ಹಣದಲ್ಲಿ ಬಡವ,ಗುಣದಲ್ಲಿ ಶ್ರೀಮಂತ…

Share Button

ಹಣವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದು ಕೆಲವರ ಇಂಗಿತ. ‘ತಾಯಿ-ತಂದೆಯರನ್ನುಳಿದು ಮತ್ತೆಲ್ಲವನ್ನೂ ದುಡ್ಡಿಗೆ ಪಡೆಯಬಹುದು’ ಎಂಬುದು  ಜಾನಪದೀಯ ವ್ಯಂಗ್ಯೋಕ್ತಿಯೂ ಹೌದು. ಇಂದಿನ ದಿನಗಳಲ್ಲಂತೂ ಇದು ನೂರಕ್ಕೆ ನೂರು ಸತ್ಯವಾದ ಮಾತು. ‘ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ’ ಎಂಬ ಮಾತು ಕೂಡಾ ಈ ನಿಟ್ಟಿನಲ್ಲೇ ಹುಟ್ಟಿಕೊಂಡದ್ದು. ಹಣಕ್ಕೆ ಬಲವಾದ ಮೆಗ್ನೆಟ್ ಶಕ್ತಿಯಂತೂ ಇದ್ದೇ ಇದೆ. ಹಣವೊಂದೇ ಇದ್ದರೆ ಸಾಕೇ ?  ಗುಣ ಬೇಡವೇ ?ಖಂಡಿತ ಬೇಕು. ಹಣ ಇಂದು ಆಗುತ್ತೆ, ನಾಳೆ ಹೋಗುತ್ತೆ. ಆದರೆ ಗುಣ…?  ಅದು ನಮ್ಮನ್ನು ಕಾಯುತ್ತೆ. ಹಣದಿಂದ ಗುಣ ಪಡೆಯಲು ಅಸಾಧ್ಯ. ಆದರೆ ಗುಣದಿಂದ ಸಂಪತ್ತನ್ನು ಗಳಿಸಬಹುದು. ಇದಕ್ಕೆ ಪೂರಕವಾಗಿ ನಮ್ಮ ಮುಂದೆ ಸುಧಾಮನ ಒಳ ಚರಿತೆಯಿದೆ.

ಶ್ರೀ ಕೃಷ್ಣ ಪರಮಾತ್ಮನ ಬಾಲ್ಯ ಸ್ನೇಹಿತನಾಗಿ ಸುಧಾಮನೆಂಬ ಒಬ್ಬ ಬ್ರಾಹ್ಮಣನಿದ್ದ. ಆತನು ಅತಿ ದರಿದ್ರನಾದರೂ ಜ್ಞಾನದಲ್ಲಿ ಶ್ರೀಮಂತ, ಗುಣದಲ್ಲಿ ಅಗ್ರಗಣ್ಯ. ಆತನಿಗೆ ಉಡಲು ಸರಿಯಾದ ಬಟ್ಟೆಗಳಿರಲಿಲ್ಲ. ಚಿಂದಿಯಾದ ಬಟ್ಟೆಗಳನ್ನು ಧರಿಸುತ್ತಿದ್ದುದರಿಂದ ಅವನನ್ನು ಕುಚೇಲ ಎನ್ನುತ್ತಿದ್ದರು. ಅವನ ಪತ್ನಿಗೂ ಸರಿಯಾದ ಬಟ್ಟೆ-ಬರೆಗಳಿರಲಿಲ್ಲ. ಹೊಟ್ಟೆ ತುಂಬಾ ಆಹಾರವಿಲ್ಲದೇ ಮಕ್ಕಳೂ ಕೃಶರಾಗಿದ್ದರು. ಬಡತನದ ಬೇಗೆ ಮೊದಲು ತಟ್ಟುವುದು ಹೆಣ್ಣಿಗಂತೆ. ಸರಿಯಾದ ಊಟ ಬೇಯಿಸಿ ಹಾಕುವುದು ಹೆಣ್ಣು. ಮಕ್ಕಳು-ಮರಿಗಳನ್ನೂ ಊಟೋಪಚಾರ ಮಾಡಿಸಿ, ಸಾಕುವವಳು ಹೆಣ್ಣಲ್ಲವೇ?

ಈ ಬಡತನವನ್ನು ಅನುಭವಿಸಿ, ಅನುಭವಿಸಿ ನೊಂದು ಬೆಂದು ಹೋದ ಆತನ ಹೆಂಡತಿ ಒಂದು ದಿನ ಗಂಡನಿಗೆ, ‘ಸ್ವಾಮಿ…, ಶರಣಾಗತನೂ ಭಕ್ತವತ್ಸಲನೂ ಆದ ಶ್ರೀಕೃಷ್ಣನು ತಮ್ಮ ಬಾಲ್ಯ ಸ್ನೇಹಿತನಂತೆ. ದೇಹಿ ಎಂದು ಬಂದವರನ್ನು ಬರಿಗೈಲಿ ಕಳುಹಿಸುವುದಿಲ್ಲವಂತೆ. ಅವರವರ ಇಷ್ಟಾರ್ಥಗಳನ್ನು ಈಡೇರಿಸುವನಂತೆ. ನೀವು ಯಾಕೆ ಆತನನ್ನು ಭೇಟಿ ಮಾಡಬಾರದು?  ಒಮ್ಮೆ ದ್ವಾರಕೆಗೆ ಹೋಗಿ ಶ್ರೀಕೃಷ್ಣನನ್ನು ಕಂಡು ನಮ್ಮ ದಾರಿದ್ರಾವಸ್ಥೆಯನ್ನು ನಿವೇದಿಸಿಕೊಂಡು ಯಾಕೆ ಆತನಿಂದ ಸಹಾಯ ಪಡೆಯಬಾರದು ?” ಎಂದು ತನ್ನ ಅಭಿಪ್ರಾಯವನ್ನು ಸುಧಾಮನ ಮುಂದಿಟ್ಟಳು.

ಪ್ರಾಪಂಚಿಕ ಸುಖದ ವಸ್ತುಗಳನ್ನು ಮಿತ್ರನಿಂದ ಕೇಳಿ ಪಡೆಯಲು ಸುಧಾಮನ ಮನಸ್ಸು ಒಪ್ಪಲಿಲ್ಲ. ಅಂತಾಗಲೇ ಪತ್ನಿಯ ಇಂತಹ ಅಭಿಪ್ರಾಯವನ್ನು ಆತನು ಸುಲಭವಾಗಿ ತಳ್ಳಿಹಾಕಿದನು. ಆದರೆ ಆಕೆ ಬಿಡಬೇಕಲ್ಲ!. ಸಂಸಾರದಲ್ಲಿ ದಿನದೂಡಬೇಕಾದರೆ ಅದೆಷ್ಟು ಸಂಕಟ! ನೋವು! ಎಲ್ಲರಂತೆ ಹೊಟ್ಟೆತುಂಬ ಅನ್ನ,ಮೈತುಂಬ ಬಟ್ಟೆಗಳನ್ನು ಗಂಡ, ಮಕ್ಕಳಿಗೆ ನೀಡಬೇಕೆಂಬ ನಿರೀಕ್ಷೆ ಉಳ್ಳವಳು! ಪರಿಪರಿಯಾಗಿ ಮನಕರಗುವಂತೆ ಪತಿಯಲ್ಲಿ ಹೇಳಿ ಒಪ್ಪಿಸಿದಳು. ಸರಿ, ಶ್ರೀಕೃಷ್ಣನ ದಿವ್ಯದರ್ಶನವನ್ನಾದರೂ ಪಡೆಯಬಹುದೆಂದು ಮಿತ್ರನಿರುವ ದ್ವಾರಕೆಗೆ ಹೊರಟು ನಿಂತನು ಸುಧಾಮ. ಬಹುಕಾಲದ ನಂತರ ಆಪ್ತ ಸ್ನೇಹಿತನನ್ನು ಕಾಣಲು ಹೋಗುತ್ತಿದ್ದೆನಲ್ಲಾ! ಬರಿಗೈಲಿ ಹೋಗಬಾರದು. ಆದರೆ ಮನೆಯೊಳಗೆ ಏನೂ ಇಲ್ಲ! ಸತೀಮಣಿಯು ನಾಲ್ಕು ಮನೆಗಳಿಗೆ ಹೋಗಿ ನಾಲ್ಕು ಹಿಡಿ ಅವಲಕ್ಕಿಯನ್ನು ತಂದು ಚಿಂದಿ ಬಟ್ಟೆಯಲ್ಲಿ ಗಂಟು ಕಟ್ಟಿ ಶ್ರೀಕೃಷ್ಣನಿಗೆ ಕೊಡಲು ಗಂಡನ ಕೈಗಿತ್ತಳು. ಬ್ರಾಹ್ಮಣ ಶ್ರೇಷ್ಠನಾದ ಸುಧಾಮನು ಪತ್ನಿಯು ತಂದಿತ್ತ ಅವಲಕ್ಕಿ ಕಟ್ಟನ್ನು ಕಂಕುಳಲ್ಲಿಟ್ಟುಕೊಂಡು ದ್ವಾರಕೆಯೆಡೆಗೆ ಪ್ರಯಾಣ ಬೆಳೆಸಿದನು.  ಹಾದಿಯುದ್ದಕ್ಕೂ ಶ್ರೀಕೃಷ್ಣನ ಸಂದರ್ಶನ ಹೇಗಾದೀತೆಂಬುದನ್ನು ಚಿಂತಿಸುತ್ತಾ ಸ್ನೇಹಿತನ ಅರಮನೆ ಸೇರಿದನು.

ಪರಮಾಪ್ತ ಮಿತ್ರನು ಬರುವುದನ್ನು ದೂರದಿಂದಲೇ ನೋಡಿದ ಶ್ರೀಕೃಷ್ಣನು ತಾನು ಪವಡಿಸಿದ ರತ್ನ ಖಚಿತವಾದ ಮಂಚದಿಂದ ಎದ್ದು ಹೋಗಿ ಆತನನ್ನು ಸ್ವಾಗತಿಸಿದನು. ಗಾಢವಾಗಿ ಆಲಂಗಿಸಿದನು. ಶ್ರೀಕೃಷ್ಣನ ಕಣ್ಣುಗಳಿಂದ ಆನಂದ ಭಾಷ್ಪಗಳುದುರಿದುವು. ಸುಧಾಮನಿಗೆ ಅರ್ಥ್ಯಪಾದ್ಯಾದಿಗಳನ್ನು ನೀಡಿ, ತನ್ನಾಸನದಲ್ಲಿಯೇ ಕುಳ್ಳಿರಿಸ್ಕೊಂಡ ಕೃಷ್ಣ. ಸುಧಾಮನ ಕಾಲುಗಳನ್ನು ತೊಳೆಯುತ್ತಿದ್ದರೆ, ರುಕ್ಮಿಣಿಯು ಆತನಿಗೆ ಗಾಳಿ ಹಾಕುತ್ತಿದ್ದಳು. ಈ ಅಭೂತಪೂರ್ವ ಸನ್ನಿವೇಶವನ್ನು ವೀಕ್ಷಿಸಿದ ಇತರರು ಸ್ತಬ್ಧರಾದರು. ಕಾರಣ, ಕಾರಣ ಇಬ್ಬರಿಗೂ ಅಜಗಜಾಂತರ ವ್ಯತ್ಯಾಸ!  ಸುಧಾಮ ಕಡು ಬಡವ, ಚಿಂದಿಯಾದ, ಕೊಳಕು ಬಟ್ಟೆ ಧರಿಸಿದ ಕುಚೇಲ, ಕೃಷ್ಣನೋ ಅರಸು ಪುತ್ರ ದೇವತಾ ಸ್ವರೂಪಿ! ಶ್ರೀಕೃಷ್ಣನ ಆದರಾತಿಥ್ಯ ಸ್ವೀಕರಿಸುವುದು ಸುಧಾಮನ ಅಹೋ ಭಾಗ್ಯವೆನ್ನಬೇಕು.

