ವೀರ ಮಹಾರಾಣಾ ಪ್ರತಾಪ್ ‘ದಿ ಗ್ರೇಟ್’

Share Button
Lakshmisha J Hegade1

ಲಕ್ಷ್ಮೀಶ ಜೆ.ಹೆಗಡೆ

ನಾವೆಲ್ಲಾ ಶಿವಾಜಿ ಮಹಾರಾಜರನ್ನು ಮೊಘಲರ ವಿರುದ್ಧ ವೀರಾವೇಶದಿಂದ ತಲೆಬಾಗದೇ ಹೋರಾಡಿದ ಧೀರ,ಹಿಂದವೀ ಸಾಮ್ರಾಜ್ಯ ಸ್ಥಾಪಕ ಎಂದೆಲ್ಲಾ ಕೊಂಡಾಡಿ ಆರಾಧಿಸುತ್ತೇವೆ.ಆದರೆ ಆ ಶಿವಾಜಿಯೂ ಅತೀ ಹೆಚ್ಚು ಗೌರವಿಸುತ್ತಿದ್ದಂಥ ವೀರ ರಜಪೂತ ರಾಜನೊಬ್ಬನಿದ್ದ.ಆ ರಾಜ ಹಾಕಿಕೊಟ್ಟ ತಳಪಾಯದ ಮೇಲೆಯೇ ಶಿವಾಜಿ ಹಿಂದೂ ಸಾಮ್ರಾಜ್ಯವನ್ನು ಬಲಪಡಿಸುತ್ತ ಬಂದ ಎಂದು ಕೆಲವರಿಗೆ ತಿಳಿದಿರಲಿಕ್ಕಿಲ್ಲ.ಆ ವೀರ ರಾಜ ಎಂಥೆಂಥ ಬೆಟ್ಟದಂಥ ಕಷ್ಟಗಳಿಗೂ ಜಗ್ಗದೇ ಅಜೇಯನಾಗಿ ಉಳಿದುಬಿಟ್ಟ.ಯಾವುದೋ ಪುರಾಣದ ವೀರನಲ್ಲ ಆತ.ನಮ್ಮ ದೇಶದವನೇ.ಸಾಮಾನ್ಯ ಮನುಷ್ಯರ ಎದುರಿಗೇ ಮನುಷ್ಯನಾಗೇ ಬದುಕಿದಾತ.‘ದಿ ಗ್ರೇಟ್’ ಎಂದು ಕರೆಸಿಕೊಳ್ಳಲ್ಪಡುವ ಅಕ್ಬರ್ ಆ ವೀರನನ್ನು ಮಣಿಸಲು ಹೋಗಿ ಪದೇ ಪದೇ ಮಣ್ಣು ಮುಕ್ಕಿದ್ದ.ಆ ವೀರನೇ ಮಹಾರಾಣಾ ಪ್ರತಾಪ್.ಇತಿಹಾಸಕಾರರಿಂದ ಅಷ್ಟೇ ಏಕೆ ಅಪ್ರತಿಮ ರಾಷ್ಟ್ರಭಕ್ತರೆನಿಸಿಕೊಂಡವರ ಕೈಯಿಂದಲೂ ತೀವ್ರ ನಿರ್ಲಕ್ಷಕ್ಕೊಳಗಾದಾತ.

ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು “ಅಕ್ಬರ್ ನನ್ನು ‘ದಿ ಗ್ರೇಟ್’ ಎಂದು ಬೇಕಾದರೆ ಕರೆದುಕೊಳ್ಳಲಿ,ನನ್ನದೇನೂ ಅಭ್ಯಂತರವಿಲ್ಲ.ಆದರೆ ಮಹಾರಾಣಾ ಪ್ರತಾಪ್ ನನ್ನು ನಮ್ಮ ಇತಿಹಾಸಕಾರರು ನಿರ್ಲಕ್ಷ ಮಾಡಬಾರದಿತ್ತು.ಅವನನ್ನೂ ‘ದಿ ಗ್ರೇಟ್’ ಎಂಬ ಬಿರುದು ಕೊಟ್ಟು ಆರಾಧಿಸಬೇಕಿತ್ತು” ಎಂದರು.ಅವರು ಹಾಗೆ ಹೇಳಿದ್ದರ ಹಿಂದಿನ ಔಚಿತ್ಯವೇನು?ಸುಮ್ಮನೇ ಮಹಾರಾಣಾ ಪ್ರತಾಪ್ ಗ್ರೇಟ್ ಆಗಿಬಿಡುತ್ತಾನೆಯೇ?ಅಕ್ಬರ್ ನನ್ನು ವೀರಾವೇಶದಿಂದ ಎದುರಿಸಿದವರು ಹಲವು ರಾಜರಿದ್ದಾರೆ.ಹಾಗಿದ್ದೂ ‘ದಿ ಗ್ರೇಟ್’ನನ್ನು ಎದುರಿಸಿದ್ದಕ್ಕಾಗಿ ಪ್ರತಾಪನಿಗೆ ಮಾತ್ರ ವಿಶೇಷ ಮರ್ಯಾದೆ ಕೊಡುವುದೇಕೆ ಎಂಬುದು ಹಲವರ ಪ್ರಶ್ನೆಯಾಗಿರಬಹುದು.

ಈಗಿನ ರಾಜಸ್ಥಾನದಲ್ಲಿರುವ ಮೇವಾಡ್ ನ ರಾಜ ಉದಯ ಸಿಂಹನ ಮಗ ಮಹಾರಾಣಾ ಪ್ರತಾಪ್.ತಂದೆ ಉದಯ ಸಿಂಹನೂ ಬದುಕಿನುದ್ದಕ್ಕೂ ಮೊಘಲರ ವಿರುದ್ಧ ಹೋರಾಡುತ್ತಾ ಬಂದವನೇ.ಇಂಥವನ ಪುತ್ರ ಪ್ರತಾಪ್ ಹುಡುಗನಾಗಿದ್ದಾಗ ಕಾಡು ಮೇಡುಗಳನ್ನು ತನ್ನ ಗೆಳೆಯರೊಂದಿಗೆ ಅಲೆಯುವುದನ್ನೇ ಕಾಯಕ ಮಾಡಿಕೊಂಡಿದ್ದ.ಆಗ ಆತ ಕಾಡುಗಳಲ್ಲಿ ಮಾಡುವ ತುಂಟಾಟಕ್ಕೆ ಮೇವಾಡದ ಎಲ್ಲ ಪ್ರಜೆಗಳೆಲ್ಲ ಆತನನ್ನು ದೂರುವವರೇ.ಪಾಪ ಅವರಿಗೇನು ತಿಳಿದಿತ್ತು.ಮುಂದೆ ಭಾರತದ ಈ ವೀರಪುತ್ರ ಕಾಡನ್ನೇ ಸಾಮ್ರಾಜ್ಯ ಮಾಡಿಕೊಂಡು ತಮ್ಮ ಮಾನ-ಪ್ರಾಣಗಳನ್ನು ಮೊಘಲರಿಂದ ರಕ್ಷಿಸುತ್ತಾನೆಂದು.ಅಷ್ಟಕ್ಕೂ ಮಹಾರಾಣಾ ಪ್ರತಾಪ್ ನನ್ನು ಆತನ ತಂದೆಯ ಮರಣಾನಂತರ ಹಿರಿಯರು ಮೇವಾಡ್ ನ ರಾಜನೆಂದು ಘೋಷಿಸಿ ಸಾಂಕೇತಿಕವಾಗಿ ಪಟ್ಟಾಭಿಷೇಕ ಮಾಡಿದ್ದು ಕೂಡಾ ಕಾಡಿನಲ್ಲಿಯೇ.Rana Pratap Singh

ಬಹುತೇಕ ರಜಪೂತ ಮತ್ತು ಇತರ ಹಿಂದೂ ರಾಜರುಗಳು ಮೊಘಲರೊಂದಿಗೆ ಸ್ನೇಹ ಬೆಳೆಸಿಕೊಂಡು ಅರ್ಥಾತ್ ಅವರ ಗುಲಾಮರಾಗಿದ್ದಾಗ ಮೇವಾಡ್ ನ ಮಹಾರಾಣಾ ಪ್ರತಾಪ್ ಮಾತ್ರ ಏಕಾಂಗಿಯಾಗಿ ಯಾರಿಗೂ ತಲೆಬಾಗದೇ ಹೋರಾಡುತ್ತಲೇ ಬಂದ.ರಾಜ್ಯಭಾರ ಮಾಡೋಣವೆಂದರೆ ಸರಿಯಾದ ರಾಜಧಾನಿಯೂ ಇಲ್ಲ.ಯಾವ ಕ್ಷಣದಲ್ಲಿ ಅಕ್ಬರ್ ಆಕ್ರಮಣ ಮಾಡುತ್ತಾನೋ ಎಂಬ ಭಯ.ಹಾಗಾಗಿ ತನ್ನ ಪರಿವಾರ ಪ್ರಜೆಗಳನ್ನು ಕಟ್ಟಿಕೂಂಡು ಕಾಡು ಮೇಡುಗಳಲ್ಲೇ ಜೀವನ ಸಾಗಿಸಿದ.ಏನೇ ಆದರೂ ಅಕ್ಬರ್ ನಿಗೆ ಶರಣಾಗಬಾರದು ಎಂಬುದು ಪ್ರತಾಪ್ ನ ಅಚಲ ನಿಲುವಾಗಿತ್ತು.ಹತ್ತಿಪ್ಪತ್ತು ಸಲ ಅಕ್ಬರ್ ತನ್ನವರನ್ನು ಕೊನೆಗೆ ರಜಪೂತರವನೇ ಆದ,ಅಕ್ಬರ್ ನಿಗೆ ನಿಷ್ಠನಾಗಿದ್ದ ಮಾನ್ ಸಿಂಗ್ ನನ್ನು ಪ್ರತಾಪನ ಬಳಿ ಹತ್ತು ಹಲವು ಬಾರಿ ಮಾತುಕತೆಗೆ ಕಳಿಸಿದರೂ ಮಹಾರಾಣಾ ತನ್ನ ನಿಲುವನ್ನು ಸಡಿಲಿಸಲಿಲ್ಲ.ಅಕ್ಬರ್ ನ ಇಡೀ ಅಧಿಪತ್ಯಕ್ಕೆ ಸವಾಲಾಗಿ ಕೊನೆಯವರೆಗೂ ಉಳಿದುಕೊಂಡಿದ್ದು ಮಹಾರಾಣಾ ಪ್ರತಾಪ್ ಮಾತ್ರ.

ಮಹಾರಾಣಾ ಪ್ರತಾಪ್ ಹಿಂದುಸ್ಥಾನದ ರಾಜರುಗಳಲ್ಲೇ ಪರಮ ಪರಾಕ್ರಮಿ ಮತ್ತು ಚಾಣಾಕ್ಷ ರಾಜ.ಆತನ ಯುದ್ಧ ತಂತ್ರಗಳಿಗೆ ಆತನೇ ಸಾಟಿ.ಸುಮ್ಮನೇ ಹಿಂದುಮುಂದು ಯೋಚಿಸದೇ ಶತ್ರುಗಳ ಮೇಲೆ ದಾಳಿ ಮಾಡುವವನಲ್ಲ.ಎಲ್ಲಾ ರಜಪೂತರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಸದಾ ಸಿದ್ಧವಾಗಿದ್ದರೆ ಈ ಪ್ರತಾಪ್ ಮಾತ್ರ ಪ್ರತಿ ಕ್ಷಣವೂ ದೇಶಕ್ಕಾಗಿ ಬದುಕಲು ಬಯಸುತ್ತಿದ್ದ.ಯುದ್ಧದಲ್ಲಿ ಸಾಯಲು ಇಷ್ಟಪಡದೇ ಪ್ರಾಣ ಉಳಿಸಿಕೊಂಡು ಹೋರಾಡಿ ಸದಾಕಾಲ ತಾಯಿ ಭಾರತಿಯ ಸೇವೆ ಮಾಡಲು ಬಯಸುತ್ತಿದ್ದ.ತನಗಿದ್ದ ಅತೀ ಕಡಿಮೆ ಸಂಖ್ಯೆಯ ಸೇನೆಯನ್ನು ಅತ್ಯಂತ ಚಾಣಾಕ್ಷತನದಿಂದ ಉಪಯೋಗಿಸಿಕೊಂಡು ಮೊಘಲರ ವಿರುದ್ಧ ಹೋರಾಡುತ್ತಿದ್ದ.ನಾಳಿನ ಗೆಲುವಿಗಾಗಿ ಇಂದು ತಲೆ ಮರೆಸಿಕೊಂಡು ಹಿಂದೆ ಸರಿದರೂ ತಪ್ಪಿಲ್ಲ ಎಂಬ ಜಾಯಮಾನದವನಾಗಿದ್ದ.ನಾಳಿನ ಗೆಲುವಿಗಾಗಿ ಇಂದು ಪಲಾಯನವಾದವನ್ನು ಅನುಸರಿಸುವುದನ್ನು ಹೇಡಿತನ ಎಂದು ಎಂದೂ ಭಾವಿಸಿಕೊಳ್ಳಲೇ ಇಲ್ಲ.

ಅಕ್ಬರನಂಥ ಅಕ್ಬರನ ಸೇನೆಯನ್ನೇ ಒಂದು ಕೋಟೆಯೊಳಗೆ ವಾರಗಟ್ಟಲೇ ದಿಗ್ಭಂದನ ಹಾಕಿ ಕೂಡಿಟ್ಟ ರಾಜ ಯಾರದರೂ ಇದ್ದರೆ ಅದು ಮಹಾರಾಣಾ ಪ್ರತಾಪ್ ಮಾತ್ರ.ಅಕ್ಬರ್ ಸೇನೆಯ ಆಕ್ರಮಣದ ಸುಳಿವು ಸಿಗುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಕೋಟೆಯನ್ನು ಖಾಲಿ ಮಾಡಿ ತನ್ನ ಪ್ರಜೆಗಳೊಂದಿಗೆ ಕಾಡು ಸೇರಿಕೊಳ್ಳುತ್ತಿದ್ದ.ಕೋಟೆಯೊಳಗೆ ಮೊಘಲರು ಬಂದು ನೋಡಿದರೆ ನರಪಿಳ್ಳೆಯೂ ಇರುತ್ತಿರಲಿಲ್ಲ.ದೋಚಲು ಸಂಪತ್ತು,ದೌರ್ಜನ್ಯವೆಸಗಲು ರಜಪೂತ ಸುಂದರಿಯರು ಯಾರೂ ಇರುತ್ತಿರಲಿಲ್ಲ.ಕೋಟೆಯೊಳಗಿನ ಸಮೃದ್ಧ ಸಂಪತ್ತಿನ ಆಸೆಯಿಂದ ಬರಿಗಯ್ಯಲ್ಲಿ ಬರುತ್ತಿದ್ದ ಮೊಘಲರ ಸೇನೆಗೆ ಕೋಟೆಯೊಳಗೆ ತಿನ್ನಲು ಅನ್ನ,ಕುಡಿಯಲು ನೀರು ಸಹಿತ ಸಿಗದಂತೆ ಪ್ರತಾಪ್ ಮಾಡುತ್ತಿದ್ದ.ಒಮ್ಮೆ ಕೋಟೆಯೊಳಗೆ ಸೇರೆಕೊಂಡರೆ ಮೊಘಲರು ಏಕಾಏಕಿ ಹೊರಬರುವಂತೆಯೂ ಇರಲಿಲ್ಲ.ಏಕೆಂದರೆ ಮೊದಲೇ ಆಹಾರ ನೀರು ಇಲ್ಲದೇ ದುರ್ಬಲವಾಗಿದ್ದ ಮೊಘಲ್ ಸೇನೆಯ ಮೇಲೆ ಯಾವ ಸಮಯದಲ್ಲಿ ಪ್ರತಾಪ್ ದಾಳಿ ಮಾಡುತ್ತಾನೆ ಎಂದು ಊಹಿಸುವುದೂ ಕಷ್ಟವಾಗಿತ್ತು.

ಗೆರಿಲ್ಲಾ ಯುದ್ಧತಂತ್ರವನ್ನು ಶಿವಾಜಿ ಬಳಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದ್ದನೆಂದು ನಾವೆಲ್ಲ ತಿಳಿದಿದ್ದೇವೆ.ಆದರೆ ಶಿವಾಜಿಗಿಂತಲೂ ಮೊದಲೇ ಗೆರಿಲ್ಲಾ ಯುದ್ಧದ ಮೂಲಕ ಅಕ್ಬರ್ ನ ಸೇನೆಯ ನಿದ್ದೆಗೆಡಿಸಿದವನು ಪ್ರತಾಪ್.ಮೊಘಲರ ಸೇನೆ ರಾತ್ರಿ ದಾರಿ ಮಧ್ಯೆ ತಂಗುತ್ತಿದ್ದ ವೇಳೆ ಪ್ರತಾಪ್ ಗೆರಿಲ್ಲಾ ತಂತ್ರ ಬಳಸಿ ದಾಳಿ ಮಾಡಿ ಮೊಘಲ್ ಸೇನೆ ತಂದಿದ್ದ ಆಹಾರ ಸಾಮಗ್ರಿಗಳನ್ನು,ಶಸ್ತ್ರಾಸ್ತ್ರಗಳನ್ನು ದೋಚುತ್ತಿದ್ದ.ಹಾಗಾಗಿ ಕಾಡಿನಲ್ಲೇ ವಾಸವಾಗಿದ್ದರೂ ತನ್ನ ಪ್ರಜೆಗಳು ಆಹಾರವಿಲ್ಲದೇ ಸಾಯದಿರುವಂತೆ ನೋಡಿಕೊಳ್ಳುತ್ತಿದ್ದ.ಹಲವು ಸಲ ದಾರಿ ಮಧ್ಯೆಯೇ ಮೊಘಲ್ ಸೇನೆಯ ಮೇಲೆ ಮರೆಯಿಂದ ದಾಳಿ ಮಾಡಿ ಅವರು ಹಿಮ್ಮೆಟ್ಟುವಂತೆ ಮಾಡುತ್ತಿದ್ದ.ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಪ್ರತಾಪ್ ನ ಸೇನೆ ಮೊಘಲರ ಸೇನೆಗೆ ಸಾಧ್ಯವಾದಷ್ಟು ಹಾನಿಯುಂಟು ಮಾಡುತ್ತಿತ್ತು.

18 ಜೂನ್ 1576ರಂದು ಹಳದಿಘಾಟ್ ಎಂಬಲ್ಲಿ ಮಹಾರಾಣಾ ಪ್ರತಾಪ್ ನನ್ನು ಎದುರಿಸಲು ಅಕ್ಬರ್ ಮಾನ್ ಸಿಂಗ್ ನ ನೇತೃತ್ವದಲ್ಲಿ ಪ್ರತಾಪನ ಸೇನೆಗಿಂತಲೂ ನಾಲ್ಕುಪಟ್ಟು ಹೆಚ್ಚು ಸೇನಾಬಲದೊಂದಿಗೆ ಕಳಿಸಿದ.ಮೊಘಲರನ್ನು ಸೋಲಿಸಲು ಮಹಾರಾಣಾ ಪ್ರತಾಪ್ ಏಕಮಾತ್ರ ಆಶಾಕಿರಣವಾಗಿದ್ದರಿಂದ ಅನೇಕ ರಜಪೂತ ರಾಜರೂ ಪ್ರತಾಪ್ ಗೆ ಬೆಂಬಲ ಸೂಚಿಸಿ ಹಳದಿಘಾಟ್ ಯುದ್ಧದಲ್ಲಿ ಮೊಘಲರನ್ನು ವೀರಾವೇಶದಿಂದ ಎದುರಿಸಿದರು.ಅತೀ ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರತಾಪ್ ನ ಸೇನೆ ಮೊಘಲರ ವಿರುದ್ಧ ಭಾರೀ ಪ್ರಹಾರ ಮಾಡುತ್ತಲೇ ಹೋಯಿತು.ಆದರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವುನೋವುಗಳನ್ನೂ ಅನುಭವಿಸಿತು.ಮಹಾರಾಣಾ ಯಾವ ಹಂತದಲ್ಲೂ ಧೃತಿಗೆಡಲಿಲ್ಲ.ತನ್ನ ಅತ್ಯಂತ ಆಪ್ತರು ತನ್ನ ಕಣ್ಣೆದುರಿಗೇ ಮಡಿದರೂ ತಾಳ್ಮೆ ಕಳೆದುಕೊಳ್ಳದೇ ‘ಚೇತಕ್’ ಹೆಸರಿನ ತನ್ನ ಕುದುರೆಯ ಮೇಲೆ ಕುಳಿತು ಯುದ್ಧ ಮುಂದುವರೆಸಿದ.ಒಂದು ಹಂತದಲ್ಲಿ ಮೊಘಲರ ವಿರುದ್ಧ ಮೇಲುಗೈ ಸಾಧಿಸಿದ ಕೂಡಾ.ಆತನ ಕುದುರೆ ಮಾನ್ ಸಿಂಗ್ ಕುಳಿತಿದ್ದ ಆನೆಯ ಮೇಲೆ ತನ್ನ ಶಕ್ತಿಯನ್ನೆಲ್ಲ ಹಾಕಿ ಒಮ್ಮೆ ನೆಗೆಯಿತು.ಪ್ರತಾಪ್ ಮಾನ್ ಸಿಂಗ್ ಗೆ ಕತ್ತಿ ಬೀಸಿದ್ದ ಕೂಡಾ.ಆದರೆ ಗುರಿ ಸ್ವಲ್ಪದರಲ್ಲಿಯೇ ತಪ್ಪಿ ಮಾನ್ ಸಿಂಗ್ ಬಚಾವಾದ.ಆ ಘನಘೋರ ಯುದ್ಧದಲ್ಲಿ ಹರಸಾಹಸ ಪಟ್ಟು ಮಾನ್ ಸಿಂಗ್ ಗೆದ್ದ.ಮಹಾರಾಣಾ ಪ್ರತಾಪ್ ತೀವ್ರವಾಗಿ ಗಾಯಗೊಂಡ.ಆದರೆ ಸ್ವಾಮಿನಿಷ್ಠ ಕುದುರೆ ‘ಚೇತಕ್’ ತನ್ನೊಡೆಯನನ್ನು ರಣಾಂಗಣದಿಂದ ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.ಹಳದಿಘಾಟ್ ಯುದ್ಧದಲ್ಲಿ ಗಾಯಗೊಂಡು ಜರ್ಝರಿತವಾಗಿದ್ದ ಮತ್ತು ತನ್ನ ಅನೇಕ ಮಂದಿಯನ್ನು ಕಳೆದುಕೊಂಡಿದ್ದ ಪ್ರತಾಪ್ ನಿಗೆ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಹಿಡಿಯಿತು.ಈ ಮಧ್ಯೆ ಎಲ್ಲಿಯೂ ಮೊಘಲರ ಕಣ್ಣಿಗೆ ಬೀಳದಿರುವಲ್ಲಿ ಯಶಸ್ವಿಯಾದ.ಒಂದುಕಡೆಯಿಂದ ಮತ್ತೊಂದೆಡೆಗೆ ತನ್ನ ವಾಸಸ್ಥಳವನ್ನು ಬದಲಿಸುತ್ತಲೇ ಹೋದ.

Maharana-Pratap-Memorial

ಹಳದಿಘಾಟ್ ಯುದ್ಧದ ನಷ್ಟದಿಂದ ಚೇತರಿಸಿಕೊಂಡ ನಂತರ ಪ್ರತಾಪ್ ಮತ್ತೆ ತನ್ನ ಮೊದಲಿನ ಗೆರಿಲ್ಲಾ ದಾಳಿಗಳನ್ನು ಆರಂಭಿಸಿ ಮೊಘಲರಿಗೆ ಸಿಂಹಸ್ವಪ್ನನಾದ. ಅಕ್ಬರ್ ಆತನನ್ನು ಹಿಡಿಯಲು,ಸೋಲಿಸಲು ಮಾಡಿದ ಸರ್ವಪ್ರಯತ್ನಗಳೂ ವಿಫಲವಾದವು.ನಂತರದ ದಿನಗಳಲ್ಲಿ ಮೊಘಲರಿಗೆ ಯಾವ ರೀತಿ ಭಯ ಹುಟ್ಟಿಸಿದ್ದನೆಂದರೆ ಹಿಂದುಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ 1585 ರಿಂದ 1597ರ ವರೆಗೆ ಹನ್ನೆರಡು ವರ್ಷಗಳ ಕಾಲ ಮೇವಾಡ್ ಮೊಘಲರ ದಾಳಿಯೇ ಇಲ್ಲದೇ ಶಾಂತವಾಗಿತ್ತು.ಅಕ್ಬರ್ ನಂಥ ಅಕ್ಬರ್ ದಿ ಗ್ರೇಟ್ ಸಹ ಕೊನೆಗೆ ಪ್ರತಾಪ್ ನ ತಂಟೆಗೆ ಹೋಗುವುದನ್ನು ಕೈಬಿಟ್ಟ.

ಪ್ರಾಣ ಹೋದರೂ ಮೊಘಲರಿಗೆ ತಲೆಬಾಗುವುದಿಲ್ಲವೆಂದು ಛಲದಿಂದ ಹೋರಾಡಿದ ಪ್ರತಾಪ್ ಹಾಗಂತ ಮುಸ್ಲಿಂ ವಿರೋಧಿಯೇನೂ ಆಗಿರಲಿಲ್ಲ.ಹಳದಿಘಾಟ್ ಯುದ್ಧದಲ್ಲಿ ಪ್ರತಾಪನ ಸೇನಾಪತಿಯಾಗಿ ಹೋರಾಡಿದ ಪ್ರತಾಪನ ನಂಬಿಕಸ್ಥ ಬಂಟ ಹಕೀಂ ಖಾನ್ ಕೂಡಾ ಮುಸಲ್ಮಾನನೇ ಆಗಿದ್ದ.ಆತನ ಸೇನೆಯಲ್ಲೂ ಹಲವು ಮುಸ್ಲಿಮರಿದ್ದರು.ಆದರೆ ಮುಸಲ್ಮಾನ್ ರಾಜರುಗಳ ಸ್ನೇಹ ಬೆಳೆಸಿ ತಮ್ಮ ಸಾಮ್ರಾಜ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳುವ ಕೆಲವು ರಜಪೂತ ರಾಜರನ್ನು ಬಹಿಷ್ಕರಿಸಬೇಕು,ಅವರ ಜೊತೆ ಯಾವ ವ್ಯವಹಾರವನ್ನೂ ಇಟ್ಟುಕೊಳ್ಳಬಾರದೆಂದು ಪ್ರತಾಪ್ ಕಟ್ಟಪ್ಪಣೆ ಹೊರಡಿಸಿದ್ದ.ಸರ್ವಧರ್ಮ ಸಹಿಷ್ಣುವಾಗಿದ್ದ ಪ್ರತಾಪ್ ತನ್ನ ಸಾಮ್ರಾಜ್ಯದ ಸುರಕ್ಷತೆಯ ವಿಚಾರ ಬಂದಾಗ ಮಾತ್ರ ಯಾವ ಧರ್ಮವನ್ನೂ ಲೆಕ್ಕಿಸಲಿಲ್ಲ.ಕೇವಲ ಪ್ರತಾಪ್ ಮಾತ್ರ ವೀರನಲ್ಲ.ಆತನಿಗೆ ಕಡೆಯವರೆಗೂ ಸಾಥ್ ಕೊಟ್ಟ,ಆತನೊಂದಿಗೆ ಕಾಡು ಮೇಡು ಅಲೆದ ಮೇವಾಡ್ ನ ಸಮಸ್ತ ಪ್ರಜೆಗಳೂ ಮಹಾವೀರರೇ.

ಕಳೆದುಕೊಂಡಿದ್ದ ಕೋಟೆಗಳನ್ನೆಲ್ಲ ನಂತರದ ದಿನಗಳಲ್ಲಿ ತನ್ನ ಸ್ವಂತ ಬಲದಿಂದ ಮತ್ತೆ ಪಡೆದುಕೊಂಡು ಮೇವಾಡ್ ಗೆ ಮತ್ತೆ ಮೊದಲಿನ ರಾಜಕಳೆ ತಂದುಕೊಟ್ಟು ಚಾವಂದ್ ಅನ್ನು ರಾಜಧಾನಿ ಮಾಡಿಕೊಂಡು ಪ್ರಜೆಗಳ ಹಿತಕಾಯ್ದು ಆಡಳಿತ ನಡೆಸಿ ಹಿಂದೂ ಧರ್ಮದ ಹಿರಿಮೆಯನ್ನು ಸದಾಕಾಲ ಎತ್ತಿ ಹಿಡಿದು ತಾನು ಬದುಕಿದ್ದಷ್ಟು ದಿನವೂ ಮೊಘಲರ ದಾಳಿಯಿಂದ ತಾಯಿ ಭಾರತಿಯನ್ನು ರಕ್ಷಿಸಿದ ಮಹಾರಾಣಾ ಪ್ರತಾಪ್ ತನ್ನ 57ನೇ ವಯಸ್ಸಿನಲ್ಲಿ 1597 ಜನವರಿ 19 ರಂದು ಕಣ್ಣುಮುಚ್ಚಿದಾಗ ಆ ಮಹಾವೀರನ ಮರಣವಾರ್ತೆಯನ್ನು ಕೇಳಿ ಅಕ್ಬರ್ ‘ದಿ ಗ್ರೇಟ್’ ಕೂಡಾ ಕಣ್ಣೀರಿಟ್ಟನಂತೆ.

ಹೋದಲ್ಲೆಲ್ಲ ಸಂಪತ್ತನ್ನು ಕೊಳ್ಳೆ ಹೊಡೆದ,ಮತಾಂಧನಾಗಿ ಜನರನ್ನು ಮತಾಂತರಕ್ಕೆ ಯತ್ನಿಸಿದ,ಭಾರತದ ಇತಿಹಾಸದಲ್ಲಿ ಅತೀ ಹೆಚ್ಚು ರಕ್ತದ ಹೊಳೆ ಹರಿಸಿದ,ಲೆಕ್ಕಕ್ಕೇ ಸಿಗದಷ್ಟು ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿದ ಅಕ್ಬರ್ ನೇ ‘ದಿ ಗ್ರೇಟ್’ ಆಗುವುದಾದರೆ ತನ್ನ ರಾಜ್ಯದ,ತನ್ನ ಪ್ರಜೆಗಳ ರಕ್ಷಣೆಗಾಗಿ ಕೊನೆವರೆಗೂ ಹೋರಾಡಿದ,ಬದುಕಿನುದ್ದಕ್ಕೂ ಮೊಘಲರಿಗೆ ಒಮ್ಮೆಯೂ ತಲೆಬಾಗದೇ ಆಡಳಿತ ನಡೆಸಿ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದ ಮಹಾರಾಣಾ ಪ್ರತಾಪ್ ನನ್ನು ಏನೆಂದು ಕರೆಯಬೇಕು?ಆದರೆ ಬಹಳಷ್ಟು ಜನರಿಗೆ ‘ದಿ ಗ್ರೇಟ್’ ನಿಗೂ ಪದೇ ಪದೇ ಮಣ್ಣು ಮುಕ್ಕಿಸಿದ್ದ ರಾಜನೊಬ್ಬ ಭಾರತದ ಇತಿಹಾಸದಲ್ಲಿದ್ದ ಎಂದು ಗೊತ್ತೇ ಇಲ್ಲದಿರುವುದು ಬಹಳ ನೋವಿನ ಸಂಗತಿ.ಸಮಾಧಾನದ ಸಂಗತಿ ಎಂದರೆ ಮೊದಲ ಬಾರಿಗೆ ಆಳುವ ಪಕ್ಷದ ಮಂತ್ರಿಯೊಬ್ಬರು ಪ್ರತಾಪ್ ನನ್ನು ಕೂಡಾ ‘ದಿ ಗ್ರೇಟ್’ ಎಂದು ಕರೆಯಬೇಕೆಂದು ಜನರಿಗೆ ಹೇಳಿದರು.ವೀರಪುತ್ರ ಪ್ರತಾಪ್ ನನ್ನು ನಾವು ಇನ್ನೂ ನೆನಪಿಸಿ ಗೌರವಿಸದೇ ಮತ್ತೆ ಮತ್ತೆ ಅಕ್ಬರ್ ನನ್ನೇ ‘ದಿ ಗ್ರೇಟ್’ ಎಂದು ಸಂಭೋದಿಸಿ ಬಹುಪರಾಕ್ ಹಾಕಿದರೆ ನಮಗೆ ನಾವೇ ಅವಮಾನ ಮಾಡಿಕೊಂಡಂತೆ.

                                                                         (ಪೂರಕ ಮಾಹಿತಿ: ಡಾ|| ಬಾಬು ಕೃಷ್ಣಮೂರ್ತಿಯವರ ‘ಯಾವುದು ಚರಿತ್ರೆ’ ಪುಸ್ತಕ)

 

– ಲಕ್ಷ್ಮೀಶ ಜೆ.ಹೆಗಡೆ

1 Response

  1. ಅದು ಅಭ್ಯಾಸಬಲ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: