ಮಾಯಾಕೋಲ

Share Button
Lakshmisha J Hegade

ಲಕ್ಷ್ಮೀಶ ಜೆ.ಹೆಗಡೆ

 

ದೇವರಗುಡ್ಡೆ ಗ್ರಾಮದ ಕಾಡಿನ ಮಧ್ಯೆ ಇರುವ ಪಂಜುರ್ಲಿ ದೈವದ ಸಾನ(ದೈವದ ದೇವಸ್ಥಾನ) ದಲ್ಲಿ ತೆಂಬರೆ,ನಾಗಸ್ವರ,ಡೋಲುಗಳ ಸದ್ದು ಮುಗಿಲು ಮುಟ್ಟಿತ್ತು. ಕದೋನಿ, ಗರ್ನಾಲ್ಗಳು ಕಿವಿಗಡಚಿಕ್ಕುವಂತೆ ಅಪ್ಪಳಿಸುತ್ತಿದ್ದವು. ಇಡೀ ಗ್ರಾಮದ ಎಲ್ಲಾ ಜನರೂ ಅಲ್ಲಿ ನೆರೆದಿದ್ದರು.ಅಲ್ಲದೇ ಪರವೂರಿನ ಅನೇಕ ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗದವರು ಆಗಮಿಸಿದ್ದರು. ಸಮಯ ಮಧ್ಯರಾತ್ರಿಯ ಮೇಲಾಗಿತ್ತು.ನಾನೂ ಸಹ ನನ್ನ ಸ್ನೇಹಿತನೊಂದಿಗೆ ಹೋಗಿದ್ದೆ. ಅಲ್ಲಿ ನಡೆಯುತ್ತಿದ್ದುದು ಪಂಜುರ್ಲಿ ಮತ್ತು ಅದರ ಸಹ ದೈವಗಳ ವರ್ಷಾವಧಿ ಕೋಲ. ಅದು ವರ್ಷಕೊಮ್ಮೆ ನಡೆಯುವುದರಿಂದ ಎಲ್ಲಾ ಗ್ರಾಮಸ್ಥರೂ ಸೇರಿ ವಿಜ್ರಂಭಣೆಯಿಂದ ಆಚರಿಸುತ್ತಾರೆ.ಊರ ಎಲ್ಲರೂ ಅದಕ್ಕೆ ವಂತಿಗೆ ಕೊಟ್ಟು ನಾಲ್ಕಾರು ಊರಿಗೆ ಮಾದರಿಯಾಗುವ ರೀತಿಯಲ್ಲಿ ದೈವದ ಉತ್ಸವ ಮಾಡುತ್ತಾರೆ. ಅದಕ್ಕೆ ಪೂರ್ವಭಾವಿಯಾಗಿ ಊರ ಮಕ್ಕಳಿಗೆ, ಯುವಕರಿಗೆ ವಿವಿಧ ರೀತಿಯ ಕ್ರೀಡಾಸ್ಪರ್ಧೆಗಳನ್ನು, ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಅದರಲ್ಲಿ ವಿಜೇತರಾದವರಿಗೆ ಕೋಲದ ದಿನ ಬೆಳಿಗ್ಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಊರಿನ ಗಣ್ಯವ್ಯಕ್ತಿಗಳಿಂದ ಬಹುಮಾನ ವಿತರಣೆ ಮಾಡಿಸುತ್ತಾರೆ. ಊರ ಮಕ್ಕಳು ಉತ್ಸವದಲ್ಲಿ ಖರ್ಚು ಮಾಡಲೆಂದೇ ವರ್ಷವಿಡೀ ಹಣ ಕೂಡಿಡುತ್ತಾರೆ. ಅದಕ್ಕಾಗಿ ಭಾನುವಾರದಂದು ಹಾಗೂ ಇತರ ರಜಾದಿನಗಳಂದು ಕೂಲಿ ಕೆಲಸಕ್ಕೆ ಹೋಗಿ ಹಣ ಸಂಪಾದಿಸುತ್ತಾರೆ. ಹಾಗಾಗಿ ಅವತ್ತು ಕೋಲಕ್ಕಾಗಿ ಇಡೀ ಸಾನವೇ ವಿದ್ಯುದ್ದೀಪಾಲಂಕಾರದಿಂದ ಸಿಂಗಾರಗೊಂಡಿತ್ತು.ಜನರೆಲ್ಲಾ ದೈವಗಳ ನರ್ತನ ಶುರುವಾಗುವುದನ್ನೇ ಎದುರು ನೋಡುತ್ತಿದ್ದರು.

ಕೋಲ ಆರಂಭವಾಯಿತು.ನಿಧಾನವಾಗಿ ಶುರುವಾದ ದೈವಗಳ ನರ್ತನ ವಾದ್ಯ, ಸುಡುಮದ್ದುಗಳ ಸಮ್ಮೇಳದೊಂದಿಗೆ ತಾರಕಕ್ಕೇರಿತು. ಮೈಮೇಲಿನ ಪರಿವೆಯೇ ಇಲ್ಲದೇ ಎಲ್ಲರೂ ಭಕ್ತಿ ಪರವಶರಾಗಿ ದೈವಗಳ ಕೋಲ ನೋಡುತ್ತಿದ್ದರು. ಇದ್ದಕ್ಕಿದ್ದಂತೆಯೇ ಕೋಲ ಕಟ್ಟುವ ತನಿಯನ ಮಗ ವೆಂಕಪ್ಪ ತನ್ನ ತಂದೆ ಪಂಜುರ್ಲಿಯಾಗಿ ಕೋಲ ಕುಣಿಯುತ್ತಿದ್ದರೂ ಅಲ್ಲಿಂದ ಅರ್ಧದಲ್ಲಿಯೇ ಎದ್ದು ಹೊರಟ. ಎಲ್ಲರೂ ಯಾಕೆ ಎಂದು ಕೇಳಿದ್ದಕ್ಕೆ, ತನಗೆ ತಲೆ ನೋಯುತ್ತಿದೆ ಇಲ್ಲಿರಲು ಸಾಧ್ಯವಿಲ್ಲ ಎಂದ. “ತೂಲ ಮಗ,ಅಂಚ ಪೂರ ಕೋಲನ್ ಅರ್ಧೊಡೆ ಬುಡ್ದು ಪೋಯರೆ ಬಲ್ಲಿ.ನಿಕ್ಕ್ ಕುಲ್ಲರೆ ಆಪುಜಿಂಡ ಮೂಲೆ ಪಜೆ ಪಾಡ್ದ್ ಜೆಪ್ಪು, ನಿನ್ನ ಅಮ್ಮೇರೆನ್ ಯಾನ್ ತೂವೋನ್ವೆ”(ನೋಡು ಮಗಾ,ಹಾಗೆಲ್ಲ ಕೋಲವನ್ನು ಅರ್ಧದಲ್ಲಿಯೇ ಬಿಟ್ಟು ಹೋಗಬಾರದು.ನಿನಗೆ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೆ ಇಲ್ಲಿಯೇ ಚಾಪೆ ಹಾಸಿಕೊಂಡು ಮಲಗು, ನಿನ್ನ ತಂದೆಯನ್ನು ನಾನು ನೋಡಿಕೊಳ್ಳುತ್ತೇನೆ) ಎಂದು ತನಿಯನ ಹೆಂಡತಿ ಹೇಳಿದಳು. ಆದರೂ ವೆಂಕಪ್ಪ ಯಾರ ಮಾತನ್ನೂ ಕೇಳದೇ ಮನೆಗೆ ಹೋಗಿ ಮಲಗುತ್ತೇನೆಂದು ಹೇಳಿ ಹೊರಟೇ ಹೋದ. ಕೋಲ ಮುಕ್ತಾಯವಾಗಿ, ದೈವದ ಹೇಳಿಕೆಗಳೆಲ್ಲಾ ಮುಗಿದು, ಗ್ರಾಮಸ್ಥರ ಸಮಸ್ಯೆಗಳಿಗೆ ದೈವ  ಪರಿಹಾರ ಸೂಚಿಸಿ, ಎಲ್ಲರೂ ಸ್ಥಾನದಿಂದ ಹೊರಡುವಷ್ಟರಲ್ಲಿ ಬೆಳಗ್ಗಿನ ಜಾವ ೪ ಗಂಟೆಯಾಗಿತ್ತು. ಹಕ್ಕಿಗಳೆಲ್ಲಾ ಚಿಲಿಪಿಲಿಗುಟ್ಟಲು ಆರಂಭಿಸಿದ್ದವು, ಮುಂಜಾವಿನ ತಂಗಾಳಿ ಹಿತವಾಗಿ ಬೀಸುತ್ತಿತ್ತು.

Panjurli

ಎಲ್ಲರೂ ಸಾನದಿಂದ ಹೊರಟು, ಕಾಡಿನ ಮಧ್ಯೆ ನಡೆದು ಬರುತ್ತಿರುವಾಗ ಒಂದು ಕಡೆ ಎಲ್ಲರೂ ಅವಕ್ಕಾಗಿ ನಿಂತುಬಿಟ್ಟರು. ಅಲ್ಲಿ ತನಿಯನ ಮಗ ವೆಂಕಪ್ಪ ಒಂದು ಮರದ ಹತ್ತಿರ ನಿಂತುಕೊಂಡು “ಯನಾನ್ ಬುಡ್ಪಾಲೆ,ಉಂತರೆ ಆವೊಂದಿಜ್ಜಿ ಕಾರ್ ಬೇನೆ ಆವೋಂದ್ಂಡು”(ನನ್ನನ್ನು ಬಿಡಿಸಿ, ನಿಲ್ಲಲು ಆಗುತ್ತಿಲ್ಲ, ಕಾಲು ನೋಯುತ್ತಿದೆ) ಎಂದು ಒಂದೇ ಸಮನೇ ಕೂಗುತ್ತಾ ಅಳುತ್ತಿದ್ದ. ಏನನ್ನು ಬಿಡಿಸುವುದು? ಯಾರನ್ನು ಬಿಡಿಸುವುದು? ಅಸಲಿಗೆ ವೆಂಕಪ್ಪನನ್ನು ಯಾರೂ ಹಿಡಿದುಕೊಂಡಿರಲೇ ಇಲ್ಲ, ಅವನು ಒಬ್ಬನೇ ಒಂದು ದೊಡ್ಡ ಮರದ ಕೆಳಗೆ ನಿಂತುಕೊಂಡು ಅಳುತ್ತಿದ್ದ. “ಏ ವೆಂಕಪ್ಪಾ ಕೋಡೆ ತೂಂಡ ಕೋಲೋಡ್ದು ಅರ್ಧೋಡೇ ಲಕ್ಕ್ದ್ ಬತ್ತ.ಇತ್ತೆ ತೂಂಡ ಮರದ ಕೈತ್ತಾಲ್ ಎಂಚಿನ ಗೊಬ್ಬೋಂದುಲ್ಲನಾ. ಯಾವು ಬಲ ಇಲ್ಲಗ್ ಪೋಯಿ ನಾಟಕ ಮಲ್ಪೋಚ್ಚಿ.”( ಏ ವೆಂಕಪ್ಪಾ, ನಿನ್ನೆ ನೋಡಿದ್ರೆ ಕೋಲದಿಂದ ಅರ್ಧಕ್ಕೇ ಎದ್ದು ಬಂದೆ. ಈಗ ನೋಡಿದ್ರೆ ಮರದ ಹತ್ತಿರ ನಿಂತುಕೊಂಡು ಏನು ಆಟ ಆಡ್ತಾ ಇದ್ದೀಯಾ. ಸಾಕು ಬಾ ಮನೆಗೆ ಹೋಗೋಣ. ನಾಟಕ ಮಾಡಬೇಡ) ಎಂದು ವೆಂಕಪ್ಪನ ತಂದೆ ಪಂಜುರ್ಲಿಯ ಕೋಲ ಕಟ್ಟುವ ತನಿಯ ಹೇಳಿದ. “ಯಾನ್ ನಾಟಕ ಮಲ್ತೋಂದಿಜ್ಜಿ, ಯನಾನ್ ಎಂಚಿನನಾ ಪತೋಂದುಡು, ಯೆಂಕ್ ಅವೆಡ್ದ್ ಬುಡ್ಪಾವೋಂದು ಪಿದಯಿ ಬರ್ಯರೆ ಆವೋಂದಿಜ್ಜಿ. ನಿಕುಲೇ ಬತ್ತ್ದ್ ಬುಡ್ಪಾಲೆ”( ನಾನು ನಾಟಕ ಮಾಡುತ್ತಿಲ್ಲ, ನನ್ನನ್ನು ಎನೋ ಗಟ್ಟಿಯಾಗಿ ಹಿಡಿದುಕೊಂಡಿದೆ ಅದರಿಂದ ಬಿಡಿಸಿಕೊಂಡು ಬರಲು ನನಗೆ ಆಗುತ್ತಿಲ್ಲ, ನೀವೇ ಬಂದು ಬಿಡಿಸಿ) ಎಂದು ವೆಂಕಪ್ಪ ಮತ್ತೂ ಜೋರಾಗಿ ಅಳತೊಡಗಿದ. ಒಂದಿಬ್ಬರು ಯುವಕರು ಹೋಗಿ ವೆಂಕಪ್ಪನ ಕೈ ಹಿಡಿದು ಎಳೆದರಾದರೂ ವೆಂಕಪ್ಪ ಮರದ ಬುಡದಿಂದ ಒಂದಿಂಚೂ ಕದಲಲಿಲ್ಲ. ಹತ್ತು ಜನ ಬಂದು ಬಿಡಿಸಲು ನೋಡಿ ಆಗದೇ ಕುಸಿದು ಕುಳಿತರೇ ಹೊರತು ವೆಂಕಪ್ಪನನ್ನು ಬಿಡಿಸಲಾಗಲಿಲ್ಲ. “ಅಯ್ಯೋ ಯಾನ್ ಕೋಡೆನೇ ಪಂಡೆ, ಕೋಲ ಬುಡ್ದು ಅರ್ಧೋಕ್ಕೇ ಪೋಚ್ಚಿಂದ್. ಈ ಕೇಂಡಾನಾ, ಇತ್ತೆ ತೂಲ ಆ ಪಂಜುರ್ಲಿನೇ ನಿನಾನ್ ಪದೋಂದುಡಾ ಎಂಚಿನನಾ, ನನ ನಿನಾನ್ ಎಂಚ ಬಚಾವು ಮಲ್ಪುನಿ”( ಅಯ್ಯೋ ನಾನು ನಿನ್ನೆಯೇ ಹೇಳಿದೆ, ಕೋಲ ಬಿಟ್ಟು ಅರ್ಧಕ್ಕೇ ಹೋಗಬೇಡ ಅಂತ  ನೀನು ಕೇಳಿದೆಯಾ ಈಗ ನೋಡು ಆ ಪಂಜುರ್ಲಿಯೇ ನಿನ್ನನ್ನು ಹಿಡಿದುಕೊಂಡಿದೆಯೋ ಏನೋ. ಇನ್ನು ನಿನ್ನನ್ನು ಬಚಾವು ಮಾಡುವುದು ಹೇಗೆ”) ಎಂದು ವೆಂಕಪ್ಪನ ತಾಯಿ ಜೋರಾಗಿ ಅಳತೊಡಗಿದಳು. ಎಲ್ಲರಿಗೂ ಚಿಂತೆ ಶುರುವಾಯಿತು.ಅಲ್ಲ ಭೂತ ಕಟ್ಟುವ ತನಿಯನ ಮಗನಿಗೇ ಹೀಗಾದರೆ ಹೇಗೆಂದು ಎಲ್ಲರೂ ಅವಲತ್ತುಗೊಂಡರು.

ತಕ್ಷಣವೇ ಎಲ್ಲರೂ ಬಲ್ಮೆ ಹೇಳುವವರ ಬಳಿ(ಜ್ಯೋತಿಷ್ಯ ಹೇಳುವವರು) ಹೋದರು. ಅವರು ಅಂಜನ ಹಾಕಿ ನೋಡಿದವರೇ ಇದು ಪಂಜುರ್ಲಿ ಭೂತದ್ದೇ ಕೆಲಸ.ಆದರೆ ಇದಕ್ಕೆ ಪರಿಹಾರ ನಾವು ಸೂಚಿಸುವಂತಿಲ್ಲ, ಅದನ್ನು ನೀವು ದೈವದ ಎಲ್ಲಾ ಕಾರ್ಯಕ್ರಮಗಳನ್ನು ನೆರವೇರಿಸುವ ಪೆಜತ್ತಾಯರ ಹತ್ತಿರ ಕೇಳಬೇಕು ಎಂದರು. ಸರಿ ಎಂದು ಎಲ್ಲರೂ ಪೆಜತ್ತಾಯರ ಮನೆಗೆ ಬಂದರು. ಎಲ್ಲವನ್ನೂ ಕೇಳಿಸಿಕೊಂಡ ಪೆಜತ್ತಾಯರು ” ನಾನು ಈಗಲೇ ಇದಕ್ಕೆ ಪರಿಹಾರವನ್ನು ಹೇಳಲಾರೆ.ನಾವೆಲ್ಲರೂ ದೈವದ ಚಾವಡಿಗೆ ಹೋಗೋಣ.ಅಲ್ಲಿ ನಾನು ದೈವದ ಬಳಿ ಪ್ರಾರ್ಥನೆ ಮಾಡಿ ಪ್ರಸಾದ ಕೇಳುತ್ತೇನೆ. ದೈವದಿಂದ ಯಾವ ರೀತಿ ಸೂಚನೆ ಬರುತ್ತದೆಯೋ ಹಾಗೆಯೇ ಮಾಡೋಣ” ಎಂದರು. ಸರಿ ಎಂದು ಒಪ್ಪಿಕೊಂಡು ಎಲ್ಲರೂ ಮತ್ತೆ ಕಾಡಿನ ಮಧ್ಯೆ ಇರುವ ದೈವದ ಸಾನಕ್ಕೆ ಬಂದರು.ಅಲ್ಲಿ ಪೆಜತ್ತಾಯರು ಚಾವಡಿಗೆ ಹೋಗಿ ದೈವದ ಮುಂದೆ ಪ್ರಾರ್ಥನೆ ಮಾಡಿಕೊಂಡರು. ದೈವದಿಂದ ಪ್ರಸಾದ ನಿರೀಕ್ಷಿಸಿದರು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದವರು ಗ್ರಾಮಸ್ಥರನ್ನುದ್ದೇಶಿಸಿ  “ದೈವದಿಂದ ಸೂಚನೆ ಸಿಕ್ಕಿದೆ, ತನಿಯನ ಮಗ ವೆಂಕಪ್ಪ ಕೋಲದಿಂದ ಅರ್ಧಕ್ಕೇ ಎದ್ದು ಹೋದದ್ದರಿಂದ ಪಂಜುರ್ಲಿ ಕೋಪಗೊಂಡಿದೆ.ಅದಕ್ಕೇ ಪ್ರಾಯಶ್ಚಿತ್ತ ಕೇಳುತ್ತಿದೆ. ಅದಕ್ಕಾಗಿ 3 ದಿನಗಳ ನಂತರ ಮತ್ತೊಂದು ಕೋಲವಾಗಬೇಕು, ಕೇವಲ ಪಂಜುರ್ಲಿ ಮಾತ್ರವಲ್ಲ ಎಲ್ಲಾ ದೈವಗಳಿಗೂ ಕೋಲವಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಿಂದ ತಲೆಗೆ ಒಂದರಂತೆ ಒಂದೊಂದು ಸೇರು ಅಕ್ಕಿ, ಒಂದೊಂದು ತೆಂಗಿನಕಾಯಿಯನ್ನು ಕೊಡಬೇಕು ಮತ್ತು ಪ್ರತೀ ಮನೆಯಿಂದಲೂ ಒಂದೊಂದು ಕೋಳಿ ಬಲಿ ಕೊಡಬೇಕು. ಮುಂದಿನ 3 ದಿನಗಳ ಕಾಲ ಯಾರೂ ಊರು ಬಿಟ್ಟು ಹೋಗಬಾರದು, ಯಾವುದರಲ್ಲಿಯೂ ಲೋಪವಾಗಕೂಡದು. ಆಗ ಮಾತ್ರ ವೆಂಕಪ್ಪನಿಗೆ ಮುಕ್ತಿ”ಎಂದರು.

TV reporter cartoonಎಲ್ಲರೂ 3 ದಿನಗಳ ನಂತರ ನಡೆಯುವ ಪ್ರಾಯಶ್ಚಿತ್ತದ ಕೋಲಕ್ಕೆ ಸಿಧ್ಧತೆ ಮಾಡಿಕೊಳ್ಳತೊಡಗಿದರು.  ಕಷ್ಟಪಟ್ಟು ಅಕ್ಕಿ, ತೆಂಗಿನಕಾಯಿಯನ್ನು ಹೊಂದಿಸಿ ಕೊಡತೊಡಗಿದರು.  ವೆಂಕಪ್ಪನಿಗೆ ಮರದ ಕೆಳಗೇ ಊಟ, ನೀರು ಕೊಡಲಾಯಿತು. ಈ ನಡುವೆಯೇ ಯಾರೋ ಪತ್ರಿಕೆಗಳಿಗೆ, ನ್ಯೂಸ್ ಚಾನೆಲ್ ಗಳಿಗೆ ಸುದ್ದಿ ಮುಟ್ಟಿಸಿದರು. ಸುದ್ದಿ ಸಿಕ್ಕಿದ್ದೇ ತಡ ಎಲ್ಲಾ ನ್ಯೂಸ್ ಚಾನೆಲ್ ನವರೂ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಒಂದೇ ಮಾತನ್ನು ನೂರು ಸಲ ಹೇಳತೊಡಗಿದರು “ಹೌದು ವೀಕ್ಷಕರೇ, ನೀವು ನೋಡ್ತಾ ಇರುವಂಥದ್ದು ದೇವರಗುಡ್ಡೆ ಗ್ರಾಮದಲ್ಲಿ ವೆಂಕಪ್ಪ ಎನ್ನುವಂತಹ ವ್ಯಕ್ತಿ ತನ್ನ ತಪ್ಪಿನಿಂದಾಗಿ ದೈವದ ಕೋಪಕ್ಕೆ ತುತ್ತಾಗಿ ಒಂದು ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವುದನ್ನು. ಮೇಲ್ನೋಟಕ್ಕೆ ಅವನನ್ನು ಯಾರೂ ಹಿಡಿದುಕೊಂಡಿಲ್ಲ ಅಂತ ಅನ್ನಿಸಿದರೂ ವೆಂಕಪ್ಪನಿಗೆ ಒಂದು ಹೆಜ್ಜೆಯನ್ನೂ ಇಡಲಾಗುತ್ತಿಲ್ಲ.ಅವನು ಈಗಾಗಲೇ ಬಹಳಷ್ಟು ಸುಸ್ತಾಗಿರುವುದರಿಂದ ನಮ್ಮ ಜೊತೆ ಅವನಿಗೆ ಮಾತನಾಡಲೂ ಆಗುತ್ತಿಲ್ಲ.ಆತ ಸ್ವಲ್ಪ ಚೇತರಿಸಿಕೊಂಡ ಕೂಡಲೇ ನಾವು ಅವನನ್ನು ಮಾತನಾಡಿಸಲು ಪ್ರಯತ್ನಿಸುತ್ತೇವೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ಇನ್ನೊಂದು ಕೋಲ ಆಗಬೇಕೆಂದು ಪೆಜತ್ತಾಯರು ಹೇಳಿದ್ದಾರೆ. ಇನ್ನು ಸ್ವಲ್ಪ ಸಮಯದ ನಂತರ ಅವರೂ ನಮ್ಮೊಡನೆ ಮಾತನಾಡುತ್ತಾರೆ. ಅಲ್ಲದೇ ನಮ್ಮ ಸ್ಟೂಡಿಯೋದಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಖ್ಯಾತ ಜ್ಯೋತಿಷಿಗಳೊಂದಿಗೆ, ಭೂತ ಕಟ್ಟುವವರೊಂದಿಗೆ ಬಿಗ್ ಡಿಬೇಟ್ ಆರಂಭವಾಗಲಿದೆ. ನಾವು ಸತತವಾಗಿ ಇಲ್ಲಿನ ಕ್ಷಣ ಕ್ಷಣದ ಮಾಹಿತಿಯನ್ನೂ ಕೊಡುತ್ತೇವೆ, ಅದಕ್ಕೊ ಮೊದಲು ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತೇವೆ. ನೀವು ಮಾತ್ರ ಎಲ್ಲೂ ಹೋಗಬೇಡಿ”. ಪತ್ರಿಕೆಗಳಲ್ಲೂ ಸುದ್ದಿ ಪ್ರಕಟವಾಯಿತು. ಆ ಕ್ಷೇತ್ರದ ಶಾಸಕರಾದ ಜೀವರಾಜ ಹೆಗ್ಡೆಯವರು ಸ್ಥಳಕ್ಕೆ ಬಂದು ” 3 ದಿನಗಳ ನಂತರ ನಡೆಯಲಿರುವ ಪ್ರಾಯಶ್ಚಿತ್ತದ ಕೋಲಕ್ಕೆ ನಾನೂ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತೇನೆ.ಅಲ್ಲದೇ ವೆಂಕಪ್ಪನಿಗೆ ಪರಿಹಾರವಾಗಿ 50000 ರೂಪಾಯಿ ಘೋಷಿಸಿದ್ದೇನೆ. ಆದರೆ ವೆಂಕಪ್ಪನನ್ನು ಬಿಡಿಸಲು ಅಗ್ನಿಶಾಮಕದವರ ನೆರವೂ ಬೇಕು, ಇನ್ನು ಕೆಲವೇ ಘಂಟೆಗಳಲ್ಲಿ ಅವರು ಇಲ್ಲಿರುತ್ತಾರೆ ” ಎಂದರು.

3 ದಿನ ಕಳೆಯಿತು. ರಾತ್ರಿ ನಡೆಯುವ ಕೋಲಕ್ಕೆ ಎಲ್ಲಾ ಸಿಧ್ಧತೆಯೂ ನಡೆದಿತ್ತು. ಅಗ್ನಿಶಾಮಕದರು ರಾತ್ರಿಯೂ ಊರ ಹೊರಗಿನಿಂದಲೇ ತಮ್ಮ ವಾಹನದಿಂದ ಲೇಸರ್ ಲೈಟ್ ಕಾಡಿನೊಳಗೆ ಹಾಯಿಸಿ ವೆಂಕಪ್ಪ ಸಿಕ್ಕಿಹಾಕಿಕೊಂಡಿದ್ದ ಮರ ಪ್ರಕಾಶಮಾನವಾಗಿ ಕಾಣುವಂತೆ ಮಾಡಿ ತಮ್ಮ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ವೆಂಕಪ್ಪನನ್ನು ಮಾತ್ರಾ ಬಿಡಿಸಲು ಸಾಧ್ಯವಾಗಲಿಲ್ಲ. ರಾತ್ರಿಯಾಯಿತು ಕೋಲ ಆರಂಭವಾಯಿತು. ತನಿಯ ಪಂಜುರ್ಲಿ ಭೂತ ಕಟ್ಟಿದ್ದ. ಅಲ್ಲದೇ ಗುಳಿಗ, ಕಲ್ಲುಟ್ಟಿ, ಪಿಲಿಚಾಮುಂಡಿ, ಮೈಸಂದಾಯ ದೈವಗಳೂ ಪಂಜುರ್ಲಿಯ ಮನವೊಲಿಸಲು ಬಂದಿದ್ದವು. ಎಲ್ಲಾ ದೈವಗಳೂ ಊರಿಡೀ ಮೆರವಣಿಗೆ ಬರುತ್ತಾ, ಎಲ್ಲರ ಮನೆಯ ಮುಂದೆಯೂ ಗಗ್ಗರ ಇಟ್ಟು ನರ್ತಿಸುತ್ತಾ ಕೊನೆಗೆ ಕಾಡಿನ ಮಧ್ಯೆ ಇರುವ ಸ್ಥಾನಕ್ಕೆ ಬಂದು ತಲುಪಿದವು. ಅಲ್ಲಿ ಜೋರಾಗಿ ನರ್ತಿಸುತ್ತಾ ಗಗ್ಗರ ಇಟ್ಟವು. ಎಲ್ಲರೂ ಭಕ್ತಿಯಿಂದ ಕೈಮುಗಿದು, ಪಂಜುರ್ಲಿಯಲ್ಲಿ ಬೇಡಿಕೊಳ್ಳತೊಡಗಿದರು. ನಂತರ ಎಲ್ಲಾ ದೈವಗಳೂ ವೆಂಕಪ್ಪ ಸಿಕ್ಕಿ ಹಾಕಿಕೊಂಡಿದ್ದ ಮರದ ಕೆಳಗೆ ಗಗ್ಗರ ಇಟ್ಟು ನರ್ತಿಸಿ ಅವನನ್ನು ಬಿಡಿಸಲು ಅಲ್ಲಿಗೆ ತೆರಳಿದವು. ನೆರೆದಿದ್ದ ಎಲ್ಲಾ ಜನರೂ ಭಕ್ತಿಯಿಂದ ಕೈಮುಗಿದು ದೈವದ ಮುಂದೆ ಭಕ್ತಿ-ಭಾವದಿಂದ ವೆಂಕಪ್ಪನಿಗೆ ಬಿಡುಗಡೆ ಸಿಗಲಿ ಎಂದು ಬೇಡಿಕೊಳ್ಳತೊಡಗಿದರು. ನಾನೂ ಕೈಮುಗಿದು ನಿಂತುಕೊಂಡಿದ್ದೆ. ನನ್ನ ಸ್ನೇಹಿತ ಮಾತ್ರ ಪ್ಯಾಂಟಿನ ಜೇಬಿಗೆ ಕೈಹಾಕಿಕೊಂಡು ಎಲ್ಲರನ್ನೂ ನೋಡುತ್ತಿದ್ದ. ನಾನು ಅವನಿಗೆ “ಏ ಭಕ್ತಿಯಿಂದ ಕೈಮುಗಿದು ಪಂಜುರ್ಲಿಯಲ್ಲಿ ಬೇಡು ಮಾರಾಯ, ಆಮೇಲೆ ನೀನು ಕೈಮುಗಿಯಲಿಲ್ಲ ಎಂಬ ಕಾರಣದಿಂದಲೇ, ಪಂಜುರ್ಲಿ ಕೋಪಗೊಂಡು ಮತ್ತೇನಾದರೂ ಮಾಡೀತು” ಅಂತ ಜೋರಾಗಿ ನನ್ನ ಮೊಣಕೈಯಿಂದ ಅವನ್ನು ತಿವಿಯತೊಡಗಿದೆ.

 “ಏ ಏನು ತಿವಿಯುತ್ತಾ ಇದ್ದೀಯಲ್ಲಾ, ನಿನ್ನೆ ರಾತ್ರಿ ಕೋಲಕ್ಕೆ ಹೋಗಿ ಅರ್ಧಕ್ಕೇ ಎದ್ದು ಬಂದ್ಯಲ್ಲಾ, ಏನು ಅದರ ಕನಸು ಬೀಳ್ತಾ ಇದ್ಯಾ ಹೇಗೆ.ತಿವಿಯಬೇಡ ಸುಮ್ಮನೇ ಮಲಗು” ಎಂದು ಸ್ನೇಹಿತ ಕೂಗಿ ಮಗ್ಗಲು ಬದಲಿಸಿ ಮಲಗಿದ. ನಾನು ಬೆವರುತ್ತಾ ಎದ್ದು ಕುಳಿತೆ..

 

– ಲಕ್ಷ್ಮೀಶ ಜೆ.ಹೆಗಡೆ

1 Response

  1. savithrisbhat says:

    ಮಾಯಾ ಕೋಲ ಬಹಳ ಚೆನ್ನಾಗಿತ್ತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: