ನಾನು ಮತ್ತು ನನ್ನೊಳಗಿನ ರೈತ

Spread the love
Share Button

K.B Veeralinganagoudar

ನಮ್ಮದು ಗೌಡರ ಮನೆತನ, ‘ಗೌಡ’ ಅಂದ್ರೆ ಮುಖಂಡ ಅಂತಲೇ ಅರ್ಥ. ಒಬ್ಬ ವ್ಯಕ್ತಿ ಒಂದು ಸಮುದಾಯದ ಅಥವಾ ಊರಿನ ಮುಖಂಡನಾಗಬೇಕಾದರೆ ಆಸ್ಥಿವಂತ ಅರ್ಥಾತ್ ಸ್ಥಿತಿವಂತ ಜೊತೆಗೆ ಬುದ್ದಿವಂತನಾಗರಬೇಕು. ನಮ್ಮಜ್ಜನ ಕಾಲದಲ್ಲಿ ನಮ್ಮದು ಸುಮಾರು 30 ಎಕರೆ ಜಮೀನು. ಅಜ್ಜ ಕೃಷಿ ಮಾಡುವಾಗ ಸಕಾಲಕ್ಕೆ ಮಳೆಯಾಗುತ್ತಿತ್ತು, ಸಾವಯವ ಕೃಷಿಯನ್ನೆ ಅವಲಂಬಿಸಿದ್ದರಿಂದ ಜೋಳ, ಶೇಂಗಾ, ಗೋದಿ, ತೋಗರಿ, ಹೆಸರು, ಕುಸುಬಿ ಮುಂತಾದ ಬೇಳೆಗಳ ಜೊತೆ ಜೊತೆಗೆ ವಿವಿಧ ಕಾಯಿಪಲ್ಲೆಗಳನ್ನು ಒಣಬೇಸಾಯದಲ್ಲಿ (ಖುಷ್ಕಿ ಭೂಮಿಯಲ್ಲಿಯೇ)ಬೆಳೆಯುತ್ತಿದ್ದರು. ಒಟ್ಟು ಸಾಲಮಾಡದೆ ಒಂದು ಸರಳವಾದ ಮತ್ತು ನಿರಾಳವಾದ ಬದುಕನ್ನು ಅಜ್ಜ ಕಟ್ಟಿಕೊಳ್ಳುವುದರೊಂದಿಗೆ ಒಂದುಬಾರಿ ಊರ ಮುಖಂಡನಾಗಿಯೂ ಕೆಲಸ ಮಾಡಿದ್ದಾನೆ.

ಅಜ್ಜನ ಕಾಲದಲ್ಲಿ ಸಾಲ ನೀಡುವ ಬ್ಯಾಂಕ್‌ಗಳು ನಮ್ಮ ಹಳ್ಳಿಯಲ್ಲಿ ಇರಲಿಲ್ಲ. ಸಾಲ ಮಾಡಿ ಬದುಕುವುದೆಂದರೆ ಆಗಿನ ಕಾಲದಲ್ಲಿ ಸ್ವಾಭಿಮಾನಕ್ಕೆ ದಕ್ಕೆ ಎಂದೆ ಭಾವಿಸಿದ್ದರು. ಅಜ್ಜನ ಕೃಷಿ ಸಂಪ್ರದಾಯಕ್ಕೆ ಅಪ್ಪ ಸ್ವಲ್ಪ ಬದಲಾವಣೆ ಮಾಡಿದ, ಅದೇನಂದರೆ ಸಾಲಮಾಡಿ ತೆರೆದಬಾವಿ ತೊಡಿಸಿದ. ಬಾವಿಯಲ್ಲಿ ನೀರು ಬಂದದ್ದು ಅಪ್ಪನ ಪುಣ್ಯ. ಒಂದೇರಡು ದಶಕಗಳವರೆಗೆ ನೀರಾವರಿ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಅಪ್ಪ ಚನ್ನಾಗಿಯೇ ಬೆಳೆ ಬೆಳದು ಮಾಡಿದ ಎಲ್ಲ ಸಾಲವನ್ನೂ ತೀರಿಸಿದ. ಮುಂದೆ ಅಂತರಜಲ ಕುಸಿತದ ಪರಿಣಾಮವೊ ಅಥವಾ ಪಕ್ಕದ ರೈತರು ತಮ್ಮ ಜಮೀನುಗಳಲ್ಲಿ ಕೊಳವೆಬಾವಿ ಕೊರಿಸಿದ್ದರಿಂದಲೊ ಏನೋ ನಮ್ಮ ಬಾವಿಯಲ್ಲಿ ನೀರು ಕಡೆಮೆಯಾಯಿತು. ಇನ್ನು ಮಳೆಗಾಲ ನಂಬಿಕೊಂಡು ಬೇಸಾಯ ಮಾಡುವಂತಹ ವಾತವರಣವೂ ಕಡಿಮೆಯಾಗಿರುವುದರಿಂದ ಅಪ್ಪನ ಕೃಷಿಕಾರ್ಯ ಅನಿವಾರ್ಯವಾಗಿ ಕುಂಠಿತವಾಗಿದೆ. ಅಪ್ಪನ ತಲೆಯಮೇಲೆ ಈಗ ಸುಮಾರು 2 ಲಕ್ಷ ರೂ.ಸಾಲ ಇದೆ.

farmer

ಅಪ್ಪ ನನ್ನನ್ನು ಓದಿಸಿ ಪುಟ್ಟ ನೌಕರನಾಗುವಂತೆ ನೋಡಿಕೊಂಡ, ಆತನಿಗೆ ಗೊತ್ತಾಗಿರಬಹುದು ಇನ್ನು ನನ್ನ ಮಗ ಲಾಭವಿಲ್ಲದ ಈ ಕೃಷಿಯಲ್ಲಿ ಬರುವುದು ಬೇಡವೆಂದು.  ಪ್ರಾಯಶಃ ಎಲ್ಲ ಅಪ್ಪಂದಿರ ಆಶೆಯೂ ಈ ತರಹದ್ದೆ ಇದೆ ಎಂದು ಪರಿಭಾವಿಸಿದ್ದೆನೆ. ಇಂದು ಯಾವ ವಿದ್ಯಾರ್ಥಿಯೂ ತಾನೋರ್ವ ರೈತನಾಗಬೇಕೆಂಬ ಗುರಿ ಇಟ್ಟುಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಸಚಿವರು ಗಂಭೀರವಾಗಿ ಆಲೋಚಿಸಬೇಕಿದೆ. ಒಬ್ಬ ಸಾಮಾನ್ಯ ಕಸಗೂಡಿಸುವ ಸಿಪಾಯಿಗಿರುವಷ್ಟು ಬದುಕಿನ ಭದ್ರತೆ 15 ಎಕರೆ ಆಸ್ತಿಯುಳ್ಳ ಅಪ್ಪನಿಗೆ ಅರ್ಥಾತ್ ಅಸಂಖ್ಯಾತ ರೈತ ಅಪ್ಪಂದರಿಗೆ ಇಲ್ಲದಿರುವುದು ಬಹುದೊಡ್ಡ ದುರಂತ. ಈ ಕಾರಣಕ್ಕಾಗಿಯೇ ಕೃಷಿಭೂಮಿಯಲ್ಲಿ ಕಾಂಕ್ರಿಟ ಕಟ್ಟಡಗಳು, ಮನೆಗಳು, ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. ಗದಗ ಜಿಲ್ಲೆಯ ಮುಂಡರಗಿ ಸುತ್ತಲಿನ ರೈತರಿಂದು (ಈ ಸಂದರ್ಭದಲ್ಲಿ ಫೊಸ್ಕೊ ಕಂಪನಿ ವಿರುದ್ದದ ಹೋರಾಟವನ್ನು ನೆನಪಿಸಿಕೊಳ್ಳಬೇಕು) ತಮ್ಮ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಬೇಕೆಂದು ಏನೇಲ್ಲಾ ಹರಸಾಹಾಸ ಮಾಡುತ್ತಿದ್ದಾರೆ. ಈ ಘಟನೆಯಿಂದಲೇ ನಮಗೆ ಗೊತ್ತಾಗುತ್ತದೆ ಮುಂಡರಗಿ ಭಾಗದ ರೈತರಿಗೆ ಕೃಷಿ ಭೂಮಿಯಿಂದ ತಮ್ಮ ಉದ್ದಾರ ಸಾಧ್ಯವಿಲ್ಲವೆಂದು. ಇಂತಹ ರೈತರ ಮನಸ್ಸುನ್ನು ಸರಕಾರ ಬದಲಾಯಿಸುವ ತುರ್ತಿದೆ.

ಸಧ್ಯ ನಮ್ಮದು ೧೨ ಎಕರೆ ಜಮೀನಿದೆ ಆದರೆ ಬಿತ್ತನೆಗೆ ಮಾಡಿದ ಖರ್ಚುಕೂಡಾ ಒಮ್ಮೆಮ್ಮೆ ಮರಳಿ ಬರುವುದಿಲ್ಲ. ಬಯಲುಸೀಮೆಯಲ್ಲಿ ಮಳೆಗಾಲವೆಂದರೆ ಒಂದು ಅತೀವೃಷ್ಟಿ ಅಥಾವಾ ಅನಾವೃಷ್ಟಿ. ಈ ಎರಡನ್ನೆ ನಾವೀಗ ನೋಡುತ್ತಿರುವುದು. ‘ಗೌಡ’ ಎಂಬ ಅಡ್ಡಹೆಸರಿಗೆ ನಾನಿಂದು ವ್ಯತಿರಿಕ್ತವಾಗಿ ಬದುಕುತ್ತಿದ್ದೆನೆ, ಈ ಕಾರಣಕ್ಕಾಗಿಯೇ ನನ್ನ ಮಕ್ಕಳ ಹೆಸರಿನಲ್ಲಿ ‘ಗೌಡ’ ಎಂಬ ಪದವನ್ನು ಕೈ ಬಿಟ್ಟಿದ್ದೆನೆ. ಅಜ್ಜ, ಅಪ್ಪ ಮತ್ತು ನನ್ನ ತಲೆಮಾರಿನಲ್ಲಿಯೇ ಇಷ್ಟೊಂದು ಬದಲಾವಣೆಯಾಗಿರಬೇಕಾದರೆ ಇನ್ನು ನನ್ನ ಮಕ್ಕಳ, ಮೊಮ್ಮಕ್ಕಳ ಕಾಲಕ್ಕೆ ಎನೇನು ಕಾದಿದೆಯೊ..? ಇಷ್ಟೇಲ್ಲಾ ಆಗಿದ್ದರೂ ಕೃಷಿಯ ಬಗ್ಗೆ ನನ್ನೊಳಗೊಂದು ಆಶಾಭಾವನೆ ಇನ್ನೂ ಜೀವಂತವಾಗಿದೆ. ಸರಕಾರಕ್ಕೆ ನನ್ನ ಮೊರೆ ಇಷ್ಟೆ ‘ಮಾನ್ಯ ಮಂತ್ರಿಗಳೆ, ನಿತ್ಯ ಕೃಷಿ ಮಾಡುತ್ತಿರುವ ರೈತರೆಲ್ಲಾ ಕೃಶವಾಗಿದ್ದಾರೆ. ನಿಮ್ಮ ದೃಷ್ಟಿಯಲ್ಲಿ ಆ ಸಿಪಾಯಿಗಿಂತಲೂ ರೈತರು ನಿಕೃಷ್ಟರಾದರೆ? ಆತನಿಗೆ ಸಿಗುವ ಅರ್ಧದಷ್ಟಾದರೂ ವೇತನವನ್ನು ದಯಪಾಲಿಸುವಂತೆ ಮಾಡಿರಿ, ಅಂದರೆ ರೈತರನ್ನೆಲ್ಲಾ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿಗಳೆಂದು ಪರಿಗಣಿಸಿರಿ. ರೈತರಂತೂ ಲಂಚ, ಪಿಂಚನಿ, ರಜೆ ಭತ್ಯೆ ಈ ಯಾವುಗಳ ಗೋಜಿಗೂ ಹೋಗುವುದಿಲ್ಲ. ಹಗಲಿರುಳೆನ್ನದೆ ಭೂತಾಯಿಯ ಸೇವೆಯಲ್ಲಿಯೇ ಮಗ್ನರಾಗಿರುತ್ತಾರೆ. ಕೃಷಿ ಚಟುವಟಿಕೆಯಲ್ಲಿ ನಿರ್ಲಕ್ಷ್ಯವಹಿಸಿದರೆ ಸಂಬಳ ಕಡಿತಗೊಳಿಸಿರಿ. ಕೇವಲ ಕಡತಗಳನ್ನಷ್ಟೆ ನೋಡಿರುವ ಅದೇಷ್ಟೊ ಕೃಷಿ ಇಲಾಖೆ, ರೇಷ್ಮೆ ಕೈಗಾರಿಕೆ, ತೋಟಗಾರಿಕೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇನ್ನು ಮೇಲೆ ರೈತರೊಂದಿಗೆ ರೈತರಾಗಿ ಕಾರ್ಯ ನಿರ್ವಹಿಸಲಿ, ನೌಕರರ ಕೃಷಿ ಕಾಯಕವನ್ನು ನೋಡಿ ಅಭಿನವ ಕುವೆಂಪು ‘ಉಳುವಾ ನೌಕರ ನೋಡಲ್ಲಿ’ ಅನ್ನೊ ಮತ್ತೊಂದು ಕೃಷಿಕ್ರಾಂತಿ ಗೀತೆಯನ್ನು ರಚಿಸುವಂತಾಗಲಿ.

modern farmer

ಆ ಸಿಪಾಯಿ ಸತ್ತರೆ ಅನುಕಂಪದ ಆಧಾರದ ಮೇಲೆ ಅವನ ವಾರಸುದಾರರಿಗೆ ಮತ್ತೆ ನೌಕರಿ ನೀಡುವಿರಿ, ಆದರೆ ಹರಕು ಚಪ್ಪಲಿ, ಕೊಳಕು ಬಟ್ಟೆ, ಖಾಲಿ ಜೇಬಿರುವ ಬಡಪಾಯಿ ಸಾಲಗಾರ (ಅನ್ನದಾತ, ರಾಷ್ಟ್ರದ ಬೆನ್ನೆಲಬು ಆಗಿರುವ) ರೈತರ ಮೇಲೆ ಕಿಂಚತ್ತೂ ಅನುಕಂಪ ಇಲ್ಲದಿರುವುದರಿಂದಲೇ ಇಂದು ಅನೇಕ ರೈತರು ಆತ್ಮಹತ್ಯೆಯಂತಹ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಮುಖ್ಯವಾಗಿ ನೀವಿನ್ನು ಹೊಸದಾಗಿ ಸಕ್ಕರೆ ಕಾರ್ಖಾನೆ ಆರಂಭಿಸಬೇಡಿ. ಈಗಿರುವ ಕಾರ್ಖಾನೆಗಳು ಆಗಲೇ ಅದೇಷ್ಟೊ ರೈತರನ್ನು ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಬಲಿ ತೆಗೆದುಕೊಂಡಿವೆ. ಅವಶ್ಯವೆನಿಸಿದರೆ ರೈತರೆ ಒಗ್ಗೂಡಿ ಆರಂಭಿಸಲಿ. ನೀವು ಅಥಾವಾ ನಿಮ್ಮ ನೆರಳಿನಲ್ಲಿರುವ ಕಾರ್ಖಾನೆಗಳು ನಮಗಂತೂ ಬೇಡವೇಬೇಡ. ದಯವಿಟ್ಟು ರೈತರ ಆಶೆ ಆಕಾಂಕ್ಷೆಗಳನ್ನೆಲ್ಲಾ ಇಡೇರಿಸಿದ್ದಾದರೆ ರೈತರ ಮಕ್ಕಳೆಲ್ಲಾ ಸರಕಾರಿ ನೌಕರಿಗೆ ಅಂಗಲಾಚುವುದಿಲ್ಲ. ಮಂತ್ರಿಗಳೆ, ಇತ್ತೀಚಿಗೆ ಪಕ್ಷಾತೀತವಾಗಿ ಒಗ್ಗೂಡಿ ನಿಮ್ಮ ಸಂಬಳ ಹೆಚ್ಚಿಸಿಕೊಂಡಂತೆ ನಮ್ಮ ರೈತರ ಬಗ್ಗೆಯೂ ತುರ್ತು ಆಲೋಚಿಸಿ ‘ರೈತರ ಸೇವಾ ಪುಸ್ತಕ’ವೊಂದು ಮೊಳಕೆ ಒಡೆಯುವಂತೆ ವಿಧಾನಸೌದದಲ್ಲೊಂದಿಷ್ಟು ಎಲ್ಲರೂ ಒಟ್ಟಾಗಿ ಕೃಷಿರಾಜಕೀಯಕ್ಕೆ ಅಣಿಯಾಗಿರಿ.

 

– ಕೆ.ಬಿ.ವೀರಲಿಂಗನಗೌಡ್ರ, ಸಿದ್ದಾಪುರ, ಉ.ಕ ಜಿಲ್ಲೆ

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: