“ಮಾರ್ಕ್ಸವಾದಿ”ಗಳಾಗುತ್ತಿದ್ದೇವೆ…!
ಅಪ್ಪ ಮಗನಿಗೆ ಹೇಳಿದ
“ಆ ಹುಡುಗನ್ನ ನೋಡು
ಡಿಸ್ಟಿಂಗ್ಶನ್ ಬಂದಾನ
ನೀ ನೋಡು ಕಡಿಮೆ ಮಾರ್ಕ್ಸ ಪಡೆದೀಯಿ”
ಅಂತೂ ನಾವು ಮಾರ್ಕ್ಸವಾದಿಗಳಾಗುತ್ತಿದ್ದೇವೆ.
ಅವ್ವ ಮಗನಿಗೆ ಹೇಳಿದಳು
“ಮಗನೇ ಹೇಗಾದರೂ ಮಾಡು
ಎಂತಾದರೂ ಮಾಡು
ನೀ ಹೆಚ್ಚು ಅಂಕ ಗಳಿಸು
ಆ ಪಕ್ಕದ ಮನೆ ಶಾರದಕ್ಕನ ಸೊಕ್ಕಿಳಿಸು”
ಅಂತೂ ನಾವು ಮಾರ್ಕ್ಸವಾದಿಗಳಾಗುತ್ತಿದ್ದೆವೆ.
ಸರಕಾರಿ ಆದೇಶ
“ಯಾವ ಶಾಲೆ ಕಡಿಮೆ ಫಲಿತಾಂಶ
ತೆಗೆಯುತ್ತೆ ಅವರ ವೇತನ ಕಡಿತ
ಹಗಲೂ ರಾತ್ರಿ ಓದಿಸಿ ಮನೆ ಮನೆಗೆ
ಹೋಗಿ ಮಕ್ಕಳ ಮನಒಲಿಸಿ,ಓದಿಸಿ,ಬರೆಸಿ
ಒಟ್ಟಾರೆ ರಿಜಲ್ಟ ತರ್ರಿ….”
ಅಂತೂ ನಾವು
ಮಾರ್ಕ್ಸವಾದಿಗಳಾಗುತ್ತಿದ್ದೇವೆ.
ಕೈಯಲಿರೋ ಸರ್ಟಿಫಿಕೇಟ್
ಹೇಳುತ್ತೆ ತೊಂಭತ್ತೆಂಟು ಪರ್ಸೆಂಟೇಜ್
ಎದೆ ಸೀಳಿದರೆ ಇಲ್ಲ ಮೂರಕ್ಷರ
‘ನೈತಿಕತೆ’ಯಲ್ಲಿ ಮಾತ್ರ ಬರೀ ಸೊನ್ನೆ…!
ಅಂತೂ ನಾವು
ಮಾರ್ಕ್ಸವಾದಿಗಳಾಗುತ್ತಿದ್ದೇವೆ.
ಏನಾದರಾಗು ಮೊದಲು
ಡಾಕ್ಟರನಾಗು,ಇಲ್ಲ ಇಂಜಿಯರನೇ ಆಗು
ಕಂಡಕ್ಟರನೇ ಆಗು
ಶಿಕ್ಷಕನೇ ಆಗು
ರೈತನಾಗುವುದಂತೂ ಬೇಡವೇ ಬೇಡ…!
ಅಂತೂ ನಾವು
ಮಾರ್ಕ್ಸವಾದಿಗಳಾಗುತ್ತಿದ್ದೇವೆ
ಕೋಣೆಯ ಕೂಸು ಕೊಳೆಯಿತು
ಓಣಿಯ ಕೂಸು ಬೆಳೆಯಿತು
ಕಾನ್ವೆಂಟ್ ಕೂಸಿಗೆ ಅತ್ತ ಇಂಗ್ಲೀಷೂ ಬರುತ್ತಿಲ್ಲ, ಕನ್ನಡವಂತೂ ಕೇಳ್ಲೇಬೇಡಿ
ತೊಟ್ಟಿಲ ಭಾಷೆ ಕನ್ನಡ
ಮೆಟ್ಟಿಲ ಭಾಷೆ ಇಂಗ್ಲೀಷ್
ಅನ್ನದ ಭಾಷೆಯಾಗಲಿ ಕನ್ನಡ
ಅಂತೂ ನಾವು
“ಮಾರ್ಕ್ಸವಾದಿ”ಗಳಾಗುತ್ತಿದ್ದೇವೆ.
-ಎಸ್.ಬಿ.ಗೊಂಡಬಾಳ , ಗಂಗಾವತಿ .
ಸೂಪರ್. ಇವತ್ತಿನ ಮಕ್ಕಳ ಮೇಲೆ ಓದುವ ವಿಷಯ ದಲ್ಲಿ ಎಷ್ಟು ಒತ್ತಡವಿದೆ ಅನ್ನುವುದನ್ನು ಹೇಳುತ್ತವೆ ಇಲ್ಲಿರುವ ಸಾಲುಗಳು
ಪ್ರಚಲಿತ ವಿದ್ಯಮಾನಗಳ ಕೈಗನ್ನಡಿ ಈ ಕವನ ಅಭಿನಂದನೆಗಳು ಸಾರ್
ಮಾರ್ಕ್ ನ ಹಿಂದೆ ಓಡುವ ಮನಸ್ಸುಗಳು ಮುಗ್ದ ಮಕ್ಕಳಿಗೆ ಒತ್ತಡ ಹೇರುತ್ತಿರುವುದಂತೂ ಕಟುಸತ್ಯ. ಚೆಂದದ ಕವನ.
ವಿಶಿಷ್ಟ ಕವನ..ಮಾರ್ಕ್ಸವಾದಿ ಮೇಲೆ…ಮಾರ್ಕು ತೆಗೆಯುವ ಯಂತ್ರಗಳಾಗಿರುವ ಇಂದಿನ ಮಕ್ಕಳಿಗೆ ಜೀವನ ಪಾಠದಲ್ಲಿಯೂ ಚಲೋ ಮಾರ್ಕು ತೆಗೆಯುವ ದಾರಿ ತೋರಿಸಬೇಕಿದೆ. ಸಕಾಲಿಕ ಸುಂದರ ಕವನ