ಮತ್ತೆ ಬಂದಿದೆ ಆಷಾಢ ಮಾಸ…
ಧೋ ಎಂದು ಮಳೆ ಸುರಿಯಬೇಕಾದ ಆಷಾಢ ಮಾಸ ಕಾಲಿಟ್ಟಿದೆ. ಮಳೆಯ ಅಬ್ಬರದ ನಡುವೆ ಚಳಿಗಾಳಿ ಬೀಸುತ್ತಿದೆ.
ಸುಶ್ರಾವ್ಯವಾದ ಜಾನಪದ ಹಾಡೊಂದರ ಸೊಲ್ಲು ಹೀಗಿದೆ “ಆಷಾಢ ಮಾಸ ಬಂದೀತವ್ವಾ…ಖಾಸಾ ಅಣ್ಣಾ ಬರಲಿಲ್ಲವ್ವಾ…ಎಷ್ಟೆಂದು ನೋಡಲಿ ನಾ ತೌರೀನ ದಾರಿ..”. ಈ ಮಾಸಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಬಯಲುಸೀಮೆಯಲ್ಲಿ, ಅಷಾಢ ಮಾಸದಲ್ಲಿ, ಮದುವೆಯಾದ ಹೆಣ್ಣುಮಗಳು ತನ್ನ ತವರಿಗೆ ಹೋಗುವ ಪರಿಪಾಠವಿದೆ. ಹಾಗೆ ಹೋದವಳು, ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ತವರಿನವರು ಕೊಟ್ಟ ಹೊಸ ಸೀರೆ, ಅರಶಿನ-ಕುಂಕುಮ-ಹೂ-ಬಳೆ ಗಳೊಂದಿಗೆ ಪತಿಗೃಹಕ್ಕೆ ಬರುತ್ತಾಳೆ.
ಮೈಸೂರಿನಲ್ಲಿ ಆಷಾಢದ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಸಹಸ್ರಾರು ಭಕ್ತಾದಿಗಳು ಜಿಟಿಜಿಟಿ ಮಳೆ,ಚಳಿಯನ್ನು ಲೆಕ್ಕಿಸದೆ ಮೈಲುದ್ದದ ಕ್ಯೂ ನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ. ಅ ದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಅಲಂಕಾರವಿರುತ್ತದೆ. ಇನ್ನು ಸಂಪ್ರದಾಯಸ್ಥರ ಮನೆಗಳಲ್ಲಿ , ಆಷಾಢ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡಿ, ಪಾಯಸ/ತಂಬಿಟ್ಟು ನೈವೇದ್ಯ ಸಮರ್ಪಿಸಿ ಮುತ್ತೈದೆಯರಿಗೆ ಅರಶಿನ-ಕುಂಕುಮ ಕೊಡುವ ಪದ್ಧತಿಯನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಶುಭಕಾರ್ಯಗಳಾದ ಮದುವೆ. ಮುಂಜಿ, ಗೃಹಪ್ರವೇಶ ಇತ್ಯಾದಿಗಳನ್ನು ಆಷಾಢ ಮಾಸದಲ್ಲಿ ಹಮ್ಮಿಕೊಳ್ಳುವುದಿಲ್ಲ.
ಕರಾವಳಿಯ ಕೆಲವು ಭಾಗಗಳಲ್ಲಿ, ಆಷಾಢ ತಿಂಗಳನ್ನು ‘ಆಟಿ’ ಎಂದು ಕರೆಯುತ್ತಾರೆ. ಆಟಿ ತಿಂಗಳಲ್ಲಿ ಮನೆಮನೆಗೆ ‘ಆಟಿ ಕಳೆಂಜ’ ಬರುತ್ತಾನೆ. ಆಟಿ ಕಳೆಂಜ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದು. ಕಳೆಂಜ ದುಷ್ಟ ಶಕ್ತಿಗಳನ್ನು ದೂರವಾಗಿಸುವ ದೈವಶಕ್ತಿ ಎಂದರ್ಥವೂ ಇದೆ. ಸಂಬಂಧಿತ ಕಲೆಯನ್ನು ಬಲ್ಲ ಜನಾಂಗದವರು ಇದನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಚಿಕ್ಕ ಬಾಲಕನೊಬ್ಬನಿಗೆ ಕಳೆಂಜ ವೇಷ ಹಾಕುತ್ತಾರೆ. ಮುಖಕ್ಕೆ ಢಾಳಾಗಿ ಬಣ್ಣ, ತಲೆಗೆ ಅಡಕೆ ಹಾಳೆಯ ಟೊಪ್ಪಿ, ಸೊಂಟಕ್ಕೆ ತೆಂಗಿನ ಗರಿಯಿಂದ ಮಾಡಿದ ಸ್ಕರ್ಟ್ ನಂತಹ ಉಡುಗೆ, ಕೈಗೊಂದು ತಾಳೆಗರಿಯ ಛತ್ರಿ, ಕಾಲಿಗೆ ಗೆಜ್ಜೆ (ಇದನ್ನು ಗಗ್ಗರ ಅನ್ನುತ್ತಾರೆ). ಹೀಗೆ ಕಳೆಂಜನ ಅಲಂಕಾರವಿರುತ್ತದೆ. ಕಳೆಂಜ ಮನೆಗೆ ಬರುವಾಗ ಹಿರಿಯವರೊಬ್ಬರು ಜತೆಯಲ್ಲಿರುತ್ತಾರೆ. ಕಳೆಂಜ ಮನೆಯಂಗಳದಲ್ಲಿ ಕುಣಿಯುವಾಗ ಇವರು ಹಿಮ್ಮೇಳದಲ್ಲಿ ‘ತೆಂಬರೆ’-ಯನ್ನು (ಚಿಕ್ಕ ಮದ್ದಳೆಯನ್ನು ಹೋಲುವ ಚರ್ಮ ವಾದ್ಯ) ನುಡಿಸುತ್ತಾ ಜಾನಪದ ಪಾಡ್ದನವನ್ನು ಹಾಡುತ್ತಾರೆ. ಮನೆಗೆ ಆಟಿ ಕಳೆಂಜ ಬಂದರೆ ಶುಭ ಎಂದು ನಂಬಿಕೆ. ಮನೆಯವರು ಕಳೆಂಜನಿಗೆ, ಅಕ್ಕಿ, ಬೆಲ್ಲ, ಕಾಯಿ ಮತ್ತು ದುಡ್ಡು ಕೊಡುತ್ತಾರೆ.
ಆಟಿ ತಿಂಗಳಲ್ಲಿ ‘ಚೆನ್ನೆಮಣೆ’ ಅಥವಾ ಅಳಗುಳಿಮಣೆ ಆಟ ಆಡುತ್ತಾರೆ. ಇದೊಂದು ರಂಜನೀಯ ಆಟ. ಕೆಂಪು ಬಣ್ಣದ ಮಂಜೊಟ್ಟಿ ಬೀಜ ಅಥವಾ ಹುಣಸೇ ಬೀಜವನ್ನು ಉಪಯೋಗಿಸುತ್ತಾ ಆಡುವ ಈ ಗ್ರಾಮೀಣ ಆಟ ಈಗ ಮರೆಯಾಗುತ್ತಿದೆಯಾದರೂ ಆಟಿ ತಿಂಗಳು ಅದನ್ನು ಜ್ಞಾಪಿಸುತ್ತದೆ. ನಾನು ‘ಆಟಿ ಕಳೆಂಜ’ ನನ್ನು ನೋಡಿ ಎಷ್ಟೊ ವರ್ಷಗಳಾದುವು. ಹಾಗೆಯೇ ಚೆನ್ನೆಮಣೆ ಆಟ ಬಾಲ್ಯದ ನೆನಪು. ಇವು ಈಗಲೂ ಆಚರಣೆಯಲ್ಲಿ ಇರಬಹುದು. ಹಳೆಯ ಪದ್ಧತಿಗಳನ್ನು ವರ್ಷಕ್ಕೆ ಒಮ್ಮೆಯಾದರೂ ನೆನಪಿಸಿಕೊಳ್ಳದಿದ್ದರೆ ಇಂತಹ ಬಹಳಷ್ಟು ಸಂಪ್ರದಾಯಗಳು ಮರೆತುಹೋಗುವುದರಲ್ಲಿ ಸಂಶಯವಿಲ್ಲ.
(ಚಿತ್ರಕೃಪೆ : ಅಂತರ್ಜಾಲ)
– ಹೇಮಮಾಲಾ.ಬಿ
Ellavannu ottige nenapisiddakkagi dhannyavadagallu mam..
ಆಷಾಢದ ಸಂಭ್ರಮಗಳನ್ನೆಲ್ಲ ಒಟ್ಟಿಗೇ ಕಟ್ಟಿಕೊಟ್ಟಿದ್ದೀರಿ. ತುಂಬಾ ಚೆನ್ನಾಗಿದೆ.
ನಿಜ…ವಿಶಿಷ್ಟತೆಗೆ ಮತ್ತೊಂದು ಹೆಸರೇ ನಿಮ್ಮ ಪ್ರತಿಯೊಂದು ಲೇಖನಗಳು..mam 🙂 ಉತ್ತಮ ಬರಹ..
ಥ್ಯಾಂಕ್ಸ್ ಸ್ನೇಹಾ ಅವರೇ.
ಆಟಿ ಮತ್ತು ಸೋಣೆ ಕಳಂಜ ನನ್ನ ಧರ್ಮಪತ್ನಿಯವರ ಮನೆ ಕಡೆ ಹೋದಾಗ ನೋಡಿದ್ದು ನೆನಪಿಗೆ ಬಂತು
ಆಷಾಢದ ಮಳೆಯ ಶಕ್ತಿ ನಮ್ಮನ್ನೆಲ್ಲಾ ಈಗಲೂ ಆ ಸುಂದರ ವಾತಾವರಣಕ್ಕೆ ಎಗ್ಗಿಲ್ಲದೇ ಕೊಂಡೊಯ್ಯುತ್ತದೆ
ಮಂಜ್ರೂಟಿಯ ಬೀಜ ಚೆನ್ನೆ ಮಣೆ ಪುನ ಹಸಿರಾಗಿಸಿದಿರಿ
ಧನ್ಯವಾದಗಳು ಈ ಸುಂದರ ನೆನಪಿಸುವಿಕೆಗೆ
ಧನ್ಯವಾದಗಳು 🙂