ಸಾವು ಸಂಭ್ರಮವಾದಾಗ!.?

Share Button
Ku.Sa. Madhusudan Nair

ಕು.ಸ.ಮಧುಸೂದನ್ ನಾಯರ್

ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ  ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ  ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ.

ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆದೇಶದ ಜನತೆ  ತಡರಾತ್ರಿಯ ವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ  ಗೆದ್ದಂತೆ  ವಿಜಯೋತ್ಸವ ಆಚರಿಸಿದರು. ಸರಿಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನ ಸಂತಸ ಹಂಚಿಕೊಂಡರು. ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ-ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ,ರಾಜನಾಗಿರಲಿ-ರಾಜದ್ರೋಹಿಯಾಗಿರಲಿ)  ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ  ಅಮಾನವೀಯವಾದ್ದು ಬೇರೋಂದಿದೆ ಅಂತನ್ನಿಸುವುದಿಲ್ಲ.

ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ, ಭಯೋತ್ಪಾದಕತೆಯ  ಬೀಜಗಳನ್ನು ಭೂಮಿಯೆಲ್ಲೆಡೆ  ಬಿತ್ತುತ್ತಿದ್ದ ಲಾಡೆನ್ನಿನ ಸಾವನ್ನು ನಾವು ಹೇಗೆ ಸ್ವೀಕರಿಸಬಹುದಿತ್ತು?

” ಅಬ್ಬಾ! ಇನ್ನು ಮೇಲಾದರು ಭಯೋತ್ಪಾದಕನೊಬ್ಬನ ಹಾಳಿ ನಿಂತು,  ಜಗತ್ತಿನಲ್ಲಿ ಶಾಂತಿ ನೆಲೆಸಲಿ”  ಎಂದು ಹಾರೈಸುತ್ತ ನಿರಾಳತೆಯ ನಿಟ್ಟುಸಿರು ಬಿಡಬಹುದಿತ್ತು.

Where is peace

ಇಲ್ಲಿ ಇನ್ನೊಂದು ವಿಷಯದತ್ತ ನೋಡೋಣ: ಹಾಗೆ ನೋಡಿದರೆ ಅಮೇರಿಕಾಕ್ಕೆ ಈ ಹತ್ಯೆ ವಿಷಯದಲ್ಲಿ ಸಂತೋಷ ಪಡುವ ಯಾವ ಅಧಿಕಾರವೂ ಇರಲಿಲ್ಲ!   ಯಾಕೆಂದರೆ: ಆಧುನಿಕ ಜಗತ್ತಿನ ಮೊದಲ ಮತ್ತು ಅತಿ ದೊಡ್ಡ ಭಯೋತ್ಪಾದಕನೆಂದರೆ ಅದು ಸ್ವತ: ಅಮೇರಿಕಾ ಆಗಿದೆ.

ಎರಡನೇ ಮಹಾ ಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಜಪಾನಿನ ಹಿರೋಷಿಮಾ ನಾಗಸಾಕಿಗಳ ಮೇಲೆ ಅಣು ಬಾಂಬುಗಳನ್ನು ಹಾಕಿ ಮಿಲಿಯನ್ ಗಟ್ಟಲೆ ಮುಗ್ದ ಜನರನ್ನು ಕ್ಷಣಾರ್ದದಲ್ಲಿ ಇನ್ನಿಲ್ಲವಾಗಿಸಿದ ಅಮೇರಿಕಾದ ಕೃತ್ಯ ಭಯೋತ್ಪಾದಕತೆಯಲ್ಲದಿದ್ದರೆ ಇನ್ಯಾವುದು? ಅರವತ್ತರ ದಶಕದಲ್ಲಿ ಅದು ವಿಯೆಟ್ನಾಂನಂತ  ಪುಟ್ಟ ರಾಷ್ಟ್ರದ ಮೇಲೆ ನಡೆಸಿದ ದೌರ್ಜನ್ಯ, ಪ್ರಜಾಪ್ರಭುತ್ವ ಸ್ಥಾಪನೆಯ ಹೆಸರಲ್ಲಿ ಇರಾಕ್ ಮುಂತಾದ ದೇಶಗಳ ಮೇಲೆ ನಡೆಸಿದ ಯುದ್ದಗಳು  ಅಮೇರಿಕಾದ ಕರಾಳ ಮುಖಕ್ಕೆ ಸಾಕ್ಷಿಯಾಗಿವೆ.ಸೋವಿಯತ್ ಯೂನಿಯನ್ ಹಿಡಿತದಿಂದ ಆಫ್ಗಘಾನಿಸ್ಥಾನವನ್ನು ಮುಕ್ತಗೊಳಿಸುವ  ನೆಪದಲ್ಲಿ ಅಲ್ಲಿನ ಬುಡಕಟ್ಟು ಜನರಿಗೆ ಹಣ-ಆಯುಧಗಳನ್ನು ಪೂರೈಸುತ್ತ, ಅವರನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಕುಖ್ಯಾತಿ ಅಮೇರಿಕಾದ್ದು.  ಇಸ್ರೇಲ್ ಎಂಬ ರಾಜ್ಯವನ್ನು ರಾತ್ರೋರಾತ್ರಿ ಸೃಷ್ಠಿಸಿ, ಮಧ್ಯಪ್ರಾಚ್ಯದಲ್ಲಿನಿ ರಂತರವಾಗಿ ರಕ್ತ ಹರಿಯುವಂತೆ ಮಾಡಿದ್ದು ಸಹ ಇದೇ ಅಮೇರಿಕ.

ಇಷ್ಟಲ್ಲದೆ ಇವತ್ತು ಲಾಡೆನ್ ಹತ್ಯೆ ಮಾಡಿ ತಾನೇನೋ ಮಹಾಸಾಧನೆ ಮಾಡಿದ್ದೇನೆಂದು ಬಿಂಬಿಸಿಕೊಳ್ಳುತ್ತಿರುವ ಅಮೇರಿಕಾ,ಬಿನ್ ಲಾಡೆನ್ ಅಂತಹ ಭಯೋತ್ಪಾದಕನನ್ನು ತಾನೇ ಸೃಷ್ಠಿಸಿದ ಭೂತವೆಂಬುದನ್ನು ಒಪ್ಪಿಕೊಳ್ಳಲು ಸಹ ತಯಾರಿಲ್ಲ.ಇವೆಲ್ಲವನ್ನೂ  ಅರ್ಥಮಾಡಿಕೊಳ್ಳಲಾಗದಷ್ಟು ಮುಗ್ದರೇನಲ್ಲ. ಅಮೇರಿಕನ್ನರು  ಸಾಮ್ರಾಜ್ಯಶಾಹಿ ಮನೋಬಾವನೆಯ ಅವರಿಗೆ ತಮ್ಮ ದೇಶ ಮಾಡಿದ ನರಮೇಧಗಳ ಬಗ್ಗೆ , ಅದು ಹುಟ್ಟು ಹಾಕಿದ ಭಯೋತ್ಪಾದಕತೆಯ  ಬಗ್ಗೆ  ನಾಚಿಕೆಯಾಗಬೇಕಿತ್ತೆ ಹೊರತು ಸಂಭ್ರಮಾಚರಣೆಯ ಅಗತ್ಯವಿರಲಿಲ್ಲ.

ಇನ್ನು ನಮ್ಮ ಶ್ರೀರಾಮ ಸೇನೆಯ ಮತ್ತು ಗೌರವಾನ್ವಿತ ಮಠಾಧೀಶರು ಸಂಭ್ರಮಿಸಿದ್ದರ ಹಿಂದೆ ಇರುವ ಮನಸ್ಥಿತಿಯಾದರು ಲಾಡೆನ್ ಒಬ್ಬ ಮುಸ್ಲಿಂ ಎಂಬುದೇ ಹೊರತು ಅವನೊಬ್ಬ ಜೀವ ವಿರೋಧಿ ಭಯೋತ್ಪಾಕದ ಎಂದೇನು ಅಲ್ಲ. ನಕ್ಸಲರ  ನೆಲಬಾಂಬಿಗೆ  ಬಲಿಯಾಗುವ ಪೋಲಿಸರ ಸಾವುಗಳಿಗೆ, ಪೋಲಿಸರ ಗುಂಡಿಗೆ  ಬಲಿಯಾಗುವ ನಕ್ಸಲರ ಸಾವುಗಳಿಗೆ, ಮನುಷ್ಯರ  ಸಂಭ್ರಮಿಸುತ್ತ ಹೋದರೆ  ಮಾನವೀಯತೆ ಎಲ್ಲಿ ಉಳಿಯುತ್ತದೆ?

ಸಾವನ್ನು ಸಂಭ್ರಮಿಸುವ ಮನಸ್ಸುಗಳ ಹಿಂದಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ನಾಳೆಗಳ ಬಗ್ಗೆ ಭಯವಾಗುತ್ತದೆ!

 

 

– ಕು.ಸ.ಮಧುಸೂದನ್ ನಾಯರ್

7 Responses

 1. smitha Amrithraj says:

  ತಟ್ಟುವ ಬರಹ

 2. Ganesh says:

  ನಿಮ್ಮ ಕೊನೇ ಪ್ಯಾರ ಒಪ್ಪೋದು ಸ್ವಲ್ಪ ಕಷ್ಟ. ಲಾಡೆನ್ ಸತ್ತಾಗ ಸಮ್ಭ್ರಮಿಸಿದವರು ಬೇರೆ ಮುಸ್ಲಿಮರು ಸತ್ತಾಗ ಸಮ್ಭ್ಹ್ರಮಿಸಲಿಲ್ಲವಲ್ಲಾ! ಸ್ವಲ್ಪ ಯೋಚಿಸಿ ಬರೀರಿ.

  • ku.sa.madhusudan says:

   ಸತ್ತವರು ಹಿಂದುಗಳೋ ಮುಸ್ಲಿಂರೊ ಅನ್ನುವುದು ಅನಗತ್ಯವಾದ ವಾದ.. ಮನುಷ್ಯನೊಬ್ಬ ಸತ್ತಾಗ ಸಂಭ್ರಮಿಸುವುದರ ಎಷ್ಟರ ಮಟ್ಟಿಗಿನ ಮಾನವೀಯ ಸಂಸ್ಕೃತಿ ಅನ್ನುವುದಷ್ಟೇ ನನ್ನ ಪ್ರಶ್ನೆ!

  • ku.sa.madhusudan says:

   ಸರ್. ಇವತ್ತು ಲಾಡೆನ್ ಸಾವನ್ನು ಸ್ವಾಗತಿಸುವವರು ನಾಳೆ ಇನ್ನೊಬ್ಬನ ಸಾವನ್ನು ಸ್ವಾಗಿತಿಸುವುದಿಲ್ಲವೆಂಬುದಕ್ಕೆ ಗ್ಯಾರಂಟಿಯೇನು?
   ಲೇಖನ ಬರೆಯುವ ಮುಂಚೆ ಮತ್ತು ಬರೆದ ಮೇಲೆ ಪ್ರಕಟಿಸುವ ಮುಂಚೆ ನಾನು ಸಾವಿರ ಬಾರಿ ಯೋಚಿಸುವವನ್ನು. ಯೋಚಿಸುವ ಬಗ್ಗೆ ನನಗೆ ಸಲಹೆ ಅಗತ್ಯವಿಲ್ಲ

   • Ganesh says:

    ನಾಳೆ ಇನ್ನೊಬ್ಬರು ಸತ್ತಾಗ, ಯಾರಾದರೂ ಅದನ್ನು ಆಚರಿಸಿಸ್ದರೆ ಆವಾಗ ಅದನ್ನು ಖಂಡಿಸೋಣ. ಅದು ಬಿಟ್ಟು ಏನೇನೋ ಯೋಚಿಸಿ ನಮಗೆ ಬೇಕೆಂದಂತೆ ಕಲ್ಪಿಸಿ ಹುಸಿ ಆತಂಕ ವ್ಯಕ್ತ ಪಡಿಸೋದು ನಾಟಕೀಯ ಮತ್ತು ಅಸಹಜ ಅಂತ ನನ್ನ ಅಭಿಪ್ರಾಯ.

 3. umesh desai says:

  ಲೇಖನ ಸೊಗಸಾಗಿದೆ ಎಲ್ಲಾನು ಓಕೆ ಅನ್ನೋಹಾಗಿಲ್ಲ ಅದು ಬೇರೆ ವಿಷಯ..

 4. Editor says:

  ಮಾನ್ಯರೇ,

  ಸುರಹೊನ್ನೆಯನ್ನು ಓದುತ್ತಿರುವ ನಿಮಗೆ ಧನ್ಯವಾದಗಳು.
  ಮೇಲಿನ ಲೇಖನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಗಮನಿಸಿದ್ದೇವೆ. ಈ ವಿಷಯವಾಗಿ ಇನ್ನೇನಾದರೂ ಹೇಳುವುದಿದ್ದರೆ, ದಯವಿಟ್ಟು ಲೇಖಕರು ಮತ್ತು ಓದುಗರು ನೇರವಾಗಿ ವ್ಯವಹರಿಸಿ ಎಂದು ನಮ್ಮ ಕೋರಿಕೆ. (ಪ್ರತಿ ಲೇಖನದ ಮೇಲ್ಭಾಗದಲ್ಲಿ ಸಂಬಂಧಿತ ಲೇಖಕರ ಇ-ಮೈಲ್ ವಿಳಾಸ ಇರುತ್ತದೆ)

  – ಸುರಹೊನ್ನೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: