ರಾಷ್ಟ್ರಪಿತನಿಗೆ ನಮನ.
ಪ್ರತಿ ವರ್ಷ ರಜಾ ಕೊಡುತ್ತಾರೆ
ನಿನ್ನ ಜಯಂತಿಯ ಆಚರಣೆಗೆ
ಆಸ್ಪತ್ರೆಗಳಲ್ಲಿ ಹಣ್ಣು ಹಂಚುತ್ತಾರೆ
ನಾಯಕರುಗಳು ರೋಗಿಗಳಿಗೆ.
ಸದಾ ನೆನಪಿಸುವಂತೆ ಇಟ್ಟಿದ್ದೇವೆ
ನಿನ್ನ ಹೆಸರನ್ನು ನಾನಾ ಕಡೆಗಳಲ್ಲಿ
ಲೋಹದ ಮೂರ್ತಿಗಳನ್ನು ಕಡೆದು
ಸ್ಥಾಪಿಸಿದ್ದೇವೆ ರಸ್ತೆಗಳು ಕೂಡುವಲ್ಲಿ.
ಕಾರಣಗಳೇನೇ ಇರಲಿ ಪ್ರತಿಭಟನೆಗಳಿಗೆ
ಸತ್ಯಾಗ್ರಹದ ಅಸ್ತ್ರ ಬಳಸಿಕೊಳ್ಳುತ್ತಿದ್ದೇವೆ.
ಓಟು ಕೇಳಲು ಉಪಯೋಗಿಸುತ್ತೇವೆ
ನಿಮ್ಮ ಚಿತ್ರವಿರುವ ನೋಟುಗಳನ್ನು.
ನೂರಾರು ಆಶ್ವಾಸನೆಗಳೊಡನೆ ನಿನ್ನ
ಕನಸಿನ ರಾಮರಾಜ್ಯ ಮಾಡುವೆವೆಂದು.
ಗೆದ್ದು ಸತ್ಯದ ಹೆಸರಿನಲ್ಲೇ ಪ್ರಮಾಣ
ವಚನ ಸ್ವೀಕರಿಸಿ ಗದ್ದುಗೆಗೆ ಹಾಕುತ್ತೇವೆ
ಭದ್ರವಾದ ಅಡಿಪಾಯವನ್ನು.
ಖುರ್ಚಿಯನ್ನು ಉಳಿಸಿಕೊಳ್ಳಲು ಮಾಡುತ್ತೇವೆ
ಸದಾ ಸರ್ಕಸ್ಸನ್ನು.
ನಾವೇ ಹುಟ್ಟು ಹಾಕುತ್ತೇವೆ ಹತ್ತು ಹಲವು ಸಮಸ್ಯೆಗಳನ್ನು.
ಅವುಗಳಿಗೆ ಪರಿಹಾರ ಹುಡುಕುತ್ತಾ
ಕಾಲ ಕಳೆದಿದ್ದೇವೆ ಎಪ್ಪತ್ತುಮೂರು ವರ್ಷಗಳನ್ನು.
ಪ್ರತಿವರ್ಷ ತಪ್ಪದೇ ಹೂಗುಚ್ಛವಿರಿಸಿ ಗೌರವಿಸುತ್ತೇವೆ
ನಿನ್ನ ಸಮಾಧಿಗೆ.
ಏಕೆಂದರೆ ನಿನ್ನ ಆಶೀರ್ವಾದವಿಲ್ಲದೆ
ನಮಗೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ ಬಾಪು?
ಅದಕ್ಕಾಗಿ ಇದೋ ನಿನಗೆ ಸಾಷ್ಠಾಂಗ ನಮನ.
-ಬಿ.ಆರ್.ನಾಗರತ್ನ. ಮೈಸೂರು.
ಸರಳವಾಗಿ ಸಕಾರಾತ್ಮಕವಾಗಿದೆ
ಸರಳ ಹಾಗು ಸಕಾರಾತ್ಮಕವಾದ ಅಭಿವ್ಯಕ್ತಿ
ವಾಸ್ತವದ ಚಿತ್ರಣ
ವಾಸ್ತವತೆಗೆ ಹಿಡಿದ ಕನ್ನಡಿ
ವಿಪರ್ಯಾಸ
ಚಂದದ ಕವನ ಗಾಂಧಿ.ತಾತನ
ಈಗಿನ ಅವಸ್ಥೆ ಕಂಡ್ರೆ ಬಾಪೂಜಿ ಫೋಟೋದಲ್ಲಿ ನಗುವ ಬದಲು ಅಳ್ತಿದ್ರು… ವಾಸ್ತವದ ನಿಚ್ಚಳ ಚಿತ್ರಣ ಚೆನ್ನಾಗಿದೆ.
ಯಾರು ಎಷ್ಟೇ ದುರುಪಯೋಗಪಡಿಸಿಕೊಂಡರೂ ಮಹಾತ್ಮನ ಮಹಿಮೆ ಅಚಲ, ಅಮರ.
ಇದೋ ಗಾಂಧಿ ತಾತನಿಗೆ ನಿಮ್ಮೊಂದಿಗೆ ನಮ್ಮದೂ ನಮನ.
ಚಂದದ ಕವನ.
ಸರಳ ಸುಂದರವಾದ ಸಕಾಲಿಕ ಕವನ. ಗಾಂಧಿಜಯಂತಿಯಂದು ಬಾಪೂಜಿಗೆ ಪ್ರಣಾಮಗಳು.
ಸರಳ ಸುಂದರ ಕವನ
ನನ್ನ ಕವನವನ್ನು ಓದಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದವರೆಲ್ಲರಿಗೂ ಧನ್ಯವಾದಗಳು.