“ಒಂದು ಲಾಂ……….ಗ್ ಜಂಪ್ !!!!!”
ಐದು ವರ್ಷ ಹಿಂದಿನ ಮಾತು. ದೊಡ್ಡ ಮಗ ಆರನೇ ಕ್ಲಾಸ್- ಚಿಕ್ಕ ಮಗ ಒಂದನೇ ಕ್ಲಾಸ್. ಮಕ್ಕಳ ಶಾಲೆ ಬಿಡುವ ಹೊತ್ತಿಗೆ ನಾನು ಶಾಲೆ ಹತ್ತಿರ ಹೋಗಿ, ಅಲ್ಲಿದ್ದ ಶಾಲೆಯ ಈಜುಕೊಳದಲ್ಲಿ ಮೂವರೂ ಈಜಿ ಬರುವ ಕ್ರಮ ಮಾಡಿಕೊಂಡಿದ್ದೆವು. ಅಂದು ಈಜು ಮುಗಿಸಿ ಹೊರಡುವ ಸಮಯದಲ್ಲಿ ಕಂಡದ್ದು ಎಂಥ ಗೊತ್ತಾ ? ಮಕ್ಕಳ ಶಾಲಾ ಕ್ರೀಡೋತ್ಸವಕ್ಕಾಗಿ ಸಿದ್ಧಪಡಿಸಿದ್ದ “ಲಾಂಗ್ ಜಂಪ್” ಹೊಂಡ. ಅಂದಷ್ಟೇ ಮರಳು ತುಂಬಿಸಿ ಇಟ್ಟಂತೆ ಇತ್ತು.
ಎಲ್ಲಿತ್ತೋ ಸ್ಪಿರಿಟ್ಟು ! ಹಳೆಯ ದಿನಗಳು ನೆನಪಾದವು. ಹತ್ತನೇ ತರಗತಿಯಲ್ಲಿದ್ದಾಗ, ಹೊಸನಗರಲ್ಲಿ ನಡೆವ “ಹಿರಿಯ ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡೋತ್ಸವ”ಕ್ಕೆ ಹೋಗಿದ್ದೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯಲ್ಲಿ ಅಷ್ಟೇನು ಆಸಕ್ತಿ ಇಲ್ಲದವಳು ನಾನು. ಆವಕಾಶ ಸಿಕ್ಕಿದ್ದಾದರೂ ಹೇಗೆ ? ಆ ವರ್ಷ ಕ್ರೀಡೆಗೆ ವಯಸ್ಸಿನ ಮಿತಿ ಹಾಕಿದ್ದರು. ಹಾಗಾಗಿ, ಉತ್ತಮ ಕ್ರೀಡಾಪಟುಗಳಿಗೆಲ್ಲ ವಯಸ್ಸು ಹೆಚ್ಚಾದ ಕಾರಣ ಅವಕಾಶ ಸಿಕ್ಕದೇ ಹೋಗಿ, ಕೊನೆಗೆ ನಾನು ಹೈಜಂಪ್ ಗೆ ಆಯ್ಕೆಯಾಗಿದ್ದೆ. ಮೂರೂ ಮುಕ್ಕಾಲು ಅಡಿ ಎತ್ತರ ಹಾರಿ, ಮೊದಲ ಬಹುಮಾನ ಗೆದ್ದು, ಶಿವಮೊಗ್ಗದಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡೋತ್ಸವಕ್ಕೂ ಅರ್ಹಳಾಗಿದ್ದೆ ! ಓದಿನ ನೆಪವೊಡ್ಡಿ ಶಿವಮೊಗ್ಗಕ್ಕೆ ಹೋಗಲಿಲ್ಲ. ಅದು ಬೇರೆ ವಿಷಯ.
ಹಳೆಯದೆಲ್ಲ ಒಂದು ಸರ್ತಿ ನೆನಪಾಯ್ತು. ಮೈಯಲ್ಲಿ ಉತ್ಸಾಹ ಚಿಮ್ಮಿತ್ತು ! ಕೈಯಲ್ಲಿದ್ದ ಈಜುಡುಗೆಯ ಕೈಚೀಲವನ್ನ ಮಕ್ಕಳ ಕೈಲಿ ಕೊಟ್ಟೆ.
ಮರಳು ಹೊಂಡದ ಕಡೆಗೆ ಹೋದೆ. ಹೊಂಡದಿಂದ 20 ಅಡಿ ಹಿಂದಕ್ಕೆ ನಡೆದು ಅಲ್ಲಿಯೆ ನಿಂತೆ. ಅಲ್ಲಿ ಆಡುತ್ತಾ ಇದ್ದ 8 -10 ಮಕ್ಕಳು ಲಾಂಗ್ ಜಂಪ್ ಪ್ರಾಕ್ಟೀಸ್ ಮಾಡಿಕೊಂಡಿದ್ದವರು : ” ಆಂಟಿಗೆ ದಾರಿ ಬಿಡ್ರೋ” ಎಂದದ್ದು ಕೇಳಿತು. ಮಕ್ಕಳು ಸರಿದು ನಿಂತರು. ನಾಲ್ಕು ಹೆಜ್ಜೆ ಓಡಿದ್ದೆ ಅಷ್ಟೆ…. ಮುಂದಕ್ಕೆ ಮುಕ್ಕರಿಸಿದಂಗಾಯ್ತು…….. ಓಡೋದನ್ನ ನಿಲ್ಲಿಸಲೂ ಆಗಲಿಲ್ಲ, ನಿಯಂತ್ರಣ ತಪ್ಪಿತು. ಮರಳು ಹೊಂಡ ಇನ್ನು ಎ೦ಟು ಹೆಜ್ಜೆ ಇರುವಾಗಲೆ “ಕವುಂಚಿ” ಬಿದ್ದೆ ! (ನಗೆ ಮಾಡ್ತಾ ಇದ್ದಿರಾ…. ? – ಪಾಪ ಅನ್ನಿಸ್ತಾ ಇಲ್ವಾ ?) ಮರಳು ಹೊಂಡಕ್ಕೆ ಒಂದು ದೀರ್ಘದಂಡ ಪ್ರಣಾಮ ಮಾಡಿದ ಹಾಗಾಯ್ತು. ಸವಾರಿಸಿಕೊಂಡು ಎದ್ದೆ – ಕೈ ಸ್ವಲ್ಪ ತರಚಿತ್ತು. ಅಲ್ಲಿದ್ದ ಮಕ್ಕಳೆಲ್ಲ: “ಆಂಟಿ ಬಿದ್ರು ಕಣ್ರೋ” ಹೇಳಿದ್ದು ಕೇಳಿತು. ಹಾಗೇ ಬಿಟ್ಟರೆ ಸೋಲು ಒಪ್ಪಿಕೊಂಡ ಹಾಗೆ ಆಗುತ್ತೆ ಅನ್ನಿಸಿತು. (ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ) ಮತ್ತೆ ನಾಲ್ಕು ಹೆಜ್ಜೆ ಹಿಂದಕ್ಕೆ ನಡೆದು, ಮತ್ತೆ ನಿಧಾನಕ್ಕೆ ಓಡಿ ಒಂದು ಲಾಂಗ್ ಜಂಪ್ ಮಾಡಿದೆ !!!.
ಅಷ್ಟೊತ್ತಿಂಗೆ ಕೈಯಿಂದ ರಕ್ತ ಸುರಿಯುವುದಕ್ಕೆ ಶುರು ಆಗಿತ್ತು ! ಮರಳು ಗಾಯಕ್ಕೆ ಮೆತ್ತಿ, ಉರಿಯೋದಕ್ಕೆ ಶುರು ಆಯ್ತು !! ಕೈಚೀಲದಿಂದ ನೀರಿನ ಬಾಟೆಲ್ ತೆಗದು ಸ್ವಲ್ಪ ನೀರು ಕುಡಿದು, ಗಾಯದ ರಕ್ತ ತೊಳೆದು, ಕೈ ತೊಳದುಕೊ೦ಡು, ಸ್ಕೂಟಿ ಚಲಾಯಿಸಿ ಮನೆ ಸೇರಿ, ಔಷಧಿ ಎಣ್ಣೆ ಹಚ್ಚಿಕೊ೦ಡೆ.
ಪ್ರಸಂಗ ನಡೆವ ಹೊತ್ತಿಗೆ ಸ್ಕೂಲಿನ ಸೆಕರೇಟ್ರಿ ಶಾಲೆಯ ಬಾಲ್ಕನಿಯಲ್ಲಿ ನಿಂತಿದ್ದರಂತೆ. ನಾನು ಬಿದ್ದದು ನೋಡಿ, ಕೈಯಿಂದ ಮುಖ ಮುಚ್ಚಿಕೊಂಡರಂತೆ. ದೊಡ್ಡ ಮಗನಿಗೆ ಅದೇ ದೊಡ್ಡ ಅವಮಾನ ಅನ್ನಿಸ್ಸಿತ್ತು !
ಮನೆಗೆ ಬಂದು ಕುಳಿತು, ಸುಧಾರಿಸಿಗೊ೦ಡ ಮೇಲೆ ಸಣ್ಣ ಮಗ ಕೀಟಲೆ ಮಾಡಿದ: “ಇ೦ದು ಅಮ್ಮನ ವಿಡಿಯೋ ಮಾಡಿದ್ದಿದ್ದರೆ, gags….. just for laugh ಗೆ/ India’s funniest video (America’s funniest video ರೀತಿ) ಗೆ ಕಳಿಸಬಹುದಿತ್ತು !”. ನನ್ನ ಅವಸ್ಥೆ ನನಗೆ ! ಬಿದ್ದದ್ದಕ್ಕೆ ಕೈ ತರಚಿ ಉರಿಯುತ್ತಿತ್ತು. ಲಾಂಗ್ – ಹೈ – ಜಂಪ್ ಮಾಡಿ, ಮರಳು ಹೊಂಡಲ್ಲಿ ಬಿದ್ದ ಕಾರಣ, ಕುಸಿದು ಕುಳಿತ ಹಾಗಾಗಿ ಬೆನ್ನು ಚಳಕ್ ಚಳಕ್ ಹೇಳುವುದಕ್ಕೆ ಶುರುಮಾಡಿತ್ತು. ಯಾರಿಗೂ ಹೇಳುವಹಾಗಿಲ್ಲ – ಅನುಭವಿಸುವಹಾಗಿಲ್ಲ. ಹೇಳಿದರೆ “ಬೇಕಿತ್ತಾ ?” ಅಂತ ನಗ್ತಾರೆ ಎಂದು ಗೊತ್ತಿತ್ತು. ಹಾಗೆ ಯಾರ ಹತ್ತಿರನೂ ಹೇಳಿರಲಿಲ್ಲ ! ನಿಮ್ಮ ಹತ್ರ ಮಾತ್ರ…….. ಅದೂ ಈಗ….. ಹೇಳ್ತಾ ಇರೋದು…… ಯಾರ ಹತ್ತಿರನೂ ಹೇಳಬೇಡಿ ಆಯ್ತಾ ?
ನಾಲ್ಕೈದು ದಿನದಲ್ಲಿ ಬೆನ್ನು ನೋವು ಕಡಿಮೆ ಆಯಿತು. ಕೈ ಗಾಯ ಮಾಯುವುದಕ್ಕೆ ಒಂದು ತಿಂಗಳು ಬೇಕಾಯ್ತು. ಗಾಯದ ಕಲೆ ಈಗಲೂ ಇದೆ ! ಮತ್ತೆ ಕುಳಿತು ಯೋಚನೆ ಮಾಡಿದೆ . ದೇವರು ದೊಡ್ಡವನು. ಈ ವಯಸ್ಸಿನಲ್ಲಿ ಲಾಂಗ್ ಜಂಪ್ ಮಾಡುವುದಕ್ಕೆ ಹೋಗಿ ಒಂದಕ್ಕೊಂದು ಆಗಿದ್ದರೆ ? ಕೈ ಮುರಿದಿದ್ದರೆ ?… ಸ್ಲಿಪ್ ಡಿಸ್ಕ್ ಆಗಲಿಲ್ವಲ್ಲ ಸದ್ಯ ! (ನಿಮ್ಮ ಹತ್ತಿರ ಹಂಚಿಕೊಳ್ಳೋದಕ್ಕೆ ಒಂದು ವಿಷಯ ಸಿಕ್ಕಿತಲ್ಲ…. ಇದಕ್ಕಿಂತ ಸಂತೋಷ ಇನ್ನೇನು ಬೇಕೂರಿ ನನಗೆ ? – ಇದಷ್ಟೆ ಆದ ಲಾಭ !)
ಬೇಡಪ್ಪ ಬೇಡ……… ಇನ್ನು ಈ ಜೀವನಲಿ ಲಾಂಗ್ ಜಂಪ್ – ಹೈ ಜಂಪ್ ಮಾಡುವುದಕ್ಕೆ ಹೋಗೋಲ್ಲ !!!! ಈ ಜ್ಞಾನೋದಯ ಆಗೋದಕ್ಕೆ ಇಷ್ಟೆಲ್ಲಾ ಬೆಲೆ ತೆರಬೇಕಾಯ್ತಾ ?
– ಸುರೇಖಾ ಭೀಮಗುಳಿ, ಬೆಂಗಳೂರು
ಇದೂ ಒ೦ದು ಅನುಭವ ಬಿಡಿ .ದೇವರು ದೊಡ್ಡವನು
Long jump vs leg bump!