ದಕ್ಷಿಣ ಕಾಶಿ ‘ಮಹಾಕೂಟ’ ಒಂದು ವಿಶಿಷ್ಟ ಪ್ರವಾಸಿ ತಾಣ.
ಬಾದಾಮಿ ಚಾಲುಕ್ಯ ಅರಸರು ನಿರ್ಮಿಸಿದ ನಾಲ್ಕು ಪ್ರಮುಖ ಶಿಲ್ಪಕಲಾ ನೆಲೆಗಳಲ್ಲಿ ‘ಮಹಾಕೂಟ’ವು ಒಂದು. ಮಹಾಕೂಟದ ಸ್ತಂಭ ಶಾಸನವೊಂದರಲ್ಲಿ ‘ಮುಕುಟೇಶ್ವರ’ ಎಂದು ದಾಖಲಾಗಿರುವುದನ್ನು ಗಮನಿಸಿದರೆ ಮುಕುಟೇಶ್ವರ ಎಂಬ ಹೆಸರೆ ಮುಂದೆ ಮಹಾಕೂಟ/ ಮಹಾಕೂಟೇಶ್ವರ ಎಂದು ರೂಢಿಯಾಗಿರಬಹುದು. ಈ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ ಅಂತಲೂ ಕರೆಯುತ್ತಾರೆ.
ಚಾಲುಕ್ಯ ಅರಸರ ಮೂಲ ಪುರುಷ ಜಯಸಿಂಹ ಹಾಗೂ ರಣರಾಗನಿಂದ ಮಹಾಕೂಟ ಪೂಜಿತವಾದದು. ಮುಖ್ಯ ದೇವಾಲಯದ ಸುತ್ತಲೂ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಣ್ಣಪುಟ್ಟ ಗುಡಿಗಳಿವೆ. ಇತ್ತೀಚಿಗಷ್ಟೆ ನವೀಕರಣಗೊಂಡಿರುವುದರಿಂದ ಕ್ಷೇತ್ರದ ಸೌಂದರ್ಯ ಇಮ್ಮಡಿಯಾಗಿದೆ. ಅನೇಕ ಚಲನಚಿತ್ರಗಳು ಕೂಡಾ ಇಲ್ಲಿ ಚಿತ್ರೀಕರಣಗೊಂಡಿವೆ. ಬಾಗಲಕೋಟ ಜಿಲ್ಲೆಯ ಐತಿಹಾಸಿಕ ಬಾದಾಮಿ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ‘ಮಹಾಕೂಟ’ದ ಹತ್ತಿರದಲ್ಲಿಯೇ ರೈಲು ನಿಲ್ದಾಣವಿದೆ, ಬಸ್ಸು ಹಾಗೂ ಖಾಸಗಿ ವಾಹನಗಳ ಸೌಕರ್ಯವೂ ಇವೆ.
ಬಯಲುಸೀಮೆಯಲ್ಲಿ ಬೇಸಿಗೆ ಬಂತೆಂದರೆ ಸಾಕು ನದಿ, ಹಳ್ಳ, ಕೊಳ್ಳಗಳು ಬತ್ತುವುದು ಸರ್ವೆ ಸಾಮಾನ್ಯ, ಆದರೆ ಮಹಾಕೂಟದಲ್ಲಿ ಮಾತ್ರ ‘ಕಾಶಿತೀರ್ಥ’ ಹಾಗೂ ‘ವಿಷ್ಣು ಪುಷ್ಕರಣಿ’ ಎಂಬ ಎರಡು ವಿಶೇಷ ಹೊಂಡಗಳಿವೆ, ಇವೆರಡೂ ಎಂತಹ ಬರಗಾಲದಲ್ಲೂ ಬತ್ತುವುದಿಲ್ಲ. ಸದಾಕಾಲ ನೀರಿನ ಝರಿ ಇಲ್ಲಿ ಹರಿಯುತ್ತಲೇ ಇರುತ್ತದೆ. ನಿಸರ್ಗದ ಮಡಿಲಲ್ಲಿ ಕಂಗೊಳಿಸುವ ಕ್ಷೇತ್ರವು, ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಪ್ರವಾಸಿಗರಿಗೆ ತಣ್ಣನೆಯ ಸುಖ ನೀಡುತ್ತದೆ.
ಪುಷ್ಕರಣಿ ಹೊಂಡದ ಮಧ್ಯದಲ್ಲಿರುವ ಮಂಟಪದಲ್ಲಿ ತುಂಬಾ ವಿಶಿಷ್ಟವಾದ ಚತುರ್ಮುಖ ಲಿಂಗವಿದೆ, ಇದನ್ನು ಅಗಸ್ತ್ಯಮುನಿ ನಿರ್ಮಿಸಿದನೆಂದು ಹೇಳಲಾಗುತ್ತದೆ. ಶ್ರೀಕ್ಷೇತ್ರದಲ್ಲಿ ಚಾಲುಕ್ಯ ಅರಸರು ಯುದ್ಧವೊಂದರಲ್ಲಿ ಜಯಗಳಿಸಿದ ಪ್ರಯುಕ್ತ ವೈಶಾಖ ಶುದ್ಧ, ಬುದ್ಧ ಪೌರ್ಣಿಮೆಯ ದಿನ ವಿಜಯ ಸ್ತಂಬವನ್ನು ನಿಲ್ಲಿಸುತ್ತಾರೆಂದು ಇತಿಹಾಸದಿಂದ ತಿಳಿಯುತ್ತದೆ. (ಪ್ರಸ್ತುತ ಈ ವಿಜಯ ಸ್ತಂಭವು ವಿಜಯಪುರದ ವಸ್ತು ಸಂಗ್ರಹಾಲಯದಲ್ಲಿದೆ.) ವಿಜಯ ಸ್ತಂಭ ನಿಲ್ಲಿಸಿದ ದಿನದಂದೆ ಪ್ರತಿವರ್ಷ ಬುಧ್ಧ ಪೌರ್ಣಿಮೆ (ಆಗಿ ಹುಣ್ಣಿಮೆ)ಯ ದಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀಕ್ಷೇತ್ರದಲ್ಲಿ ಹೂವಿನ ರಥೋತ್ಸವ ಬಹು ವಿಜೃಂಭಣೆಯಿಂದ ನಡೆಯುತ್ತದೆ.
ದೂರದಿಂದ ಬರುವ ಪ್ರವಾಸಿಗರಿಗೆ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮಾತ್ರ ಗೊತ್ತು ಆದರೆ ಬಾದಾಮಿ ಮತ್ತು ಪಟ್ಟದಕಲ್ಲು ಮಧ್ಯದ ಕವಲು ದಾರಿಯಲ್ಲಿರುವ ಈ ವಿಶಿಷ್ಟ ಪ್ರವಾಸಿತಾಣ ‘ಮಹಾಕೂಟ‘ವನ್ನು ಅನೇಕರು ನೋಡುವುದೇ ಇಲ್ಲ. ದಾಸೋಹ, ಯಾತ್ರಿನಿವಾಸ ಇರುವುದರಿಂದ ಇಲ್ಲಿ ವಸತಿ ಮಾಡಲು ಕೂಡಾ ಅಡ್ಡಿಯಿಲ್ಲ.
– ವೀರಲಿಂಗನಗೌಡ್ರ. ಬಾದಾಮಿ.