ನಿರಂತರ ಕಲಿಕೆ…ಗುರುಗಳ ಸ್ಮರಣ

Share Button

veeralinganagoudar s (1)

ನಾನು 8 ನೇ ತರಗತಿಯಲ್ಲಿದ್ದಾಗ ವಿಜ್ಞಾನ ಶಿಕ್ಷಕರು ನಮ್ಮ ವರ್ಗದ ಕೋಣೆಗೆ ಬಂದವರೆ ‘ಮಕ್ಕಳೆ, ನೀವೆಲ್ಲರೂ ಒಬ್ಬಬ್ಬರಾಗಿ ಎದ್ದುನಿಂತು ನಿಮ್ಮ ಹೆಸರ್‍ ಹೇಳ್ರಿ ನಿಮ್ಮ ಹೆಸರಿನ ಅರ್ಥವನ್ನು ನಾನಿಂದು ಬಿಡಿಸಿ ಹೇಳ್ತಿನಿ ಅಂದ್ರು, ಎಲ್ಲರೂ ಹುರುಪಿಗೆದ್ದು ಹೇಳಿ, ತಮ್ಮ ಹೆಸರಿನ ಅರ್ಥ ತಿಳಿದು ತುಂಬಾ ಖುಷಿಪಟ್ಟರು. ಆದರೆ ನನ್ನ ಸರದಿ ಬಂದಾಗ ಸರ್ ನನ್ನ ಹೆಸರು ‘ಕುಮಾರ’ ಎಂದೆ, ಆಗ ಶಿಕ್ಷಕರು ‘ಕು’ ಅಂದ್ರೆ ಕೆಟ್ಟ ‘ಮಾರ’ ಅಂದ್ರೆ ರಾಕ್ಷಸ ನಿನ್ನ ಹೆಸರಿನ ಅರ್ಥ ಕೆಟ್ಟ ರಾಕ್ಷಸ ಎಂದುಬಿಟ್ಟರು. ಗೆಳೆಯರೆಲ್ಲಾ ಗೊಳ್ಳೆಂದು ನಕ್ಕರು, ನನಗೆ ತುಂಬಾ ಅಸಹ್ಯವಾಯಿತು. ವಿಶ್ರಾಂತಿ ಬಿಟ್ಟಾಗ ಎಲ್ಲರೂ ಸೇರಿ ‘ಲೇ.. ಕೆಟ್ಟರಾಕ್ಷಸ’ ಅಂತಲೇ ಕೂಗಿ ಕೀಟಲೆ ಮಾಡಿದರು, ಇಡೀದಿನ ಮನದಲ್ಲಿ ಇದೇ ಕೊರೆಯಿತು. ಸ್ವಲ್ಪಮಟ್ಟಿಗೆ ನನ್ನ ನೋವನ್ನು ಶಮನಮಾಡಿದ್ದು ಆಗಿನ ಜನಪ್ರಿಯ ನಟ ಡಾ. ರಾಜಕುಮಾರ ಹೆಸರು.

ಮರುದಿನ ಗೆಳೆಯರಿಗೆಲ್ಲಾ ನನ್ನ ಹೆಸರಿನ ಅರ್ಥ ಕೆಟ್ಟರಾಕ್ಷಸ ಅನ್ನುವುದಾದರೆ ವರನಟ ಡಾ. ರಾಜಕುಮಾರ, ರಾಘವೇಂದ್ರರಾಜಕುಮಾರ, ಶಿವರಾಜಕುಮಾರ, ಪುನೀತರಾಜಕುಮಾರ ಇವರೆಲ್ಲಾ ಯಾಕೆ ಅಂತಹ ಹೆಸರಿಟ್ಟುಕೊಳ್ಳತ್ತಿದ್ದರು? ನನ್ನ ಪ್ರಶ್ನೆಗೆ ಗೆಳೆಯರು ಸ್ವಲ್ಪು ತಣ್ಣಗಾದರು. ಆದರೆ ನಾನು ಮಾತ್ರ ತಣ್ಣಗಾಗಿರಲಿಲ್ಲ. ಮುಂದೊಂದು ದಿನ ಕನ್ನಡ ಶಿಕ್ಷಕರನ್ನು ಪ್ರತ್ಯೆಕವಾಗಿ ಭೇಟಿಯಾಗಿ ನನ್ನ ಹೆಸರಿನ ನೋವನ್ನು ಅವರೆದಿರು ಎಳೆ‌ಎಳೆಯಾಗಿ ಬಿಚ್ಚಿಟ್ಟೆ, ಆಮೇಲೆ ಶಿಕ್ಷಕರು ‘ನೋಡ ತಮ್ಮ ಕೆಲವು ಶಬ್ದಗಳನ್ನ ನಾವು ಯಾವತ್ತಿಗೂ ಒಡೆಯಬಾರದು, ಮಲತಾಯಿ, ಮಲಪ್ರಭಾ, ಕುಸುಮ, ಅಲೆಮಾರಿ ಇಂತಹ ಅನೇಕ ಶಬ್ದಗಳನ್ನು ಒಡೆದರೆ ಅಪಾರ್ಥಗಳಾಗುತ್ತವೆ. ಇನ್ನು ‘ಹೂ ಸುವಾಸನೆಯಿದೆ’ ಅನ್ನೊ ಎರಡು ಶಬ್ದಗಳನ್ನು ಕೂಡಿಸಿ ಓದಿದರೂ ಅಪಾರ್ಥವಾಗುತ್ತದೆ.  ಒಟ್ಟು ಕೂಡಿರುವ ಶಬ್ದಗಳನ್ನು ಒಡೆಯಬಾರದು, ಬಿಟ್ಟಿರುವ ಶಬ್ದಗಳನ್ನು ಕೂಡಿಸಬಾರದು ತಿಳಿತಾ? ಆ ವಿಜ್ಞಾನ ಶಿಕ್ಷಕರು ಹಾಗೆ ಹೇಳಿದರು ಅಂತಾ ನೀನೇನು ಬೇಜಾರ ಮಾಡ್ಕೊಬೇಡ ಕ್ಲಾಸಿಗೆ ಹೋಗು’ ಅಂತಾ ಬೆನ್ನುತಟ್ಟಿ ಕಳುಹಿಸಿದರು.

what is your name

ಕನ್ನಡ ಶಿಕ್ಷಕರು ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಸಮಾಧಾನಪಡಿಸಿದಾಗ ನನ್ನ ಮನಸ್ಸು ನಿರಾಳವಾಯಿತು. ವಿಜ್ಞಾನ ಶಿಕ್ಷಕರನ್ನು ಒಂದು ದಿನ ನನ್ನ ಹೆಸರಿನ ಅರ್ಥ ಹೇಳಿ ನೀರಿಳಿಸಬೇಕೆಂದು ನಿರ್ಧರಿಸಿದೆ, ಆದರೆ ಅದೇಕೊ ನನ್ನ ನಿರ್ಧಾರ ಸರಿಯೊ ತಪ್ಪೊ ಅಂತಾ ಮಕ್ಕಳೊಂದಿಗೆ ಮಕ್ಕಳಾಗಿ ಪಾಠ ಮಾಡುತ್ತಿದ್ದ ಹಿಂದಿ ಶಿಕ್ಷಕರನ್ನು ಭೇಟಿಯಾಗಿ ಕೇಳಿದೆ, ಆಗ ಅವರು ನನಗೆ ಸುಮಾರು ಹೊತ್ತು ತಿಳಿಹೇಳಿದರು, ತಿಳಿಹೇಳಿದ್ದರಲ್ಲಿ ಈ ಮೂರು ಮಾತುಗಳನ್ನು ಮಾತ್ರ ನಾನ್ಯಾವತ್ತೂ ಮರೆತಿಲ್ಲ.:

ನಿನ್ನ ಮನೆಯ ಪೊರಕೆ ಎತ್ಕೊಂಡು ಪಕ್ಕದ ಮನೆಯವರ ಕಸ ಗುಡಿಸ್ಬೇಡ’

‘ಆಕಾಶಕ್ಕೆ ಉಗುಳಿದರೆ ಅದು ನಿನ್ನ ಮುಖಕ್ಕೆ ಸಿಡಿಯುತ್ತೆ’

‘ಶ್ವಾನ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ’

 

ಈ ಮಾತುಗಳು ನನ್ನನ್ನು ಸಾಕಷ್ಟು ಬದಲಾಯಿಸಿವೆ.

10 ನೇ ತರಗತಿಯ ಬೀಳ್ಕೊಡುವ ಸಮಾರಂಭದಲ್ಲಿ ನಮ್ಮ ಶಾಲೆಯ ಅಧ್ಯಕ್ಷರು ವಿಜ್ಞಾನ ಶಿಕ್ಷಕರ ಭಾಷಣ ಕೇಳಿ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ‘ಮುದ್ದುಮಕ್ಕಳೆ.. ನಮ್ಮ ಶಾಲೆಯಲ್ಲಿರುವ ಸೈನ್ಸ ಮೇಸ್ಟ್ರು ತುಂಬಾ ಓದಿಕೊಂಡಿದ್ದಾರೆ, ನೀವೇಲ್ಲಾ ಅವರ ಉಪಯೋಗವನ್ನು ಪಡೆದುಕೊಳ್ಳಬೇಕು, ಅವರು ನಮ್ಮ ಸಂಸ್ಥೆಯ ದೊಡ್ಡ ಆಸ್ತಿ’ ಎಂದರು. ನನ್ನ ಕರ್ಣಗಳಲ್ಲಿ ಕಾಸಿದ ಸೀಸ ಸು ರುವಿದಂತಾಯಿತು. ದುರಂತವೆಂದರೆ ನನ್ನ ನೆಚ್ಚಿನ ಕನ್ನಡ ಮತ್ತು ಹಿಂದಿ ಶಿಕ್ಷಕರಿಗೆ ಸಾಕಷ್ಟು ವಿಷಯಜ್ಞಾನವಿದ್ದರೂ ಆ ವಿಜ್ಞಾನ ಶಿಕ್ಷಕರ ಹಾಗೆ ರಸವತ್ತಾಗಿ ಭಾಷಣ ಮಾಡಲು ಬರುತ್ತಿರಲಿಲ್ಲ. ಪ್ರಚಾರದ ಹುಚ್ಚಿರಲಿಲ್ಲ, ಯಾವಾಗಲೂ ಏಕಾಂತವನ್ನೆ ಇಷ್ಟಪಡುತ್ತಿದ್ದರು.

ನಾನು ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಂದು ಅಂತರಕಾಲೇಜು ಕವಿಗೋಷ್ಠಿ ನಡೆಯಿತು ಆ ಗೋಷ್ಠಿಯಲ್ಲಿ ‘ಗುರುವೇ ನಮಃ’ ಅನ್ನೊ ಶೀರ್ಷಿಕೆಯ ಈ ಕವಿತೆಯನ್ನು ಓದಿದ್ದೆ.

ಗುರುವೇ.. ನೀವೆಂದೂ ಜಾತಿಗೆ ಜೋತು ಬೀಳಲಿಲ್ಲ||

ವ್ಯವಸ್ಥೆಯೊಂದಿಗೆ ರಾಜಿಯಾಗಲಿಲ್ಲ||

ರಾಜಕಾರಣಿಗಳ ಬಳಿ ಸುಳಿದಾಡಲಿಲ್ಲ||

ತಲೆಯಿಲ್ಲದವರೆದಿರು ತಲೆಕೆರೆದುಕೊಳ್ಳಲಿಲ್ಲ||

ಕಿವಿಕಚ್ಚಲಿಲ್ಲ, ತೆಗಳುವವರನ್ನು ಹೊಗಳಲಿಲ್ಲ||

ಈ ಕಾರಣಕ್ಕಾಗಿಯೇ ಪ್ರಶಸ್ತಿ ಪುರಸ್ಕಾರ;ಹಾರ ತುರಾಯಿಗಳೆಲ್ಲ ನಾಚಿ ನೀರಾದವು||

ನಿಮ್ಮ ಧೋರಣೆಗೆ ನಿಬ್ಬೆರಗಾದವು.||

ದೂರಾದವುಗಳನ್ನೆಲ್ಲಾ ನಿಮ್ಮ ದೂರದ ಗೆಳಯರು, ಅಪ್ಪಿ ಮುದ್ದಾಡುವ ದೃಶ್ಯಗಳೆ ನನ್ನೊಳಗೆ ಮಾಯಾದೀಪಗಳಾಗಿವೆ||

ಮನೆ ಮನವನೆಲ್ಲಾ ಬೆಳಗಿವೆ||

ಗುರುವೆ…ನಿಮ್ಮ ದೃಷ್ಠಿಕೋನವೇ ಅದ್ಭುತವಾಗಿದೆ||

ನಿಮ್ಮಿಂದ ನಿತ್ಯ ನಾನಿನ್ನೂ ಕಲಿಯುತ್ತಿದ್ದೇನೆ|

ನಿವೃತ್ತರಾದರೂ ನೀವೂ ಕಲಿಸುತ್ತಲೇ ಇದ್ದಿರಿ||

ನನ್ನ ನಿಮ್ಮ ನಡುವೆ ಮಾತಿಲ್ಲ ಕತೆಯಿಲ್ಲ||

ಅಡ್ಡ ಗೋಡೆಗಳಂತೂ ಒಂದೂ ಇಲ್ಲ||

ಪಠ್ಯ ಪಾಠಗಳ ಗೋಡವೆಗಳಿಲ್ಲ||

ಆದರೂ..ನೀವು ಕಲಿಸುತ್ತಿದ್ದೀರಿ;ನಾನು ಕಲಿಯುತ್ತಿದ್ದೇನೆ||

ನಿಮ್ಮ ನಿಲುವು ನನ್ನ ಕಲಿವು ನಿರಂತರವಾಗಿರಲಿ||

.

(ಈ ಕವಿತೆ ಬರೆಯಲು ಸ್ಪೂರ್ತಿಯಾದದ್ದು ನನ್ನ ನೆಚ್ಚಿನ ನಿವೃತ್ತ ಕನ್ನಡ ಮತ್ತು ಹಿಂದಿ ಗುರುಗಳು.) ಅಂದು ಆ ವಿಜ್ಞಾನ ಮೇಸ್ಟ್ರು ಹಾಗೆ ಹೇಳಿರದಿದ್ದರೆ, ಕನ್ನಡ ಮತ್ತು ಹಿಂದಿ ಶಿಕ್ಷಕರಿಂದ ಅದೇಷ್ಟೊ ಹೊಸ ಹೊಳುಹುಗಳನ್ನು ಮಿಸ್ ಮಾಡ್ಕೊತಿದ್ದೆ. ತನ್ನಿಮಿತ್ಯ ವಿಜ್ಞಾನ ಶಿಕ್ಷಕರನ್ನು ಕೂಡಾ ಈ ಸಂದರ್ಭದಲ್ಲಿ ಸ್ಮರಿಸುವೆ.

 

 ,
– ಕೆ.ಬಿ.ವೀರಲಿಂಗನಗೌಡ್ರ , ಸಿದ್ದಾಪುರ (ಉ.ಕ ಜಿಲ್ಲೆ) ,

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: