ಎಮ್ಮೆಗಳು, ನಾನು ಮತ್ತು ಕೆಸರು ಹೊಂಡ
ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಗೆ ಅಲ್ವಾ ?! ಸಮುದ್ರದ ಅಲೆಗಳ ಹಾಗೆ ಮತ್ತೆ ಮತ್ತೆ ಬರುತ್ತಾ ಇರುತ್ತವೆ. ಸಣ್ಣಗಿರುವಾಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅನಿಸಿದ್ದೆ ಇಲ್ಲ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡುವಾಗ “ಎಂಥ ಅದ್ಭುತ ಬಾಲ್ಯ ನನ್ನದು !” ಹೇಳಿ ಖುಷೀ ಅಗುತ್ತೆ. ಅದರ ಹಂಚಿಕೊಳ್ಳೋದಕ್ಕೆ ಒಂದಿಷ್ಟು ಸಮಾನ ಹೃದಯಗಳು, ಮನಸ್ಸುಗಳು ಸಿಕ್ಕಿಬಿಟ್ಟರೆ ? ……….
ನನ್ನ ಹುಟ್ಟೂರು ಕಮ್ಮಕ್ಕಿ. ತೀರ್ಥಹಳ್ಳಿ-ಕೊಪ್ಪ ಗಡಿಯಲ್ಲಿ ಬರುವ, ಕೊಪ್ಪ ತಾಲ್ಲೂಕಿಗೆ ಸೇರಿದ ಪುಟ್ಟ ಹಳ್ಳಿ. (ಕುವೆಂಪುವಿನ ಕುಪ್ಪಳಿಯಿಂದ 5 ಕಿ.ಮೀ ದೂರ). ಶುದ್ಧ ಮಲೆನಾಡು. ಜೀವನದ ಕನಿಷ್ಟ ಸವಲತ್ತು ಮಾತ್ರ ಇರುವ, ಹಚ್ಚ ಹಸುರಿನ ಊರು. ಆಗಿನ ಸಮಯದಲ್ಲಿ ನಮ್ಮ ಮನೆಯಲ್ಲಿ ಇದ್ದ ಕಥೆ ಪುಸ್ತಕ ಹೇಳಿದರೆ ಒಂದು ರಾಮಾಯಣ, ಮತ್ತೊಂದು ಮಹಾಭಾರತ. ಅದು ಸಹ ಹೈಸ್ಕೂಲ್ ಓದುವ ಅಕ್ಕಂದಿರಿ೦ಗೆ ಪರೀಕ್ಷೆ ಕಟ್ಟುವುದಕ್ಕೆ ತರಿಸಿ ಕೊಟ್ಟದ್ದು !
ಶಾಲೆಗೆ ರಜೆ ಇರುವಾಗ, ಕುಟುಂಬದ ದೊಡ್ಡೋರೆಲ್ಲ ತೋಟದ್ದೋ, ಗದ್ದೆಯದ್ದೋ ಕೆಲಸಕ್ಕೆ ಹೋದರೆ, ಸಣ್ಣವರಾದ ನಮ್ಮ ಕೆಲಸ ಎಂಥ ಗೊತ್ತಾ ? ಎಮ್ಮೆ ಕಾಯುವುದು. ನನ್ನ ಅಕ್ಕ ಮತ್ತೆ ನಾನು – ಬೆಳಿಗ್ಗೆ ಎಮ್ಮೆಗಳನ್ನು ಮೇಯುವುದಕ್ಕೆ ಎಮ್ಮೆಗುಡ್ಡಕ್ಕೆ ಹೊಡೆದುಕೊಂಡು ಹೋಗುವುದು. ಸಂಜೆ ಹೊತ್ತಿಗೆ ವಾಪಾಸ್. ಗುಡ್ದದ ಮೇಲ್ಭಾಗದಲ್ಲೆ ಅವು ಮೇಯಬೇಕು. ಗುಡ್ಡ ಇಳಿದರೆ ಅಲ್ಲಿ ಬೇರೆಯವರ ಗದ್ದೆಗೆ ನುಗ್ಗುತ್ತವೆ. ಇಲ್ಲದ್ರೆ ಕೆಸರು ಹೊಂಡದಲ್ಲಿ ಹೋಗಿ ಮಲಗುತ್ತವೆ. ಅವು ಹಾಗೆ ಮಾಡದಂತೆ ಕಾಯುವುದಕ್ಕೇ ನಾವು ಎಮ್ಮೆ ಹಿಂದೆ ಹೋಗುವುದು. ಉದ್ಯೋಗ ಅಷ್ಟೆ !
ಬೇಸಿಗೆ ರಜೆಯಲ್ಲಿ ಮತ್ತೆ ದಸರಾ ರಜೆಯಲ್ಲಿ ಎಮ್ಮೆ ಕಾಯುವಾಗ ಕೈಯಲ್ಲಿ ಒಂದೋ ರಾಮಾಯಾಣ, ಇಲ್ಲದ್ರೆ ಮಹಾಭಾರತ, ಸರತಿ ಪ್ರಕಾರ. ಆ ರಜೇಲಿ ಆ ಪುಸ್ತಕ ಓದಿ ಮುಗೀಬೇಕು. ಅದು 3ನೇ ತರಗತಿಯಿಂದ 7ನೇ ತರಗತಿಯ ವಯಸ್ಸು. ಆ ವಯಸ್ಸಿಗೇ ಹಾಗಿದ್ದ ಪುಸ್ತಕ ಓದುವುದಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ. ಅದೂ ಸತತ 4 ವರ್ಷ. ಇದೇ ಈಗ ತಾಳಮದ್ದಳೆ ಅರ್ಥ ಹೇಳುವುದಕ್ಕೆ ಉಪಯೋಗ ಆಗ್ತಾ ಇದೆ. ಈಗ ನಮ್ಮ ಮಕ್ಕಳು ಕನ್ನಡ ಓದುವುದಕ್ಕೇ ಭಯಂಕರ ಕಷ್ಟ ಪಡ್ತಾರೆ ! ಒಂದು ಪುಸ್ತಕ ಕೈಲಿ (ಈಗಿನ ಐಟಿ ಉದ್ಯೋಗಿಗಳು ಮನೆಂದಲೇ ಐಡಿ ಕಾರ್ಡ್ ಕುತ್ತಿಗೆಗೆ ನೇತು ಹಾಕಿಗೊಂಡು ಹೊರಡುವಹಾಗೆ) ಹಿಡಿದು ಹೊರಟರೆ …. ಆಹಾ ! ಎಂಥ ಗತ್ತು !?
ಜನಮೇಜಯರಾಯ ಸರ್ಪಯಜ್ಞ ನಮ್ಮ ಎಮ್ಮೇಗುಡ್ಡದಲ್ಲೇ ಮಾಡ್ತಾ ಇದ್ದನಾ ? – ಹೇಳುವಷ್ಟರ ಮಟ್ಟಿಗೆ ಪುಸ್ತಕದಲ್ಲಿ ಮುಳುಗಿ ಹೋಗಿರುತ್ತಿದ್ದೆವು. ಸುತ್ತಮುತ್ತಲಣ ಬೆಟ್ಟ-ಗುಡ್ಡೆಗಳು ದೂರದಿಂದ ನಮಗೆ ಕುರುಕ್ಷೇತ್ರದ ಕೌರವ, ಪಾಂಡವ ಸೇನೆಗಳಂತೆ ಕಾಣ್ತಾಯಿರ್ತಿತ್ತು. ಬೆಟ್ಟದ ಮಧ್ಯೆ ಸ್ವಲ್ಪ ಎತ್ತರವಾಗಿ ಬೆಳೆದ ಮರ- ಅರ್ಜುನನ ರಥ. ಅದರಲ್ಲಿ ಕೃಷ್ಣ ಗೀತೋಪದೇಶ ಮಾಡ್ತಾ ಇರುವ ಕಲ್ಪನೆ ! ಅಭಿಮನ್ಯು ಸತ್ತರೆ ನಮ್ಮಲ್ಲಿ ಸೂತಕದ ಛಾಯೆ ! ನಮ್ಮ ಎಮ್ಮೆಗಳೇ ಆನೆಗಳ ಹಾಗೆ, ಪಕ್ಕದ ಮನೆಯ ದನಗಳೇ ಕುದುರೆಗಳ ಹಾಗೆ. ಊರಿನ ದೊಡ್ಡ ಎತ್ತು ಅಶ್ವಮೇಧದ ಕುದುರೆಯ ಹಾಗೆ ಕಾಣಿಸ್ತಿತ್ತು. ಪ್ರತೀ ವರ್ಷ ಅದೇ ಪುಸ್ತಕ ಓದಿದರೂ, ಅದು ಮತ್ತೆ ಹೊಸತ್ತಾಗಿಯೇ ಕಂಡುಕೊಂಡಿತ್ತು. ಎಂಥಹಾ ಅದ್ಭುತ ಕಲ್ಪನಾ ಪ್ರಪಂಚ ! ಅದರ ಭಂಗಗೊಳುಸುವ ಯಾವುದೇ ದೃಶ್ಯ ಮಾಧ್ಯಮ ಇರಲಿಲ್ಲ. ಒಳ್ಳೆಯದೇ ಆಯಿತು.
ಕೆಲವು ಸರ್ತಿ ನಾವು ಇಲ್ಲಿ ಕತೇಲಿ ಮುಳುಗಿರುವಾಲೇ ಎಮ್ಮೆಗಳು ನಮ್ಮ ಕಣ್ತಪ್ಪಿಸಿ, ಗುಡ್ಡದಿ೦ದ ಕೆಳ ಇಳಿದು, ಕೆಸರು ಹೊಂಡಲ್ಲಿ ಮಲಗಿ ಎಂಜಾಯ್ ಮಾಡಿಕೊ೦ಡು ಇರ್ತಾಇದ್ವು. ಇನ್ನೂ ಕೆಸರು ಹೊ೦ಡ ತಲುಪದಿದ್ದರೆ, ಗುಡ್ಡದ ಮೇಲಿಂದ “ಥೈ ಥೈ ಥೈ ಥೈ ಬಂಗಾರಿ ….. ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಸಿಂಗಾರೀ….” ಸ್ಟೈಲಲ್ಲಿ ಓಡಿಕೊ೦ಡು “ವಾಂಯ್……….” ಗುಟ್ಟಿಗೊಂಡು, ಉಳಿದೊವಕ್ಕೂ ಆಹ್ವಾನ ಕೊಟ್ಟುಕೊಂಡು, ಬಂದುಕೊಂಡು ಇರ್ತಾಇರ್ತಿದ್ವು. ಆ ಎಮ್ಮೆಗಳಿಗೆ ನಮ್ಮ ಲಕ್ಕಿ ಕೋಲಿನ ಪೆಟ್ಟು ಮುಟ್ಟುತ್ತದಾ ? ಕೆಸರು ಹೊಂಡ ಅಂದರೆ ಈ ಎಮ್ಮೆಗಳಿಗೆ ಅದೆಂಥ ಆಕರ್ಷಣೆಯೋ ಗೊತ್ತಿಲ್ಲಪ್ಪಾ ! ಕೆಸರು ಹೊಂಡದ ಸುತ್ತ ಐವತ್ತು ಅಡಿ ವ್ಯಾಪ್ತಿಯಲ್ಲಿ ಅವಕ್ಕೆ ನಮ್ಮ ಪೆಟ್ಟಿನ ಹೆದರಿಕೆ ಸ್ವಲ್ಪವೂ ಇರ್ತಿರ್ಲಿಲ್ಲ. ಒಮ್ಮೆ ಹೋಗಿ ಬಿದ್ದವೆಂದರೆ -ಇನ್ನು ಈ ಎಮ್ಮೆಗಳನ್ನು ಆ ಕೆಸರು ಹೊ೦ಡದಿ೦ದ ಏಳಿಸುವುದು ಹೇಗಪ್ಪಾ ? ಎಷ್ಟು ಸರ್ತಿ ಕೋಲಿಲ್ಲಿ ಬಡಿದರೂ ಅವಕ್ಕೆ ಪೆಟ್ಟು ನಾಟುತ್ತಲೇ ಇರಲಿಲ್ಲ ! ಕೆಸರು ಮೆತ್ತಿದ ಎಮ್ಮೆ ನಮ್ಮ ಮನೆಯದೆ ಹೌದಾ.. ? ಅಲ್ವಾ..? ನೋಡಿಕೊಂಡು- ಮನೆಗೆ ಹೋಗಿ ದೊಡ್ಡೋರಿಗೆ ಹೇಳಿದರೆ : “ಎಮ್ಮೆ ಕಾಯುವುದಕ್ಕೆ ಹೇಳಿ ಕಳಿಸಿದ್ರೆ, ಎಮ್ಮೆ ಕಾಯೋದು ಬಿಟ್ಟು, ಅದೆಂಥ ಮಾಡಿಗೊಂಡು ಕೂತಿದ್ರಿ ? ಎಮ್ಮೆ ಕಾಯುವುದಕ್ಕೂ ನಾಲಾಯಕ್ ಈ ಮಕ್ಕಳು ” ಹೇಳುವ ಬೈಗುಳ ! ಅವರನ್ನು ಕರೆದುಕೊ೦ಡು ಹೋಗಿ, ಎಮ್ಮೆಗಳನ್ನು ಏಳಿಸಿ, ಮನೆಗೆ ಹೊಡಕ್ಕೊ೦ಡು ಹೋಗುವಷ್ಟೊತ್ತಿಗೆ ಸಾಕಪ್ಪಾ.. ಸಾಕು….!. ಅಲ್ಲಿ ಅಮ್ಮನ ಕೈಯಿ೦ದಲೂ ಬೈಗುಳ : “ಎಮ್ಮೆ ಮೈಗೆಲ್ಲ ಕೆಸರು ಮೆತ್ತಿಸಿಗೊ೦ಡು ಬಂದಿದ್ದೀರಲ್ಲೆ, ಯಾರು ತೊಳೆಯುವುದು ಅವನ್ನು ? ಒಂದು ಸರಿಯಾಗಿ ಎಮ್ಮೆ ಕಾಯುವುದಕ್ಕು ಬರಲ್ಲ”. ತೋಟದ ಬಾವಿಯಿಂದ ನೀರು ಹೊತ್ತು ತಂದು, ಅವಕ್ಕೆ ಸ್ನಾನ ಮಾಡಿಸ್ಬೇಕಲ್ಲಾ. ಅಮ್ಮನ ಹಿಂದೆ ಕೊಡಪ್ಪಾನ ಹಿಡಿದುಕೊ೦ಡು ತೋಟದ ಬಾವಿಗೆ ನೀರು ತರುವುದಕ್ಕೆ ಹೋಗುವುದೇ……….. ಮಾಡಿದ್ದು ತಪ್ಪಲ್ವಾ. ಬಾಯಿ ಮುಚ್ಚಿ ಹೋಗದೆ ಬೇರೆ ದಾರಿ ಇಲ್ಲ !
ಕೆಸರು ಮೆತ್ತಿದ ಎಮ್ಮೆಗಳನ್ನ ತೊಳೆಯುವಷ್ಟು ನೀರು ತೋಟದ ಬಾವಿಂದ ತಂದಾಗುವವರೆಗೆ ನಮಗೆ ಕಾಫಿಯು ಇಲ್ಲ …..! ಎಮ್ಮೆಗೆ ಸ್ನಾನ ಆಗುವವರೆಗೆ ಅವಕ್ಕೆ ಕೊಟ್ಟಿಗೆ ಒಳಗೆ ಪ್ರವೇಶವೂ ಇಲ್ಲ……!
ಅರ್ಜುನ ಬೀಷ್ಮಂಗೆ ನೀರು ತರಿಸಿ ಕೊಟ್ಟ ಹಾಗೆ – ನಾನು ಸಹ ಬಾಣ ನೆಲಕ್ಕೆ ಹೊಡೆದು ನೀರು ಬರಿಸುವ ಹಾಗೆ ಇದ್ದಿದ್ರೆ ………………? ಕಲ್ಪನೆ ಕಲ್ಪನೆಯೇ. ನಿಜ ಆಗುತ್ತಾ ?
– ಸುರೇಖಾ ಭಟ್, ಭೀಮಗುಳಿ
ಹಳ್ಳಿಯ ನಮ್ಮ ಬಾಲ್ಯವನ್ನು ನೆನಪಿಸಿದ ಲೇಖನ….ಚಂದ ಉಂಟು….
ತುಂಬಾ ಇಷ್ಟವಾಯಿತು.. ನಿಮ್ಮ ಚಿತ್ರಣ ಶೈಲಿಯಿಂದಾಗಿ ಬರೆದಂತಹ ಘಟನೆಗಳು ಕಣ್ಣಿಗೆ ಕಟ್ಟಿದಂತಾಯಿತು.. 🙂
ನಿಮ್ಮ ಲೇಖನ ಓದಿದ ನಂತರ ‘ಯಾರೇ ಕೂಗಾಡಲಿ…ಊರೇ ಹೋರಾಡಲಿ….ಎಮ್ಮೇ ನಿನಗೆ ಸಾಟಿಯಿಲ್ಲ’ ಅಂತ ಹಾಡುತ್ತಾ ಇದ್ದೇನೆ!!!
ಬಾಳ ಚಂದ ವಿವರಿಸಿ ಬರಿದೀರಿ ಅಕ್ಕಾರ ನಮ್ಮ ಬಾಲ್ಯದ ದಿನಗಳ ನೆನಪಾಯಿತು.ಆಗ ನೋಡಿ ನಮಗೆಲ್ಲ ಎಷ್ಟೊಂದು ಸಮಯ ಇತ್ತು ರಜೆಯದಿನಗಳಲ್ಲು ಕಲಿಯೋದಕ್ಕೆ ಎಷ್ಟೊಂದು ದಾರಿಗಳಿದ್ದವು.ಅದು ಕೃಷಿ ಆಧರಿತ ಕುಟುಂಬದಲ್ಲಿ ಬೆಳೆದ ನಾನಾ ರೀತಿಯ ಅನುಭವ ಇದೆ. ಇಗೆಲ್ಲ ಎನ್ ಮಾಡೊಕು ಟೈಮ ಇಲ್ಲ ಅಂತಾರ.ಹೆಳಕೊತ ಹೋದರ ಬಾಳ ಬೆಳಿತದರೀ ಮತ್ತ ಈ ಕಮೆಂಟ ಒಂದ ಲೇಖನ ಆಗಿ ಬಿಡತದ…….
EXCELLENT
Aa dinagalu nenapaiythu.
ಎಮ್ಮೆ ಕಥೆ ಚೆನ್ನಾಗಿತ್ತು