ಹಳೆ ಬೇರು-ಹೊಸ ಚಿಗುರು

Share Button

Divakara Dongre

ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ. ಇದು ಪ್ರಕೃತಿಯ ಜೀವಚಕ್ರ. ಬೀಜ ಮೊಳೆತು ನೆಲದಲ್ಲಿ ಬೇರೂರಿ, ಆ ಬೇರು ವೃಕ್ಷದ ಬಲವಾದ ಅಸ್ಥಿತ್ವಕ್ಕೆ, ಅದು ನೀಡುವ ಫಲ-ಪುಷ್ಪಗಳ ಕೊಡುಗೆಗೆ ಕಾರಣವಾಗುತ್ತದೆಂದಾದರೆ ಆ ಕೊಡುಗೆಯಲ್ಲಿ ಬೇರಿನ ಮಹತ್ವವೂ ಸೇರಿದೆಯೆಂದಾಯಿತು. ಬೇರಿನ ಪ್ರದರ್ಶನವಿಲ್ಲ, ಅದನ್ನು ಹೊಗಳುವವರಿಲ್ಲ. ಹಾಗಂತ ಅದು ಇದೆಲ್ಲವನ್ನೂ ಅಪೇಕ್ಷಿಸುವುದೂ ಇಲ್ಲ! ನೆಲದ ಆಳಕ್ಕಿಳಿದು ವೃಕ್ಷಕ್ಕೆ ಬೇಕಾದ ಜೀವಸತ್ವವನ್ನು ನೀಡಿ ವೃಕ್ಷದ ಅಸ್ಥಿತ್ವವನ್ನು ಕಾಯ್ದುಕೊಳ್ಳುವುದೇ ಬೇರಿನ ಕೆಲಸ.

ಮರ ಬಿಟ್ಟ ಹೂಹಣ್ಣುಗಳಿಗೆ ಪ್ರಚಾರ-ಪ್ರಾಧಾನ್ಯತೆ. ಒಂದು ವೇಳೆ ಬೇರು ನನಗೇನು ನೀಡಿತು ಎಂದು ಮರ ಕೇಳಿದರೆ ಅಥವಾ ಮರದೊಡೆಯ ಮರ ಫಲ ನೀಡುತ್ತಿದೆ, ಇನ್ನು ಬೇರಿನದೇನು ಕೆಲಸ ಎಂದು ಅದನ್ನು ಕಡಿದೊಗೆದರೆ, ಮತ್ತೆಲ್ಲಿಯ ಮರ, ಹೂ-ಹಣ್ಣು, ಕಾಯಿ-ಚಿಗುರು? ಚಿಗುರಿದ ಎಲೆ ಹಣ್ಣಾಗಿ, ಮಣ್ಣಾಗಿ ಮತ್ತೆ ಅದೇ ಮರಕ್ಕೆ ಗೊಬ್ಬರವಾಗುವ ಪ್ರಕ್ರಿಯೆ ಅಥವಾ ಮರ ಬಿಟ್ಟ ಹಣ್ಣೊಳಗೆ ಅವಿತ ಬೀಜ ಮತ್ತೆ ಮರವಾಗುವ ನಿರೀಕ್ಷೆ, ಇವೆಲ್ಲವೂ ಪ್ರಕೃತಿಯ ರಹಸ್ಯ. ತಿಳಿದುಕೊಂಡವನಿಗೆ ಅದೊಂದು ತತ್ತ್ವ.

ಇದೇ ತತ್ತ್ವ ನಮ್ಮ ಮನೆಗಳಿಂದ ಮೊದಲ್ಗೊಂಡು ನಾವು ಕಟ್ಟಿ ಬೆಳೆಸಿದ ಸಂಸ್ಥೆಗಳಿಗೆ, ಸಮುದಾಯ ಸಂಘಟನೆಗಳಿಗೆ, ರಾಜ್ಯ-ರಾಷ್ಟ್ರಗಳಿಗೆ. ನಮ್ಮ ಮನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ನಮ್ಮಜ್ಜ ಕಟ್ಟಿಸಿದ ಸೋಗೆಯ ಮಾಡಿನ ಮನೆಯಿಂದ ಹಿಡಿದು ನಾವು ಕಟ್ಟಿಸಿದ ಅಮೃತಶಿಲೆಯ ನೆಲಹಾಸಿನ ವಾಸ್ತುವೂ ‘ನಮ್ಮ ಮನೆಯೇ. ನನ್ನಜ್ಜ ಕಟ್ಟಿಸಿದ ಸೋಗೆ ಮಾಡಿನ ಮನೆಯನ್ನು ನನ್ನಪ್ಪ ಪ್ರೀತಿಯಿಂದ ‘ಇದು ನನ್ನ ಮನೆಯೆಂದಂತೆ’ ನನ್ನಪ್ಪ ಕಟ್ಟಿಸಿ ಹೆಂಚಿನ ಮನೆಯನ್ನು ನಾನು ಅಷ್ಟೇ ಪ್ರೀತಿಯಿಂದ ಇದು ನನ್ನ ಮನೆಯೆಂದೆ. ನನಗದು ಬೆಚ್ಚನೆಯ ಪ್ರೀತಿಯನ್ನು, ರಕ್ಷಣೆಯನ್ನು, ಆತ್ಮಸಮ್ಮಾನವನ್ನು ಕೊಟ್ಟ ಮನೆ. ನನ್ನಜ್ಜನ ಕಾಲಕ್ಕೆ ಅವನಿಗಿರುವ ಆರ್ಥಿಕ ಅನುಕೂಲಕ್ಕೆ, ಅವನದೇ ಆದ ಕಲ್ಪನೆಗಳು ಸಾಕಾರಗೊಂಡು ನಿರ್ಮಿತವಾದದ್ದು ಅವನ ಸೋಗೆಯ ಮಾಡಿನ ಮನೆ. ಅದು ಸೋರಿದ್ದಿರಬಹುದು, ಗೋಡೆಗಳು ಬಿರುಕು ಬಿಟ್ಟಿರಬಹುದು, ಆದರೂ ಅದು ನಮ್ಮಜ್ಜ ಕಟ್ಟಿಸಿದ ನಮ್ಮ ಮನೆಯಾಗಿತ್ತು. ಹಾಗೆಂದು ಅವನು ಕಾಂಕ್ರಿಟ್ ಮನೆಯನ್ನು ಕಟ್ಟಲಾಗಲಿಲ್ಲ, ಅವನು ಕಟ್ಟಿದ ಮನೆಗೆ ಅಂದವಿರಲಿಲ್ಲ, ಚಂದವಿರಲಿಲ್ಲ, ಅವನಿಗೆ ದೂರದೃಷ್ಟಿಯಿರಲಿಲ್ಲ ಎಂದು ಅವನನ್ನು ಹೀಗಳೆಯಲಾದೀತೆ?

roots and leafs

ಇಂದು ನಾವು ಕಟ್ಟಿಕೊಂಡ ಅಂದ ಚಂದದ ಬಣ್ಣದ ಮನೆ ನನಗೊಂದು ಮನೆ ಬೇಕು ಎಂಬ ನಮ್ಮಜ್ಜನ ಅಥವಾ ನಮ್ಮಪ್ಪನ ಆಶಯದ ಸ್ಪೂರ್ತಿಯಲ್ಲವೇ? ನಮ್ಮ ಮನೆಗಳಿಂದ ಹಿಡಿದು ಸಂಘಟನೆಗಳು, ಸಾಮಾಜಿಕ-ರಾಜಕೀಯ ವ್ಯವಸ್ಥೆಗಳಲ್ಲಿ ತಲತಲಾಂತರಗಳಿಂದ ಬದಲಾವಣೆಗಳು, ನಿರೀಕ್ಷೆಗಳು, ಯೋಜನೆಗಳು, ಕಾರ್ಯವಿಧಾನಗಳು ಭಿನ್ನವಾಗಿರುತ್ತವೆ. ಸಮುದಾಯ ಸಂಘಟನೆಗಳಲ್ಲಂತೂ ನಾವು ಹಲವು ಸಲ ನಮ್ಮ ಕಾರ್ಯ ನಿರ್ವಹಣೆಗೆ ಹಳೆಯ ಕಡತಗಳನ್ನು ತಿರುವಿ ಹಾಕಿ ಅನುಭವಗಳನ್ನು ಹೊಂದಬೇಕಾಗುತ್ತದೆ. ಒಂದು ಮಹಾನ್ ಕಾರ್ಯದ ದೇಣಿಗೆಯ ಸಂಗ್ರಹಕ್ಕೆ ಹೊರಟಾಗ ದಾನಿಗಳು ಯಾರು? ಈ ಹಿಂದೆ ನಡೆದ ಯೋಜನೆಗಳ ನೇತೃತ್ವ ವಹಿಸಿದವರಾರು? ಅವರ ಅನುಭವಗಳೇನು? ಕೈಗೊಂಡ ಯೋಜನೆಯೊಂದು ವಿಫಲವಾದಲ್ಲಿ ಅದರ ಕಾರಣಗಳೇನು? ಸಫಲವಾದಲ್ಲಿ ಸಫಲತೆಗೆ ಪೂರಕವಾದ ಅಂಶಗಳೇನು ಎಂದು ತಿಳಿಯ ಹೊರಟಾಗ ನಮಗೆ ದಾರಿದೀಪವಾಗುವುದು ಹಳೆಯ ಕಡತಗಳು ಅಥವಾ ಹಿರಿಯರ ಜೀವನಾನುಭವಗಳು. ಅಂತಹ ಅನುಭವಗಳಲ್ಲಿ ಪ್ರಸ್ತುತವಾದುವುಗಳನ್ನು ತೆಗೆದುಕೊಂಡು ಮುಂದಡಿಯಿಡುವುದು ಜಾಣತನ, ಅದು ಬುದ್ಧಿವಂತಿಕೆ ಕೂಡ! ಹಿರಿಯರ ಸಲಹೆಯನ್ನು ಕಡೆಗಣಿಸಿ ಆತುರದಿಂದ ಕೈಗೊಂಡ ನಿರ್ಣಯಗಳು ಹಲವೊಂದು ಸಲ ಸೋಲಿಗೆ ಕಾರಣವಾಗಬಹುದು. ಸರಿ-ತಪ್ಪುಗಳು, ಅದರಿಂದ ಉದ್ಭವಿಸುವ ಸಮಸ್ಯೆಗಳು ಎಲ್ಲ ಕಾಲದಲ್ಲೂ ಇರುವಂತಹುದೆ. ಸಾಂಘಿಕ ಬದುಕಿನಲ್ಲಿ ಯಶಸ್ಸು ದೊರೆತರೆ ಅದರಲ್ಲಿ ಎಲ್ಲರ ಪಾಲು. ಸೋಲುಂಟಾದರೆ ಅದು ನಾಯಕತ್ವದ ವಿಫಲತೆ! ವ್ಯಷ್ಠಿಯಿಂದ ಮೊದಲ್ಗೊಂಡು ಸಮಷ್ಠಿಯವರೆಗೆ ಮಾತು-ಕೃತಿಗಳಲ್ಲಿ ಸಂಯಮವಿದ್ದರೆ, ಅದು ಪ್ರಶಂಸನೀಯ.

ಕೊನೆಯಲ್ಲಿ ಕವಿವಾಣಿಯೊಂದನ್ನು ಸ್ಮರಿಸೋಣ:

ಹಿರಿದೆನುವುದಾವುದಿದೆ ನಮಿಸದಕೆ ನೀ ಮೊದಲು
ನೈರಾಶ್ಯದಳಿಸಿಕೆಗೆ ಅದೆ ದಿವ್ಯ ದಾರಿ.
ಪರಿಶುದ್ಧ ನೆಲೆಯಲ್ಲಿ ಜಾಗೃತಿಯ ದೀಪ್ತಿಯಿದೆ;
ಅರಿವಿಗಭಿಮುಖನಾಗು – ಮುದ್ದುರಾಮ.

 – ದಿವಾಕರ ಎಂ. ಡೋಂಗ್ರೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: