ಪುನರುತ್ಥಾನದ ಪಥದಲ್ಲಿ: ಹೆಜ್ಜೆ 26

Share Button


ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ 9: 
ವಿಯೆಟ್ನಾಂನಿಂದ ಕಾಂಬೋಡಿಯಾದ ಕಡೆಗೆ…

ಒಟ್ಟು 8 ದಿನಗಳ ವಿಯೆಟ್ನಾಂ ಪ್ರವಾಸ ಮುಗಿಸಿದ ನಂತರ, 23 ಸೆಪ್ಟೆಂಬರ್ 2024 ರಂದು ನಮಗೆ ಹೊ ಚಿ ಮಿನ್ಹ್ ಸಿಟಿಯಿಂದ ಪಕ್ಕದ ರಾಷ್ಟ್ರವಾದ ಕಾಂಬೋಡಿಯಾದ ಎರಡನೆಯ ದೊಡ್ಡ ನಗರವಾದ ‘ಸೀಮ್ ರೀಪ್’ ಗೆ ಹೋಗಬೇಕಿತ್ತು. ಆದಿನ ಮುಂಜಾನೆ ಬೇಗನೇ ಎದ್ದು, ನಮಗೆ ಎರಡು ದಿನ ಅಶ್ರಯ ಕೊಟ್ಟಿದ್ದ ಹೋಟೆಲ್ ‘ ಕ್ವೀನ್ ಆನ್’ ಗೆ ವಿದಾಯ ಹೇಳಿದೆವು. ಡ್ರೈವರ್ ‘ಫುಂಗ್’ ಎಂಬವರು ಮುಂಜಾನೆ 0430 ಗಂಟೆಗೆ ಬಂದು ನಮ್ಮನ್ನು ಹೊ ಚಿ ಮಿನ್ಹ್ ಸಿಟಿಯ Tan Son Nhat International Airport ಗೆ ಕರೆದೊಯ್ದರು. ಅವರಿಗೆ ಧನ್ಯವಾದ ತಿಳಿಸಿ, ವಿಮಾನ ನಿಲ್ದಾಣದ ಒಳಗೆ ಬಂದಾಯಿತು.

ಅತ್ತಿತ್ತ ನೋಡುತ್ತಾ ಕಾಲಕ್ಷೇಪ ಮಾಡುತ್ತಿದ್ದೆವು. ಸಾಕಷ್ಟು ಜನರು ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ನಮ್ಮ ವಿಮಾನದ ನಿಗದಿತ ಸಮಯ 0810 ಗಂಟೆ ಆಗಿತ್ತು. ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ , ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಸಂಬಂಧಿಸಿದ ಕೌಂಟರ್ ಗಳು ಕನಿಷ್ಟ ಮೂರುಗಂಟೆಯ ಮೊದಲು ಕಾರ್ಯ ನಿರ್ವಹಿಸಲಾರಂಭಿಸುತ್ತವೆ. ಆದರೆ ನಾವು ಪ್ರಯಾಣಿಸಲಿದ್ದ ‘ಕಾಂಬೋಡಿಯ-ಆಂಕರ್’ ವಿಮಾನಯಾನ ಸಂಸ್ಥೆಯ ಕೌಂಟರ್ 0600 ಗಂಟೆ ಅದರೂ ಕೌಂಟರ್ ತೆರೆಯದೇ ಇದ್ದುದು ಅಚ್ಚರಿ ಎನಿಸಿತು. ಸರದಿ ಸಾಲು ಇನ್ನಷ್ಟು ಬೆಳೆದ ಮೇಲೆ ಕೌಂಟರ್ ಅನ್ನು ತೆರೆದರು. ಆದೇನೋ ತಾಂತ್ರಿಕ ಸಮಸ್ಯೆ ಇತ್ತು ಎಂದು ಇನ್ನೊಂದು ಕೌಂಟರ್ ಗೆ ಹೋಗಲು ತಿಳಿಸಿದರು. ನಮ್ಮ ಪಾಸ್ ಪೋರ್ಟ್ , ಟಿಕೆಟ್ ತೋರಿಸಿದ ಮೇಲೆ ಕೌಂಟರ್ ನಲ್ಲಿ ಇದ್ದಾಕೆ ಬೋರ್ಡಿಂಗ್ ಪಾಸ್ ಕೊಟ್ಟರು. ಜೊತೆಗೆ ಅಲ್ಲಿ ಇರಿಸಲಾಗಿದ್ದ QR Code ಅನ್ನು ನಮ್ಮ ಮೊಬೈಲ್ ಫೋನ್ ನಲ್ಲಿ ಸ್ಕ್ಯಾನ್ ಮಾಡಿ, ‘ ‘ಪ್ಲೀಸ್ ಫಿಲ್ ಅಪ್ ದಿಸ್ ‘ ಅಂದರು. ಸರಿ, ಸ್ಕ್ಯಾನ್ ಮಾಡಿ ಗಮನಿಸಿದರೆ ಅದು ಸರಳ ಸ್ವವಿವರಗಳನ್ನು ಕೊಡಬೇಕಾದ ‘ಇಮಿಗ್ರೇಶನ್ ಡಿಕ್ಲಾರೇಶನ್’ ಎಂದು ಗೊತ್ತಾಯಿತು.

ಆನ್ ಲೈನ್ ನಲ್ಲಿ ಈ ರೀತಿ ವಿವರ ಕೊಡಬೇಕಾಗುತ್ತದೆ ನಮಗೆ ಟ್ರಾವೆಲ್ಸ್ ನವರು ಏನೂ ಹೇಳಿರಲಿಲ್ಲ. ನನ್ನ ಮೊಬೈಲ್ ನಲ್ಲಿ ಅಂತರ್ಜಾಲ ಸಂಪರ್ಕ ಸಿಗುತ್ತಿತ್ತು. ಹೈಮವತಿಯವರ ಮೊಬೈಲ್ ನಲ್ಲಿ , ಅದೇ ಏರ್ ಟೆಲ್ ಪ್ಯಾಕ್ ಇದ್ದರೂ ಸಂಪರ್ಕ ಸಿಗುತ್ತಿರಲಿಲ್ಲ. ಹಾಗಾದರೆ ಅಂತರ್ಜಾಲ ಸಂಪರ್ಕ ಸಿಗದಿದ್ದವರು ಏನು ಮಾಡಬೇಕು? ಸ್ಮಾರ್ಟ್ ಫೋನ್ ಇಲ್ಲದವರು ಅಥವಾ ಇದ್ದರೂ ನೆಟ್ ವರ್ಕ್ ಸಿಗದವರು, ನೆಟ್ ವರ್ಕ್ ಸಿಕ್ಕಿದರೂ ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಲು ಗೊತ್ತಾಗದವರು ಇರಬಹುದಲ್ಲವೇ? ಒಟ್ಟಿನಲ್ಲಿ ಇದಕ್ಕೆ ಬದಲಿ ವ್ಯವಸ್ಥೆ ಯಾಕಿಲ್ಲ ಅಂದುಕೊಂಡೆವು. ಸರಿ, ಒಬ್ಬರಿಗಾದರೂ ಸಿಗುತ್ತಿದೆಯಲ್ಲ, ಪ್ರಯತ್ನಿಸೋಣ ಎಂದು ಕ್ಯೂ.ಆರ್. ಕೋಡ್ ಅನ್ನು ಸ್ಕ್ಯಾನ್ ಮಾಡಿ ಆಗ ಕಾಣಿಸಿದ ಇಮ್ಮಿಗ್ರೇಶನ್ ಫಾರ್ಮ್ ನಲ್ಲಿ ನನ್ನ ಸ್ವವಿವರ ದಾಖಲಿಸುತ್ತಾ ಹೋದೆ. ಹೆಸರು, ಪಾಸ್ ಪೋರ್ಟ್ ಸಂಖ್ಯೆ, ಫೋನ್ ನಂಬರ್, ಯಾವ ದೇಶ, ಯಾಕಾಗಿ ಕಾಂಬೋಡಿಯಾಕ್ಕೆ ಹೋಗುತ್ತಿದ್ದೇವೆ, ನಿಷೇಧಿತ ವಸ್ತುಗಳನ್ನು ಒಯ್ಯುತ್ತಿಲ್ಲ, ಯಾವುದೇ ಸೋಂಕು ಜಾಡ್ಯದಿಂದ ಬಳಲುತ್ತಿಲ್ಲ ಇತ್ಯಾದಿ ಮಾಹಿತಿಗಳನ್ನು ಸೂಚಿಸುವ ಸರಳ ಅರ್ಜಿಯನ್ನು ಭರ್ತಿ ಮಾಡಿ ಆಯಿತು. ಆದರೆ ಅದನ್ನು ಪೂರ್ತಿಗೊಳಿಸಿದ ಮೇಲೆ ಸಲ್ಲಿಸುವುದು ಎಲ್ಲಿ, ಹೇಗೆ ಎಂದು ಅರ್ಥವಾಗಲಿಲ್ಲ. ಕಾರಣ, ಸಾಮಾನ್ಯವಾಗಿ ನಮ್ಮಲ್ಲಿ ಯಾವುದೇ ಅರ್ಜಿಯನ್ನು ಭರ್ತಿ ಮಾಡಿ ಆದ ನಂತರ ಪುಟದ ಬಲತುದಿಯಲ್ಲಿ ‘ ಸಬ್ ಮಿಟ್’ ,’ಫಿನಿಶ್’, ‘ ನೆಕ್ಸ್ಟ್ ‘, ‘ ಕಂಟಿನ್ಯೂ’ ಇತ್ಯಾದಿ ಏನಾದರೂ ಸೂಚನೆ ಇರುತ್ತದೆ. ಇಲ್ಲಿ ನನಗೆ ಎಷ್ಟು ಹುಡುಕಿದರೂ ಗೊತ್ತಾಗಲಿಲ್ಲ. ಇಬ್ಬರೂ ಒಂದೆಡೆ ಕುಳಿತು ಹಲವಾರು ಬಾರಿ ಟೈಪ್ ಮಾಡಿ ಅರ್ಜಿ ಸಲ್ಲಿಸಲು ವಿಫಲ ಪ್ರಯತ್ನ ಮಾಡುತ್ತಿದ್ದೆವು. ಕೊನೆಗೆ ಕೌಂಟರ್ ನಲ್ಲಿದ್ದಾಕೆಯ ಬಳಿ ಬಂದು ‘ವಿ ಆರ್ ಅನೇಬಲ್ ತೊ ಸಬ್ ಮಿಟ್ ದಿಸ್ ಫಾರ್ಮ್’ ಎಂದಾಗ, ‘ದಾಟ್ ಇಸ್ ಅ ರಿಕ್ವೈರ್ ಮೆಂಟ್ ‘ ಎಂದಳೇ ವಿನಾ, ಸಹಾಯ ಹಸ್ತ ಚಾಚಲಿಲ್ಲ.

ಏನು ಮಾಡಲಿ ಎಂದು ಆಲೋಚಿಸುತ್ತಾ ಇದ್ದಾಗ, ನಮ್ಮನ್ನು ಗಮನಿಸಿದ ಇನ್ನೊಂದು ಕೌಂಟರ್ ನಲ್ಲಿದ್ದ ಯುವತಿ ನಮ್ಮತ್ತ ಬಂದು ‘ ಯು ಗೋ ಫಾರ್ ಸೆಕ್ಯುರಿಟಿ ಚೆಕ್ ಅದರ್ ವೈಸ್ ಯು ವಿಲ್ ಮಿಸ್ ದ ಪ್ಲೈಟ್ , ಯು ಕ್ಯಾನ್ ಫಿಲ್ ದ ಫಾರ್ಮ್ ಲೇಟರ್’ ಅಂದಳು. ಆಗಲಿ ಎಂದು ಸ್ವಲ್ಪ ದೂರದಲ್ಲಿದ್ದ ಸೆಕ್ಯೂರಿಟಿ ಚೆಕ್ ಕೌಂಟರ್ ಗೆ ಹೋದರೆ ಅಲ್ಲಿದ್ದ ಜನರನ್ನು ನೋಡಿ ನಮಗೆ ತಲೆ ಸುತ್ತು ಬರುವಂತಾಯಿತು. ಇದ್ದ ಐದಾರು ಕೌಂಟರ್ ಗಳ ಮುಂದೆ, ಜನವೋ ಜನ. ಆಷಾಢ ಶುಕ್ರವಾರಗಳಂದು ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೆ ನಿಂತ ಭಕ್ತವೃಂದದ ಹಾಗೆ ಹಲವಾರು ಸುತ್ತು-ಬಳಸು ಇದ್ದ ಸರದಿ ಸಾಲುಗಳು. ಆ ಬಳಸು ಸಾಲು ನಿಧಾನಕ್ಕೆ ಚಲಿಸುತ್ತಿತ್ತು. ಸುರಕ್ಷತಾ ತಪಾಸಣೆಯ ಸಿಬ್ಬಂದಿಗಳು ಬೇಗ ಬೇಗ ತಮ್ಮ ಕಾರ್ಯ ನಿರ್ವಹಿಸುತ್ತಿದ್ದ ಹಾಗೆ ಅನಿಸಲಿಲ್ಲ. ವ್ಯಂಗ್ಯವಾಗಿ ಹೇಳುವುದಾದರೆ ‘ಗಂಜಿಯಲ್ಲಿ ಬಿದ್ದ ನೊಣದಂತೆ’ ವರ್ತಿಸಿ ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದರು. ಆಗಲೇ ಗಂಟೆ 0700 ಆಗಿತ್ತು. ಈ ಸಾಲು ಕರಗಿ ನಮ್ಮ ಸರದಿ ಬರುವಾಗ ವಿಮಾನ ನಮಗಾಗಿ ಕಾಯುವುದೇ? ಆತಂಕವಾಗತೊಡಗಿತು. ನಮ್ಮ ಹಾಗೆಯೇ ಆತಂಕದಲ್ಲಿದ್ದ , ನಮಗಿಂತಲೂ ಮೊದಲು ಪ್ರಯಾಣಿಸಬೇಕಿದ್ದ ಒಂದಿಬ್ಬರು, ತಮ್ಮ ವಿಮಾನ ಇನ್ನೇನು ಹೊರಡಲಿದೆ, ತಾನು ಸರದಿಯಲ್ಲಿ ಮೊದಲು ನಿಲ್ಲಬಹುದೇ ಎಂದು ಅನುಮತಿ ಪಡೆಯುತ್ತಾ , ಮುಂದೆ ಮುಂದೆ ಹೋಗಲು ಯಶಸ್ವಿಯಾದರು.

ಹೊ ಚಿ ಮಿನ್ಹ್ ಸಿಟಿ, ವಿಮಾನ ನಿಲ್ದಾಣದಲ್ಲಿ ಸರದಿ ಸಾಲು

ವಿಮಾನ ನಿಲ್ದಾಣದಲ್ಲಿ ಈ ಪರಿಯ ಜನದಟ್ಟಣೆ ಮತ್ತು ಅತಿ ನಿಧಾನಕ್ಕೆ ಕೆಲಸ ಮಾಡುವ ಸಿಬ್ಬಂದಿಗಳು ನನ್ನ ಗಮನಕ್ಕೆ ಬಂದುದು ಇದೇ ಮೊದಲು. ಸಾಮಾನ್ಯವಾಗಿ ವಿಮಾನ ಹೊರಡುವ ಮುಕ್ಕಾಲು ಗಂಟೆ ಮೊದಲು ಬೋರ್ಡಿಂಗ್ ಸುರುವಾಗುತ್ತದೆ. ಇನ್ನು ಇವರ ಪದ್ದತಿ ಹೇಗೋ, ಅಕಸ್ಮಾತ್ ನಮ್ಮದಲ್ಲದ ತಪ್ಪಿಗೆ ನಮಗೆ ವಿಮಾನ ತಪ್ಪಿ ಹೋದರೆ ಇನ್ನೇನು ಸಂಕಷ್ಟ ಕಾದಿರುತ್ತದೆಯೋ ಎಂದು ಮಾತನಾಡಿಕೊಂಡೆವು. ಸ್ಥಳೀಯ ಸಹಪ್ರಯಾಣಿಕರೊಬ್ಬರನ್ನು ಮಾತಿಗೆಳೆದು, ನಮ್ಮ ವಿಮಾನ 0810 ಗಂಟೆಗೆ ಇದೆ, ನಮಗೆ ಮಿಸ್ ಆಗಬಹುದೇ ಎಂದು ಕೇಳಿದೆ. ಆತ ‘ ಇಟ್ ಶು ಡ್ ಬಿ ಫೈನ್, ಆಫ್ಟರ್ ಸೆಕ್ಯೂರಿಟಿ ಚೆಕ್ , ದೇರ್ ಈಸ್ ನಾಟ್ ಮಚ್ ಡಿಸ್ಟಾನ್ಸ್ ಟು ರೀಚ್ ದ ಗೇಟ್ ‘ ಅಂದರು . ಈ ವಿಮಾನ ನಿಲ್ದಾಣದಲ್ಲಿ ಯಾವಾಗಲೂ ಇಷ್ಟು ಜನರಿರುತ್ತಾರೆಯೆ ಅಥವಾ ಈವತ್ತು ಏನಾದರೂ ಸಮಸ್ಯೆಯಾಗಿತ್ತೇ ? ಏನಿದ್ದರೂ, ಕೌಂಟರ್ ನ್ನು ಯಾಕೆ ಮುಂಚಿತವಾಗಿ ತೆರೆಯುವುದಿಲ್ಲ? ಇತ್ಯಾದಿ ಕೇಳಿದೆ. ಆತ ‘ದೇರ್ ಮಸ್ಟ್ ಬಿ ಅ ಪ್ರಾಬ್ಲೆಂ….ಡೋಂಟ್ ವರಿ ‘ ಎಂದು ಮುಗುಳ್ನಕ್ಕರು. ಅಂತೂ ನಮ್ಮ ಸರದಿ ಬಂದು, ಸೆಕ್ಯೂರಿಟಿ ಚೆಕ್ ಪೂರೈಸಿ, ನಮ್ಮ ವಿಮಾನ ಹೊರಡಲಿದ್ದ ಗೇಟ್ ಗೆ ಬಂದು ಉಸ್ಸಪ್ಪಾ ಎಂದು ಕುಳಿತೆವು.

ಕಾಲು ಗಂಟೆ ತಡವಾಗಿ ಹೊರಟ ವಿಮಾನ ಕಾಂಬೋಡಿಯಾದತ್ತ ಹಾರಿತು. ಆನ್ ಲೈನ್ ನಲ್ಲಿ ಒಂದು ಜುಬುಬಿ ಇಮಿಗ್ರೇಶನ್ ಅರ್ಜಿಯನ್ನು ಭರ್ತಿಮಾಡಿ ಕಳುಹಿಸಲಾಗದಿದ್ದರೆ ನನ್ನ ಇದುವರೆಗಿನ ಆನ್ ಲೈನ್ ಅನುಭವ ಹಾಗೂ ಜ್ಞಾನ ವ್ಯರ್ಥ ಎಂಬಂತೆ ಅನಿಸಿ, ಪದೇ ಪದೇ ಇಮ್ಮಿಗ್ರೇಶನ್ ಅರ್ಜಿಯನ್ನು ಪರಿಶೀಲಿಸುತ್ತಿದ್ದೆ. . ಕೆಲವು ವರ್ಷಗಳ ಮೊದಲು ವೃತ್ತಿ ಸಂಬಂಧಿತ ವಿದೇಶ ಪ್ರಯಾಣಗಳಲ್ಲಿ ಈ ರೀತಿಯ ‘ಇಮ್ಮಿಗ್ರೇಶನ್ ಡಿಕ್ಲಾರೇಶನ್’ ಫಾರ್ಮ್ ಅನ್ನು ಮುದ್ರಿತ ರೂಪದಲ್ಲಿ ಭರ್ತಿ ಮಾಡಿದ್ದೆ. ಈ ಪದ್ಧತಿ ಎಲ್ಲಾ ದೇಶಗಳಲ್ಲಿ ಇಲ್ಲ. ಅದನ್ನು ಮುದ್ರಿತ ಕಾಗದ ರೂಪದಲ್ಲಿ ಕೊಟ್ಟಿದ್ದರೆ ಎರಡೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು ಎಂದು ಗೊಣಗಿಕೊಂಡೆ. ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಸಿ , ಕಾಂಬೋಡಿಯಾ ದೇಶದ ಸೀಮ್ ರೀಪ್ ವಿಮಾನ ನಿಲ್ದಾಣ ತಲಪಿದೆವು. ಅಲ್ಲಿಯ ನಿರ್ಗಮನ ದ್ವಾರದಲ್ಲಿ ಅದೇ ಕ್ಯೂ.ಆರ್. ಕೋಡ್ ಅನ್ನು ದೊಡ್ಡ ಫಲಕದಂತೆ ಹಾಕಿ ಇರಿಸಿದ್ದರು. ಪುನ: ಸ್ಕ್ಯಾನ್ ಮಾಡಿ, ಅರ್ಜಿಯಲ್ಲಿ ಸ್ವವಿವರ ತುಂಬಿಸಿದೆ. ಹೆಚ್ಚಿನವರು ಬೇಗನೇ ಹೊರಟುಹೋದರು.

ನಮ್ಮಂತ ಕೆಲವೇ ವಿದೇಶಿ ಪ್ರಯಾಣಿಕರು ಈ ಅರ್ಜಿ ತುಂಬಿಸಿ, ವೀಸಾ ಪಡೆಯಲು 30 ಡಾಲರ್ ಕಟ್ಟಬೇಕಿತ್ತು. ನಾನು ಅಲ್ಲಿದ್ದ ಸಿಬ್ಬಂದಿ ಬಳಿ . ‘ ಸರ್, ಐ ಹ್ಯಾವ್ ಫಿಲ್ಲೆಡ್ ಅಪ್ ದಿಸ್, ಬಟ್ ಐ ಯಾಮ್ ನಾಟ್ ಗೆಟ್ಟಿಂಗ್ ಹೌ ಟು ಸಬ್ಮಿಟ್ ‘ ಅಂದೆ. ಅವರು ನಿರ್ಲಿಪ್ತ ನಯನಗಳಿಂದ ನನ್ನ ಮೊಬೈಲ್ ನಲ್ಲಿದ್ದ ಅರ್ಜಿಯತ್ತ ಒಮ್ಮೆ ಕಣ್ಣು ಹಾಯಿಸಿ, ಕೂಡಲೇ ಪರದೆಯ ಬಲತುದಿಯಲ್ಲಿ ಮೇಲ್ಭಾಗಕ್ಕೆ ಸರಿಸಿ, ತಾವೇ ಅಲ್ಲಿದ್ದ ‘ ನೆಕ್ಸ್ಟ್’ ಬಟನ್ ಒತ್ತಿದರು. ಅಷ್ಟೇ… ಕೆಲಸ ಆಯಿತು!. ‘ ಇಷ್ಟೇನಾ…. ಅಂತ ನನಗೆ ನನ್ನ ಆತ್ಮಾಭಿಮಾನ ತಿವಿಯಿತು! ‘ಯು ಹ್ಯಾವ್ ಸಕ್ಸಸ್ ಫುಲಿ ಕಂಪ್ಲೀಟೇಡ್ ‘ ಎಂಬ ಸೂಚನೆ ಬಂತು. ಇನ್ನು ಕೌಂಟರ್ ಗೆ ಹೋಗಿ ದುಡ್ಡು ಕಟ್ಟಿದರಾಯಿತು. ಇಷ್ಟು ಸುಲಭದ ಕೆಲಸಕ್ಕೆ ಎಷ್ಟು ಬಾರಿ ಪೆದ್ದುಪದ್ದಾಗಿ ಪ್ರಯತ್ನಿಸಿದೆ ಎನಿಸಿ ನಗು ಬಂತು. ಕಾರಣವಿಷ್ಟೇ, ನಮ್ಮ ದೇಶದಲ್ಲಿ, ಯಾವುದಾದರೂ ಫಾರ್ಮ ನಲ್ಲಿ ಸಹಿ, ಮುಕ್ತಾಯ, ಮುಂದಿನ ಪುಟ ಇತ್ಯಾದಿಗಳನ್ನು ಪುಟದ ಕೆಳಭಾಗದ ಬಲಮೂಲೆಯಲ್ಲಿ ನೋಡಿ ಅಭ್ಯಾಸ. ಪುಟದ ಮೇಲ್ಭಾಗದಲ್ಲಿಯೂ ‘ಮುಂದಿನ ಪುಟಕ್ಕೆ’ ಎಂಬ ಸೂಚನೆ ಇರಬಹುದು ಎಂಬ ಪರಿಕಲ್ಪನೆ ಇಲ್ಲ. ಯಾವುದೇ ಕೆಲಸವನ್ನು ಒಂದು ವಿಧದಲ್ಲಿ ಮಾಡಿ ಅಭ್ಯಾಸ ಆದ ಮೇಲೆ ಬೇರೆ ತರಹವೂ ಇರಬಹುದು ಎಂಬ ಬಗ್ಗೆ ಮಿದುಳು ಆಲೋಚಿಸಿದಂತೆ ಬ್ರೈನ್ ಮ್ಯಾಪಿಂಗ್ ಆಗಿರುತ್ತದೆ!

ಮುಂದಿನದು ಸುಸೂತ್ರ ಆಯಿತು. ಆಮೇಲೆ ಹೈಮವತಿಯವರ ಬಗ್ಗೆ ವಿವರವನ್ನೂ ದಾಖಲಿಸಿದೆವು. ಇನ್ನೊಂದು ಕೌಂಟರ್ ಗೆ ಹೋಗಿ 30 ಡಾಲರ್ ವೀಸಾ ಶುಲ್ಕ ಕಟ್ಟಿದೆವು. ಅವರು ಕೊಟ್ಟ ರಸೀತಿ ಪಡೇದುಕೊಂಡು ಮತ್ತೊಂದು ಕೌಂಟರ್ ನಲ್ಲಿ ನಮ್ಮ ಬಯೋಮೆಟ್ರಿಕ್ ಮಾಹಿತಿ ದಾಖಲಾಯಿತು. ಮತ್ತೊದು ಕೌಂಟರ್ ನಲ್ಲಿದ್ದವರು ನಮ್ಮ ಪಾಸ್ ಪೋರ್ಟ್ ನಲ್ಲಿ ವೀಸಾದ ಸ್ಟಾಂಪ್ ಒತ್ತಿದರು. ಇಲ್ಲಿಗೆ ಕಾಂಬೋಡಿಯಾ ಪ್ರವೇಶಿಸಲು ನಮಗೆ ಅಧಿಕೃತ ಅಪ್ಪಣೆ ದೊರೆಯಿತು. ಸೀಮ್ ರೀಪ್ ವಿಮಾನ ನಿಲ್ದಾಣ ಬಹಳ ದೊಡ್ಡದಾಗಿತ್ತು . ಬೆರಳೆಣಿಕೆಯ ಯೂನಿ ಫಾರ್ಮ್ ತೊಟ್ಟ ಸಿಬ್ಬಂದಿ ಮಾತ್ರ ಇದ್ದರು. ನಮ್ಮ ಜೊತೆಯಲ್ಲಿದ್ದ ಪ್ರಯಾಣಿಕರು ಹೆಚ್ಚಿನವರು ಹೊರಟು ಹೋಗಿ, ವಿಮಾನ ನಿಲ್ದಾಣ ಖಾಲಿ ಹೊಡೆಯುತ್ತಿತ್ತು. ಲಗೇಜು ಸಂಗ್ರಹ ಮಾಡುವ ಬೆಲ್ಟ್ ತಿರುಗುವುದನ್ನು ನಿಲ್ಲಿಸಿತ್ತು. ನಿಧಾನವಾಗಿ ಬಂದ ನಮ್ಮಂತ ನಾಲ್ಕೈದು ವಿದೇಶಿ ಪ್ರಯಾಣಿಗರ ಲಗೇಜುಗಳನ್ನು , ಬೆಲ್ಟ್ ನ ಪಕ್ಕದಲ್ಲಿ ಯಾರೋ ಸಿಬ್ಬಂದಿ ತೆಗೆದಿರಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇಷ್ಟು ಕಡಿಮೆ ಜನರೇ? ಇದೂ ಅಚ್ಚರಿಯ ವಿಷಯವಾಯಿತು! ಒಟ್ಟಿನಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ಕಿಕ್ಕಿರಿದ ‘ಹೊ ಚಿ ಮಿನ್ಹ್ ಸಿಟಿ’ ವಿಮಾನ ನಿಲ್ದಾಣ ಹಾಗೂ ಬಿಕೋ ಎನ್ನುವ ‘ಸೀಮ್ ರೀಪ್’ ವಿಮಾನ ನಿಲ್ದಾಣ ನೋಡಿದ ವಿಚಿತ್ರ ಅನುಭವ ನಮ್ಮದಾಯಿತು.

‘ಸೀಮ್ ರೀಪ್’ ವಿಮಾನ ನಿಲ್ದಾಣ, ಕಾಂಬೋಡಿಯ

ನಮ್ಮ ಲಗೇಜನ್ನು ತೆಗೆದುಕೊಂಡು, ಅಲ್ಲಿದ್ದ ನಗದು ವಿನಿಮಯ ಕೇಂದ್ರದಲ್ಲಿ ಕೆಲವು ಅಮೇರಿಕನ್ ಡಾಲರ್ ಕೊಟ್ಟು ಕಾಂಬೋಡಿಯನ್ ರೀಲ್ ಅನ್ನು ಪಡೆದುಕೊಂಡೆವು. ಭಾರತದ ಒಂದು ರೂಪಾಯಿಗೆ 47 ಕಾಂಬೋಡಿಯನ್ ರೀಲ್ ಸಿಗುತ್ತದೆ. ಹೊರಗೆ ಬಂದಾಗ, ಸ್ಥಳೀಯ ಮಾರ್ಗದರ್ಶಿಯೊಬ್ಬರು ನಮ್ಮ ಹೆಸರಿನ ಪ್ಲೇ ಕಾರ್ಡ್ ಹಿಡಿದುಕೊಂಡು ನಿಂತಿರುವುದು ಕಾಣಿಸಿತು. ಎಳೆಯ ತರುಣನಾದ ಆತನ ಹೆಸರು ‘ಸುವಾಂಗ್ ಸೋಕ್ ಚಮ್ನನ್’. ನಮ್ಮನ್ನು ಕಾರಿನ ಬಳಿಗೆ ಕರೆದೊಯ್ದ. ಅದು ಆರು ಮಂದಿ ಕೂರಬಹುದಾಗಿದ್ದ ‘ಇನ್ನೋವಾ’ದಂತಹ ದೊಡ್ಡ ಕಾರು. ನಮಗಿಬ್ಬರಿಗೆ ಚಿಕ್ಕ ಕಾರು ಸಾಕಿತ್ತು ಅಂದೆವು. ಕೂಡಲೇ ಆತ ನೀವು ನಾಲ್ಕು ಜನರಿಗಾಗಿ ಬುಕ್ ಮಾಡಿದ್ದೀರಲ್ಲವೇ ಅಂದ. ನಾವು ಆರಂಭದಲ್ಲಿ ನಾಲ್ಕು ಜನರು ಬರುವವರಿದ್ದೆವು. ಅನಿವಾರ್ಯ ಕಾರಣಗಳಿಂದಾಗಿ ಇಬ್ಬರು ಕೊನೆಯ ಕ್ಷಣದಲ್ಲಿ ಭಾರತದಿಂದಲೇ ಹೊರಟಿರಲಿಲ್ಲ. ಈ ಬಗ್ಗೆ ಮಾಹಿತಿಯನ್ನು ಹತ್ತು ದಿನಗಳ ಮೊದಲೇ ಟ್ರಾವೆಲ್ ಏಜೆನ್ಸಿಗೆ ಕೊಡಲಾಗಿತ್ತು. ಆದರೂ, ಕಾರು ಬುಕಿಂಗ್ ಅನ್ನು ಬದಲಾಯಿಸಲು ಸಾಧ್ಯವಿಲ್ಲವೇ? ಇಬ್ಬರಿಗಾಗಿ ಆರು ಜನ ಕೂರಬಹುದಾದ ಕಾರನ್ನು ಇನ್ನೂ ಕಾಯ್ದಿರಿಸಿದ್ದ ಇವರ ಬಿಗಿ ನಿಲುವು , ಆ ಮೂಲಕ ಹೆಚ್ಚು ಬಾಡಿಗೆಯನ್ನು ಪಡೆಯಬಹುದಾದ ತಂತ್ರಗಾರಿಕೆ ಅರ್ಥವಾಯಿತು. ಅಂತೂ, ಇಬ್ಬರಿಗಾಗಿ ‘ಹಡಗಿನಂತಹ’ ಕಾರು ಮುಂದಿನ ಮೂರು ದಿನಗಳ ಕಾಲ ನಮ್ಮ ಜೊತೆಯಾಗಿತ್ತು. ವಿಮಾನ ನಿಲ್ದಾಣದಿಂದ, ಕೇವಲ 3-4 ಕಿಮೀ ದೂರ ಬರುವಷ್ಟರಲ್ಲಿ, ತೀರಾ ಹಳ್ಳಿಯ ನೋಟವಿತ್ತು. ಅಲ್ಲಲ್ಲಿ ಮರಗೆಣಸಿನ ಹೊಲಗಳು, ಭತ್ತದ ಗದ್ದೆಗಳು, ನಡುವೆ ಹಳ್ಳಿಗಾಡಿನ ಮನೆಗಳು, ಹುಲ್ಲು ಮೇಯುವ ಹಸುಗಳು, ನಮ್ಮೂರ ಹಳ್ಳಿಯ ರಸ್ತೆಗಳಂತೆ ಕಿರಿದಾಗಿದ್ದ ಮುಖ್ಯರಸ್ತೆಗಳು… ಹೀಗೆ.