ಇಬ್ಬರೂ ಕುಶಲೋಪರಿ ಮಾತಾಡಿಕೊಂಡರು. ಹಳೆಯ ಸಿಹಿ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಮಿತ್ರನ ಕಂಕುಳಲ್ಲಿದ್ದ ಗಂಟನ್ನು ಗಮನಿಸಿದ ಕೃಷ್ಣ- ‘ಪ್ರಿಯ ಮಿತ್ರನೇ ನನಗಾಗಿ ತಿನ್ನುವುದಕ್ಕೆ ಕೊಡಲು ಏನೋ ತಂದಿದ್ದೀಯಾ! ಕೊಡಿಲ್ಲಿ’ ಎಂದಾಗ ಮಿತ್ರ ಎಷ್ಟೇ ಪ್ರೀತಿಯಿಂದ ಕೇಳಿದರೂ ತಾನು ಹೆರವರ ಮನೆಗೆ ಹೋಗಿ ತಂದ ಅವಲಕ್ಕಿಯನ್ನು ಅದೂ ಒಂದು ಮುಷ್ಟಿಯಷ್ಟನ್ನು ಸ್ನೇಹಿತನಿಗೆ ನೀಡಲು ಸುಧಾಮನಿಗೆ ಹೆಮ್ಮೆಯೆನಿಸಲಿಲ್ಲ. ಬದಲಾಗಿ ನಾಚಿಕೆಯಾಯ್ತು. ಅಂತೆಯೇ ಕೊಡಲು ಹಿಂಜರಿದ. ಆದರೆ ಶ್ರೀಕೃಷ್ಣ ಬಿಡಬೇಕಲ್ಲ! ಮಿತ್ರನ ಕೈಯಿಂದ ಕಸಿದುಕೊಂಡು ಪ್ರೀತಿಯಿಂದ, ಲಗುಬಗೆಯಿಂದ ತಿನ್ನತೊಡಗಿದ. ಅಷ್ಟರಲ್ಲಿ ರುಕ್ಕಿಣಿಯು ತಡೆದು ‘ಎಲ್ಲವನ್ನೂ ತಾವೇ ತಿನ್ನಬೇಡಿ, ಸ್ವಲ್ಪ ನನಗೂ ಕೊಡಿ’ ಎಂದಳು. ಕೃಷ್ಣನು ಮಿತ್ರನಿಗೆ, ‘ನೀನು ತಂದಿರುವ ಈ ಮುಷ್ಟಿ ಅವಲಕ್ಕಿಯು ನನ್ನನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ತೃಪ್ತಿಗೊಳಿಸುತ್ತದೆ’ ಎಂದನು.

ಸುಧಾಮನು ಒಂದು ದಿನವಿಡೀ ಮಿತ್ರನ ಅರಮನೆಯಲ್ಲಿ ಆನಂದದಿಂದ ಕಳೆದನು. ಬಾರಿ ಬಾರಿಗೂ ಹೆಂಡತಿ ಮಾತು ನೆನಪಾದರೂ ಕೇಳುವ ಮನಸ್ಸಾಗಲಿಲ್ಲ. ನಮ್ಮ ಸಮಾಜದಲ್ಲಿ ಉದಾರವಾಗಿ ಕೊಡುವವರಿದ್ದರೆ ಕೇಳುಗರಿಗೇನೂ ಕಮ್ಮಿಯಿಲ್ಲ. ಆದರೆ ಕೊಡುವವನಾದ ಶ್ರೀಕೃಷ್ಣ ಇದ್ದರೂ ಸುಧಾಮನಿಗೆ ಕೇಳಲು ಮನಸ್ಸಾಗಲಿಲ್ಲ. ಆತನ ಸ್ವಭಾವವೇ  ಅಂತಹದು, ‘ಅನಾಯಾಸೇನ ಮರಣಂ ವಿನಾ ದೈನೇನ ಜೀವನಂ!’ ಎಂಬ ಸುಧಾಮನಿಗೆ ಸರಿಯಾಗಿ ಒಪ್ಪುವಂತಹದು, ಕೊನೆಗೆ ಊರಿಗೆ ಹಿಂತಿರುಗಲು ಹೊರಟನು. ತಾನೇನೂ ಕೇಳುವುದಿಲ್ಲ , ತನಗೆ ಅವನ ಕೃಪಾಕಟಾಕ್ಷವೇ ಸಾಕು ಎಂಬುದಾಗಿ ಮನಸ್ಸಿನಲ್ಲಿ ನೆನೆಯುತ್ತಾ ಮಿತ್ರನಿಗೆ ತನು, ಮನಗಳಿಂದ ಹೃತ್ಪೂರ್ವಕ ನಮಿಸುತ್ತಾ ಹೊರಟನು. ಶ್ರೀಕೃಷ್ಣನು ತಲೆಬಾಗಿಲಿನವರೆಗೂ ಬಂದು ಬಾಲ್ಯ ಸ್ನೇಹಿತನನ್ನು ಬೀಳ್ಕೊಟ್ಟನು.

ಆಪ್ತಮಿತ್ರನ ಗುಣವನ್ನು ಶ್ರೀಕೃಷ್ಣನು  ಬಲ್ಲನು. ಅವನು ಬಾಯಿಬಿಟ್ಟು ಏನೂ ಕೇಳದಿದ್ದರೂ ತನ್ನ ದಿವ್ಯದೃಷ್ಟಿಯಿಂದಲೂ ಸುಧಾಮನ ವೇಷ ಭೂಷಣದಿಂದಲೂ ಲಕ್ಷ್ಮೀಪತಿಯಾದ ಶ್ರೀಕೃಷ್ಣನಿಗೆ ಅರಿಯದಿದ್ದೀತೆ!. ಹಾಗೆಯೇ ಆಯಿತು. ಸುಧಾಮರಿಗೆ ತನ್ನೂರಿಗೆ ಬಂದಾಗ ತನ್ನ ಜೋಪಡಿ ಕಾಣಿಸಲೇ ಇಲ್ಲ. ಅದರ ಬದಲಾಗಿ ರತ್ನಖಚಿತವಾದ ಗೋಪುರಗಳಿಂದ ಕೂಡಿದ ಅರಮನೆಯಂತಿರುವ ಮನೆ ಅಲ್ಲಿ ಶೋಭಿಸುತ್ತಿತ್ತು. ಸುಧಾಮನು ಹಿಂತಿರುಗಿ ಬಂದುದನ್ನು ಕಂಡು ಆತನ ಪತ್ನಿ ಕಲ್ಯಾಣಿಗೆ ಪರಮಾನಂದವಾಯಿತು. ಆ ಸಮಯದಲ್ಲವಳು ಲಕ್ಷ್ಮೀದೇವಿಯಂತೆ ಶೋಭಿಸುತ್ತಿದ್ದಳು. ಇದನ್ನು ಕಂಡ ಸುಧಾಮನು ಅಚ್ಚರಿಗೊಂಡು ತನ್ನ ಕಣ್ಣುಗಳನ್ನೇ ನಂಬಲಸಾಧ್ಯವಾಯಿತು. ತಾವು ಇಲ್ಲಿಂದ ಹೋದಲಾಗಾಯ್ತಿಂದ ಸಹಸ್ರಾರು ಕೂಲಿಯಾಳುಗಳು ಬಂದು ಈ ರೀತಿ ಮಾರ್ಪಾಟು ಮಾಡಿದರೆಂದು ಮಡದಿ ಕಲ್ಯಾಣಿ ಒಪ್ಪಿಸಿದಳು. ತಮ್ಮ ಇಂಗಿತವನ್ನರಿತ ಆ ಶ್ರೀಕೃಷ್ಣ ಪರಮಾತ್ಮನೇ ಈ ಕಾರ್ಯಗಳನ್ನು ಮಾಡಿದನೆಂದು ಅವರು ನಂಬಲೇಬೇಕಾಯ್ತು.

ಈ ಕಥೆಯ ಮೂಲಕ ಸುಧಾಮ, ಶ್ರೀಕೃಷ್ಣರು ಲೋಕಕ್ಕೆ ಹಲವಾರು ಸಂದೇಶ, ಉಪದೇಶಗಳನ್ನು ನೀಡುತ್ತಾರೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

7 Responses

  1. ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.

  2. ನಾಗರತ್ನ ಬಿ. ಅರ್. says:

    ಎಂದಿನಂತೆ ಪುರಾಣ ಪ್ರಸಿದ್ಧ ಕಥೆಗಳ ಹಂದರದಲ್ಲಿ ಇವತ್ತು ನಿಜವಾದ ಸ್ನೇಹಿತರು ಹೇಗಿರಬೇಕು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಕೃಷ್ಣ ಸುಧಾಮರ ಸ್ನೇಹ ತಿಳಿಯಪಡಿಸುವ ಕಥೆ ಚೆನ್ನಾಗಿ ಮೂಡಿ ಬಂದಿದೆ.ಧನ್ಯವಾದಗಳು.

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. padmini says:

    ಸಂದೇಶ ಸಾರುವ ಕಥೆ ಚೆನ್ನಾಗಿದೆ.

  5. Anonymous says:

    ನಿಜವಾದ ಗೆಳೆತನವೆಂದರೆ ಕೃಷ್ಣ ಸುಧಾಮರದ್ದು ಎಂಬುದು ಸಾರ್ವತ್ರಿಕ ಮಾತು. ಭಗವಂತನು, ಸ್ವತ: ತನ್ನ ನಡವಳಿಕೆಯಿಂದಲೇ, ಮನುಜನು ಹೇಗಿರಬೇಕು ಎಂದನ್ನು ತೋರಿಸಿಕೊಟ್ಟಿರುವ ಕಥೆಯು ಎಂದಿನಂತೆ ವಿಜಯಕ್ಕನವರ ಲೇಖನಿಯಿಂದ ಬಹಳ ಚೆನ್ನಾಗಿ ಮೂಡಿಬಂದಿದೆ.

  6. Padma Anand says:

    ಸಂಬಂಧಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಸುಧಾಮನ ಸದ್ಬುದ್ಧಿಯೂ, ಸಂಬಂಧಗಳಲ್ಲಿ ಬದ್ಧತೆಯಿರಬೇಕೆಂದು, ಸುಧಾಮ ಕೇಳದೆಯೇ ಅವನ ಜೀವನ ಸುಗಮಗೊಳಿಸಿದ ಕೃಷ್ಣನ ನಡೆಯೂ ಬಾಳಿಗೊಂದು ಪಾಠವಾಗಬಲ್ಲದು. ಪುರಾಣದ ಚೆಂದದ ಭಾಗವೊಂದನ್ನು ಸುಂದರವಾದ ಲೇಖನವನ್ನಾಗಿಸಿದ ನಿಮಗೆ ಅಭಿನಂದನೆಗಳು

  7. Dr Krishnaprabha M says:

    ಕೃಷ್ಣ-ಸುಧಾಮರ ಗೆಳೆತನದ ಹಿರಿಮೆಯನ್ನು ಸುಂದರವಾಗಿ ವರ್ಣಿಸಿದ್ದೀರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: