“ಮ-ಮಾ” ಭೂತ ನನ್ನ ಬೆನ್ನು ಹತ್ತಿರುವಾಗ ….
ಈ “ಮ-ಮಾ” ಭೂತ ನನ್ನ ಜೀವನದಲ್ಲಿ ಎಷ್ಟು (ಅ)ಸಹಕಾರಿ ಆಗಿದೆ ಅಂತ “ಮತ್ತೆ” ಹೇಳ್ತೀನಿ: ಶುರು ಶುರುವಿಗೆ ಬರೀ ಕೆಲಸದ ವಿಷಯದಲ್ಲಿ ಇದ್ದ “ಮ- ಮಾ” ಭೂತದ ಕಾಟ ಮತ್ತೆ ಊಟದ ವಿಷಯದಲ್ಲು ಶುರುವಾಯ್ತು. ಬರ್ತಾ ಬರ್ತಾ ರಾತ್ರಿ ಮಲಗುವ ವಿಷಯದಲ್ಲೂ, ನಿದ್ದೆ ಮಾಡುವ ವಿಷಯದಲ್ಲೂ “ಮ-ಮಾ” ಹೇಳಿ ಕಾಣೋದಕ್ಕೆ ಶುರುವಾಯ್ತು ಹೇಳಿದರೆ……. ಗೊತ್ತಾಗಿರಬಹುದಲ್ವಾ ?- ವಿಷಯ ಎಷ್ಟು ವಿಪರೀತಕ್ಕೆ ಹೋಗಿದೆ ಹೇಳಿ !
ನಾನು ಚಿಕ್ಕವಳಿರುವಾಗ ನಮ್ಮ ಮನೆಯಲ್ಲಿ ಒಂದು ನಿಯಮ ಇತ್ತು : “ಸ್ನಾನ ಆಗದ್ದೋರಿಗೆ ಮಧ್ಯಾಹ್ನ ಊಟ ಇಲ್ಲ” ಅಂತ. ಅದು ಗೊತ್ತಿದ್ದೂ-ಗೊತ್ತಿದ್ದೂ “ಮ-ಮಾ” (ಮತ್ತೆ ಮಾಡಿದರಾಯ್ತು) ಜಪ ಮಾಡಿಕೊಂಡು, ಹೊಟ್ಟೆ ಚುರುಗುಟ್ಟಿದ ಮೇಲೆ ಸ್ನಾನಕ್ಕೆ ಹೋಗೋದು ! ದೊಡ್ಡವರ ಹತ್ತಿರ ಬೈಸಿಕ್ಕೊಳ್ಳದಿದ್ರೆ ಸ್ನಾನಕ್ಕೊಂದು ಬೆಲೆ ಇಲ್ಲ ಅಂತ ಅನ್ನಿಸಿಕೊಂಡಿತ್ತು ! (ಈಗ ನಮ್ಮ ಮಕ್ಕಳು ಸಹ ಹಾಗೆ ಮಾಡ್ತಾ ಇದ್ದಾರಲ್ವಾ ? ರಜೆ ಬಂತು ಹೇಳಿದರೆ ಹೇಗಪ್ಪ ಇವರುಗಳ ಜೊತೆ ಏಗುವುದು ಹೇಳಿ ಕಾಣುತ್ತಲ್ವಾ? ಅವರುಗಳ ಸ್ನಾನ ಮಾಡಿ ಆಗುವಷ್ಟು ಹೊತ್ತಿಗೆ ಸಾಕಪ್ಪಾ ಹೇಳಿ ಕಾಣುತ್ತಲ್ವಾ ? ಕಲೆ, ರೋಗಗಳು ಮಾತ್ರ ಅಲ್ಲಪ್ಪಾ……… ಸೊಂಬೇರಿತನ ಸಹ ವಂಶಪಾರಂಪರ್ಯ ಹೇಳಿ ಕಾಣ್ಸುತ್ತೆ. ಒಪ್ತೀರಾ ?)
ಶಾಲೆಗೆ ಹೋಗ್ತಾ ಇರೋವಾಗ ಈ “ಮ-ಮಾ” ಭೂತ ನನಗೆ ಭಯಂಕರ ಉಪದ್ರ ಕೊಟ್ಟುಕೊಂಡಿತ್ತು. ಪ್ರತಿದಿನ ಹೋಂವರ್ಕ್ “ಮ-ಮಾ” ಹೇಳಿಕೊಂಡು ರಾತ್ರಿ ಮಲಗಿ-ಬೆಳಿಗ್ಗೆ ಮುಗಿಸಲಾರದ್ದೆ-ಶಾಲೆಯಲ್ಲಿ ಬಿಡುವಿರುವಾಗ ಗೆಳತಿ ನೋಟ್ ಬುಕ್ಕಿಂದ (ತಪ್ಪು ಸಹಿತವಾಗಿ) ಕಾಪಿ ಮಾಡಿದ್ದು- ಮಾಷ್ಟ್ರತ್ರೆ ಬೈಸಿಕೊಂಡಿದ್ದು-ಬೇರೆ ದಾರಿಯಿಲ್ಲದ್ದೆ ರಾತ್ರಿ ನಿದ್ದೆಗೆಟ್ಟು ಹೋಂವರ್ಕ್ ಸರಿಮಾಡಿ ಬರೆದಿದ್ದು. ವರ್ಷದ ಮೊದಲೆಲ್ಲ ಮತ್ತೆ ಓದಿದರಾತು ಹೇಳಿಕೊಂಡು, ಅರಾಮಾಗಿದ್ದು- ಪರೀಕ್ಷೆ ಹತ್ತಿರ ಬಂದಾಗ ರಾತ್ರಿ ನಿದ್ದೆಗೆಟ್ಟು ಓದಿ- ಪರೀಕ್ಷೆ ಟೆನ್ಶನ್ ನಿಂದ ಹೊಟ್ಟೆ ಕೆಟ್ಟದ್ದು- ಪಿತ್ತಕ್ಕೆ ತಲೆ ತಿರುಗಿದ್ದು- ವಾಂತಿ ಆಗಿದ್ದು. ಪರೀಕ್ಷೆಯಲ್ಲಿ “ಮ-ಮಾ” ಜಪ ಮಾಡಿಕೊಂಡು, ಗೊತ್ತಿದ್ದ ಉತ್ತರವನ್ನೂ ಬರೆಯಲಾಗದ್ದೆ- ಟೈಂ ಸಾಲದ್ದೆ ಮತ್ತೆ ವ್ಯಥೆ ಪಟ್ಟಿದ್ದು … ಒಂದೇ ಎರಡೇ…….. ಬರೀತಾ ಕುಳಿತರೆ ಆ ವಿಷಯವೇ ಒಂದು ಲೇಖನ ಬರೆಯೋದಕ್ಕೆ ಸಾಕು ! ಒಬ್ಬ ಮನುಷ್ಯ ತನ್ನ ಋಣಾತ್ಮಕ ವಿಷಯಗಳನ್ನೆಲ್ಲ ಯಾರ ಹತ್ತಿರನೂ ಹೇಳುವುದಕ್ಕೆ ಹೋಗಬಾರದಂತೆ. ಮನಸು ಕೇಳ್ಳಿಲ್ಲರೀ……. ನಿಮ್ಮ ಹತ್ತಿರ ಅಲ್ಲದ್ದೆ ಮತ್ಯಾರ ಹತ್ತಿರ ಹೇಳಿಕೊಳ್ಳೋದು ಇದನ್ನೆಲ್ಲ ?
“ತಲೆ ತಿರುಗಿದ್ದು” ಹೇಳಿದಾಗ ಒಂದು ವಿಷಯ ನೆನಪಾಯ್ತು. ತಲೆ ತಿರುಗುತ್ತೆ ಅಂತ ಹೇಳಿದರೆ ನನ್ನ ಅಣ್ಣ ತಮಾಷೆ ಮಾಡ್ತಾ ಇದ್ದ : ” ತಲೆಗೆ ” + ” ಶೇಪಿನಲ್ಲಿ ಎರಡು ಅಡಿಕೆ ಹಾಳೆ ಇಟ್ಟು ಕಟ್ಟಿಬಿಡೀನಿ (ಸದ್ಯ ನೆತ್ತಿಗೆ ಮೊಳೆ ಹೊಡಿತೀನಿ ಅಂತ ಹೇಳಲಿಲ್ಲ ! ನನ್ನ ಅಜ್ಜಿ ಪುಣ್ಯ…. ). ನಮ್ಮ ಮನೆಗೊಂದು ಫ್ಯಾನ್ ಆಗುತ್ತೆ”. ನನ್ನ ಕಷ್ಟ ನನಗೆ – ಅವನಿಗೋ ತಮಾಷೆ !
ನನಗೆ 24 ವರ್ಷ ಅಗೋವರೆಗೂ ಈ ಓದದ್ದೆ ಪರೀಕ್ಷೆಗೆ ಹೋದ – ಟೈಂ ಸಾಲೆದ್ದೆ ಪರದಾಡಿದ “ಪರೀಕ್ಷೆ ಕನಸು” ಪದೇ ಪದೇ ಬಿದ್ದುಕೊಂಡಿತ್ತು ! ಮದುವೆ ಆದ ಮತ್ತೆ (ನನ್ನ ಮಣಭಾರದ ಜೀವನವನ್ನು ಪಾಪದ ಗಂಡನ ತಲೆ ಮೇಲೆ ಹೇರಿದ ಮತ್ತೆ) ಆ ಕನಸು ಕಾಣೋದು ನಿಂತದ್ದು ! ಹಾಗೆ ಕನಸು ಕಾಣೋದು ನಿಲ್ಲೋದಕ್ಕೆ ನಾನು ಮಾಡಿದ ಉಪಾಯ ಎಂತದು ಗೊತ್ತಿದ್ಯಾ ? ಸುಮಾರು ಒಂದು ತಿಂಗಳು, ದಿನಾ ರಾತ್ರಿ ಮಲಗುವ ಮೊದುಲು ” ನನ್ನ ಜೀವನದಲ್ಲಿ ಎಲ್ಲಾ ಪರೀಕ್ಷೆ ಮುಗಿಯಿತು. ಇನ್ನು ನನಗೆ ಜೀವನದಲ್ಲಿ ಪರೀಕ್ಷೆ ಬರೆಯೋದಕ್ಕೆ ಇಲ್ಲ” ಅಂತ 10 ಸಾರಿ ಅಂತರ್ ಮನಸ್ಸಿಗೆ ಹೇಳಿಕೊಳ್ತಿದ್ದೆ. ಮತ್ತೆ ಹಾಗಿರುವ ಕನಸು ಬೀಳುವುದು ನಿಂತಿತು ! ಇದು ಸತ್ಯದ ಸಂಗತಿ. ಅವಶ್ಯಕತೆ ಇದ್ದೋರು ಪ್ರಯೋಗ ಮಾಡಿ ನೋಡಿ !
ಬೆಂಗಳೂರಿಗೆ ಬಂದು, ಕೆಲಸಕ್ಕೆ ಸೇರಿದಾಗ ಕಟ್ಟುನಿಟ್ಟು ಇಲ್ಲದ್ದ ಆಫೀಸು ಸಿಕ್ಕಿದ್ದು ನನ್ನ “ಮ-ಮಾ” ಭೂತಕ್ಕೊಂದು ವರದಾನ ಆಗಿಬಿಟ್ಟಿತ್ತು. “ಬಾಸ್ ಬೈಯಲ್ಲ ಬಿಡು” ಹೇಳಿಕೊಂಡು 10 ಗಂಟೆ ಆಫೀಸಿಂಗೆ 10.30 ಕ್ಕೆ ಹೋಗ್ತಾಯಿದ್ದೆ (ಹನುಮಂತ ನಗರದಿಂದ ಪೀಣ್ಯಕ್ಕೆ). ಆದರೆ ಯಾಕೆ ಗೊತ್ತಿಲ್ಲ- ಆಫೀಸಿನಿಂದ ಮನೆಗೆ ವಾಪಾಸ್ ಬರೋವಾಗ ಈ “ಮ-ಮಾ” ಭೂತದ ಕಾಟ ಇರ್ತಿರ್ಲಿಲ್ಲ ! ಸಂಜೆ 5.20 ಆಗೋದನ್ನೆ ಕಾದುಕುಳಿತು 5.30 ಕ್ಕೆಲ್ಲ ಆಫೀಸಿನಿಂದ ಹೊರಟು ಬಿಡ್ತಿದ್ದೆ. ಹೀಗೆ ಮಾಡೋದಕ್ಕೆ ಅನುಕೂಲವಾಗುವಂತೆ ಆಫೀಸಿನ ಗಡಿಯಾರಗಳನ್ನೆಲ್ಲ 10 ನಿಮಿಷ ಮುಂದೆ ಇಟ್ಟಿರ್ತಿದ್ವಿ. ಅದು ನನ್ನ ಮತ್ತು ಆಫೀಸ್ ಬಾಯ್ ಕೈವಾಡ ಅಂತ ಬಾಸ್ ಗೆ ಗೊತ್ತಿತ್ತು ಅನ್ನಿಸುತ್ತೆ !
ಮದುವೆ ಆದ ಮತ್ತೆ ಈ “ಮ-ಮಾ”ಭೂತದ ಕಥೆ ಮತ್ತಷ್ಟು ವಿಷಯಗಳಿಗೆ ವಿಸ್ತರಿಸಿತು. ಇಷ್ಟು ವರ್ಷ ಶಾಲೆ-ಕಾಲೇಜು-ಆಫೀಸ್ ಗೆ ಹೊಗ್ತಾ ಇರುವಾಗ “ಮತ್ತೆ ಊಟ ಮಾಡಿದರಾತು” ಅಂದುಕೊಂಡು, ಕೆಲವು ಸರ್ತಿ ಕೊನೇ ಕ್ಷಣದಲ್ಲಿ ಖಾಲಿ ಹೊಟ್ಟೆಲಿ ಹೋಗಬೇಕಾಗುತ್ತಿತ್ತು. ತಿಂದರೂ ಸ್ವಲ್ಪ ಸ್ವಲ್ಪ… ಹಾಗೆ ತೆಳ್ಳಗೆ ಇದ್ದೆ. ನಾನು ಕೊನೇ ಕ್ಷಣದಲ್ಲಿ ಕೆಲಸ ಮಾಡ್ತಾ ಇದ್ದದ್ದನ್ನು ಮಾತ್ರ ನೋಡಿದವ್ರು “ಹುಡುಗಿ ಎಂತ ಚುರುಕು” ಹೇಳಿ ಹೊಗಳಿಕೊಂಡು ಇರ್ತಿದ್ರು ! ಕೇಳಿ ಬಾರೀ ಖುಷಿ ಆಗ್ತಾ ಇತ್ತು. ಆದ್ರೆ ಈಗ ?
“ಮ-ಮಾ” ಅಂತ ಇಟ್ಟುಕೊಂಡ ಕೆಲಸವನ್ನೆಲ್ಲ ಅನಿವಾರ್ಯವಾಗಿ ಮುಗಿಸಿ ಮಲಗಲು ಹೋಗೋವಷ್ಟು ಹೊತ್ತಿಗೆ ರಾತ್ರಿ 11 ಕಳ್ದಿರುತ್ತೆ. “ಈ ಕೆಲಸ ಮುಗಿಸಿಯೆ ಮಲಗೋದಕ್ಕೆ ಹೋಗೋದು” ಅಂತ ಯೋಚನೆ ಮಾಡ್ತಾ ಇರೋವಾಗಲೆ “ಇನ್ನೂ ನಿನ್ನ ಕೆಲ್ಸ ಮುಗೀಲಿಲ್ವಾ ?” ಹೇಳುವ ಪ್ರಶ್ನೆ ಮಲಗುವ ಕೋಣೆ ಕಡೆಯಿಂದ ತೂರಿ ಬರುತ್ತೆ. ನಾಳೆ ಆದ್ರೂ ಬೇಗ ಕೆಲಸ ಮುಗುಸಿಕೊಳ್ಳ ಬೇಕು- ಅಂತ ಅಂದುಕೊಳ್ತೀನಿ. ಆಗೋದೇ ಇಲ್ಲ ! ಈ “ಮ-ಮಾ” ಭೂತ ಬೆಳಗಿಂದ ರಾತ್ರಿವರೆಗೂ ನನ್ನ ಬೆನ್ನು ಬಿಡೋದೇ ಇಲ್ಲ ! ವಿಕ್ರಮಾದಿತ್ಯ – ಬೇತಾಳನ ಹಾಗಾಗಿ ಹೋಗಿದೆ ನನ್ನ ಕತೆ ! ನನ್ನ ಕತೆ ಹೀಗಾಗಿದೆ ! ನಿಮ್ಮ ಕತೆ ಹೇಗೆ ? ನಿಮಗೂ ಈ ಚಾಳಿ ಇಲ್ವಾ ? ಸತ್ಯ ಹೇಳಬೇಕು ಮತ್ತೆ !
ವಿಶೇಷ ಸೂಚನೆ : ಈ ಲೇಖನ ಬರೀ ಕಲ್ಪನೆ. ನಾನು ತುಂಬ…….. ಒಳ್ಳೆಯವಳು. ಆಯ್ತಾ ! ನನ್ನನ್ನ ನಂಬಿ ಪ್ಲೀಸ್……………
– ಸುರೇಖಾ ಭಟ್, ಭೀಮಗುಳಿ, ಬೆಂಗಳೂರು
ಸೂಪರ್.. ಬಹಳಷ್ಟು ಮಂದಿಯನ್ನು ಹಲವಾರು ಬಾರಿ ಕಾಡುವ ಭೂತವಿದು.. 🙂
ಹೌದೌದು… ಸ್ವಲ್ಪ ಸೋಮಾರಿಗಳಾದ್ರೆ ಸಾಕು… ಏಮಾರಿ ಕೂತ್ಕೊಂಡ್ಬಿಡುತ್ತೆ ಈ ಭೂತ.