ಶಿಕ್ಷಣದ ವ್ಯಾಪಾರೀಕರಣಕ್ಕೆ ಯಾರು ಕಾರಣ?

Share Button
Lakshmisha J Hegade

ಲಕ್ಷ್ಮೀಶ ಜೆ.ಹೆಗಡೆ

 

ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿನ ವ್ಯಂಗ್ಯಚಿತ್ರವೊಂದು ನನ್ನ ಗಮನ ಸೆಳೆಯಿತು.ಅದರಲ್ಲಿ ಹೆಂಡತಿ ಗಂಡನಿಗೆ ಈ ರೀತಿ ಹೇಳುತ್ತಾಳೆ. “ರೀ ಪಕ್ಕದ ಮನೆಯವರು ಅವರ ಮಗುವನ್ನ ಎಲ್.ಕೆ.ಜಿ.ಗೆ ಒಂದು ಲಕ್ಷ ರೂಪಾಯಿ ಕೊಟ್ಟು ಪ್ರತಿಷ್ಠಿತ ಕಾನ್ವೆಂಟ್ ಶಾಲೆಗೆ ಸೇರಿಸಿದ್ದಾರೆ.ನಾವು ಸಾಲ ಮಾಡಿಯಾದರೂ ನಮ್ಮ ಮಗುವನ್ನು ಒಂದುವರೆ ಲಕ್ಷ ಫೀಸ್ ಕೊಟ್ಟು ಇನ್ನೊಂದು ಒಳ್ಳೆಯ ಕಾನ್ವೆಂಟ್ ಶಾಲೆಗೆ ಸೇರಿಸೋಣ.ಅವರಿಗಿಂತ ನಾವು ಯಾವುದೇ ರೀತಿಯಲ್ಲಿ ಕಮ್ಮಿ ಎನ್ನಿಸಿಕೊಳ್ಳಬಾರದು” ಈ ವ್ಯಂಗ್ಯಚಿತ್ರವೊಂದೇ ಸಾಕು ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಿಳಿಸಲು.ಶಿಕ್ಷಣವು ಯಾವ ರೀತಿ ವ್ಯಾಪಾರವಾಗಿ ಬದಲಾಗಿದೆ,ಪೋಷಕರ ಮನಸ್ಥಿತಿ ಹೇಗಿದೆ,ಸರ್ಕಾರ ಇದರ ಬಗ್ಗೆ ಹೇಗೆ ವರ್ತಿಸುತ್ತಿದೆ ಎಲ್ಲವನ್ನೂ ನಾವು ತಿಳಿದುಕೊಳ್ಳಬಹುದು.ಇತ್ತೀಚೆಗೆ ಬಿಡುಗಡೆಯಾದ ಅರ್ಜುನ್ ಸರ್ಜಾ ಅವರ ‘ಅಭಿಮನ್ಯು’ ಚಿತ್ರವೂ ಶಿಕ್ಷಣದ ವ್ಯಾಪಾರೀಕರಣದ ಕಥೆಯನ್ನೇ ಹೊಂದಿದೆ.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರುಕುಲ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು.ಆಶ್ರಮದಲ್ಲಿಯೇ ವಿದ್ಯಾರ್ಥಿಗಳು ಉಳಿದುಕೊಂಡು,ಗುರುಗಳ ಸೇವೆ ಮಾಡಿಕೊಂಡು ವಿದ್ಯೆ ಕಲಿಯಬೇಕಾಗಿತ್ತು.ಗುರುಗಳು ತಮಗೆ ಗೊತ್ತಿದ್ದ ಸರ್ವ ವಿದ್ಯೆಯನ್ನೂ ಶಿಷ್ಯರಿಗೆ ಕಲಿಸುತ್ತಿದ್ದರು.ಕೇವಲ ಸಾಂಪ್ರದಾಯಿಕ ಶಿಕ್ಷಣವಷ್ಟೇ ಅಲ್ಲದೇ ಧರ್ಮ,ಸಂಸ್ಕೃತಿ,ಆರೋಗ್ಯ,ಶಸ್ತ್ರ ವಿದ್ಯೆ ಹೀಗೆ ಎಲ್ಲಾ ಬಗೆಯ ವಿದ್ಯೆಯನ್ನೂ ಕಲಿಸಲಾಗುತ್ತಿತ್ತು.ವಿದ್ಯಾರ್ಥಿಗಳು ಸರ್ವ ಸಂಪನ್ನರಾದ ಮೇಲೆಯೇ ಮನೆಗೆ ತೆರಳುತ್ತಿದ್ದರು.ಇಂಥ ಶಿಕ್ಷಣದಲ್ಲಿ ಗುರುಗಳು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿಸುವ ಏಕೈಕ ಉದ್ದೇಶದಿಂದ ತಮಗೆ ಗೊತ್ತಿರುವ ವಿದ್ಯೆಯನ್ನೆಲ್ಲಾ ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಿದ್ದರು.ಕೊನೆಯಲ್ಲಿ ಗುರುದಕ್ಷಿಣೆಯಾಗಿ ಏನನ್ನಾದರೂ ಕೇಳುತ್ತಿದ್ದರು.ಅದೂ ಸಹ ಜೀವನಕ್ಕೆ ಅಗತ್ಯವಿರುವಷ್ಟು ಮಾತ್ರ.ಎಲ್ಲಿಯೂ ಅತಿಯಾಸೆ ತೋರಿಸುತ್ತಿರಲಿಲ್ಲ.ಗುರುದಕ್ಷಿಣೆ ಕೊಡಲು ಸಾಧ್ಯವಿಲ್ಲದ ವಿದ್ಯಾರ್ಥಿಗಳಿಗೂ ವಿದ್ಯೆ ಕಲಿಸುತ್ತಿದ್ದರು.

ಭಾರತಕ್ಕೆ ಬ್ರಿಟೀಷರ ಆಗಮನದೊಂದಿಗೆ ಗುರುಕುಲ ಶಿಕ್ಷಣ ಪದ್ಧತಿ ನಿಧಾನವಾಗಿ ನಶಿಸಲಾರಂಭಿಸಿ ಮೆಕಾಲೆ ಶಿಕ್ಷಣ ಜಾರಿಗೆ ಬಂತು.ಆಂಗ್ಲ ಭಾಷೆಯನ್ನು ಕಲಿಯುವತ್ತ ಆಕರ್ಷಿತರಾದ ಜನರು ಗುರುಕುಲವನ್ನು ನಿರ್ಲಕ್ಷಿಸತೊಡಗಿದರು.ಬ್ರಿಟೀಷ್ ಆಡಳಿತವಿದ್ದಾಗ ಎಲ್ಲರಿಗೂ ಶಿಕ್ಷಣದ ಭಾಗ್ಯವಿರಲಿಲ್ಲ.ಕೇವಲ ಶ್ರೀಮಂತರು ಮತ್ತು ಮೇಲ್ವರ್ಗದ ಜನರು ಮಾತ್ರ ಶಾಲೆಗೆ ಹೋಗಿ ಕಲಿಯುತ್ತಿದ್ದರು.ಸ್ವಾಂತಂತ್ರ್ಯೋತ್ತರದಲ್ಲಿ ಅನೇಕ ಸರ್ಕಾರಿ ಶಾಲೆಗಳು ಸ್ಥಾಪನೆಯಾದರೂ ಶಿಕ್ಷಣದ ಪ್ರಮಾಣದಲ್ಲಿ ಏರಿಕೆಯಾಗಲಿಲ್ಲ.ಸಂವಿಧಾನ ರಚನೆಯಾದ ಮೇಲೆ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ಬಂತು.ಸರ್ಕಾರೀ ಶಾಲೆಗಳಿಗೆ ವಿದ್ಯಾರ್ಥಿಗಳು ಬರಲು ಆರಂಭವಾಗಿ ಕೇವಲ ಶ್ರೀಮಂತರ ಸ್ವತ್ತಾಗಿದ್ದ ಶಿಕ್ಷಣವನ್ನು ಬಡವರೂ ಕಲಿಯುವಂತಾದರು.ಹಾಗೇ ನಡೆದಿದ್ದರೆ ಎಲ್ಲವೂ ಚೆನ್ನಾಗಿತ್ತು.ಆದರೆ ಎಂಭತ್ತು ತೊಂಬತ್ತರ ದಶಕದಲ್ಲಿ ಖಾಸಗಿ ವಿದ್ಯಾಲಯಗಳು ದೇಶದಲ್ಲಿ ನಿಧಾನಕ್ಕೆ ತಲೆಯೆತ್ತಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಪ್ರಭಾವವನ್ನು ಬೀರಲಾರಂಭಿಸಿದವು.ಆಂಗ್ಲ ಮಾಧ್ಯಮದ ಕಾನ್ವೆಂಟ್ ಶಾಲೆಗಳಿಗೆ ಆಕರ್ಷಿತರಾದ ಜನರು ಖಾಸಗಿ ಶಾಲೆಗಳ ಹಳ್ಳಕ್ಕೆ ನಿಧಾನವಾಗಿ ಬೀಳಲಾರಭಿಸಿದರು.ಇಂದು ಶಿಕ್ಷಣ ಎಂಬುದು ಮಾರಾಟದ ಸರಕಾಗಿದೆ.ಇವತ್ತಿನ ಪರಿಸ್ಥಿತಿ ಹೇಗಿದೆಯೆಂದರೆ “ಶಿಕ್ಷಣ=ಶಿಕ್ಷೆ+ಹಣ” ಎಂಬಂತಾಗಿದೆ.ಸರ್ಕಾರೀ ಶಾಲೆಗಳಲ್ಲಿ ಆರಾಮಾಗಿ ಓದಿಕೊಂಡಿದ್ದ ಮಕ್ಕಳನ್ನು ದುಬಾರಿ ಬೆಲೆ ತೆತ್ತು ಖಾಸಗಿ ಶಾಲೆಗಳಿಗೆ ಸೇರಿಸಿ ಮಣಭಾರದ ಚೀಲ ಬೆನ್ನಿಗೆ ಹೊರಿಸುವ ಶಿಕ್ಷೆ ನೀಡಲಾರಂಭಿಸಿದರು.ಹಾಗಾದರೆ ಶಿಕ್ಷಣ ಇಂದು ವ್ಯಾಪಾರೀಕರಣವಾಗಿರುವುದಕ್ಕೆ ಯಾರು ಕಾರಣ?

school for rich

ಖಾಸಗಿ ಶಾಲೆಗಳ ಪ್ರಭಾವ ಶ್ರೀಸಾಮಾನ್ಯ ಪೋಷಕರನ್ನು ಯಾವ ಪ್ರಮಾಣದಲ್ಲಿ ಬ್ರೈನ್ ವಾಶ್ ಮಾಡಿದೆಯೆಂದರೆ ಅನೇಕ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವುದಕ್ಕಿಂತ ದಾರಿದ್ರ್ಯ ಮತ್ತೊಂದಿಲ್ಲ ಎಂದು ಆಲೋಚಿಸುವಂತಾಗಿದ್ದಾರೆ.ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ,ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೆಯಾಗುವಂತೆ ಆಧುನಿಕ ರೀತಿಯಲ್ಲಿ ಮಕ್ಕಳ ವಿಕಸನ,ಶ್ರೇಷ್ಠ ಮಟ್ಟದ ಆಂಗ್ಲ ಮಾಧ್ಯಮದ ಶಿಕ್ಷಣ,ಮನೆ ಬಾಗಿಲಿಗೆ ಮಕ್ಕಳನ್ನು ತಲುಪಿಸುವ ಸಾರಿಗೆ ವ್ಯವಸ್ಥೆ ಇನ್ನೂ ಮುಂತಾದ ಬಣ್ಣಬಣ್ಣದ ಜಾಹೀರಾತಿಗೆ ಇಂದಿನ ಪೋಷಕರು ದೀಪಕ್ಕೆ ಹುಳುಗಳು ಆಕರ್ಷಿತವಾಗುವಂತೆ ಆಕರ್ಷಿತರಾಗಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ.ನರ್ಸರಿ ಹಂತದಿಂದಲೇ ಲಕ್ಷಗಟ್ಟಲೇ ಡೊನೆಶನ್,ಫೀಸ್ ಕೊಟ್ಟು ಖಾಸಗಿ ಶಾಲೆಗೆ ಸೇರಿಸಿ ಮಕ್ಕಳ ಭವಿಷ್ಯದ ಕನಸು ಕಾಣುತ್ತಾರೆ.ಆದರೆ ಆಧುನಿಕ ಶಿಕ್ಷಣವನ್ನು ಕೊಡುವ ಭರಾಟೆಯಲ್ಲಿ ಭಾರತೀಯ ಸಂಸ್ಕೃತಿ,ಧರ್ಮಕ್ಕೆ ಖಾಸಗಿ ಶಾಲೆಗಳು ಯಾವ ರೀತಿ ಪೆಟ್ಟು ನೀಡುತ್ತಿವೆ ಎಂಬುದನ್ನು ಅನೇಕ ಪೋಷಕರು ಅರಿತಿಲ್ಲ.ಉದಾಹರಣೆಗೆ ಕೆಲವು ಕಾನ್ವೆಂಟ್ ಶಾಲೆಗಳಲ್ಲಿ ಹಣೆಗೆ ತಿಲಕ ಇಡುವುದು,ಜಡೆಗೆ ಹೂ ಮುಡಿಯುವುದು ಇವೆಲ್ಲವೂ ನಿಷಿದ್ಧ.ಇನ್ನು ಆಂಗ್ಲ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಿದರಂತೂ ಮುಗಿದೇ ಹೋಯಿತು.ಮಾತೃ ಭಾಷೆಯಲ್ಲಿ ಮಾತನಾಡಿದರೆ ದಂಡ ಕಟ್ಟುವ ಭಾಗ್ಯ.ಇಂಥ ಶಾಲೆಗಳಲ್ಲಿ ಕಲಿತ ಮಕ್ಕಳು ಮುಂದೆ ಯಾವ ರೀತಿಯಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮಾಡಬಹುದು?

ಶಿಕ್ಷಣದ ವ್ಯಾಪಾರೀಕರಣ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ Educational business mafia ಕಾರ್ಯನಿರ್ವಹಿಸುತ್ತಿದೆ. ದೇಶದ ಪ್ರಭಾವೀ ವ್ಯಕ್ತಿಗಳು,ರಾಜಕಾರಣಿಗಳು ಇದರ ಹಿಂದಿದ್ದಾರೆ.ಆದರೆ ಆಧುನಿಕ ಪೋಷಕರು ಮಾತ್ರ ಯಾವುದನ್ನೂ ಅರಿಯದೇ ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸುವ ಸಲುವಾಗಿ ದುಬಾರಿ ಬೆಲೆ ತೆತ್ತು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದರೆ.ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಬೇಕೆಂದರೆ ತಂದೆ ತಾಯಂದಿರು ಸಂದರ್ಶನ ಎದುರಿಸಬೇಕು.ತಂದೆ ತಾಯಿಯರಿಗೆ ಇಂಗ್ಲೀಷ್ ತಿಳಿದಿರಬೇಕು.ಕೆಲವು ಕಡೆ ಪ್ರವೇಶ ಪಡೆಯುವ ಸಲುವಾಗಿ ಗಂಟೆಗಟ್ಟಲೆ ಬಿಸಿಲಿನಲ್ಲಿ ಕ್ಯೂ ನಿಂತು ಕಾಯುತ್ತಾರೆ.ಅಲ್ಲಿ ಹಿಂದು ಮುಂದೆ ವಿಚಾರಿಸದೇ ಶಿಕ್ಷಣದ ವ್ಯಾಪಾರಿಗಳು ಕೇಳಿದಷ್ಟು ಹಣವನ್ನು ಹಿಂದು ಮುಂದೆ ನೋಡದೇ ಕಟ್ಟುತ್ತಾರೆ.ಶಾಲೆಯಲ್ಲಿ ಕಲಿಸಿದ್ದು ಸಾಲದು ಎಂಬಂತೆ ಪುನ: ಮಕ್ಕಳನ್ನು ಸಾವಿರಾರು ರೂಪಾಯಿ ಕೊಟ್ಟು ಟ್ಯೂಷನ್ ಸೆಂಟರ್ ಗಳಿಗೆ ಸೇರಿಸುತ್ತಾರೆ.ಟ್ಯೂಷನ್ ಸೆಂಟರ್ ಹುಡುಕುವಾಗಲೂ ದುಬಾರಿ,ಪ್ರತಿಷ್ಠಿತ ಸೆಂಟರ್ ಹುಡುಕಿಯೇ ಸೇರಿಸುತ್ತಾರೆ.ಈ ಟ್ಯೂಷನ್ ಸೆಂಟರ್ ಗಳೂ ಸಹ ಬಗೆ ಬಗೆಯ ಜಾಹಿರಾತು ನೀಡಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಫೋಟೋವನ್ನು ತೋರಿಸಿ ಪೋಷಕರನ್ನು ಸೆಳೆಯುತ್ತವೆ.ಪೋಷಕರು ಮಕ್ಕಳನ್ನು ಹಣಗಳಿಸುವ ಯಂತ್ರಗಳನ್ನಾಗಿಸುವ ಉದ್ದೇಶದಿಂದ ದುಬಾರಿ ಬೆಲೆತೆತ್ತು ಖಾಸಗಿ ಶಾಲೆಗಳಿಗೆ,ಟ್ಯೂಷನ್ ಸೆಂಟರ್ ಗಳಿಗೆ ಸೇರಿಸುತ್ತಾರೆ.ಹಾಗಾದರೆ ಶಿಕ್ಷಣದ ವ್ಯಾಪಾರೀಕರಣಕ್ಕೆ ಪೋಷಕರು ಕಾರಣರೇ?

ಅನೇಕ ಖಾಸಗೀ ವಿದ್ಯಾಲಯಗಳು, ಟ್ಯೂಷನ್ ಸೆಂಟರ್ ಗಳ ಒಡೆತನ ಹೊಂದಿರುವವರು ದೇಶದ ಪ್ರಭಾವೀ ರಾಜಕಾರಣಿಗಳು,ಉದ್ಯಮಿಗಳು,ಸಿನಿಮಾ ತಾರೆಯರು.ಅನೇಕರು ಸರ್ಕಾರದಲ್ಲಿಂದುಕೊಂಡೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.ಅನೇಕ ಕನ್ನಡ ಪರ ಹೋರಾಟಗಾರರ ಮಕ್ಕಳೇ ಖಾಸಗೀ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುತ್ತಾರೆ.ಹಾಗಾಗಿ ಎಲ್ಲರೂ ಮಾತಿನಲ್ಲಿ ಮಾತ್ರ ಶಿಕ್ಷಣದ ವ್ಯಾಪಾರೀಕರಣವನ್ನು ವಿರೋಧಿಸುತ್ತಾರೆ.ತಮ್ಮ ಸಂಸ್ಥೆಗಳಿಗೆ ಸ್ವಲ್ಪ ತೊಂದರೆಯುಂಟಾದರೂ ಸರ್ಕಾರದ ಮೂಲಕವೇ ಲಾಬಿ ನಡೆಸಿ ಶೈಕ್ಷಣಿಕ ವ್ಯಾಪಾರವನ್ನು ನಿರಾಂತಕವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ.ಹಾಗಾದರೆ ಶಿಕ್ಷಣದ ವ್ಯಾಪರೀಕರಣಕ್ಕೆ ಇವರೂ ಕಾರಣರೇ?

 

school for poor

ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ.ಆದರೆ ಹಣ ಬಿಡುಗಡೆಯಾದರೂ ಸರ್ಕಾರೀ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯ ಕಡೆಗೆ ಸರ್ಕಾರ ಸರಿಯಾದ ಗಮನ ಹರಿಸುತ್ತಿದೆಯೇ?ಇನ್ನೂ ಎಷ್ಟೋ ಕಡೆಗಳಲ್ಲಿ ಏಕೋಪಾಧ್ಯಾಯ ಶಾಲೆಗಳಿವೆ.ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಕಲಿಯಲು ಬೇಕಾದ ವಾತಾವರಣವೇ ಇಲ್ಲ.ಸ್ವಚ್ಛ ಕುಡಿಯುವ ನೀರು,ಶೌಚಾಲಯ ಸೌಲಭ್ಯವಿಲ್ಲದ ಶಾಲೆಗಳು ಎಷ್ಟೋ ಇವೆ.ಯಾವುದೋ ವಿಷಯದಲ್ಲಿ ಪದವಿ ಪಡೆದವರು ಇನ್ಯಾವುದೋ ವಿಷಯವನ್ನು ಪಾಠ ಮಾಡುತ್ತಾರೆ. ಕೆಲವು ಸರ್ಕಾರೀ ಶಾಲೆ,ಕಾಲೇಜುಗಳಲ್ಲಂತೂ ಅಧ್ಯಾಪಕರು ಬೇಕಾಬಿಟ್ಟಿ ಪಾಠ ಮಾಡಿ ತಾವೇ ನಡೆಸುವ ಟ್ಯೂಷನ್ ಸೆಂಟರ್ ಗೆ ಬಂದರೆ ಮಾತ್ರ ಸರಿಯಾಗಿ ಪಾಠ ಮಾಡುತ್ತೇವೆಂದು ಹೇಳಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಟ್ಯೂಷನ್ ಗೆ ಬರುವಂತೆ ಮಾಡುತ್ತಾರೆ.ಇವರೂ ಶಿಕ್ಷಣದ ವ್ಯಾಪಾರಿಗಳೇ.ಹೆತ್ತವರು ಮಕ್ಕಳನ್ನು ಸರ್ಕಾರೀ ಶಾಲೆಗಳಿಗೆ ಕಳಿಸದಿರಲು ಪ್ರಮುಖ ಕಾರಣವೆಂದರೆ ಮಕ್ಕಳು ಇಂಗ್ಲೀಷ್ ಕಲಿಯುವುದಿಲ್ಲವೆಂದು.ಹೌದು.ಬಹುತೇಕ ಸರ್ಕಾರೀ ವಿದ್ಯಾಲಯಗಳಲ್ಲಿ ಇಂಗ್ಲೀಷ್ ಕಲಿಸುವ ಅಧ್ಯಾಪಕರುಗಳಿಗೇ ಸರಿಯಾಗಿ ಇಂಗ್ಲೀಷ್ ಬರುವುದಿಲ್ಲ.ಅನೇಕ ಕಡೆ ಅಧ್ಯಾಪಕರುಗಳು ಪಾನಮತ್ತರಾಗಿ ಬರುತ್ತಾರೆ.ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗುವುದೂ ಇದೆ.ಪೋಶಕರು ಸರ್ಕಾರೀ ವಿದ್ಯಾಲಯಗಳನ್ನು ದೂರುವುದಕ್ಕೂ ಸರ್ಕಾರ ನಡೆದುಕೊಳ್ಳುವುದಕ್ಕೂ ಸರಿಯಾಗೇ ಇದೆ.

ಉಚಿತ ಮತ್ತು ಕಡ್ಡಾಯವಾಗಬೇಕಿದ್ದ ಶಿಕ್ಷಣ ಇಂದು ಕೇವಲ ಸಂವಿಧಾನಕ್ಕೆ  ಮಾತ್ರ ಸೀಮಿತವಾಗಿ ವ್ಯಾಪಾರೀಕರಣದ ಪರಮಾವಧಿಯನ್ನು ತಲುಪಿರುವುದಂತೂ ನಿಜ.ಪೋಷಕರು,ಅಧ್ಯಾಪಕರು,ಸರ್ಕಾರ,ರಾಜಕಾರಣಿಗಳು ಹೀಗೆ ಎಲ್ಲರೂ ಇದಕ್ಕೆ ಕಾರಣಕರ್ತರೇ.ಶಿಕ್ಷಣದ ವ್ಯಾಪಾರೀಕರಣದ ಜೊತೆ ವಿದ್ಯಾಲಯಗಳಲ್ಲಿ ಲೈಂಗಿಕ ದೌರ್ಜನ್ಯಗಳೂ ಹೆಚ್ಚಾಗುತ್ತಿದೆ.ಈ ಎಲ್ಲದರ ನಡುವೆ ಸಿಲುಕಿ ನರಳುತ್ತಿರುವವರು ಮಾತ್ರ ವಿದ್ಯಾರ್ಥಿಗಳು.

 

 

– ಲಕ್ಷ್ಮೀಶ ಜೆ.ಹೆಗಡೆ

 

 

4 Responses

 1. Shruthi Sharma says:

  ನಿಮ್ಮ ಮಾತುಗಳನ್ನು 100 % ಒಪ್ಪುತ್ತೇನೆ..
  ಶಿಕ್ಷಣದ ವ್ಯಾಪಾರೇಕರಣದೊಂದಿಗೆ ಒಂದರ್ಥದಲ್ಲಿ ಟಾಪ್ ಸ್ಕೋರ್ ಗಳತ್ತ ಮಕ್ಕಳನ್ನು ಮುನ್ನುಗ್ಗಿಸುವ ಭ್ರಮೆಯಲ್ಲಿ ಕೆಲ ಹೆತ್ತವರು ಅವರ ನೈಜ ಬುದ್ಧಿವಂತಿಕೆ, ಅಧ್ಯಯನಶೀಲತೆಯನ್ನು ಚಿವುಟಿ ಹಾಕಿರುತ್ತಾರೆ. ಎಲ್.ಕೆ.ಜಿ ತರಗತಿಗಳಿಂದಲೇ ಶುರುವಾಗುವ ಬಾಯಿಪಾಠದ ಪರಿಪಾಠದಿಂದಾಗಿ ನೈಜ ಕಲಿಕೆ, ಸಂಶೋಧನಾ ಮನಸ್ಹ್ಥಿತಿ ಇಂದಿನ ಮಕ್ಕಳಲ್ಲಿ ಎಂದೋ ಇಲ್ಲವಾಗಿರುತ್ತದೆ ಎನ್ನುವುದು ಖೇದಕರ 🙁

 2. vinay Kumar says:

  ಉತ್ತಮವಾದ ಬರಹ.
  ತೊಂಬತ್ತರಷ್ಟು ದಶಕದಲ್ಲಿ ಕಲಿತವನಾದ್ದರಿಂದ ಶಾಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿ ದಂಡ ಕಟ್ಟಿದ್ದೇನೆ, ಕಾಲೇಜಿನಲ್ಲಿ ಪ್ರಾಧ್ಯಾಪಕರಿಂದ ಟ್ಯೂಶನ್ ಆಹ್ವಾಾನ, ಮುಂತಾದವುಗಳನ್ನು ನಾನೂ ಎದುರಿಸಿದ್ದೇನೆ.
  ಮುಂದಿನ ದಿನಗಳಲ್ಲಿಯಾದರೂ ಸರಕಾರಿ ಶಾಾಲೆಶಾಲೆಗಳಲ್ಲಿ ಉತ್ತಮ ಸೇವೆ ದೊರೆಯುವಂತಾಗಲಿ.

 3. H.S.VATHSALA says:

  ಗಂಭೀರವಾದ SAMASYEYA ಬಗ್ಗೆ ಬೆಳಕು ಚೆಲ್ಲಿದ್ದೀರ. ಪೋಷಕರಲ್ಲಿ ಗುರುತರವಾದ ಬದಲಾವಣೆ ಈ ನಿಟ್ಟಿನಲ್ಲಿ ಆಗಬೇಕಾಗಿದೆ. ತಮ್ಮ
  ಮಗುವನ್ನು ಉತ್ತಮ ನಾಗರೀಕನ್ನನಾಗಿ ಮಾಡುವ ಬದಲು ಕುರುಡು ಕಾಂಚಾಣದ ದಾಸನನ್ನಾಗಿ ಮಾಡುವ ಆತುರದಲ್ಲಿ
  ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಗಾಳಿಗೆ ತೂರಿದ್ದಾರೆ.

 4. Sneha Prasanna says:

  ನಿಜ.. ಬರಹ ಬಹಳಷ್ಟು ವಿಶ್ಲೇಷಣಾತ್ಮಕವಾಗಿದೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: