ಧೃತರಾಷ್ಟ್ರನ ಹಿತಬೋಧನೆ
ಪಾಂಡವರೊಡನೆ ಯುದ್ಧ ಬೇಡ ಸಂಧಿ ಮಾಡಿಕೊ ಎಂದು ಧೃತರಾಷ್ಟ್ರ ದುರ್ಯೋಧನನಿಗೆ ಹೇಳುವ ಹಿತಬೋಧನೆಯ ಸಂದರ್ಭ.
ಧೃತರಾಷ್ಟ್ರ: ಮಗನೇ, ಭರತ ಕುಲಭೂಷಣ. ನೀನು ಯುದ್ಧದಿಂದ ವಿರಮಿಸು. ಯುದ್ಧ ಸಿದ್ಧತೆಯನ್ನು ನಿಲ್ಲಿಸು. ಎಂಥ ಸ್ಥಿತಿಯಲ್ಲೂ ಶ್ರೇಷ್ಠ ಪುರುಷರು ಯುದ್ಧ ಮಾಡುವುದನ್ನು ಪ್ರಶಂಸಿಸುವುದಿಲ್ಲ. ಆದ್ದರಿಂದ ಮಗನೇ! ನಿನ್ನ ಮತ್ತು ನಿನ್ನನ್ನವಲಂಭಿಸಿರುವ ಅಮಾತ್ಯರ ಜೀವನಕ್ಕೆ ಕೇವಲ ಅರ್ಧರಾಜ್ಯ ಸಾಕು. ಪಾಂಡುಪುತ್ರರಿಗೆ ನ್ಯಾಯವಾಗಿ ಸಲ್ಲತಕ್ಕ ರಾಜ್ಯ ಕೊಟ್ಟು ಬಿಡು. ಹೀಗೆ ಮಾಡುವುದೇ ಧರ್ಮ. ಹಾಗೆಂದು ಎಲ್ಲ ಕುರುಜನರೂ ಭಾವಿಸಿದ್ದಾರೆ. ಆದುದರಿಂದ ನೀನು ಧರ್ಮಾತ್ಮನಾದ ಪಾಂಡುಪುತ್ರರೊಡನೆ ಸಂಧಿ ಮಾಡಿಕೊ.
ವತ್ಸ! ನಿನ್ನ ಅಪಾರ ಸೈನ್ಯವನ್ನು ನೀನೊಮ್ಮೆ ನೋಡು. ಈ ಅಪಾರ ಸೈನ್ಯವೇ ನಿನ್ನ ವಿನಾಶಕ್ಕೆ ಕಾರಣವಾಗುತ್ತದೆ. ನಿನ್ನ ಕಡೆಯ ಮುಖ್ಯಸ್ಥರೇ ಯುದ್ಧದಲ್ಲಿ ಇಚ್ಛೆಯಿಲ್ಲದವರಾಗಿದ್ದಾರೆ. ಈ ಯುದ್ಧ ನಡೆದರೆ ನಿನ್ನ ವಿನಾಶ ಖಂಡಿತ. ನೀನು ಗೆದ್ದೇಗೆಲ್ಲುವೆ ಎಂಬ ಭ್ರಾಂತಿಯಲ್ಲಿರುವೆ. ನಾನಂತೂ ಈ ಯುದ್ಧ ನಡೆಯುವುದನ್ನು ಇಷ್ಟಪಡುವುದಿಲ್ಲ. ಪಾಂಡವ ಕೌರವರಲ್ಲಿ ಯುದ್ಧ ನಡೆಯುವುದನ್ನು ಯಾರೂ ಅಪೇಕ್ಷೆ ಪಡಲಾರರು. ಭೀಷ್ಮ-ದ್ರೋಣಾದಿ ಪ್ರಮುಖರಿಗೇ ಇಂದಿನ ಈ ಯುದ್ಧ ಬೇಡವಾಗಿದೆ. ಸೇನಾನಾಯಕರಿಗೇ ಯುದ್ಧದಲ್ಲಿ ಆಸಕ್ತಿ ಇಲ್ಲದಿರುವಾಗ ಅವರು ಹೇಗೆ ತಾನೇ ಸೈನಿಕರನ್ನು ಹುರಿದುಂಬಿಸಿಯಾರು? ಈ ಕಾರಣದಿಂದ ಸಂಧಿಯೇ ಯುಕ್ತವಾದುದು. ನೀನು ನಿನ್ನ ಸ್ವಂತ ಬುದ್ಧಿಯಿಂದ ಯಾವುದನ್ನೂ ಮಾಡುತ್ತಿಲ್ಲ. ಕರ್ಣ, ದುಃಶಾಸನ, ಶಕುನಿ ನಿನ್ನಿಂದ ಈ ಕಾರ್ಯ ಮಾಡಿಸುತ್ತಿದ್ದಾರೆ. ನಿನ್ನನ್ನು ವಾಮಮಾರ್ಗದಲ್ಲಿ ನಡೆಸುತ್ತಿದ್ದಾರೆ.
ದುರ್ಯೋಧನ: ತಂದೆಯೇ! ನಿನ್ನ ಭ್ರಾಂತಿಯನ್ನು ದೂರ ಮಾಡು. ನಾನು ದ್ರೋಣರನ್ನು ಅವಲಂಬಿಸಿ ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸುತ್ತಿಲ್ಲ. ಅಶ್ವತ್ಥಾಮನನ್ನಾಗಲಿ, ಸಂಜಯನನ್ನಾಗಲಿ, ಭೀಷ್ಮನನ್ನಾಗಲಿ, ನಿನ್ನವರಾದ ಇತರ ರಾಜರನ್ನೇ ಆಗಲಿ ಯಾರನ್ನೂ ಅವಲಂಬಿಸಿ ನಾನು ಪಾಂಡವರನ್ನು ಯುದ್ಧಕ್ಕೆ ಆಮಂತ್ರಿಸಿಲ್ಲ. ನಾನು ಮತ್ತು ಕರ್ಣ ಇಬ್ಬರೂ ಈ ರಣಮಹಾಯಜ್ಞಕ್ಕೆ ಯುಧಿಷ್ಟಿರನನ್ನೆ ಪಶುವನ್ನಾಗಿ ಮಾಡಿ ದೀಕ್ಷೆ ತೊಡಲು ನಿಶ್ಚಯಿಸಿರುತ್ತೇವೆ. ನಾವಿಬ್ಬರೂ ಸಮರಾಂಗಣದಲ್ಲಿ ಈ ಮಹಾಯಜ್ಞದಲ್ಲಿ ಯಮರಾಜನನ್ನೇ ಆರಾಧಿಸಿ ಶತ್ರುಗಳನ್ನು ಸದೆಬಡಿದು ಕೀರ್ತಿಗಳಿಸಿ ರಾಜಧಾನಿಗೆ ಹಿಂತಿರುಗುತ್ತೇವೆ. ನಮಗೆ ಯಾರ ಸಹಾಯವೂ ಬೇಡ. ಕರ್ಣ, ನನ್ನ ತಮ್ಮ ದುಃಶಾಸನ ಮತ್ತು ನಾನು ಸೇರಿ ರಣಾಂಗಣದಲ್ಲಿ ಪಾಂಡವರ ರುಂಡಗಳನ್ನು ಚೆಂಡಾಡಿಬಿಡುತ್ತೇವೆ.
ಮಹಾರಾಜ! ಈ ಭೂಮಿಯಲ್ಲಿ ಪಾಂಡವ ಕೌರವರಿಬ್ಬರೂ ಬದುಕಿ ಬಾಳುವ ಸಾಧ್ಯತೆಯಿಲ್ಲ. ಇದು ಸ್ಪಷ್ಟ. ನಾನಾದರೂ ಪಾಂಡುಪುತ್ರರನ್ನು ಸಂಹರಿಸಿ ಈ ಭೂಮಿಯನ್ನಾಳುತ್ತೇನೆ. ಇಲ್ಲವೇ ಪಾಂಡುಪುತ್ರರು ನನ್ನನ್ನು ಕೊಂದು ಈ ಭೂಮಂಡಲದ ಶಾಸಕರಾಗುತ್ತಾರೆ. ನಾನು ರಾಜ್ಯವನ್ನಾದರೂ ತ್ಯಾಗ ಮಾಡಿಯೇನು, ನನ್ನ ಜೀವವನ್ನೇ ಬೇಕಾದರೂ ತೊರೆದೇನು. ಆದರೆ ಪಾಂಡವರೊಡನೆ ಸಹಬಾಳ್ವೆ ಮಾತ್ರ ಖಂಡಿತ ನಡೆಸಲಾರೆ. ಪಾಂಡವರಿಗೆ ಸೂಜಿಮೊನೆಯಷ್ಟೂ ಭೂಮಿ ಸಹ ನಾನು ಕೊಡಲಾರೆ.
(ವಿ.ಸೂ: ಮಕ್ಕಳಿಗೆ ಏಕಪಾತ್ರಾಭಿನಯ ಮಾಡಲು ಅನುಕೂಲವಾಗುವಂತೆ ಎರಡು ಪಾತ್ರಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಇದನ್ನು ಬರೆಯಲಾಗಿದೆ.)
– ರುಕ್ಮಿಣಿಮಾಲಾ, ಮೈಸೂರು