರೀತಿ ಚೆನ್ನಾಗಿ ರುತ್ತದೆ ನನ್ನ ಅಭಿಪ್ರಾಯ.. ಗೆಳತಿ ಹೇಮಾ
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ತಮಗೆ ಕಥನ ಕಲೆ ಸಿದ್ಧಿಸಿದೆ…
ಸುಂದರ ಕಥನ
ಧನ್ಯವಾದಗಳು..
ಬಾ ನಾ ಹಿಲ್ಸ್ ಕುರಿತ ವಿವರ ಚೆನ್ನಾಗಿದೆ.
ಎಲ್ಲೂ ಕಂಡು ಕೇಳರಿಯದ ಅದ್ಭುತ ವಾಸ್ತುಶಿಲ್ಪವನ್ನು ಒಳಗೊಂಡ ಗೋಲ್ಡನ್ ಬ್ರಿಡ್ಜ್ ನ ಭೀಮಾಕೃತಿಯ ಕರಗಳನ್ನು ನೋಡಿಯೇ ಸೋತುಹೋದೆ! ತಣ್ಣಗಿನ ನೀರಲ್ಲಿ ಈಜುವ ಬಂಗಾರದ ಬಣ್ಣದ ಮೀನುಗಳೇ ಮುಂದೆ ರೂಪಾಂತಗೊಂಡು ಡ್ರಾಗನ್ ಆಗುತ್ತವೆ ಎಂಬ ನಂಬಿಕೆಗೆ ಆಶ್ಚರ್ಯವೆನಿಸುತ್ತದೆ. ಅಂತೂ ವಿಯೆಟ್ನಾಂ ಪ್ರವಾಸ ಬಹಳ ಮಜವಾಗಿದೆ!