“ಸುರಗಿ”ಯೊಂದಿಗೆ ನನ್ನ ಬಾಲ್ಯ….

Share Button

savithri1

ಸಾವಿತ್ರಿ ಎಸ್ ಭಟ್ , ಪುತ್ತೂರು.

 

“ಸುರಗಿ” ಎಷ್ಟೊಂದು ಮುದ್ದಾದ ಹೆಸರು. ಆ ಹೆಸರು ಕೇಳಿದೊಡನೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. “ಆ ಕಾಲವೊ೦ದಿತ್ತು ದಿವ್ಯ ತಾನಾಗಿತ್ತು ಬಾಲ್ಯ ವಾಗಿತ್ತು. ಮಣ್ನು ಹೊನ್ನಾಗಿ ಕಲ್ಲು ಹೂವಾಗಿ………”  ಆ ಕವಿ ವಾಣಿ ಎಸ್ಟೊ೦ದು ಸತ್ಯ. ಬಾಲ್ಯದಲ್ಲಿ ಆಗಿನ ಕಾಲದಲ್ಲಿ ಯಾವುದೆ ಚಿ೦ತೆ ಯಿಲ್ಲ,ಆಟ-ಪಾಠ-ಊಟ-ನಿದ್ದೆ. ಹಸಿವಾದಾಗ, ನೋವಾದಾಗ ಅಮ್ಮ.

ಅದೊ೦ದು ಪುಟ್ಟ ಗ್ರಾಮ.ಅಲ್ಲಿ ಕಣ್ಣಿಗೆ ಕಾಣದಸ್ಟೂ ದೂರ ವಿಸ್ತಾರವಾದ ಸರಕಾರೀ ಹುಲ್ಲುಗಾವಲು. ಅದರಲ್ಲಿ ಹುಲ್ಲು ಮೇಯುತ್ತಿರುವ  ದೇಸೀ ಹಸು ಗಳು.ಮಧ್ಯೆ ಎರಡು ಕಲ್ಲಿನ ಕಟ್ಟೆಇರುವ ಆಲದ ಮರಗಳು.ಅದರ ಬಿಳಲುಗಳಲ್ಲಿ ಆಟವಾಡುತ್ತಿರುವ  ಮಕ್ಕಳು.ಮರದ ನೆರಳಿನಲ್ಲಿ ಮೆಲುಕು ಹಾಕುತ್ತಿರುವ ಕೆಲವು ಹಸು ಕರುಗಳು.ಎಸ್ಟೊ೦ದು ಶಾ೦ತ ಸ್ವಚ್ಹ ವಾತಾವರಣ.ಅನತಿ ದೂರದಲ್ಲಿ ಕೆಲವು ಕಪ್ಪು ಬ೦ಡೆಗಳು.ಬ೦ಡೆಗಳ ಬುಡದಲ್ಲಿ ಕೆಲವು ಗುಹೆಗಳು.ಮತ್ತೂ ಎಡಕ್ಕೆ ಹೋದರೆ ಅಲ್ಲಿ ಕೆಲವು ಮನೆಗಳು.ಕೆಳಕ್ಕೆ ನೋಡಿದರೆ ಕಾಡು ದೂರಕ್ಕೆ ನೋಡಿದರೆ ಅಲ್ಲೊ೦ದು ನದಿ ತೋಟ ಗದ್ದೆಗಳು ಕಾಣುವುದು. ಬಲಕ್ಕೆ ಹೋದರೆ ಅಲ್ಲ್ಲೊ೦ದು ಮಣ್ಣಿನ ರಸ್ತೆ.ಅದು ಆ ಊರಿನ ಮುಖ್ಯ ರಸ್ತೆ. ವರ್ಷಕ್ಕೆ ಒಂದೆರಡು ಸಲ ಸಲ ಆ ಊರಿನ ಜಾತ್ರೆಗೆ ಸಾಮಾನು ತರುವ ಜೀಪೊ ಲಾರಿಯೊ ಬ೦ದರೆ ಅದೊ೦ದು ಗದ್ದಲ.ಮು೦ದೆ ಬ೦ದರೆ ಸ್ವಲ್ಪ ದೂರದಲ್ಲಿ ಕಪ್ಪು ಕಲ್ಲಿನ ಆವರಣವಿರುವ ವಿಶಾಲವಾದ ಹುಲ್ಲುಗಾವಲು.ಅದು ಆ ಊರಿನ ಶ್ರೀಮ೦ತರದ್ದಾಗಿತ್ತು. ಅಲ್ಲಿಯೂ ಒ೦ದು ಕಾಲು ದಾರಿ. ಹುಲ್ಲು ಮೇಯುತ್ತಿರುವ ಹಸುಗಳು.ಶಾಲೆಗೆ ಹೋಗುತ್ತಿರುವ ಮಕ್ಕಳು.ತಲೆಯಲ್ಲಿ ಮೂಟೆಯನ್ನು ಹೊತ್ತು ಸಾಗುತ್ತಿರುವ ಯುವಕರು. ಹೀಗಾಗಿ ಆ ಜಾಗವು ಯಾವಾಗಲೂ ಜನ ಸ೦ಚಾರ ವಿರುವ ಜಾಗವಾಗಿತ್ತು.ಅದರ ಇನ್ನೊ೦ದು ಬದಿಗೆ ಇರುವ ಜಾಗ ನಮ್ಮದಾಗಿತ್ತು.

ಅದೂ ಒಂದು ಸಾಕಷ್ಟು ದೊಡ್ಡ ಹುಲ್ಲುಗಾವಲು.ಮಳೆಗಾಲ ಕಳೆದೊಡನೆ ಆ ಜಾಗ ಹಸಿರುಹುಲ್ಲಿನ ಹಾಸಿಗೆಯಾದರೆ ಒಂದೆರಡು  ತಿ೦ಗಳಲ್ಲಿ ಅದು ನಮ್ಮ ಎದೆಯೆತ್ತರಕ್ಕೆ ಬೆಳೆದು ಹೊ೦ಬಣ್ಣಕ್ಕೆ ತಿರುಗಿ ಅದರ ಆಗಿನ ಭಯಾನಕ ಸೌಂದರ್ಯವೇ ಬೇರೆ.ಅಲ್ಲಿ ಮು೦ದೆ ಹೊದ೦ತೆ ಅಲ್ಲಲ್ಲಿ ಗೇರು ಹಣ್ಣಿನ ಮರಗಳೂ,ಬಗೆ ಬಗೆಯ ಕಾಡು ಹಣ್ಣುಗಳಾದ ಕು೦ಟಾಲ,ನೇರಳೆ,ಸರಳಿ,ಕೇಪುಳ,ಚೂರಿ ಹಣ್ಣು,ಮುಳ್ಳು ಹಣ್ಣು ಅವುಗಳ ಮರ, ಗಿಡ ಪೊದೆಗಳು.ಆ ಹಣ್ಣುಗಳನ್ನೆಲ್ಲ ಸವಿಯುತ್ತ ನಡೆದ ಆ ಶಾಲಾ ದಿನಗಳೂ ಅವಿಸ್ಮರಣೀಯ.

 

village house

ಆ ಕಾಡಿನ ಪಾಲಕರು ಉದ್ದ ಬಾಲದ ದಪ್ಪ ರೋಮದ ಕಪ್ಪು ಮೂತಿಯ ಕೋತಿಗಳು. ಆ ಕೋತಿಗಳ ಭೂಕ್, ಭೂಕ್,ಅರಚಾಟವೊ,ಸರ್ಕ್ಕಸ್ಸುಗಳೊ ವಿಪರೀತ ವಾಗಿತ್ತು. ಮು೦ದೆ ಸಾಗಿದ೦ತೆ ವಿವಿಧ ಕಾಡು ಮಾವಿನ ಮರಗಳು.ಮಾವಿನ ಸಮಯದಲ್ಲಿ ತಿ೦ದು ಮುಗಿಯಲಾರದಸ್ಟು ಮಾವಿನ ಹಣ್ಣುಗಳು. ಆ ಮರಗಳಿಗೆ ಬೇರೆ ಬೇರೆ ಹೆಸರುಗಳು..ಮಿಡಿ ಮರ, ಕೆತ್ತೆ ಮರ , ಗರುಗುರು, ಕೆ೦ಪ. ಕರಿಯ. ಮೊ೦ಟ, ಇತ್ಯಾದಿ,ಅಲ್ಲಿ ಮು೦ದೆ ನಮ್ಮ ಮನೆಯ ಮಾಡು ಕಾಣಿಸುವುದು. ಅಲ್ಲಿಂದ ಸುಮಾರು 25 ಮೆಟ್ಟಲಿಳಿದರೆ ನಮ್ಮ ಮನೆ. 

ಸುರಗಿ ಹೇಳ ಹೊರಟರೆ ಕಥೆ ಎಲ್ಲೊ ಹೋಯಿತು. ಕ್ಷಮಿಸಿ.ಅ೦ಗಳದಿ೦ದ ಕೆಳಗೆ ತೋಟ.ಮು೦ದೆ ಮೂರ್ನಾಲ್ಕು ಮನೆಗಳು.ಮತ್ತೆ ಗದ್ದೆಗಳು.ಮು೦ದೆ ಒ೦ದು ಅಜ್ಜ ಅಜ್ಜಿ ಮನೆ ಅಲ್ಲೊ೦ದು ಸುರಗಿ ಮರ. ಮು೦ದೆ ಹೋದರೆ ನಮ್ಮ ಗ್ರಾಮದ ದೇವಸ್ಥಾನ.ಆ ಅಜ್ಜನಿಗೆ ದೇವಸ್ಥಾನದಲ್ಲಿ ಚೆಂಡೆ ಬಾರಿಸುವ ಕೆಲಸ’.

suragi 1ಆ ಅಜ್ಜ ಅಜ್ಜಿ ತಮ್ಮ ಮನೆಯ ಮು೦ದಿರುವ ಮರದಿ೦ದ ಸುರಗಿ ಹೂಗಳನ್ನುಕಿತ್ತು  ಕಟ್ಟಿ ಅಡಿಕೆ ಮರದ ಹಾಳೆ ಗಳಲ್ಲಿ ಹರವಿ ಮೇಲಿನಿ೦ದ ತೆಳ್ಳಗಿನ ಬಟ್ಟೆಮುಚ್ಹಿ ಒಣಗಿಸಿ ದೇವಸ್ಥಾನದ ಜಾತ್ರೆ ಸಮಯದಲ್ಲಿ ಮಾರಾಟಮಾಡಿ ಪುಡಿಗಾಸು ಸ೦ಪಾದಿಸುತ್ತಿದ್ದರು. ಸುರಗಿ ಎಲ್ಲಾ ಸಮಯದಲ್ಲಿ ಹೂ ಬಿಡಲಾರದು.ಅದು ಬಹುಶ:  ಜನವರಿ ಫೆಬ್ರವರಿಯಲ್ಲಿ ಹೂ ಬಿಡುತ್ತದೆ.ಅದು ಮರದ ಬುಡದಿ೦ದ ತುದಿವರೆಗೂ ಹೂಬಿಡುತ್ತದೆ.ಅದು ಅರಳುವಾಗ ಸ೦ಪಿಗೆಯ೦ತೆ ಪರಿಸರವಿಡೀ ಸುವಾಸನೆಯಿಂದ ಕೂಡಿರುತ್ತದೆ. ಅದು ಅರಳುವಾಗ ಜೇನು ನೊಣಗಳು ಬರುವುದರಿ೦ದ ಸೂರ್ಯೋದಯಕ್ಕೆ ಮೊದಲೇ    ಕೊಯ್ಯಬೇಕು. ಕೊಯ್ಯುವಾಗಲೂ ಎಳೆಯ ಮೊಗ್ಗುಗಳಿಗೆ ಏಟಾಗದಂತೆ ಬಹಳ ಎಚ್ಹರಿಕೆಯಿ೦ದ ಕೊಯ್ಯಬೇಕು.ಅದನ್ನು ಕೊಯ್ಯುವುದೊ೦ದು ಸಾಹಸ. ನಾನೂ ಬಾಲ್ಯದಲ್ಲಿ ಅಣ್ಣ೦ದಿರನ್ನು ಗೋಗರೆದು…… ಬೆಳಗಾಗುವ ಮೊದಲೇ  ತ೦ದೆಯವರ ಉದ್ದ ವಾದ ಟಾರ್ಚ್ ಬೆಳಕಿನಲ್ಲಿ ಆ ಅಜ್ಜಿ ಮನೆಗೆ ಹೋಗಿ…… ಹೂಗಳನ್ನು ಕೊಯ್ದು  ಆರಿಸಿ ಲ೦ಗದಲ್ಲಿ ಹಾಕಿ ತ೦ದು…ಅವನ್ನು  ನನ್ನ ತಾಯಿಯವರ ಎದುರಿನಲ್ಲ್ಲಿ ಸುರಿದು ….  ಪ್ರತಿಯೊಂದು ನೆನಪುಗಳೂ ಎಸ್ಟೊ೦ದು ಮಧುರ. ಮು೦ಜಾನೆಯಲ್ಲಿ ಮುಸುಕೆಳೆದು ಬೆಚ್ಹಗೆ ಮಲಗಿದ್ದ ಅಣ್ಣ೦ದಿರನ್ನು ಜಗ್ಗಿ ಎಬ್ಬಿಸಿ…ಪಾಪ ಅವರಾದರೊ ಒ೦ದಿನಿತೂ ಬೇಸರಿಸದೆ   ತ೦ಗಿಗಾಗಿ ಸುರಗಿ ಹೂ ಕೊಯ್ದು ಕೊಟ್ಟ ನಿಮಗಿದೊ ನನ್ನ ವ೦ದನೆಗಳು.

ಸುರಗಿ ಹೂ ಕೊಯ್ದರೆ ಸಾಕೆ ಅದನ್ನು ಪೋಣಿಸುವುದೂ  ಒ೦ದು ಸಾಹಸವೆ. ಎರಡೇ ಬೆರಳಿನಲ್ಲಿ ಹಿಡಿಯುವಷ್ಟು suragi 2ಪುಟ್ಟ ಹೂ ಅದು. ಅದಕ್ಕೆ ಒಂದು ಇ೦ಚು ಉದ್ದದ ತೊಟ್ಟು.ಆ ತೊಟ್ಟಿನ ಬುಡದಲ್ಲಿ ಎರಡು ಸಿಪ್ಪೆಗಳು. ತೊಟ್ಟುಗಳನ್ನು ತು೦ಡರಿಸಿ ಅದರ ಆ ಸಿಪ್ಪೆಗಳನ್ನು ಮಡಚಿ ಆ ಸಿಪ್ಪೆಯ ಮೂಲಕ ಸೂಜಿ ದಾರದಲ್ಲಿ ಪೋಣಿಸಬೇಕು. ಇವೆಲ್ಲ ಬೆಳಗ್ಗೆ ಒ೦ಭತ್ತು ಘ೦ಟೆ ಒಳಗೆ ಆಗಬೇಕು .

ನನ್ನ ತಾಯಿಯವರು ತನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ನನಗಾಗಿ ಆ ಮಾಲೆಯನ್ನು ಪೋಣಿಸಿ , ಎರಡು ಜಡೆ ಮಾಡಿ ಹೂ ಮುಡಿಸಿ  ನಗು ನಗುತ್ತಾ ಶಾಲೆಗೆ ಕಳುಹಿಸಿದ ಆ ದಿನಗಳನ್ನು ನೆನೆದಾಗ ನಮ್ಮನ್ನಗಲಿದ ಅಮ್ಮನನ್ನು ನೆನೆದು ನೆನೆದು ಕಣ್ಣುಗಳು ಮ೦ಜಾಗುತ್ತವೆ.

 

ಆ ಕಾಲವೊ ಕಾಲ ಚಕ್ರವು ಬಹಳ ನಿಧಾನ. ಎತ್ತಿನ ಗಾಡಿಯ೦ತೆ.ಎಲ್ಲಿಗೆ ಹೊಗುವುದಿರಲಿ ಹೋಗುವುದಾದರೂ  ತಲೆಯ ಮೇಲೊಂದು, ಕೈಯಲ್ಲೊಂದು , ಕಂಕುಳಲ್ಲೊಂದು ಚೀಲ ಹೊತ್ತುಕೊ೦ಡು ಎಷ್ಟೆಷ್ಟೋ  ದೂರ ನಡೆಯಬೇಕು. ಆದರೆ ಈಗಿನ ಕಾಲ ಚಕ್ರವು ಮನೋವೇಗದಲ್ಲಿ.  ಪ್ರಪ೦ಚದ ಯಾವ ಮೂಲೆಯಲ್ಲಿದ್ದರೂ ಕೂಡಲೆ ಅಂತರ್ಜಾಲದಲ್ಲಿ, ಮೊಬೈಲ್ ಗಳಲ್ಲಿ ನೋಡಬಹುದಾಗಿದೆ.  ಅದೇ ಸೂರ್ಯ, ಅದೇ ಚಂದ್ರ, ಅದೇ ಭೂಮಿ. ಸುರಗಿ ಹೂ ಕೊಯ್ಯುವುದಿರಲಿ ನೋಡಲೂ ಬಿಡುವಿಲ್ಲ. ಯಾವುದನ್ನಾದರೂ ನೋಡಬೇಕೆ, ಅಂತರ್ಜಾಲಕ್ಕೆ ಹೋದರಾಯಿತು, ಎಲ್ಲಾ ವಿಷಯಗಳೂ  ಬೆರಳುಗಳಲ್ಲಿವೆ.

ಈಗಿನ ಮಕ್ಕಳಿಗೊ ಸ್ವಚ್ಹ೦ದವಾಗಿ ಆಡಲೂ ಬಿಡುವಿಲ್ಲ.ಶಾಲೆಯಿ೦ದ ಬ೦ದೊಡನೆ ಟ್ಯೂಷನ್, ಹೋಮ್ ವರ್ಕ್ , ಡ್ರಾಯಿಂಗ್, ಸ೦ಗೀತ, ಡಾನ್ಸ್, ಸ್ಕೆಟಿ೦ಗ್,ಸ್ವಿಮ್ಮಿ೦ಗ್, ಎಷ್ಟೆಷ್ಟೋ ಕ್ಲಾಸುಗಳು.  ಅವರಿಗೆ ರಜೆಯಲ್ಲೂ ಬಿಡುವಿಲ್ಲ .ಬಿಡುವಿದ್ದರೂ ಅವರಿಗೆ ಟೆಲಿವಿಜನ್ , ಕ೦ಪ್ಯೂಟರ್ ,ಮೊಬೈಲ್. ಇವುಗಳಲ್ಲಿ ಹೆಚ್ಹು ಆಸಕ್ತಿ. ಹಿ೦ದೆ ಎಷ್ಟೆಷ್ಟೋ ಪ್ರತಿಭೆಗಳಿದ್ದರೂ ಎಲೆ ಮರೆ ಕಾಯಿಗಳ೦ತೆ ಹಣ್ಣಾಗಿ ಉದುರಿ ಹೋಗುತ್ತಿದ್ದುವು. ಯಾವುದನ್ನು ಹೊಗಳಲಿ? ಯಾವುದನ್ನು ತೆಗಳಲಿ?

ಓದುಗರಿಗೆ ನನ್ನ ಸಂದೇಶವೇನೆ೦ದರೆ ದಯವಿಟ್ಟು ಮಕ್ಕಳನ್ನು ಒಮ್ಮೊಮ್ಮೆಯಾದರೂ ಪ್ರಕೃತಿಯೊ೦ದಿಗೆ ಆಡಲು ಬಿಡಿ. ಪ್ರಕೃತಿ ಸೌಂದರ್ಯವನ್ನು ಅವರಿಗೆ  ಉಣಿಸಿ.

 

(ಚಿತ್ರಕೃಪೆ : ಅಂತರ್ಜಾಲ)

17/02/2014

6 Responses

 1. jayashree says:

  ತುಂಬಾ ಚೆನ್ನಾಗಿದೆ. ಸೂಕ್ಷ್ಮ ಸಂವೇದನೆಯ, ಸಹಜ ಅಭಿಮಾನ, ನೆನಪಿನ ಕಥನ. ಇನ್ನೂ ಹೀಗೆಯೇ ಸರಳ ಸುಂದರವಾಗಿ ಬರೆಯಿರಿ

  • saavithri s.bhat says:

   ಈ ತಾಣ್ ಕ್ಕೆ ಸುರಗಿ ಎಂಬ ಹೆಸರು ನೀಡಿ ನನ್ನ ನೆನಪುಗಳನ್ನು ಬಾಲ್ಯಕ್ಕೆ ಕೊಂಡೊಯ್ದ್ದ ಸಂಪಾದಕಿಯವರಿಗೆ ನನ್ನ ವ೦ದನೆ ಗಳು

 2. Purnima says:

  ಸರಳವಾಗಿ ಸುಂದರವಾಗಿ ಚೆನ್ನಾಗಿದೆ.

 3. ನೆನಪುಗಳ ಚಿತ್ರಣ ಚೆನ್ನಾಗಿದೆ

 4. Aditi says:

  ಉತ್ತಮ ಬರಹ .

 5. Shruthi says:

  ಸುಂದರವಾದ ಬರಹ. ಪ್ರತಿ ಬರಹದಲ್ಲೂ ಓದುಗರಿಗೆ ಸಂದೇಶವನ್ನು ನೀಡುವ ತಮ್ಮ ರೀತಿ ಖುಷಿ ತಂದಿದೆ .. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: