ಸ್ವಚ್ಚ ಭಾರತ ಅಭಿಯಾನ..!
ತ್ಯಾಗದ ಸಂಕೇತವಾಗಿದ್ದ ಅರೆಬೆತ್ತಲೆಯ ಗಾಂಧಿ,
ಸಂಪ್ರದಾಯ ಮುರಿದು ಕಟ್ಟಲು ಸೂಟು, ಬೂಟು,
ಟೈ ಕಟ್ಟಿಕೊಂಡ ಅಂಬೇಡ್ಕರ್ ಇರ್ವರೂ ನನ್ನೊಳಗೆ ನಿತ್ಯ
ಆಡಳಿತ ಮತ್ತು ವಿರೋಧ ಪಕ್ಷವಾಗಿ ಹೊಡೆದಾಡುತ್ತಾ
ಹೊಸ ಹೊಳುಹುಗಳನ್ನು ಹುಟ್ಟು ಹಾಕಿ ಗಟ್ಟಿಗೊಳಿಸುತ್ತಿದ್ದಾರೆ.
ಆದರೆ..
ವಿರೋಧ ಪಕ್ಷವೇ (ಅಂಬೇಡ್ಕರ) ಇಲ್ಲದ ಇಂದಿನ ಆಡಳಿತ
ಪಕ್ಷದಲಿ ‘ಗಾಂಧಿ’ಯೂ ಅದೇಕೊ ಗೌಣವಾಗಿದ್ದಾರೆ.
ಇರ್ವರ ಅನುಪಸ್ಥಿತಿ ನಮ್ಮ ಪ್ರಭುತ್ವವನ್ನೆ ಅನುಮಾನಿಸುತ್ತಿದೆ.
ನನ್ನ ಹೊಳುಹುಗಳೆಲ್ಲ ‘ಹೊಳೆಯಲಿ ಹುಣಸೆ ತೊಳೆದಂತಾಗಿದೆ’
ಹಾಲಿನಂತಿದ್ದ ಮನಸುಗಳನ್ನೆಲ್ಲಾ ಹದಗೆಡಿಸಿ
ಹಾಲು, ಹಾಲಾಹಲದ ವ್ಯತ್ಯಾಸವೇ ಗೊತ್ತಾಗದ ಹಾಗೆ
ಗೊಂದಲ ಮೂಡಿಸಿ ಗೆದ್ದು ಬಂದ ಗುಂಪೊಂದು ನಿನ್ನೆ ಸಂಜೆ
‘ಬದಲಾವಣೆಗೆ ನಾವು ನಾಂದಿ ಹಾಡಿದ್ದೇವೆ’ ಅನ್ನೊ ಘೋಷಣೆ
ಕೂಗಿದಾಕ್ಷಣವೇ ಎದ್ದು ಕೋಲಹಿಡಿದು, ಕನ್ನಡಕ ಹಾಕಿಕೊಂಡು
ಹೊರಬಂದು ನೋಡುವಷ್ಟರಲ್ಲಿ ಅವರು ದೂರ ಹೋದರು;
ನನ್ನ ಗುಡಿಸಲುದೊಳಗಿನ ಕಂದೀಲು ಕೂಡಾ ಆರಿಹೋಗಿತ್ತು.
‘ಬೇಗ ಏಳ್ರಿ ಇಂದು ಗಾಂಧಿ ಜಯಂತಿ’ ಅಂತಾ ಪತ್ನಿ ತಿವಿದಾಗಲೇ
ಗೊತ್ತಾಯಿತು ಬಾಪು, ಬಾಬಾಸಾಹೇಬ ಕನಸಲಿ ಬಂದು ಹೋದದ್ದು
‘ಸ್ವಚ್ಚ ಭಾರತ ಅಭಿಯಾನ’ದಲಿ ಪೊರಕೆ ಹಿಡಿದು ನಾನು ಪೋಟೋ
ತೆಗೆಸಿಕೊಳ್ಳುತ್ತಿರುವಾಗ ಅಶರೀರ ವಾಣಿಯೊಂದು ಥಟ್ಟನೆ ಹೀಗೆ ಹೇಳಿತು
‘ಲೇ.. ಮೊದ್ಲು ನೀನೊಂದು ಕಸಬರಗೆಯಾಗು ಎಲ್ಲವೂ ಶುಚಿಯಾಗುತ್ತದೆ’
ಮುಖ ಮುಚ್ಚಿಕೊಂಡು ಮನೆಗೆ ಬಂದವನೆ ಕಸಬರಗೆಯನ್ನೆ ನೋಡುತ್ತಿದ್ದೆನೆ
ತಣ್ಣಗೆ ಕಸಗೂಡಿಸಿ ಮನೆಯ ಎಡಮೂಲೆಯಲಿ ಮುದುಡಿ ಕೂರುವ ಮತ್ತೆ
ಅರಳುವ ಈ ತಾವರೆ ನನ್ನೊಳಗೊಂದು ಆಗಾಧವಾದ ಅರಿವು ಮೂಡಿಸಿದೆ.
-ಕೆ.ಬಿ.ವೀರಲಿಂಗನಗೌಡ್ರ, ಬಾಗಲಕೋಟ ಜಿಲ್ಲೆ.
ಸತ್ಯ!