ನಮ್ಮ ಚಿನ್ನು ಮತ್ತು ಮೋತಿನಾಯಿ
ಮೋತಿ ನಮ್ಮ ಮನೆಯ ನಾಯಿ. ಹುಟ್ಟಿಂದ ನಾಯಿ ಹೌದಾದರೂ ಬಲು ಬುದ್ಧಿವಂತ.ಮನೆಯವರ ಎಲ್ಲಾ ಮಾತೂ ಅರ್ಥವಾಗುತ್ತಿತ್ತು. ಊಟದ ಸಮಯ, ತಿಂಡಿಯ ಸಮಯ ಅದಕ್ಕೆ ಚೆನ್ನಾಗಿ ಗೊತ್ತು. ಸ್ವಭಾವತ ಸೌಮ್ಯ, ಆದರೆ ಅದಕ್ಕೆ ಅಪರಿಚಿತರನ್ನು ಒಮ್ಮೆ ನೋಡಿದರೆ ಅವರ ಸ್ವಭಾವ, ಒಳಹೊರಗು ಗೊತ್ತಾಗುತ್ತಿತ್ತು. ಸ್ವಚ್ಚತೆಗೆ ಆದ್ಯತೆ ಅದಕ್ಕೆ. ನಮ್ಮ ಚಿನ್ನುವನ್ನು ಕಂಡರೆ ಮೋತಿಗೆ ಬಲು ಮಮತೆ. ಎರಡು ತಿಂಗಳ ಶಿಶುವಿಗೆ ಹಸುವಿನ ಹಳೆತುಪ್ಪ ಮೈಗಿಡೀ ಹಚ್ಚಿ ಮೀಯಲು ಬಿಸಿನೀರ ವ್ಯವಸ್ಥೆಗೆ ನಾವು ಎದ್ದರೆ ಅದು ಮಗುವಿನ ತೀರಾ ಹತ್ತಿರ ಕೂತು ಮಿಕಿಮಿಕಿ ಎಂದು ಪುಟ್ಟಪುಟ್ಟ ಕೈಕಾಲು, ಬೆರಳು, ಮುಖವನ್ನು ಕೌತುಕದಿಂದ ನೋಡುತ್ತಿತ್ತು. ಒಂದು ಸಣ್ಣ ಇರುವೆ ಹತ್ತಿರ ಬರಲೂ ಬಿಡುತ್ತಿರಲಿಲ್ಲ. ರಾತ್ರಿ ಶಿಶು ನಿದ್ರೆಯಿಂದ ಎದ್ದು ರಂಪ, ರಚ್ಚೆ ತೆಗೆದು ಅತ್ತರೆ ಮೋತಿ ರೂಮಿನ ಹೊರಬದಿಯಿಂದ ಸುತ್ತು ಹಾಕಿ ಬಂದು ಕಿಟಿಕಿ ಪಕ್ಕ ತುದಿಗಾಲಿನಲ್ಲಿ ನಿಂತು ಬೊಗಳುತ್ತ ನಮ್ಮನ್ನು ಎಬ್ಬಿಸಿ ”ಮಗುವನ್ನು ಗಮನಿಸಿ” ಎಂದು ಸೂಚಿಸುತ್ತಿತ್ತು. ಶಿಶುವಿನ ಹಂತ ಹಂತದ ಬೆಳವಣಿಗೆಯಲ್ಲೂ ವಿಶೇಷ ಆಸಕ್ತಿ. ಕಾಣಲು ಹುಲಿಯ ಹಾಗಿದ್ದ ನಾಯಿ ಹತ್ತಿರ ಮಗು ಒಂಟಿಯಾಗಿ ಆಡುತ್ತ ಇದ್ದರೆ ಹೊರಗಿನವರಿಗೆ ಗಾಬರಿ. ಆಗಿನ್ನೂ ಚಿನ್ನುವಿಗೆ ಒಂದೂವರೆ ವರ್ಷ, ಬಕೆಟ್ ತುಂಬಾ ಇದ್ದ ನೀರನ್ನು ಕಾಲಿಂದ ಮೊಗಚಿ ಹಾಕಿ ಚೆಲ್ಲಿದಾಗ ಸಿಟ್ಟು ತಡೆಯದೆ ಹೊಡೆಯಲು ಕೈ ಎತ್ತಿದ್ದೆ. ಬಹುಶ ಅದೇ ಮೊದಲು ಏಟು ಹಾಕಲು ಹೊರಟದ್ದು. ಅಲ್ಲಿಯೇ ಬಾಗಿಲ ಬುಡದಲ್ಲಿ ಕೂತು ಮಗುವಿನ ಆಟವನ್ನು ಆಸ್ವಾದಿಸುತ್ತಿತ್ತು ಮೋತಿ. ನನ್ನ ಎತ್ತಿದ ಕೈ ಕಂದನ ಬೆನ್ನು ಮುಟ್ಟುವ ಮೊದಲೇ ಸಿಟ್ಟಿಂದ ಗುರುಗುಡುತ್ತ ಹಾರಿ ನಮ್ಮ ಇಬ್ಬರ ಮಧ್ಯ ಅಡ್ಡ ನಿಂತಿತ್ತು. ನನ್ನ ಕೈ ಏಟು ಮಗುವಿಗೆ ಬಿದ್ದರೆ ಕಚ್ಚಲು ತಯಾರು ಅದು. ಅದರ ಕೋಪದ ಗುರುಗುಡುವಿಕೆ ಕಂಡು ಕೈ ಹಿಂದೆ ಹೋಗಿತ್ತು. ಆ ಅಲರ್ಟ್ ನೆಸ್ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಮಗು ಕೈಯಿಂದ ನೀರು ಹರಡಿ ಮೋತಿ ಮುಖಕ್ಕೆ ಎರಚುತ್ತ ಆಟ ಮುಂದರಿಸಿತ್ತು.
ಇಂಥ ನಮ್ಮ ಮೋತಿ ಮಹಾರಾಜ ಒಂದು ಸಂಜೆ ಕಾಣಲೇ ಇಲ್ಲ. ಅದಕ್ಕೆ ಊಟ ಹಾಕಲು ಕರೆದರೆ ಬರಲಿಲ್ಲ.ಮೊದಲೆಲ್ಲ ಅನ್ನಕ್ಕೆ ಸಾರು, ಸಾಂಬಾರು ಹಾಕಿ ಬೆರೆಸಿ ಅದರ ತಟ್ಟೆಗೆ ಎರೆದರೆ ಉಣ್ಣುತ್ತಿದ್ದ ನಾಯಿ ಚಿನ್ನುವಿಗೆ ಊಟ ಕೊಡಲು ಆರಂಭಿಸಿದ ಮೇಲೆ ಸಪ್ಪೆ ಊಟವನ್ನು ಪ್ರಿಫರ್ ಮಾಡತೊಡಗಿತ್ತು.ಹಾಲನ್ನ,ಮೊಸರನ್ನವನ್ನು ಬಲು ಪ್ರೀತಿಯಿಂದ ಉಣ್ಣುತ್ತಿತ್ತು. ಸಪ್ಪೆ ಊಟವೇ ರುಚಿ ಅದಕ್ಕೆ.ಖಾರ ಚೂರೂ ಮುಟ್ಟದ ನಾಯಿ. ಆಮೇಲಾಮೇಲೆ ಸಾರು, ಸಾಂಬಾರ್ ಸೋಕಿದರೂ ನಿರ್ದಾಕ್ಶಿಣ್ಯವಾಗಿ ಅನ್ನ ತಿರಸ್ಕರಿಸಿಬಿಡತೊಡಗಿತು. ಉಪವಾಸ ಕೂತರೂ ಮೆಣಸು ಸೋಕಿದ್ದು ಬೇಡ.ಅದರಲ್ಲೂ ಚಿನ್ನುವ ಊಟದಲ್ಲಿ ಮಿಕ್ಕಿದ್ದಕ್ಕೆ ಇನ್ನಷ್ಟು ಬೆರೆಸಿ ಕೊಟ್ಟರೆ ಸಮಾಧಾನ. ಹಾಲು,ಅನ್ನ ಬೆರೆಸಿದ್ದನ್ನು ಅದರ ತಟ್ಟೆಗೆ ಸುರಿದು ಬಂದಿದ್ದೆ. ರಾತ್ರೆ ಕಳೆದು ಬೆಳಗು ಮೂಡಿದರೂ ನಾಯಿ ಇಲ್ಲ. ಮಧ್ಯಾಹ್ನವಾಯಿತು, ಕರೆದಾಯ್ತು;ಹುಡುಕಿ ಆಯ್ತು, ಊಹೂಂ, ಮೋತಿ ಇಲ್ಲ. ಅದನ್ನು ಕಾಣದೆ ಹಟ, ರಂಪ ಆರಂಭಿಸಿದ ಮಗು, ನನಗೆ ಕಿರಿಕಿರಿ. ಕೊನೆಗೆ ಸರ್ವಾನುಮತದಿಂದ ರಾತ್ರೆ ನಾಯಿಪಿಲಿ (Hyena) ಹಿಡಿದಿರಬೇಕು ಎಂದು ತೀರ್ಮಾನವಾಯಿತು. ಜೀವಂತವಾಗಿದ್ದೇ ಆದರೆ ನಾವು ಕರೆದಾಗ ಬಾರದೆ ಇರಲು ಸಾಧ್ಯವೇ ಇಲ್ಲ. ಮೋತಿಯ ನಾಪತ್ತೆಯಿಂದ ತುಂಬಾ ನೋವು ನಮಗೆಲ್ಲ. ಎರಡು ರಾತ್ರೆ ಕಳೆದು ಮೂರನೆ ಹಗಲಾದರೂ ನಾಯಿ ಬರಲೇ ಇಲ್ಲ.ಚಿನ್ನುವ ತಾರಕಕ್ಕೇರಿದ ಅಳು,ಸಮಧಾನಿಸಲಾಗದೆ ಬೇಸರ.
ಅಂದು ಸಂಜೆ ಹತ್ತಿರದ ಮನೆಯವರು ಬಂದರು. ರಾತ್ರೆ ಇಡೀ ಕ್ಷೀಣವಾಗಿ ನಾಯಿ ಬೊಗಳುವ ಸದ್ದು ಕೇಳಿಸುತ್ತಿತ್ತು ಎಂದು ಸೂಚನೆ ಕೊಟ್ಟರು. ಸರಿ. ಅದು ನಮ್ಮ ಮೋತಿ ಇರಬಹುದೇ ಎಂಬ ದೂರದ ಆಸೆ. ಅಪ್ಪನ ಕೈ ಹಿಡಿದು ಚಿನ್ನುಇಬ್ಬರೂ ಹುಡುಕಾಟಕ್ಕೆ ಆರಂಭ ಮಾಡಿದರು. ಅತಿ ಕ್ಷೀಣ ದನಿಯ ನರಳಾಟ ಕೇಳಿ ಅತ್ತ ಹೋಗಿ ನೋಡಿದರೆ ಕಟ್ಟೆ ಇಲ್ಲದ ಸುಮಾರು 25 ಅಡಿ ಆಳದ ಬಾವಿಯ ತಳಭಾಗದಲ್ಲಿ ಮೋತಿ! ನಿಲ್ಲಲೂ ತ್ರಾಣವಿಲ್ಲದೆ ಅಡ್ಡ ಮಲಗಿದೆ!!ಶರೀರ ಕ್ಷೀಣವಾಗಿದೆ!!! ನಾಯಿಯನ್ನು ಕಂಡ ಉತ್ಸಾಹದಲ್ಲಿ ಚಿನ್ನು ಕಿರುಚಿದಳು. ಮೋತೀ………… ಮೋತೀ……….. ನಾಯಿಯ ಕಿವಿಗೆ ಮಗುವಿನ ದನಿ ಹೊಕ್ಕಾಗ ನಿಧಾನವಾಗಿ ಬಾಲ ಅಲ್ಲಾಡಿಸಿತು.
ಚಿನ್ನು ಅಪ್ಪ ಪರಿಸ್ಥಿತಿ ಅರ್ಥೈಸಿಕೊಂಡರು. ನೇರ ಮನೆಗೆ ಬಂದು ಉದ್ದದ ಹಗ್ಗ,ದೊಡ್ಡ ಬುಟ್ಟಿ, ಉಪಯೋಗವಿಲ್ಲದ ಪಾತ್ರೆಯಲ್ಲಿ ಕುಚ್ಚಲನ್ನ, ತುಸು ಗಂಜಿ ತಿಳಿ, ಅದಕ್ಕೆ ಚೂರು ಉಪ್ಪು ಬೆರೆಸಿ ತೆಗೆದುಕೊಂಡು ಹೋದರು. ಅಪ್ಪನ ಕೆಲಸ ಕಾರ್ಯಗಳನ್ನು ನೋಡನೋಡುತ್ತ ಚಿನ್ನುವಿಗೆ ಧೈರ್ಯಬಂತು. ಬಿಟ್ಟ ಬಾಣದಂತೆ ಮೋತಿಗೆ ತಿಳಿಸಲು ಓಡಿ ಆಯಿತು. ನಮಗೆ ಹೆದರಿಕೆ, ಮೊದಲೇ ಬಾವಿಗೆ ಕಟ್ಟೆ ಇಲ್ಲ; ಅದರ ಮೇಲೆ ಮಗು ಹೋಗಿ ನಾಯಿಗೆ ಹೇಳುವ ಅವಸರದಲ್ಲಿ ತೀರಾ ಅಂಚಿಗೆ ಬಗ್ಗಿದರೆ ಇಬ್ಬರನ್ನೂ ಮೇಲೆತ್ತುವ ಕೆಲಸ. ನಾಯಿಗೆ ಚಿನ್ನು ಹಾಗೂ ಅವಳ ಅಪ್ಪನತಲೆ ಕಂಡಾಗ ಅರ್ಧ ಜೀವ ಬಂದಿತ್ತು. ದೀನಾತಿದೀನವಾಗಿ ಹೋಗಿದ್ದ ಮೋತಿ ಎದ್ದು ನಿಲ್ಲ ಹೊರಟು ಕುಸಿದಿತ್ತು. ಚಿನ್ನುವ ಅಪ್ಪ ಹಗ್ಗಕ್ಕೆ ಪಾತ್ರೆ ಕಟ್ಟಿ ಮೆಲ್ಲಮೆಲ್ಲಗೆ ಕೆಳಗಿಳಿಸಿದರು. ಹಸಿದು ಕಂಗಾಲಾದ ನಾಯಿ ಅನ್ನದ ಪರಿಮಳ ಹಿಡಿದಾಗ ಗಬಗಬನೆ ತಿಂದಿತು. ಗಂಟಲು ಒಣಗಿ ನುಂಗಲು ಆಗದೆ ಇರುತ್ತದೆ ಎಂದೇ ಗಂಜಿ ಕುಡಿಸಿದ್ದರು. ಹೊಟ್ಟೆಗೆ ಆಹಾರ ಹೋದ ಕೂಡಲೇ ಚೂರು ತ್ರಾಣ ಬಂತು. ಸಣ್ಣದನಿಯಲ್ಲಿ ಬೊಗಳಿತು.
ಇನ್ನೀಗ ಮುಂದಿನ ಹೆಜ್ಜೆ. ಬಾವಿಗೆ ಇಳಿಯಲು ಮೆಟ್ಟಲಿಲ್ಲ. ಬಗ್ಗಿದರೆ ಕೆಳಬೀಳುವ ಆತಂಕ. ಮುಂದೆ ನುಗ್ಗುವ ಚಿನ್ನುವಿಗೆ ಹಿಂದೆ ನಿಲ್ಲಲು ಅಪ್ಪಣೆ ಮಾಡಿ ಬುಟ್ಟಿ ಇಳಿಸಿದರು. ಮೋತಿ ಅದೆಷ್ಟು ಬುದ್ಧಿವಂತ ಎಂದರೆ ಆ ಬುಟ್ಟಿ ತನಗಾಗಿ ಇಳಿಸಿದ್ದು ಎಂದು ತಿಳಿಯಿತು; ಅಲ್ಲದೆ ಜೊತೆಗೇ ಸಣ್ಣ ಯಜಮಾಂತಿ ಬುಟ್ಟಿಯಲ್ಲಿ ಕೂತ್ಕೋ,ಅಪ್ಪ ಮೇಲೆ ತರ್ತಾರೆ ಅಂತ ಕಿರುಚುತ್ತಿತ್ತು. ಅನುಮಾನಿಸುತ್ತ ಕೂತು ಆದಾಗ ನಿಧಾನ,ಬಲು ನಿಧಾನವಾಗಿ ಮೇಲೆ ಎಳೆದರು. ಅರ್ಧಕ್ಕೂ ತಲಪಿರಲಿಲ್ಲ; ಅದಕ್ಕೆ ಮೊದಲೇ ತ್ರಿಶಂಕು ಸ್ವರ್ಗದಲ್ಲಿದ್ದಾಗ ಹೆದರಿ ಕೆಳ ಹಾರಿತು. ಪುನ ಸಾಂತ್ವನ ಭರಪೂರ ಹರಿದು ಬಂತು. ಪ್ರೀತಿಯಿಂದ ರಮಿಸುತ್ತ, ಬಾ,ಬಾ, ಎಂದು ಕರೆಯುತ್ತ ಬುಟ್ಟಿಗೆ ಹತ್ತಲು ಪ್ರೋತ್ಸಾಹ ಮೇಲಿಂದ ಬಂತು. ಮೋತಿ ಹತ್ತಿತು. ತುಸು ಮೇಲೆಳೆದಾಗ ಪುನ ಹೆದರಿಕೆ. ನಾಲ್ಕಾರು ಬಾರಿ ಹೀಗಾಯಿತು. ಕೊನೆಗೊಮ್ಮೆ ಮೋತಿ ಕೂತ ಬುಟ್ಟಿ ಬಲು ಮೆಲ್ಲಗೆ ಮೇಲೆ ಬಂತು. ಯಾವಾಗ ಮೇಲೆ ತಲಪಿತೋ ಆಗ ಉಸಿರು ಬಂತು ಅದಕ್ಕೆ.
ಚಿನ್ನು ಅಪ್ಪ ಮೆಲ್ಲನೆ ಬುಟ್ಟಿಯನ್ನು ದಡಕ್ಕೆ ತರುವ ಮೊದಲೇ ಶಕ್ತಿ ಎಲ್ಲ ಒಗ್ಗೂಡಿಸಿದ ನಾಯಿ ಛಂಗನೆ ಹೊರನೆಗೆದಿತ್ತು. ಜೋರಾಗಿ ಉಸಿರೆಳೆದು ಪುನ ಸುತ್ತ ನೋಡಿತು. ತಾನು ಬಾವಿಯಿಂದ ಮೇಲೆ ಬಂದಿದ್ದು ಖಚಿತವಾದಾಗ ಮನಸ್ಸು ಹೃದಯ ತುಂಬಿ ಬಂದು ಎದುರು ನಿಂತು ಕರೆಯುವ ಪುಟ್ಟ ಯಜಮಾಂತಿಯ ಮೈ ಮೇಲೆ ಬಿದ್ದಿತು. ಅದಕ್ಕೆ ಆ ಚರ್ಯೆ ಕೃತಜ್ನತೆ ಸೂಚಿಸುವ ಪರಿ; ಆದರೆ ಆ ರಭಸಕ್ಕೆ ಚಿನ್ನು ಮೊಗಚಿಬಿತ್ತು. ಜೊತೆಗೆ ಮೋತಿ ನೂಕಿಹಾಕಿದ ಅವಮಾನ. ಗಾಳಿಗಿಂತ ವೇಗವಾಗಿ ಮೋತಿ ನನ್ನನ್ನು ಅರಸುತ್ತ ಬಂತು. ಕಂಡ ತಕ್ಷಣ ಸಂಭ್ರಮದಿಂದ ಜೋರಾಗಿ ಬೊಗಳಿತು. ಚಿನ್ನುಗೆ ಸಂಜೆ ತಿಂಡಿಗೆ ಮಾಡಿದ್ದ ನೀರುದೋಸೆ ಕೊಟ್ಟೆ. ಬಾಲವಾಡಿಸುತ್ತ ತಿಂದು ನೀರು ಕುಡಿದು ಕಾಲು ನೆಕ್ಕಿತು. ಬಹುಶ ಬೊಗಳಿ ತಾನು ಬಾವಿಯಲ್ಲಿ ಬಿದ್ದುಹೋದ ಘಟನೆ ವಿವರಿಸಿದ್ದು ಇರಬಹುದೇನೋ? ಕಳ್ಳಬೆಕ್ಕನ್ನು ಗಡೀಪಾರು ಮಾಡಿಬರಲು ವೀರಾವೇಶದಲ್ಲಿ ಅಟ್ಟುತ್ತಿದ್ದ ವೇಳೆ ಕಾಲಬುಡದಲ್ಲಿ ಬಾವಿ ಇದ್ದಿದ್ದು ಕಾಣದೆ ಬಾವಿಗೆ ಬಿದ್ದಿದ್ದು. ನೀರು ಇಲ್ಲದ ಬಾವಿ ಆದ ಕಾರಣ ಅಪಾಯ ಆಗಿರಲಿಲ್ಲ. ಎಂದೂ ನಾಯಿಯನ್ನು ಮುಟ್ಟದ ನಾನು ಅಂದು ಅದರ ಬೆನ್ನು ತಲೆ ಸವರಿದ್ದೆ. ಅದಕ್ಕೆ ಚಿನ್ನುವಿನ ಮೇಲೆ ಇದ್ದ ಪ್ರೀತಿ ಎಷ್ಟೆಂದರೆ ಮನೆಯವರು ಬಿಟ್ಟು ಅನ್ಯರು ಮಗುವನ್ನು ಸೋಕಿದರೂ ಮೈಗೇ ಹಾರುತ್ತಿತ್ತು. ಚಿನ್ನುವಿಗಾಗಿ ತಾನು ಎಂಬ ನಡವಳಿಕೆ; ಅಂಥ ನಾಯಿ ಅಪರೂಪ. ಮಹಾರಾಜರ ಮರ್ಜಿಯದು. ಮುಗ್ಧ ಮಗುವಿನ ರೀತಿ ನೆತ್ತಿ, ಬೆನ್ನು ಸವರಿಸಿಕೊಂಡು ತಲೆ ತಗ್ಗಿಸಿ ನಿಂತಿತು.
ಅರ್ಧ ನಿಮಿಷ ಅಷ್ಟೆ, ಮೋತಿಗೆ ಅದರ ಸ್ವಜಾತಿ ಸ್ನೇಹಿತರ ನೆನಪಾಯಿತು. ತನ್ನ ದುರವಸ್ಥೆಯನ್ನು ಹೇಳಿ ಒಂದು ಗೆಟ್ ಟುಗೆದರ್ ನಡೆಸಲು ಬಾಲವೆತ್ತಿ ದೌಡಾಯಿಸಿತು.
– ಕೃಷ್ಣವೇಣಿ ಕಿದೂರು
Best
ತುಂಬಾ ಚೆನ್ನಾಗಿದೆ ಲೇಖನ… !! Superb editing too.. 😉
ಸೊಗಸಾದ ಲೇಖನ. ಕಪ್ಪು ಕಂದು ಕಾಂಬಿನೇಶನ್ ನ ಮೋತಿಯ ಮುಖವು ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ. ಮೋತಿಯ ಕಥೆಗೆ ನಾನೂ ಪ್ರತ್ಯಕ್ಷ ಸಾಕ್ಷಿ.