ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 19
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 6: ಡನಾಂಗ್ ನಿಂದ ‘ ಹೊ ಚಿ ಮಿನ್ಹ್ ‘ ನಗರಕ್ಕೆ 20/09/2024
ಡನಾಂಗ್ ನಲ್ಲಿ 20/09/2024 ರ ಬೆಳಗಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ, ಅಂದು ನಾವು ಉಳಕೊಂಡಿದ್ದ ‘ಸಾಂತಾ ಲಕ್ಸುರಿ’ ಹೋಟೆಲ್ ನ ಕೊಠಡಿಯನ್ನು ತೆರವು ಮಾಡಿ, ಸುಮಾರು ಒಂದು ಗಂಟೆ ರಸ್ತೆಯಲ್ಲಿ ಪ್ರಯಾಣಿಸಿ ಡನಾಂಗ್ ನ ವಿಮಾನ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ವಿಯೆಟ್ನಾಂ ನ ದಕ್ಷಿಣ ಭಾಗದಲ್ಲಿರುವ ‘ ಹೊ ಚಿ ಮಿನ್ಹ್ ‘ ನಗರಕ್ಕೆ ತಲಪಬೇಕಿತ್ತು. ಬೆಳಗ್ಗೆ ಲಗೇಜು ಸಮೇತ ಸಿದ್ಧರಾಗಿ, ರೆಸ್ಟಾರೆಂಟ್ ಗೆ ಹೋಗಿ ಉಪಾಹಾರ ಸೇವಿಸಿ, ಸ್ವಾಗತಕಾರಿಣಿ ಬಳಿ ಚೆಕ್ ಔಟ್ ಫಾರ್ಮ್ ಗೆ ಸಹಿ ಮಾಡಿದೆವು. ತಿಳಿಸಿದ್ದ ಸಮಯಕ್ಕೆ ಸರಿಯಾಗಿ ಕಾರು ಬಂತು . ನಮ್ಮ ವಿಮಾನ 1250 ಗಂಟೆಗೆ ಇತ್ತು. ನಾವು ಡನಾಂಗ್ ಏರ್ ಪೋರ್ಟ್ ವಿಮಾನ ನಿಲ್ದಾಣದಲ್ಲಿ ತಲಪಿ, ಲಗೇಜು ಕೊಟ್ಟು, ಚೆಕ್ ಇನ್ , ಸೆಕ್ಯುರಿಟಿ ಚೆಕ್ ಮುಗಿಸಿ, ಅಲ್ಲಿಯೇ ಸ್ವಲ್ಪ ಅಡ್ಡಾಡಿ , 75000 ಡಾಂಗ್ (235 ರೂ) ತೆತ್ತು ಕಾಫಿ ಕುಡಿದು ಕಾಲ ಕ್ಷೇಪ ಮಾಡಿದೆವು. ಆ ದಿನ ವಿಮಾನ ಒಂದು ಗಂಟೆ ತಡವಾಗಿ ಹೊರಟಿತ್ತು.
ಮಧ್ಯಾಹ್ನ 0300 ಗಂಟೆಗೆ ಹೊ ಚಿ ಮಿನ್ಹ್ ವಿಮಾನ ನಿಲ್ದಾಣ ತಲಪಿದ್ದೆವು. ನಾವು ವಿಮಾನ ನಿಲ್ದಾಣದ ಹೊರಗೆ ಬಂದಾಗ ‘ಹಲೋ ಏಷಿಯಾ ಟ್ರಾವೆಲ್’ ಸಂಸ್ಥೆಯ ಪ್ರತಿನಿಧಿಯಾದ ಎಳೆಯ ಯುವತಿ ‘ಆನ್ಹ್’ ನಮ್ಮನ್ನು ನಗುನಗುತ್ತಾ ಸ್ವಾಗತಿಸಿ, ಕಾರಿನಲ್ಲಿ ಕರೆದೊಯ್ದಳು. ಈ ಪ್ರವಾಸದಲ್ಲಿ ನಮ್ಮನ್ನು ಭೇಟಿಯಾದ ಮೊದಲ ಮಹಿಳಾ ಮಾರ್ಗದರ್ಶಿ ಇವಳು. ಈಕೆಯೂ ಹತ್ತಿರದ ಹಳ್ಳಿಯವಳು. ಪಾರ್ಟ್ ಟೈಮ್ ಉದ್ಯೋಗ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂದು ಗೊತ್ತಾಯಿತು. ಈವತ್ತು ನಮಗೆ ಮಾರ್ಗದರ್ಶಿಯಾಗಿ ಇನ್ನೊಬ್ಬರು ಬರಬೇಕಾಗಿತ್ತು, ಅವರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾನು ಬಂದೆನೆಂದೂ, ನಿಮ್ಮನ್ನು ಹೋಟೆಲ್ ‘ಕ್ವೀನ್ ಆನ್ ‘ ಗೆ ತಲಪಿಸುವಲ್ಲಿಗೆ ನನ್ನ ಜವಾಬ್ದಾರಿ ಮುಗಿಯುತ್ತದೆ. ರಾತ್ರಿ 0800 ಗಂಟೆಗೆ ಕಾರು ಡ್ರೈವರ್ ಬಂದು ನಿಮ್ಮನ್ನು ಇಂಡಿಯನ್ ರೆಸ್ಟಾರೆಂಟ್ ಗೆ ಕರೆದೊಯ್ಯುವರು. ಇನ್ನು ನಾನು ಹೊರಡುವೆ.ನಾಳೆ ಬೇರೆ ಗೈಡ್ ಬರುತ್ತಾರೆ ಎಂದಳು. ಸಣ್ಣ ಮೈಕಟ್ಟಿನ ವಿಯೆಟ್ನಾಂ ಯುವಕ -ಯುವತಿಯರ ಜನರ ನಗುಮುಖ, ಮೈಬಣ್ಣ,ಕಣ್ಣಲ್ಲಿ ಮಿಂಚುವ ಆತ್ಮವಿಶ್ವಾಸ…ಎಲ್ಲವೂ ಚೆಂದ ಅನಿಸಿತು. ಅರ್ಧ ಗಂಟೆ ಪ್ರಯಾಣಿಸಿದಾಗ ಹೋಟೆಲ್ ‘ಕ್ವೀನ್ ಆನ್’ ತಲಪಿತು. ಆಕೆಗೆ ಧನ್ಯವಾದ ಹೇಳಿ ಫೊಟೊ ತೆಗೆಸಿಕೊಂಡೆ.
ಆಗ ಸಂಜೆ ನಾಲ್ಕರ ಸಮಯ ಆಗಿತ್ತು. ಮಧ್ಯಾಹ್ನದ ಊಟವಾಗಿರಲಿಲ್ಲ. ‘ಕ್ವೀನ್ ಆನ್’ ಹೋಟೆಲ್ ಸುಮಾರಾಗಿತ್ತು. ನಮ್ಮ ಲಗೇಜುಗಳನ್ನು ರೂಮ್ ನಲ್ಲಿ ಇರಿಸಿ, ಏನಾದರೂ ತಿನ್ನಲು ಹೊರಟೆವು. ಸ್ವಾಗತಕಾರರ ಬಳಿ ಇಲ್ಲಿ ಯಾವುದಾದರೂ ಭಾರತೀಯ ರೆಸ್ಟಾರೆಂಟ್ ಹತ್ತಿರದಲ್ಲಿ ಇದೆಯೇ ಎಂದು ಕೇಳಿದಾಗ, ಆತ ನಗುತ್ತಾ ತಾನೇ ನಾಲ್ಕು ಹೆಜ್ಜೆ ನಡೆದು, ಗಾಜಿನ ಬಾಗಿಲು ಸರಿಸಿ, ‘ಸೀ ದೇರ್, ಹೋಟೆಲ್ ನಟರಾಜ್’ ಎಂದು ತೋರಿಸಿದರು. ‘ಕ್ವೀನ್ ಆನ್’ ಹೋಟೆಲ್ ನ ಎದುರುಗಡೆಯೇ ಭಾರತೀಯ ರೆಸ್ಟಾರೆಂಟ್ ಇತ್ತು. ಖುಷಿಯಿಂದ ಹೊರಟೆವು. ಚಿಕ್ಕದಾದರೂ ಚೊಕ್ಕದಾಗಿದ್ದ ಹೋಟೆಲ್. ಒಳಗಡೆ ಚೆಂದದ ‘ನಟರಾಜ’ನ ಮೂರ್ತಿಯಿತ್ತು. ತಮಿಳುನಾಡು ಮೂಲದವರು ನಿರ್ವಹಿಸುತ್ತಿದ್ದ ಹೋಟೆಲ್. ಅಚ್ಚುಕಟ್ಟಾಗಿ ನಮ್ಮಿಬ್ಬರ ಆಯ್ಕೆಯ ದೋಸೆ, ಕಾಫಿ, ಚಹಾ ಸವಿದೆವು. ರುಚಿ ಚೆನ್ನಾಗಿತ್ತು.
ಇನ್ನೂ ಕತ್ತಲಾಗಲು ಸಮಯವಿತ್ತು. ಸುಮ್ಮನೆ ರೂಮ್ ನಲ್ಲಿ ಇರುವ ಬದಲು ಏನಾದರೂ ವೀಕ್ಷಿಸೋಣ ಎಂದು ಮಾರ್ಗದುದ್ದಕ್ಕೂ ನಡೆದುವು. ಅಲ್ಲಲ್ಲಿ ಮಸಾಜ್ ಸೆಂಟರ್ ಗಳು, ಸ್ಪಾ ಗಳು . ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಗಳು ಇದ್ದುವು. ಹತ್ತು ನಿಮಿಷ ನಡೆದಾಗ ಒಂದು ವೃತ್ತ ಕಾಣಿಸಿತು. ಅದರಾಚೆ ಹಲವಾರು ಮರಗಿಡಗಳುಳ್ಳ ಸುಂದರವಾದ ಸಾರ್ವಜನಿಕ ಉದ್ಯಾನವಿತ್ತು. ಅದಕ್ಕೆ ‘ ಸೆಪ್ಟೆಂಬರ್ 23’ ಉದ್ಯಾನ ಎಂಬ ಹೆಸರು ಎಂದು ಆಮೇಲೆ ಗೊತ್ತಾಯಿತು. ಕಾರಣ, ಹಿಂದೆ ಅಲ್ಲಿ ಹೊ ಚಿ ಮಿನ್ ನಗರದ ರೈಲ್ವೇ ಸ್ಟೇಶನ್ ಇತ್ತಂತೆ. ರೈಲ್ವೇ ಸ್ಟೇಶನ್ ಅನ್ನು ತೆರವುಗೊಳಿಸಿ, ಉದ್ಯಾನ ನಿರ್ಮಿಸಿ 2002 ಸೆಪ್ಟೆಂಬರ್ 23 ರಂದು ಉದ್ಘಾಟಿಸಿದ ಹಿನ್ನೆಲೆಯಲ್ಲಿ ಆ ಉದ್ಯಾನವನ್ನು ಸೆಪ್ಟೆಂಬರ್ 23 ಪಾರ್ಕ್ ಎಂದು ಕರೆಯುತ್ತಾರಂತೆ. ಚೆಂದದ ಪಾರ್ಕ್ ನಲ್ಲಿ ಕೆಲವರು ವಾಕಿಂಗ್ ಮಾಡುತ್ತಿದ್ದರು. ಮಕ್ಕಳಿಗೆ ಆಡಲು ಅವಕಾಶವಿತ್ತು. ದೊಡ್ಡವರಿಗೆ ವ್ಯಾಯಾಮ ಮಾಡುವ ವ್ಯವಸ್ಥೆಯಿತ್ತು. ಬಣ್ಣಬಣ್ಣದ ಹೂಗಿಡಗಳು, ಕಾರಂಜಿಗಳು ಮನಸೂರೆಗೊಂಡುವು. ಸುಮಾರು ಒಂದು ಗಂಟೆ ಅಲ್ಲಿ ಕಾಲ ಕಳೆದು ಹೋಟೆಲ್ ಗೆ ಬಂದೆವು.
ರಾತ್ರಿ 0800 ಗಂಟೆಗೆ ಸ್ಥಳೀಯ ಕಾರು ಡ್ರೈವರ್ ಬಂದು , ನಮ್ಮನ್ನು ಸ್ವಲ್ಪ ದೂರದಲ್ಲಿದ್ದ ;ಹೋಟೆಲ್ ತಂದೂರ್’ ಎಂಬಲ್ಲಿಗೆ ಕರೆದೊಯ್ದರು. ಆತನಿಗೆ ಇಂಗ್ಲಿಷ್ ಬಾರದು . ಆತ ಸಂಜ್ಞೆಯ ಮೂಲಕ ಹೇಳಿದುದರಲ್ಲಿ ನಮಗೆ ಅರ್ಥವಾದುದೇನೆಂದರೆ , ‘ಇನ್ನೊಂದೆಡೆ ಕಾರನ್ನು ಪಾರ್ಕ್ ಮಾಡಿರುತ್ತೇನೆ. ಸ್ವಲ್ಪ ಸಮಯದ ನಂತರ ಬರುತ್ತೇನೆ’. ಸರಿ, ನಾವು ಹೋಟೆಲ್ ನ ಒಳಗೆ ಹೊಕ್ಕೆವು. ಒಡಿಶಾ ಮೂಲದ ಒಬ್ಬರು ನಿರ್ವಹಿಸುತ್ತಿದ್ದ ಚಿಕ್ಕ ಹೋಟೆಲ್. ಎಲ್ಲಾ ವ್ಯವಸ್ಥೆಯನ್ನು ಟ್ರಾವೆಲ್ಸ್ ನವರೇ ಮಾಡುವುದರಿಂದ ನಮಗೆ ಬಡಿಸಿದ್ದನ್ನು ಉಣ್ಣುವುದಷ್ಟೇ ಕೆಲಸ. ಉತ್ತರ ಭಾರತೀಯ ಶೈಲಿಯ ರೋಟಿ, ದಾಲ್, ಸಬ್ಜಿ, ಅನ್ನ, ರಸಂ. ಮೊಸರು, ಹಪ್ಪಳ, ಸಿಹಿ ಇದ್ದೇ ಇರುತ್ತಿತ್ತು. ಅವರು ಕೊಡುವ ಆಹಾರದ ಪ್ರಮಾಣ ನಮಗೆ ಜಾಸ್ತಿ ಎನಿಸುತ್ತಿದ್ದುದರಿಂದ ಕೆಲವೊಂದು ಅಡುಗೆಯನ್ನು ನಾವು ಮೊದಲಾಗಿ ಬೇಡ ಅನ್ನುತ್ತಿದ್ದೆವು. ಊಟವಾಗಿ ಹೊರಗೆ ಬಂದು ನಿಂತೆವು. ನಮ್ಮ ಕಾರು ಕಾಣಿಸಲಿಲ್ಲ. ಇದುವರೆಗಿನ ನಮ್ಮ ಪ್ರವಾಸದ ಎಲ್ಲಾ ದಿನಗಳಲ್ಲೂ ನಮ್ಮ ಊಟ ಆಗುವವರೆಗೂ ಮಾರ್ಗದರ್ಶಿ ಅಥವಾ ಡ್ರೈವರ್ ಹೋಟೆಲ್ ಎದುರುಗಡೆಯೇ ಇರುತ್ತಿದರು. ಆದರೆ, ಇಂದು ನಾವು ಹೋಟೆಲ್ ನ ಹೊರಗೆ ಬಂದು ರಸ್ತೆ ಬದಿಯಲ್ಲಿ ನಿಂತು ಕಾಲು ಗಂಟೆಯಾದರೂ ಕಾರಿನ ಪತ್ತೆ ಇಲ್ಲ.
ಹೊ ಚಿ ಮಿನ್ಹ್ ನಗರವು ವಿಯೆಟ್ನಾಂನ ಅತಿ ದೊಡ್ಡದಾದ, ದುಬಾರಿಯಾದ ಹಾಗೂ ಜನರಿಂದ ಗಿಜಿಗುಟ್ಟುವ ನಗರ. ಇಲ್ಲಿಯ ರಸ್ತೆಗಳಲ್ಲಿ ವಾಹನಗಳೂ ಜಾಸ್ತಿ. ನಾವು ಕಾಯುತ್ತಿರುವುದನ್ನು ಕಂಡು, ಕೆಲವರು ತಮ್ಮ ಟ್ಯಾಕ್ಸಿಯನ್ನು ನಮ್ಮ ಹತ್ತಿರ ನಿಲ್ಲಿಸಿ ಗಮನಿಸಿದ ಹಾಗೆ ಅನಿಸಿತು. ಅಷ್ಟರಲ್ಲಿ ಒಬ್ಬಾತ, ಬಿಳಿ ಯೂನಿಫಾರ್ಮ್, ಟೈ ಧರಿಸಿದವರು, ತಮ್ಮ ಕಾರಿನಿಂದ ಕೆಳಗಿಳಿದು, ‘ ಕಮ್ ‘ ಎಂದು ಕರೆದರು. ತಮ್ಮ ಕಾರಿನ ಬಾಗಿಲು ತೆಗೆದು ಕಾರಿಗೆ ಹತ್ತಿಸಿಕೊಂಡರು. ಆಮೇಲೆ ಎಲ್ಲಿಗೆ ಹೋಗಬೇಕು ಎಂಬಂತೆ ಕೇಳಿದರು. ಆಗ ನಮಗೆ ಅನುಮಾನ ಬಂತು. ನಮ್ಮ ಕಾರಿನ ಡ್ರೈವರ್ ಆಗಿದ್ದರೆ, ಅವರು ಎಲ್ಲಿಗೆ ಹೋಗಬೇಕೆಂದು ಯಾಕೆ ಕೇಳಿದರು? ಅವರಿಗೆ ಗೊತ್ತಿತ್ತು ತಾನೇ? ಆಗ ಬಂದಿದ್ದ ಡ್ರೈವರ್ ಯೂನಿಫಾರ್ಮ್ ನಲ್ಲಿ ಇದ್ದ ಹಾಗಿರಲಿಲ್ಲ ಎಂಬ ನೆನಪು . ಈತ ಯೂನಿಫಾರ್ಮ್ ಧರಿಸಿದ್ದಾರೆ. ಪೋಲೀಸ್ ಇರಬಹುದೇ? ನಮ್ಮನ್ನು ಯಾಕೆ ಹತ್ತಿಸಿಕೊಂಡರು? ಯಾಕೋ ದಿಗಿಲಾಯಿತು. ‘ಸ್ಟಾಪ್..ಸ್ಟಾಪ್.. ದಿಸ್ ಈಸ್ ನಾಟ್ ಅವರ್ ಕಾರ್..’ ಎಂದು ಹೇಳಿದರೂ ಆತ ಕಾರು ನಿಲ್ಲಿಸದೇ ‘ ವೇರ್ ..ವೇರ್’ ಅನ್ನುತ್ತಿದ್ದಾರೆ. ರಾತ್ರಿಯಾಗಿತ್ತು, ಅಪರಿಚಿತ ಜಾಗ. ಭಾಷೆ ಗೊತ್ತಿಲ್ಲ, ಆದರೆ ಇದು ನಮಗೆ ಬರಬೇಕಾದ ಕಾರಲ್ಲ ಎಂದು ಗೊತ್ತಾಯಿತು. ನಮ್ಮ ಅದೃಷ್ಟಕ್ಕೆ ಇನ್ನೂರು ಮೀಟರ್ ನಷ್ಟು ದೂರದಲ್ಲಿ ಒಂದು ವೃತ್ತ ಸಿಕ್ಕಿತು. ಟ್ರಾಫಿಕ್ ಸಿಗ್ನಲ್ ಬಂದ ಕಾರಣ, ಆತ ಅನಿವಾರ್ಯವಾಗಿ ಕಾರು ನಿಲ್ಲಿಸಿದ. ನಾವಿಬ್ಬರೂ , ಇದೇ ಸಮಯ ಎಂದು ಕಾರಿನ ಬಾಗಿಲು ತೆಗೆದು ಹೊರಕ್ಕೆ ನೆಗೆದೆವು. ಆತ ‘ಮನಿ…ಮನಿ’ ಎಂದು ಕಿರುಚುತ್ತಿದ್ದ. ನಾನಂತೂ ಭಯದಿಂದಲೇ ಬಂದ ದಾರಿಯಲ್ಲಿಯೇ ಹೋಟೆಲ್ ತಂದೂರ್ ನ ಬಳಿಗೆ ನಡೆದೆ. ಹೈಮವತಿಯವರು ತಾಳ್ಮೆಯಿಂದ ಆತನ ಬಳಿ ಸಮಜಾಯಿಷಿ ಹೇಳಿದರಂತೆ. ಆತ ಟ್ಯಾಕ್ಸಿ ಸರ್ವಿಸ್ ನವನು ಎಂದು ಅವರಿಗೆ ಗೊತ್ತಾಗಿತ್ತು. ಆತ ಕನಿಷ್ಟ ಬಾಡಿಗೆ ಕೊಡಬೇಕೆಂದು ಹೇಳಿದನಂತೆ. ‘ನಾವೇನೂ ಆತನ ಕಾರು ಬೇಕೆಂದು ಸಂಜ್ಞೆ ಮಾಡಿರಲಿಲ್ಲ, ನಮ್ಮ ಕಾರಿನ ನಿರೀಕ್ಷೆಯಲ್ಲಿದ್ದ ಕಾರಣ ಗೊಂದಲವಾಯಿತು ‘ ಅಂದರಂತೆ. ಆತ ಯೂನಿಫಾರ್ಮ್ ನಲ್ಲಿದ್ದ ಕಾರಣ, ಪೋಲೀಸ್ ಇರಬೇಕೇನೋ ಅಂತ ನಾನು ಅಂದುಕೊಂಡಿದ್ದೆ ಎಂದು ಹೇಳಿದೆ. ಅಲ್ಲಿಯ ಟ್ಯಾಕ್ಸಿ ಚಾಲಕರೆಲ್ಲರೂ ಬಿಳಿ ಪ್ಯಾಂಟ್, ಶರ್ಟ್ ಧರಿಸಿ, ಟೈ ಧರಿಸಿರುತ್ತಾರೆ ಎಂದು ಆಮೇಲೆ ಗೊತ್ತಾಯಿತು. ನಾನಂತೂ ಬೇಸ್ತು ಬಿದ್ದಿದ್ದೆ.
ಇನ್ನೂ ನಮ್ಮ ಕಾರಿನ ಡ್ರೈವರ್ ನ ಪತ್ತೆಯಿಲ್ಲ. ಹಾಗಾಗಿ, ಆದಿನದ ಮಾರ್ಗದರ್ಶಿಯಾಗಿದ್ದ ‘ಆನ್’ ಳಿಗೆ ಫೋನ್ ಮಾಡಿ ಕಾರು ಚಾಲಕ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರ ನಂಬರ್ ನಮ್ಮ ಬಳಿ ಇಲ್ಲ ಎಂದೆವು. ಆಕೆ ಕೂಡಲೇ ಡ್ರೈವರ್ ಗೆ ತಿಳಿಸಿದಳು. ಎರಡೇ ನಿಮಿಷದಲ್ಲಿ ಆತ ಬಂದ. ಆತ ನಾವು ಫೋನ್ ಮಾಡಿ ಕರೆಯಬಹುದು ಎಂದು ನಿರೀಕ್ಷಿದ್ದನಂತೆ. ಅಂತೂ, ನಿರಾತಂಕವಾಗಿ ನಾವು ಉಳಕೊಳ್ಳಲಿರುವ ‘ಕ್ವೀನ್ ಆನ್ ‘ಗೆ ತಲಪಿದೆವು. ಹೀಗೆ ‘ಹೊ ಚಿ ಮಿನ್ಹ್ ‘ನಗರದಲ್ಲಿ ವಿಶಿಷ್ಟ ಅನುಭವವಾಯಿತು. ಇನ್ನು ಮೇಲೆ, ಪ್ರವಾಸದಲ್ಲಿರುವಷ್ಟು ದಿನ ಆಯಾ ದಿನದ ಕಾರಿನ ನಂಬರ್ ಪ್ಲೇಟ್ ನ ಫೋಟೊ ತೆಗೆದು ಇಟ್ಟುಕೊಳ್ಳಬೇಕು ಅಂತ ನಿರ್ಧರಿಸಿದೆ.
ಅಷ್ಟರಲ್ಲಿ ಮನೆಯಿಂದ ಫೋನ್ ಬಂತು. ವಿಯೆಟ್ನಾಂ ಸೇರಿದಂತೆ ಕೆಲವು ಪೌರಾತ್ಯ ದೇಶಗಳ ಕೆಲವೆಡೆ ಚಂಡಮಾರುತ ಬಂದು ಹಾನಿಯಾಗಿತ್ತಂತೆ. ಈ ಬಗ್ಗೆ ಭಾರತದ ಮಾಧ್ಯಮದಲ್ಲಿಯೂ ಬಂದಿದ್ದ ಕಾರಣ ನಮಗೇನಾದರೂ ತೊಂದರೆಯಾಗಿದೆಯೇ ಎಂದು ಕೇಳಿದ್ದರು. ನಾವಿದ್ದ ‘ಹೊ ಚು ಮಿನ್ಹ್’ ನಗರದಲ್ಲಿ ಸಣ್ಣಗೆ ಮಳೆ ಬರುತ್ತಿತ್ತು ಹಾಗೂ ಅಪಾಯವೇನೂ ಇಲ್ಲ ಎಂದಾಗ ನಿರಾಳವಾದರು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42104
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ…ಬಹಳ ಚೆನ್ನಾಗಿ ಮೂಡಿಬರುತ್ತಿದೆ ಗೆಳತಿ ಈ ಸಾರಿಯ ನಿರೂಪಣೆಯಲ್ಲಿ ತಾವು ಎದುರಿಸಿದ..ಪ್ರಸಂಗ ನಂತರ ಮುಂದೆ ಯಾವಎಚ್ಚರಿಕೆ ತೆಗೆದುಕೊಳ್ಳುವ ಬಗ್ಗೆ ಮಾಹಿತಿ.. ಪೂರಕ ಚಿತ್ರಗಳು …ಸೂಕ್ತ ವಾಗಿ…ಬಂದಿವೆ..ವಂದನೆಗಳು..
ಧನ್ಯವಾದಗಳು.
ಚಂದ
ಧನ್ಯವಾದಗಳು.
ಚೆನ್ನಾಗಿದೆ
ಧನ್ಯವಾದಗಳು.
ಪ್ರವಾಸದ ಮಧ್ಯೆ ಆತಂಕ ಉಂಟಾಗಿ, ಸಿಗ್ನಲ್ ನಲ್ಲಿ ಕಾರಿಂದ ಜಂಪ್ ಮಾಡಿದ ಸಾಹಸದ ಯಶೋಗಾಥೆ ರೋಮಾಂಚಕಾರಿಯಾಗಿತ್ತು.
ಹಹ್ಹ್ಹ…ಧನ್ಯವಾದಗಳು
ಪರದೇಶದಲ್ಲಿ ನಮ್ಮೂರಿನ ತಿಂಡಿ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು! ನಾನು ನ್ಯೂಯಾರ್ಕಿನ ಸರಹದ್ದಿನ ಹೋಟೆಲ್ ಒಂದರಲ್ಲಿ ಆತುರಾತುರದಿಂದ ಮಸಾಲೆ ದೋಸೆ ತಿಂದ ನೆನಪಾಗಿ ನಗೆಯುಕ್ಕಿ ಬಂತು. ಸೌಜನ್ಯಯುತ ನಡವಳಿಕೆಯ ಯುವತಿಯರು, ಟ್ಯಾಕ್ಸಿ ಚಾಲಕನ ಅವಾಂತರ, ನಿಮ್ಮಿಬ್ಬರ ಸಮಯಪ್ರಜ್ನೆ ಎಲ್ಲವೂ ಇಷ್ಟವಾದವು…. ಲೇಖನ ಸೂಪರ್!