ನಗುನಗುತಾ ನಲೀ ನಲೀ ಏನೇ ಆಗಲಿ….!
ಮೇ ತಿಂಗಳ ಮೊದಲ ಭಾನುವಾರವನ್ನು “ವಿಶ್ವ ನಗು ದಿನ“ವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೂ ಕೂಡ ಒಂದು ದಿನಾಚರಣೆ ಇದೆ. ತನ್ನದೇ ಆದ ಇತಿಹಾಸವು ಕೂಡವ್ಇರುವುದು ವಿಶೇಷ. ನಗದಿರುವವರಿಗೆ ಈ ದಿನ ಸ್ವಲ್ಪ ಸಮಯವಾದರೂ ನಗಿಸಿ, ಅದರ ಮಹತ್ವವನ್ನು ಸಾರುವಂತಹ ಕೆಲಸವೂ ಆಗಬೇಕು. ಆಗ ಮಾತ್ರ ನಗುವಿಗೆ ಮಹತ್ವ ಬರುತ್ತದೆ. “ದೀಪದಿಂದ ದೀಪ ಹಚ್ಚ…” ಎನ್ನುವಂತೆ ಒಂದು ನಗು ಮತ್ತೊಂದು ನಗುವಿಗೆ ನಾಂದಿ ಆಗಬೇಕು.
ಕೆಲವರು ಸದಾ ನಗುವಿನ ಮುಖವಾಡವನ್ನ ಹಾಕಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಮಾಡಿಕೊಳ್ಳುತ್ತಾರೆ ಇದು ತಪ್ಪು. ಇದರ ಬದಲು ಸಹಜವಾದ ನಗು ಇದ್ದರೆ ಅವನ ವ್ಯಕ್ತಿತ್ವವೇ ನಮಗೆ ವಿಭಿನ್ನವಾಗಿ ಕಾಣಿಸುತ್ತದೆ. ಸಾಹಿತ್ಯ ಭಾಷೆಯಲ್ಲಿ ಹೇಳುವುದಾದರೆ ಸದಾ ಹಸನ್ಮುಖಿಯಾಗಿ ಇರಿ ಎಂದು ಹೇಳುವವರು ಕೂಡ ಇದ್ದಾರೆ. ನಾವು ನಗಲು ಯಾರು ಕೂಡ ದುಡ್ಡು ಕೊಡಬೇಕಿಲ್ಲ. ಬಲವಂತದ ನಗು ಆಗಿದಿದ್ದರೆ ಅಷ್ಟೇ ಸಾಕು!. ನಗು ಎನ್ನುವುದು ನಮ್ಮ ಜೀವನದಲ್ಲಿ ಒಂದು ರೀತಿಯಲ್ಲಿ ಸಂಜೀವಿನಿಯಂತೆ ನಗು ಹಲವು ರೋಗಗಳಿಗೆ ಮದ್ದು.
“ನಗು” ಎಂಬ ಎರಡಕ್ಷರದಲ್ಲಿ ಎಲ್ಲವೂ ಅಡಗಿದೆ. ನಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಬಹುದು ಮತ್ತೆ ನಗದೆ ಏಕಾಂಗಿಯಾಗಿದ್ದು ಖಿನ್ನತೆಗೆ ಒಳಗಾಗಿ ಹಲವು ರೋಗಗಳನ್ನು ಕೂಡ ಅನೇಕರು ಪಡೆದಿರುವ ಉದಾಹರಣೆಯು ಇದೆ. ಅದರಿಂದಾಗಿ ಈ ನಗು ಎನ್ನುವ ಮಾಣಿಕ್ಯವನ್ನ ನಾವು ಸದಾ ನಮ್ಮ ಜೊತೆಯಲ್ಲಿ ಇಟ್ಟುಕೊಳ್ಳಲೇಬೇಕು. ನಾವು ಒಬ್ಬರೇ ನಗಬಹುದು ಅಥವಾ ನಾವು ಸ್ನೇಹಿತರ ಜೊತೆಯಲ್ಲಿ, ಕುಟುಂಬದವರ ಜೊತೆಯಲ್ಲಿ, ಕಚೇರಿಯವರ ಜೊತೆಯಲ್ಲಿ ಅಲ್ಲದೆ ಬೇರೆ ಸಂತೋಷಕೂಟಗಳಲ್ಲೂ ಕೂಡ ನಾವು ನಗುವನ್ನು ಕಾಣಬಹುದಾಗಿದೆ. ನಗು ನಮ್ಮ ಅಂತರಂಗದಲ್ಲಿ ಸುಪ್ತ ವಾಗೀ ಅಡಗಿರುವ ಗುಪ್ತಗಾಮಿನಿ ಇದ್ದಂತೆ ಅಡಗಿರುತ್ತದೆ. ನಾವು ನಗು ಬಳಸುತ್ತಾ ಬಂದರೆ ಅದಕ್ಕೆ ಸಂಬಂಧಿಸಿದ ಹಾರ್ಮೋನ್ ಗಳು ಉತ್ಪತ್ತಿಯಾಗುವುದರಿಂದ ಅದು ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿರುತ್ತದೆ.
ನಗು ಇತರರಿಗೆ ಪ್ರಚೋದನೆಯನ್ನು ಕೂಡ ನೀಡುತ್ತದೆ. ಅದರಿಂದಾಗಿ ನಾವು ನಗುವುದನ್ನು ನಮ್ಮ ಜೀವನದಲ್ಲಿ ಸದಾ ಅಳವಡಿಸಿಕೊಳ್ಳೋಣ. ನಾವು ನಮ್ಮ ಜೀವನದಲ್ಲಿ ದಿನಂಪ್ರತಿ ನಗದಿರುವುದಕ್ಕೆ ಅನೇಕ ಕಾರಣಗಳು ಇವೆ. ಅವು ಏನೇ ಇದ್ದರೂ ಕೂಡ ನಾವು ಯಾವಾಗಲೂ ನಮ್ಮ ಜೀವನದಲ್ಲಿ ಒತ್ತಡದ ಮುಖವನ್ನು ಹಾಕಿಕೊಳ್ಳಲೇಬಾರದು. ಎಲ್ಲವನ್ನು ಕೂಡ ಹಗುರವಾಗಿ ತೆಗೆದುಕೊಳ್ಳಬೇಕು. ಒಂದು ಮನೆ ಅಂದರೆ ಅನೇಕ ತಾಪತ್ರೆಯಗಳು ಬಂದೇ ಬರುತ್ತವೆ. ಅವುಗಳನ್ನೆಲ್ಲ ಮೆಟ್ಟಿನಿಂತು ಸವಾಲಾಗಿ ಸ್ವೀಕರಿಸಿ ಬಗೆಹರಿಸಿಕೊಳ್ಳಬೇಕು.
ಅನೇಕ ಮಹಿಳೆಯರು ಹೆಚ್ಚಾಗಿ ದುಬಾರಿ ಬೆಲೆಯ ಚಿನ್ನದ ಆಭರಣವನ್ನು ಹಾಕಿಕೊಂಡಿರುತ್ತಾರೆ ಆದರೆ ಅವರ ಮುಖದಲ್ಲಿ ನಗು ಇರುವುದೇ ಇಲ್ಲ. ಅದೇ ಬಡವರ ಬಳಿ ದುಬಾರಿ ಚಿನ್ನ ಇಲ್ಲದಿದ್ದರೂ ಕೂಡ ಅವರು ಸದಾ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ನಡುವೆ ನಗುವಿನ ಆಭರಣವನ್ನು ಸದಾ ಧರಿಸಿಕೊಂಡಿರುತ್ತಾರೆ. ನಾವು ನಕ್ಕರೆ ಕೇವಲ ಕೆಲವೇ ಕೆಲವು ಮಾಂಸ ಖಂಡಗಳ ಅವಶ್ಯಕತೆ ಸಾಕು ಅದೇ ರೀತಿನಗುವಿನ ವಿರುದ್ಧ ಪದವಾದ ಕೋಪ ಮಾಡಿಕೊಂಡರೆ ಇಡೀ ಇಡೀ ದೇಹವೇ ಒಂದು ರೀತಿಯಲ್ಲಿ ನಮಗೆ ಗೊತ್ತಾಗದ ರೀತಿಯಲ್ಲಿ ಬಲಿಯಾಗುತ್ತದೆ. ಇನ್ನೊಂದು ಮರೆತಿದ್ದೆ ಛಾಯಾಗ್ರಹಕರು ಒಂದು ಸುಂದರ ಫೋಟೋವನ್ನ ತೆಗೆಯಬೇಕಾದರೆ “ಸ್ಮೈಲ್ ಪ್ಲೀಸ್!” ಎಂದು ಹೇಳುತ್ತಾರೆ. ಏಕೆಂದರೆ ನಗುವಿನ ಜೊತೆಯಲ್ಲಿ ಫೋಟೋ ಇದ್ದರೆ ಅದು ಅವನ ವೃತ್ತಿಗೆ ಕೌಶಲ್ಯ ಹೆಚ್ಚಿಸುತ್ತದೆ. ಅದರಿಂದಾಗಿ ನಗು ಎಲ್ಲರಂಗಗಳಲ್ಲೂ ಕೂಡ ಅವಶ್ಯಕವಾಗಿ ಇದ್ದೇ ಇರುತ್ತದೆ. ಅದನ್ನು ನಾವು ಬಳಸಿಕೊಳ್ಳಬೇಕು ಅಷ್ಟೇ. ಈ ಸುಂದರ ಪ್ರಕೃತಿಯು ತನ್ನ ಇರುವಿಕೆಯನ್ನು ನಗುವಿನಿಂದಲೇ ಒಂದಲ್ಲ ಒಂದು ರೀತಿಯಲ್ಲಿ ದರ್ಶನ ಮಾಡಿಸುತ್ತದೆ. ಮರ ಗಿಡಗಳು ಪಾಣಿ ಪಕ್ಷಿಗಳು ಎಲ್ಲವುಗಳಿಂದಲೂ ನಮ್ಮ ಮನಸ್ಸನ್ನ ಪ್ರಫುಲ್ಲಗೊಳಿಸುತ್ತವೆ.
ನಗುತ್ತಾ, ನಗಿಸುತ್ತಾ ಬದುಕು ಸಾಗಿಸುವ ಸಂಕಲ್ಪ ಮಾಡುವ ಮುನ್ನ ವಿಶ್ವ ನಗು ದಿನದ ಇತಿಹಾಸ, ಮಹತ್ವ ತಿಳಿಯಿರಿ. ವಿಶ್ವ ನಗು ದಿನದ ಇತಿಹಾಸದ ಬಗ್ಗೆ ಹೇಳುವುದಾದರೆ,1988ರಲ್ಲಿ ಮೊದಲ ವಿಶ್ವ ನಗುವಿನ ದಿನವನ್ನು ಆಚರಿಸಲಾಯಿತು. ಜಾಗತಿಕ ನಗು, ಯೋಗ ಆಂದೋಲನದ ಹಿಂದಿನ ದಾರ್ಶನಿಕ ಡಾ. ಮದನ್ ಕಟಾರಿಯಾ ಮೊದಲ ಬಾರಿಗೆ ಮುಂಬೈನಲ್ಲಿ ವಿಶ್ವ ನಗು ದಿನವನ್ನು ಆಚರಿಸಿದರು. ನಂತರ ಇದು ಜಾಗತಿಕವಾಗೀ ಎಲ್ಲೆಡೆ ಪ್ರಚಾರವಾಯಿತು. ಈ ವಾರ್ಷಿಕ ಆಚರಣೆಯು ವಿಶ್ವ ಶಾಂತಿಗೆ ಸಂತೋಷದಾಯಕ ಅಭಿವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ದಿನವು ನಗುವಿನ ಮೂಲಕ ಜಾಗತಿಕ ಏಕತೆ ಮತ್ತು ಸ್ನೇಹವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ನಗು ಯೋಗ ಚಳುವಳಿಯ ಜನರ ಮುಖದಲ್ಲಿ ನಗುವಿನ ಅಲೆ ಎಬ್ಬಿಸುವ ಕೆಲಸ ಮಾಡುತ್ತಿದೆ. ಸದ್ಯ ಪ್ರಪಂಚದಾದ್ಯಂತ 115ಕ್ಕೂ ಹೆಚ್ಚು ದೇಶಗಳಲ್ಲಿ ನಗು ಕ್ಲಬ್ಗಳು ವ್ಯಾಪಿಸಿರುವ ಕಾರಣ ಈ ದಿನವು ಪ್ರಪಂಚದಾದ್ಯಂತ ಸಂತೋಷ ಮತ್ತು ಸೌಹಾರ್ದತೆಯನ್ನು ಹರಡುವ ವ್ಯಾಪಕವಾಗಿ ಆಚರಿಸಲಾಗುವ ಕಾರ್ಯಕ್ರಮವಾಗಿ ವಿಕಸನಗೊಂಡಿದೆ. ನಗುವಿಗೆ ಪ್ರಪಂಚದಾದ್ಯಂತ ಸಂತೋಷವನ್ನು ಹರಡಿಸುವ ಕೆಲಸ ಮಾಡುತ್ತದೆ ಎಂಬುದನ್ನು ಈ ದಿನ ಪ್ರತಿನಿಧಿಸುತ್ತದೆ.
ನಮ್ಮ ಬದುಕಿನಲ್ಲಿ ಅದೆಷ್ಟೇ ನೋವಿರಲಿ, ದುಃಖವಿರಲಿ ಮುಖದಲ್ಲಿ ಮೂಡುವ ಈ ಒಂದು ಸಣ್ಣ ನಗು ಈ ಎಲ್ಲವನ್ನೂ ಮರೆಸಿ, ಹೊಸ ಪ್ರಪಂಚವನ್ನೇ ನಮಗೆ ತೋರಿಸುತ್ತದೆ. ಮಗುವಿನ ಮುಗ್ದ ನಗು ಅದಕ್ಕೆ ಬೆಲೆ ಕಟ್ಟಲಾದೀತೇ?!. ಮಗುವಿನ ನಗುವಿನ ತರಹ ನಾವು ಕೂಡ ಎಷ್ಟೇ ದೊಡ್ಡವರಾದರೂ ಕೂಡ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
“ನಗು ಸಹಜ ಧರ್ಮ, ನಗಿಸುವುದು ಪರಧರ್ಮ”- ಎನ್ನುವ ನಾಣ್ಣುಡಿಯೇ ಇದೆ. “ನಗುನಗುತಾ ನಲಿ ನಲಿ ಏನೇ ಆಗಲಿ….”ಎಂಬ ಅರ್ಥಪೂರ್ಣ ಹಾಡು “ಬಂಗಾರದ ಮನುಷ್ಯ” ಚಿತ್ರದಲ್ಲಿ ಚಿತ್ರದ ಪ್ರಾರಂಭದಲ್ಲೇ ಡಾ ರಾಜಕುಮಾರ್ ರವರು ಹಾಡುತ್ತಾ ಪ್ರಕೃತಿಯ ಮುಂದೆ ಸಾಗುತ್ತಾರೆ. ಜೊತೆಗೆ ಹಾಡಿನ ಪೂರ್ತಿ ನಮ್ಮ ಬದುಕಿನ ವಿವಿಧ ಘಟ್ಟಗಳನ್ನು ಪರಿಚಯ ಮಾಡುತ್ತಾರೆ. ಇದೊಂದು ಮೌಲಿಕವಾದ ಹಾಡು. ಇಂತಹ ಅದೆಷ್ಟು ಹಾಡುಗಳು ಚಿತ್ರದಲ್ಲಿ ಅಡಗಿವೆ. ಅದನ್ನು ನಾವು ಕೇಳುತ್ತಲೂ ಕೂಡ ನಗುವನ್ನು ನಮ್ಮ ಮನದಲ್ಲಿ ರೂಢಿಸಿಕೊಳ್ಳಬಹುದು.
ಈ ನಗು ನೋವು ಮರೆಸುವ ಶಕ್ತಿ ಮಾತ್ರವಲ್ಲ, ಇದು ನಮ್ಮ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ವೃದ್ಧಿಗೂ ನಗು ಬೇಕೇ ಬೇಕು. ನಗು ಎನ್ನುವುದು ಸಂತೋಷವನ್ನು ಹರಡುತ್ತದೆ. ನೋವನ್ನು ಮರೆಸುತ್ತದೆ. ಹೀಲಿಂಗ್ ಪವರ್ (ಗುಣಪಡಿಸುವ ಶಕ್ತಿ) ಮತ್ತು ಏಕತೆಗಾಗಿ ನಗುವನ್ನು ಒಂದು ಸಾಧನವಾಗಿ ಉತ್ತೇಜಿಸಲು ಮೀಸಲಾಗಿರುವ ಜಾಗತಿಕ ಕಾರ್ಯಕ್ರಮವೂ ಇದೆ.
ಈ ನಗು ಸಂಸ್ಕೃತಿ, ಭಾಷೆ ಮತ್ತು ಧರ್ಮದ ಗಡಿಗಳನ್ನು ಮೀರಿರುವಂತದ್ದು. ದಿನಂಪ್ರತಿ ನಮ್ಮ ಮುಖದಲ್ಲಿ ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾ ಹೋದರೆ ಅದು ನಮ್ಮ ನಿರೀಕ್ಷೆಗೂ ಮೀರಿ ಸಂಪರ್ಕಗಳನ್ನು ಬೆಳೆಸುತ್ತದೆ ಮತ್ತು ಆತ್ಮಗಳನ್ನು ಉನ್ನತೀಕರಿಸುತ್ತದೆ. ನಾ ಮೊದಲೇ ಹೇಳಿದಂತೆ ಇದು ಒತ್ತಡವನ್ನು ಕಡಿಮೆ ಮಾಡುವುದು, ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುವುದು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸುವಂತಹ ನಗುವಿನ ಚಿಕಿತ್ಸಕ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ.ಪ್ರಪಂಚದಾದ್ಯಂತ ಜನರು ಒಗ್ಗೂಡಲು, ನಗುವನ್ನು ಹಂಚಿಕೊಳ್ಳಲು ಮತ್ತು ಸಕಾರಾತ್ಮಕತೆಯನ್ನು ಹರಡಲು, ಸಂತೋಷದಾಯಕ ಮತ್ತು ಆರೋಗ್ಯಕರ ಜಗತ್ತಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸುತ್ತದೆ. ಜೊತೆಗೆ ಒಂದು ವೇದಿಕೆಯೂ ಕೂಡ ಆಗಿದೆ.
ನಾವು ಯಾರಾದರೂ ನೆಂಟರ ಮನೆಗೆ ಹೋದಾಗ ಅಥವಾ ನಮ್ಮ ಮನೆಯಲ್ಲಿ ಹಿರಿಯರ ಬಳಿ ಆಶೀರ್ವಾದ ಪಡೆಯಲು ಹೋದಾಗ ನೀವು ನಗುನಗುತ್ತಾ ಇದೇ ರೀತಿ ನೂರ್ಕಾಲ ಬಾಳಿ ಎಂದು ಆಶೀರ್ವಾದ ಮಾಡುತ್ತಾರೆ. ಏನೇ ಇರಲಿ, ಹೇಗೆ ಇರಲಿ ನಗು ನಗುತ್ತಾ ಬಾಳಿ ಎನ್ನುವ ಅಂಶವನ್ನು ನಾವು ಎಲ್ಲೆಡೆ ಸಾರಬೇಕಾಗಿದೆ. ನಗು ಹಂಚುವ ಮೂಲಕ ಆರೋಗ್ಯ, ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳುವುದಾಗಿದೆ.
ನಗುವಿನ ಕುರಿತಾಗಿ ಅನೇಕ ಸಾಹಿತ್ಯ ಕೂಡ ಸೃಷ್ಟಿಯಾಗಿದೆ. ಈ ನಗು ಎಂಬ ಎರಡಕ್ಷರದ ಬಗ್ಗೆ ಅನೇಕ ಚುಟುಕು, ಕವನ, ಲೇಖನ ಮುಂತಾದ ಪ್ರಕಾರಗಳ ಮೂಲಕ ಅಡಗಿದೆ. ಅದರಲ್ಲೂ ಹಾಸ್ಯ ಲೇಖಕರು ಬಹು ಸಂಖ್ಯೆಯಲ್ಲಿ ನಮ್ಮೆದುರಿಗೆ ಇದ್ದಾರೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಹಾಸ್ಯ ಲೇಖಕರುಗಳನ್ನ ಕರೆದು ಅರ್ಧ ಗಂಟೆ ಅಥವಾ ಒಂದು ಗಂಟೆ ಮಾತನಾಡಿಸುತ್ತಾರೆ. ಅವರು ತಮ್ಮದೇ ಆದ ಧಾಟಿಯಲ್ಲಿ ನಮ್ಮನ್ನೆಲ್ಲ ಕ್ಷಣಮಾತ್ರದಲ್ಲಿ ನಗಿಸುತ್ತಾರೆ. ಜೊತೆಗೆ ಹಲವು ಮಾಹಿತಿಗಳನ್ನು ಕೂಡ ತಿಳಿಸುತ್ತಾರೆ.
ಆಕಾಶವಾಣಿಗಳಲ್ಲೂ ಕೂಡ ಅನೇಕ ಹಾಸ್ಯ ಭಾಷಣಗಳು ಕೂಡ ನಮ್ಮನ್ನು ನಗಿಸುತ್ತವೆ. ಅನೇಕ ಕೆಲವರಿಂದಲೇ ನಗೆ ಹನಿಗಳನ್ನ ಬರೆದು ಅದನ್ನ ಮತ್ತೆ ಆಕಾಶವಾಣಿಯ ಕಲಾವಿದರ ಧ್ವನಿಗಳಲ್ಲಿ ಪ್ರಸಾರ ಮಾಡುವುದು ಕೂಡ ಉಂಟು. ಜೊತೆಗೆ ಟಿವಿಗಳನ್ನು ಕೂಡ ಹಬ್ಬ ಹರಿದಿನಗಳಲ್ಲಿ ಹರಟೆ ಕಾರ್ಯಕ್ರಮದ ದಿನವಿಡಿ ಮನರಂಜನೆ ನೀಡುವ ಅನೇಕ ಶೀರ್ಷಿಕೆಗಳ ಮೂಲಕ ವಿಶೇಷ ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತವೆ. ಹಿಂದೆ ಮನೆ ಮಂದಿಯಲ್ಲ ಒಟ್ಟು ಕುಟುಂಬದಲ್ಲಿ ಒಟ್ಟಾಗಿ ನಲಿದು ಸಂಭ್ರಮಿಸುತಿದ್ದೆವು. ಜೊತೆಗೆ ಒಟ್ಟಾಗಿ ಪ್ರವಾಸ ಹೋಗುವುದು ಅಲ್ಲಿಯೂ ಕೂಡ ಸದಾ ನಗುನಗುತ್ತಾ ಒಂದೆರಡು ದಿನ ಕಾಲ ಕಳೆದು ಬರುತ್ತಿದ್ದೆವು. ಈಗ ಒಟ್ಟು ಕುಟುಂಬ ಕಾಣೆಯಾಗಿರುವುದರಿಂದ ನಗುವುದು ಕೂಡ ನಮ್ಮ ನಮ್ಮ ಮನದಲ್ಲಿ ಕಾಣೆಯಾಗಿದೆ!. ಯಾವುದೇ ಕೆಲಸ, ಒತ್ತಡ ಇರಲಿ ನಗುವುದು ನಮ್ಮಲ್ಲಿ ಸಹಜವಾಗಿ ಬಂದರೆ ಮಾತ್ರ ಅದು ಮಹತ್ವ ಪಡೆಯುತ್ತದೆ.
ನಾ ಮೊದಲೇ ಹೇಳಿದಂತೆ ತಜ್ಞರು ನಗಲು ತಿಳಿಸುವುದರಿಂದ ಅನಿಕ ಲಾಫಿಂಗ್ ಕ್ಲಬ್ ಗಳು ಕೂಡ ಇವೆ ಬೆಳಿಗ್ಗೆ ನಿಗದಿತ ಸಮಯದಲ್ಲಿ ಒಂದು ಕಡೆ ಎಲ್ಲರೂ ಸೇರಿ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಪ್ರತಿಯೊಂದು ಚಿತ್ರಗಳಲ್ಲೂ ಕೂಡ ಹಾಸ್ಯ ನಟರು ಇದ್ದೇ ಇರುತ್ತಾರೆ. ಅವರ ಕೆಲಸವೆಂದರೆ ಚಿತ್ರದ ಮಧ್ಯಮಧ್ಯ ಬಂದು ತಮ್ಮದೇ ಆದ ಶೈಲಿಯಲ್ಲಿ ಹಾಸ್ಯವನ್ನು ವ್ಯಕ್ತಪಡಿಸುವುದು. ಇದು ವೀಕ್ಷಕರಿಗೆ ಒಂದು ರೀತಿಯಲ್ಲಿ ಮನರಂಜನೆ ಆಗುತ್ತದೆ. ಜೊತೆಗೆ ಚಿತ್ರದ ಯಶಸ್ಸಿಗೂ ಕೂಡ ಅನೇಕ ಹಾಸ್ಯ ಪಾತ್ರಗಳು ಕೂಡ ಪ್ರಮುಖ ಕಾರಣವಾಗಿವೆ. ಅದರಿಂದಾಗಿ ನಗು ನಾಟಕಗಳಲ್ಲಿ, ಚಲನಚಿತ್ರಗಳಲ್ಲಿ ಇವುಗಳನ್ನು ಒಳಗೊಂಡಂತೆ ವಿಭಿನ್ನ ಸಾಹಿತ್ಯದ ಒಳಗಡೆ ನಗು ಅಡಗಿರುತ್ತದೆ. ಇವತ್ತಿನ ಯಾಂತ್ರಿಕ ಮತ್ತು ಒತ್ತಡದ ಜೀವನದಲ್ಲಿ ಈ ನಗು ಅತ್ಯಂತ ಪರಿಣಾಮಕಾರಿಯಾಗಿ ಪಾತ್ರವನ್ನು ವಹಿಸುತ್ತದೆ. ನಮಗೆ ದೇವರು ಮಾತನಾಡುವುದನ್ನು, ನಗುವುದನ್ನು ಕಲಿಸಿದ್ದಾನೆ. ಅದನ್ನ ಯಥೇಚ್ಛವಾಗಿ ಬಳಸದೆ ನಾವು ಒಂದು ರೀತಿಯಲ್ಲಿ ಮಡಿವಂತಿಕೆಯನ್ನು ಮಾಡುತ್ತಿದ್ದೇವೆ.
“ನಗುವುದೇ ಸ್ವರ್ಗ”! ಎನ್ನುವ ಮಾತು ಕೂಡ ಇದೆ. ನಗುನಗುತ ನಲಿಯಬೇಕು ಆದರೆ ವಿಡಂಬನೆಯ ನಗು ಮಾತ್ರ ನಮ್ಮ ಬಳಿ ಇರಬಾರದು. ಜೊತೆಗೆ ನಮ್ಮ ನಗು ಬೇರೆಯವರಿಗೆ ಮನ ನೋಯಿಸಬಾರದು. ನಾವು ರೀತಿಯಲ್ಲಿ ಬದುಕಬೇಕು. ಚಲನಚಿತ್ರಗಳಲ್ಲಿ ಅನೇಕ ನಗುವಿಗೆ ಸಂಬಂಧಿಸಿದ ಗೀತೆಗಳು ಸಹ ಅಡಗಿವೆ. ಅದರಿಂದಾಗಿ ನಗು ಸಹಜದ ಧರ್ಮವಾಗಬೇಕು. ನಕ್ಕು ನಕ್ಕು ಮನಸ್ಸಿನ ದುಗುಡವನ್ನೆಲ್ಲ ಕಡಿಮೆ ಮಾಡಿಕೊಳ್ಳಬೇಕು. ದುಡ್ಡುನ್ನು ನಾವು ಸಂಪಾದನೆ ಮಾಡಬಹುದು, ಅದರಿಂದ ಎಲ್ಲವನ್ನೂ ಸಹ ಕೊಂಡುಕೊಳ್ಳಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ದುಡ್ಡಿದ್ದರೂ ಕೂಡ ಅದು ತೃಣಕ್ಕೆ ಸಮಾನವಾಗಿ ಬಿಡುತ್ತದೆ. ಅದರಿಂದಾಗಿ ಈ ನಗು ಹಲವು ರೋಗಗಳಿಗೆ ರಾಮಬಾಣವಾಗಿರುವುದರಿಂದ ನಾವು ನಮ್ಮ ದೈನಂದಿನ ಕೆಲಸಗಳ ನಡುವೆ ಸ್ವಲ್ಪ ನಗುವುದನ್ನು, ಹಸನ್ಮುಖಿಯಾಗಿರುವುದನ್ನ ಆಗಿರುವುದನ್ನ ರೂಢಿಸಿಕೊಳ್ಳಬೇಕು.
ಬನ್ನಿ ನಾವು ದ್ವೇಷ, ಅಸೂಯೆ, ಎಲ್ಲವುಗಳಿಂದಲೂ ಕೂಡ ನಾವು ದೂರ ಸರಿದು ಸದಾ ನಗುನಗುತ್ತಾ ನಮ್ಮ ಎದುರುಗಡೆ ಇರುವ ಜನರನ್ನ ಕೂಡ ನಗಿಸಿ ನಾವು ನಕ್ಕು ನಮ್ಮ ಕ್ಷಣಿಕ ಬದುಕಿನ ಪಯಣವನ್ನ ಮುಂದುವರಿಸೋಣ. ಈ ಲೇಖನ ಓದಿದ ಇವತ್ತಿನಿಂದಾದರೂ ಕೂಡ ನಾವು ನಗುನಗುತ್ತಾ ಬಾಳೋಣ ಅದರ ಪ್ರಯೋಜನವನ್ನು ಪಡೆದುಕೊಳ್ಳೋಣ.
–ಕಾಳಿಹುಂಡಿ ಶಿವಕುಮಾರ್, ಮೈಸೂರು.
ನಗುವುನ ಲೇಖನ ಸಾಂದರ್ಬಿಕವಾಗಿ ಚೆನ್ನಾಗಿ ಮೂಡಿಬಂದಿದೆ.. ಸಾರ್
ನಿಮ್ಮ ಅನಿಸಿಕೆಗೆ, ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ.
ಸಂಭೋಚಿತ ಲೇಖನ ನಗುವಿನ ಅಗತ್ಯ, ಮಹತ್ವವನ್ನು ತಿಳಿಸುವಂತಿದೆ.
ಸುರಹೊನ್ನೆ ಬ್ಲಾಗ್, ನಿಮ್ಮ ಮೈಸೂರು ಸಾಹಿತ್ಯ ದಾಸೋಹ ಎಲ್ಲವೂ ಕೂಡ ನನ್ನ ಬರವಣಿಗೆಗೆ ಶಕ್ತಿ ತುಂಬಿವೆ ಮೇಡಂ
ಚೆನ್ನಾಗಿದೆ ಲೇಖನ
ಧನ್ಯವಾದಗಳು ಮೇಡಂ.
ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ.
ನಗುವಿನ ಮಹತ್ವವನ್ನು ನಗು ನಗುತ್ತಾ ಸಾರುವ ಸಕಾಲಿಕ ಲೇಖನ ಚೆನ್ನಾಗಿದೆ.