ನಮಗೆ ಕಾಂಬೋಡಿಯಾದಲ್ಲಿ ‘ ಪಿಯರಿ ಹೋಟೆಲ್ ಆಂಡ್ ಸ್ಪಾ’ ಎಂಬಲ್ಲಿ ರೂಮ್ ಕಾದಿರಿಸಿದ್ದರು. ಸುಮಾರು ಒಂದು ಗಂಟೆ ಪ್ರಯಾಣಿಸಿದ ಮೇಲೆ ಹೋಟೆಲ್ ಪಿರಯಿ ತಲಪಿದೆವು. ಮಾರ್ಗದರ್ಶಿ ನಮ್ಮನ್ನು ಹೋಟೆಲ್ ನಲ್ಲಿ ಬಿಟ್ಟು, ಇನ್ನು ಉಳಿದ ಅರ್ಧ ದಿನ ನಿಮ್ಮ ಆಸಕ್ತಿಗೆ ತಕ್ಕಂತೆ ಇರಬಹುದು. ಇಲ್ಲಿ ಆಸುಪಾಸಿನಲ್ಲಿ ಪಗೋಡಾ ಇದೆ, ಮಾರುಕಟ್ಟೆ ಇದೆ, ನಿಮ್ಮ ಆಸಕ್ತಿಗೆ ತಕ್ಕಂತೆ ಸುತ್ತಾಡಿ ಅಥವಾ ವಿಶ್ರಮಿಸಿ, ಊಟಕ್ಕೆ ಈ ಕಡೆ ಕೆಲವು ಭಾರತೀಯ ರೆಸ್ಟಾರೆಂಟ್ ಗಳಿವೆ , ನಡೇದುಕೊಂಡು ಹೋಗಬಹುದು. ನನ್ನ ಸಂಬರ್ ಇಟ್ಟುಕೊಳ್ಳಿ, ಸಹಾಯ ಬೇಕಿದ್ದರೆ ಫೋನ್ ಮಾಡಿ , ನಿಮ್ಮನ್ನು ನಾಳೆ ಭೇಟಿ ಮಾಡುವೆ ಎಂದು ಹೇಳಿ ಹೊರಟ. ಹೋಟೆಲ್ ಚೆನ್ನಾಗಿತ್ತು. ಲಲನೆಯೊಬ್ಬಳು ನಿಮಗೆ ಬ್ಯೂಟಿ ಪಾರ್ಲರ್ , ಸ್ಪಾ, ಮಸಾಜ್ ಇತ್ಯಾದಿ ಸೇವೆ ಬೇಕೆ ಎಂದಳು. ಬೇಡ ಎಂದು ರೂಮ್ ಸೇರಿಕೊಂಡೆವು. ನಮಗೆ ಬೆಳಗಿನ ಉಪಾಹಾರ ಇನ್ನೂ ಆಗಿರದಿದ್ದ ಕಾರಣ, ಬ್ಯಾಗ್ ಗಳನ್ನು ರೂಮ್ ನಲ್ಲಿ ಇರಿಸಿ, ಮಾರ್ಗದರ್ಶಿ ತೋರಿಸಿದ ರಸ್ತೆಯಲ್ಲಿ ರೆಸ್ಟಾರೆಂಟ್ ಹುಡುಕಿಕೊಂಡು ಹೊರಟೆವು. ಹೋಟೆಲ್ ನ ಎದುರು ಸಣ್ಣ ನದಿ ನದಿ ಹರಿಯುತ್ತಿತ್ತು. ಸೇತುವೆ ದಾಟಿದ ಮೇಲೆ ಒಂದು ಸೊಗಸಾದ ಪಗೋಡಾ ಕಾಣಸಿಕ್ಕಿತು. ಅದರ ಸಮೀಪದಲ್ಲಿ ‘ರಾಯನ್ ಇನ್’ ಎಂಬ ಹೆಸರಿನ ಭಾರತೀಯ ರೆಸ್ಟಾರೆಂಟ್ ಕಾಣಿಸಿತು. ಅಲ್ಲಿ ದೋಸೆ ತಿಂದೆವು .ಚೆನ್ನಾಗಿತ್ತು.

ಪುನ: ನಡೆದುಕೊಂಡು ಹೋಟೆಲ್ ಗೆ ಬರುವಾಗ, ಕೆಲವು ಸೈಕಲ್ ರಿಕ್ಷಾ ಚಾಲಕರು ನಿಮ್ಮನ್ನು ಮಾರ್ಕೆಟ್ ಗೆ ಕರೆದೊಯ್ಯಲೇ ಎಂದು ದುಂಬಾಲು ಬಿದ್ದರು. ಬೇಡ ಅಂದೆವು. ಆಮೇಲೆ ಸ್ವಲ್ಪ ವಿಶ್ರಾಂತಿ. ಮಾರ್ಕೆಟ್ , ಸ್ಪಾ. ಮಸಾಜ್ ಇತ್ಯಾದಿ ನಮಗೆ ಬೇಕಿರಲಿಲ್ಲ. ಸಂಜೆವರೆಗೆ ಸುಮ್ಮನೆ ಇರುವ ಬದಲು, ಅರ್ಧ ದಿನದ ಏನಾದರೂ ಲಘುಪ್ರಯಾಣ ಅಥವಾ ಸಾಂಸ್ಕೃತಿಕ ಚಟುವಟಿಕೆಯನ್ನು ತೋರಿಸಬಹುದಾಗಿತ್ತು ಅಂದುಕೊಂಡೆವು. ಬೆಂಗಳೂರಿನ ಟ್ರಾವೆಲ್ ಫಾರ್ ಯು ಸಂಸ್ಥೆಯವರಿಗೆ ಫೋನ್ ಮಾಡಿ , ವಿಮಾನ ನಿಲ್ದಾಣದಲ್ಲಿ ನಮಗಾದ ಗೊಂದಲದ ಬಗ್ಗೆ ಹೇಳಿಕೊಂಡೆವು. ಅವರು ಹಿಂದೆ ಕಾಂಬೋಡಿಯಾಕ್ಕೆ ಬಂದಿದ್ದಾಗ, ಆನ್ ಲೈನ್ ಫಾರ್ಮ್ ಭರ್ತಿ ಮಾಡಬೇಕಾದ ಅವಶ್ಯಕತೆ ಇದ್ದಿರಲಿಲ್ಲವಂತೆ. ಬಹುಶ: ಇತ್ತೀಚೆಗೆ ಶುರುಮಾಡಿರಬಹುದು, ನೀವು ಹೇಳಿದುದು ಒಳ್ಳೆಯದಾಯಿತು, ಬೇರೆ ಪ್ರವಾಸಿಗರಿಗೆ ತಿಳಿಸಲು ಅನುಕೂಲವಾಗುವುದು ಎಂದರು. ಹಾಗೆಯೇ, ತಲಪಿದ ದಿನ ಯಾವುದಾದರೂ ಅರ್ಧ ದಿನದ ಚಟುವಟಿಕೆಯನ್ನು ಆಯೋಜಿಸಬಹುದಾಗಿತ್ತು ಎಂದೆವು.

ಒಟ್ಟಿನಲ್ಲಿ, ವಿಯೆಟ್ನಾಂಗೆ ಹೋಲಿಸಿದರೆ ಈ ದೇಶ ಎಲ್ಲಾ ವಿಚಾರಗಳಲ್ಲೂ ಇನ್ನೂ ಬಹಳಷ್ಟು ಪ್ರಗತಿ ಹೊಂದಬೇಕಿದೆ ಎಂಬ ಮೊದಲ ಅಭಿಪ್ರಾಯವನ್ನು ಹೊಂದಿದೆವು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42484

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

7 Responses

  1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು ಇವತ್ತಿನ ಪ್ರವಾಸ ಕಥನ …ತಮ್ಮ ಅನುಭವದ ಜೊತೆಗೆ ಹಲವಾರು ಮಾಹಿತಿಗಳನ್ನು ಕೊಡುವ..ಸಂಗತಿಗಳ ವಿವರಣೆ ಚೆನ್ನಾಗಿ ಬಂದಿದೆ..ಉಪಯುಕ್ತ ಮಾಹಿತಿ ಎಂದೆನಿಸಿತು..ಧನ್ಯವಾದಗಳು ಗೆಳತಿ ಹೇಮಾ ಚಿತ್ರ ಗಳು ಪೂರಕವಾಗಿವೆ..

  2. ಪದ್ಮಾ ಆನಂದ್ says:

    ಇದುವರೆವಿಗೂ ಏನೂ ಜಾಸ್ತಿ ತೊಂದರೆಯಿಲ್ಲದೆ ನಡೆದ ನಿಮ್ಮ ಪ್ರವಾಸದಲ್ಲಿ ಉಂಟಾದ ಗಲಿಬಿಲಿಗಳು ನಿವಾರಣೆಯಾದದ್ದು ನೆಮ್ಮದಿಯೆನಿಸಿತು.

  3. S.sudha says:

    ನಿಜ. ಕ್ಯಾಂಬೊಡಿಯಾ ಅಷ್ಟು ಮುಂದುವರೆದಿಲ್ಲ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ. ಅದಕ್ಕೆ spa, ಮಸಾಜ್ ಗಳು ಜಾಸ್ತಿ.

  4. ನಯನ ಬಜಕೂಡ್ಲು says:

    Beautiful

  5. Hema Mala says:

    ಪ್ರವಾಸಕಥನವನ್ನು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  6. ಶಂಕರಿ ಶರ್ಮ says:

    ಪಕ್ಕದ ದೇಶ ಕಾಂಬೋಡಿಯಾಕ್ಕೆ ಪಯಣದ ಸಿದ್ಧತೆ, ಹೊ.ಚಿ. ಮಿನ್ಸ್ ಸಿಟಿ ವಿಮಾನ ನಿಲ್ದಾಣದಲ್ಲಿ ಇಮ್ಮಿಗ್ರೇಶನ್ ಅರ್ಜಿ ಸಲ್ಲಿಸುವಲ್ಲಿ ಆದ ತೊಂದರೆ, ಅದರಿಂದ ಅನುಭವಿಸಿದ ಆತಂಕದ ಬಳಿಕ ನಿರಾತಂಕ, ವಿಚಿತ್ರ ಅನುಭವ ನೀಡಿದ ಬಿಕೋ ಎನ್ನುವ ಸೀಮ್ ರೀಪ್ ವಿಮಾನ ನಿಲ್ದಾಣ, ಕೇವಲ ಇಬ್ಬರಿಗಾಗಿ ಒದಗಿಬಂದ ಹಡಗಿನಂತಹ ಕಾರು… ಚಿತ್ರಣ ಕಣ್ಮುಂದೆ ಬಂತು!
    ಅತ್ಯಂತ ಸಹಜ, ಸುಂದರ ನಿರೂಪಣೆಯ ಪ್ರವಾಸ ಲೇಖನ ಖುಷಿ ಕೊಟ್ಟಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: