ಮರೆಯಲಾಗದ, ಮರೆಯಬಾರದ ನಾಥು-ಲಾ ಪಾಸ್..

Share Button
Krishnaveni Kidoor
ಇತ್ತೀಚೆಗೆ ಈಶಾನ್ಯರಾಜ್ಯಗಳಿಗೆ ಹನ್ನೆರಡು ದಿನಗಳ ಪ್ರವಾಸ ಹೋಗಿದ್ದಾಗ ಕಂಡ ಅದ್ಭುತ ಕಣಿವೆ ನಾಥು ಲಾ ಪಾಸ್. ಸಿಕ್ಕಿಂ ನ ರಾಜಧಾನಿ  ಗ್ಯಾಂಗ್ ಟಕ್ ನಿಂದ  56 ಕಿ. ಮಿ.  ದೂರದಲ್ಲಿರುವ ಇಂಡೋ- ಟಿಬೆಟ್(ಚೀನೀ ಆಕ್ರಮಿತ) ಗಡಿಯಲ್ಲಿದೆ.  ಇಲ್ಲಿಗೆ ಭೇಟಿ ನೀಡಬೇಕಾದರೆ  ಪರ್ಮಿಟ್ ಇಲ್ಲದೆ  ಅಸಾಧ್ಯ.  ಎತ್ತರೆತ್ತರದ  ಪರ್ವತಗಳನ್ನು  ಅಡ್ಡವಾಗಿ  ಕೊರೆದ  ರಸ್ತೆಗಳಲ್ಲಿ ಸಾಗಬೇಕು. ಅದ್ಭುತ ನೈಪುಣ್ಯತೆಯ ಚಾಲಕರೇ ಇಲ್ಲಿಗೆ ಬೇಕು. ರಸ್ತೆಯುದ್ದಕ್ಕೆ  ಅಗಾಧವಾಗಿ  ಕುಸಿದ ಮಣ್ಣರಾಶಿಗಳು ಭೀತಿ ಹುಟ್ಟಿಸುತ್ತವೆ. ಎಡಭಾಗಕ್ಕೆ ಭಾನು ಮುಟ್ಟುವ ಗಿರಿಗಳು; ಕೆಳಕ್ಕೆ  ಕಣ್ಣು ಹಾಯಿಸಿದರೆ ಆಳ ಕಣಿವೆ. ಉದ್ದಕ್ಕೂ ಹಿಮದ ರಾಶಿ. ಮಾನ್ಯ ಪ್ರಧಾನಿಗಳಾದ ಮೋದೀಜಿ ಕೈಲಾಸ ಮಾನಸಸರೋವರಕ್ಕೆ ಇಲ್ಲಿ ಹಾದು ಹೋಗುವ ರಸ್ತೆ ಹಾದಿ ನಿರ್ಮಾಣ ಮಾಡಿಸುತ್ತಿದ್ದಾರೆ.

ಪ್ರಯಾಣಿಸುತ್ತಿರುವ ರಸ್ತೆಯುದ್ದಕ್ಕೆ ಭಾರತೀಯ ಸೇನಾಪಡೆ ರಕ್ಷಣಾ ಕಾರ್ಯ ನಿರತವಾಗಿದೆ. ಎರಡೂ ಪಕ್ಕ ಅವರ ಬಂಕರ್. ಅವರ ಆಹಾರ ಸಾಮಗ್ರಿಗಳ ವಾಹನಗಳು. ಗನ್ ಹಿಡಿದು ನಿಂತ ಸೈನಿಕರ ಶಿಸ್ತು  ಕಾಣುತ್ತದೆ. ಬಹಳಷ್ಟು ಹಾದಿ ಕ್ರಮಿಸಿದ ಮೇಲೆ ಪರ್ವತಗಳು ಕಡಿಮೆಯಾಗಿ ಉದ್ದಾನುದ್ದಕ್ಕೆ  ಹರಡಿಕೊಂಡ  ಸಣ್ಣ ಗುಡ್ಡಗಳ  ತೆರದ ಭೂಮಿ ಸಿಗುತ್ತದೆ. ಕೊರೆಯುವ ಛಳಿಗೆ ನಮ್ಮ  ಕೈ ಕಾಲಿಗೆ ಗ್ಲೋವ್ಸ್ ಹಾಕಿದ್ದರೂ , ಮೈತುಂಬ ವುಲ್ಲನ್  ವಸ್ತ್ರ ತೊಟ್ಟಿದ್ದರೂ  ಥರಗುಡುತ್ತದೆ. ತೆರೆದ ಮೈದಾನದ ರೀತಿಯ ನೆಲದಲ್ಲಿ ಗನ್ ಹಿಡಿದು ದೃಷ್ಟಿ ಕದಲಿಸದೆ ನಿಂತ ನಮ್ಮಆರ್ಮಿಯವರನ್ನು ಕಾಣುವಾಗ ಕೈ ಎತ್ತಿ ಮುಗಿಯಬೇಕೆನ್ನಿಸುತ್ತದೆ. ನಾಥು ಲಾ ಪಾಸ್ ಹತ್ತಿರವಾಗುತ್ತಿದ್ದ ಹಾಗೆ ಆ ನೆಲದಲ್ಲಿ ಬೆಳ್ಳಗೆ ಹರಡಿದ ಹಿಮದ ಮೇಲೆ ಸೂರ್ಯ ರಶ್ಮಿ  ಬಿದ್ದು ಅದರ ಪ್ರತಿಫಲನ ನಮ್ಮ ಬರಿಗಣ್ಣಿನಲ್ಲಿ ಬಿದ್ದಾಗ ಚುಚ್ಚಿದ ಹಾಗೆ ಆಗಿ ನೋಡಲಾಗುವುದಿಲ್ಲ. ಸನ್ ಗ್ಲಾಸ್ ಇಲ್ಲದೆ ಸೂರ್ಯಕಿರಣ ಪ್ರತಿಫಲಿಸುವಾಗ ನೋಡಿದರೆ  ಕಣ್ಣಿಗೆ  ಬಲು ಅಪಾಯಕಾರಿ. ಅತೀವ ಯಾತನೆ ಕೊಟ್ಟ ವಿಚಾರವೇನೆಂದರೆ ಅಲ್ಲಿದ್ದ ಹಲವಾರು ಯೋಧರಲ್ಲಿ ಸನ್ ಗ್ಲಾಸ್ ಕಾಣಲಿಲ್ಲ. ಮನಸ್ಸು ತಕ್ಷಣ ಸ್ಮರಿಸಿದ್ದು ಬ್ರಿ. ಜಾನ್. ಪಿ. ದಳವಿ. ಬರೆದ ಹಿಮಾಲಯನ್  ಬ್ಲಂಡರ್” ಕೃತಿಯಲ್ಲಿ  ಬಿಚ್ಚಿಟ್ಟ ಅಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಕಠಿಣಾವಸ್ಥೆ. ಕಂದು ಬಣ್ಣಕ್ಕೆ ತಿರುಗಿದ ಹುಲ್ಲು ಬಿಟ್ಟು ಬೇರೆ ಸಸ್ಯ ಅಲ್ಲಿರಲಿಲ್ಲ.
.

ನಾಥು ಲಾ ಪಾಸ್  ಗೆ  ತುಸು ದೂರದಲ್ಲಿ ನಿಲ್ಲಿಸಿದ  ಚಾಲಕ  ನಮ್ಮ ಕೈನ  ಕ್ಯಾಮರಾ, ಪರ್ಸ್, ಮೊಬೈಲ್  ಕಾರಿನಲ್ಲಿ  ಬಿಡಲು ಸೂಚಿಸಿದ. ಅಲ್ಲಿಗೆ ಅದೆಲ್ಲ ಒಯ್ಯುವ ಹಾಗಿಲ್ಲ. ಅದಾಗಲೇ  ವಿಪರೀತ  ಶೈತ್ಯದ ಪರಿಣಾಮ  ಗದಗುಡುತ್ತಿತ್ತು.  ಸ್ವೆಟರ್ ಮೇಲಿನ  ಬಟನ್ ಹಾಕಲೂ  ಕೈ ಸಹಕರಿಸಲಿಲ್ಲ. ಮರಗಟ್ಟುತ್ತಿತ್ತು. ಚಾಲಕ  ತಕ್ಷಣ  ಹಾಕಿ ಕೊಟ್ಟು ಮುಖ ಕ್ಯಾಪ್ ನಲ್ಲಿ  ಕವರ್  ಮಾಡಿದ.  ಇದೀಗ  ಸಮುದ್ರ  ಮಟ್ಟದಿಂದ  14,740 ಅಡಿ  ಎತ್ತರದ  ಜಾಗ. ಮೂವತ್ತರಷ್ಟು ಮೆಟ್ಟಲ ಮೂಲಕ  ಹತ್ತಬೇಕು. ಅಲ್ಲಿ  ಸೂಚನಾಫಲಕ “8 ವಯಸ್ಸಿಗಿಂತ  ಕಡಿಮೆಯ  ಮಕ್ಕಳು, ಹಾರ್ಟ್ ಪೇಷೆಂಟ್ ಗಳು, ಉಸಿರಾಟದ  ಸಮಸ್ಯೆ( ಅಸ್ತಮಾಟಿಕ್) ಇದ್ದವರು  ಹತ್ತಬೇಡಿ.”

ಮೆಟ್ಟಲು ಪೂರಾ ಹಿಮ ಬಿದ್ದು  ಜಾರುತ್ತಿತ್ತು. ಎರಡು ಮೂರು  ಮೆಟ್ಟಲು ಏರಬೇಕಾದರೆ  ಶ್ವಾಸಕ್ಕೆ ಗಾಳಿ ಸಾಲದೆ  ಬಾಯಿ ಮೂಲಕ  ಎಳೆವ  ಸ್ಥಿತಿ. ಬಾಯಿ ತೆರೆದರೆ ಬುಸುಬುಸು  ಹೊಗೆ. ಮುಖದ  ಬಣ್ಣ  ಕೆಂಪೇರುತ್ತಿತ್ತು.  ಹತ್ತಾರು  ಮಂದಿ  ಸ್ತ್ರೀ  ಪುರುಷರೆನ್ನದೆ ಗಳಗಳನೆ ಅಳುತ್ತಿದ್ದರು  ಉಸಿರಾಟಕ್ಕೆ ಕಷ್ಟವಾಗಿ. ಕಣ್ಣಿಂದ  ನೀರಿಳಿಯುವ  ದಾರುಣತೆ.  ಮುಂದೆ  ಇದ್ದವರು  ಹಿಂದಿನವರಿಗೆ  ಕೈಯಾಸರೆ ಕೊಟ್ಟು ಹತ್ತಿಸುವ ಪರಿ. ಬಲು  ಕಷ್ಟದಿಂದ ಸುಮಾರು ಮೂವತ್ತರಷ್ಟು ಮೆಟ್ಟಲು  ಹತ್ತಿದ್ದೆವು. ಈಗ  ವಿಸ್ತಾರ ಮೈದಾನ. ಅಲ್ಲಿ  ಸೇನಾ ಕಟ್ಟಡ,ಕ್ಯಾಂಟೀನ್ , ಸೈನ್ಯದ  ಮಂದಿ. ಅಡಗಿಸಿ  ಕ್ಯಾಮರಾ  ತಂದವರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು ಫೊಟೋ ತೆಗೆಯಲು ಬಿಟ್ಟಿರಲಿಲ್ಲ. ಆ ವಿಸ್ತಾರ ಭೂಮಿಯ  ಗಾಳಿ,  ಚೆಲುವು   ಶಬ್ದಕ್ಕೆ ನಿಲುಕದ್ದು. ತುಸು ದೂರದಲ್ಲಿ ತಂತಿಬೇಲಿ. ಅಲ್ಲಲ್ಲಿ  ಸೂಚನಾಫಲಕ- ಚೀನೀಯರು  ನಿಮ್ಮನ್ನು   ಗಮನಿಸುತ್ತಿದ್ದಾರೆಅವರ ಗಡಿ  ದಾಟಬೇಡಿ. ಬಂಧಿಸಬಹುದು ಎನ್ನುವ ಎಚ್ಚರಿಕೆ. ಅಲ್ಲಿ ಅವರ  ಸೈನಿಕರ ಗಸ್ತು. ಅದು  ಚೀನಿ ಆಕ್ರಮಿತ ಟಿಬೆಟ್  ಭಾಗ. ಮೇಲಿನ  ವಿಸ್ತಾರವಾದ  ಭಾಗದಲ್ಲಿ  ಸುತ್ತಾಡಿ ಮಿಲಿಟರಿಯವರು  ಕೊಟ್ಟ  ಸುಡುವ  ಟೀ ಕುಡಿದಾಗ  ಅಲ್ಲಿ ಕಂಡ ಫಲಕ  “we have given our  today, for your tomorrow”.

ಭಾರತೀಯ ಸೇನೆ , ಆ ಛಳಿ, ಮರಗಟ್ಟುವ  ಹವೆ, ಮೂಗಿನಿಂದ ಅಕಾಲಿಕ  ರಕ್ತಸ್ರಾವ , ಉಸಿರುಗಟ್ಟಿಸುವ  ಆಮ್ಲಜನಕದ  ಕೊರತೆ ಇರುವ ದುರ್ಗಮ ಸ್ಥಳದಲ್ಲಿ ಹಗಲಿರುಳಿನ ಭೇದವಿಲ್ಲದೆ  ಗಡಿ  ಕಾಯುತ್ತದೆ. ಗಂಟೆಗಟ್ಟಲೆ ನೆಟ್ಟಗೆ ನಿಂತಿರಬೇಕು.  ಮಂಜು ಬಿದ್ದು ಸೂರ್ಯನ ಬಿಸಿಲು ಪ್ರತಿಫಲಿಸುವಾಗ ಕಣ್ಣಿಗೆ  ಚುಚ್ಚುವ ಯಾತನೆ (ಕುರುಡಾಗಬಹುದು  ಸನ್ ಗ್ಲಾಸ್  ಇಲ್ಲವಾದರೆ) ಅಷ್ಟೇನಾ?  ಅಲ್ಲ. ಹೆತ್ತವರಿಂದ, ಕುಟುಂಬದವರಿಂದ, ಮಡದಿ, ಮಕ್ಕಳಿಂದ  ದೂರವಾಗಿ  ದೇಶ ಕಾಯಬೇಕು. ಅಲ್ಲಿ ಜಾತಿ, ಮತಗಳ ಭೇದವಿಲ್ಲ. ಶಿಸ್ತಿನ  ಸಿಪಾಯಿಗಳು.  ನಮ್ಮ ಕೆಲವು ರಾಜಕಾರಿಣಿಗಳ ಅಸಂಬದ್ಧ  ಅಪಲಾಪಗಳನ್ನು ಕೇಳುವಾಗ, ಇಲ್ಲಿನ ರಕ್ಷಣಾಪಡೆಗಳ ಅಸಾಧಾರಣ ಶ್ರಮದ ಕಾಯಕವನ್ನು  ಕಾಣುವಾಗ  ಇವರು  ಬಾನೆತ್ತರದ  ಸ್ಥಾನಮಾನದಲ್ಲಿ ಇದ್ದಾರೆ. ಇವರ  ಕೆಲಸ  ಕಾರ್ಯಗಳನ್ನು  ಪ್ರತಿ ಭಾರತೀಯ ಪ್ರಜೆ ಕಣ್ಣಾರೆ  ಕಾಣಬೇಕು.  ಆಗ ಇಲ್ಲಿ ಸೈನ್ಯದ  ತ್ಯಾಗ,ಕೆಚ್ಚು, ಸಾಹಸ, ಜೀವವನ್ನೇ  ಬಲಿದಾನವಾಗಿ  ದೇಶಕ್ಕಾಗಿ ಸಮರ್ಪಿಸಿ,  ಅಹರ್ನಿಶಿ ಹೋರಾಡುವ  ಕೆಚ್ಚಿನ  ವೀರರನ್ನು  ಸ್ಮರಿಸಿದಷ್ಟೂ  ಕಡಿಮೆ.  ದೇವರು ಎಂದರೆ  ಅದು  ನಮ್ಮ ಸೈನ್ಯವೂ  ಹೌದು.

Soliders as Nathula pass
ನಾಥುಲಾ ಪಾಸ್  ಇಳಿಯುವಾಗ  ಅಷ್ಟು  ಕಷ್ಟವಾಗಲಿಲ್ಲ. ಹಿಂದಿರುಗುವಾಗ  ಹಾದಿಯಲ್ಲಿ ಮಿಲಿಟರಿಯವರು  ಸಮೋಸಾ  ಮತ್ತು ಟೀ ಕೊಟ್ಟರು. ಅದಾಗಲೇ ಮಧ್ಯಾಹ್ನದ  ಮೂರು  ಘಂಟೆ. ಮಳೆ  ಬರುತ್ತದೆ ಎಂದರೆ  ಚಾಲಕ  ನಕ್ಕ. ಅದು   ಹಿಮ ಕರಗಿ ಬೀಳುವುದು ಎಂದ. ನಿಜ. ಹುತಾತ್ಮರಾಗಿದ್ದ  ಬಾಬಾ  ಹರ್ಭಜನ್ ಸಿಂಗ್  ಅವರ ಸ್ಮಾರಕ ನೋಡಿ  ತಲೆಬಾಗಿ ಗೌರವಿಸಿ ಗ್ಯಾಂಗ್ ಟಕ್ ಗೆ ಹಿಂದಿರುಗಿದ್ದೆವು. ನಮ್ಮ ಸೈನ್ಯದವರ  ಅಪರಿಮಿತ ಶ್ರಮದ ಬದುಕು, ಜೊತೆಗೆ  ಅಲ್ಲಿಯವರ ನಿತ್ಯದ ಜೀವನ ಅದೆಷ್ಟು ಕಠಿಣ ಎನ್ನುವ ಕಟುಸತ್ಯ ನಮ್ಮ ಮುಂದೆ ಇತ್ತು.
 …
 – ಕೃಷ್ಣವೇಣಿ ಕಿದೂರು, ಕಾಸರಗೋಡು

2 Responses

  1. ಫೋಟೋ ತುಂಬ ಚೆನ್ನಾಗಿದೆ.

  2. Nayana Bajakudlu says:

    Superb ಮೇಡಂ , ಎಷ್ಟು ಕಷ್ಟಗಳಿದ್ದರೂ ಅದನ್ನೆಲ್ಲ ಎದುರಿಸಿ ನಮ್ಮನ್ನು ಕಾಯುವ ಯೋಧರುಗಳು ನಿಜಕ್ಕೂ ದೇವರೇ. ನಾವಿಲ್ಲಿ ಆರಾಮ್ ಸೆ ac ರೂಮ್ಗಳಲ್ಲಿ ಕೂತ್ಕೊಂಡು ದೇಶ ರಕ್ಷಣೆ ಅಂತ ಹೇಳ್ಕೊಂಡು ಏನೇನೋ ಪ್ಲಾನ್ ವೇಸ್ಟ್ ಪ್ಲಾನ್ಗಳನ್ನು ಹಾಕುತ್ತಿರುತ್ತೇವೆ . ಅದು ಯಾವುದು ಉಪಯೋಗಕ್ಕೆ ಬರುವಂತಿರುವುದಿಲ್ಲ . ನಾವಿಲ್ಲಿ ಅಷ್ಟು ಆರಾಮ್ ಆಗಿರಲಿಕ್ಕೆ ಕಾರಣ ಅಲ್ಲಿ ಯಾವ ಕಷ್ಟಗಳನ್ನು ಲೆಕ್ಕಿಸದೆ , ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಮ್ಮನ್ನು ಕಾಯುವ ಸೈನಿಕರು . ಇವತ್ತು ಬಹಳಷ್ಟು ಜನ ಆ ವೀರರನ್ನೇ ನಾವು ಕಳೆದು ಕೊಂಡಿದ್ದೇವೆ , ಇದು ದುರಂತ .
    ಮೇಡಂ, ಚೆನ್ನಾಗಿ ಬರ್ದಿದ್ದೀರಿ ನಮ್ಮ ಯೋಧರ ಬಗ್ಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: