ನಮ್ಮೂರ ಗಂಜಿಯೂಟದ ಸವಿಯ  ಬಲ್ಲಿರಾ?

Spread the love
Share Button
Krishnaveni K
ಕೋಲ್ಕತ್ತಾದಲ್ಲಿ  ಸ್ಟಾರ್ ಹೋಟೆಲ್  ಒಂದರಲ್ಲಿ  ತಂಗಿದ್ದೆವು.  ಬರುವಾಗಲೇ ರಾತ್ರೆ.   ಅಲ್ಲಿ  ಹಾಲ್ಟ್  ಮಾಡುವವರಿಗೆ  ಬ್ರೇಕ್ ಫಾಸ್ಟ್ ಫ್ರೀ.(   ಆ ಕಡೆಯ  ಅನೇಕ ರೆಸಿಡೆನ್ಸಿಗಳ ಹಾಗೆ)  . ನಿಧಾನಕ್ಕೆ  ಎದ್ದು ಬೆಳಗಿನ  ಉಪಾಹಾರಕ್ಕೆ  ಬಂದಾಗ   ಸಾಲಾಗಿಟ್ಟಿದ್ದ  ಆಹಾರಗಳ   ಹೆಸರಿನ   ಪಟ್ಟಿ   ಓದುತ್ತಾ ಇದ್ದೆ.  ನಮ್ಮಲ್ಲಿ  ಹಾಲು ಪಾಯಸ  ಮಾಡಿದರೆ  ಕಾಣಲು  ಹೇಗಿರುತ್ತೋ  ,   ಹಾಗೆ  ಕಾಣುತ್ತಿದ್ದ  ಫುಡ್  ಕಾಣಿಸಿತು.  ಬರಹ  ನೋಡಿದರೆ  ಅರ್ಥವಾಗಲಿಲ್ಲ. ಬಳಿ ಇದ್ದವರ ಬಳಿ  ವಿಚಾರಿಸಿದೆ. ಅವರಿಗೂ ತಿಳಿಯಲಿಲ್ಲ.  ಹೋಗಲಿ, ಟೇಸ್ಟ್  ನೋಡುವ  ಅಂತ  ಚೂರು  ತೆಗೆದು  ಹಾಕಿಕೊಂಡು  ಸವಿದೆ.   kaanji”   ಎಂದು    ಲಗತ್ತಿಸಿದ   ಆ  ಆಹಾರ   ನಮ್ಮೂರ  ಗಂಜಿಯ  ಅಪಭ್ರಂಶ.    ಚಮಚೆಯಲ್ಲಿ  ಕುಡಿಯುವ ಹಾಗಿತ್ತು.   ಗಟ್ಟಿಯಾಗಿದ್ದ  ಅದು   ಗಂಜಿಯ  ನಾಡಿನಿಂದ  ಬಂದ  ನಮಗೆ  ರುಚಿಸಲಿಲ್ಲವಾದರೂ, ನಮ್ಮೂರ ಗಂಜಿಗೆ   ಸ್ಟಾರ್ ಹೋಟೆಲ್ ನಲ್ಲಿ  ದೊರೆತ  ವಿಶಿಷ್ಟ  ಸ್ಥಾನ   ಕಂಡು  ಹಿಗ್ಗಾಯಿತು.  ಜೊತೆಗೆ  ಅಲ್ಲಿನ  ಎಣ್ಣೆತಿಂಡಿಗಳ  ಬ್ರೇಕ್ ಫಾಸ್ಟ್,  ಬೆಳ್ಳಬೆಳಗ್ಗೇ   ಜಿಲೇಬಿ  ತಿನ್ನುವ,  ಪೇಟಾ   ಸವಿಯುವ(  ಕುಂಬಳದ  ಹೋಳುಗಳನ್ನು  ಸಕ್ಕರೆ ಪಾಕದಲ್ಲಿ  ಅದ್ದಿ ಬಿಸಿಲಿಗೆ  ಒಣಗಿಸಿದ  ಸಿಹಿತಿಂಡಿ) ,  ಡೋಕ್ಲಾ,  ಸಂದೇಶ ಮೊದಲಾದ  ಸ್ಥಳೀಯ   ತಿನಿಸುಗಳ   ನಡುವೆ  ನಮ್ಮ  “ಕಾಂಜಿ”ಗೆ  ಸ್ಥಳಾವಕಾಶ   ಕೊಟ್ಟದ್ದಕ್ಕೆ  ಜೈ ಎನ್ನುವ  ಉತ್ಸಾಹ ಬಂತು.   ಸತ್ಯ ಏನೆಂದರೆ   ನಾವೆಲ್ಲ ಗಂಜಿಯೂರಿನವರಾದರೂ  ಒಬ್ಬರೂ  ಅಲ್ಲಿ ಅದನ್ನು  ಮುಟ್ಟಲಿಲ್ಲ.
\
ದಕ್ಷಿಣ ಕನ್ನಡ   ಜೊತೆಗೆ  ಕೇರಳದಲ್ಲಿ   ಕುಸುಬಲಕ್ಕಿಯ  ಬಳಕೆ  ಎಲ್ಲ ಮನೆಗಳಲ್ಲಿ ಇದೆ.   ಬೆಳ್ತಿಗೆ  ಅಥವಾ  ವೈಟ್ ರೈಸ್  ಎಂಬ  ಬಿಳಿ ಅಕ್ಕಿ   ಬಳಕೆ  ತಿಂಡಿಗಳ ತಯಾರಿಯಲ್ಲಿ ಮಾತ್ರಾ.      ಭತ್ತದ  ಗದ್ದೆಯಲ್ಲಿ   ಪೈರು  ಬೆಳೆದು  ಕಟಾವು   ಆದಾಗ     ಭತ್ತವನ್ನು   ಒಣಗಿಸಿ  ತೆಗೆದಿಡುವುದು ಪದ್ದತಿ.  ಅದನ್ನು  ನೇರವಾಗಿ  ಅಕ್ಕಿ ಮಿಲ್ ಗೆ  ಕೊಟ್ಟಾಗ   ಶುಭ್ರ   ಬಿಳಿಯ   ಸಣ್ಣ  ಗಾತ್ರದ  ಬೆಳ್ತಿಗೆ  ಅಕ್ಕಿ  ಸಿಗುತ್ತದೆ.  ಇದು  ಹಳೆಯದಾದಷ್ಟೂ ಉತ್ತಮ.   ಈ  ಅಕ್ಕಿಯನ್ನು   ಕೇರಳದಲ್ಲಿ  ದೇಗುಲಗಳ ವಿಶೇಷ  ಸಮಾರಂಭಗಳಲ್ಲಿ   ” ಪಾಲ್ ಪ್ರಥಮಂ ” (ಹಾಲು  ಪಾಯಸ)  ಮಾಡಲು  ಬಳಸುತ್ತಾರೆ.   ಅದು  ಅದ್ಭುತ  ರುಚಿಯದು.  ಉಳಿದಂತೆ    ಅಪರೂಪವಾಗಿ   ಅನ್ನಕ್ಕೆ,  ಉಳಿದಂತೆ  ತಿಂಡಿಗೆ  ಬಳಕೆ .
/
ಒಣಗಿಸಿ  ಕಟ್ಟಿ  ಇಟ್ಟ  ಭತ್ತವನ್ನು   ತೆಗೆದು   ದೊಡ್ಡ  ಹಂಡೆಯಲ್ಲಿ  ತುಂಬಿಸಿ,  ನೀರು  ಹಾಕಿ  ಹದವಾಗಿ ಬೇಯಿಸಿದಾಗ  ಹದಬಿಸಿಲಿಗೆ  ಹರವಿ  ನಂತರ  ಅಕ್ಕಿ ಮಿಲ್ ಗೆ ಕೊಟ್ಟರೆ  ಆಗುವ  ಅಕ್ಕಿಗೆ  ಕುಚ್ಚಲಕ್ಕಿ,  ಅಥವಾ ಕುಸುಬಲಕ್ಕಿ  ಅನ್ನುತ್ತಾರೆ.  ಅದಾಗಲೇ  ಒಂದು ಬಾರಿ  ಬೇಯಿಸಿದ  ಕಾರಣ  ಅದರ  ಅನ್ನ  ದೇವತಾಕಾರ್ಯಗಳಲ್ಲಿ ವರ್ಜ್ಯ.   ನಿತ್ಯದ  ಊಟಕ್ಕೆ ಉಪಯುಕ್ತ.    ನಸುಗೆಂಪು ಬಣ್ಣದ  ಈ  ಉದ್ದನೆಯ  ಅಕ್ಕಿ ಬೆಂದು  ಅನ್ನವಾಗುವಾಗ   ಮನೆಯಲ್ಲಿ  ಅದರ ಘಮ  ಘಮ  ತುಂಬುತ್ತದೆ. ಮೃದುವಾದ  ಅನ್ನ  ಉಣ್ಣಲು  ಬಲುರುಚಿ,  ಅಲ್ಲದೆ  ಈ ಅನ್ನ  ತಣ್ಣಗಾದರೂ  ಉಣ್ಣಬಹುದು.  ಅಪಾರವಾದ  ಪೌಷ್ಟಿಕಾಂಶಗಳ  ಕಣಜ  ಕುಚ್ಚಲಕ್ಕಿಯ  ಅನ್ನ.   ಎಳೆಮಗುವಿನಿಂದ   ಹಿಡಿದು  ತೊಂಭತ್ತರ  ವೃದ್ಧರ  ತನಕವೂ  ಅರಗುತ್ತದೆ.  ಅಲ್ಲದೆ   ಕರಾವಳಿಯ  ಹವೆಗೆ ಈ  ಅನ್ನ  ಹೇಳಿ ಮಾಡಿಸಿದ್ದು.   ನಮ್ಮ ಪೈಕಿಯವರೊಬ್ಬರ   ಮೈಕೈ  ನೋವಿಗೆ  ಉತ್ತರಭಾರತದಲ್ಲಿ    ವೈದ್ಯರೊಬ್ಬರು  “ ಕೇರಳದ  ಕಡೆ ಸಿಗುವ ಕುಸುಬಲಕ್ಕಿಯ  ಗಂಜಿ  ಉಣ್ಣುವ  ಅಭ್ಯಾಸ ಮಾಡ್ಕೊಳ್ಳಿ. ಗುಣವಾಗುತ್ತದೆ”  ಅಂತ  ಹೇಳಿದ್ದರು.
kerala red rice
/
ಮೇಲಿನ  ಅಷ್ಟೂ  ವಿವರ ಕೊಟ್ಟದ್ದು   ಏಕೆಂದರೆ  ನಮ್ಮೂರ  ವಿಶಿಷ್ಟ  ಆಹಾರವಾದ  ಕುಚ್ಚಲು  ಗಂಜಿಯ  ಬಗ್ಗೆ  ಪೀಠಿಕೆ ಅದು.  ನಮ್ಮಲ್ಲಿ  ತಾಯಂದಿರಿಗೆ  ಬೆಳಗಿನ ತಿಂಡಿಯದೇ  ತಾಪತ್ರಯ.   ಮಕ್ಕಳಿಂದ  ಹಿಡಿದು  ದೊಡ್ಡವರ  ತನಕ ತಿಂಡಿ ಒಬ್ಬರಿಗೆ  ಹಿಡಿಸಿದ್ದು  ಮತ್ತೊಬ್ಬರಿಗೆ  ಹಿಡಿಸದು.    ರೋಸಿದ  ಅಮ್ಮಂದಿರು  ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ  ಕುಸುಬಲಕ್ಕಿಯ  ಗಂಜಿ  ಮಾಡಿ  ಬಡಿಸಿದರೆ  ಮತ್ತೆ  ಪಿರಿಪಿರಿ  ಇಲ್ಲದೆ ಉಣ್ಣುತ್ತಾರೆ ಎಲ್ಲರೂ.  ಕುಚ್ಚಲಕ್ಕಿಯನ್ನು  ತೊಳೆದು  ಬೇಯಲು  ಇಟ್ಟಲ್ಲಿಗೆ ಅಂದಿನ  ಉಪಾಹಾರದ ಕೆಲಸ  ಆಯ್ತು.  ಅದು  ಹದವಾಗಿ  ಬೆಂದು  ಅನ್ನವಾದ  ಮೇಲೆ  ಬಸಿಯುವ  ರಿವಾಜಿಲ್ಲ.   ಬಸಿದರೆ  ಅದು ಗಂಜಿ  ಆಗುವುದಿಲ್ಲ; ಅನ್ನವಾಗುತ್ತದೆ.   ಗಂಜಿಯೂಟಕ್ಕೆ  ಮನೆ ಮಕ್ಕಳು,  ಹಿರಿಯರು  ಕೂತಾಗ ,  ಸೌಟಿನಲ್ಲಿ  ತೋಡಿ  ತಟ್ಟೆಗೆ  ಹಾಕಿದರೆ  ಮುಗೀತು.  ಇರುತ್ತಲ್ಲ ಹಸುವಿನ  ತುಪ್ಪ, ಜೊತೆಗೆ  ಮಾವಿನ ಮಿಡಿಯ ಉಪ್ಪಿನಕಾಯಿ.  ತುಪ್ಪ  ಬೇಡ  ಅಂದವರಿಗೆ  ಮೊಸರು.  ಗಂಜಿಗೆ  ಮೊಸರು ಸೇರಿಸಿ,  ಸಂಡಿಗೆ,  ಬಾಳಕವೋ,  ನಿತ್ಯವೂ ಬಳಸಲು ಅಮ್ಮಂದಿರು   ಭರಣಿಯಲ್ಲಿ  ತುಂಬಿಸಿಡುವ  ನಾನಾ ವಿಧದ  ಉಪ್ಪಿನಕಾಯಿ  ಸಿಕ್ಕಿದರೆ ,  ಆ ಊಟದ  ರುಚಿ  ವರ್ಣನಾತೀತ.  ಬಹುಶ  ನಳಮಹಾರಾಜ   ಇತ್ತ ಕಡೆ ಬಂದರೆ  ” ಅಮ್ಮಾ,  ನನಗೂ  ಗಂಜಿ  ಬಡಿಸಿ” ಎನ್ನುವವನೇ. ಅಷ್ಟೂ ಸವಿ.    ಮನೆಯಲ್ಲಿ  ತರಕಾರಿ  ಕೈಗೆ ಸಿಗುವ ಹಾಗೆ  ಇದ್ದರೆ  ಗೊಜ್ಜು,  ಬೋಳುಕೊದ್ದೆಲ್ ಗಂಜಿಗೆ  ಉತ್ತಮ  ಸಾಥ್ ಕೊಡುತ್ತದೆ.   ಹೊಟ್ಟೆತುಂಬ  ಗಂಜಿ ಉಂಡೆದ್ದರೆ   ಆ ರುಚಿಗೆ  ಪರ್ಯಾಯ  ಪದವಿಲ್ಲ. ಬೇಸಿಗೆಯಲ್ಲಿ  ಸೆಖೆ, ಬಿಸಿಲ ಝಳಕ್ಕೆ  ದಾಹ ಹೆಚ್ಚು. ಆಗ  ಮನೆ ಮನೆಗಳಲ್ಲಿ  ಗಂಜಿಯೇ .  ಅದನ್ನು  ಉಂಡರೆ  ಬಾಯಾರಿಕೆ  ಕಡಿಮೆ.  ಹೊಟ್ಟೆಗೆ  ಹಿತ.
 ‘
ನಮ್ಮ  ಪರಿಚಿತರೊಬ್ಬರಿಗೆ  ತಿಂಡಿಯ  ಚಪಲ  ಜಾಸ್ತಿ. ಕಾಲೇಜಿಗೆ  ಮಂಗಳೂರಿಗೆ  ಹೋಗುವಾಗ,   ದಿನಕ್ಕೊಂದು  ಹೋಟೆಲಿಗೆ  ಹೋಗಿ  ಅಲ್ಲಿನ  ಸವಿ  ಸವಿಯುತ್ತ ಇದ್ದವರು.  ಅನ್ನ  ನಿತ್ಯ ಮನೆಯಲ್ಲಿ  ಇರುತ್ತದೆ;     ಅಮ್ಮಂದಿರಿಗೆ  ಹೋಟೆಲ್ ನಲ್ಲಿರುವ  ಘಮಘಮದ  ತರಹೇವಾರಿ ತಿಂಡಿ  ಮಾಡಲು  ಬರುವುದಿಲ್ಲವೆಂದು,     ನಡು ಮಧ್ಯಾಹ್ನದಲ್ಲಿ ಕೂಡಾ  ಚಟ್ಟಂಬಡೆ, ಗೋಳಿಬಜೆ, ಪೋಡಿ,  ಮಸಾಲೆದೋಸೆ,   ಪೂರಿ,   ವಡೆ,  ಬನ್ಸ್,  ಉದ್ದಿನವೆಡೆ   ಅಂತ  ತರಿಸಿ  ತಿನ್ನುತ್ತಿದ್ದ.
ಉದ್ಯೋಗಕ್ಕೆ  ಸೇರಿದ ಮೇಲೆ   ಅವನ ಬಾಯಿ; ಅವನ ದುಡ್ಡು, ಮುಗೀತಾ?ಆರಂಭವಾಯ್ತು!!!ಹೊಟ್ಟೆನೋವು,  ಸಂಕಟ,  ವಾಕರಿಕೆ,  ಹಸಿವಿಲ್ಲದ  ಸ್ಥಿತಿ  ಎಲ್ಲ ಶುರು. ಆಮೇಲಾಮೇಲೆ  ಊರಿಂದ  ಕುಚ್ಚಲಕ್ಕಿ  ಒಯ್ಯುತ್ತಾ  ಸ್ವಯಂಪಾಕ  ಆರಂಭಿಸಿದ.  ವಡೆ,ಪೂರಿ  ಬಿಟ್ಟು  ಗಂಜಿಯೂಟ  ಆರಂಭ.  ಅದಕ್ಕೆ  ನೆಂಚಿಕೊಳ್ಳಲು ಮಿ್ಡಿಉಪ್ಪಿನಕಾಯಿ.  ಊರಿಗೆ  ಬಂದಾಗ  ನಿತ್ಯಾ  ಗಂಜಿಯೇ  ಸಾಕು  ಅಂತ  ಬಾಯಿಬಿಟ್ಟು  ಅರ್ಜಿ ಸಲ್ಲಿಸುತ್ತಾನೆ.  ಗಂಜಿಯ  ಕಿಮ್ಮತ್ತು  ಹಾಗಿದೆ.Ganji uta
/
ಕೇರಳದಲ್ಲಿ  ಎಳೆಯ ಮಕ್ಕಳಿಗೆ  ಮದ್ಧ್ಯಾಹ್ನದಲ್ಲಿ  ಗಂಜಿಯೂಟ ಕೊಡುತ್ತಾರೆ.  ಎಳೆಯ ಮಕ್ಕಳಿಗೆ  ಪೌಷ್ಟಿಕಾಂಶಕ್ಕೆಂದು  ಗಂಜಿ ಬೇಯುವಾಗ  ಅದಕ್ಕೆ ಪಚ್ಚೆಹೆಸರು ಹಾಕಿ ಹದವಾಗಿ  ಬೇಯಿಸುತ್ತಾರೆ.  ಮಧ್ಯಾಹ್ನ  ಊಟಕ್ಕೆ  ಕೂತ ಪುಟಾಣಿಗಳಿಗೆ  ಅದು  ಬಲು ರುಚಿಕರ.   ತಮ್ಮ ಮೊಮ್ಮಗು  ಚಟುವಟಿಕೆಯಿಂದ  ದಿನವಿಡೀ ಓಡಾಡುವುದು ಗಮನಿಸಿದ  ಎಂಭತ್ತರ  ಹಿರಿಯರೊಬ್ಬರಿಗೆ  ಅದು  ಅವನ  ಆಹಾರದ   ಗುಟ್ಟು   ಎಂದು  ಗೊತ್ತಾಯಿತು.  ಸರಿ.  ತಾವೂ  ಅದೇ  ಆಹಾರ ಸೇವಿಸಿದಲ್ಲಿ ಅದೇ  ತಮಗೆ  ಎನರ್ಜಿ  ಕೊಡಬಹುದು  ಎಂದು  ತಾವೂ  ಹಾಗೇ  ಬೇಯಿಸಿ  ಬಡಿಸಲು  ಮನೆಯಲ್ಲಿ  ಅಪ್ಪಣೆ ಕೊಟ್ಟಿದ್ದರು.
/
ನಮ್ಮೂರಿನ  ವಿಶಿಷ್ಟ  ರುಚಿಯ  ಗಂಜಿಗೆ  ಈಗ  ಎಲ್ಲೆಲ್ಲೂ  ಸ್ಥಾನ  ಲಭ್ಯವಾಗುತ್ತದೆ  ಎನ್ನುವ   ಹಿಗ್ಗಿನ  ಜೊತೆಗೆ  ಅನೇಕ  ಮನೆಗಳಲ್ಲಿ  ಇಂದಿಗೆ  ಕೂಡಾ  ಅದು ಬೆಳಗ್ಗಿನ   ಬ್ರೇಕ್ ಫಾಸ್ಟ್  ಆಗಿ   ಮುನ್ನೂರರುವತ್ತೈದು  ದಿನ  ಸತತ  ಉಂಡರೂ  ಸಾಕೆನಿಸದು  ಅನ್ನುವುದೂ ಸತ್ಯ.
/
,
 – ಕೃಷ್ಣವೇಣಿ, ಕಿದೂರು
.
/

5 Responses

 1. ವಿನಯ ಕುಮಾರ says:

  ನಿಮ್ಮ ಮಗಳ ಬಾಯಲ್ಲಿ ಕೇಳಿ ಬಲ್ಲೆವು 🙂

 2. Hema says:

  ಮನೆಯಲ್ಲಿ ಬೆಳಗ್ಗೆ ಗಂಜಿ ಊಟ ರೂಢಿ ಆದವರಿಗೆ, ಬೇರೆ ತಿಂಡಿಗಳು ಇದ್ದರೂ, ತನಗೆ ಗಂಜಿಯೇ ಒಳ್ಳೆಯದಿತ್ತು ಅನಿಸುತ್ತದೆ. ಆದರೆ ಅಭ್ಯಾಸ ಇಲ್ಲದರಿಗೆ ಇಷ್ಟವಾಗುವುದಿಲ್ಲ. ಬೇಗನೇ ಮನೆಕೆಲಸ ಮುಗಿಸಿ ಅಫೀಸಿಗೆ ಹೊರಡಬೇಕಾದವರಿಗೆ ತಿಂಡಿಯ ಬದಲು ಗಂಜಿ ತಯಾರಿಸುವುದು ಅನುಕೂಲವಾಗುತ್ತದೆ. ಹೊಟ್ಟೆಗೂ ಹಿತ. ಸಂಜೆ ಸಾವಕಾಶವಾಗಿ ತಿಂಡಿ ಮಾಡಿದರಾಯಿತು. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಇದು ರೂಢಿ.

 3. bhavanadamle says:

  ಗಂಜಿಯೂಟದ ರೂಢಿ ಇಲ್ಲದ ನನ್ನವರಿಗೂ ಈಗ ರುಚಿ ಹತ್ತಿಸಿದ್ದೇನೆ. ಬೆಳ್ತಕ್ಕಿ ಗಂಜಿಗಿಂತಲೂ ಕೆಂಪಕ್ಕಿ ( ಅನ್ ಪಾಲಿಶ್ಡ್ ) ಅಥವಾ ಕುಚ್ಚಲಕ್ಕಿ ಗಂಜಿಗೇ ಮೊದಲ ಸ್ಥಾನ.
  ಬಿಸಿಗಂಜಿಗೆ ತುಪ್ಪ, ಉಪ್ಪಿನಕಾಯಿ, ಹಪ್ಪಳಗಳು ಪಕ್ಕವಾದ್ಯಗಳಾದರೆ ಆರಿದ ಗಂಜಿಗೆ ತೆಂಗಿನೆಣ್ಣೆ, ಮಜ್ಜಿಗೆ ಅಥವಾ ಮೊಸರು.
  ನನ್ನ ಹವ್ಯಕ ಗೆಳತಿಯ ಮನೆಯಲ್ಲಿ ಇದಕ್ಕೆ ” ಹೆಜ್ಜೆ ಊಟ” ಅನ್ನುತ್ತಾರೆ.

 4. Ramya Bhat says:

  ಕಾಮ್ಪ್ಲಿಮೆಂಟರಿ ಬ್ರೇಕ್ಫಾಸ್ಟ್ ಎಲ್ಲಾ ಕಡೆಯ ಹೋಟೆಲುಗಳಲ್ಲೂ ಕಾಮನ್ನು.
  ಬೆಳ್ತಿಗೆ ಅಕ್ಕಿಯಿನ್ದಲೂ ಗಂಜಿ ಮಾಡುತ್ತಾರೆ, ಉದಾಹರಣೆಗೆ ಕಟೀಲು ದೇವಳದಲ್ಲಿ ಕೆಲವು ವಿಶೇಷ ದಿನಗಳಲ್ಲಿ ಬಡಿಸುತ್ತಾರೆ.

 5. ಪ್ರಕಟಿಸಿದ ಸುರಹೊಂನೆಗೆ ಅಲ್ಲದೆ ಓದಿ ಪ್ರತಿಕ್ರಿಯಿಸಿದ ಸಹೃದಯಿ ಬಳಗಕ್ಕೆ ಕೃತಜ್ಞತೆ . ಅತ್ತ್ಯುತ್ತಮ ಚಿತ್ರಗಳನ್ನು ಬಳಸಿದ ಸುರಹೊಂನೆಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: