ನಾಯಿಗೂಡಿನಲ್ಲಿ ನಾಲ್ಕರ ಬಾಲಕ

Share Button
Krishnaveni K

ಕೃಷ್ಣವೇಣಿ ಕಿದೂರು.

ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ನಾಲ್ಕು ವರ್ಷದ ಬಾಲಕ ಅಭಿಷೇಕ್ ನನ್ನು ನಾಯಿಗೂಡಿನಲ್ಲಿ ಕೂಡಿಹಾಕಿದ್ದಳಾಕೆ! ಈ ಘೋರ ಶಿಕ್ಷೆಗೆ ಕಾರಣ ಆತ ತರಗತಿಯಲ್ಲಿ ತನ್ನ ಮಿತ್ರನೊಂದಿಗೆ ಮಾತಾಡಿದ್ದು. ಬೆಳಗ್ಗೆ ನಾಯಿಗೂಡಿಗೆ ಹಾಕಿದ ಮಗುವನ್ನು ಸಂಜೆ ಶಾಲೆ ಬಿಡುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ಗೂಡಿಂದ ಹೊರಬಿಡಲಾಗಿದೆ. ಕೇರಳದ ರಾಜಧಾನಿಯಾದ ತಿರುವನಂತಪುರದ ಕುಡಪುನಕುನ್ನು ಪಾದಿರಪಳ್ಳಿ ಜವಾಹರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಈ ರಾಕ್ಷಸೀ ಕೃತ್ಯ ನಡೆದಿದ್ದು ಸೆಪ್ಟೆಂಬರ್ ಕೊನೆಯ ವಾರದಲ್ಲಿ. ಶಾಲಾ ಅಧ್ಯಾಪಕರ ಬೆದರಿಕೆಯಿಂದಾಗಿ ಮಕ್ಕಳು ಈ ವಿಚಾರ ಮನೆಯಲ್ಲಿ ಹೇಳಿರಲಿಲ್ಲ. ಹೆದರಿ ಕಂಗಾಲಾಗಿದ್ದ ಅಭಿಷೇಕ್ ಕೂಡಾ ಮೌನವಾಗಿದ್ದ. ಆತನ ಅಕ್ಕ ಅನುಷಾ ಅದೇ ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿನಿ. ಘಟನೆ ನಡೆದ ಗುರುವಾರ ಎರಡನೆ ಪೀರಿಯೆಡ್ ನಲ್ಲಿ ಹೊರಗೆ ಬಂದವಳಿಗೆ ತಮ್ಮನನ್ನು ನಾಯಿಗೂಡಿನಲ್ಲಿ ಹಾಕಿದ ವಿಚಾರ ಗೊತ್ತಾಗಿದೆ. ಆಕೆ ಈ ಬಗ್ಗೆ ಪ್ರಾಂಶುಪಾಲೆಯಲ್ಲಿ ಕೇಳಿದ್ದಕ್ಕೆ ಅವಳಿಗೆ ಬೆದರಿಕೆ ಹಾಕಲಾಗಿದೆ. ವಿದ್ಯಾರ್ಥಿಗಳು ಶಾಲೆಯ ಆಫೀಸ್ ಹತ್ತಿರ ಬಾರದಂತೆ ಮಾಡಲು ಅಲ್ಲಿ ನಾಯಿಯನ್ನು ಗೂಡಿನಲ್ಲಿಟ್ಟು ಸಾಕುತ್ತ ಅದನ್ನು ತೋರಿಸಿ ಮಕ್ಕಳಿಗೆ ಬೆದರಿಸುತ್ತಿದ್ದರು; ಜೊತೆಗೇ ಮಕ್ಕಳನ್ನು ಅಲ್ಲಿ ಕ್ರೂರವಾಗಿ ಹಿಂಸಿಸುತ್ತಿದ್ದಾರೆ ಎಂಬ ದೂರು ವಿದ್ಯಾರ್ಥಿಗಳಿಂದ ಹಾಗೂ ಹೆತ್ತವರಿಂದ ಬಂದಿದೆ.

jawaharschool      ಶಿಕ್ಷಿಸಲ್ಪಟ್ಟ ಅಭಿಷೇಕ್ ನ ಅಕ್ಕ ಅನುಷಾ ಗುರುವಾರ ನಡೆದ ಕ್ರೌರ್ಯವನ್ನು ತಾಯ್ತಂದೆಗೆ ರವಿವಾರ ವಿವರಿಸಿದ್ದಾಳೆ.     ಆಘಾತಕ್ಕೊಳಗಾದ ಹೆತ್ತವರು ಕೂಡಲೇ  ಚೈಲ್ಡ್ ಲೈನ್ ಗೆ ದೂರು ನೀಡಿದ್ದಾರೆ. ಗೂಡಿನಿಂದ ನಾಯಿಯನ್ನು ಹೊರಬಿಟ್ಟು ಆ ಬಳಿಕ ಅಭಿಷೇಕ್ ನನ್ನು ನಾಯಿಯ ಗೂಡಿನಲ್ಲಿ ಕೂಡಿ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಚೈಲ್ಡ್ ಲೈನ್ ಕಾರ್ಯಕರ್ತರು ಶಾಲೆಗೆ  ಮತ್ತು ಶಾಲಾವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಈ ದಾರುಣ ಘಟನೆ ಹೊರಪ್ರಪಂಚಕ್ಕೆ ತಿಳಿದುಬಂತು. ವಿಚಾರಿಸಲು ಹೋದ ಚೈಲ್ಡ್ ಲೈನ್ ನವರೊಂದಿಗೆ ಪ್ರಾಂಶುಪಾಲೆ ಅನುಚಿತವಾಗಿ ವರ್ತಿಸಿದ ಆರೋಪವಿದೆ. ಮಾಧ್ಯಮಗಳಿಂದ ವಿಚಾರ ತಿಳಿಯುತ್ತಿದ್ದಂತೆ ಶಾಲೆಯನ್ನೇ ಮುಚ್ಚಿಸಬೇಕೆಂದು ಸಾರ್ವಜನಿಕರು ಕೆರಳಿದ್ದಾರೆ. ಬಾಲಸಂರಕ್ಷಣಾ ಕಾನೂನಿನಡಿಯಲ್ಲಿ ಪ್ರಾಂಶುಪಾಲೆಯನ್ನು ಬಂಧಿಸಲಾಗಿದೆ. ಶಿಕ್ಷಣ ಇಲಾಖೆಯ ಡೆಪ್ಯುಟಿ  ಡೈರೆಕ್ಟರ್ ನಡೆಸಿದ ಪರಿಶೋಧನೆಯಲ್ಲಿ ಶಾಲೆಗೆ ಸರಕಾರೀ ಆಂಗೀಕಾರವಿಲ್ಲವೆಂದು ತಿಳಿದುಬಂದಿದೆ. ಆ ಹಿನ್ನಲೆಯಲ್ಲಿ ಶಾಲೆಯ ಮುಚ್ಚುಗಡೆಗೆ ಆದೇಶಿಸಲಾಗಿದೆ ಪೋಷಕರಿಗೆ ಸಿ.ಬಿ.ಎಸ್.ಸಿ ಯ ಆಂಗೀಕಾರವಿದೆ ಎನ್ನಲಾಗುತ್ತಿತ್ತು. ಅಲ್ಲಿನ 124 ವಿದ್ಯಾರ್ಥಿಗಳನ್ನು ಸಮೀಪದ ಸರಕಾರಿ,ಐಡೆಡ್ ಶಾಲೆಗಳಿಗೆ ಟಿ.ಸಿ. ಇಲ್ಲದೆ ಸೇರಿಸುವುದಾಗಿ ಡಿ.ಪಿ. ಐ. ಆದೇಶ  ನೀಡಿದ್ದಾರೆ .

punishment1    ಪ್ರತಿಯೊಂದು ಮಗುವಿನ ತಾಯ್ತಂದೆ ಕಂಗಾಲಾಗುವ ಪರಿಯ ಶಿಕ್ಷೆ ಈ ಪ್ರಾಂಶುಪಾಲೆ ಎಂಬಾಕೆಯದು. ಆಕೆ ಹುಟ್ಟಿಂದ ಹೆಣ್ಣು. ಪ್ರತಿ ಹೆಣ್ಣಿನಲ್ಲೂ ತಾಯ್ತನ ಎಂಬುದು ಸುಪ್ತವಾಗಿದೆ ಎನ್ನುತ್ತಾರೆ. ಮಾತೃ ವಾತ್ಸಲ್ಯವೆಂಬುದು ಸ್ತ್ರೀಯಲ್ಲಿ ಹುದುಗಿದ ವಿಶೇಷಗುಣ. ಆಕೆ ಕರುಣಾಮಯಿ, ಅವಳ ಹೃದಯದಲ್ಲಿ ತಾಯಪ್ರೇಮ ಸದಾ ಎಚ್ಚತ್ತುಕೊಂಡಿರುತ್ತದೆ. ತಾಯ್ತನವೆನ್ನುವುದು ಆಕೆಯಲ್ಲಿ ಸದಾ ಹಸಿರಾಗಿದೆ  .ಹೀಗೆಲ್ಲಾ ಹೇಳಿದ್ದಾರೆ ಪ್ರಾಜ್ನರು. ಇಲ್ಲಿ ನಾಲ್ಕು ವರ್ಷದ ಪುಟ್ಟ ಮಗು ಅನುಭವಿಸಿದ ನರಕಯಾತನೆ ಬಣ್ಣಿಸಲು ಶಬ್ದಗಳಿಲ್ಲ. ಕಂದನಿಗಾದ ಮಾನಸಿಕ ಆಘಾತ ಶಬ್ದಕ್ಕೆ ನಿಲುಕದ್ದು. ಮಗು ಜೊತೆಯ ಹುಡುಗನೊಂದಿಗೆ ಮಾತಾಡಿದ್ದೇ ತಪ್ಪೇ? ಗಟ್ಟಿಯಾಗಿ ಅಳಲೂ ಧೈರ್ಯ ಸಾಲದೆ ಗಂಟೆಗಳ ಕಾಲ ಮುದುಡಿ ಕೂತ ಮಗುವಿಗೆ ಶಾಲೆ ಎಂದರೆ ಕನಸಿನಲ್ಲೂ ಬೆಚ್ಚಿ ಬಟ್ಟೆ ಒದ್ದೆಯಾಗುವ ಶಾಕ್ ಗೆ ಯಾರು ಹೊಣೆ?  ಆ ಪುಟ್ಟ ಹುಡುಗ ಅಮ್ಮ, ಅಪ್ಪನಲ್ಲಿ ಕೂಡಾ ಹೇಳದೆ ಸಹಿಸಿಕೊಂಡಿರಬೇಕಾದರೆ ಅದಾವ ಪರಿ ಬೆದರಿಸಿರಬೇಕು? ಪ್ರತಿಯೊಬ್ಬ ಮಹಿಳೆಯಲ್ಲಿ ಕೂಡಾ ತಾಯ್ತನ ಇರುವುದೇ ಆದಲ್ಲಿ ಈಕೆಯಲ್ಲಿ ಅದೆಲ್ಲಿ ಹೋಗಿತ್ತು? ಅಲ್ಲವಾದರೆ ಆ ತಾಯ್ತನ ಕೇವಲ ಆಕೆಯ ಮಕ್ಕಳಿಗೇ ಮೀಸಲಾಗಿತ್ತಾ?   ಪುಟ್ಟಮಕ್ಕಳಿಗೆ ಕಲಿಸಲು ಮಹಿಳಾ ಅಧ್ಯಾಪಿಕೆಯರಾದರೆ ಮಕ್ಕಳ ಮನಸ್ಸು ಅರ್ಥೈಸಿಕೊಳ್ಳುತ್ತಾರೆ.ಅದಕ್ಕಾಗಿ ಎಲ್.ಕೆ.ಜಿ, ಯು.ಕೆ.ಜಿ. ತರಗತಿಯಲ್ಲಿ ಮಹಿಳಾ ಅಧ್ಯಾಪಕಿಯರಿಗೆ ಪ್ರಾಶಸ್ತ್ಯ. ಇಲ್ಲಿ ಆದ ಘೋರ ದಂಡನೆ ಜಾರಿಯಾಗಿದ್ದು ಕೂಡಾ ಮಹಿಳೆಯೊಬ್ಬಾಕೆಯಿಂದ.    ಹಾಗಿದ್ದರೆ ಈ ತಾಯ್ತನವೆಂಬುದು ಕೇವಲ ತನ್ನ ಮಕ್ಕಳಿಗೆ ಮಾತ್ರ ಮೀಸಲು; ಅನ್ಯ ಮಕ್ಕಳು ಇದಕ್ಕೆ ಹೊರತು ಅನ್ನುವ ಹಾಗಾಯಿತು. ಈಗೀಗ ಬಹಳವಾಗಿ ಈ ಪರಿಯ ದಾರುಣ ದಂಡನೆಗೆ ಎಳೆಯ ಮಕ್ಕಳನ್ನು ಗುರಿಯಾಗಿಸಿ ಹಿಂಸೆ ಮಾಡುವ ಪ್ರವೃತ್ತಿ  ಕಂಡುಬರುತ್ತದೆ. ಇಂಥವರಿಗೆ ಮನಸ್ಸಾಕ್ಷಿ ಅನ್ನುವುದು ಚುಚ್ಚುವುದಿಲ್ಲವೇ? ತಮ್ಮ ತಮ್ಮ ಮಕ್ಕಳಿಗೂ ಇಂಥ ಘೋರ ದಂಡನೆಗೀಡು ಮಾಡುತ್ತಾರಾ?

ಶಾಲೆ ಅನ್ನುವುದು ಮಗುವಿಗೆ ಶಾರೀರಿಕ ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಎಳೆಯಮಗು ಶಾಲೆಯ ಹೆಸರೆತ್ತಿದರೆ ಬೆಚ್ಚಿ ಬೆಪ್ಪಾಗಕೂಡದು. ಹೆತ್ತವರು ಮಗುವಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಜಾಗರೂಕತೆ ವಹಿಸಬೇಕು. ಮಗು ಮಂಕಾಗಿ ಶಾಲೆಗೆ ಹೋಗುವುದಕ್ಕೆ ನಿರಾಕರಿಸಿದರೆ ಆ ಬಗ್ಗೆ ಕೂಲಂಕುಷವಾಗಿ ಅರಿತುಕೊಳ್ಳಬೇಕು. ಅಮೃತ ಸಮಾನವಾದ ತಾಯ್ತನದ ಬದಲು ರಾಕ್ಷಸತನವನ್ನು ಹೊಂದಿದ ಸ್ತ್ರೀಯರಿದ್ದಾರೆ. ಶಾಲೆ ಮಾತ್ರವಲ್ಲ; ಮನೆಗೆಲಸಕ್ಕೆ ಇರಿಸಿಕೊಂಡ ಅಪ್ರಾಪ್ತ ಬಾಲರ ಮೇಲೆ ಕಾದ ಸೌಟಿಂದ ಬರೆ ಹಾಕುವ ಹೆಂಗಸರಿದ್ದಾರೆ. ಸಾಯುವ ಪರಿ ಬಡಿದು ಹಾಕುವ ಸ್ತ್ರೀಯರಿರುತ್ತಾರೆ. ಹಸಿದ ಮನೆಗೆಲಸದ ಹುಡುಗಿಯ ಎದುರು ಬೇಡ ಬೇಡವೆಂಬ ತನ್ನ ಮಗುವಿನ ಬಾಯಿಗೆ ತುಪ್ಪದನ್ನ ತಳ್ಳುವ ತಾಯಿಗೆ ಕೆಲಸದ ಹುಡುಗಿಗೆ ಗಂಜಿನೀರು ಕೊಡಲು ಕೈ ಬಾರದೆ ಇರಬಹುದು. ಸಾಕಿದ ನಾಯಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಆಸೆಯಿಂದ ನೋಡುವ ಬಡ ಮಗುವಿಗೆ ಬೈದು ಓಡಿಸುವುದೂ ಇದೆ. ಅವರು ತಾಯಂದಿರು ಹೌದು;ಆದರೆ ಕೇವಲ ತಮ್ಮ ಮಕ್ಕಳಿಗೆ. ಅನ್ಯ ಮಕ್ಕಳ ಮೇಲೆ ಯಕಶ್ಚಿತ್ ಅನುಕಂಪವೂ ತೋರಲಾರರು. ಎಲ್ಲಾ ತಾಯಂದಿರೂ ಹೀಗಿರುತ್ತಾರೆ ಎನ್ನುವಂತಿಲ್ಲ.

ಪುಟ್ಟಮಗುವಿನ ಮೇಲೆ ಅಮಾನುಷ ಶಿಕ್ಷೆ ವಿಧಿಸಿದ ಕೇರಳದ ಘಟನೆ ಮನಸ್ಸು ಕಲಕಿಹೋಗುವ ದಾರುಣತೆಯದು .ಇಂಥವರಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಈ ಪರಿಯ ಬರ್ಬರತೆ ತಗ್ಗಬಹುದು.

– ಕೃಷ್ಣವೇಣಿ ಕಿದೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: