“ಯಾರು ಕಾರಣ?”- ಒಂದು ಚಿಂತನೆ
ನಮ್ಮ ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ನಾವು ಬದುಕಿದ್ದೇವೆ ಅನ್ನುವುದು ನಿಜ ಆದರೆ ಯಾವಾಗ ಸಾಯುತ್ತೇವೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಆದರೂ ಒಳ್ಳೆಯ ಆರೋಗ್ಯದಿಂದ ದೀರ್ಘ ಕಾಲ ಬಾಳಬೇಕೆಂಬುದು ಹೆಚ್ಚಿನವರ ಅಪೇಕ್ಷೆ ಆಗಿರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತೇವೆ. ಹಾಗೆಯೇ ಸೋಲುಗಳು ಕೂಡಾ ಎದುರಾಗುತ್ತವೆ. ಸಾಧನೆ ಮಾಡಿದೆವೆಂದರೆ ಅದಕ್ಕೆ ನಾವೇ ಕಾರಣ, ಸೋಲಾದರೆ ಉಳಿದವರು ಕಾರಣ ಅಂತ ಹೇಳುವವರ ಸಂಖ್ಯೆಯೇ ಜಾಸ್ತಿ. ನಮ್ಮ ಸಾಧನೆಯ ಹಿಂದೆ ಅನೇಕರ ಪರಿಶ್ರಮ ಇರುತ್ತದೆ. ಸೋಲಿನ ಹಿಂದೆಯೂ ಏನಾದರೂ ಕಾರಣ ಇದ್ದೇ ಇರುತ್ತದೆ. ಆದರೆ ಇದೇ ಕಾರಣ ಅಂತ ಬೆಟ್ಟು ಮಾಡಿ ಹೇಳಲು ಖಂಡಿತಾ ಕಷ್ಟ. ಹಾಗೆಯೇ ನಮ್ಮ ಸುತ್ತ ಮುತ್ತ ನಡೆಯುವ ಎಷ್ಟೋ ಸಂಗತಿಗಳಿಗೆ ನಾವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾಗುವ ಸಂದರ್ಭಗಳು ಇರುತ್ತವೆ. ಅದು ಹೇಗೆಂದರೆ ಎಷ್ಟೋ ಸಲ ನಾವು ಮಾಡಿದ ಸಣ್ಣ ತಪ್ಪು ಅಥವಾ ಅಚಾತುರ್ಯ ಬೇರೆಯವರ ಜೀವನದಲ್ಲಿ ನೋವನ್ನು ತರಲು ಕಾರಣವಾಗಿರಬಹುದು. ಆದರೆ ನಮಗೆ ಆ ವಿಷಯ ಗೊತ್ತೇ ಇರುವುದಿಲ್ಲ. ಒಂದು ವೇಳೆ ಗೊತ್ತಾದರೆ ನಮ್ಮ ಆತ್ಮಸಾಕ್ಷಿಗೆ ಆಗಾಗ ಚುಚ್ಚುತ್ತದೆ. ಕೆಳಗಿನ ಎರಡು ಘಟನೆಗಳನ್ನು ಗಮನಿಸಿ.
ಕೆಲವು ತಿಂಗಳ ಹಿಂದೆ ನಡೆದ ಒಂದು ಘಟನೆ.
ಒಂದು ಮುಖ್ಯ ಅಡ್ಡ ರಸ್ತೆ ಬಂದು ಚತುಷ್ಪಥ ರಸ್ತೆಯನ್ನು ಸೇರುವ ತಾಣವಾದ ಕಾರಣ ನಡುವೆ ವಿಭಾಜಕ ಇರಲಿಲ್ಲ. ಲಾಕ್-ಡೌನ್ ಕಾರಣ ಅಂದು ರಸ್ತೆ ನಿರ್ಜನವಾಗಿತ್ತು. ಆಗೊಮ್ಮೆ, ಈಗೊಮ್ಮೆ ಒಂದೆರಡು ವಾಹನಗಳು ಎರಡೂ ಬದಿಯ ರಸ್ತೆಯಲ್ಲಿ ಹೋಗುತ್ತಿದ್ದುವು. ಅಡ್ಡ ರಸ್ತೆಯ ಮೂಲಕ ಬಂದ ದ್ವಿಚಕ್ರ ವಾಹನ ಸವಾರನೊಬ್ಬ ಮುಖ್ಯರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲೆಂದು ರಸ್ತೆಯ ಮಧ್ಯಭಾಗಕ್ಕೆ ಹತ್ತಿರವಾಗುವಾಗ ಅವನ ಎಡಗಡೆಯಿಂದ ಬರುವ ವಾಹನಗಳು ಹೋಗಲೆಂದು ನಿಧಾನಿಸಿದ. ಆ ಹೊತ್ತಿನಲ್ಲಿ ಅವನ ಬಲಭಾಗದ ಕಡೆಯಿಂದ ವೇಗವಾಗಿ ಬರುತ್ತಿದ್ದ ಬೈಕ್ ಸವಾರನಿಗೆ ಗೊಂದಲವಾಗಿ ತನ್ನ ಪಥವನ್ನು ಸ್ವಲ್ಪ ಬದಲಾಯಿಸಿ ಮುಂದೆ ಚಲಿಸುವಾಗ, ಆ ರಸ್ತೆಯ ಎಡಗಡೆ ಇದ್ದ ಒಂದು ಕಲ್ಲಿನ ರಾಶಿಗೆ ಢಿಕ್ಕಿ ಹೊಡೆದು, ಅವನೊಂದು ಕಡೆ ಚಿಮ್ಮಿ, ಬೈಕ್ ಇನ್ನೊಂದು ಕಡೆ ಚಿಮ್ಮಲ್ಪಟ್ಟು, ಚಿಮ್ಮಲ್ಪಟ್ಟ ಬೈಕ್ ತನ್ನ ಪಾಡಿಗೆ ಸಾಗುತ್ತಿದ್ದ ಇನ್ನೋರ್ವ ದ್ವಿಚಕ್ರ ಸವಾರನ ಮೇಲೆ ಬಿದ್ದು, ಅವನು ಕೂಡಾ ಕೆಳಗೆ ಬಿದ್ದು ಗಾಯಗಳಾಗುತ್ತದೆ. ಗಂಭೀರವಾಗಿ ಗಾಯಗೊಂಡ ರಸ್ತೆಗೆಸೆಯಲ್ಪಟ್ಟ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸುತ್ತಾನೆ.
ಮೃತಪಟ್ಟ ಯುವಕನ ಅತಿ ವೇಗದ ಚಾಲನೆಯೇ ಅವನಿಗೆ ಮುಳುವಾಯಿತು ಅಂತ ಕೆಲವೆರೆಂದರೆ ರಸ್ತೆಯ ಬದಿಯಲ್ಲಿ ಪೇರಿಸಿಟ್ಟ ಕಲ್ಲುಗಳಿಂದಾಗಿ ಆ ಮೃತ್ಯು ಸಂಭವಿಸಿತೆಂದವರು ಕೆಲವರು. ಅಡ್ಡ ರಸ್ತೆಯಿಂದ ಮುಖ್ಯರಸ್ತೆ ಪ್ರವೇಶಿಸಿದ ಸವಾರನ ಕಾರಣದಿಂದ ಆ ಅಪಘಾತ ಆಯಿತು ಎಂದರು ಕೆಲವರು. ಅಡ್ಡರಸ್ತೆಯ ಮೂಲಕ ಅವನು ಬಾರದೆ ಇರುತ್ತಿದ್ದರೆ, ವೇಗವಾಗಿ ಹೋಗುತ್ತಿದ್ದರೂ ಅಲ್ಲಿ ಏನೂ ಆಗುತ್ತಿರಲಿಲ್ಲ ಎಂದು ಕೆಲವರೆಂದರೆ, ಮೃತಪಟ್ಟ ಬೈಕ್ ಸವಾರ ನಿಧಾನವಾಗಿ ಬರುತ್ತಿದ್ದರೆ ಏನೂ ಆಗುತ್ತಿರಲಿಲ್ಲ ಅನ್ನುವುದು ಇನ್ನು ಕೆಲವರ ಅಂಬೋಣ. ಹಾಗೆಯೇ ಮೃತಪಟ್ಟ ಯುವಕ ಹೆಲ್ಮೆಟ್ ಧರಿಸಿರಲಿಲ್ಲ, ಧರಿಸಿದ್ದರೆ ಅವನ ತಲೆಗೆ ತೀವ್ರತರವಾದ ಪೆಟ್ಟು ಆಗುತ್ತಿರಲಿಲ್ಲ ಅಂದರು ಕೆಲವರು. ಯಾರನ್ನೂ ದೂರಿದರೂ ಹೋದ ಜೀವ ಮತ್ತೆ ಬರುವುದೇ? ಕಡೆಗೆ ಅಯ್ಯೋ ಅವನ ದುರ್ವಿಧಿ ಎಂದು ಹೇಳಿ ವಿಧಿಯನ್ನು ಹಳಿಯುವುದಷ್ಟೇ ಉಳಿದ ದಾರಿ.
ಇನ್ನೊಂದು ಘಟನೆ
ಕಳೆದ ವಾರ ರಿಕ್ಷಾದಲ್ಲಿ ಕುಳಿತು ಪ್ರಯಾಣಿಸುತ್ತಿದ್ದೆ. ರಿಕ್ಷಾದ ಎದುರು ಮಾರುತಿ ಓಮ್ನಿ ಕಾರೊಂದು ಹೋಗುತ್ತಿತ್ತು. ಅಷ್ಟರಲ್ಲಿ ಎದುರಿನಿಂದ ಒಬ್ಬ ಕಾರು ಚಾಲಕ ತನ್ನ ಮುಂದಿದ್ದ ವಾಹನವನ್ನು ಓವರ್-ಟೇಕ್ ಮಾಡಿ ಸಂಪೂರ್ಣವಾಗಿ ರಸ್ತೆಯ ಬಲಬದಿಗೆ ತಲುಪಿದ್ದ. ಸರಿಯಾದ ದಾರಿಯಲ್ಲಿ ಹೋಗುತ್ತಿದ್ದ ರಿಕ್ಷಾದ ಮುಂದಿದ್ದ ಮಾರುತಿ ಓಮ್ನಿ ಕಾರು ಚಾಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಲು ಡಾಮರು ರಸ್ತೆಯ ಕೆಳಗಿನ ಮಣ್ಣಿನ ರಸ್ತೆಗೆ ತನ್ನ ಕಾರನ್ನು ಇಳಿಸಿದ. ಮಳೆಗಾಲವಾದ್ದರಿಂದ ಡಾಮರು ರಸ್ತೆ ಮತ್ತು ಮಣ್ಣಿನ ರಸ್ತೆ ನಡುವೆ ಇರುವ ಸಣ್ಣ ಕೊರಕಲಿನಲ್ಲಿ ಇದ್ದ ಕದಡಿದ ಕೆಸರು ನೀರು, ದಾರಿಯಲ್ಲಿ ತನ್ನ ಪಾಡಿಗೆ ನಡೆದು ಹೋಗುತ್ತಿದ್ದ ಶುಭ್ರ ಶ್ವೇತ ವಸ್ತ್ರ ಧರಿಸಿದ್ದ ವ್ಯಕ್ತಿಯ ಬಟ್ಟೆಯ ಮೇಲೆ ಚಿಮ್ಮಿತು. ಆ ವ್ಯಕ್ತಿಯ ಪ್ರಕಾರ ತನ್ನ ಬಟ್ಟೆಯ ಮೇಲೆ ಕೆಸರು ನೀರು ರಾಚಲು ಕಾರಣನಾದವನು ಮಾರುತಿ ಓಮ್ನಿ ಕಾರು ಚಾಲಕನಾಗಿದ್ದ. ನಿಂತುಕೊಂಡು ಮುಂದೆ ಚಲಿಸಿ ಆಗಿದ್ದ ಮಾರುತಿ ಓಮ್ನಿ ಕಾರಿನ ಚಾಲಕನಿಗೆ ಯದ್ವಾ ತದ್ವಾ ಬಯ್ಯಲು ಪ್ರಾರಂಭಿಸಿದ.
ಆದರೆ ಇದಕ್ಕೆಲ್ಲಾ ಮೂಲ ಕಾರಣಕರ್ತ ಎದುರಿನಿಂದ ಬಂದ ಕಾರು ಚಾಲಕ ಎಂಬುದು ನನಗೆ ಮತ್ತು ರಿಕ್ಷಾಚಾಲಕನಿಗೆ ಮಾತ್ರ ಗೊತ್ತಿರುವ ಸತ್ಯವಾಗಿತ್ತು. ಆದರೆ ಇಲ್ಲಿಯೂ ಗಮನಿಸಬೇಕಾದ ವಿಷಯ ಎಂದರೆ ಪಾಪ ಪಾದಚಾರಿಯ ತಪ್ಪೇ ಇಲ್ಲ. ಅವನ ಬಟ್ಟೆ ಕೊಳಕಾಗಿದ್ದು ಸತ್ಯ. ನಮ್ಮ ಮುಂದಿದ್ದ ಕಾರಿನವ ತನ್ನ ಕಾರನ್ನು ಕೆಳಗೆ ಇಳಿಸದಿದ್ದರೆ ಅಲ್ಲಿ ಎರಡು ವಾಹನಗಳು ಪರಸ್ಪರ ಢಿಕ್ಕಿ ಆಗುತ್ತಿದ್ದವು. ಇನ್ನು ಓವರ್-ಟೇಕ್ ಮಾಡಿದ ಚಾಲಕನಿಗೆ ಯಾವ ಜರೂರು ಪರಿಸ್ಥಿತಿ ಅಂತ ಯಾರಿಗೆ ಗೊತ್ತು? ಯಾರೋ ಮಾಡಿದ ತಪ್ಪಿನಿಂದಾಗಿ ಯಾರಿಗೋ ತೊಂದರೆ ಆಗುತ್ತದೆ. ಹೆಚ್ಚಿನ ಅಪಘಾತಗಳಲ್ಲಿ ಇದೇ ಆಗುವುದು ತಾನೇ?
ಇದು ಎರಡು ಉದಾಹರಣೆಗಳು ಅಷ್ಟೇ. ಯಾರಿಂದಲೋ ಯಾರಿಗೋ ತೊಂದರೆ ಆಗುತ್ತದೆ. ತಪ್ಪು ಮಾಡದವರಿಗೆ ಬಯ್ಗಳ ಸುರಿಮಳೆ ಆಗುತ್ತದೆ. ಎಷ್ಟೋ ಸಲ ನಿಜವಾಗಿ ನಡೆದದ್ದು ಏನು ಅನ್ನುವುದು ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ ಹಲವರು ತೊಂದರೆ ಅನುಭವಿಸುವುದು ಮಾತ್ರ ಸತ್ಯ. ಹಾಗಾದರೆ ಸಂಭವಿಸುವ ಘಟನೆಗಳಿಗೆ ನಿಜವಾದ ಕಾರಣಕರ್ತರು ಯಾರು? ನನಗೆ ಖಂಡಿತವಾಗಿಯೂ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ “ಯಾರು ಕಾರಣ?”
-ಡಾ. ಕೃಷ್ಣಪ್ರಭ.ಎಂ, ಮಂಗಳೂರು
ಅಪಘಾತಕ್ಕೆ ಅವಸರವೇ ಕಾರಷ, ಅವಸರಕ್ಕೆ ತಾಳ್ಮೆ ಯಿಲ್ಲದಿರುವುದೇ ಕಾರಣ, ತಾಳ್ಮೆ ಇಲ್ಲದಿರುವುದಕ್ಕೆ ಧ್ಯಾನ ಪ್ರಾಣಾಯಾಮ ಮಾಡದಿರುವುದೇ ಕಾರಣ, ಧ್ಯಾನ ಮಾಡದಿರುವುದಕ್ಕೆ ಸಮಯದ ಅಭಾವವೇ ಕಾರಣ, ಸಮಯದ ಆಭಾವಕ್ಕೆ ಕೆಲಸಕ್ಕೆ ಹೋಗುವ ಧೀಮಂತವೇ ಕಾರಣ, ಕೆಲಸಕ್ಕೆ ಹೋಗಲು ಸಂಸಾರವೆ ಕಾರಣ, ಸಾಂಸರಕ್ಕೆ ಮದುವೆ ಹೆಂಡತಿ.ಗಂಡನೇ ಕಾರಣ, ಮದುವೆಗೆ ಬಯಕೆಗಳು ಆಸೆಗಳು ಹಾಗು ಸಮಾಜವೆ ಕಾರಣ, ಆದ್ದರಿಂದ ಈ ಏಲ್ಲಾ ಕಾರಣಗಳಿಗೆ ಕಾರಣಗಳನ್ನು ಹುಡುಕುತ್ತ ಹೋದರೆ ವಿನಾಕಾರಣ ಕಾಲ ಹರಣವಾಗಬಹುದೇಂಬ ಕಾರಣದಿಂದ , ಕಾರಣಗಳನ್ನಯ ನಾನು ಹುಡುಕಲು ಹೋಗುವುದೇ ಇಲ್ಲಾ, ಇದೇ ನಾನು ಯಾವಗಲೂ ಖುಷೀಯಾಗಿರಲು…….ಕಾರಣ.(ರ.ರಾ)
ಹೌದು, ಕಾರಣಗಳ ಹಿಂದಿನ ಕಾರಣ ಹುಡುಕುತ್ತಾ ಹೋದಾಗ ನೂರಾರು ಕಾರಣಗಳು ಕಾಣ ಸಿಗುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು
ಕಾರಣ ಏನು ಎಂದು ಹುಲುಮಾನವರಾದ ನಾವು ಹಲವಾರು ರೀತಿಯಲ್ಲಿ ಹೇಳಬಹುದು…ಆದರೆ ಹೇಳುವ ರೀತಿ ಬದಲಾಗುತ್ತದೆ ಬೇರೆಯವರಿಗೆ ಆದಾಗ ಒಂದು ನಮಗೇ ಆದಾಗ ಮತ್ತೊಂದು ಕಾರಣ ಕೊಟ್ಟು ಪ್ರತಿಕ್ರಿಯಿಸುವುದು.. ಒಟ್ಟಿನಲ್ಲಿ ಗ್ರಹಚಾರ ದ ಮೇಲೆ ಹಾಕುವುದು.. ಚಿಂತನೆಗೆ ಹಚ್ಚಿದ ಬರಹ ಧನ್ಯವಾದಗಳು ಮೇಡಂ
ಸರಿಯಾಗಿ ಹೇಳಿದಿರಿ. ನಮಗೇ ಆಗುವಾಗ ಹೇಳುವ ಕಾರಣಗಳು, ಇನ್ನೊಬ್ಬರಿಗೆ ಅದೇ ಪರಿಸ್ಥಿತಿ ಎದುರಾದಾಗ ಹೇಳುವ ಕಾರಣಗಳು ಭಿನ್ನವಾಗಿರುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು
ಹೌದು ಯಾರು ಕಾರಣ ಎನ್ನುವುದೇ ಪ್ರಶ್ನೆ.
ಉತ್ತರಿಸಲು ಕಷ್ಟವಾದ ಪ್ರಶ್ನೆ
ಅವಸರವೇ ಅವಘಡಕ್ಕೆ ಕಾರಣವೆನ್ನುವರು ಸಂಚಾರೀ ಇಲಾಖೆಯವರು. ಏನೇ ಆದರೂ, ಇಂತಹ ಸಂದರ್ಭಗಳಲ್ಲಿ ಮಾನವೀಯತೆಯು ಮರೆಯಾಗುತ್ತಿರುವುದು ಮಾತ್ರ ದುರಂತ! ಸಾಂದರ್ಭಿಕ ಲೇಖನ..ಸೊಗಸಾಗಿದೆ.
ಕೆಲವೊಮ್ಮೆ ಹೀಗಾಗದಿದ್ದರೆ ಹೀಗಾಗುತ್ತಿರಲಿಲ್ಲ ಅನ್ನುವ ವಿಶ್ಲೇಷಣೆ ಆರಂಭವಾದಾಗ, ನಡೆದ ಘಟನೆಗಳಿಗೆ ಯಾರು ಕಾರಣ ಅನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ
ಇಲ್ಲಿ ಪ್ರತಿಯೊಬ್ಬರ ದೃಷ್ಟಿಕೋನವು ವಿಭಿನ್ನ- ನಯನಾ ಬಜಕೂಡ್ಲು ಅವರ ಪ್ರತಿಕ್ರಿಯೆ….
ನೀವು ಹೇಳಿರುವುದು ಅಕ್ಷರಶಃ ಸತ್ಯ.. ಧನ್ಯವಾದಗಳು ನಯನಾ
ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು