ಹೂವಿನ ‘ಯೂನಿಫಾರ್ಮಿಟಿ’
ಗರಿಗರಿಯಾದ ಯೂನಿಫಾರ್ಮ್ ಧರಿಸುವುದಿರಲಿ, ಯೂನಿಫಾರ್ಮ್ ನ ಹೆಸರೇ ಕೇಳಿರದ ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ನಾವು ಹೆಣ್ಣುಮಕ್ಕಳು ನಮ್ಮದೇ ಶೈಲಿಯಲ್ಲಿ ‘ಯೂನಿಫಾರ್ಮಿಟಿ’ ಸೃಷ್ಟಿಸಿಕೊಂಡುದಕ್ಕೆ ತರಾವರಿಯ ಹೂಗಳು ಮತ್ತು ಶಾಲೆಗೆ ಹೂಗಳನ್ನು ಮುಡಿದುಕೊಂಡೇ ಹೋಗಬೇಕು ಎಂಬ ಅಲಿಖಿತ ನಿಯಮ ಕಾರಣವಾಗಿತ್ತು. ಹೂಗಳಲ್ಲಿ ಪ್ರಮುಖ ಸ್ಥಾನ ಮಲ್ಲಿಗೆಗೆ. ನಂತರದ ಸ್ಥಾನ ಕನಕಾಂಬರ ಹೂವಿಗೆ. ಮುಂದಿನ ಸರದಿ ಸೇವಂತಿಗೆಯದು. ಹೂಗಳ ಸೀಸನ್ ನಲ್ಲಿ ಸಂಜೆ ಮೊಗ್ಗುಗಳನ್ನು ಕಿತ್ತು ತಾಳ್ಮೆಯಿಂದ ದಾರದಲ್ಲೋ, ಬಾಳೆಯ ನಾರಿನಲ್ಲೋ ಪೋಣಿಸಿದರೆ ಅಂದಿನ ಕೆಲಸ ಮುಗಿದಂತೆ.
ಮರುದಿನ ಅಮ್ಮನೋ ಅಜ್ಜಿಯೋ ಎರಡು ಜಡೆ ಕಟ್ಟಿ, ಹೂವಿನ ಮಾಲೆಯನ್ನು ಉದ್ದಕ್ಕೆ ಇಳಿಬಿಟ್ಟು, ಜಡೆಗೂ ಮಾಲೆಗೂ ಸೇರಿಸಿ ದಾರವನ್ನು ಕಟ್ಟಿದಾಗ ಸಾಲಂಕೃತರಾದ ಭಾವ ನಮಗೆ. ಸೇವಂತಿಗೆಯ ಸೀಸನ್ ನಲ್ಲಿ , ಅವುಗಳನ್ನು ಕಿತ್ತು, ಅಡ್ಡವಾಗಿ ಪೋಣಿಸಿ, ಎರಡು ಜಡೆಗೆ ಸೇತುವೆಯಂತೆ ಮುಡಿಸುತ್ತಿದ್ದರು . ಬಣ್ಣ ಬಣ್ಣದ ಸ್ಪಟಿಕಹೂಗಳೂ ತಲೆಯಲ್ಲಿ ರಾರಾಜಿಸುತ್ತಿದ್ದುವು. ಇನ್ನು ಕೆಲವರು, ಗುಲಾಬಿಯನ್ನು ಕ್ಲಿಪ್ ಸಹಾಯದಿಂದ ಜಡೆಗೆ ಸಿಕ್ಕಿಸುತ್ತಿದ್ದರು. ಇವುಗಳಾವುದೂ ಇಲ್ಲದ ದಿನಗಳಲ್ಲಿ ಮಾಮೂಲಿ ದಾಸವಾಳವನ್ನೂ ಬಿಟ್ಟವರಲ್ಲ ನಾವು. ಎರಡೂ ಜಡೆಗೂ ಕೆಂಪಿಂದೋ, ಹಳದಿಯದೋ,ಬಿಳಿಯದೋ ದಾಸವಾಳವನ್ನು ತಲೆಗೆ ‘ಮೈಕ್ ‘ ಕಟ್ಟಿದಂತೆ ಮುಡಿದುಕೊಳ್ಳುತ್ತಿದ್ದೆವು.
ಯಾರಾದರೂ ಗೆಳತಿಯರ ಮನೆಯಲ್ಲಿ ಹೂವಿಲ್ಲದಿದ್ದರೆ, ಅವರಿಗೆಂದು ಹೂವನ್ನು ಒಯ್ಯುವ ಧಾರಾಳಿಯಾಗಿದ್ದೆವು. ಒಟ್ಟಾರೆಯಾಗಿ ಎಲ್ಲರ ತಲೆಯಲ್ಲೂ ‘ ಯೂನಿಫಾರ್ಮ್’ ಹೂವಿರುವಂತೆ ವ್ಯವಸ್ಥೆ ಮಾಡುತ್ತಿದ್ದೆವು. ಹಾಗಿದ್ದೂ ಕೆಲವೊಮ್ಮೆ ಈ ವಿಷಯವಾಗಿ ಚಿಲ್ಲರೆ ಮನಸ್ತಾಪಗಳು…. ಪರಸ್ಪರ ಚಾಡಿಹೇಳುವಿಕೆಗಳು….ಧಿಡೀರ್ ಪಕ್ಷಾಂತರ ಮಾಡುವುದು……ಮುಖ ದುಮ್ಮಿಸಿ ಇರುವುದು….ಕೊನೆಗೆ ‘ಆಪಾದಿತರು’ ಸೋಲೊಪ್ಪಿ… ನೆಲ್ಲಿಕಾಯಿಯನ್ನೋ ಮಾವಿನಕಾಯಿಯನ್ನೋ ತಂದು ಕೊಟ್ಟು ಅಥವಾ ಪೆನ್ನಿನಲ್ಲಿ ಶಾಯಿ ಮುಗಿದಿದ್ದರೆ ಅರ್ಧ ಪೆನ್ನು ಶಾಯಿ ಕೊಟ್ಟು friendship patch-up actions ಕೂಡ ಆಗಿಂದಾಗ್ಗೆ ನಡೆಯುತ್ತಿತ್ತು.
ಇಂತಿದ್ದ ನಾನು ಈಗ ಇರೋ ಮೋಟು ಫೊನೀಟೈಲ್ ಗೆ ಒಮ್ಮೊಮ್ಮೆ ದೇವರ ಪ್ರಸಾದವಾಗಿ ಸಿಕ್ಕ ಹೂವನ್ನು ಮಾತ್ರ ಮುಡಿಯುತ್ತೇನೆ. ಅಲ್ಲಿಗೆ ಪುಷ್ಪಪ್ರೀತಿ ಮುಗಿಯಿತು.
ಕಾಲಾಯ ತಸ್ಮೈ ನಮ: !
– ಹೇಮಮಾಲಾ.ಬಿ
ವಾಹ್, ಎಷ್ಟು ಚೆನ್ನಾಗಿ ಬರೆದಿದ್ದೀರಾ, …….ನೈಟಿ, ಚೂಡಿದಾರ್ ಎಲ್ಲೆಲ್ಲೂ ಕಾಣುತ್ತಿರುವಾಗ …ನಾನು ಅಸ್ಸಾಮ್ ಗೆ ಹೋಗಿದ್ದಾಗ ಅಲ್ಲಿ ಶಾಲೆಗೆ ಹೊರಟ ಹುಡುಗಿಯರ ಲಂಗ ದಾವಣಿ ನೋಡಿ ಬೆರಗಾಗಿದ್ದೆ
ಸುಂದರವಾದ ಆ ದಿನಗಳಲಿ ಯಾರ ಮನೆಯಲ್ಲಿ ಯಾವ ಹೂ ಬೆಳೆಯುತ್ತಾರೆ ಅನ್ನೋದನ್ನ ಬಾಲಕಿಯರ ತಲೆ ನೋಡಿ ಹೇಳಬಹುದಿತ್ತು .
Yes mam ji … Huvu cheluvella nandendithu … hennu huva mudidu Cheluve Thaanendithu ..!!!!
ನಾನು ಹೂವಾ ಕೊಟ್ಟೆನರಿ ಹೈಸ್ಕೂಲದಾಗಿದ್ದಾಗ ನಮ್ನಬೂರಿಂದ ಎರಡ ಕೀಲೊ ಮೀಟರ ದೂರದ ಊರಿಗೆ ಶಾಲಿಗೆ ಹೋಗಾಕ ಸೈಕಲ್ಲ ಅದಕೊಂದ ಮುಂದ ಸಣ್ಣ ದೆವರ ಪೋಟೊ.ಆ ದೇವರ ಪೋಟ ಇಟ್ಟ ದಾಸವಾಳ ಹೂ ನನ್ನ ಸೈಕಲ್ಲ ನಿಲ್ಲಿಸಿ ತಕ್ಕೊಳಾವರ ನಮ್ಮ ಸಿನಿಯರ ಹುಡಗಿರು ಕ್ಲಾಸ್ಮೆಟಗೊಳ ಮತ್ತ ನಾನು ಒಬ್ಬರಿಗೆ ಅವಾಗ ಅವಾಗ ಹೂ ಕೊಡತಿದ್ದೆ ಆ ದಿನಗಳು ಬಂಗಾರದ ದಿನಗಳು ದನ್ಯವಾದಗಳು ನೆನಪಿಸಿದ್ದಕ್ಕೆ.
ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.