ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 3

Share Button
Rukminimala1

ರುಕ್ಮಿಣಿಮಾಲಾ, ಮೈಸೂರು

ಮೋತಿಗುಡ್ಡದಿಂದ ಯಾಣದೆಡೆಗೆ

12-12-2014  ಬೆಳಗ್ಗೆ 6 ಗಂಟೆಗೆ ಚಹಾ. ನಾವು ಕೆಲವಾರು ಮಂದಿ ಭಾಸ್ಕರ ಹೆಗಡೆಯವರ ತೋಟಕ್ಕೆ ಹೋದೆವು. ಅವರು ಅಲ್ಲಿ ಜಲವಿದ್ಯುತ್‌ಗಾಗಿ ಟರ್ಬೈನ್ ಹಾಕಿದ್ದರು. ಅದನ್ನು ನೋಡಿ ವಾಪಾಸಾದೆವು. ತಿಂಡಿಗೆ ಇಡ್ಲಿ ಚಟ್ನಿ, ಸಾಂಬಾರು. ಚಪಾತಿ ಪಲ್ಯ ಬುತ್ತಿಗೆ ಹಾಕಿಸಿಕೊಂಡೆವು. ನಿನ್ನೆ ರಾತ್ರೆ ನಾವು ಕೆಲವರು ಮನೆಯೊಳಗೆ ಹೋಗಿ ಹೆಂಗಸರಿಗೆ ಕೃತಜ್ಞತೆ ಅರ್ಪಿಸಿದೆವು. ‘ನಮಗೂ ನಿಮ್ಮೊಡನೆ ಕುಳಿತು ಮಾತಾಡಬೇಕೆಂಬ ಆಸೆ ಇದೆ. ಆದರೆ ಕೂರಲು ಸಮಯ ಇಲ್ಲ’. ಎಂದು ಅವರು ಹೇಳಿದಾಗ ಮನಸ್ಸಿನ ಮೂಲೆಯಲ್ಲಿ ಅಪರಾಧೀ ಭಾವ ಕಾಡಿತು. ಹೌದು! ಕೂತರೆ ಕೆಲಸ ಸಾಗದು ತಾನೆ. ನಾವು 37  ಮಂದಿ ಮತ್ತು ತಂಡದ ಕಾರ್ಯಕರ್ತರು ಇಷ್ಟು ಮಂದಿಗೆ ಊಟ ಉಪಚಾರ ಕಾಲಕಾಲಕ್ಕೆ ಆಗಬೇಕಲ್ಲ. ಸೌದೆ ಒಲೆಯಲ್ಲಿ ಸಾರು, ಪಾಯಸ ಕುದಿಯುತ್ತಿತ್ತು. ಇನ್ನೊಂದೆಡೆ ಚಪಾತಿ ಲಟ್ಟಿಸುತ್ತಿದ್ದರು. ಮತ್ತಿಬ್ಬರು ಬೆಳಗ್ಗಿನ ತಿಂಡಿ ಮತ್ತು ತರಕಾರಿ ಹೆಚ್ಚುವ ಕಾಯಕದಲ್ಲಿದ್ದರು. ನಿಮಗೆಲ್ಲ ನಾವು ತೊಂದರೆ ಕೊಟ್ಟೆವು ಅಂದರೆ ಅವರಿಂದ ಬಂದ ಉತ್ತರ- ‘ಇಲ್ಲ ಇಲ್ಲ. ತೊಂದರೆ ಎಂಥದು. ನಮಗೆಲ್ಲ ಇದು ಅಭ್ಯಾಸವಿದೆ. ಅತಿಥಿ ದೇವೋಭಎಂದು  ತಿಳಿದವರು ನಾವು. ನೀವೆಲ್ಲ ನಮ್ಮ ಅತಿಥಿಗಳು. ನೀವುಗಳು ಬಂದದ್ದು ತುಂಬ ಖುಷಿ ಆಗಿದೆ. ಸಂತೋಷದಿಂದಲೇ ಈ ಕೆಲಸ ಮಾಡುತ್ತೇವೆ ಎಂದು ಅವರಂದಾಗ ಅಪರಾಧೀಭಾವ ಹೋಗಿ ಸಮಾಧಾನವಾಗಿ ಆತ್ಮೀಯತೆ ಹೆಚ್ಚಿತು.

ಲೆಫ್ಟ್ ರೈಟ್ ಸವಾರಿ ಹೊರಟಿತು

ಬೆಳಗ್ಗೆ 8.35 ಕ್ಕೆ ನಮ್ಮ ತಂಡದ ಛಾಯಾಚಿತ್ರ ತೆಗೆಸಿಕೊಂಡು ಮನೆಯವರಿಗೆಲ್ಲ ಕೃತಜ್ಞತೆ ಅರ್ಪಿಸಿ, ನಮ್ಮ ಸವಾರಿ ಹೊರಟಿತು. ಯಾಣದೆಡೆಗೆ ಸುಮಾರು 16 ಕಿಮೀ ನಡಿಗೆ. ಹೊರಡುವ ಮೊದಲು ನನ್ನ ಶೂಸೇವೆ ನಡೆಯಿತು. ಜಾಹೀರಾತಿನಲ್ಲಿ ತೋರಿಸಿದಂತೆ ಖುರ್ಚಿಗೆ ಫೆವಿಕ್ವಿಕ್ ಹಾಕಿ ಒಬ್ಬರು ಕೂತಾಗ ಏಳಲು ಆಗದಂತೆ ಅಂಡು ಅಂಟಿದ್ದು ನೋಡಿ ನನ್ನ ಶೂ ಸೋಲ್ ಅಂಟದೆ ಇದ್ದೀತೆ ಎಂದು ಭಾವಿಸಿದ್ದು ನನ್ನ ತಪ್ಪು! ಫೆವಿಕ್ವಿಕ್ ಹಾಕಿದರೂ ಶೂ ಸೋಲ್ ಅಂಟಿರಲೇ ಇಲ್ಲ! ಅಂತೂ ಅದೇ ಶೂ ಹಾಕಿ ಅದಕ್ಕೆ ಹಿಂದೆ ಮುಂದೆ ಬಕ್ಕು ಹಗ್ಗ ಬಿಗಿಯಲು ಮರಿಮಲ್ಲಪ್ಪ ಕಾಲೀಜಿನಲ್ಲಿ ಉಪನ್ಯಾಸಕರಾಗಿರುವ ವಿಶ್ವನಾಥ ಸಹಾಯ ಮಾಡಿದರು. ಅವರು ಬಿಗಿದದ್ದರಲ್ಲಿ ಯಾಣವೇನೂ ಅದರಪ್ಪನಂಥ ಬೆಟ್ಟ ಹತ್ತಬಹುದು ಎಂದು ಬೀಗಿ ಮುಂದುವರಿದೆ. ಒಂದೆರಡು ಮೈಲಿ ಹೋಗಿರಬಹುದಷ್ಟೆ. ನನ್ನ ಕಾಲಿಂದ ಮುಂದೆ ಸೋಲ್ ಹೋಗಲನುವಾಯಿತು! ಅದಕ್ಕೆ ಏನವಸರವೋ ನಾ ಕಾಣೆ! ದಾರ ಬಿಗಿಯಾಗಿ ಹಾಗೆಯೇ ಇದೆ. ಹಾಗೆಯೇ ಮೂಂದುವರಿದೆ. ಮುಂದೆ ಹೋದಂತೆ ಒಂದು ಶೂವಿನ ಸೋಲ್ ಸಂಪೂರ್ಣ ಸೋಲೊಪ್ಪಿಕೊಂಡಿತು! ಇನ್ನೇನು ಗತಿ? 14 ಕಿಮೀ ನಡೆಯಬೇಕು. ನನ್ನಲ್ಲಿರುವ ಸ್ಲಿಪ್ಪರಿನಲ್ಲಿ ಬೆಟ್ಟ ಹತ್ತಲು ಸಾಧ್ಯವೆ? ಎಂಬ ಚಿಂತೆ ಆವರಿಸಿತು. ನಮ್ಮೊಡನೆ ನಾಸಿಕದ ಕೆಲವರು ಇದ್ದರು. ಬೆಲ್ಟ್ ಚಪ್ಪಲಿ ಇದೆಯೆ ಎಂದು ಅವರನ್ನು ಕೇಳಿದೆ. ಸುನಿಲ್ ಎಂಬವರ ಬಳಿ ಲೂನಾರ್ ಕಂಪನಿಯ ಬೆಲ್ಟ್ ಚಪ್ಪಲಿ ಇತ್ತು. ಬೆನ್ನಚೀಲ ಇಳಿಸಿ ನನಗೆ ಅವರ ಚಪ್ಪಲಿ ಎರವಲು ಕೊಟ್ಟರು. ಶೂ ಗೆ ಬಿಗಿದ ದಾರ ಬಿಚ್ಚದೆ ಶೂ ತೆಗೆಯಲು ಸಾಧ್ಯವಿಲ್ಲ. ಅದು ಎಷ್ಟು ಗಟ್ಟಿಯಾಗಿ ಬಿಗಿದಿದೆ ಅಂದರೆ ನನಗೆ ಬಿಚ್ಚಲೇ ಸಾಧ್ಯವಾಗದಷ್ಟು! ಮತ್ತೆ ನನ್ನ ಸಹಾಯಕ್ಕೆ ಬಂದವರು ನಾಸಿಕದ ಮಂದಿಯೇ. ಚಪ್ಪಲಿ ನನ್ನ ಕಾಲಿಗೆ ಸರಿಯಾಯಿತು. ಇನ್ನೇನು ಭಯವಿಲ್ಲ. ಯಾವ ಬೆಟ್ಟವನ್ನಾದರೂ ಹತ್ತಬಹುದು ಎಂಬ ಧೈರ್ಯ ಬಂತು. ಸಹಾಯಹಸ್ತ ತೋರಿದ ನಾಸಿಕದ ಮಂದಿಗೆ ಧನ್ಯವಾದವನ್ನರ್ಪಿಸಿದೆ.

R.Mala- Shoe repair

ಎಂದಿನಂತೆ ನಾವು ನಾಲ್ವರು ಹಿಂದುಳಿದೆವು. ಭಾರತಿಯವರು (ಬೆಟ್ಟ ಹತ್ತಲು ಕಷ್ಟವಾದೀತೆಂದು) ಬೈಕಿನಲ್ಲಿ ನೇರ ಯಾಣಕ್ಕೆ ಹೋಗುವುದೆಂದು ತೀರ್ಮಾನಿಸಿ ನಮ್ಮೊಡನೆ ಬರಲಿಲ್ಲ. ನಾವು ನಿಧಾನವಾಗಿ ನಡೆಯುತ್ತ ಸಾಗಿದೆವು. ಒಂದೆರಡು ಪಕ್ಷಿಗಳು ಕಾಣಿಸಿದುವು. ಚಿಟ್ಟೆಗಳ ಹಾರಾಟದ ಸಂದರ್ಭದ ಸೌಂದರ್ಯ ನೋಡಿದೆವು. ಕ್ಯಾಮರಾ ಕಣ್ಣಿಗೆ ಒಂದೆರಡು ಸಿಕ್ಕವಷ್ಟೆ. ಅವುಗಳದು ಕ್ಷಣಚಿತ್ತ ಕ್ಷಣಪಿತ್ತ! ಅವು ಕೂರುವಲ್ಲಿವರೆಗೆ ಕಾಯುವ ಸಮಯ ನಮಗೆ ಇರಲಿಲ್ಲ. ಹಾರುವಾಗಲೇ ಫೋಟೋ ಕ್ಲಿಕ್ಕಿಸುವಂಥ ಕ್ಯಾಮರ ನನ್ನಲ್ಲಿಲ್ಲ. ಹಾಗಾಗಿ ಕಣ್ಣಲ್ಲಿ ನೋಡಿಯೇ ತೃಪ್ತಿ ಹೊಂದಿದೆ! ನಿಸರ್ಗದ ಸೊಬಗನ್ನು ನೋಡುತ್ತ ಮುಂದೆ ಸಾಗಿದೆವು.

ವಿಭೂತಿ ಜಲಪಾತ

ಸುಮಾರು 7 ಕಿಮೀ ಸಾಗಿ ವಿಭೂತಿ ಜಲಪಾತಕ್ಕೆ ಬಂದೆವು. ಅಲ್ಲಿಗೆ ಹೋಗುವ ದಾರಿ ಸಾಲಾಗಿ ಒಬ್ಬೊಬ್ಬರೇ ಸಾಗುವಂಥದು. ಅಷ್ಟು ಕಿರಿದು. ಎತ್ತರದಿಂದ ನೀರು ಹರಿಯುತ್ತಿತ್ತು. ನಮ್ಮಿಂದ ಮೊದಲೆ ತಲಪಿದವರು ಹೆಚ್ಚಿನವರು ನೀರಿಗಿಳಿದು ಈಜು ಹೊಡೆದು ಮುಂದೆ ಹೊರಡಲನುವಾಗಿದ್ದರು. ಇನ್ನು ಕೆಲವರು ನೀರು ಧಾರೆ ನೋಡಿಯೇ ಖುಷಿ ಅನುಭವಿಸಿದರು. ನಾವು ಸ್ವಲ್ಪ ಹೊತ್ತು ಅಲ್ಲಿ ವಿರಮಿಸಿದೆವು. ವೇಲಾಯುಧನ್ ಮಾತ್ರ ಈಜಿದರು. ಪ್ರವಾಸಿಗರಾಗಿ ಬಂದ ಪರದೇಶದವರಿಬ್ಬರು ಚೆನ್ನಾಗಿ ಈಜುತ್ತಿದ್ದರು. ಅವರು ಬಂಡೆ ಮೇಲಿಂದ ನೀರಿಗೆ ಡೈವ್ ಹೊಡೆದದ್ದು ನೋಡಲು ಸಖತ್ತಾಗಿತ್ತು!

Vibhuti falls

ಜಲಧಾರೆ ದಾಟಿ ಮುಂದೆ ಬೆಟ್ಟ ಏರಬೇಕು. 70  ಡಿಗ್ರಿ ಕಡಿದಾದ ಏರುದಾರಿ. ಕುರುಚಲು ಗಿಡ, ಮರದ ಬೇರು, ಬಳ್ಳಿ ಹಿಡಿದು ಏರಬೇಕು. ಕಾಲು ಉದ್ದ ಇರುವವರಿಗೆ ಸಮಸ್ಯೆ ಇಲ್ಲ. ಗಿಡ್ಡ ಇರುವವರು ಬೆಟ್ಟ ಹತ್ತಲು ಯಾರದಾದರೂ ಸಹಾಯ ಬೇಕೇ ಬೇಕು. ಒಬ್ಬರಿಗೊಬ್ಬರು ಕೈನೀಡಿ ಎಳೆದು ಮುಂದೆ ಸಾಗಿದೆವು. ದಟ್ಟ ಕಾಡು. ಆ ಕಾಡಿನ ದಾರಿಯಲ್ಲೂ ಬಿ‌ಎಸ್‌ಎನ್‌ಎಲ್ ರೇಂಜ್ ಸಿಗುತ್ತಿತ್ತು! ಮೂರು ದಿನಗಳ ನಡಿಗೆಯಲ್ಲಿ ಈ ದಾರಿ ಮಾತ್ರ ಸ್ವಲ್ಪ ಕಠಿಣವಾಗಿದ್ದುದು. ಸುಮಾರು 5-6 ಕಿಮೀ ದೂರವೂ ಬೆಟ್ಟ ಏರಬೇಕು. ಸಮತಟ್ಟು, ಇಳಿಜಾರು ಇಲ್ಲವೇ ಇಲ್ಲ. ಯಾಣಕ್ಕೆ ದಾರಿ ಎಂದು ಫಲಕ ಸಿಗುವಲ್ಲಿವರೆಗೆ ಏರುದಾರಿಯೇ. ಎಲ್ಲರೂ ಏದುಸಿರು ಬಿಡುತ್ತ, ಹತ್ತಲಾಗದಿದ್ದವರನ್ನು ಕೈಹಿಡಿದು ಎಳೆದು ಹತ್ತಿಸುತ್ತ ಸಾಗಿದೆವು. ಅಲ್ಲಲ್ಲಿ ಒಂದೆರಡು ಮಂಗಗಳು ಮರದಿಂದ ಮರಕ್ಕೆ ಹಾರುತ್ತಿರುವುದನ್ನು ನೋಡಿದೆವು. ಬೇರೆ ಪ್ರಾಣಿ ಪಕ್ಷಿಗಳ ದರುಶನ ನಮಗಾಗಲಿಲ್ಲ.

ಮಳೆರಾಯ ಮುನಿದಾಗ

ಆಯಿತು ಇನ್ನೇನು ಬಂದೇ ಬಿಟ್ಟೆವು. ಏರು ದಾರಿ ಇನ್ನಿಲ್ಲ ಎಂದು ಹೇಮಾಮಾಲಾ ಅವರಿಗೆ (ಏರು ಹತ್ತಲು ಕಷ್ಟವಾಗುತ್ತಿತ್ತು) ಆಗಾಗ ಹೇಳುತ್ತ ಏರು ದಾರಿ ಕ್ರಮಿಸಿ, ಸಮತಟ್ಟು ರಸ್ತೆ ಸಿಕ್ಕಾಗ ಅಬ್ಬ ಅಂತೂ ತಲಪಿದೆವು ಎಂಬ ನೆಮ್ಮದಿಯ ಭಾವ ಮೂಡಿತು. ಯಾಣಕ್ಕೆ ದಾರಿ ಎಂಬ ಫಲಕ ಕಂಡದ್ದೆ ಇನ್ನೇನು ಬಹಳ ದೂರವಿಲ್ಲ ಎಂಬ ಸಂತಸವಾಯಿತು! ಅಲ್ಲೆ ಕೂತು ಬುತ್ತಿ ಬಿಚ್ಚಿ ಚಪಾತಿ ಪಲ್ಯ ತಿಂದು ನೀರು ಕುಡಿದು ಸಾಗಿದೆವು.

ಅಲ್ಲಿಂದ 2-3 ಕಿಮೀ ಮುಂದೆ ಬಂದಾಗ ಮಳೆ ಹನಿ ಹಾಕಲು ಸುರುವಾಯಿತು. ಆಗ ಗಂಟೆ 3-30 ಆಗಿತ್ತು. ನಿಲ್ಲದೆ ಸಾಗಿದೆವು. ಮುಂದೆ ಮಳೆ ಜೋರಾಯಿತು. ವಿಧಿ ಇಲ್ಲದೆ ಮರದ ಕೆಳಗೆ ನಿಂತೆವು. ಯಾಣ ತಲಪಲು ಇನ್ನೇನು ಕೆಲವೇ ಕಿಮೀ ದೂರವಿರುವಾಗ ನಾವು ಕೆಲವೇ ಮಂದಿ ಅಕಾಲಿಕ ಧಾರಾಕಾರ ಮಳೆಗೆ ಸಿಲುಕಿಕೊಂಡು ಒದ್ದೆಯಾದೆವು. ಒಂದು ಗಂಟೆ ಚೆನ್ನಾಗಿ ಸುರಿಯಿತು. ಮಲೆನಾಡ ಮಳೆ ನಿಲ್ಲುವಂಥದ್ದಲ್ಲ ಎಂಬ ಅರಿವು ಇರಬೇಕಿತ್ತು! ಗಂಟೆ 4.30 ಆದಾಗ ಇನ್ನು ನಿಂತು ಪ್ರಯೋಜನ ಇಲ್ಲ. ಹೇಗೂ ಒದ್ದೆಯಾಗಿದ್ದೇವೆ. ಮುಂದೆ ಹೋಗೋಣ ಎಂದು ಮುಂದುವರಿದೆವು. ನಾವು ಮಳೆಗೆ ನಿಲ್ಲದೆ ಮುಂದೆ ಸಾಗಿದ್ದರೆ ಅನತಿ ದೂರದಲ್ಲೇ ಮುಖ್ಯರಸ್ತೆ ಸಿಗುತ್ತಿತ್ತು. ಹಾಗೂ ಅಲ್ಲಿ ಅಂಗಡಿಮುಂಗಟ್ಟು ಇತ್ತು. ಅದರಡಿಯಲ್ಲಿ ನಿಲ್ಲಬಹುದಿತ್ತು. ಮುಂದೆ ಎಷ್ಟು ಸಾಗಬೇಕು ಎಷ್ಟು ದೂರ ಇದೆ ಎಂಬ ಅರಿವು ನಮಗ್ಯಾರಿಗೂ ಇರಲಿಲ್ಲ. ಕೇವಲ ಹತ್ತೇ ನಿಮಿಷದಲ್ಲಿ ನಮಗೆ ಅರಣ್ಯ ಇಲಾಖೆಗೆ ಸೇರಿದ ಯಾಣದೆಡೆಗೆ ಸಾಗುವ ಗೇಟ್ ಕಂಡಿತು! ಮುಂದೆ ಹೋದವರೆಲ್ಲ ಅಲ್ಲಿ ಗೂಡಂಗಂಡಿಯಲ್ಲಿ ಸೇರಿದ್ದರು. ಅಯ್ಯೋ ಇಷ್ಟು ಹತ್ತಿರವಿತ್ತು ನಾವು ನಿಲ್ಲದೆ ಬಂದಿದ್ದರೆ ಇಷ್ಟು ಒದ್ದೆಯಾಗುತ್ತಿರಲಿಲ್ಲ ಎಂದು ಪೇಚಾಡಿಕೊಂಡೆವು! ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತಿನ ಅರ್ಥವಾದ ಕ್ಷಣವದು!

ಅಲ್ಲಿ ಅರ್ಧ ಗಂಟೆ ನಿಂತು ಮಳೆ ನಿಂತಮೇಲೆ ಯಾಣದ ಭೈರವೇಶ್ವರ ಶಿಖರ ನೋಡಲು ಸಾಗಿದೆವು. ಅದಾಗಲೇ ಸಂಜೆ ಗಂಟೆ 6  ಆಗಿ ಕತ್ತಲಾವರಿಸಿತ್ತು. ಬಟ್ಟೆ ಒದ್ದೆಯಾದ ಕಾರಣ ನಾವು ದೇವಾಲಯಕ್ಕೆ ಭೇಟಿ ನೀಡದೆ ಮುಂದೆ ಸುಮಾರು 3 ಕಿಮೀ ದೂರವಿರುವ ದತ್ತಾತ್ರೇಯ ಭಟ್ಟರ ಮನೆಗೆ ನಡೆದೆವು. ನಾಳೆ ಬೆಳಗ್ಗೆ ಬಂದು ಯಾಣ ನೋಡುವ ಎಂದು ವೇಲಾಯುಧನ್ ಹೇಳಿದರು. ಮಳೆ ಬಂದು ರಸ್ತೆ ಕೊಚ್ಚೆಮಯ. ಅಂಟಾದ ಕಪ್ಪು ಮಣ್ಣು ಚಪ್ಪಲಿಗೆ ಮೆತ್ತಿ ಕಾಲು ಎತ್ತಿಡಲು ಭಾರವಾಗುತ್ತಿತ್ತು. ಅಂತೂ ಕಾಲೆಳೆದುಕೊಂಡು ಸಾಗಿದೆವು.

ಚಾರಣದ ಕೊನೆಯಹಂತ
ಸಂಜೆ ಆರೂವರೆ ಗಂಟೆಗೆ ದತ್ತಾತ್ರೇಯ ಭಟ್ಟರ ಮನೆ ತಲಪಿದೆವು. ಅವರ ಗದ್ದೆಯಲ್ಲಿ ಕಬ್ಬು ಬೆಳೆದು ನಿಂತಿತ್ತು. ಅದರ ಎಲೆಗಳನ್ನು ನೇಯ್ದು ಕಟ್ಟಿದ ರೀತಿ ಕಣ್ಣಿಗೆ ಸೊಗಸಾಗಿ ಕಂಡಿತು.

sugarcane field

‘ವಿಭೂತಿ ಜಲಪಾತದಿಂದ ಮಳೆಯನ್ನೂ ಹೊತ್ತು ತಂದಿರಿ’ ಎಂದು ಹುಸಿಮುನಿಸಿನಿಂದ ಭಟ್ಟರು ಸ್ವಾಗತಿಸಿದರು! ಮಳೆಯಿಂದ ವಿದ್ಯುತ್ ಕೈಕೊಟ್ಟಿತ್ತು. ಸೋಲಾರ್ ದೀಪ ಮಂಕಾಗಿತ್ತು. ಅಲ್ಲಿ ಚಹಾ ಅವಲಕ್ಕಿ ಸಿದ್ಧವಾಗಿತ್ತು. ಗಂಗೋತ್ರಿ ಘಟಕದ ಚಂದ್ರಶೇಖರ್ (ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನಲ್ಲಿ ಉಪನ್ಯಾಸಕ) ಜೋಳದ ಬಿಸಿ ಬಿಸಿ ಸೂಪ್ ತಯಾರಿಸಿದ್ದರು. ಹೆಚ್ಚಿನವರು ಅವರನ್ನು ಅಡುಗೆ ಭಟ್ಟರೆಂದೇ ತಿಳಿದಿದ್ದರು. ಅವರು %

4 Responses

 1. Hema says:

  ಈ ಲೇಖನದ ಎಲ್ಲಾ ಭಾಗಳನ್ನೂ ಓದಿದ್ದೇನೆ. ತುಂಬಾ ಚೆನ್ನಾಗಿ ಚಾರಣದ ಅನುಭವಗಳನ್ನು ಬರೆದಿದ್ದೀರಾ. ಪುನ: ಪಶ್ಚಿಮಘಟ್ಟಕ್ಕೆ ಹೋದಂತಾಯಿತು. ಥ್ಯಾಂಕ್ಸ್.

 2. Dinesh Naik says:

  AMAZING

 3. jayashree says:

  ರುಚಿ ರುಚಿಯಾಗಿ ಚೆನ್ನಾಗಿದೆ ಮೇಡಂ. ಹಾಗೆಯೇ ವಿವರಗಳು ಕೂಡ ..

 4. ಮಾಲಾ says:

  ಎಲ್ಲರಿಗೂ ಧನ್ಯವಾದಗಳು.

Follow

Get every new post on this blog delivered to your Inbox.

Join other followers: