ಸ್ಯಮಂತಕೋಪಾಖ್ಯಾನ…

Share Button

ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ.

ಉಂಡವನು ಗಣಪ, ನಕ್ಕವನು ಚಂದ್ರ, ಆದರೆ, ಶಾಪ ಮಾತ್ರ ಚಂದ್ರನನ್ನು ನೋಡಿದವರಿಗೆ!!

ಚೌತಿಯ ಚಂದ್ರನ ದರುಶನದಿಂದ ಕಾಡಿತು ಕೃಷ್ಣಗೆ ಅಪವಾದ,ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ.. “ ಹೀಗೊಂದು ಹಾಡನ್ನು ಕೇಳಿದ್ದೇವೆ. ಉಳಿದ ದಿನಗಳಲ್ಲಿ ಸಾಮಾನ್ಯವಾಗಿ ಸಂಜೆ ಮನೆಯ ಹೊರಗೆ ಬಂದು ಚಂದ್ರನನ್ನು ನೋಡುವುದಿಲ್ಲ, ನೋಡಿದ್ದರೂ ಗಮನಿಸುವುದಿಲ್ಲ. ಆದರೆ, ಚೌತಿಯ ದಿನ ತಪ್ಪದೇ ಚಂದ್ರದರ್ಶನವಾಗುತ್ತದೆ! ಕಾರಣವಿಷ್ಟೆ, ಅಕ್ಕ-ಪಕ್ಕದ ಮನೆಯವರು ಹಬ್ಬದ ದಿನ ಸಂಜೆ ಅರಶಿನ-ಕಂಕುಮಕ್ಕೆ ಬನ್ನಿ ಎಂದು ಆಹ್ವಾನಿಸಿರುತ್ತಾರೆ. ಸದಾ ಸಂಜೆ ಮನೆಯೊಳಗೆ ಇರುವವರು, ಹಬ್ಬದ ದಿನ ಸಂಜೆ ಅಕ್ಕ-ಪಕ್ಕದ ಮನೆಗೆ ಹೋಗುವಾಗ ಅಯಾಚಿತವಾಗಿ ಆಕಾಶದತ್ತ ನೋಡಿರುತ್ತೇವೆ. ಸಾಮಾನ್ಯವಾಗಿ ಮೋಡದ ಮರೆಯಲ್ಲೋ, ಮರಗಳ ಎಡೆಯಲ್ಲೋ ಇರುವ ಚಂದ್ರ ಚೌತಿಯಂದು ಲಕಲಕನೇ ಹೊಳೆಯುತ್ತಾ ದರ್ಶನ ಕೊಡುತ್ತಾನೆ. ಅಲ್ಲಿಗೆ, ಪ್ರತಿವರ್ಷವೂ ಅಪವಾದ ಗ್ಯಾರಂಟಿ ಅಂತ ಆಯ್ತಲ್ಲ. ಅದಕ್ಕೂ ಶಾಸ್ತ್ರೀಯ ಪರಿಹಾರ ಬಹಳ ಸರಳ. “ಸ್ಯಮಂತಕೋಪಾಖ್ಯಾನ ” ವನ್ನು ಕೇಳಿದರಾಯಿತು.

Ganesha moon

 

ಸ್ಯಮಂತಕೋಪಾಖ್ಯಾನ : ಸತ್ರಾಜಿತನು ಸೂರ್ಯನನ್ನು ಪ್ರೀತಗೊಳಿಸಿ ದಿನಕ್ಕೆ ಹತ್ತು ತೊಲ ಬಂಗಾರ ಕೊಡುವ ಸ್ಯಮಂತಕ ಮಣಿಯನ್ನು ವರವಾಗಿ ಪಡೆಯುತ್ತಾನೆ. ಸ್ಯಮಂತಕ ಮಣಿಯು ನಿನ್ನ ಬಳಿ ಇರುವುದು ಕ್ಷೇಮವಲ್ಲ ತನಗೆ ಕೊಡೆಂದು ಶ್ರೀ ಕೃಷ್ಣ ಕೇಳಿದಾಗ, ಸತ್ರಾಜಿತನು ಕೊಡಲಾರೆ ಎನ್ನುತ್ತಾನೆ. ಒಮ್ಮೆ ಸತ್ರಾಜಿತನ ತಮ್ಮನಾದ ಪ್ರಸೇನಜಿತು ಆ ಮಣಿಯನ್ನು ಧರಿಸಿ ಕಾಡಿಗೆ ಬೇಟೆಗೆ ಹೋಗಿದ್ದಾಗ, ಅಲ್ಲಿ ಒಂದು ಸಿಂಹವು ಅವನನ್ನು ಕೊಂದಿತು. ಪ್ರಜ್ವಲಿಸುತ್ತಿದ್ದ ಮಣಿಯನ್ನು ಕಚ್ಚಿಕೊಂಡು ಹೋಗುವ ಸಿಂಹವನ್ನು ಜಾಂಬವಂತನು ಅಡ್ಡಗಟ್ಟಿ ಅದನ್ನು ಕೊಂದು, ಸ್ಯಮಂತಕ ಮಣಿಯನ್ನು ತನ್ನ ಮಗನ ತೊಟ್ಟಿಲಿಗೆ ಕಟ್ಟಿದನು.

ಇತ್ತ ಸತ್ರಾಜಿತ ಮಹಾರಾಜನು , ತನ್ನ ತಮ್ಮ ಪ್ರಸೇನಜಿತು ವಾಪಸ್ಸು ಬಾರದಿರಲು, ಸ್ಯಮಂತಕ ಮಣಿಯ ಆಸೆಗಾಗಿ ಕೃಷ್ಣನೇ ಅವನನ್ನು ಕೊಂದಿದ್ದಾನೆ ಎಂದು ಅಪಪ್ರಚಾರ ಮಾಡಿದನು.ಅಪವಾದ ಹೊತ್ತ ಶ್ರೀಕೃಷ್ಣ ಕಾಡಿಗೆ ಹೋಗಿ ಹೆಜ್ಜೆ ಗುರುತುಗಳನ್ನು ಅನುಸರಿಸಿ, ಜಾಂಬವಂತನ ಗುಹೆಗೆ ಹೋಗಿ ಮಣಿಯನ್ನು ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಹೊರಗೆ ಹೋಗಿದ್ದ ಜಾಂಬವಂತನು ಬಂದ. ಅವರಿಬ್ಬರಿಗೂ ಯುದ್ದ ನೆಡೆಯಿತು.

ಇಪ್ಪತ್ತೆಂಟು ದಿನಗಳ ಯುದ್ದದಲ್ಲಿ, ಜಾಂಬವಂತನಿಗೆ ತಾನು ಯುದ್ದ ಮಾಡುತ್ತಿರುವುದು ತ್ರೇತಾಯುಗದ ರಾಮನ ಜೊತೆಗೆ ಎಂಬ ಅರಿವಾಗಿ, ಯುದ್ದ ನಿಲ್ಲಿಸಿ ತಪ್ಪಾಯಿತೆಂದು ಕ್ಷಮೆ ಯಾಚಿಸಿ ಸ್ಯಮಂತಕ ಮಣಿಯನ್ನು ಶ್ರೀಕೃಷ್ಣನಿಗೆ ಕೊಟ್ಟನು. ಜೊತೆಗೆ ತನ್ನ ಮಗಳು ಜಾಂಬವತಿಯನ್ನು ಶ್ರೀಕೃಷ್ಣನಿಗೆ ಮದುವೆ ಮಾಡಿದನು. ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತಿ ಹೊಂದಲು ಜನರು ‘ಸ್ಯಮಂತಕ’ ಕಥೆ ಕೇಳಿ ಈ ಕೆಳಗಿನ ಶ್ಲೋಕವನ್ನು ಹೇಳಿಕೊಳ್ಳುತ್ತಾರೆ:

ಸಿಂಹ: ಪ್ರಸೇನಮವಧೀತ್  ಸಿಂಹೋ ಜಾಂಬವತಾ ಹತ:।
ಸುಕುಮಾರಕ ಮಾರೋದಿ: ತವಹ್ಯೇಷ ಸ್ಯಮಂತಕ:

 – ಹೇಮಮಾಲಾ.ಬಿ. ಮೈಸೂರು

7 Responses

 1. Ramanna Rai says:

  ಕೆಳಗೆ ನೋಡಿ ನಡೆ, ಆಕಾಶ ನೋಡಿ ನಡೆದರೆ ಅಪಘಾತಗಳು ಸಂಭವಿಸುವವು. ಅಂತ ಜಾಣ ಕೃಷ್ಣನ ಚೌತಿಯಂದು ತರಬೇತಿ. ಶ್ರೀ ಕೃಷ್ಣ ಚರಣಂ ಮಮ:

 2. Prasad Sms says:

  ಯಾರದೋ ತಪ್ಪಿಗೆ ಎಮ್ಮೆಗೆ ಬರೆ….

 3. ನಮಸ್ತೇ ಹೇಮಮಾಲಾ.ಒಳ್ಳೆಯದಾಗಿ ಬಿಂಬಿತ..
  ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಿನ್ನೆ ಈ ಕತೆಯನ್ನು ಹೇಳಿದ್ದಾರೆ ಯಾಕೆ?,ಏನು? ಎಂಬ ವಿಷಯವಾಗಿ. ಅದನ್ನು ನಿಮಗೆ ಕಳುಹಿಸುತ್ತೇನೆ

  • Hema says:

   ಧನ್ಯವಾದಗಳು ..

   • Achyuth says:

    Hi Hemamala Small Correction In Sholka ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತ: |
    ಸುಕುಮಾರಕ ಮಾರೋದಿ: ತವಹ್ಯೇಷ ಸ್ಯಮಂತಕ: ||

    • Hema says:

     ನಮಸ್ತೆ. ತಪ್ಪನ್ನು ಗಮನಿಸಿ ತಿಳಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು.ಈಗ ಸರಿಪಡಿಸಿದ್ದೇನೆ.

 4. ಶಂಕರಿ ಶರ್ಮ says:

  ನೀವಂದಂತೆ, ಚೌತಿ ಚಂದ್ರನ ದರುಶನ ಅಯಾಚಿತವಾಗಿ ಆಗಿಯೇ ಆಗುವುದು.. ನೋಡಬಾರದೆಂದರೂ ಆದಿನ ಕಣ್ಣು ಸೀದಾ ಆಕಾಶದತ್ತ ನಿಟ್ಟಿಸಿ ಚಂದ್ರನನ್ನು ಹುಡುಕುತ್ತದೆ! ಈ ಸಲ ಮೋಡ ಅವನನ್ನು ಮುಚ್ಚಿ
  ಬಿಟ್ಟಿತ್ತು..ಬಚಾವ್. ಒಂದು ವೇಳೆ ಕಂಡರೂ ದೋಷ ಪರಿಹಾರದ ಕಥೆಯಿದೆಯಲ್ಲಾ! ತುಂಬಾ ಚೆನ್ನಾಗಿದೆ. ಮಾಲಾ..ಸಕಾಲಿಕ ಬರಹ..ಪೂರಕ ಕಥೆಯೊಂದಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: