ಷಷ್ಠಿಗೆ ಪುಷ್ಠಿ ‘ಸುಬ್ರಹ್ಮಣ್ಯ ಷಷ್ಠಿ’

Share Button

ಪುರಾತನ ಕಾಲದಲ್ಲಿ ಹಿರಣ್ಯಾಕ್ಷನೆಂಬ ರಕ್ಕಸನಿದ್ದನು. ಅವನ ಮಗನಾದ ತಾರಕಾಸುರನೂ ದುಷ್ಟ ರಾಕ್ಷಸ.ಈತನು ಗೋಕರ್ಣ ಕ್ಷೇತ್ರದಿಂದ ಶಿವನ ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡನು. ಯಾಕಾಗಿ ನನ್ನನ್ನು ಕುರಿತು ತಪಸ್ಸು ಮಾಡಿದೆ ಎಂದು ಭಕ್ತರಿಗೊಲಿದ ದೇವರು ಕೇಳಬೇಕಲ್ಲವೇ?.ಹಾಗೆಯೇ ಆಯಿತು.ಪರಮೇಶ್ವರನು ತಾರಕಾಸುರನಲ್ಲಿ ನಿನ್ನ ಇಷ್ಟಾರ್ಥವೇನೆಂದು ಕೇಳಲು ತಾರಕಾಸುರನು ನನಗೆ ಮಹಾದೇವನಾದ ನಿನ್ನ ಹೊರತಾಗಿ ಬೇರೆ ಯಾರಿಂದಲೂ ಮರಣ ಬರಬಾರದು ಎಂದು ಕೇಳಿಕೊಂಡಾಗ ಶಿವನು ‘ತಥಾಸ್ತು’ ಎಂದನು. ವರವನಿತ್ತ ಪರಮಾತ್ಮ ಕೊಲ್ಲಲು ಸಾಧ್ಯವೇ!. ಹೀಗೆ ಚಿಂತಿಸಿದ ರಕ್ಕಸನು ಮದಾಂಧನಾಗಿ ದೇವತೆಗಳಿಗೆ ಬಹಳ ಕಾಟಕೊಡಲು ಪ್ರಾರಂಭಿಸಿದನು.ಎಲ್ಲ ದೇವತೆಗಳೂ ಈತನ ದುಷ್ಟ ಪರಾಕ್ರಮ ಹಾಗೂ ಘೋರಾಯುಧಗಳಿಂದ ಪೀಡಿತರಾಗಿ ಸ್ವರ್ಗ ಬಿಟ್ಟು ಓಡಿದರು.ಇದರಿಂದಾಗಿ ಕಂಗೆಟ್ಟ ದೇವೇಂದ್ರನು ದೇವಗುರುಗಳಾದ ಬೃಹಸ್ಪತಿಯ ಬಳಿಗೆ ಬಂದು;ಇದಕ್ಕೆ ಪರಿಹಾರೋಪಾಯವೇನೆಂದು ಕೇಳಿದನು.

ಆಗ ಬೃಹಸ್ಪತಿಯು ದೇವೇಂದ್ರಾ..,ತಾರಕಾಸುರನು ತಪಸ್ಸುಮಾಡಿ ಶಿವನನ್ನೊಲಿಸಿಕೊಂಡು ಅವನ ಹೊರತು ಬೇರೆಯಾರಿಂದಲೂ ಸಾವು ಬರಬಾರದೆಂದು ವರವನ್ನು ಪಡೆದಿದ್ದಾನಷ್ಟೆ?.ನೀನು ಮಹದೇವನಲ್ಲಿಗೆ ಹೋಗಿ ಇದಕ್ಕೆ ಪರಿಹಾರ ಹುಡುಕು ಎಂದನು. ಗುರುಗಳ ಈ ಮಾತನ್ನಾಲಿಸಿದ ದೇವೇಂದ್ರನು, ಕೈಲಾಸಪರ್ವತಕ್ಕೆ ತೆರಳಿ ಮಹಾದೇವನ ಅಡಿದಾವರೆಗಳಿಗೆರಗಿ ಹೀಗೆ ಕೇಳಿಕೊಂಡ.. ಪ್ರಭೋ ಶಂಕರ..ನೀನು ವರಕೊಟ್ಟ ಭಕ್ತನನ್ನು ನಿನ್ನ ಕೈಯ್ಯಾರೆ ಕೊಲ್ಲಲಾರೆ ನಿಜ.ಅದಕ್ಕಾಗಿ ನಿನ್ನಂತೆ ಸಮರ್ಥನಾದ ಒಬ್ಬ ಮಗನನ್ನು ಪಡೆದು ನಮಗೆ ಕೊಡು. ಅವನನ್ನು ನಮ್ಮ ದೇವಸೇನೆಗೆ ಅಧಿಪತಿಯನ್ನಾಗಿ ಮಾಡುತ್ತೇನೆ. ತಾರಕಾಸುರನನ್ನು ಸಂಹಾರಮಾಡುವವನು ನಿನ್ನ ವಂಶದಿಂದಲೇ ಹುಟ್ಟಿದವನಾದರೆ; ನೀನು ಮಾಡಿದಂತೆಯೇ ಅಲ್ಲವೇ? ಎಂದನು.

ದೇವತೆಗಳ ಬಿನ್ನಹವನ್ನು ಮನ್ನಿಸಿದ ಮಹಾದೇವನು ಕೈಲಾಸಪರ್ವತಕ್ಕೆ ಹೋಗಿ, ಮನದನ್ನೆಯಾದ ಪಾರ್ವತಿದೇವಿಯೊಡನೆ ಅಲ್ಲಿಯ ‘ಕೇಲಿಕುಂಜ’ ಗಳಲ್ಲಿ ವಿಲಾಸ ಶೃಂಗಾರದಲ್ಲಿ ತೊಡಗಿದ. ಕೆಲವಾರು ವರ್ಷಗಳು ಹೀಗೆ ಸರಿದುವು. ಇತ್ತ ತಾರಕನ ಪೀಡನೆಯನ್ನು ತಾಳಲಾರದೆ ದೇವತೆಗಳು ವಾಯುದೇವನನ್ನು ಶಿವನ ಕಡೆಗೆ ಕಳಿಸಿದರು. ವಾಯುವು ಅವರಿಬ್ಬರ ಏಕಾಂತ ಸ್ಥಳಕ್ಕೇ ನುಗ್ಗಿದ.ದೇವತೆಗಳಿಗೆ ಆಶ್ವಾಸನೆ ಕೊಟ್ಟಿದ್ದು ನೆನಪಾದ ಪರಮೇಶ್ವರನು ತನ್ನ ಕ್ರೀಡೆಯನ್ನು ಅರ್ಧಕ್ಕೇ ನಿಲ್ಲಿಸಿ ಎದ್ದು ಬಂದ. ತನ್ನ ಲಿಂಗಮಧ್ಯದಲ್ಲಿರುವ ಅಮೋಘವಾದ ವೀರ್ಯವನ್ನು ಅಗ್ನಿಯ ಮುಖದಲ್ಲಿ ಬಿಟ್ಟ.ಅಗ್ನಿಯು ಅದನ್ನು ತಾಳಲಾರದೆ ಗಂಗೆಗೆ ಚೆಲ್ಲಿದ. ಗಂಗೆಯೂ ಶಿವನ ಶಕ್ತಿಪಾತವನ್ನು ಸಹಿಸುವುದಕ್ಕಾಗದೆ; ನೆಲದ ಮೇಲಿರುವ ಹುಲ್ಲುಗಾವಲಿನಲ್ಲಿ ಚೆಲ್ಲಿದಳು.ಅಷ್ಟರಲ್ಲಿ ಅಲ್ಲಿ ಸಂಚರಿಸುತ್ತಿರುವ ಆರು ಜನ ಮುನಿಪತ್ನಿಯರಾದ ಕೃತ್ತಿಕೆಯರು ಅಲ್ಲಿಗೆ ಬಂದರು.ಅವರಿಗೆ ಇಂದ್ರನು ಮಹೇಶ್ವರನ ವೀರ್ಯವನ್ನು ಪ್ರಯತ್ನದಿಂದ ಪಾಲಿಸಿರಿ ಎಂದು ಆಜ್ಞಾಪಿಸಿದನಲ್ಲದೆ ಇಲ್ಲಿ ಹುಟ್ಟಿದ ದ್ವಾದಶ ಆದಿತ್ಯರಂತೆ ಕಾಣುವ, ಪ್ರಕಾಶಿಸುವ,ಪುತ್ರನು ನಿಮಗೂ ಪುತ್ರನಾಗುವನು ಎಂದ.

ದೇವೇಂದ್ರನ ಅಪ್ಪಣೆಯಂತೆ ಆ ಆರುಜನ ಮುನಿಪತ್ನಿಯರು ಮಹಾದೇವನ ಶಕ್ತಿಯನ್ನು ರಕ್ಷಣೆಮಾಡಿದರು. ಹೀಗೊಂದು ದಿನ ಶಿವನಶಕ್ತಿಯಿಂದ ತೇಜಪುಂಜವಾದ ಒಂದು ಮಗುವು ಜನಿಸಿ ಹುಟ್ಟಿದ ಕೂಡಲೇ ಅಳಲು ಸುರುಮಾಡಿದ ಅದರ ಅಳುವಿಕೆಯನ್ನಾಲಿಸಿದ ಆರು ಮಂದಿ ಕೃತ್ತಿಕೆಯರೂ ಅಲ್ಲಿಗೆ ಧಾವಿಸಿ ಬಂದರು.

ಸುಬ್ರಹ್ಮಣ್ಯನಿಗೆ ಬಂದ ಹೆಸರುಗಳುಃ – ತನ್ನನ್ನು ನೋಡಲು ಬಂದ ಆರುಜನ ಮಾತೆಯರನ್ನು ಕಂಡ ಆ ಶಿಶುವು ಆರು ಮುಖವುಳ್ಳವನಾಗಿ ಒಂದೊಂದು ಮುಖದಿಂದ ಒಬ್ಬೊಬ್ಬ ಋಷಿಪತ್ನಿಯರ ಸ್ತನಪಾನ ಮಾಡಿ ‘ಷಣ್ಮುಖ’ ನೆನಿಸಿಕೊಂಡನಲ್ಲದೆ ಕೃತ್ತಿಕೆಯರ ಮಗನಾಗಿ ‘ಕಾರ್ತಿಕೇಯ’ ಎನಿಸಿಕೊಂಡ. ಶಿವ-ಪಾರ್ವತಿಯರು ‘ಕುಮಾರ’ ಎಂದು ಕರೆದರು. ಶಿವನ ರೇತಸ್ಸು ನೆಲದಮೇಲೆ ಬಿದ್ದು ಜನಿಸಿದುದರಿಂದ ‘ಸ್ಕಂದ’ ಎಂದು ಕರೆದರು.ಶಂಕರನು ಇಂದ್ರನ ಅಪೇಕ್ಷೆಯಂತೆ ದೇವತೆಗಳ ಸೇನಾಪತಿಯಾಗಿ ಮಾಡಿದ್ದರಿಂದ ಅವನಿಗೆ ‘ದೇವಸೇನಾಪತಿ’ ಎಂಬ ಹೆಸರೂ ಬಂತು. ಶಿವನು ಪುತ್ರನಿಗೆ ‘ಶಕ್ತಿ’ ಎಂಬ ಆಯುಧವನ್ನು ನೀಡಿದ್ದಲ್ಲದೆ ನವಿಲನ್ನು ವಾಹನವನ್ನಾಗಿ ಮಾಡಿದ.ಹಾಗಾಗಿ ಅವನು ‘ಮಯೂರವಾಹನ’ ಎಂದು ಕರೆಯಲ್ಪಟ್ಟ. ವಿಷ್ಣುವು ಅವನಿಗೆ ಶಸ್ತ್ರಗಳನ್ನೂ ದೇವೇಂದ್ರನು ಅಸ್ತ್ರಗಳನ್ನೂ ಮಾತೃಗಣಗಳು ಬಗೆಬಗೆಯ ಆಯುಧಗಳನ್ನೂ ನೀಡಿದರು.
ದೇವತೆಗಳು ಸ್ಕಂದನನ್ನು ತಮ್ಮ ಸೇನಾಪತಿಯನ್ನಾಗಿ ಮಾಡಿಕೊಂಡು ತಾರಕಾಸುರನೊಂದಿಗೆ ಯುದ್ಧಕ್ಕೆ ಹೊರಟರು.ದೇವತೆಗಳಿಗೂ ದಾನವರಿಗೂ ‘ರಕ್ತಶೃಂಗ’ ಪರ್ವತದಲ್ಲಿ ಘನಘೋರ ಯುದ್ಧವಾಯ್ತು. ಸ್ಕಂದನು ತನ್ನ ತಂದೆ ನೀಡಿದ ಶಕ್ತ್ಯಾಯುಧದಿಂದ ತಾರಕಾಸುರನನ್ನು ಸೀಳಿ ನೆಲಕ್ಕೊರಗಿಸಿದ.ತಾರಕಾಸುರನ ಮರಣದಿಂದ ದೇವತೆಗಳೆಲ್ಲಾ ಸಂತೋಷಗೊಂಡು ಸ್ವರ್ಗಕ್ಕೆ ಹಿಂತಿರುಗಿದರು.

ಸುಬ್ರಹ್ಮಣ್ಯ ಷಷ್ಠಿ ಮಹತ್ವ – ಸ್ಕಂದನ ಶಕ್ತಿಪ್ರಹಾರದಿಂದ ತಾರಕಾಸುರನು ನೆಲಕ್ಕೆ ಬಿದ್ದಾಗ ಭಯಂಕರ ಭೂಕಂಪವಾಯ್ತು. ರಕ್ತಶೃಂಗ ರ್ವತವು ಸ್ಥಳದಿಂದ ಚಲಿಸಿತು.ಪರಿಣಾಮವಾಗಿ ಅಲ್ಲಿ ನೆಲಸಿದ ಬ್ರಾಹ್ಮಣರಿಗೆ ಅಪಾಯವುಂಟಾಗಿ ಭಯಭೀತರಾದರು.ಇದರಿಂದ ಕೋಪಗೊಂಡು ಸ್ಕಂದನಿಗೆ ಶಾಪಕೊಟ್ಟರು.ಹೊಯ್ದಾಡುತ್ತಿದ್ದ ರಕ್ತಶೃಂಗದ ಮೇಲೆ ತನ್ನ ಶಕ್ತ್ಯಾಯುಧವನ್ನು ನಿಲ್ಲಿಸಿದ್ದಲ್ಲದೆ; ಸ್ಕಂದನು ಸತ್ತ ಬ್ರಾಹ್ಮಣರನ್ನೂ ಬದುಕಿಸಿದ.ಆದರೂ ಸ್ಕಂದನು ಬ್ರಹ್ಮ ಶಾಪದಿಂದ ಕಾಳಸರ್ಪವಾದನು.ಇದರಿಂದಾಗಿ ದುಃಖಕ್ಕೀಡಾದ ಪಾರ್ವತಿ ದೇವಿಯು ತನ್ನ ಮಗನು ಮೊದಲಿನಂತಾಗಲು ಬಯಸಿದಳು.ಅದಕ್ಕಾಗಿ ಪಾರ್ವತಿಯು 108 ಷಷ್ಠಿವ್ರತವನ್ನೂ ಉಪವಾಸವ್ರತವನ್ನೂ ಆಚರಿಸತೊಡಗಿದಳು.ವ್ರತದ ಉದ್ಯಾಪನಕ್ಕೆ ವಿಷ್ಣು ಆದಿಯಾಗಿ ಎಲ್ಲ ದೇವತೆಗಳೂ ಬಂದಿದ್ದರು.ಸ್ಕಂದನೂ ಕಾಳಸರ್ಪರೂಪದಿಂದ ಬಂದಿದ್ದನು. ವಿಷ್ಣುವಿನ ಸ್ಪರ್ಶದಿಂದ ಹಾಗೂ ಪಾರ್ವತಿಯ ವ್ರತಾಚರಣೆಯಿಂದ ‘ಕುಮಾರ’ನಿಗೆ ಮೊದಲಿನ ರೋಪವೇ ಬಂತು. ಹೀಗೆ ಸುಬ್ರಹ್ಮಣ್ಯಷಷ್ಠಿ ವ್ರತವನ್ನು ಲೋಕದಲ್ಲಿ ಪಾರ್ವತಿದೇವಿಯೇ ಮೊದಲು ಆಚರಿಸಿ ಇಷ್ಟಾರ್ಥ ಈಡೇರಿಸಿಕೊಂಡಳು.

ಶ್ರೀಪಂಚಮಿ- ದಕ್ಷಪ್ರಜಾಪತಿಯ ಮಗಳಾದ ದೇವಸೇನೆಯು ಉದ್ಯಾನವನದಲ್ಲಿ ಸಂಚರಿಸುತ್ತಿದ್ದಾಗ ‘ಕೇಶಿ’ ಎಂಬ ರಕ್ಕಸನು ಆಕೆಯನ್ನು ಅಪಹರಿಸಿದ. ಇಂದ್ರನು ಆ ರಕ್ಕಸನ ಸೆರೆಯಿಂದ ಅವಳನ್ನು ಬಿಡಿಸಿ ತಾನೇ ರಕ್ಷಿಸಿದ. ‘ಷಣ್ಮುಖ’ನು ತಾರಕಾಸುರ ಮತ್ತು ಶೂರಪದ್ಮಾಸುರರನ್ನು ಕೊಂದಮೇಲೆ ‘ದೇವಸೇನೆ’ಯನ್ನು ಇಂದ್ರನು ಷಣ್ಮುಖನಿಗೆ ಮದುವೆಮಾಡಿಸಿದ.ದೇವಸೇನೆಯು ಷಣ್ಮುಖನ ಪಟ್ಟದರಾಣಿಯಾದಳು.ಇವರ ವಿವಾಹವೂ ಸುಬ್ರಹ್ಮಣ್ಯ ಷಷ್ಠಿ ದಿನವೇ ಆಯಿತು.ಪಟ್ಟಾಭಿಷೇಕದ ದಿನವನ್ನು ಶ್ರೀಪಂಚಮಿ ಎನ್ನತ್ತಾರೆ.

ಸುಬ್ರಹ್ಮಣ್ಯ ಎಂಬುದು ದಕ್ಷಿಣಕನ್ನಡದ ಪುತ್ತೂರು ತಾಲೂಕಿನ ಒಂದು ಪುಣ್ಯಕ್ಷೇತ್ರ.ಇದರ ಸಮೀಪದಲ್ಲೇ ಕುಮಾರಧಾರಾ ನದಿಯು ಹರಿಯುತ್ತದೆ.ಈ ದೇವಾಲಯದ ಮುಂದಿನಬಾಗದಲ್ಲೇ ಕುಮಾರಪರ್ವತವೂ ಇದೆ. ಚೈತ್ರಶುಕ್ಲ ಷಷ್ಠಿ ದಿನದಂದು ಇಲ್ಲಿ ವಿಜೃಂಭಣೆಯಿಂದ ಜಾತ್ರೆ ಜರಗುತ್ತದೆ. ಈ ದಿನವನ್ನು ಕುಕ್ಕೆಷಷ್ಠಿ, ಸ್ಕಂದಷಷ್ಠಿ, ಸುಬ್ರಹ್ಮಣ್ಯಷಷ್ಠಿ ಹೀಗೆಲ್ಲ ಕರೆಯುತ್ತಾರೆ. ಸುಬ್ರಹ್ಮಣ್ಯದಲ್ಲಿ ಷಷ್ಠಿಮಹೋತ್ಸವದಂದು ರಥ ಎಳೆಯುವ ಮೊದಲು ಗರುಡಪಕ್ಷಿಯು ರಥದ ಸುತ್ತಲೂ ಆಕಾಶದಲ್ಲಿ ಹಾರಿ ಮೂರುಸುತ್ತುಹಾಕಿ ಹೋಗುವುದೆಂಬ ಪ್ರತೀತಿಯಿದೆ. ರಥ ಎಳೆಯವ ಹಗ್ಗವೆಂದರೆ ಉದ್ದದ ನಾಗರಬೆತ್ತ. ರಥವೆಳೆಯಲು ಸೇರಿದ ಭಕ್ತಾದಿಗಳು ಅವರವರು ಹಿಡಿದಷ್ಟು ಜಾಗದ ಬೆತ್ತದ ತುಂಡನ್ನು ಪ್ರಸಾದರೂಪದಲ್ಲಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ.ಇದನ್ನು ಗಂಧ ತೇಯುವಂತೆ ತೇದು ಚರ್ಮವ್ಯಾಧಿಗಳಿಗೆ ಹಚ್ಚಿದರೆ ಗುಣಮುಖರಾಗುತ್ತಾರೆ ಎಂಬ ನಂಬಿಕೆಯಿದೆ. ಸಂತಾನಹೀನರು, ಚರ್ಮವ್ಯಾಧಿಯುಳ್ಳವರು, ಸರ್ಪನದೋಷಿರುವವರು ಸುಬ್ರಹ್ಮಣ್ಯಸೇವೆ ಮಾಡಿದರೆ ಆತನು ಪ್ರೀತನಾಗಿ ಪೂರ್ಣಾನುಗ್ರಹ ತೋರುವನು ಎಂಬುದು ಭಕ್ತಾಧಿಗಳ ಅಚಲ ನಂಬಿಕೆ.

– ವಿಜಯಾಸುಬ್ರಹ್ಮಣ್ಯ,ಕುಂಬಳೆ.

4 Responses

 1. Hema says:

  ಸಮಯೋಚಿತವಾದ ಮಾಹಿತಿಪೂರ್ಣವಾದ ಬರಹ, ವಂದನೆ.

 2. ಕೇಶವ ಪ್ರಕಾಶ says:

  ತುಂಬಾ ವಿಷಯ ಮನನ ಮಾಡುವಂತಾಯಿತು

 3. Naveena Krishna says:

  Thumba olleya baraha

 4. ವಿಜಯಾಸುಬ್ರಹ್ಮಣ್ಯ, says:

  ಬರಹ ಪ್ರಕಟಿಸಿದ ಹೇಮಮಾಲ ಹಾಗೂ ಓದಿ ಮೆಚ್ಚಿದವರಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: