ಜಗವೆಲ್ಲ ನಗುತಿರಲಿ
ನಗುವುದು ಸಹಜ ಧರ್ಮ
ನಗಿಸುವುದು ಪರಧರ್ಮ
ನಗುವ ಕೇಳುತ
ನಗುವುದತಿಶಯ ಧರ್ಮ
ಎಂದು ಡಿ.ವಿ.ಜಿ ಹೇಳಿರುವಂತೆ ನಗುವುದು ಒಂದು ಸಹಜ ಕ್ರಿಯೆ. ನಗು ಕವಿಯ ಕಾವ್ಯಕ್ಕೆ ಕಲಾಕಾರನ ಕುಂಚಕ್ಕೆ ನವ್ಯ ಸೆಲೆ. ನಗೆ ಸ್ನೇಹ ಸಂಬಂಧಗಳಿಗೆ ಸುಂದರವಾದ ಸೇತುವೆಯಿದ್ದಂತೆ. ಒಂದು ಸುಂದರವಾದ ನಗು ಅಸಂಖ್ಯಾತ ಮಿತ್ರರನ್ನು ಕ್ಷಣಮಾತ್ರದಲ್ಲಿ ಗಳಿಸಿಕೊಡುವುದು, ಅಷ್ಟೇ ಅಲ್ಲ ಶತ್ರುತ್ವವನ್ನು ತೊಡೆದು ಹಾಕಿ, ಮಿತ್ರತ್ವವನ್ನು ಬೆಳೆಸುವುದು.
ಒಂದೇ ಒಂದು ಕಿರುನಗೆ ಸಾಕು ಎಲ್ಲರನ್ನು ಆಕರ್ಷಿಸಲು ಬಾಲಗೋಪಾಲನ ಬಾಲ್ಯದ ತುಂಟನಗೆ, ತಾಯಿ ಯಶೋಧೆಯ ಕೋಪವನ್ನು ಕ್ಷಣಮಾತ್ರದಲ್ಲಿ ಕರಗಿಸಿ ಬಿಡುತಿತ್ತು. ಭಗವಾನ ಬುದ್ಧರ ಕರುಣಾಪುರಿತ ನಗು ಮಹಾಕ್ರೂರಿ ಅಂಗುಲಿಮಾಲನ ವ್ಯಕ್ತಿತ್ವವನ್ನೇ ಬದಲಾಯಿಸಿತು. ಶ್ರೀ ರಾಮಕೃಷ್ಣರ ಕಿರುನಗೆ ಭಕ್ತರ ಹೃದಯವನ್ನು ಸೂಜಿಗಲ್ಲಿನಂತೆಸೆಳೆಯಿತು. “Laughter is the best medicine” ಎಂದು ವೈದ್ಯ ವಿಜ್ಞಾನಿಗಳೆ ಹೇಳಿರುವಂತೆ ನಗು ಮನದ ದುಗುಡವನ್ನು ಕಳಚಿ ಚೆಲ್ಲುವುದು ಅಷ್ಟೇ ಅಲ್ಲ, ವ್ಯಕ್ತಿಯ ಸೌಂದರ್ಯ ಮತ್ತು ಆಯುಷ್ಯವನ್ನು ವೃದ್ಧಿಸುವುದು.
ನಗುವುದು ನಗಿಸುವುದು ಒಂದು ಶ್ರೇಷ್ಠ ಕಲೆ.ಇಂತಹ ನಗು ನೋಡುಗರನ್ನು ಆಕರ್ಷಿಸಿ ಸಂತಸವನ್ನು ಕೊಡಬೇಕೆ ಹೊರತು, ನೋವನ್ನಲ್ಲ. ಹಾಸ್ಯ ಒಳ್ಳೆಯದಾದರು, ಅಪಹಾಸ್ಯ ಒಳ್ಳೆಯದಲ್ಲ , ಅತಿಯಾದರೆ ಅಮೃತವು ಸಹ ವಿಷ ಎಂಬಂತೆ ಹಾಸ್ಯ ಮಿತವಾಗಿದ್ದರೆ ಚೆನ್ನ. ಸಾಧಾರಣವಾಗಿ ನಮ್ಮ ವಿದ್ಯಾರ್ಥಿಗಳಲ್ಲಿ ಗಮನಿಸಿರುವಂತೆ ಒಂದು ಚಿಕ್ಕ ವಿಷಯವನ್ನು ಇಟ್ಟುಕೊಂಡು ಗೆಳೆಯ ಗೆಳತಿಯರನ್ನು ಅಪಹಾಸ್ಯ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಅಪಹಾಸ್ಯಕ್ಕೆ ಗುರಿಯಾದವರು ಅನುಭವಿಸುವ ಹಿಂಸೆ, ನೋವು, ಹಿಂಜರಿಕೆಯನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ವಿದ್ಯೆಗೆ ವಿನಯವೇ ಭೂಷಣ ಎನ್ನುವಂತೆ ವಿದ್ಯಾರ್ಥಿಗಳಾದ ನಾವುಗಳು ವಿದ್ಯೆಯ ಜೊತೆಗೆ ವಿನಯವನ್ನು ಮೈಗೂಡಿಸಿಕೊಂಡರೆ ಯಶಸ್ಸಿನ ಮೆಟ್ಟಿಲನ್ನು ಏರಬಹುದು.
ಮಾನವನ ಜೀವನ ನೀರ ಮೇಲಿನ ಗುಳ್ಳೆಯಿದ್ದಂತೆ. ಕ್ಷಣಕಾಲ ನೋಡುಗನ ಕಣ್ಮನ ತಣಿಸಿ ಮಾಯವಾಗುವುದು. ಕ್ಷಣಿಕವಾದ ಬದುಕಿನಲ್ಲಿ, ನಾವು ನಮ್ಮಲ್ಲಿರುವ ಅಹಂ, ದ್ವೇಷವನ್ನು ಮರೆತು ಎಲ್ಲರೊಡನೇ ಬೆರೆತು , ಪ್ರೀತಿ ,ವಿಶ್ವಾಸ , ಕರುಣೆ ,ಸಹಾನುಭೂತಿಯ ಜ್ಯೋತಿಯನ್ನು ಬೆಳಗಿಸಿ ಇತರರಿಗೆ ಬೆಳಕು ನೀಡಲು ಯತ್ನಿಸಬೇಕು. ನಾವು ಒಬ್ಬರ ಸಂತೋಷದಲ್ಲಿ ಪಾಲ್ಗೊಂಡರೆ, ಮುಂದೊಂದು ದಿನ ನಮ್ಮ ಸಂತಸದ ಕ್ಷಣಗಳಲ್ಲಿ ಇತರರು ಭಾಗಿಗಳಾಗುವರು. ನಮ್ಮಲ್ಲಿಯ ಈರ್ಷೆ, ದ್ವೇಷ , ದುಗುಡ-ದುಮ್ಮಾನಗಳನ್ನು ಮರೆತು ನಗು-ನಗುತ ನಲಿಯುವ.
ಜಗವೆಲ್ಲ ನಗುತಿರಲಿ
ಜಗದಳಲು ನನಗಿರಲಿ
ನಾನಳಲು ಜಗವೆನ್ನ ಎತ್ತಿಕೊಳ್ಳದೇ
ನಾ ನಕ್ಕು ಜಗದಳಲು ನೋಡಬಹುದೇ.
ಈಶ್ವರ ಸಣಕಲ್ಲರ ಈ ನುಡಿ ಎಷ್ಟು ಸುಂದರ, ಇದು ನಮ್ಮ ಜೀವನದ ಭಾಗವಾದರೆ……!
– ರೇಷ್ಮಾ ಉಮೇಶ, ಚಿತ್ರಾಪುರ.¨
ತುಂಬಾ ಚನ್ನಾಗಿದೆ ಅಕ್ಕ
ಬರಹ ಚೆನ್ನಾಗಿದೆ. ಬರೆಯುತ್ತಿರಿ.
nice
ಚೆನ್ನಾಗಿದೆ….